ಸಿದ್ದಿಯ ಕೈ ಚಂದ್ರನತ್ತ

Author : ಕೃಷ್ಣಮೂರ್ತಿ ಹನೂರು

Pages 264

₹ 190.00
Year of Publication: 2018
Published by: ಅಭಿರುಚಿ ಪ್ರಕಾಶನ
Address: ನಂ. 386, 14ನೇ ಮುಖ್ಯರಸ್ತೆ, 3 ನೇ ಅಡ್ಡರಸ್ತೆ, ಸರಸ್ವತಿಪುರಂ, ಮೈಸೂರು -9
Phone: 9980560013

Synopsys

ಜಾನಪದ ತಜ್ಞ, ಕಾದಂಬರಿಕಾರರಾದ ಕೃಷ್ಣಮೂರ್ತಿ ಹನೂರು ಅವರು ಬರೆದಿರುವ ಕಾದಂಬರಿ ’ಸಿದ್ದಿಯ ಕೈ ಚಂದ್ರನತ್ತ’.

ಈ ಕಾದಂಬರಿಯ ಪಾತ್ರಗಳು, ಸನ್ನಿವೇಶಗಳು ವಿಭಿನ್ನವಾದ ನೆಲೆಗಳತ್ತ ಸಾಗುತ್ತವೆ. ಪಾತ್ರಗಳೆಲ್ಲವೂ ಕಥನ ರೂಪದಲ್ಲಿ , ಕತೆಗಾರನ ಜೊತೆಯಲ್ಲೇ ವಿಹರಿಸುತ್ತವೆ. ಇಲ್ಲಿನ ಪಾತ್ರಗಳೆಲ್ಲವೂ ಮತ್ತೊಂದರ, ಮತ್ತೊಬ್ಬರ ಕಥೆಯನ್ನು ಹೇಳುವ ವಿಭಿನ್ನ ಕಥಾ ಹಂದರ ಈ ಕೃತಿಯಲ್ಲಿದೆ. ಆಧುನಿಕ ಕತೆಯ ಶಿಲ್ಪ, ಕತೆಯ ವಿನ್ಯಾಸಕ್ಕಿಂತಲೂ ಹೆಚ್ಚಿನದಾಗಿ ಜೀವನ ವಿನ್ಯಾಸದ ಸೂಕ್ಷ್ಮ ಸಂಗತಿಗಳ ಸುತ್ತ ಈ ಕಾದಂಬರಿ ಕೇಂದ್ರೀಕರಿಸುತ್ತದೆ. ಈ ಕಾದಂಬರಿಯ ಮುಖ್ಯಪಾತ್ರಧಾರಿ ಸಿದ್ದುವಿನ ಬದುಕು, ದೊಂಬರಾಟ, ಅವನ ಸಹಜ ಬದುಕು, ಸರಳತೆಯನ್ನು ಜೀವಂತವಾಗಿ ಕಾಪಿಡುತ್ತ ಅವನ ಸುತ್ತ ಈ ಕೃತಿ ಓದುಗರಿಗೆ ತಲುಪುತ್ತದೆ.

 

