ಇಳಿಜಾರು

Author : ಸಾರಾ ಅಬೂಬಕ್ಕರ್

Pages 164

₹ 125.00
Published by: ಚಂದ್ರಗಿರಿ ಪ್ರಕಾಶನ

Synopsys

ಹೆಣ್ಣಿನ ಜೀವನ ಒಂದು ರೀತಿ ಜೀವನ ಪರ್ಯಂತ ಹೋರಾಟವೇ ಸೈ, ಆದರೆ ಆ ಹೋರಾಟದ ಜೀವನದಲ್ಲಿ ಅವಳೆಷ್ಟೇ ಹೊಂದಿಕೊಂಡರೂ ಅವಳಿಗೆ ಅವಮಾನಗಳಂತೂ ತಪ್ಪಿಲ್ಲಾ. ಸಂಯಮದ ಪಾಠ ಬರೀ ಹೆಣ್ಣಿಗೇಕೆ? ಪುರುಷನಿಗೇಕಿಲ್ಲಾ? ಎಂಬುದೇ ಇಂದಿಗೂ ಉತ್ತರ ಸಿಗದ ಕಾಡುವ ಪ್ರಶ್ನೆ ಎನ್ನಬಹುದು.ಲೇಖಕಿ ಸಾರಾ ಅವರು ತಮ್ಮ ಮುಸ್ಲಿಂ ಸಮುದಾಯದ ನೀತಿ ನಿಯಮಗಳು, ಕಟ್ಟುಪಾಡುಗಳು, ಸಂಕುಚಿತ ಮನೋಭಾವಗಳು, ಪದ್ದತಿ, ಆಚರಣೆಗಳು ತುಂಬಾ ಸೂಕ್ಷ್ಮವಾಗಿ ತಿಳಿಸುತ್ತಾ ಪಾತ್ರಗಳ ನಿರ್ವಹಣೆಯ ಮೂಲಕ ಹೆಣೆದ ಕಥೆಯೇ ಇಳಿಜಾರು.ಗಂಡು ಹೆಣ್ಣಿನ ಮೇಲೆ ಅನಾದಿಕಾಲದಿಂದಲೂ ದಬ್ಬಾಳಿಕೆ ಮಾಡುತ್ತಲೇ ಬಂದಿದ್ದಾನೆ, ಈ ದಬ್ಬಾಳಿಕೆ ಯಾವುದೋ ಧರ್ಮ, ಮತ, ಜಾತಿ ಪಂಗಡದಲ್ಲಿ ಮಾತ್ರವಲ್ಲಾ ಎಲ್ಲಾ ಕಡೆ ಇದೆ.ಕೆಲವೆಡೆ ಬೆಳಕಿಗೆ ಬರುತ್ತೆ ಮತ್ತೆ ಕೆಲವೆಡೆ ಬರೋಲ್ಲ.(ಹಾಗೆ ಹೆಣ್ಣನ್ನು ಗೌರವ ಭಾವದಿಂದ ನೋಡುವ ಮಂದಿಯೂ ಎಲ್ಲಾ ಸಮಾಜದಲ್ಲೂ ಇದ್ದಾರೆ) ಎರಡು ಧರ್ಮದವರಲ್ಲಿ ಎರ್ಪಟ್ಟ ಅನೈತಿಕ ಸಂಬಂಧದ ವಿವರ ಮತ್ತದರ ಪರಿಣಾಮ, ಮುಸ್ಲಿಂ ಹೆಣ್ಣಿನ ಅಂತರಾಳದ ತುಮುಲ ಮತ್ತು ಸಂಘರ್ಷದ ಬದುಕಿನ ಪುಟಗಳನ್ನು ತೆರೆದಿಟ್ಟ ಕಥಾವಸ್ತುವಿರುವ ಕಾದಂಬರಿಯೇ ಅಬೂಬಕ್ಕರ್ ಅವರ “ಇಳಿಜಾರು”

About the Author

ಸಾರಾ ಅಬೂಬಕ್ಕರ್
(30 June 1936 - 10 January 2023)

ಕನ್ನಡದ ಪ್ರಖ್ಯಾತ ಲೇಖಕಿ ಸಾರಾ ಅಬೂಬಕ್ಕರ್ ಅವರು 1936ರ ಜೂನ್ 30ರಂದು  ಕಾಸರಗೋಡಿನ ಚಂದ್ರಗಿರಿ ತೀರದ  ಗ್ರಾಮವೊಂದರಲ್ಲಿ ಜನಿಸಿದರು. ತಂದೆ ನ್ಯಾಯವಾದಿಗಳಾಗಿದ್ದ ಪಿ. ಅಹಮದ್ ಅವರು ಮತ್ತು  ತಾಯಿ ಚೈನಾಬಿ ಅವರು. ಸಾರಾ ಅವರ ಪ್ರಾಥಮಿಕ ವಿದ್ಯಾಭ್ಯಾಸ ಅವರ ಹುಟ್ಟಿದೂರಿನಲ್ಲೇ ನೆರವೇರಿತು.  ಮುಂದೆ ಅವರು ಹೈಸ್ಕೂಲುವರೆಗೆ ಕಲಿತದ್ದು ಕಾಸರಗೋಡಿನಲ್ಲಿ. ಎಂಜನಿಯರ್ ಆಗಿದ್ದ ಅಬೂಬಕ್ಕರ್‌ ಅವರೊಡನೆ ಸಾರಾ ಅವರ ವಿವಾಹ ಏರ್ಪಟ್ಟು ವಿದ್ಯಾಭ್ಯಾಸಕ್ಕೆ ವಿದಾಯ ಹೇಳುವಂತಾಯಿತು. ಆದರೆ ಓದಿನಲ್ಲಿ ನಿರಂತರ ಆಸಕ್ತರಾಗಿದ್ದ ಸಾರಾ ಅವರು ಶಿವರಾಮ  ಕಾರಂತರು, ಇನಾಂದಾರ್, ಭೈರಪ್ಪ, ಅನಂತಮೂರ್ತಿ ಇವರೆಲ್ಲರ ಬರವಣಿಗೆಗೆ ಮಾರು ಹೋಗಿ ಸದಾ ...

