ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಾದಂಬರಿ ಇದಾಗಿದ್ದು ವೈಚಾರಿಕತೆ ಮತ್ತು ಮಾನವೀಯತೆಯ ಸಮನ್ವಯವನ್ನು ಕಥಾನಾಯಕಿ ಮೂಕಜ್ಜಿ ಸಾರುತ್ತಾಳೆ. ಭಾರತೀಯ ಧರ್ಮಶಾಸ್ತ್ರದಲ್ಲಿ ಪ್ರಾಚೀನ ಕಾಲದ ಋಷಿಮುನಿಗಳು ಅಂತರ್ದೃಷ್ಟಿಯುಳ್ಳವರಾಗಿದ್ದರು ಎಂಬ ವಿಷಯವನ್ನು ದೇವರು, ಧರ್ಮದಲ್ಲಿ ವಿಶ್ವಾಸ ಇರುವ ಎಲ್ಲರೂ ಇಂದಿಗೂ ನಂಬುತ್ತಾರೆ. ಅದನ್ನೇ ಇಂದಿನ ವಿಜ್ಞಾನ 'ಅತೀಂದ್ರಿಯ ಜ್ಞಾನ' ಎಂಬ ಹೆಸರಿನಿಂದ ಕರೆದು, ಅದರ ಅಸ್ತಿತ್ವದ ಕುರಿತು ಪುರಾವೆಗಳನ್ನು ಕಲೆಹಾಕಲು ಪ್ರಯತ್ನಿಸಿದೆ. ಹಿಂದೂ ಧರ್ಮದ ಬೆಳವಣಿಗೆಯ ಇತಿಹಾಸವನ್ನು ಬಿಚ್ಚಿತೋರಿಸಿ, ವೈದಿಕ ಯುಗದಿಂದ ತೊಡಗಿ, ಅದರ ನಂತರ ಹಿಂದೂ ಧರ್ಮದಲ್ಲಿ ನಡೆದ ಹಲವಾರು ಪರಿವರ್ತನೆಗಳ ದೆಸೆಯಿಂದ ಹುಟ್ಟಿಕೊಂಡ ವಿವಿಧ ಮತ, ಧರ್ಮ, ಪಂಥ, ದೇವರುಗಳ ಪುರಾಣಗಳನ್ನೆಲ್ಲಾ ಕಾದಂಬರಿಕಾರರು ಮೂಕಜ್ಜಿಯ ಅತೀಂದ್ರಿಯ ಜ್ಞಾನದ ಮೂಲಕ ಬಿತ್ತರಿಸುತ್ತಾರೆ. ಮನುಷ್ಯ ತನ್ನ ಕಲ್ಪನೆಗಳಿಂದ ಸೃಷ್ಟಿಸಿದ ದೇವರು ಕಾಲ ಕಾಲಕ್ಕೆ ಬದಲಾದ ಇತಿಹಾಸ ಈ ಕಾದಂಬರಿಯಲ್ಲಿ ಬಿಚ್ಚಿಕೊಳ್ಳುತ್ತದೆ. ಒಂದು ಕಾಲದಲ್ಲಿ ವಿಶೇಷ ಪೂಜೆ, ಆರಾಧನೆಗಳಿಗೆ ಒಳಗಾಗಿದ್ದ ದೇವರುಗಳು ಕಾಲಕ್ರಮೇಣ ಭಕ್ತರ ಮರವೆಯ ಉಗ್ರಾಣದ ಮೂಲೆ ಹಿಡಿದು, ಅವರ ಸ್ಥಾನದಲ್ಲಿ ಹೊಸ ಹೊಸ ದೇವರುಗಳು ಸೃಷ್ಟಿಗೊಂಡ ಕತೆಯನ್ನು ಮೂಕಜ್ಜಿ ಯಾವ ಮುಲಾಜೂ ಇಲ್ಲದೆ ಬಯಲಿಗೆಳೆಯುತ್ತಾಳೆ. ನಾಲೈದು ಸಾವಿರ ವರ್ಷಗಳಿಂದ ನಡೆದು ಬಂದ ಹಿಂದೂ ಧರ್ಮ, ಸಂಸ್ಕೃತಿ ಹಾಗೂ ಅದರಿಂದಾಗಿ ಹುಟ್ಟಿಕೊಂಡ ಸಮಸ್ಯೆಗಳ ಮಂಥನವನ್ನು ಮೂಕಜ್ಜಿ ತನ್ನ ಕನಸುಗಳೆಂಬ ಅತೀಂದ್ರಿಯ ಜ್ಞಾನದ ಮೂಲಕ ತೆರೆದಿಡುತ್ತಾಳೆ.
ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...
READ MOREಜ್ಞಾನಪೀಠ