About the Author

ಕೃಷ್ಣಮೂರ್ತಿ ಹನೂರು

ಜಾನಪದ ತಜ್ಞ, ಕತೆಗಾರ, ಕಾದಂಬರಿಕಾರ ಕೃಷ್ಣಮೂರ್ತಿ ಹನೂರು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಮಾಡಿ ಸಂದರ್ಶಕ ಪ್ರಾಧ್ಯಾಪಕರಾಗಿ. 40 ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವರ ಆಜ್ಞಾತನೊಬ್ಬನ ಆತ್ಮ ಚರಿತ್ರೆ ಕಾದಂಬರಿ ಓದುಗರ ಮೇರೆಯಿಲ್ಲದ ಮೆಚ್ಚುಗೆ ಪಡೆದಿದೆ. ಅದೀಗ ಇಂಗ್ಲೀಷ್ ಗೆ ಅನುವಾದಗೊಂಡು ಪ್ರಕಟವಾಗಿದೆ. ಕೇರಿಗೆ ಬಂದ ಹೋರಿ, ಕತ್ತಲಲ್ಲಿ ಕಂಡ ಮುಖ ಮತ್ತು ಕಳೆದ ಮಂಗಳವಾರ ಮುಸ್ಸಂಜೆ ಅವರ ಕಥಾಸಂಕಲನಗಳು. ಬಾರೋ ಗೀಜಗನೆ, ನಿಕ್ಷೇಪ ಅವರ ಕಾದಂಬರಿಗಳು. ಜಾನಪದಕ್ಕೆ ಸಂಬಂಧಿಸಿದಂತೆ ಹಲವಾರು ಕೃತಿಗಳನ್ನು ಸಂಪಾದಿಸಿದ್ದಾರೆ. ಅವರು ಸಂಪಾದಿಸಿದ ವಿಶ್ವಕೋಶ ಎನ್ ಸೈಕ್ಲೋಪೀಡಿಯಾ ಆಫ್ ಫೋಕ್ ಕಲ್ಚರ್ ...

READ MORE

Reviews

ಕಥೆಗೆ ಕಥೆ ಸೇರಿ ಸೃಷ್ಟಿಯಾಗುವ ಮಹಾ ಕಥೆ

ಕೃಷ್ಣಮೂರ್ತಿ ಹನೂರರ ಈ ಕಾದಂಬರಿ ಭಿನ್ನ ನೆಲೆಗಳ ಓದನ್ನು ಬಯಸುತ್ತದೆ. ಇಂತಹ ನೆಲೆಗಳ ಹುಡುಕಾಟವೊಂದನ್ನು ಈ ಬರಹದಲ್ಲಿ ಪ್ರಯತ್ನಿಸಲಾಗಿದೆ.  ಕೃತಿಗೆ  ಒಂದು ನಿರ್ದಿಷ್ಟ ಪ್ರಕಾರದ ಹೆಸರನ್ನು ಸೂಚಿಸಲೇಬೇಕೆಂಬ ಒತ್ತಾಯದ ದಿನಗಳಲ್ಲಿ ನಾವೆಲ್ಲ ಬದುಕುತ್ತಿರುವುದರಿಂದ ಲೇಖಕರು ಕೂಡ ಇದನ್ನು ’ಕಾದಂಬರಿ’ಯೆಂದು ತಾಂತ್ರಿಕವಾಗಿ ಸೂಚಿಸಿದ್ದರೂ ಪ್ರಾರಂಭದ ಪುಟಗಳಲ್ಲೇ ಕಥನ ಪ್ರಸಂಗಗಳ ಗುಚ್ಛಕಥಾನಕ, ಕಥಾನಕಗಳ ಹಿಂದು-ಮುಂದು ಇಂತಹ ಪದಗಳನ್ನು ಬಳಸಿ ಕೃತಿಯ ಭಿನ್ನ ಆಕೃತಿಯ ಬಗ್ಗೆ ಸೂಚನೆಗಳನ್ನು ಕೊಡುತ್ತಾರೆ.  ಲಿಖಿತ ಮತ್ತು ಮುದ್ರಿತ ಪಠ್ಯ ಆ ಕಾಲದ ಅನಿವಾರ್ಯವಾದರೂ ಇಂತಹ ಪಠ್ಯಗಳಲ್ಲೂ ನಾವು ಮೌಖಿಕ ಸಂಸ್ಕೃತಿಯ ಪರಿಕರ ಮತ್ತು ಲಯಗಳನ್ನು ಬಳಸಿಕೊಳ್ಳುತ್ತಿದ್ದೇವೆ. ಹಾಗಾದಾಗ ಬರಹಗಾರ ಮತ್ತು ಓದುಗನ ಮುಂದೆ ಇರುವ ಆಯ್ಕೆಗಳ್ಯಾವುವು ಎಂಬ ಪ್ರಶ್ನೆಯನ್ನು ಕೂಡ ಈ ಕೃತಿ ಮುಂದಿಡುತ್ತದೆ.  ನಮ್ಮಲ್ಲಿ ಸ್ವತಂತ್ರ ಕಥನ ಮೀಮಾಂಸೆ ಇನ್ನೂ ವಿಕಾಸಗೊಂಡಿಲ್ಲ. ಕತೆ ಕಾದಂಬರಿಗಳ ಬಗ್ಗೆ ಬರೆಯುವ ಒಣ ವಿಮರ್ಶಕರೆಲ್ಲ ಇಲ್ಲಿಯೂ ಕಾವ್ಯಪ್ರಕಾರದ ಪರಿಕರಗಳನ್ನೇ ಮಾನದಂಡವಾಗಿಟ್ಟುಕೊಂಡಿದ್ದಾರೆ. ಅಥವಾ ಸಮಾಜ ವಿಜ್ಞಾನ, ಚರಿತ್ರೆಗಳು ಈಗಾಗಲೇ ಕಂಡುಕೊಂಡಿರುವ ಸತ್ಯಗಳ,ತೀರ್ಮಾನಗಳ ಹಿನ್ನೆಲೆಯಲ್ಲಿ ಆಶಯ ಪ್ರಧಾನ ವಿಮರ್ಶೆ ಬರೆಯುತ್ತಾರೆ. ಇದೆಲ್ಲವನ್ನೂ ಬದಿಗೆ ಸರಿಸಿ ನೀವು ಹನೂರರನ್ನು ಓದುವುದಾದರೆ ಕೃತಿಯ ಕಾರಣವಾಗಿ ಜೊತೆ ಅನುಸಂಧಾನಕ್ಕೆ ಬೇಕಾದ ನೆಲೆಗಳು ಸಿಗಬಹುದು. ದಯವಿಟ್ಟು ಪ್ರಯತ್ನಿಸಿ.

