ದಾಟು

Author : ಎಸ್.ಎಲ್. ಭೈರಪ್ಪ

Pages 412

₹ 565.00

Buy Now


Year of Publication: 2014
Published by: ಸಾಹಿತ್ಯ ಭಂಡಾರ
Address: ಶಾಪ್ ನಂ.8, ಜೆಎಂ ಲೇನ್, ಬಳೆಪೇಟೆ, ಬೆಂಗಳೂರು ಕರ್ನಾಟಕ 560053

Synopsys

ಪ್ರಖ್ಯಾತ ಲೇಖಕರಾದ ಎಸ್. ಎಲ್. ಭೈರಪ್ಪನವರ ’ದಾಟು’ ಕಾದಂಬರಿ ಭಾರತೀಯ ಜಾತಿ ಪದ್ದತಿಯನ್ನು ಕುರಿತು ಚರ್ಚಿಸುವ ಕಾದಂಬರಿಯಾಗಿದೆ. ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ಈ ಕಾದಂಬರಿಯು ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿರುವ ತಿರುಮಲಪುರ ಎಂಬ ಸಣ್ಣ ಹಳ್ಳಿಯ ಕಥೆಯನ್ನು ವಿವರಿಸುತ್ತದೆ.

ದಾಟುವಿನಷ್ಟು ಆಳವಾಗಿ ಜಾತಿವ್ಯವಸ್ಥೆ ಮತ್ತು ಜಾತೀಯತೆಯ ಬೇರುಗಳ ವಿಶ್ಲೇಷಣೆಯನ್ನು ಬೇರಾವ ಕಾದಂಬರಿಯೂ ಮಾಡಿಲ್ಲ ಎನ್ನುವುದು ದಾಟು ಕಾದಂಬರಿಯ ಬಗ್ಗೆ ಇರುವ ಜನಪ್ರಿಯ ಮಾತು.

ಪಶ್ಚಿಮದಿಂದ ಎರವಲು ಪಡೆದ ಅಥವಾ ಸಮಕಾಲೀನ ರಾಜಕೀಯ ಒತ್ತಡದಿಂದ ಹುಟ್ಟಿದ ಸಿದ್ಧಾಂತಗಳನ್ನವಲಂಬಿಸದೆ ಸಾಂದ್ರವಾದ ಜೀವನಾನುಭವವನ್ನೊಳಗೊಂಡು ಭಾರತೀಯ ಸಾಮಾಜಿಕ ಪರಂಪರೆಯ ತಳಮುಟ್ಟುವ ವಿಶ್ಲೇಷಣೆಯನ್ನು ಸಾಧಿಸಿರುವ ಕೃತಿಯು ದಲಿತ ವಿಚಾರದ ಮೂಲನೆಲವಾದ ಮಹಾರಾಷ್ಟ್ರದಲ್ಲೂ ಅಪಾರ ಮನ್ನಣೆ ಪಡೆದಿದೆ.ಜೀವಂತ ಪಾತ್ರಗಳು, ಇಡೀ ಇತಿಹಾಸವನ್ನು ಧ್ವನಿಸುವ ಮಿತ್ಗಳ ಕಲಾತ್ಮಕ ಬಳಕೆ ಪರಂಪರೆಯೊಳಗೇ ಇರುವ ಕ್ರಾಂತ ದೃಷ್ಟಿಯ ಆವಿಷ್ಕಾರಗಳಿಂದದಾಟುವು ಭಾರತೀಯ ಬರವಣಿಗೆಯ ಉತ್ತಮ ಮಾದರಿಯಾಗಿದೆ

About the Author

ಎಸ್.ಎಲ್. ಭೈರಪ್ಪ
(20 August 1931)

