ಗೆರೆ

Author : ನಾ. ದಾಮೋದರ ಶೆಟ್ಟಿ

Pages 168

₹ 150.00

Buy Now


Year of Publication: 2020
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ ಬಸವನಗುಡಿ, ಬೆಂಗಳೂರು - 560 004
Phone: 08026617755

Synopsys

ನಾ. ದಾಮೋದರ ಶೆಟ್ಟಿ ಅವರ ಕಾದಂಬರಿ- ಗೆರೆ’. ಗೆರೆಗಳ ಮೀರುತ್ತಾ ಸಾಗುವ ಬದುಕಿನ ಕುರಿತಾದ ಕಾದಂಬರಿ ಇದು. ಕಥಾನಾಯಕಿ ಕನಕ ತನ್ನ ಗಂಡನನ್ನು ಗೆರೆ ಎಳೆದು ನಿಲ್ಲಿಸುವಲ್ಲಿ ವಿಫಲಳಾಗುತ್ತಾಳೆ. ತನ್ನ ಮಗನಿಗೆ ಗೆರೆ ಎಳೆಯುವ ಪ್ರಯತ್ನ ಮಾಡುವುದೇ ಇಲ್ಲ. ಮಗನೇ ತನ್ನಮ್ಮನ ಬಗ್ಗೆ ಹೇಳ್ತಾನೆ: ‘ಗೆರೆ ಎಳೆದು ಕೂರಿಸೋಕೆ ಇಲ್ಲಿ ಯಾರೂ ಇಲ್ವಲ್ಲ, ಅದ್ಕೇ ಹಾರಾಡ್ತಾಳೆ’. ಅರೆಕಾಲಿಕ ಅಧ್ಯಾಪಕನೊಬ್ಬ ಆರ್ಥಿಕವಾಗಿ ಸದೃಢನಾಗಲು ಗೆಳೆಯರೊಂದಿಗೆ ಸೇರಿ ಫೈನಾನ್ಸ್ ಕಂಪನಿ ಹುಟ್ಟುಹಾಕುವ, ಅನುಕೂಲಸ್ತನಾಗುತ್ತಾ ಹಳೆಯದನ್ನು ಮರೆತು ಮೆರೆಯುವ ಕತೆ ಇಲ್ಲಿದೆ.

ಆತನ ಸಿರಿವಂತಿಕೆಯ ಮೋಜು ಮಸ್ತಿ ಕಂಡಾಗ ಪತ್ನಿ ಕನಕಳಿಗೆ ಅನ್ನಿಸಿದ್ದು, ಮೇಷ್ಟ್ರಾಗಿದ್ದಾಗಿನ ದಿನಗಳೇ ಚೆನ್ನಾಗಿದ್ದವು. ಹೆಂಡತಿ ಮಕ್ಕಳೂಂತ ಎಷ್ಟು ಕಾಳಜಿ ಮಾಡುತ್ತಿದ್ದರು. ಆದರೀಗ… ತನ್ನನ್ನು ಅತಿಯಾಗಿ ಪ್ರೀತಿಸುತ್ತಿದ್ದ ಒಬ್ಬನೇ ಮಗನಿಗೆ ಮದುವೆ ಮಾಡಿಸಿ, ಸೊಸೆಯೊಂದಿಗೆ ಸೌಹಾರ್ದವಾಗಿ ಬಾಳುವೆ ಮಾಡಲು ಕನಕ ಯತ್ನಿಸುತ್ತಾಳೆ. ಆದರೆ, ತನ್ನ ಸುಮಧುರ ಬದುಕಿಗೆ ಅಮ್ಮನೇ ಅಡ್ಡಿ ಎಂದುಕೊಂಡ ಮಗ, ಆಕೆಯನ್ನು ಊರಿಗೆ ಸಾಗ ಹಾಕುತ್ತಾನೆ. ಒಂಟಿ ಬದುಕಿನಲ್ಲೂ ನೂರು ಕಂಟಕಗಳು ಆಕೆಯನ್ನು ಸುತ್ತಿಕೊಳ್ಳುತ್ತವೆ. ಇಂತಹ ಸಂಕೀರ್ಣ ಕಥೆಯ ಹಂದರ ಈ ಕಾದಂಬರಿ.