ಬಹುತ್ವದ ಬಗ್ಗೆ ನಾವು ಮಾತನಾಡುವಾಗಲೆಲ್ಲ ಭಿನ್ನ, ವೈವಿಧ್ಯ ವೈಚಾರಿಕ ಮಾರ್ಗಗಳ ಬಗ್ಗೆ ಮಾತನಾಡುತ್ತಿರುತ್ತೇವೆ. ಈ ರೀತಿಯ ಮಾತುಗಳು ಸಾಹಿತ್ಯ ಸೃಷ್ಟಿ ಮತ್ತು ಓದಿನಲ್ಲಿ ಮೂರು ಕಾಸಿನ ಪ್ರಯೋಜನಕ್ಕೆ ಬರುವುದಿಲ್ಲ. ಒಂದೇ ಕಾಲದಲ್ಲಿ ಜನ ಬದುಕನ್ನು ಹಲವು ವಿನ್ಯಾಸಗಳಲ್ಲಿ ನಡೆಸುತ್ತಿರುತ್ತಾರೆ. ಭಾಷೆ,ಸಾಮಾಜಿಕ ಹಿನ್ನೆಲೆ, ಪ್ರಾದೇಶಿಕ ಕೌಟುಂಬಿಕ ಅಂಶಗಳು, ತಲೆಮಾರು, ವ್ಯಕ್ತಿಯ ಸ್ವಭಾವ ಇವೆಲ್ಲವಗಳನ್ನೂ ಸೇರಿಸಿಕೊಂಡೇ ಈ ವಿನ್ಯಾಸಗಳು ನಿರ್ಮಾಣವಾಗುತ್ತಿರುತ್ತವೆ. ಇಂತಹ ಎಲ್ಲಾ ವಿನ್ಯಾಸಗಳು ಸದ್ಯದ ವೈಚಾರಿಕ ಅಳತೆಗೆ ಸಿಗದೇ ಕೂಡ ಹೋಗಬಹುದು. ಬರಹಗಾರನಿಗೆ ಇರುವ ಆಯ್ಕೆಯೆಂದರೆ, ಹೀಗಾಯಿತಲ್ಲ ಎಂದು ಕೊರಗದೆ, ತನಗೆ ಕಾಣುತ್ತಿರುವ ಎಲ್ಲ ವಿನ್ಯಾಸಗಳನ್ನು ನಿಷ್ಪಕ್ಷಪಾತವಾಗಿ ತೋರಿಸುತ್ತಾ ಹೋಗುವುದು. ಹನೂರರ

