ಮನೆತನ

Author : ಸೂರ್ಯನಾರಾಯಣ ಚಡಗ

Pages 329

₹ 150.00




Year of Publication: 1971
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಚಾಮರಾಜಪೇಟೆ ಬೆಂಗಳೂರು-560018

Synopsys

‘ಮನೆತನ’ ಸೂರ್ಯನಾರಾಯಣ ಚಡಗ ಅವರ ಕಾದಂಬರಿಯಾಗಿದೆ. ಈ ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ಕೃತಿಯ ಕುರಿತು ಜಿ ಎಸ್ ಶಿವರುದ್ರಪ್ಪನವರು ‘ನಾಗರಿಕತೆಯ ದಾಳಿಗೆ ಸಿಕ್ಕ ಹಳೆಯ ಕಾಲದ ಗ್ರಾಮ ಒಂದರ ಅನೇಕ ವ್ಯಕ್ತಿಗಳು, ಬದಲಾದ ಪರಿಸರದಲ್ಲಿಯೂ ದಿಟ್ಟತನದಿಂದ ಬದುಕಿದ ಪರಿಯನ್ನು ಜೀವಂತವಾಗಿ ನಮ್ಮೆದುರು ನಿಲ್ಲುವಂತೆ ಚಿತ್ರಿಸುವ ಕಲೆಗಾರಿಕೆ ಚಡಗರ ಬರಹದಲ್ಲಿದೆ’ ಎನ್ನುತ್ತಾರೆ.

ಕೃತಿಯನ್ನು ವಿಮರ್ಶಿಸಿರುವ ವಿನುತ ಹಂಚಿನಮನಿ ಅವರು, ‘ಮುನ್ನೂರು ಪುಟಕ್ಕೂ ಮೀರಿದ ಈ ಕಾದಂಬರಿ ಸುಸಂಬದ್ಧವಾದ ಘಟನಾ ಪರಂಪರೆಗಳಿಂದ, ಗಟ್ಟಿಮುಟ್ಟಾದ ಕಥಾವಸ್ತುವಿನಿಂದ, ಸ್ಪುಟವಾದ ಪಾತ್ರ ಚಿತ್ರಣದಿಂದ ತುಂಬ ಲವಲವಿಕೆಯ ಲಕ್ಷಣದಿಂದ ಚೇತೋಹಾರಿಯಾಗಿ ಓದಿಸಿಕೊಂಡು ಹೋಗುತ್ತದೆ. ಇನ್ನು ಕಾದಂಬರಿಯ ಭಾಷೆ ದಕ್ಷಿಣ ಕನ್ನಡದಾಗಿದ್ದು, ಅಲ್ಲಿಯ ಕೆಲವು ಅಪರೂಪದ ಶಬ್ದಗಳ ಅರ್ಥವನ್ನು, ಪುಸ್ತಕದ ಕೊನೆಗೆ ಅರ್ಥಕೋಶದಲ್ಲಿ ಕೊಡಲಾಗಿದೆ. ಈ ಕೃತಿಯು ಪ್ರಾದೇಶಿಕ ಭಾಷೆಯ ಸೊಗಡು ಕಥೆಯನ್ನು ಕಣ್ಮುಂದೆ ತಂದು ನಿಲ್ಲಿಸುತ್ತದೆ. ಬದಲಾವಣೆಯ ಬಿರುಗಾಳಿ ವೇಗದೊಂದಿಗೆ, ಜೀವನ ತರಗಲೆಯಂತೆ ತಿರ್‍ರನೆ ತಿರುವಿದರೂ, ಪ್ರಕೃತಿಯಲ್ಲಾಗುವ ವ್ಯಾಪಾರದಂತೆ ನಿಧಾನ ಗತಿಯಲ್ಲಿ ಶಾಂತವಾಗುವ ಎಲ್ಲ ಕ್ರಿಯೆಗಳು ಕಾದಂಬರಿಯ ಪ್ರಕ್ರಿಯೆಯಲ್ಲಿ ಘಟನಾವಳಿಗಳಾಗಿ, ಅದಕ್ಕೆ ಸಾಹಿತ್ಯದ ಮೆರಗು ನೀಡಲು ಪ್ರಯತ್ನಿಸುವ ಈ ಕಾದಂಬರಿ ಓದುಗರ ಗಮನ ಸೆಳೆಯುತ್ತದೆ. ದಟ್ಟ ಅನುಭವಗಳು ಕಾದಂಬರಿಯನ್ನು ಉನ್ನತೀಕರಿಸಿವೆ’ ಎಂದಿದ್ದಾರೆ.