About the Author

ನಾ. ದಾಮೋದರ ಶೆಟ್ಟಿ
(02 August 1951)

ನಟ, ನಾಟಕಕಾರ, ಸಾಹಿತಿ ನಾ. ದಾಮೋದರ ಶೆಟ್ಟಿ ಪ್ರಾರಂಭಿಕ ಶಿಕ್ಷಣವನ್ನು ಹುಟ್ಟೂರಾದ ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ ಪಡೆದರು. ಆನಂತರ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಹಾಗೂ ಡಾ. ಶ್ರೀನಿವಾಸ ಹಾವನೂರರ ಮಾರ್ಗದರ್ಶನದಲ್ಲಿ ‘ಮುದ್ದಣನ ಶಬ್ದ ಪ್ರತಿಭೆ’ ಮಹಾಪ್ರಬಂಧ ಮಂಡಿಸಿ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದಿದ್ದಾರೆ. 1975ರಲ್ಲಿ ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನಲ್ಲಿ ಕನ್ನಡವಿಭಾಗದ ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ ಅವರು 36 ವರ್ಷಗಳ ದೀರ್ಘಸೇವೆಯ ನಂತರ 2011ರಲ್ಲಿ ನಿವೃತ್ತಿಯಾಗಿದ್ದಾರೆ.  ಚಿಕ್ಕಂದಿನಿಂದಲೇ ನಾಟಕ, ಯಕ್ಷಗಾನ ಕಲೆಯ ಬಗ್ಗೆ ಆಸಕ್ತಿ ಹೊಂದಿದ್ದ ಅವರು ಕೇರಳದ ತ್ರಿಶೂರಿನ ಸ್ಕೂಲ್‌ ಆಫ್‌ ...

READ MORE

Reviews

ಗೆರೆ ಎಳೆದು ನಿಲ್ಲಿಸಲಾಗದವರು

ನಾ ದಾಮೋದರ ಶೆಟ್ಟಿಯವರ ನಾ'ಗೆರೆ' ಕಾದಂಬರಿಯು ಕನ್ನಡದ ಕಥೆಗಾರಿಕೆ ಒಂದು ವಿಶಿಷ್ಟ ತಿರುವನ್ನು ತಲುಪಿರುವುದರ ಸಂಕೇತದಂತೆ ಕಾಣಿಸುತ್ತದೆ. ನಮ್ಮ ಪ್ರಾತಿನಿಧಿಕ ಮಹಿಳಾ ಸಾಹಿತಿಗಳೂ ಈಗೀಗ ಕೈಬಿಟ್ಟಂತಿರುವ ಮಧ್ಯಮ ವರ್ಗದ ಹೆಣ್ಣುಮಕ್ಕಳ ತಾಳೆ, ತಳ್ಳಂಕಗಳನ್ನು ಮತ್ತೆ ಕಥೆಯ ದ್ರವ್ಯವಾಗಿಸಿಕೊಳ್ಳುವ ಧೈರ್ಯವನ್ನು ಅವರಿಲ್ಲಿ ತೋರಿದ್ದಾರೆ. ಇತ್ತೀಚೆಗೆ ಕಥೆಗಾರಿಕೆಯು ಮನುಷ್ಯ ಸಹಜವಾದ ಚರ್ಯೆಗಳನ್ನು ಗೌಣವಾಗಿಸಿ, ಬುದ್ದಿಗೆ ಸಂಬಂಧಿಸಿದ ನಡವಳಿಕೆಯನ್ನು ಹೆಚ್ಚು ಗಾಢವಾಗಿ ನೆಚ್ಚಿಕೊಳ್ಳುತ್ತಿರುವಂತೆ ಕಾಣಿಸುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಮನುಷ್ಯ ಸಂಬಂಧದ ಕುತೂಹಲಕಾರಿ

