ಮಲೆಗಳಲ್ಲಿ ಮದುಮಗಳು

Author : ಕುವೆಂಪು (ಕೆ.ವಿ. ಪುಟ್ಟಪ್ಪ)

Pages 712

₹ 380.00




Published by: ಉದಯರವಿ ಪ್ರಕಾಶನ
Address: 1354/1 ಕೃಷ್ಣಮೂರ್ತಿಪುರಂ, ಮೈಸೂರು 570004
Phone: 0821 2332971

Synopsys

ಕವಿಗಳೆಂದು ಜನಪ್ರಿಯರಾಗಿರುವ ಕುವೆಂಪು ಅವರು ಎರಡು ಕಾದಂಬರಿಗಳನ್ನೂ ರಚಿಸಿದ್ದಾರೆ. ಅವರ ಮೊದಲ ಕಾದಂಬರಿ ಕಾನೂರು ಹೆಗ್ಗಡತಿ. ಅದರ ನಂತರ ಪ್ರಕಟವಾದ ಕಾದಂಬರಿಯೇ ಮಲೆಗಳಲ್ಲಿ ಮದುಮಗಳು. ಕಾದಂಬರಿಯಲ್ಲಿನ ಘಟನೆಗಳ ಆಧಾರದ ಮೇಲೆ ಹೇಳುವುದಾದರೆ ಮಲೆಗಳಲ್ಲಿಯ ಘಟನೆಗಳು ಮೊದಲು ಸಂಭವಿಸಿದ್ದಾರೆ ಕಾನೂರು ಹೆಗ್ಗಡತಿಯದು ನಂತರದ ಕಾಲಘಟ್ಟ. ಕುವೆಂಪು ಕಾದಂಬರಿ ಲೋಕ ತೆರೆದಿಡುವ ಮಲೆನಾಡಿನ ಬದುಕು ವಿಭಿನ್ನ ಮತ್ತು ವಿಶಿಷ್ಟ. ಕನ್ನಡದ ಅತ್ಯಂತ ಮಹತ್ವದ ಕಾದಂಬರಿ ಎಂದು ಗುರುತಿಸಲಾಗುವ ‘ಮಲೆಗಳಲ್ಲಿ ಮದುಮಗಳು’ ರಾಷ್ಟ್ರಕವಿ ಕುವೆಂಪು ಅವರ ಅತ್ಯುತ್ತಮ ಸೃಜನಶೀಲ ಸೃಷ್ಟಿಗಳಲ್ಲಿ ಒಂದು. ಮಲೆನಾಡಿನ ಒಂದು ಕಾಲಘಟ್ಟದ ಅದರಲ್ಲೂ 20ನೇ ಶತಮಾನದ ಆರಂಭದ ದಿನಗಳ ಬದುಕನ್ನು ಸೊಗಸಾದ ರೀತಿಯಲ್ಲಿ ಹಿಡಿದಿಡುವ ಕೃತಿಯಿದು. ಇದು ಕಥಾನಾಯಕ, ಅಥವಾ ನಾಯಕಿ ಪ್ರಧಾನ ಕಥಾನಕ ಹೊಂದಿರುವ ಕಾದಂಬರಿಯಲ್ಲ. ಕಾದಂಬರಿಯ ಆರಂಭದಲ್ಲಿಯೇ ಲೇಖಕರು ಇಲ್ಲಿ ಯಾರು ಮುಖ್ಯರಲ್ಲ; ಯಾರು ಅಮುಖ್ಯರಲ್ಲ, ಯಾವುದು ಯಕ:ಶ್ಚಿತವಲ್ಲ, ಇಲ್ಲಿ ಯಾವುದಕ್ಕೂ ಮೊದಲಿಲ್ಲ, ಯಾವುದಕ್ಕು ತುದಿಇಲ್ಲ,ಇಲ್ಲಿ ಅವಸರವು ಸಾವದಾನದ ಬೆನ್ನೇರಿದೆ, ಇಲ್ಲಿ ಎಲ್ಲಕ್ಕೂ ಇದೆ ಅರ್ಥ, ಯಾವುದು ಅಲ್ಲ ವ್ಯರ್ಥ. ನೀರೆಲ್ಲವು ತೀರ್ಥ, ತೀರ್ಥವು ನೀರೇ.” ಎಂಬ ಮಾತುಗಳೊಂದಿಗೇ ಆರಂಭಿಸುತ್ತಾರೆ. ಮಲೆನಾಡಿನ ಒಟ್ಟಂದದ ಬದುಕು ಅದು ಕಟ್ಟುವ ಕ್ರಮ ಮನಸೂರೆಗೊಳ್ಳುವಂತಿದೆ. ಮಲೆಗಳಲ್ಲಿ ಮದುಮಗಳು ಕಾದಂಬರಿಯ ಶೀರ್ಷಿಕೆಯೇ ಸೂಚಿಸುವಂತೆ ಮದುವೆಯ ಅದರಲ್ಲೂ ಮದುಮಗಳ ಸುತ್ತ ಕಥೆ ಸುತ್ತುತ್ತದೆ. ಮಾನವೀಯ ಬದುಕು ಕಾದಂಬರಿಯ ಜೀವ ಮತ್ತು ಜೀವಾಳ. ಗುತ್ತಿ ತಿಮ್ಮಿಯರ ಪ್ರೇಮ ಪ್ರಸಂಗ, ಅಭೂತಪೂರ್ವವಾದ ಮಲೆನಾಡಿನ ಚಿತ್ರಣ, ಸ್ವಾಭಾವಿಕ ವರ್ಣನೆಗಳು ಓದುಗರ ಮನಸೂರೆಗೊಳ್ಳುತ್ತವೆ. ಕಣ್ಣಿಗೆ ಕಟ್ಟುವಂತಹ ನಿರೂಪಣೆ, ಬದುಕಿನ ವೈವಿಧ್ಯತೆ ಮತ್ತು ಸಂಕೀರ್ಣತೆಗಳನ್ನು ದಾಖಲಿಸುವ ಕಾರಣಕ್ಕಾಗಿ ಈ ಕೃತಿ ತುಂಬಾ ಮಹತ್ವ ಪಡೆದುಕೊಂಡಿದೆ. ಈ ಕಾದಂಬರಿಯ ಓದು ಒಂದು ವಿಭಿನ್ನ ಅನುಭವ ಒದಗಿಸುತ್ತದೆ. ಕನ್ನಡದಲ್ಲಿ ಓದಲೇ ಬೇಕಾದ ಪುಸ್ತಕಗಳ ಪಟ್ಟಿಯಲ್ಲಿ ಮದುಮಗಳು ಮೊದಲ ಸಾಲಿನಲ್ಲಿ ನಿಲ್ಲುತ್ತದೆ.