ಪ್ರಸಂಗಕ್ಕಾ ಆಯ್ಕೆ ಈ ರೀತಿಯದು. ಇದು ಯಾವ ಪ್ರಾದೇಶಿಕ ಹಿನ್ನೆಲೆಯದು, ಯಾವ ತಲೆಮಾರಿನದು, ಯಾವ ಭಾಷಿಕರದು, ಯಾವ ವರ್ಗಕ್ಕೆ ಸೇರಿದ್ದು ಎಂದು ನೀವು ಪ್ರಶ್ನಿಸಿಕೊಂಡರೆ, ಸುಲಭವಾದ ಉತ್ತರಗಳು ಇಲ್ಲಿ ಸಿಗಬಹುದು. ಆದರೆ ಕೃತಿಯಿಂದ ನೀವು ದೂರವಾಗುತ್ತೀರಿ.

ಇಲ್ಲಿ ಪಾತ್ರಗಳು, ಕತೆಗಳು ವಿಕಾಸವಾಗುವ ಕ್ರಮವನ್ನು ಗಮನಿಸಿ. ಮತ್ತು (ನಿಮ್ಮ ಕನ್ನಡದವರಿಗೆ ಕ್ರಮಬದ್ಧ ಕತೆ ಹೇಳಲು ಬರುವುದಿಲ್ಲ - ಪುಟ ೪೬) ಪಾತ್ರಗಳು ಕಥನದಲ್ಲಿ ಬರುತ್ತವೆ ಅಥವಾ ಕಥನಕಾರ ಕರೆದುಕೊಂಡು ಬರುತ್ತಾನೆ.

ತಮ್ಮ ಪಾತ್ರಗಳನ್ನು ಅವು ನಿರ್ವಹಿಸಿ ಹೋಗಬಹುದಲ್ಲ. ಇಲ್ಲಿ ಹಾಗಾಗುವುದಿಲ್ಲ. ಇಲ್ಲ ನಾನು ಮತ್ತು ನಾನೇ ಇನ್ನೊಂದು ಪಾತ್ರವನ್ನು, ಇನ್ನೊಂದಿಷ್ಟು ಕಥನಗಳನ್ನು ಕರೆದುಕೊಂಡು ಬರುತ್ತೇನೆ ಎಂದು ಪಟ್ಟುಹಿಡಿಯುತ್ತವೆ. ಕರೆದುಕೊಂಡೂ ಬಂದುಬಿಡುತ್ತವೆ. ಚಿತ್ರಾ ಕರೆದುಕೊಂಡು ಬರುವ ಕಣ್ಣಾಸೆಲ್ವಿ ಮತ್ತು ಚಿನ್ನಪಳನಿಯ ಕಥೆ, ಪಾರಸಮಣಿ ಕರೆದುಕೊಂಡು ಬರುವ ಒರಿಸ್ಸಾದ, ಈಶಾನ್ಯ ಭಾರತದ, ಮುಂಬೈನ ಜೀವನಗಾಥೆ, ಕಥನಕಾರ ಹೇಳುತ್ತಿರುವ ಮೂಲ ಕತನಕ್ಕಿಂತಲೂ ಅಥವಾ ಈ ಪಾತ್ರಗಳನ್ನು, ಕತೆಗಳನ್ನು ಕರೆದುಕೊಂಡು ಬಂದವರ ಕಥೆಗಳಿಗಿಂತಲೂ ಉಜ್ವಲವಾಗಿವೆ, ಸಂಕೀರ್ಣವಾಗಿವೆ.