About the Author

ಸೂರ್ಯನಾರಾಯಣ ಚಡಗ
(13 April 1932 - 02 November 2006)

ದಕ್ಷಿಣ ಕನ್ನಡ ಜಿಲ್ಲೆಯ ಕೋಟ್ಟೇಶ್ವರದಲ್ಲಿ 1932 ಏಪ್ರಿಲ್‌ 13 ಜನಿಸಿದ ಸೂರ್ಯನಾರಾಯಣರಾವ್ ಚಡಗ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಚಿರಪರಿಚಿತರು. ತಂದೆ ನಾರಾಯಣ ಚಡಗ, ತಾಯಿ ಶೇಷಮ್ಮ.   30ಕ್ಕೂ ಹೆಚ್ಚು ಕಾದಂಬರಿ, 3 ಸಣ್ಣ ಕಥಾ ಸಂಕಲನ, ಕಾಮಧೇನು, ನಗೆ ನಂದನ, ಸುಹಾಸ, ದಿಗಂತ ಮತ್ತು ಮೆಚ್ಚಿನ ಕನ್ನಡ ಬರಹಗಾರರು ಹಾಗೂ ಮೂರು ಅಭಿನಂದನಾ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಕಾವೇರಿ, ಕ್ಷಮೆ ಇರಲಿ ಪ್ರಭುವೆ, ಸೀಮಂತಿ, ಅಮರಸರಸ್ವತಿ, ಬಂಗಾಲಕ್ಷ್ಮೀ ಧರ್ಮ, ಕರ್ಮ, ಹೃದಯರಾಣಿ ಕಾದಂಬರಿಗಳು. ‘ಕಾಮಧೇನು, ನಗೆನಂದನ’ - ಅವರ ಸಂಪಾದಿತ ಕೃತಿ. ‘ಜಯದೇವಿತಾಯಿ’ (ಜಯದೇವಿತಾಯಿ ಲಿಗಾಡೆ), ‘ಕಾರಂತ ಕೊಂಗಾಟೆ (ಶಿವರಾಮ ಕಾರಂತರು), ‘ಸೃಜನ’ (ಡಿ. ವೀರೇಂದ್ರ ಹೆಗಡೆ) ಸಂಭಾವನ ...