About the Author

ಕುವೆಂಪು (ಕೆ.ವಿ. ಪುಟ್ಟಪ್ಪ)
(29 December 1904 - 11 November 1994)

ಕುವೆಂಪು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡಿದ ಕವಿ, ಪ್ರಖರ ವಿಚಾರವಾದಿ-ಚಿಂತಕ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡ ಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು. ತಂದೆ ವೆಂಕಟಪ್ಪಗೌಡ ತಾಯಿ ಸೀತಮ್ಮ. ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯವರಾದ ಪುಟ್ಟಪ್ಪ ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆಯಲ್ಲಿ 1904ರ ಡಿಸೆಂಬರ್ 29ರಂದು. ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ ಎಂ.ಎ. ಪದವಿ (1929) ಪಡೆದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕ (1929) ಆಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ...

READ MORE

Conversation

Reviews

ಕುವೆಂಪು ಅವರ ಮಲೆಗಳಲ್ಲಿ ಮದುಮಗಳು- ಎಂ.ಜಿ. ಕೃಷ್ಣಮೂರ್ತಿ ಲೇಖನ

ಮಲೆಗಳಲ್ಲಿ ಮದುಮಗಳಿಗೆ ಕಣ್ಹಾಕಿ- ದೇವನೂರು ಮಹಾದೇವ ಲೇಖನ

ಮಲೆಯ ಮದುಮಗಳ ತುಂಬೆಲ್ಲಾ ಮಲೆಯದೇ ಸ್ನಿಗ್ಧ ಸೌಂದರ್ಯ!