ಪಾತ್ರವಾಗಿ ಬಂದವರು ಕತೆ ಹೇಳುವುದಲ್ಲದೆ, ಇನ್ನೊಬ್ಬರನ್ನು ಕರೆದುಕೊಂಡು ಬಂದು ಕತೆ ಹೇಳಿಸಿ, ಕತೆಯನ್ನು ದಾಟಿಸುವವರೂ ಆಗುತ್ತಾರೆ. ಕತೆಯ ’ಮಾತಿ’ನಲ್ಲಿ ಬೆಳೆಯುವ ಮೌಖಿಕ ಸಂಪ್ರದಾಯದ ಚಹರೆ ಇದು. ಹೀಗೆ ಕತೆ ಹೇಳುತ್ತಲೇ, ಕೇಳಿಸಿಕೊಳ್ಳುತ್ತಲೇ ಕಥನವು ವಿಕಾಸವಾಗುವ ಕ್ರಮದಲ್ಲಿ ಎಲ್ಲ ಕತೆಗಳೂ, ಪ್ರಸಂಗಗಳೂ, ಮೂಲ ಕಥೆಗೋ, ಕೇಂದ್ರ ಕಥೆಗೋ ಸೇರಿರಲೇಬೇಕೆ ಎಂಬ ಪ್ರಶ್ನೆಯೂ ಇದೆ. ಆಧುನಿಕ ಕತೆಯ ಶಿಲ್ಪ ಮತ್ತು ಕಟ್ಟಡ ಇದನ್ನು ಒಪ್ಪುವುದಿಲ್ಲ. ಆದರೆ ಮೌಖಿಕ ಸಂಪ್ರದಾಯದ ಕಥನ ಕಲೆ, ಕತೆಯ ವಿನ್ಯಾಸಕ್ಕಿಂತಲೂ ಹೆಚ್ಚಾಗಿ ಜೀವನ ವಿನ್ಯಾಸಕ್ಕೆ ಹತ್ತಿರವಾಗಿರಲು ಇಷ್ಟಪಡುತ್ತದೆ. ಏಕೆಂದರೆ, ಸಮುದಾಯದ ಕಥನದಲ್ಲಾಗಲಿ, ವ್ಯಕ್ತಿಯ ಕಥನದಲ್ಲಾಗಲೀ ಕೇಳಿದ, ಕಂಡ ಎಲ್ಲ ಪ್ರಸಂಗಗಳೂ ನೆನಪಿನಲ್ಲೂ, ಆಕೃತಿಯಲ್ಲೂ ಉಳಿಯುವುದಿಲ್ಲ. ಆದರೆ ಅಂತರ್ಗತವಾಗಿದ್ದುಕೊಂಡು ಪ್ರಧಾನ ಧಾರೆಯ ಮೇಲೆ ಪ್ರಭಾವ ಬೀರುತ್ತದೆ. ಉದಾಹರಣೆಗೆ ಇಲ್ಲಿಯ ದಲಿತ ಬಂಡುಕೋರ ಮುನಿಬೈರಪ್ಪನಿಗೆ ತನ್ನ ಹೋರಾಟ, ವರ್ಗಪ್ರಜ್ಞೆ, ವೈಚಾರಿಕತೆಗಳಿಗಿಂತಲೂ ಆಳವಾದ ಪಾರಸಮಣಿಯ ವ್ಯಕ್ತಿತ್ವ ಮತ್ತು ಕಥನಗಳು ಎದುರಾಗಿ, ಆತನನ್ನೇ ವಿನೀತನಾಗಿಸುತ್ತವೆ. ಮತ್ತು ಆತ ಅದನ್ನು ಒಪ್ಪಿಕೊಳ್ಳುವಷ್ಟು ಪ್ರಾಂಜಲನಾಗಿದ್ದಾನೆ. ಕಥನ ಮುಂದುವರಿದಂತೆ ಚಿತ್ರಾಳ ಬದುಕಿನಲ್ಲಿ ಕಣ್ವಾಸೆಲ್ವಿ ಮತ್ತು ಚಿನ್ನಪಳನಿ ಹಿಂದೆ ಸರಿಯುತ್ತಾರೆ (ಕಥನದಲ್ಲಿ). ಆದರೆ ಚಿತ್ರಾಳ ಪ್ರಜ್ಞೆ ಮತ್ತು ಬದುಕಿನಲ್ಲಿ ಅಂತರ್ಗತವಾಗಿ ಉಳಿದಿರುತ್ತಾರೆ.