ಆಯಾಮಗಳನ್ನು ಸರಳ ಕಥೆಗಾರಿಕೆಯಲ್ಲಿ ಕಟ್ಟಿಕೊಡುವ ಕಸುಬುಗಾರಿಕೆಯೂ 'ಗೆರೆ'ಯನ್ನು ಗಮನಾರ್ಹವಾಗಿಸುತ್ತದೆ. ಈ ಕಾದಂಬರಿಯ ಕಥೆ ಒಂದು ನಿರ್ದಿಷ್ಟ ಕೇಂದ್ರದ ಸುತ್ತ ಪರಿಭ್ರಮಿಸುವ ಬದಲು, ಎರಡುದಿಕ್ಕುಗಳಲ್ಲಿ ದೂರಸರಿಯುವ ಸೊಗಸೇ ಕಥೆಯನ್ನು ಬೆಳೆಸುತ್ತದೆ. ಮಹೇಶ – ಕನಕ ಮತ್ತು ಮನೋಜ - ಕನಕರ ಸಂಬಂಧಗಳ ಎರಡೂ ಪಾರ್ಶ್ವಗಳನ್ನು ಕಥೆಗಾರಿಕೆಯು ತರ್ಕಬದ್ದವಾದ ತುಲನೆಗೆ ಒಡ್ಡುತ್ತದೆ. ಹೆಚ್ಚಿನ ಗಳಿಕೆಯ ಆಸೆಯಿಂದ ಫೈನಾನ್ಸ್ ಕಂಪನಿಯನ್ನು ಹುಟ್ಟುಹಾಕುವ ಮಹೇಶ ಆರ್ಥಿಕ ಅವನತಿಯೊಂದಿಗೆ ನೈತಿಕ ಅವನತಿಯತ್ತಲೂ ಜಾರುತ್ತಾ ಹೋದಾಗ ಆತನ ಪತ್ನಿ ಕನಕ ಅಸಹನೀಯ ಸಿರಿವಂತಿಕೆಯಿಂದ ದುರ್ಭರ ದುರ್ದಿನಗಳತ್ತ ಜಾರಿ ಹೋಗುವುದು ಕಥೆಯ ಮೊದಲ ಭಾಗ, ತಾಯಿಯ ಮಡಿಲಲ್ಲಿ ಮಲಗಿ ನಿದ್ದೆಹೋಗುವಷ್ಟು ಮಗು ಮನಸ್ಸಿನ ಮನೋಜ ಮದುವೆಯಾದ ಮೇಲೆ ತಾಯಿಯಿಂದ ದೂರವಾಗುತ್ತಾ ಹೋಗುವುದು ಮಾತ್ರವಲ್ಲ, ಆಕೆಯ ಮಾತೃತ್ವದ ಕೋಮಲತೆಯನ್ನು ಅರ್ಥ ಮಾಡಿಕೊಳ್ಳಲಾಗದಷ್ಟು ಕಟುಕನಾಗುವುದು ಕಥೆಯ ಎರಡನೆಯ ಭಾಗ. ಈ ಎರಡು ಭಾಗಗಳನ್ನು ಪೋಣಿಸುವುದು ಕನಕಳ ಒಳ್ಳೆಯ ಮನಸ್ಸು ಮತ್ತು ಆಕೆಗೆ ಕಾಲಕಾಲಕ್ಕೆ ಒದಗಿ ಬರುವ ಬಂಧು ಬಳಗೆ,

ಕಾಲೇಜು ಉಪನ್ಯಾಸಕನಾಗಿ ಯುಜಿಸಿ ಸಂಬಳ ಪಡೆಯದ ಮಹೇಶನ ಕೀಳರಿಮೆ ಮತ್ತು ಬೈಡು ವ್ಯವಹಾರಗಳ ಸೂಚನೆ ಕಾದಂಬರಿಯ ಆರಂಭದಲ್ಲಿಯೇ ಬರುವುದರಿಂದ, ಆತ ಮುಂದೆ ಬದುಕಲ್ಲಿ ಜಾರುವುದು ಆಕಸ್ಮಿಕ ಎನ್ನಿಸುವುದಿಲ್ಲ. ಆದರೆ ಮಗ ಮನೋಜ? ಕಾದಂಬರಿಯ 155ನೆಯ ಪುಟದಲ್ಲಿ ಎಳವೆಯಲ್ಲಿ ಮನೋಜ ಮಹಾಸ್ವಾರ್ಥಿಯಾಗಿದ್ದ. ತಾನಾಯಿತು ತನ್ನ ಕೆಲಸವಾಯಿತು ಎಂಬ ಸೂಚನೆಯೊಂದನ್ನು ಕೊಟ್ಟದ್ದು ಬಿಟ್ಟರೆ, ಮದುವೆಯಾದ ಮೇಲೆ ಆತ ಅಮ್ಮನನ್ನು ಪೂರ್ತಿಯಾಗಿ ಕೈಬಿಟ್ಟ ವಿಚಿತ್ರ ವರ್ತನೆಗೆ ಮುನ್ಸೂಚನೆ ಕಾಣಿಸುವುದಿಲ್ಲ. ಗಂಡ ತೀರಿಹೋದ ಸಂದರ್ಭದಲ್ಲಿ ಮನೆಗೆ