ಜನಪ್ರಿಯ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರು ಮೀಮಾಂಸಕರೂ ಹೌದು. ಹಾಸನ ಜಿಲ್ಲೆ ಚೆನ್ನರಾಯಪಟ್ಟಣದ ಸಂತೇಶಿವರ ಗ್ರಾಮದಲ್ಲಿ 1931ರ ಆಗಸ್ಟ್ 20ರಂದು ಜನಿಸಿದರು. ತಂದೆ ಲಿಂಗಣ್ಣಯ್ಯ- ತಾಯಿ ಗೌರಮ್ಮ. ತಮ್ಮ ಹುಟ್ಟೂರಿನ ಸುತ್ತಮುತ್ತಲ ಶಾಲೆಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಮೈಸೂರಿಗೆ ಬಂದು ಶಾರದಾವಿಲಾಸ ಪ್ರೌಢಶಾಲೆಯಲ್ಲಿ ಓದಿ, ಮಹಾರಾಜ ಕಾಲೇಜಿನಲ್ಲಿ ಬಿ.ಎ. ಮಾಡಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಗಳಿಸಿದರು. ಅನಂತರ ಹುಬ್ಬಳ್ಳಿಯ ಕಾಡುಸಿದ್ಧೇಶ್ವರ ಕಾಲೇಜಿನಲ್ಲಿ ಅಧ್ಯಾಪಕ (1958-60), ಗುಜರಾತಿನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕ (1960-66), ದೆಹಲಿಯ ರಾಷ್ಟ್ರೀಯ ಶಿಕ್ಷಣ ಮತ್ತು ತರಬೇತಿ ಶಿಕ್ಷಣ ಸಂಸ್ಥೆಯಲ್ಲಿ ಉಪಪ್ರಾಧ್ಯಾಪಕ (1967-1971) ...

READ MORE

Awards & Recognitions

Reviews

ದಾಟು 

ವಿಚಾರಪರಿಪ್ಲುತವೂ ಜನಪ್ರಿಯವೂ ಆದ ಹಲವಾರು ಕನ್ನಡ ಕಾದಂಬರಿಗಳನ್ನು ರಚಿಸಿ ಖ್ಯಾತನಾಮರಾಗಿರುವ ಶ್ರೀ ಎಸ್. ಎಲ್. ಭೈರಪ್ಪನವರಿಗೆ 1975ನೆಯ ಇಸವಿಯ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಗಳಿಸಿ ಕೊಟ್ಟಿರುವ ಭರವಸೆಯ ಕೃತಿ 'ದಾಟು'. ಜಾತಿಪದ್ಧತಿಯ ವಿವಿಧ ಸ್ತರಗಳನ್ನು ಮಜಲುಗಳನ್ನು ಅದರ ಬಹುಮುಖ ಸಂಕೀರ್ತನೆಗಳೊಡನೆ ಸಮರ್ಪಕವಾಗಿ ಗುರುತಿಸುವ, ಅರ್ಥಯಿಸುವ ಕಾಳಜಿ ಇಲ್ಲಿದೆ. ಸಮಸ್ಯೆಯನ್ನು ಮೇಲ್ಪದರದಲ್ಲೇ ಸಾವರಿಸಿಬಿಡುವ ಅವಸರವಿಲ್ಲದ ಇಲ್ಲಿಯ ಬರವಣಿಗೆ ಉಚ್ಛ-ನೀಚವೆಂಬ ಕೃತಕ ಹಣೆಪಟ್ಟಿಗಳಿಗೆ ವಿರಮಿಸದೆ; ನಿರ್ಣಾಯಕವಾಗಿಯೂ ಜಿಗುಟಾಗಿರುವ ಮಧ್ಯವಾದಿ ಜಾತಿಗಳ ಪ್ರಾಬಲ್ಯವನ್ನು ಗುರುತಿಸುತ್ತದೆ. ಅಕಾಡೆಮಿಯ ಪ್ರಶಸ್ತಿ ವಾಚನದಲ್ಲಿ ಈ ಕೃತಿಯನ್ನು ಕುರಿತು ಹೇಳಿರುವುದು ಹೀಗೆ: “....ಶಕ್ತ ಪಾತ್ರಚಿತ್ರಣ, ಮತಾಂಧತೆಯನ್ನು ಎದುರಿಸುವ ಧೈರ್ಯ, ಪ್ರಗತಿಶೀಲ ದೃಷ್ಟಿ ಮತ್ತು ಕ್ರಾಂತಿಕಾರಿ ಒಲವುಗಳಿಗಾಗಿ, ಕನ್ನಡ ಸಾಹಿತ್ಯಕ್ಕೆ 'ದಾಟು' ಒಂದು ಪ್ರಮುಖ ಕೊಡುಗೆಯೆಂದು ಪರಿಗಣಿತವಾಗಿದೆ. ಸಂಪ್ರದಾಯದ ಸಂಕೋಲೆಯನ್ನು ಕಿತ್ತೊಗೆದು ಐತಿಹಾಸಿಕವಾಗಿ ಎತ್ತಿಡಬೇಕಾದ ಮೊದಲ ಹೆಜ್ಜೆ - ದಾಟು – ಅದರಿಂದಾಚೆಗೆ ವ್ಯಕ್ತಿ ಕಂಡು ಕೇಳರಿಯದ ಹೊಸ ಅನುಭವಕ್ಕೆ ಮೈಯೊಡ್ಡಿಕೊಳ್ಳಬೇಕಾಗುವ ಸಂದರ್ಭದಲ್ಲಿ ಹೊಮ್ಮುವ ಒಳಚಳಿಗಳು, ಆದರೂ ಸದಾಕಾಲವೂ ಮಾನವಮತಿಯನ್ನು ಪಂಥಾಹ್ವಾನವಾಗಿ ಆಕರ್ಷಿಸಿ ಉಳಿಯುವ ಸಾಹಸದ ಕನಸುಗಳ ಹೊಸದೊಂದು ಜಗತ್ತಿನ ಹೆಬ್ಬಾಗಿಲುಗಳ ನಡುವಣ ತಾಕಲಾಟವನ್ನು ಇಲ್ಲಿ ಪದರ ಪದರವಾಗಿ ಚಿತ್ರಿಸಲಾಗಿದೆ.

