ಲೇಖಕ ಎ.ಕೆ. ಕುಕ್ಕಿಲ ಅವರ ಕಾದಂಬರಿ-ವೈರಸ್. ಅವರಿಬ್ಬರೂ ಪರಾರಿಯಾದರು ಎಂಬ ಉಪಶೀರ್ಷಿಕೆಯಡಿಯ ಈ ಕೃತಿಗೆ ಲೇಖಕಿ ಡಾ. ವೈದೇಹಿ ಅವರು ಬೆನ್ನುಡಿ ಬರೆದು ‘ವರ್ತಮಾನದ ಕೆಲ ಆಘಾತ ಮತ್ತು ಅಪಕಲ್ಪನೆಗಳ ಸುತ್ತ ಚಿಂತನಾತ್ಮಕವಾಗಿ ಹೆಣೆದ ಕಾದಂಬರಿ ಇದು. ಏ.ಕೆ. ಕುಕ್ಕಿಲ ಅವರು ಲಾಗಾಯ್ತಿನಿಂದಲೂ ನಮ್ಮನ್ನು ಸುತ್ತಿರುವ ಅನೇಕ ವಿಸಂಗತಿಗಳ ಸತ್ಯಾಸತ್ಯತೆಯ ಕುರಿತು ತಮ್ಮ ಬರಹಗಳ ಮೂಲಕ ವಿಶ್ಲೇಷಿಸುತ್ತ ಬಂದವರು. ಕುರ್ ಆನಿನ ಒಳತಿರುಳನ್ನು ತಮ್ಮದೇ ದೃಷ್ಟಿಕೋನದಿಂದ ಸರಳವಾಗಿ ಓದುಗರ ಮುಂದಿಡಲು ಯತ್ನಿಸಿದವರು. ಇವತ್ತಿನ ದಿನ ಕಾಯಿಲೆಯಂತೆ ಹರಡುತ್ತಿರುವ ಯಾವುದೇ ವಿಪ್ಲವಗಳಿಗೂ ಹಿಂದೆ ಮುಂದೆ ನೋಡದೆ ಕಣ್ಣುಮುಚ್ಚಿ ಆಗದವರ ಮೇಲೆ ಗೂಬೆ ಕೂರಿಸುವ ಮನೋಭಾವ, ಸತ್ಯ ಮಿಥ್ಯಗಳ ಗೊಡವೆಯೇ ಇಲ್ಲದ ರಾಕ್ಷಸ ಪ್ರವೃತ್ತಿಯ ಕಡೆಗೆ ನಿಧಾನವಾಗಿ ವಾಲುತ್ತಿರುವ ಜನಮನ, ವಿಮರ್ಶೆಯ ಒರೆಗಲ್ಲಿಗೆ ಒಡ್ಡದೆ, ಹರಿದು ಬರುವ ಅಂತೆಕಂತೆಗಳಿಗೆ ಸುಮ್ಮನೆ ಜೋತುಬೀಳುವ ಹುಂಬತನ ಇತ್ಯಾದಿಗಳು ಅವರಲ್ಲಿರುವ ಲೇಖಕನನ್ನು ಬಳಲಿಸಿವೆ. ವಾಸ್ತವವನ್ನು ಚರ್ಚಿಸುವ ಮತ್ತು ತಿಳಿಸುವ ಆಶಯ ಅವರನ್ನು ಈ ಕಾದಂಬರಿ ಬರೆಯಲು ಪ್ರಾಯಶಃ ಪ್ರೇರೇಪಿಸಿದೆ’ ಎಂದು ಪ್ರಶಂಸಿಸಿದರು.
ಲೇಖಕ ಏ.ಕೆ. ಕುಕ್ಕಿಲ ಅವರು ‘ಡೇಟ್ ಫ್ಯಾಕ್ಟ್ ’ ಎಂಬ ಚಾನೆಲ್ ಮೂಲಕ ಚಿರಪರಿಚಿತರು. ಖ್ಯಾತ ಅಂಕಣಕಾರರು ಹಾಗೂ ಪತ್ರಕರ್ತರೂ ಆಗಿರುವ ಕುಕ್ಕಿಲ ಅವರ ಸಾಹಿತ್ಯಿಕ ಬರವಣಿಗೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಾಲದ ಎದುರು ಇತಿಹಾಸವನ್ನು ಹರಡಿಕೊಂಡು ತನ್ಮಯತೆ ಮತ್ತು ಭಾವನಾತ್ಮಕತೆಯೊಂದಿಗೆ ಒಂದು ಪ್ರವಾಸವನ್ನು ಹೇಗೆ ಕಟ್ಟಿಕೊಡಬಹುದು ಎಂಬುದನ್ನು ಕುಕ್ಕಿಲ ಅವರು ತಮ್ಮ ’ಎಣ್ಣೆ ಬತ್ತಿದ ಲಾಟೀನು’ ಕೃತಿಯಲ್ಲಿ ಚಿತ್ರಿಸಿದ್ದಾರೆ. ಸರಸ-ಸಲ್ಲಾಪ, ವೈರಸ್ ಹಾಗೂ ಅಮ್ಮನ ಕೋಣೆಗೆ ಏಸಿ ಅವರ ಪ್ರಕಟಿತ ಕೃತಿಗಳು. ...
READ MORE