ಮಲೆಗಳಲ್ಲಿ ಮದುಮಗಳು-ವಿಮರ್ಶೆಯ ಅವಸರ ಸಾವಧಾನದ ಬೆನ್ನೇರಬೇಕು- ಎನ್. ಬೋರಲಿಂಗಯ್ಯ

ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಕಾಡು-ಕಾದಂಬರಿ ಓದುವವನ ಪಾಡು- ನಿತ್ಯಾನಂದಶೆಟ್ಟಿ

---

ಕುವೆಂಪು ಅವರ ಮಹಾ ಕಾದಂಬರಿ ‘ಮಲೆಗಳಲ್ಲಿ ಮದುಮಗಳು’

ಉಳ್ಳವರ, ಬಡವರ ನಡುವಿನ ಬಾಂಧವ್ಯ, ದ್ವೇಷ, ಅಸೂಯೆ, ಹೊಡೆತಗಳ ಪೆಟ್ಟುಗಳು ಮನಕ್ಕೆ ಬಂದು ಅಪ್ಪಳಿಸುತ್ತವೆ. ಆಭಯ ನೀಡುವ ಕೈಗಳು ಕಾಣಿಸಿದಂತೆ, ಕೈಬಿಡುವ ಕೈಗಳೂ ಕಾಣಿಸುತ್ತವೆ. ಬೆಳಗಾದರೆ ಯಾರಿಗೆ ದು:ಖ, ಯಾರಿಗೆ ಯಾತನೆ ಎಲ್ಲವೂ ಗೋಚರಿಸುತ್ತದೆ. ನೆಲದ ಮೇಲಿನ ಬದುಕಿನೆಲ್ಲ ಚಹರೆಗಳು ನೆನೆಯದಿದ್ದರೂ ಮನಕ್ಕೆ ಕಾಣಿಸುತ್ತವೆ ಈ ಕೃತಿಯ ಓದಿನಿಂದ.

ಆ ಕೃತಿಯನ್ನು ಓದುತ್ತಿದ್ದಾಗ, ಓದಿದ ಮೇಲೆ ಮತ್ತು ಅದನ್ನು ನೆನೆಸಿಕೊಳ್ಳದೆ ಇದ್ದರೂ ಮನಸಿನಿಂದೆದ್ದು ಕಣ್ಣಮುಂದೆ ಸೃಜಿಸುವ ದೃಶ್ಯಗಳು ನೂರು. ಕಾಡಿನ ಗವ್ವೆನ್ನುವ ಕಗ್ಗತ್ತಲು, ತರಗೆಲೆಯಲ್ಲಿ ಮರೆಯಾಗಿರುವ ಕೀಟ, ಪ್ರಾಣಿಗಳ ರವರವ ಸದ್ದು, ಹಕ್ಕಿಗಳ ಭಿನ್ನ ಭಿನ್ನ ಸ್ವರಗಳ ಕೂಗು, ಬೀಸಿದ ಗಾಳಿಗೆ ಮರಮರ ಸದ್ದು ಮಾಡುವ ಗಿಡಮರಗಳು, ನದಿ ನೀರಿನ ಭೋರ್ಗರೆತ, ನೀರಿನ ಝರಿಗಳ ಹಲವ ಹಾಡು, ಪ್ರಾಯಕ್ಕೆ ಕೂಗುವ ಪಶು-ಪಕ್ಷಿ ಪ್ರಾಣಿಗಳ ವಿರಹದ ಆರ್ಥ ಸ್ವರ, ಗುಡುಗು, ಮಿಂಚು, ಮಳೆಯ ಭಯಾನಕ ಜೀವಧ್ವನಿ, ನೆಲದ ಬಿಸಿ ಆವಿಯ ವಾಸನೆ, ಮಳೆರಾತ್ರಿ, ನಿಲುವಿ ಮಳೆಬೆಳಗು, ಸೂರ್ಯೋದಯ, ಚಂದ್ರೋದಯ, ಸೂರ್ಯಾಸ್ತ, ಚಂದ್ರಾಸ್ತಗಳ ಮೌನಗಳು, ಚುಕ್ಕೆಗಳ ಜಾತ್ರೆ ರಾತ್ರಿಯೂ ಲೋಕವನ್ನು ಎಚ್ಚರಿಸುವ ಕ್ರಿಮಿಕೀಟಗಳು. ಇಲ್ಲಿಯ ಗಾಳಿಗೂ, ಬೆಳಕಿಗೂ, ನೀರಿಗೂ ಲೋಕಕ್ಕೆ ಗೆಳೆಯ ಮದ್ದು ನೀಡುವ ದೈವಿಕತೆ ಏನೆಲ್ಲ ಕಾಣುತ್ತವೆ, ಕೇಳಿಸುತ್ತವೆ. ಮನದಲ್ಲಿ ಮರುಸೃಷ್ಟಿಸುವ ಅಪಾರ ಶಕ್ತಿ ಇದಕ್ಕಿದೆ.