ಕೃತಯಲ್ಲಿ ಓದುಗ ಸ್ನೇಹಿಯಾದ, ಸಮಕಾಲೀನವಾಗಿ ಪ್ರಸ್ತುತವಾದ ಒಂದು ಕತೆಯೂ ಇದೆ. ಕರ್ನಾಟಕದ ಗಡಿ ಪ್ರದೇಶಗಳಲ್ಲಿರುವ ದೊಡ್ಡ ಹಳ್ಳಿಯೊಂದರ ಆಂಗ್ಲ ಶಾಲೆಯ ಮಕ್ಕಳು ಶಾಲಾ ಉತ್ಸವಕ್ಕೋಸ್ಕರ ಪುರಾಣ-ಇತಿಹಾಸ ಪುರುಷರ ವೇಷವನ್ನು ಹಾಕಿಕೊಂಡು ಇಂಗ್ಲಿಷಿನಲ್ಲಿ ಮಾತನಾಡುತ್ತಾ ಸ್ಪರ್ಧೆಯಲ್ಲಿ ಭಾಗವಹಿಸಬೇಕಾಗುತ್ತದೆ. ಮಕ್ಕಳು ವೇಷ ಹಾಕಿಕೊಳ್ಳುವ ಯಾವ ಮೂಲಪಾತ್ರಗಳ ಅಂತಃಸತ್ವವೂ ಪೋಷಕರಿಗೆ ಬೇಕಿಲ್ಲ. ಆದರೂ ವೇಷ ಹಾಕುವ, ಬಹುಮಾನ ಗೆಲ್ಲುವ ತಹತಹ. ಮಕ್ಕಳಿಗೆ ಇದರಲ್ಲಿ ನಂಬಿಕೆಯೂ ಇಲ್ಲ, ಆಸಕ್ತಿಯೂ ಇಲ್ಲ. ’ವೇಶಾರೋಪಣ’(ಪು. ೨೨೧) ಎಂದು ಇದನ್ನು ನಾಮಕರಣ ಮಾಡಿ ಹನೂರರು ಒಟ್ಟು ಪ್ರಸಂಗಗಳಲ್ಲೇ ಇರುವ ಅಸಾಂಗತ್ಯವನ್ನು ಸೂಚಿಸುತ್ತಾರೆ. ಮಗನಿಗೆ ಅಂಬೇಡ್ಕರ್‍ ವೇಷ ಹಾಕಿಸುವ ಮುನಿಬೈರಪ್ಪ, ತಂದೆ-ತಾಯಿಗಳ ಅಸಡ್ಡೆಯೇ ಕಾರಣವಾಗಿ ಸ್ಫರ್ಧೆಯಿಂದ ಒಂದು ರೀತಿ ಹೊರಗುಳಿದು, ಇನ್ನೊಂದು ರೀತಿಯಲ್ಲಿ ಒಟ್ಟು ಕಥನಕ್ಕೆ ಜಿಗಿತ ಕೊಡುವ ಸಿದ್ದರಾಜು ಮಾತ್ರ ಬಹುಮಾನದ ಆಕಾಂಕ್ಷಿಗಳಲ್ಲ. ’ವೇಶಾರೋಪಣ’ದ ಕಥನವನ್ನು ಹೇಳುತ್ತಾ ಒಂದಕ್ಕೊಂದು ಪೋಷಕವಾಗಿ, ಪ್ರೇರಕವಾಗಿ ಬೆಳೆಯುತ್ತಲೇ ಹೋಗುವ ಪ್ರಸಂಗಗಳ ಮೂಲಕ ತೀರಾ ಸಮಕಾಲೀನವಾದ ಬದುಕನ್ನು ಹನೂರರು ವಿನ್ಯಾಸಗೊಳಿಸುತ್ತಾರೆ. ಪ್ರಸಂಗಾವಧಾನದ ಬೀಸಿನಲ್ಲಿ ಕಥನ ದೇಶ-ಕಾಲ, ಬಣ್ಣ , ಹಾಡು ಹೀಗೆ ಎಲ್ಲವನ್ನೂ ಒಳಗೊಳ್ಳಲಾಗುತ್ತದೆ.

