ಪಲ್ಲಟ ಕೆ.ಎನ್ ಮಹಾಬಲ ಮತ್ತು ಬೆಂ.ಶ್ರೀ. ರವೀಂದ್ರ ಅವರ ಸಂಪಾದಿತ ಕೃತಿಯಾಗಿದೆ. 1957ರಲ್ಲಿ ಮೊದಲು ಪ್ರಯೋಗವಾದರೂ, ಇಲ್ಲಿಯವರೆಗೆ, ಬೆರಳಣಿಕೆಯಷ್ಟು ಖೋ ಕಾದಂಬರಿ ಪ್ರಯೋಗ ಕನ್ನಡದಲ್ಲಿ ಆಗಿದೆ. ಸತತ ಪ್ರಯೋಗಶೀಲರಾದ ಸಾಹಿತ್ಯಾಭ್ಯಾಸಿಗಳ ವೇದಿಕೆ 'ಸಮನ್ವಯ ಸಮಿತಿ ಕನ್ನಡವೇ ಸತ್ಯ' ಇತ್ತೀಚಿಗೆ ತನ್ನನ್ನು ತಾನು ಈ ಯತ್ನಕ್ಕೆ ತೊಡಗಿಸಿಕೊಂಡಿತು. ಕಥಾವಸ್ತು ಪ್ರಚಲಿತ ಸಮಸ್ಯೆಯೇ ಆಗಿದೆ. 27 ಬರಹಗಾರರು, 27 ವಾರ, ನೂರಾರು ರೀತಿ ಚಿತ್ತಭಿತ್ತಿ. ಕಥೆಯ ಓಘ ಸರಿಯದಂತ ಸಂಚಾಲಕ ಸಮಿತಿಯ ಎಚ್ಚರ, ಒಂದು ಸುಸಂಬದ್ಧವಾದ, ಆಸಕ್ತಿ ಕೆರಳಿಸುವ ಕಾದಂಬರಿ 'ಪಲ್ಲಟ' (ಕಾಲಯಾನದ ಹೆಜ್ಜೆ ಗುರುತುಗಳು) ರಚನೆಯಾಯಿತು. ತಲೆಮಾರುಗಳ ತೊಡಕು ಎಂದಿನಿಂದಲೂ ಇರುವುದೇ ಆಗಿದೆ. ಇದೀಗ ತೆರೆದುಕೊಂಡಿರುವ ಹೊಸ ಅವಕಾಶಗಳು ಅಂತರವನ್ನು ಹಿಗ್ಗಿಸಿದೆ. ಕುಟುಂಬಗಳು, ಅವುಗಳ ಮೌಲ್ಯವು ಪರಿವರ್ತನೆಯನ್ನು ಹೊಂದುತ್ತಿವೆ. ಆದರೆ ಬಾಂಧವ್ಯ, ಪ್ರೀತಿ, ಪ್ರಣಯ, ಕೆಲಸ ಕಾರ್ಯ, ಸಂಪಾದನೆ, ಸಂಸಾರ ಎಲ್ಲವೂ ಈ ಮಂಥನದಲ್ಲಿ ಅಮೃತವನ್ನೋ, ಹಾಲಾಹಲವನ್ನೋ ಕಕ್ಕುತ್ತಿದೆ. ಇದು ಈ ಕಾಲದ ಸವಾಲು. ಪಲ್ಲಟ ಕಾದಂಬರಿಯು ತನ್ನ ಗಮನವನ್ನು ಹರಿಸುತ್ತದೆ.