ಕಾದಂಬರಿಯ ಕೇಂದ್ರವ್ಯಕ್ತಿ ಸತ್ಯಭಾಮ ಜಾತಿಪದ್ಧತಿಯ ಮೇಲು ಕೀಳುಗಳನ್ನು ನಂಬದಿದ್ದರೂ ಹಿಂದೂ ಸಮಾಜದ ಕೆಲವೊಂದು ಗೃಹೀತ ಆದರ್ಶಗಳನ್ನು ನಂಬುತ್ತಾಳೆ, “ಬ್ರಾಹ್ಮಣರು ಶ್ರೇಷ್ಠ" ಎನ್ನುವ ಬದಲು, “ಎಲ್ಲರೂ ಶ್ರೇಷ್ಠ ಬ್ರಾಹ್ಮಣರಾಗಬಹುದು, ಅದಕ್ಕೆ ತೀವ್ರವಾಗಿ ಆಶಿಸಿದಾಗ", ಎಂದು ಅವಳು ಸಾರುತ್ತಾಳೆ. ಎಲ್ಲ ಪ್ರೇಮಗಳಿಗೂ ಮಿಗಿಲಾದದ್ದು ಮಾನವತೆಯ ಪ್ರೇಮ ಎಂದು ಬಾಳುತ್ತಾಳೆ. ಗುಡಿಯ ಹತ್ತಿರದ ದಿಬ್ಬವನ್ನೇರಿ; ಎಲ್ಲ ಜಾತಿಯವರನ್ನೂ ಕುರಿತು ನಿಮ್ಮನ್ನು ಬ್ರಾಹ್ಮಣರನ್ನಾಗಿಸುತ್ತೇನೆ ಬನ್ನಿ" ಎಂದೂ ಆಹ್ವಾನಿಸುತ್ತಾಳೆ. ಸ್ವತಃ ಆರ್ಷೇಯ ಬ್ರಾಹ್ಮಣಿಯಂತೆ ಬದುಕುವ ಅವಳು ಮೀರಳಿಗೂ ಬ್ರಾಹ್ಮಣತ್ವದ ಲಾಂಛನಗಳನ್ನು ಕೊಡುವುದನ್ನು ನೋಡಿದರೆ, ಅವಳು 'ಬಂಧನದಿಂದ ಬಿಡಿಸಿಕೊಂಡ ಬಂಧನ'ದಲ್ಲಿ ತೊಳಲುತ್ತ ಇರುವಂತೆ ತೋರುತ್ತದೆ.

ಇನ್ನೊಂದು ದಿಕ್ಕಿನಲ್ಲಿ ಸತ್ಯ ಮೋಹನದಾಸ ಮತ್ತು ಅವನ ಗೆಳೆಯರ ಸಲುವಾಗಿ, ತನ್ನ ಶರೀರಶ್ರಮವನ್ನೂ ಲೆಕ್ಕಿಸದೆ, ದಲಿತರ ಉದ್ದಾರವನ್ನು ಕುರಿತಂತೆ ಪುಸ್ತಕ ಬರೆದುಕೊಡುತ್ತಾಳೆ. ತೀವ್ರವಾದಿಯರಾದ ಮೋಹನದಾಸ ಹರಿಜನರು ಪ್ರತಿನಿತ್ಯವೂ ದೇವಸ್ಥಾನಕ್ಕೆ ಹೋಗುವ ಬಗೆಗೆ ಕಾರ್ಯಕ್ರಮ ಯೋಜಿಸುತ್ತಾನೆ. ಕೊನೆಗೆ, ತನ್ನನ್ನು ಕ್ರಾಂತಿಕಾರಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾನೆ. ಗುಡಿಯ ಮೇಲುಗಡೆ ಇದ್ದ ಕೆರೆಯನ್ನು ಡೈನಮೈಟಿನಿಂದ ಸಿಡಿಸುತ್ತಾನೆ. ತುಂಬಿ ಬಂದ ನೆರೆಯಲ್ಲಿ ದೇವಸ್ಥಾನ ಕೊಚ್ಚಿ ಕೊಂಡು ಹೋಗುತ್ತದೆ. ...