ಕಥನದ ಕೊನೆಯಲ್ಲಿ ಬರುವ ಸಿದ್ದುವಿನ ದೊಂಬರಾಟ (Magic)ವೇ ’ವೇಷಾರೋಪಣ’ಕ್ಕಿಂತಲೂ ಸಹಜವಾಗಿಯೂ, ಜೀವಂತವಾಗಿಯೂ ಕಾಣುತ್ತದೆ. ಓದುಗರಿಗೂ ಇಷ್ಟವಾಗುತ್ತದೆ. ಕಥನವು ಧ್ವನಿಸಬೇಕಾದ್ದನ್ನೆಲ್ಲ ಪ್ರಸಂಗಗಳೇ ಧ್ವನಿಸುವುದರಿಂದ, ಸಿದ್ದುವಿನ Magic ಒಂದು ರೀತಿಯ Wish Fulfilment (ಸುಪ್ತ ಸಂಕಲ್ಪದ ಈಡೇರಿಕೆ) ಯಂತೆಯೂ ಕಾಣುತ್ತದೆ. ಸ್ವಂತ ಕಥನಕ್ಕಾಗಲೀ, ಪ್ರಸಂಗಕ್ಕಾಗಲೀ ಸುಪ್ತ ಸಂಕಲ್ಪದ ಈಡೇರಿಕೆಯ ಹಂಬಲವಿರುವುದಿಲ್ಲ. ಕಥನವನ್ನು ಬರೆಯುವವರಿಗೆ, ಪುರಾಣಿಕರಿಗೆ, ಇದನ್ನು ಕೇಳಿಸಿಕೊಳ್ಳುವವರಿಗೆ ಇಂತಹ ಹಂಬಲವೊಂದು ಇರುತ್ತದೆ. ನಮ್ಮ ವ್ರತದ, ನೋಂಪಿಯ ಕತೆಗಳಲ್ಲಾಗುವಂತೆ. ಇದರಿಂದ ಓದುಗನಿಗೆ ಒಂದು ರೀತಿಯ ’ಬಿಡುಗಡೆ’ ಸಿಗುವುದೂ ನಿಜ. ವಿಮರ್ಶೆ ಬರೆಯುವುದನ್ನೇ ವೃತ್ತಿಮಾಡಿಕೊಂಡಿರುವವರಿಗೂ ಒಂದು ಸೂಕ್ತವಾದ Ending ಮತ್ತು ವಿನ್ಯಾಸ ಸುಲಭವಾಗಿ ಗೋಚರವಾಗುತ್ತದೆ. ಆದರೆ ಕಥಾ ಪ್ರಸಂಗಗಳ ಮೊತ್ತವೇ ಸೂಚಿಸುವ ಧ್ವನಿ ಮತ್ತು ವಿಷಾದವು ನಮಗೇ ಗೊತ್ತಿಲ್ಲದೇ ನಾವು ಬಯಸುವ ಸುಪ್ತ ಸಂಕಲ್ಪದ ಈಡೇರಿಕೆಯಲ್ಲಿ ತೆಳುವಾಗಿಬಿಡಬಹುದೇ? ’ಕುಸುಮಬಾಲೆ’ಯನ್ನು ಓದುವಾಗಲೂ ಈ ಪ್ರಶ್ನೆ ಎದುರಾದರೂ, ಕೃತಿ ಸೂಚಿಸುವ ಸುಪ್ತ ಸಂಕಲ್ಪದ ಈಡೇರಿಕೆಯಲ್ಲಿ ಗಣ್ಯ ವಿಮರ್ಶಕರು ಸ್ವಯಂ ಇಚ್ಛೆಯಿಂದಲೇ ಭಾಗವಹಿಸಿದಂತೆ ಕಾಣುತ್ತದೆ.

-ಕೆ. ಸತ್ಯನಾರಾಯಣ

ಕೃಪೆ : ಹೊಸ ಮನುಷ್ಯ ( ಫೆಬ್ರವರಿ 2019)

Related Books