ಪ್ರಯತ್ನಶೀಲರಿಗೆ ಗುರಿ ಸಾಧನೆ ಸುಲಭವಾಗಬಹುದು. ಆದರೆ, ನೆಮ್ನದಿಯ ಬದುಕು ಸಾಧ್ಯವಾಗುವುದೆ ಎಂಬ ಜಿಜ್ಞಾಸೆಯ ಹಿನ್ನೆಲೆಯಲ್ಲಿ ಸನ್ನಿವೇಶಗಳನ್ನು ಜೋಡಿಸುತ್ತಲೇ ಸಾಗುವ ಕಥೆ-ಜನ್ಮಗ್ರಂಥ. ಲೇಖಕರು-ಮನೋಹರ ಎನ್. ಮರಗುತ್ತಿ.
ಕಥಾನಾಯಕ ಸಣ್ಣವನಿರುವಾಗಲೇ ತಂದೆ ತೀರಿ ಹೋಗುತ್ತಾನೆ. ತಾಯಿಯೇ ಕಷ್ಟಪಟ್ಟು ಬೆಳೆಸಲು ಆಗದಂತ ಪರಿಸ್ಥಿತಿ ಹಳ್ಳಿಯಲ್ಲಿ. ಊರು ಬಿಡುವ ಅನಿವಾರ್ಯತೆ ಉಂಟಾಗಿ ಮಗನೊಂದಿಗೆ ನಗರ ಸೇರುತ್ತಾಳೆ. ಮಾನವೀಯ ಹೃದಯದ ಕೆಲವರು ಈ ತಾಯಿಯ ನೆರವಿಗೆ ಬಂದು ಸಹಾಯ ಮಾಡುತ್ತಾರೆ.
ಸಣ್ಣಪುಟ್ಟ ಕೆಲಸ ಮಾಡುತ್ತಲೇ ಮಗನಿಗೆ ವಿದ್ಯಾವಂತನನ್ನಾಗಿ ಮಾಡುತ್ತಾಳೆ. ಮದುವೆ ಮಾಡುತ್ತಾಳೆ. ಎಲ್ಲವೂ ಸರಿಯಾಗಿದೆ ಎಂದುಕೊಳ್ಳುತ್ತಿರುವಾಗಲೇ ತಾಯಿಗೆ ಅನಾರೋಗ್ಯ ಕಾಡುತ್ತದೆ. ಕೆಲ ತಿಂಗಳಲ್ಲಿ ಪತ್ನಿಯೂ ತೀರಿ ಹೋಗುತ್ತಾಳೆ. ಇದ್ದ ಒಬ್ಬ ಮಗನಾದರೂ ನೆಮ್ಮದಿಯ ಜೀವನ ಸಾಗಿಸಬೇಕು ಎಂದು ನಿರುದ್ಯೋಗಿಯಾದರೂ ಕಥಾನಾಯಕ ಆಶಾಭಾವನೆಯಿಂದ ಸಣ್ಣ ಪುಟ್ಟ ಕೆಲಸ ಮಾಡುತ್ತಾ ಇರುತ್ತಾನೆ. ಪ್ರಾಮಾಣಿಕವಾಗಿ ದುಡಿಯುವುದೊಂದೇ ಈತನ ಜೀವನ ಸಾಧನೆಯಾಗಿ, ನೆಮ್ಮದಿಯ ಬದುಕು ಈತನಿಗೆ ಸಿಗುವುದೇ ಇಲ್ಲ. ಬಾಲ್ಯದಿಂದ ಆರಂಭವಾದ ಕಷ್ಟಕೋಟಲೆಗಳು ಜೀವನದುದ್ದಕ್ಕೂ ಬಂದು, ಅವುಗಳನ್ನು ಸಮರ್ಥವಾಗಿ ಎದುರಿಸುವ ಸವಾಲು ಸ್ವೀಕರಿಸಿದ ಕಥಾನಾಯಕನ ಸಂಕಲ್ಪವು ಕಾದಂಬರಿಯ ಜೀವಾಳವೂ ಆಗಿದೆ. ಇಂತಹ ಕಥಾ ವಸ್ತುವನ್ನು ಸರಳ ಶೈಲಿಯ ಮೂಲಕ ಭಾವನಾತ್ಮಕವಾಗಿ ಕಟ್ಟಿಕೊಟ್ಟ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.
ಮನೋಹರ ಎನ್. ಮರಗುತ್ತಿ ಅವರು ಮೂಲತಃ ಕಲಬುರಗಿ ಜಿಲ್ಲೆ ಹಾಗೂ ತಾಲೂಕಿನ ಮರಗುತ್ತಿ ಗ್ರಾಮದವರು.1968ರ ಡಿಸೆಂಬರ್ 5 ರಂದು ಜನನ. ಇವರ ವಿದ್ಯಾರ್ಹತೆ; ಬಿ.ಕಾಂ ಹಾಗೂ ಪಿಜಿಡಿಬಿಎಂ, ನೆನಪಿನ ನಾವಿಕ (ಕವನ ಸಂಕಲನ) ಮುತ್ತುಗಳ ಸುತ್ತ (ಸಾಮಾನ್ಯ ಜ್ಙಾನ ಮತ್ತು ನುಡಿಮುತ್ತುಗಳು) ಹಾಗೂ ಜನ್ಮಗ್ರಂಥ (ಕಾದ೦ಬರಿ) ಇವರ ಸಾಹಿತ್ಯಕ ರಚನೆಗಳು. ಸದ್ಯ, ಮುತ್ತೂಟ್ ಫಿನ್ ಕಾರ್ಪ್ ಲಿಮಿಟೆಡ್ ನಲ್ಲಿ ಹಿರಿಯ ಶಾಖಾ ವ್ಯವಸ್ಥಾಪಕರಾಗಿ ಸೇವೆಯಲ್ಲಿದ್ದಾರೆ. ...
READ MORE