ಗೃಹಪ್ರವೇಶ

Author : ತ.ರಾ.ಸು. (ತ.ರಾ. ಸುಬ್ಬರಾವ್)

₹ 90.00




Year of Publication: 1982

Synopsys

ತಳುಕಿನ ರಾಮಸ್ವಾಮಯ್ಯ. ಸುಬ್ಬರಾವ್‌ (ತ.ರಾ.ಸು) ಅವರ ಕಾದಂಬರಿ ಗೃಹ ಪ್ರವೇಶ. ದೇವಿಕೆರೆಯಲ್ಲಿ ಬ್ರಾಹ್ಮಣರ ಮನೆಗಳು ಹೆಚ್ಚಾಗಿರಲಿಲ್ಲ. ಇರುವ ನಾಲ್ಕು ಮನೆಗಳವರು ಮೇಲು ನೋಟಕ್ಕೆ ಹೊಂದಿಕೊಂಡು ಸಹಬಾಳ್ವೆಯನ್ನು ನಡೆಸುತ್ತಿದ್ದರೂ ಒಳಗೊಳಗೇ ಈ ಕುಟುಂಬಗಳಲ್ಲಿ ಅಸಮಾಧಾನವಿರದಿರಲಿಲ್ಲ. ಊರಿನ ದೇವಿ ಗುಡಿಯ ಪೂಜೆ ನರಸಪ್ಪನವರ ಮನೆಗೆ ತಲತಲಾಂತರದಿಂದ ಬಂದಂತದ್ದು. ದೇವಿಯು ಅವರ ಪೂರ್ವಜರ ಕನಸಿನಲ್ಲಿ ಕಾಣಿಸಿಕೊಂಡು ತನ್ನ ಪೂಜೆಯನ್ನು ಅವರೇ ನೆರವೇರಿಸಬೇಕೆಂದು ಹೇಳಿದ್ದುದ್ದರಿಂದ ಅವರ ಕುಟುಂಬಕ್ಕೆ ಊರಿನಲ್ಲಿ ವಿಶೇಷ ಮನ್ನಣೆಯಿತ್ತು.

ನರಸಪ್ಪನವರದು ಬಹಳ ಮೇರು ವ್ಯಕ್ತಿತ್ವ. ಕುಲದ ಆಚಾರ-ವಿಚಾರ, ಸಂಪ್ರದಾಯಗಳನ್ನು ಚಾಚೂ ತಪ್ಪದೆ ಪಾಲಿಸುತ್ತಾ, ಆ ಜಗನ್ಮಾತೆಯನ್ನು ಶ್ರದ್ಧಾ ಭಕ್ತಿಗಳಿಂದ ಆರಾಧಿಸುತ್ತಾ ಎಲ್ಲರೂ ಗೌರವಿಸುವಂತೆ ಬಾಳುವೆ ನಡೆಸುತ್ತಿದ್ದರು. ಆದರೆ ಅವರ ಮಗನಾದ ವೆಂಕಟ ದಾಸಪ್ಪ ಯಾವುದೋ ಒಂದು ದುರ್ಬಲ ಗಳಿಗೆಯಲ್ಲಿ ಅದೇ ಊರಿನ ನಾಯಕರ ಕೇರಿಯ ಗೌರಮ್ಮನೊಂದಿಗೆ ಕೂಡುತ್ತಾರೆ. ಇವರ ಪ್ರೇಮ ಹಾಗೂ ಪ್ರಣಯ ಊರಿಗೆಲ್ಲಾ ತಿಳಿಯಲು ಬಹಳ ಕಾಲ ಬೇಕಾಗುವುದಿಲ್ಲ. ತಂದೆ ನರಸಪ್ಪನವರಿಗಂತೂ ಇದು ನುಂಗಲಾರದ ತುತ್ತಾಗುತ್ತದೆ.ಮಗನಿಗೆ ನಾನಾ ವಿಧವಾಗಿ ಬುದ್ಧಿವಾದವನ್ನು ಹೇಳಲು ಪ್ರಯತ್ನಿಸುತ್ತಾರೆ. ಆದರೆ ಯಾರು ಏನೇ ಹೇಳಿದರೂ ದಾಸಪ್ಪ ಮಾತ್ರ ಗೌರಮ್ಮನನ್ನು ಬಿಡಲು ಸಿದ್ಧನಿರುವುದಿಲ್ಲ. ಇದರಿಂದಾಗಿ ತಂದೆ ಮಗನ ಮಧ್ಯೆ ಮಾತು ಇಲ್ಲದಾಗುತ್ತದೆ. ನರಸಪ್ಪನವರು ಗೌರಿಯ ಜೊತೆಗೆ ಮಾತನಾಡಿ, ಮಗನನ್ನು ಮದುವೆಗೆ ಒಪ್ಪಿಸಲು ವಿನಂತಿಸಿಕೊಳ್ಳುತ್ತಾರೆ. ಹೀನ ಕುಲದಲ್ಲಿ ಹುಟ್ಟಿದ್ದರೂ ಗೌರಿಯ ಗುಣ ಅಪ್ಪಟ ಬಂಗಾರ. ಆಕೆ ದಾಸಪ್ಪನವರನ್ನು ಮದುವೆಗೆ ಒಪ್ಪಿಸಿದ್ದೆ ಅಲ್ಲದೆ, ತನ್ನ ಬಳಿಯಿದ್ದ ಅವರು ನೀಡಿದ ಒಡವೆಗಳನ್ನು ವಧುವಿಗೆಂದು ನೀಡುತ್ತಾಳೆ. ಇದರಿಂದ ನರಸಪ್ಪನವರು ಅವಳ ಚಿನ್ನದಂಥ ಗುಣಕ್ಕೆ ಮಾರುಹೋಗುತ್ತಾರೆ. ಅವರು ಸಾಯುವ ಸಂದರ್ಭದಲ್ಲಿ ಮಗನನ್ನು ಬಳಿಗೆ ಕರೆದು ಗೌರಮ್ಮನನ್ನು ಮೊದಲ ಹೆಂಡತಿಯಂತೆ ನಡೆಸಿಕೊಳ್ಳುಲು ಹೇಳಿ ಪ್ರಾಣ ಬಿಡುತ್ತಾರೆ. ಇದರಿಂದಾಗಿ ದಾಸಪ್ಪನಿಗೆ ತಂದೆಯ ಉದಾತ್ತ ಗುಣದ ಅರಿವಾಗಿ, ತಂದೆಯನ್ನು ಅನ್ಯಾಯವಾಗಿ ನೋಯಿಸಿದೆನಲ್ಲಾ ಎಂದು ಪಶ್ಚಾತ್ತಾಪದ ಬೇಗೆಯಲ್ಲಿ ಬೇಯುತ್ತಾರೆ.

ವಂಶ ಪಾರಂಪರ್ಯವಾಗಿ ಬಂದಿದ್ದ ದೇವಿ ಪೂಜೆಗೆ ಅನ್ಯ ಜಾತಿಯ ಹೆಣ್ಣಿನ ಸಹವಾಸ ಮಾಡಿರುವ ತಾನು ಅರ್ಹನೇ ಎಂಬ ಜಿಜ್ಙಾಸೆ ದಾಸಪ್ಪನವರಲ್ಲಿ ಮೂಡಿ ನಿಲ್ಲುತ್ತದೆ. ಬಹಳಷ್ಟು ಯೋಚಿಸಿದ ತರುವಾಯ ಮೊದಲಿನಿಂದಲೂ ಆ ದೇವಾಲಯದ ಪೂಜೆಯ ಮೇಲೆ ಕಣ್ಣಿಟ್ಟಿದ್ದ ಅಚ್ಚಣ್ಣ ಭಟ್ಟರಿಗೇ ಅದನ್ನು ವಹಿಸಿಕೊಡುವ ನಿರ್ಧಾರ ದೃಢವಾಗುತ್ತದೆ. ಆದರೆ ಅವರ ಈ ತೀರ್ಮಾನವನ್ನು ಸ್ವತ: ತಾಯಿಯಷ್ಟೇ ಅಲ್ಲ, ಊರಿಗೆ ಊರೇ ಅಲ್ಲಗಳೆಯುತ್ತದೆ. ತಂದೆಯ ಮರಣಾನಂತರ ಕೇವಲ ಇಪ್ಪತ್ತು ದಿನಗಳ ಅಂತರದಲ್ಲಿ ದೇವಿಯ ಜಾತ್ರಾ ಮಹೋತ್ಸವವಿದ್ದು ಅದಕ್ಕೆ ಭರದಿಂದ ಸಿದ್ಧತೆ ನಡೆಯುತ್ತಿರುವ ಸಂದರ್ಭದಲ್ಲೇ ದಾಸಣ್ಣ ತನ್ನ ನಿರ್ಧಾರವನ್ನು ಊರಿನ ಮುಂದಿಟ್ಟಾಗ ಊರವರೆಲ್ಲರೂ ಒಕ್ಕೊರಲಿನಿಂದ ಅದು ಸಾಧ್ಯವಿಲ್ಲವೆಂದು ಹೇಳಿ, ನಿರ್ಧಾರವನ್ನು ಬದಲಿಸುವಂತೆ ಪರಿಪರಿಯಾಗಿ ಕೇಳಿಕೊಂಡರೂ ದಾಸಪ್ಪ ಕೇಳುವುದಿಲ್ಲ. ಜಾತ್ರೆಯ ದಿನ ತಾನು ಊರಿನಲ್ಲಿರಬಾರದೆಂದು ನಿಶ್ಚಯಿಸಿ, ದೇವಿಯನ್ನು ಕೊಡುವ ಜವಾಬ್ದಾರಿಯನ್ನು ತಂಗಿ ರಾಜೇಶ್ವರಿಗೆ ವಹಿಸಿ, ಹಿಂದಿನ ದಿನ ಮಧ್ಯಾನವೇ ಊರಿನಿಂದ ಹೊರಡುತ್ತಾನೆ. ಆ ರಾತ್ರಿ ತನ್ನನ್ನು ಯಾವುದೋ ಗೆಜ್ಜೆಯ ಸದ್ದು ಹಿಂಭಾಲಿಸುತ್ತಿರುವುದನ್ನು ಗಮನಿಸಿ ಭಯಭೀತನಾಗಿ ಕೊನೆಗೆ, ಧೈರ್ಯ ತಂದುಕೊಂಡು ಯಾರೆಂದು ಪ್ರಶ್ನಿಸಿದಾಗ ಅದು ಸಾಕ್ಷಾತ್ ದೇವಿಯೆಂದು ತಿಳಿಯುತ್ತದೆ. ದೇವಿಯು ಅವನೇ ತನ್ನ ಪೂಜೆಯನ್ನು ನೆರವೇರಿಸುವಂತೆ ಪಟ್ಟು ಹಿಡಿದರೂ ದಾಸಪ್ಪ ತನ್ನ ನಿರ್ಧಾರವನ್ನು ಸಡಿಲಿಸುವುದಿಲ್ಲ. ಇತ್ತ ದೇವರನ್ನು ಹೊತ್ತೊಯ್ಯಲು