‘ವೀರಕೇಸರಿ ಅಮಟೂರು ಬಾಳಪ್ಪ’ ಲೇಖಕ ಬಾಳಾಸಾಹೇಬ ಲೋಕಾಪುರ ಅವರ ಕಾದಂಬರಿ. ಇದು ಕಿತ್ತೂರಿನ ವೀರ ಸೇನಾನಿ ಅಮಟೂರು ಬಾಳಪ್ಪ ಅವರ ಜೀವನ ಚರಿತ್ರೆಯಿಂದ ಸ್ಪೂರ್ತಿ ಪಡೆದ ಐತಿಹಾಸಿಕ ಕಾದಂಬರಿ. ಈ ಕೃತಿಗೆ ಲೇಖಕ ಡಾ. ಸರಜೂ ಕಾಟ್ಕರ್ ಅವರು ಬೆನ್ನುಡಿ ಬರೆದು ‘ಇತಿಹಾಸದಲ್ಲಿ ಕಳೆದು ಹೋದ ಒಂದು ಪುಟ ಅಮಟೂರು ಬಾಳಪ್ಪ. ಕಿತ್ತೂರ ಯುದ್ಧದ ಪ್ರಮುಖ ಪಾತ್ರಧಾರಿಯಾಗಿದ್ದ ಬಾಳಪ್ಪ ಜನರ ವಿಸ್ಮೃತಿಗೆ ಇತಿಹಾಸಕಾರರ ಅವಜ್ಞೆಗೆ ಬಲಿಯಾಗಿ ಅಜ್ಞಾತನಾಗಿ ಹೂತು ಹೋಗಿದ್ದ. ಕಿತ್ತೂರು-ಬ್ರಿಟಿಷ್ ಯುದ್ಧ ನಡೆದು ಕೇವಲ ಎರಡು ನೂರು ವರ್ಷಗಳಾಗಿವೆ. ಸಾವಿರಾರು ವರ್ಷಗಳ ಹಿಂದಿನ ಯುದ್ಧಗಳನ್ನು ನೆನಪಿಡುವ ನಾವು ಇಲ್ಲೇ ನಮ್ಮ ಪರಿಸರದಲ್ಲೇ ಹೆಚ್ಚೆಂದರೆ ನಮ್ಮ ಮುತ್ತಜ್ಜನ ಕಾಲದ ಇತಿಹಾಸವನ್ನು ಕತ್ತಲೆಗೆ ಹಾಕಿ ಬಿಟ್ಟಿದ್ದೇವೆ. ಬ್ರಿಟಿಷ್ ಕಲೆಕ್ಟರ್ ಥ್ಯಾಕರೆಯನ್ನು ಕೊಂದು ಕಿತ್ತೂರಿನ ಯುದ್ಧವನ್ನು ಗೆದ್ದವನು ಅಮಟೂರ ಬಾಳಪ್ಪ. ನಾವು ಕೊಲ್ಲಲ್ಪಟ್ಟ ಥ್ಯಾಕರೆಗೆ ಸ್ಮಾರಕ ಸಮಾಧಿಯನ್ನು ನಿರ್ಮಿಸಿದ್ದೇವೆ. ಆದರೆ ವೈರಿಯನ್ನು ಕೊಂದ ವೀರಬಾಳಪ್ಪ ಎಲ್ಲಿ ಹೇಗೆ ಸತ್ತನೆಂಬುದನ್ನು ಅರಿಯದಷ್ಟು ಅಜ್ಞರಾಗಿದ್ದೇವೆ ಎಂದು ಅಭಿಪ್ರಾಯಪಟ್ಟು ಕೃತಿಯ ಮಹತ್ವವನ್ನು ಪ್ರಶಂಸಿಸಿದ್ದಾರೆ. .
ಇತಿಹಾಸದಲ್ಲಿ ಮರೆತುಹೋದ ಈ ವೀರನ ಕಥೆಯನ್ನು ಹುಡುಕಿ ತೆಗೆದು ಬಾಳಪ್ಪನಿಗೆ ಮರುಜನ್ಮ ಕೊಟ್ಟವರು ಕಾದಂಬರಿಕಾರ ಬಾಳಾ ಸಾಹೇಬ ಲೋಕಾಪುರ. ಇಲ್ಲಿ ಅವರಿಗೆ ಸಿಕ್ಕಿದ್ದು ಕೇವಲ ಒಂದು ಎಳೆ ಮಾತ್ರ ಆ ಎಳೆಯನ್ನೇ ಬಾಳಾ ಸಾಹೇಬರು ಹಿಗ್ಗಿಸಿ ಅದಕ್ಕೆ ಕಾಲ್ಪನಿಕತೆಯ ಮೆರಗು ನೀಡಿ ಒಂದು ಅದ್ಭುತವಾದ ಕಥಾನಕವನ್ನು ನಮ್ಮ ಕಣ್ಣೆದುರು ನಿಲ್ಲಿಸಿದ್ದಾರೆ.
ಲೇಖಕ ಬಾಳಾಸಾಹೇಬ ಲೋಕಾಪುರ ಅವರು ನವ್ಯೊತ್ತರ ಸಾಹಿತಿಗಳು. ಬಾಗಲಕೋಟೆಯ ಸಕ್ರಿ ಕಾಲೇಜಿನಲ್ಲಿ ಭೂಗೋಳ ಶಾಸ್ತ್ರದ ಉಪನ್ಯಾಸಕರು. ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಕವಣಿಗಲ್ಲು, ಹಾರುವ ಹಕ್ಕಿ ಮತ್ತು ಆಕಾಶ, ತನು ಕರಗದವರಲ್ಲಿ, ಮತ್ತು ಕಂಗಳು ತುಂಬಿದ ಬಳಿಕ ಎಂಬ ಕತಾಸಂಕಲನಗಳು, ಉಧೊ ಉಧೊ, ಹುತ್ತ, ಬಿಸಿಲುಪುರ, ನೀಲಗಂಗಾ ಎಂಬ ಕಾದಂಬರಿಗಳು, ಭ್ರಮರಂಗೆ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಬಾಳಾ ಸಾಹೇಬರ ಸಾಹಿತ್ಯ ಕೃಷಿಗಾಗಿ ಕನ್ನಡ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಚದುರಂಗ ಪ್ರಶಸ್ತಿ, 2019ನೇ ಸಾಲಿನ ವರ್ಧಮಾನ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಸಂದಿವೆ. ...
READ MORE