ಯಾವುದೇ ಕಾದಂಬರಿ ಎಷ್ಟು ಮಟ್ಟಿಗೆ ಸಫಲವಾಗಿದೆ ಎನ್ನುವುದು ಅದು ವಿಮರ್ಶಕಮತಿಗೆ ಎಷ್ಟು ಚಾಲೆಂಜ್ ಕೊಡುತ್ತದೆ ಎನ್ನುವುದನ್ನು ಅವಲಂಬಿಸಿದೆ. ಉದಾತ್ತವಾದ ಕೃತಿ ಯಾವತ್ತೂ ಶಿವಗಂಗೆ ಬೆಟ್ಟದ ಹಾಗಿರುತ್ತದೆ; ಬೇರೆ ಬೇರೆ ಮಗ್ಗುಲಿನಿಂದ ಬೇರೆ ಬೇರೆ ರೂಪ ಹೋಲ್ಪಾಡುಗಳು ಮೂಡುವಂತಿರುತ್ತದೆ. ಈ ಕೃತಿಯ ಬಗೆಗೆ ಭೈರಪ್ಪನವರೇ ಹೀಗೆ ಹೇಳುತ್ತಾರೆ- 'ವಿರುದ್ದಾಭಿಪ್ರಾಯಗಳು ಇಲ್ಲವೆಂದಲ್ಲ- ಪ್ರಬಲವಾಗಿವೆ ; ಸತತವಾಗಿಯೂ ಇವೆ. ಆತ್ಮಸಂತೃಪ್ತಿಯಲ್ಲಿ ಮುಳುಗಿಹೋಗುವುದರಿಂದ ನನ್ನನ್ನು ಪಾರುಮಾಡುತ್ತಿರುವುದಕ್ಕಾಗಿ, ಮೇಲ್ಮೈ ಗಳಿಸುವುದಕ್ಕೇ ಅಲ್ಲದೆ ಮುಂದೆ ಸಾಗುತ್ತಿರಲು ಪ್ರಚೋದಿಸುತ್ತಿರುವುದಕ್ಕಾಗಿ ಅವಕ್ಕೆ ಕೃತಜ್ಞನಾಗಿದ್ದೇನೆ.”

ವಿಶಾಲವೂ ಪರ್ಯಾಪ್ತವೂ ಆದ ಚಿಂತನೆಯ ತಳಹದಿಯನ್ನು ಹೊಂದಿರುವ ಈ ಸಾಂದ್ರ ಸಂಕೀರ್ಣ ಕೃತಿ ಕ್ರಾಂತವಾಗಿ ಪ್ರಚೋದಿಸಬಲ್ಲ ಅಂತಸ್ಸತ್ವ ಹೊಂದಿದೆ ಎಂಬುದು ನಮಗೆ ಸಾಂದರ್ಭಿಕವಾಗಿದೆ.

-ರಾ. ಶಂ. ಪೂರ್ಣಾನಂದ

ದಾಟು (ಕಾದಂಬರಿ)

ಮೊದಲನೆಯ ಆವೃತ್ತಿ 1973

ಎರಡನೆಯ ಆವೃತ್ತಿ 1978 ಸಾಹಿತ್ಯ ಭಂಡಾರ ಜಂಗಮ ಗಲ್ಲಿ ಬಳೆಪೇಟೆ ಬೆಂಗಳೂರು, 560053

ಕ್ರೌನ್ ಅಷ್ಟ 604 ಪುಟಗಳು  ಬೆಲೆ ರೂ.20-00 

ಕೃಪೆ: ಗ್ರಂಥಲೋಕ, ಜನೆವರಿ 1981

 

Related Books