ಬಂದ ಕೆಲ ಮುತ್ತೈದೆಯರು ಆಕೆಯ ಮಾಂಗಲ್ಯ ತೆಗೆಯಹೋದಾಗ ಅಮ್ಮನ ಬೆಂಬಲಕ್ಕೆ ನಿಂತ ಮನೋಜ ಮೂಢನಂಬಿಕೆಯ ವಿರುದ್ಧ ಸಮರ ಸಾರಿದ ವಿವರಗಳು (ಪು.101), ಅಬುಧಾಬಿಯಲ್ಲಿ ಮನೋಜ ತನ್ನ ತಾಯಿಗೆ ಮಾನಸಿಕವಾಗಿ ಆಸರೆ ಕೊಟ್ಟ ವಿವರಗಳು (ಪು.88) ಮಾರ್ದವ ಸ್ವಭಾವದ ಮನೋಜನ ಚಿತ್ರಣವನ್ನಷ್ಟೇ ನೀಡುತ್ತವೆ. ಫಕ್ಕನೆ ಆತನ ವ್ಯಕ್ತಿತ್ವದ ಕಪ್ಪು ಮುಖವೊಂದು ಅನಾವರಣವಾಗುತ್ತದೆ. ವ್ಯಕ್ತಿತ್ವದ ಎರಡೂ ಪಾರ್ಶ್ವಗಳನ್ನು (ಕಪ್ಪು ಮತ್ತು ಬಿಳಿ) ಚಿತ್ರಿಸಲು ಕಥೆಗಾರರು ಆಯ್ಕೆಮಾಡಿಕೊಳ್ಳುವ ಇನ್ನೊಂದು ಪಾತ್ರ ಮಹೇಂದರ್. ಪಾತ್ರಗಳನ್ನು ಕಪ್ಪು ಮತ್ತು ಬಿಳಿ ಎಂದು ಸರಳವಾಗಿ ವರ್ಗೀಕರಿಸುವ ಸಾಮಾನ್ಯ ಕಥೆಗಾರಿಕೆಗಿಂತ ಭಿನ್ನವಾದ ಪ್ರಯತ್ನವಿದು.

ಕಾದಂಬರಿಯ ಕೊನೆಯಲ್ಲೊಂದು ಮಾರ್ಮಿಕ ವ್ಯಂಗ್ಯ ಹೊಳೆದುಹೋಗುತ್ತದೆ. ಮನೋಜ ತನ್ನ ತಾಯಿಯ ಚಾರಿತ್ರ್ಯದ ಬಗ್ಗೆ ಕೆಟ್ಟಕೆಟ್ಟ ಮಾತುಗಳನ್ನಾಡಿದಾಗ ಆಕೆಯ ಪರವಾಗಿ ಬರುವುದು ಪಕ್ಕದ ಮನೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಜಲಜಮ್ಮ. ಆದರೆ ತಾಯಿ ಇದು ತಾಯಿ ಮಗನ ಪ್ರಶ್ನೆ. ಎಷ್ಟಾದರೂ ನನ್ನ ಮಗ ಅಲ್ಲವೆ? ಅವ ಏನು ಬೇಕಾದ್ರೂ ಹೇಳ್ಳಿ. ನೀವು ಹೋಗಿ ಜಲಜಮ್ಮ ಎನ್ನುತ್ತಾಳೆ. ಆ ಮಗ ಮೈಯಿಡೀ ಹಾವು ಹರಿದಂತಾಗಿ ದಿಗ್ಗಾಂತನಾಗಿ ಕುಳಿತರೆ, ಆ ತಾಯಿ ಅಡುಗೆಮನೆಗೆ ಕಾಲೆಳೆದುಕೊಂಡು ಹೋಗಿ, ಚಹಾ ಮಾಡಿತಂದು ಚಾ ಕುಡಿ ಮಗನೆ. ಬಿಸಿ ಇದೆ. ಆರಿಸಿ ಕೊಡಲೆ? ಎನ್ನುತ್ತಾಳೆ. ಇಷ್ಟೆಲ್ಲ ಆದರೂ ತನ್ನ ಮಗ ಪರಿಸ್ಥಿತಿಯ ಶಿಶುವೇ ಹೊರತು ಕೆಟ್ಟವನಲ್ಲ ಎಂದು ನಂಬಿಕೊಂಡಿದ್ದಾಳೆ ಆ ತಾಯಿ. ಇದೊಂದು ಉದ್ದೇಶಪೂರ್ವಕವಾಗಿ ಕಟ್ಟಿದ ವ್ಯಂಗ್ಯದ ಶೃಂಗ. ಈ ವ್ಯಂಗ್ಯದ ಮೂಲಕ ನಾ.ದಾ. ತಾಯ್ತನದ ಹಿರಿಮೆಯನ್ನು ನಾಟಕೀಯವಾಗಿ ಹೇಳಲು ಬಯಸಿದಂತಿದೆ.