READ MORE

Awards & Recognitions

Reviews

ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನಿತ ಕಾದಂಬರಿ ಮನೆತನ ವನ್ನು ಬರೆದವರು ಸಾಹಿತಿ  ಶ್ರೀ ಸೂರ್ಯನಾರಾಯಣ ಚಡಗ. ಸುವರ್ಣ ಸ್ವಾತಂತ್ರ್ಯೋತ್ಸವದ ಮಾಲಿಕೆಯಲ್ಲಿ ಕರ್ನಾಟಕ ಸರಕಾರದ ಸಹಾಯಧನದಿಂದ ಪ್ರಕಟಿತ ಕೃತಿ ಇದು. ಕನ್ನಡ ಸಾಹಿತ್ಯ ಪರಿಷತ್ತು, ಪ್ರಥಮ ಮುದ್ರಣ ೧೯೭೧ ರಲ್ಲಿ ಮಾಡಿಸಿದ್ದರೆ ಎರಡನೇ ಮುದ್ರಣಕ್ಕೆ ಈ ಕೃತಿ ಮೂವತ್ತೆರಡು ವರ್ಷ ಕಾಯ್ದಿದೆ. ಶ್ರೀ ಜಿ ಎಸ್ ಶಿವರುದ್ರಪ್ಪನವರ ಅಭಿಪ್ರಾಯದಲ್ಲಿ  ನಾಗರಿಕತೆಯ ದಾಳಿಗೆ ಸಿಕ್ಕ ಹಳೆಯ ಕಾಲದ ಗ್ರಾಮ ಒಂದರ ಅನೇಕ ವ್ಯಕ್ತಿಗಳು, ಬದಲಾದ ಪರಿಸರದಲ್ಲಿಯೂ ದಿಟ್ಟತನದಿಂದ ಬದುಕಿದ ಪರಿಯನ್ನು ಜೀವಂತವಾಗಿ ನಮ್ಮೆದುರು ನಿಲ್ಲುವಂತೆ ಚಿತ್ರಿಸುವ ಕಲೆಗಾರಿಕೆ ಚಡಗರ ಬರಹದಲ್ಲಿದೆ. ಮುನ್ನೂರು ಪುಟಕ್ಕೂ ಮೀರಿದ ಈ ಕಾದಂಬರಿ ಸುಸಂಬದ್ಧವಾದ ಘಟನಾ ಪರಂಪರೆಗಳಿಂದ, ಗಟ್ಟಿಮುಟ್ಟಾದ ಕಥಾವಸ್ತುವಿನಿಂದ, ಸ್ಪುಟವಾದ ಪಾತ್ರ ಚಿತ್ರಣದಿಂದ ತುಂಬ ಲವಲವಿಕೆಯ ಲಕ್ಷಣದಿಂದ ಚೇತೋಹಾರಿಯಾಗಿ ಓದಿಸಿಕೊಂಡು ಹೋಗುತ್ತದೆ. ಪ್ರೊ. ಅರಳುಮಲ್ಲಿಗೆ ಪಾರ್ಥಸಾರಥಿ, ಎಲ್ ಎಸ್ ಶೇಷಗಿರಿರಾವ್, ಹಾ ಮಾ ನಾಯಕ ಇವರೆಲ್ಲ ಪ್ರಶಂಸಿದ ಕೃತಿ ಇದು. ರಾವ್ ಬಹಾದ್ದೂರ್ ರ ಗ್ರಾಮಾಯಣದ ಜೊತೆಗೆ ಸಂವಾದಿಯಾಗಿ ನಿಲ್ಲಬಲ್ಲ ವಿಶಿಷ್ಟ ಕೃತಿ ಎನಿಸಿದೆ. ಕಡಲತೀರದ ಭಾರ್ಗವ ಶಿವರಾಮ ಕಾರಂತರ ಬರವಣಿಗೆಯನ್ನು ಜ್ಞಾಪಿಸುವ ಸಾಹಿತ್ಯದಲ್ಲಿ ಜಟಿಲತನವಿದೆಯೇ ಹೊರತು ಕ್ಲಿಷ್ಟಕರವಲ್ಲ. ಹಾ ಮಾ ನಾಯಕರ ಅಭಿಪ್ರಾಯದ ಪ್ರಕಾರ ಈ ಕೃತಿ ಪಠ್ಯ ಪುಸ್ತಕವಾಗಲು ಯೋಗ್ಯವಿದೆ.