READ MORE

Reviews

(ಹೊಸತು, ಮೇ 2012, ಪುಸ್ತಕದ ಪರಿಚಯ)

ಇದೊಂದು ಕೌಟುಂಬಿಕ ಚೌಕಟ್ಟಿನೊಳಗೆ ಚಿತ್ರಿಸಲ್ಪಟ್ಟ ದೈನಂದಿನ ಕಷ್ಟ-ಕೋಟಲೆಗಳನ್ನು ತೆರೆದಿಡುವ ಕಾದಂಬರಿ. ಮೊದಲು ಹೂವಿನಂತಿದ್ದು ಮುಂದೆ ಹಾವಿನಂತೆ ಬದಲಾಗಿ ಒಂದು ಸಂಸಾರದ ನೆಮ್ಮದಿ ಕೆಡಿಸಿದ ಕಥನ. ಈ ದುರಂತಕ್ಕೆ ಮನೆಯವರಷ್ಟೇ ಅಲ್ಲದೆ ಇತರ ಜಾತಿ-ಧರ್ಮಗಳ ಜನರೂ ತಲೆತೂರಿಸಿ ತಮ್ಮ ಮಿತಿಯನ್ನು మిరి ಕೆಡುಕನ್ನುಂಟುಮಾಡುತ್ತಾರೆ. ನಮ್ಮ ಸಂವಿಧಾನದಲ್ಲಿ ಎಲ್ಲ ಧರ್ಮಿಯರೂ ತಮ್ಮಿಚ್ಛೆಯಂತೆ ಬದುಕುವ ಅವಕಾಶ ನೀಡಿದ್ದರೂ ಯಾಕೋ ಸಮಾಜ ಅದನ್ನು ಮನಃಪೂರ್ವಕವಾಗಿ ಒಪ್ಪಿಕೊಂಡಂತಿಲ್ಲ. ಹಿಂದು-ಮುಸ್ಲಿಂ-ಕ್ರೈಸ್ತ ಮತಾನುಯಾಯಿಗಳು ಪರಸ್ಪರ ಪ್ರೀತಿ-ವಿಶ್ವಾಸ- ಗೌರವಗಳಿಂದ ಬದುಕಿರಬಾರದೆಂಬಂತೆ ಪರಸ್ಪರ ಮನಸ್ಸುಗಳನ್ನು ಅವೇ ಧರ್ಮಗಳ ಮೂಲಭೂತವಾದಿಗಳು ಕೆಡಿಸಿರುತ್ತಾರೆ. ಈ ಸಾಮಾಜಿಕ ಕೋಮು ವೈಷಮ್ಯದ ಹಿನ್ನೆಲೆಯಲ್ಲಿ ಸೌಹಾರ್ದತೆಯತ್ತ ಹೆಜ್ಜೆಯಿಡಬೇಕಾದ ಅಗತ್ಯವನ್ನು ಇಲ್ಲಿ ಒತ್ತಿ ಹೇಳಲಾಗಿದೆ. ಏರುದಾರಿ ಕಷ್ಟ; ಇಳಿಜಾರು ತುಂಬ ಸುಲಭ. ಆದರೂ ಸಮಾಜ ಮೇಲಿನ ಸ್ತರಕ್ಕೇರಬೇಕು, ಅಧಃಪತನದ ಕಡೆ ಇಳಿಯಬಾರದೆಂಬ ಚೊಕ್ಕ ಸಂದೇಶ ಇಲ್ಲಿದೆ. ವಿವೇಚನಾರಹಿತ ನಿರ್ಧಾರಗಳಿಂದಾಗಿ ಎಲ್ಲೆಂದರಲ್ಲಿ, ಚಿಕ್ಕಪುಟ್ಟ ಕಾರಣಗಳಿಗಾಗಿ ಕೋಮುಗಲಭೆ ಇಂದು ಸಾಮಾನ್ಯ. ಇವನ್ನೆಲ್ಲ ನೋಡಿ ಇಂಥ ಅನಾಹುತಗಳಿಗೆ ಮತ್ತು ಸಂತ್ರಸ್ತರಿಗೆ ಮನ ಮಿಡಿಯುವ ಮಾನವೀಯ ಸ್ವಭಾವದ ಲೇಖಕಿ ಸಾರಾ ತಮ್ಮ ಬರಹಗಳ ಮೂಲಕ ನೊಂದ ಮನಸ್ಸುಗಳಿಗೊಂದಿಷ್ಟು ತಂಪೆರೆಯುತ್ತಿದ್ದಾರೆ.

Related Books