ಅಷ್ಟೇ ಅಲ್ಲ, ಮನುಷ್ಯ ಲೋಕಗಳು ಕುಣಿಯುತ್ತವೆ, ಉಂಡು ತೇಗುವ, ರಾಸೊ ಉ೦ಡದ್ದು, ಕುಡಿದದ್ದು ಹೆಚ್ಚಾಗಿ ವಾಂತಿ ಮಾಡಿಕೊಳ್ಳುವ ಮನುಷ್ಯ ಲೋಕ ಇದ್ದಂತೆ, ಅದು ಹಸಿದು, ಕುದಿವ ಅನ್ನಕ್ಕೆ ಬಾಯಿ ಬಿಡುವ ಹೆತ್ತವರು. ಅವರ ಕಂದಮ್ಮಗಳ ನಿಟ್ಟುಸಿರು ಬಡಿಯುತ್ತವೆ. ಮಹಿಳೆಯರ ಪ್ರಣಯ ಕಾಲದ ಮುನುಗು, ಹೆರಿಗೆ ಕಾಲದ ನೋವಿನ ಧ್ವನಿ, ಅಕ್ರಮ ಬಸಿರುಗಳನ್ನು ತೆಗೆಯುವಾಗ ಜೀವಹಿಂಡುವ ಧ್ವನಿಗಳು ಇಲ್ಲಿ ಕೇಳಿಸುತ್ತವೆ. ಉಳ್ಳವರ, ಬಡವರ ನಡುವಿನ ಬಾಂಧವ್ಯ, ದ್ವೇಷ, ಅಸೂಯೆ, ಹೊಡೆತಗಳ ಪೆಟ್ಟುಗಳು ಮನಕ್ಕೆ ಬಂದು ಅಪ್ಪಳಿಸುತ್ತವೆ. ಅಭಯ ನೀಡುವ ಕೈಗಳು ಕಾಣಿಸಿದಂತೆ, ಕೈಬಿಡುವ ಕೈಗಳೂ ಕಾಣಿಸುತ್ತವೆ. ಬೆಳಗಾದರೆ ಯಾರಿಗೆ ದುಃಖ, ಯಾರಿಗೆ ಯಾತನೆ ಎಲ್ಲವೂ ಗೋಚರಿಸುತ್ತವೆ. ನೆಲದ ಮೇಲಿನ ಬದುಕಿನೆಲ್ಲ ಚಹರೆಗಳು ನೆನೆಯದಿದ್ದರೂ ಮನಕ್ಕೆ ಕಾಣಿಸುತ್ತವೆ ಈ ಕೃತಿಯ ಓದಿನಿಂದ.