ಸುಮಾರು ಎಂಬತ್ತು ವರ್ಷಗಳ ಹಿಂದೆ ದಕ್ಷಿಣ ಜಿಲ್ಲೆಯ ಒಂದು ಚಿಕ್ಕ ಗ್ರಾಮದ ಜನಜೀವನದ ಯಥಾವತ್ತಾದ ಚಿತ್ರಣ ಈ ಕಥೆಯ ವಸ್ತು. ಜನರು ನಾಗರಿಕರಾಗಿರಲಿ, ಅನಾಗರಿಕರಾಗಿರಲಿ, ಸುಧಾರಣೆಯ ಗಾಳಿ ಸೋಕದೆ ಇದ್ದರೂ, ಹಲವು ದೃಷ್ಟಿಯಿಂದ ಹಿಂದುಳಿದವರಾಗಿದ್ದರೂ ತಮ್ಮದೇ ಆದ ರೂಢಿಗಳ ಪ್ರಕಾರ ತಮ್ಮದೇ ನಡೆ ನುಡಿ, ಆಚಾರ ವಿಚಾರ ಹೊಂದಿಸಿಕೊಂಡು ಜೀವಿಸುತ್ತಾರೆ, ಬದಲಾಗಲು ಬಯಸುವುದಿಲ್ಲ.
ದಕ್ಷಿಣ ಕನ್ನಡದ ಕುಂದಾಪುರ ತಾಲೂಕಿಗೆ ಸೇರಿದ ಕಡಲ ತೀರದ ಗ್ರಾಮ ಕುಂಬಾರಗುಂಡಿ. ಈ ಗ್ರಾಮ ಯಾವುದೇ ಆಧುನಿಕ ಕಾಲದ ಸೌಲಭ್ಯಗಳನ್ನು ಹೊಂದಿಲ್ಲ. ವಾಹನಗಳ ಸೌಕರ್ಯ ಇಲ್ಲ. ವಾಹನಗಳ ತಿರುಗಾಟಕ್ಕೆ ಬೇಕಾಗುವ ರಸ್ತೆ ಇಲ್ಲ. ಸಂಸ್ಕ್ರತಿಯ ಮೂಲಗಳಾದ ಶಾಲೆ, ಆಸ್ಪತ್ರೆ, ಪೇಟೆ ಇಲ್ಲಿಲ್ಲ. ಅಲ್ಲಿನ ಜನ ಬಸ್, ರೈಲನ್ನು ಕಣ್ಣಿಂದ ಕಂಡಿಲ್ಲ. ನೂರು ರೂಪಾಯಿ ನೋಟು ಕೆಲವರಲ್ಲಿ ಮಾತ್ರ. ಕೃಷಿ ಮತ್ತು ವೀನುಗಾರಿಕೆಗಳೇ ಇಲ್ಲಿಯವರಿಗೆ ಉದ್ಯೋಗ. ಮನರಂಜನೆಯಂದರೆ ಹತ್ತಿರದ ಪಟ್ಟಣಗಳಲ್ಲಿ ನಡೆಯುವ ಬಯಲಾಟ, ಯಕ್ಷಗಾನ, ಕೋಳಿ ಅಂಕ. ಬಹಳ ಜನರಿಗೆ ಇದು ಕೂಡ ಅಪರಿಚಿತ. ಇಂತಹ ಕುಗ್ರಾಮದಲ್ಲಿ ಅದನ್ನು ಸುಧಾರಿಸಬೇಕು ಅನ್ನುವ ಹಂಬಲ ಇದ್ದವರು ಕೆಲವರು. ಪಟೇಲ್ ನಾರಾಯಣ ಹೆಗ್ಗಡೆ, ತೇಜಪ್ಪ ಸೆಟ್ಟಿ, ಶಾನುಭೋಗ ನರಸಯ್ಯ, ವೆಂಕಟಪ್ಪ ಅಡಿಗರು ಮತ್ತು ಹೊಟೆಲ್ ಮಾಲಿಕ ಕಮ್ತಿಯವರು. 

ಒಂದು ವರ್ಷ ಮಳೆಯಾಗದೆ, ಬೆಳೆ ಬಾರದೆ ಊರಿಗೆ ಊರೇ ಹೊಟ್ಟೆ ಹೊರೆಯಲು ಆಗದೆ ಕ್ಷಾಮದ ಸಂಕಷ್ಟದಲ್ಲಿರುವಾಗ, ತೇಜಪ್ಪ ಶೆಟ್ಟಿ, ಒಂದು ವರ್ಷ ಬೆಳೆಯ ಮೇಲಿನ ಕಂದಾಯ ಸರಕಾರಕ್ಕೆ ಕೊಡಲು ಆಗುವುದಿಲ್ಲವೆಂದ. ಗ್ರಾಮದ ರೈತರೆಲ್ಲ ಒಕ್ಕಾಟ್ಟಾಗಿ ನಿಲ್ಲಲು ಪ್ರೇರಪಿಸಿದ. ಇದರಿಂದ ಸರಕಾರದ ವಿರೋಧ ಕಟ್ಟಿಕೊಂಡರು. ಕಂದಾಯ ವಸೀಲಿಗೆ ಸ್ವತಃ ಕಲೆಕ್ಟರ್ ಕುದರೆಯ ಮೇಲೆ ಅಲ್ಲಿಗೆ ಬಂದರೂ ತೇಜಪ್ಪ ಸೆಟ್ಟಿ ಜಾಣತನದಿಂದ ಪರಿಸ್ಥಿತಿಯನ್ನು ಎದುರಿಸಿದ. ಒಂದು ವರ್ಷವಲ್ಲ, ಮೂರು ವರ್ಷ ಕಂದಾಯ ಮನ್ನಾ ಮಾಡಿಸಿದ ಹಿರಿಮೆ ಆತನದು (ಲಗಾನ್ ಸಿನೇಮಾದಂತೆ). ಅವನ ಮಗ ಸೀನಪ್ಪ ಇದನ್ನೇ ಹೇಳುತ್ತ ತನ್ನ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ.
ಊರಿನಲ್ಲಿ ಹಿರಿಯರಾದ ವೆಂಕಟಪ್ಪ ಅಡಿಗರು ಊರಿನ ಒಳಿತಿಗಾಗಿ ಸದಾ ಕಂಕಣಬದ್ಧರಾಗಿದ್ದರು. ಊರಜನರ ಜಗಳ, ಸಮಸ್ಯೆ, ಪಾಲು ಇವುಗಳಲ್ಲಿ ನಿರ್ಣಾಯಕರಾಗಿ ಹೋಗಿ ಎಲ್ಲರಿಗೂ ನ್ಯಾಯ ಒದಗಿಸುತ್ತಿದ್ದರು‌. ಇವರ ಮಕ್ಕಳಾದ ಜನ್ನಯ್ಯ ಇವರು ಹಾಕಿಕೊಟ್ಟ ದಾರಿಯಲ್ಲಿಯೇ ನಡೆಯುವವ. ಆದರೆ ಚಿಕ್ಕ ಮಗ ನಾರಾಯಣ ಇದಕ್ಕೆ ತದ್ವಿರುದ್ಧ.