ದಾಸಪ್ಪನ ಮನೆಗೆ ಬಂದ ಅಚ್ಚಣ್ಣ ಭಟ್ಟರು ಹಾಗೂ ಇತರರಿಗೆ, ದೇವಿಯ ಸುತ್ತಲೂ ಘಟಸರ್ಪವೊಂದು ಸುತ್ತಿಕೊಂಡು ಹೆಡೆಯೆತ್ತಿ ಬುಸುಗುಟ್ಟುತ್ತಿರುವ ದೃಶ್ಯ ಕಣ್ಣಿಗೆ ಬಿದ್ದು ದಿಗ್ಭಾಂತರಾಗುತ್ತಾರೆ. ತರಾಸುರವರು ಈ ಕಾದಂಬರಿಯಲ್ಲಿ ಗೀತೆಯ ಶ್ಲೋಕಗಳನ್ನು, ದೇವಿ ಶ್ಲೋಕಗಳನ್ನು ಅರ್ಥಸಹಿತ ಸಂದರ್ಭಾನುಸಾರ ಬಳಸಿರುವುದು ಈ ಕಾದಂಬರಿಯ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ, ಜಾತಿ ವಿಜಾತಿ ಎನಬೇಡ, ದೇವನೊಲಿದಾತನೇ ಜಾತ ಸರ್ವಜ್ಙ ಎಂಬ ಮಾತಿನ ಅಡಿಪಾಯದ ಮೇಲೆ ಈ ಕಾದಂಬರಿ ನಿಂತಿದೆ.

About the Author

ತ.ರಾ.ಸು. (ತ.ರಾ. ಸುಬ್ಬರಾವ್)
(12 June 1906 - 10 April 1984)

ತಳುಕು ರಾಮಸ್ವಾಮಯ್ಯ ಸುಬ್ಬರಾಯ(ತ.ರಾ.ಸು) ಹುಟ್ಟಿದ್ದು 1906 ಜೂನ್ 12 ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ಮೂಲ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬಾರಾಯರು ಇಂಟರ್ ಮೀಡಿಯೆಟ್ನಲ್ಲಿದ್ದಾಗ ದೇಶದ ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿದರು. ಪ್ರಮುಖ ಕೃತಿಗಳು: ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ-, ಈ ಕಾದಂಬರಿಗಳು ಬರೆಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಚಲನಚಿತ್ರವಾದ ಕಾದಂಬರಿಗಳು: ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಲ್ಲಿ ಹಿಂದಿ ಚಲನಚಿತ್ರವಾಗಿತ್ತು.) ನಾಗರಹಾವು, ...

READ MORE

Related Books