'ಗೆರೆ' ಸಾಂಕೇತಿಕವಾಗಿ ಹೆಣ್ಣುಮಕ್ಕಳ ಜೀವನೋಲ್ಲಾಸವನ್ನು ಹಿಡಿತದಲ್ಲಿ ಇಡಲೆತ್ತಿಸುವ ಲಕ್ಷ್ಮಣ ರೇಖೆ, ಮಧ್ಯಮವರ್ಗದ ಹೆಣ್ಣುಮಕ್ಕಳ ಬದುಕಿನ ಓಟವನ್ನು ನಿಯಂತ್ರಿಸುವ ಹಲವು ತೆರನಾದ ಗೆರೆಗಳನ್ನು ನಾ.ದಾ. ಈ ಕಾದಂಬರಿಯಲ್ಲಿ ಚಿತ್ರಿಸಲು ಪ್ರಯತ್ನಿಸಿದ್ದಾರೆ. ಕನಕಳ ಬದುಕಿನ ದುರಂತದ ಅಲ್ಟಿಮೇಟ್ ಎಂದರೆ, ಆಕೆಯ ಜೀವಕ್ಕೆ ಜೀವವೇ ಆಗಿದ್ದ ಮಗ ಮನೋಜ ಕಾದಂಬರಿಯ ಕೊನೆಯ ಭಾಗದಲ್ಲಿ ತನ್ನ ತಾಯಿಯನ್ನು ಅಂಕೆಯಲ್ಲಿಡಲು ಯಾರಾದರೂ ಗೆರೆ ಎಳೆದು ಕೂಡಿಸಬೇಕಿತ್ತು ಎಂದುಬಿಡುತ್ತಾನೆ. ಏನದು ಗೆರೆ ಎಳೆಯೋದಂದ್ರೆ? ಅತ್ತಿಗೆ ಗೆರೆ ಎಳೆದು ಕೂರಿಸು ವಷ್ಟು ಆಗಿಬಿಟ್ಕಾ ನೀನು? ಅದೇನು ಗೆರೆ ಎಳೀತೀಯೋ ಎಲ್ಲಿ ಎಂದು ಆ ಮಗನಿಗೆ ಸವಾಲ ಹಾಕುವ ಜಲಜಮ್ಮನ ಏರುದನಿಯ ಸಂದರ್ಭ ವೊಂದನ್ನು ಬಿಟ್ಟರೆ ಕಾದಂಬರಿಯ ಉಳಿದ ಪಾತ್ರಗಳೆಲ್ಲ ಹೆಣ್ಣಿಗೆ ಗೆರೆ ಎಳೆದು ನಿಲ್ಲಿಸುವ' ಕ್ರೌರ್ಯವನ್ನು ಸಹಜವೆಂದು ಒಪ್ಪಿಕೊಳ್ಳುವ ಸಮಾಜವನ್ನು ಪ್ರತಿನಿಧಿಸುತ್ತವೆ. ಆದರೆ, ಕನಕಳ ದೌರ್ಭಾಗ್ಯವೆಂದರೆ ಆಕೆಗೆ ಗಂಡನನ್ನೂ ಗೆರೆ ಎಳೆದು ನಿಲ್ಲಿಸಲಾಗುವುದಿಲ್ಲ: ಮಗನನ್ನೂ ನಿಲ್ಲಿಸಲಾಗುವುದಿಲ್ಲ. 'ಗೆರೆ' ಓದುಗರನ್ನು ಜೀವನದ ಅನೂಹ್ಯಗಳ ಬಗ್ಗೆ ಹಾಗೂ ಕ್ಷುಲ್ಲಕತೆ ಮತ್ತು ಹೃದಯ ವೈಶಾಲ್ಯಗಳ ನಡುವೆ ತೂಗಾಡುವ ಮನುಷ್ಯ ಸಹಜ ವರ್ತನೆಗಳ ಬಗ್ಗೆ ಚಿಂತಿಸುವಂತೆ ಮಾಡುವ ಪ್ರಯತ್ನವೂ ಹೌದು. ತನ್ಮೂಲಕ ಈ ಕಾದಂಬರಿ ಹೊಸ ತಲೆಮಾರಿನ ಕಥೆಗಾರಿಕೆಗೆ ಹೊಸ ಸಾಧ್ಯತೆಗಳತ್ತಲೂ ಕೈತೋರುತ್ತಿರುವಂತೆ ಕಾಣಿಸುತ್ತದೆ.

ಬೆಳಗೋಡು ರಮೇಶ ಭಟ್

ಕೃಪೆ : ಹೊಸ ದಿಗಂತ (2020 ಮಾರ್ಚಿ 22)

 


 

Related Books