ಕಾಲನ ಚಕ್ರ ಉರುಳಿದಂತೆ ತೇಜಪ್ಪ ಸೆಟ್ಟಿ, ವೆಂಕಟಪ್ಪ ಅಡಿಗರು ಕಾಲನ ವಶವಾದರು. ಗ್ರಾಮದ ಅಭಿವೃದ್ಧಿಗೆ ಪ್ರಯತ್ನಿಸುತ್ತಿದ್ದ ಪಟೇಲರು ಏನನ್ನೂ ಸಾಧಿಸದೆ ತೀರಿಹೋದರು. ಅವರಿಗೆ ಗಂಡುಮಕ್ಕಳು ಇಲ್ಲದ್ದರಿಂದ ಪಟೇಲ ಕುರ್ಚಿ ಪಡೆಯಲು ಹಳ್ಳಿಯಲ್ಲಿ ಪೈಪೋಟಿ ನಡೆಯುತ್ತದೆ. ಆದರೆ ಪಟೇಲರ ಶಿಫಾರಸ್ಸಿನಂತೆ ತಹಷೀಲದಾರರು ಜನ್ನಯ್ಯನನ್ನು ಊರಿನ ಮೇಲ್ವಿಚಾರಕನನ್ನಾಗಿ, ಪಟೇಲನನ್ನಾಗಿ ನೇಮಿಸುತ್ತಾರೆ. ಇದನ್ನು ಒಪ್ಪದ ಅವರ ತಮ್ಮ ನಾರಾಯಣ, ಅಣ್ಣ ಜನ್ನಯ್ಯನಿಗೆ ಕೊಡಬಾರದ ಕಷ್ಟ ಕೊಡುತ್ತಾನೆ, ಹೆಜ್ಜೆ ಹೆಜ್ಜೆಗೂ ವಿರೋಧಿಸುತ್ತಾನೆ. ಜನ್ನಯ್ಯನ ಸಜ್ಜನಿಕೆ ನಾರಾಯಣನಲ್ಲಿ ದ್ವೇಷ ಬೆಳೆಸುತ್ತದೆ. ಜನ್ನಯ್ಯ ದಿನೇ ದಿನೇ ಜನ ಮನ್ನಣೆ ಪಡೆದು ಜನಪ್ರಿಯತೆ ಗಳಿಸಿದರೆ ನಾರಾಯಣ ಮನೆಯಲ್ಲಿ ತನ್ನ ಪಾಲು ಬೇಡಿ ಬೇರೆಯಾಗುತ್ತಾನೆ. ದುಶ್ಚಟಗಳಿಗೆ ಬಲಿಯಾಗಿ, ತಂದೆಯಿಂದ ಬಂದ ಹೊಲ ಗದ್ದೆ ಎಲ್ಲ ಸಾಲದಲ್ಲಿ ಮುಳುಗಿಹೋಗುತ್ತದೆ. ದ್ವೇಷದ ದಳ್ಳುರಿಯಲ್ಲಿ ಬೇಯುತ್ತ ಹಾಳಾಗುತ್ತಾನೆ. ಅದೇ ಅಣ್ಣ ಜನ್ನಯ್ಯ ಊರಿನ ಜನರ ಸಹಾಯದಿಂದ ಊರ ಅಭಿವೃದ್ಧಿಗೆ ಶ್ರಮಪಡುತ್ತಾನೆ. ಗ್ರಾಮದ ಜನರ ನಕಾರಾತ್ಮಕ ಚಿಂತನೆಗಳನ್ನು ಬದಲಿಸುತ್ತಾ ಹಿರಿಯರು ಬಯಸಿದಂತೆ ಊರಿಗೆ ಒಂದು ಶಾಲೆ, ಆಸ್ಪತ್ರೆ, ಒಳ್ಳೆಯ ರಸ್ತೆ ಮಾಡಿ ಪೂರೈಸುವ ಕಾರ್ಯದಲ್ಲಿ ಯಶಸ್ವಿಯಾಗುತ್ತಾನೆ. ಕುಂಬಾರಗುಂಡಿ ಗ್ರಾಮಕ್ಕೆ ಹಲವು ಸುವಿಧಾ, ಸೌಕರ್ಯಗಳನ್ನು ತಂದುಕೊಟ್ಟು ಆದರ್ಶ ಪ್ರಾಯನಾಗುತ್ತಾನೆ. ತಮ್ಮನ ಹಲವಾರು ಕುತಂತ್ರಗಳಿಗೆ ಬಲಿಯಾಗಿಯೂ, ಮನೆತನದ ಮರ್ಯಾದೆ ಕಾಪಾಡಲು, ಅವನ ತಪ್ಪುಗಳನ್ನು ಕ್ಷಮಿಸಿ ತಮ್ಮನ ಪರವಾಗಿ ನಿಲ್ಲುತ್ತಾನೆ. ಕೊನೆಗೆ ನಾರಾಯಣ ನಾಚಿಕೆ, ಹತಾಶೆಯಿಂದ ಮನೆಬಿಟ್ಟು ಹೋದಾಗ ಅವನ ಸಂಸಾರವನ್ನು ಕೂಡ ಸಲಹುತ್ತಾನೆ. ಜನ್ನಯ್ಯನ ಒಳ್ಳೆಯ ಉದ್ದೇಶ, ಸಹನೆ ಫಲ ಕೊಡುತ್ತದೆ.
ಇನ್ನು ಕಾದಂಬರಿಯ ಭಾಷೆ ದಕ್ಷಿಣ ಕನ್ನಡದ್ದು. ಅಲ್ಲಿಯ ಕೆಲವು ಅಪರೂಪದ ಶಬ್ದಗಳ ಅರ್ಥವನ್ನು, ಪುಸ್ತಕದ ಕೊನೆಗೆ ಅರ್ಥಕೋಶದಲ್ಲಿ ಕೊಡಲಾಗಿದೆ. ಪ್ರಾದೇಶಿಕ ಭಾಷೆಯ ಸೊಗಡು ಕಥೆಯನ್ನು ಕಣ್ಣ್ಮುಂದೆ ತಂದು ನಿಲ್ಲಿಸುತ್ತದೆ. 
ಬದಲಾವಣೆಯ ಬಿರುಗಾಳಿ ವೇಗದೊಂದಿಗೆ, ಜೀವನ ತರಗಲೆಯಂತೆ ತಿರ್ರನೆ ತಿರುವಿದರೂ, ಪ್ರಕೃತಿಯಲ್ಲಾಗುವ ವ್ಯಾಪಾರದಂತೆ ನಿಧಾನ ಗತಿಯಲ್ಲಿ ಶಾಂತವಾಗುವ ಎಲ್ಲ ಕ್ರಿಯೆಗಳು ಕಾದಂಬರಿಯ ಪ್ರಕ್ರಿಯೆಯಲ್ಲಿ ಘಟನಾವಳಿಗಳಾಗಿ, ಅದಕ್ಕೆ ಸಾಹಿತ್ಯದ ಮೆರಗು ನೀಡಲು ಪ್ರಯತ್ನಿಸುವ ಈ ಕಾದಂಬರಿ ಓದುಗರ ಗಮನ ಸೆಳೆಯುತ್ತದೆ. ದಟ್ಟ ಅನುಭವಗಳು ಕಾದಂಬರಿಯನ್ನು ಉನ್ನತೀಕರಿಸಿವೆ.

(ಬರಹ; ವಿನುತ ಹಂಚಿನಮನಿ)

Related Books