ನಾನು ಹತ್ತನೆ ತರಗತಿ ಪಾಸಾಗಿ ಕಾಲೇಜಿಗೆ ಸೇರಿಕೊಳ್ಳಲಾಗದೆ ಹೊಲ ಮನೆ ಕೆಲಸದಲ್ಲಿ ಒಲ್ಲದ ಮನಸ್ಸಿನಿಂದ ತೊಡಗಿಕೊಂಡಿರುವ ಆ ದಿನಗಳಲ್ಲಿ 'ಮಲೆಗಳಲ್ಲಿ ಮದುಮಗಳು' ಕಾದಂಬರಿ ನನ್ನ ಕೈಗಿತ್ತವನು ನುಗಡೋಣಿ ಬಸವನೆಂಬ ದೈವ ಎಂದು ಹೇಳಬಹುದು. ನನಗಾಗ ಹದಿನೇಳು ವರ್ಷ. ನನ್ನ ಊರು ಕೇರಿಯಲ್ಲಿ ನಾನು ಹುಟ್ಟಿ ಬೆಳೆದಿದ್ದರೂ, ಅದನ್ನು ಹೇಗೆ ನೋಡಬೇಕು ಎಂಬುದನ್ನು ಕಲಿಸಿದ ಕಾದಂಬರಿ 'ಮಲೆಗಳಲ್ಲಿ ಮದುಮಗಳು', ಈ ಕೃತಿಯ ಓದಿನಿಂದಲೇ ಕಲಿತ ನಾನು ನನ್ನೂರಿನ ಕತೆಗಳನ್ನು ಬರೆಯುತ್ತ ಬಂದಿದ್ದೇನೆ. ಎಲ್ಲಿಯ ನನ್ನೂರು ನುಗಡೋಣಿ, ಎಲ್ಲಿಯ ಕುವೆಂಪು ಕುಪ್ಪಳ್ಳಿ? ಹಾಗೆ ನೋಡಿದರೆ ಮಲೆನಾಡಿಗೆ ವಿರುದ್ಧವಾದದ್ದು ನನ್ನೂರು. ನಮ್ಮ ಸೀಮೆಯಲ್ಲಿ ಗಿಡ ಮರಗಳು ವಿರಳ, ಗುಡ್ಡ ಬೆಟ್ಟಗಳು ವಿರಳ. ಮಳೆ ಬರುವುದನ್ನು ನಾವು ಕಾಯುತ್ತಿದ್ದೆವು. ನದಿ ಹಳ್ಳಕೊಳ್ಳಗಳು ಅಪರೂಪ. ಇಂಥಹ ಸೀಮೆಯಲ್ಲಿದ್ದ ನನಗೆ ಮಲೆನಾಡು ಪರಿಚಯವಾದದ್ದೆ ಕುವೆಂಪು ಕಾದಂಬರಿಗಳಿಂದ. ನಾನು ಹತ್ತನೇ ತರಗತಿ ಓದಲು ಹತ್ತು ಮೈಲು ದೂರದ ಊರಿಗೆ ನಿತ್ಯವೂ ಹೋಗಿಬರುತ್ತಿದ್ದೆ. ಮನೆ ಬಿಟ್ಟು ನಡೆದರೆ ನೆರಳಿರುವ ಒಂದೂ ಮರ ದಾರಿಯಲ್ಲಿ ನನಗೆ ಸಿಗುತ್ತಿರಲಿಲ್ಲ. ಬಿಸಲು ವಿಪರೀತ ಮಳೆ ಎಂಬುದೇ ಅಪರೂಪವಾದ್ದರಿಂದ ಗಿಡ ಮರಗಳಿಗೆ ನೀರೆಲ್ಲಿ? ತಂಪಾದ ಗಾಳಿಯಲ್ಲಿ? ಬಿಸಿಲಿನಲ್ಲಿಯೇ ಬಾಳಿದ ನನಗೆ ಕುವೆಂಪು ಕಾದಂಬರಿಗಳಲ್ಲಿ ಕಾಣುವ ಮಲೆನಾಡು ನನಗೆ ಖುಷಿ ನೀಡಿತು. ಈ ಕಾದಂಬರಿಯನ್ನು ಓದಿದ ಮೂವತ್ತು ವರ್ಷಗಳ ನಂತರ ನಾನು ಕುಪ್ಪಳ್ಳಿಯನ್ನು, ಕವಿ ಮನೆಯನ್ನು ನೋಡಿ ಧನ್ಯನಾದೆ.

(ಬರಹ : ಅಮರೇಶ ನುಗಡೋಣಿ. ಕೃಪೆ : ಹೊಸಮನುಷ್ಯ, ಫೆಬ್ರುವರಿ 2022)  

Related Books