ಪ್ರಸಿದ್ದ ಕಾದಂಬರಿಕಾರ ಎಸ್.ಎಲ್. ಭೈರಪ್ಪನವರ ’ಮಂದ್ರ’ ಕಾದಂಬರಿಯು ಕನ್ನಡಕ್ಕೆ ಮೊದಲ ಸರಸ್ವತೀ ಸಮ್ಮಾನ್ ಪ್ರಶಸ್ತಿಯನ್ನು ತಂದುಕೊಟ್ಟಿದೆ. ಸಂಗೀತಗಾರನೊಬ್ಬನ ಜೀವನದ ಏಳು ಬೀಳುಗಳ ವಿಸ್ತಾರ ಬೀಸಿನ ಜೀವನಗಾಥೆಯ ಆರೋಹಣ, ಅವರೋಹಣಗಳನ್ನು ಚಿತ್ರಿಸುವ ಕಥಾವಸ್ತುವನ್ನು ’ಮಂದ್ರ’ ಒಳಗೊಂಡಿದೆ.
ಹಿಂದುಸ್ತಾನಿ ಸಂಗೀತ ಕುರಿತು ರಚಿಸಿದಂತಹ ಈ ಕಾದಂಬರಿಯ ವಸ್ತು ಪಂಡಿತ್ ಮೋಹನ್ ಲಾಲ್ ಎಂಬ ಹಾಡುಗಾರನ ಕಥೆ-ವ್ಯಥೆಯನ್ನು ಒಳಗೊಂಡಿರುವಂತದ್ದು. ಮಂದ್ರ’ದಲ್ಲಿ ಪ್ರಧಾನ ಪಾತ್ರ ಸಂಗೀತವೇ ಎನ್ನುವುದು ಮೇಲಿನ ನೋಟಕ್ಕೇ ತೋರುವುದಾದರೂ ಅದರ ಹಿಂದೆ ಮುಂದೆ ನಡೆಯುವ ನೀತಿ-ಅನೀತಿಗಳ ದೊಂಬರಾಟಗಳು ಓದುಗರನ್ನು ಬಹಳವಾಗಿ ಕಾಡುತ್ತವೆ. ಮೊದಲಿನಿಂದ ಕೊನೆಯವರೆಗೂ ಇಲ್ಲಿ ವಿಜೃಂಭಿಸುವುದು ಸಂಗೀತದ ಝೇಂಕಾರ. ಅದರ ಔನ್ನತ್ಯದಲ್ಲಿ ಮತ್ತೆಲ್ಲವೂ, ಪ್ರೇಮ-ಕಾಮಗಳೂ ಕುಬ್ಜವಾಗಿಬಿಡುತ್ತವೆ. ಕಾದಂಬರಿಯ ಮುಖ್ಯಪಾತ್ರವಾದ ಮೋಹನಲಾಲನ ಕಾಮವಾಸನೆಯಂತೆಯೇ ಮಧುಮಿತಾಳ ವೈವಾಹಿಕ ಜೀವನದ ಹಂಬಲವೂ ಕೂಡ ವ್ಯಾವಹಾರಿಕ ಸ್ತರದಲ್ಲಿಯೇ ಉಳಿದುಬಿಡುತ್ತದೆ. ಬೇರೆಲ್ಲಾ ಭಾವಗಳನ್ನೂ ಮೀರಿ ನಿಲ್ಲುವುದು ಸಂಗೀತದ ಒಲವಾಗಿ ಮತ್ತೊಂದು ಕಡೆ ನಿಲ್ಲುತ್ತದೆ.
ಮೋಹನ್ ಲಾಲ್ ಹಿಂದೂಸ್ತಾನಿ ಸಂಗೀತಗಾರನೊಬ್ಬನ ಸುತ್ತ ಕಾದಂಬರಿ ಕೇಂದ್ರೀಕೃತವಾದರೂ ಅವನ ಬದುಕಿನಲ್ಲಿ ಬರುವ ಪ್ರತಿಯೊಂದು ಪಾತ್ರಕ್ಕೂ ಸಮಗ್ರ ಪಾತ್ರ ಪೋಷಣೆಯನ್ನು ಕಟ್ಟಿಕೊಡಲಾಗಿದೆ. ಕಾದಂಬರಿಯ ಪ್ರಧಾನ ವಸ್ತು ಸಂಗೀತ, ಕಲೆ, ಕಲಾವಿದನ ಬದುಕು. ಕಲೆಯೊಳಗಿನ ಬದುಕನ್ನು ದರ್ಶಿಸುವುದರಲ್ಲಿ ಸಾಗುವ ಕಾದಂಬರಿ ಹಲವು ಕಲಾ ಸಂಬಂಧೀ ಘಟನೆಗಳು, ಕಲೆ, ಕಲಾವಿದರ ವೈರುಧ್ಯಗಳನ್ನು ಸ್ಷರ್ಶಿಸುತ್ತಲೇ ಸಾಗುತ್ತದೆ. ಕಾದಂಬರಿಕಾರರು ಮಂದ್ರದಲ್ಲಿ ಬರುವ ಹೆಣ್ಣಿನ ಎಲ್ಲಾ ಪಾತ್ರಗಳನ್ನು ಒಳಗೊಂಡಂತೆ, ಅದರದರ ಒಳನೋಟಗಳು, ಅಂತರಂಗದರ್ಶನವನ್ನು ಸಹಜವಾಗಿ ಚಿತ್ರಸಿದ್ದಾರೆ. ಹೆಣ್ಣಿನ ಪ್ರೀತಿ, ವಾತ್ಸಲ್ಯ, ಕರುಣೆ, ಹಠ, ಕಾಳಜೀ, ಸ್ವಾಭಿಮಾನ, ಕುಟಿಲತೆ, ಚಂಚಲತೆ, ನಾಟಕೀಯತೆ, ನಂಬಿಕೆ-ಅಪನಂಬಿಕೆ, ಸೇಡು, ಆಸೆ, ಮಾನವ ಮನಸ್ಸುಗಳ ಚಿತ್ರಣ, ಅವುಗಳ ಸಂವೇದನೆಗಳ ಸೂಕ್ಷ್ಮ, ವೈಚಿತ್ಯ್ರಗಳನ್ನು ರಸಪೂರ್ಣವಾಗಿ ಬಿಂಬಿಸಿದ್ದಾರೆ.
ಎಸ್. ಎಲ್. ಭೈರಪ್ಪ ರಚಿಸಿದ ಮಂದ್ರ ಕಾದಂಬರಿಯ ಸಂಗೀತ-ವಿಶ್ಲೇಷಣೆ ಕಾರ್ಯಕ್ರಮವನ್ನು ಇಲ್ಲಿ ವಿವರಿಸಲಾಗಿದೆ.
©2021 Bookbrahma.com, All Rights Reserved