ಓದೋರಂಗ!

Author : ತುಂಬಾಡಿ ರಾಮಯ್ಯ

Pages 150

₹ 180.00
Year of Publication: 2021
Published by: ಭೂಮಿ ದಿ ಸೆಂಟರ್ ಫಾರ್ ಆರ್ಟ್ ಸ್ಟಡೀಸ್
Address: ಬೆಂಗಳೂರು
Phone: 9844157982

Synopsys

ತುಂಬಾಡಿ ರಾಮಯ್ಯ ಅವರ ‘ಓದೋರಂಗ’ ಕೃತಿಯು ಕಾದಂಬರಿಯಾಗಿದೆ. ಕಾದಂಬರಿಯ ಹರಹನ್ನು ಮೀರಿದ ಕಥೆ, ಕಾವ್ಯ ಸ್ವರೂಪವನ್ನು ಕೃತಿಯು ತನ್ನದಾಗಿಸಿಕೊಂಡಿದೆ. ಮನುಷ್ಯ ಕುಲದ ತವಕ ತಲ್ಲಣಗಳನ್ನು ಹೇಳಲು ಕಥೆ, ಕಾದಂಬರಿ, ಪುರಾಣಗಳ ಸಾಧ್ಯತೆಗಳನೆಲ್ಲ ರಾಮಯ್ಯನವರು ಬಳಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಪರಸ್ಪರ ಸಂಬಂಧವಿಲ್ಲದಂತೆ ಕಾಣಿಸುವ ಹಲವು ಕಥನಗಳು ಇಲ್ಲಿದ್ದು, ಅವುಗಳೆಲ್ಲ ಮತ್ತೆ ಮತ್ತೆ ಸಂದಿಸುತ್ತಿರುವುದು ಹಾಗೂ ಒತ್ತಿ ಹೇಳುತ್ತಿರುವುದು ಒಂದೇ ಸಂಗತಿಯನ್ನು. ಒಂದು ಜೀವ ಮತ್ತೊಂದು ಜೀವದೊಂದಿಗೆ ಹೊಂದಿರಬೇಕಾದ ಪ್ರೀತಿ ಗೌರವವನ್ನು ಈ ಕೃತಿಯು ಹೇಳುತ್ತದೆ. ‘ಸಂಬಂಜ ಅನ್ನೋದು ದೊಡ್ಡದು ಕನಾ’ ಎನ್ನುವ ದೇವನೂರು ಕಾಣ್ಕೆಯ ಮಾನವೀಯತೆಯನ್ನೇ ರಾಮಯ್ಯನವರ ಕಥನಕಗಳು ಪಿಸುಗುಡುತ್ತಿವೆ. ಈ ಕಾದಂಬರಿಯಲ್ಲಿ ಬರುವಂತಹ ರಂಗ ಅನ್ನುವ ಪಾತ್ರವೂ ತನ್ನ ಜಾಣತನವನ್ನು ಪ್ರದರ್ಶಿಸುತ್ತದೆ. ತಾಯಿಕೋಳಿಯ ಬಾಣಂತನವನ್ನು ಇಲ್ಲಿ ಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆ ಲೇಖಕ ತುಂಬಾಡಿ ರಾಮಯ್ಯ.  ರಂಗನ ತಾಯಿ ತನ್ನ ಮಗಳ ಬಾಣಂತನವನ್ನು ಸಂಭ್ರಮಿಸಿದಷ್ಟೇ ಆಸ್ಥೆಯಿಂದ ಕೋಳಿಯ ಬಾಣಂತನ ನಡೆಸುತ್ತಾಳೆ. ಮೊಟ್ಟೆಗಳು ಮರಿಯಾಗುವ ಸಂಭ್ರಮದಲ್ಲಿ ರಂಗನ ಕುಟುಂಬ ಭಾಗಿಯಾಗುವುದರ ಹಿಂದೆ ವ್ಯಾವಹಾರಿಕ ಲೆಕ್ಕಚಾರ ಇಲ್ಲದಿಲ್ಲ. ಆದರೆ , ಆ ಗಣಿತವನ್ನು ಮೀರಿ ಜೀವಜಗತ್ತು ಪರಸ್ಪರ ಸ್ಪಂದಿಸುವ ಬಗೆಯನ್ನು ಓದೋರಂಗ ಆರ್ದ್ರವಾಗಿ ಕಟ್ಟಿಕೊಡುತ್ತದೆ.

About the Author

ತುಂಬಾಡಿ ರಾಮಯ್ಯ

ಲೇಖಕ ತುಂಬಾಡಿ ರಾಮಯ್ಯ ಅವರು ಮೂಲತಃ ತುಮಕೂರು ಜಿಲ್ಲೆಯ ತುಂಬಾಡಿ ಗ್ರಾಮದವರು. ದಲಿತ ಚಳವಳಿಯಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದರು. ಪ್ರಸ್ತುತ ಕಾರ್ಮಿಕ ಅಧಿಕಾರಿಯಾಗಿದ್ದಾರೆ. ಕೃತಿಗಳು: ಮಣೆಗಾರ, ಓದೋರಂಗ ...

READ MORE

Reviews

‘ಓದೋರಂಗ!’ ಕೃತಿಯ ವಿಮರ್ಶೆ

ಅತ್ಯುತ್ತಮದೊಂದಿಗೆ ಹಸಿ ಸೇರಿದಾಗ
ಈ ಕೃತಿಯ ಮುವ್ವರು(!) ಮುನ್ನಡಿಕಾರರ ಪೈಕಿ ಇಬ್ಬರು ಓದೋರಂಗ! ಇದನು ಕಾದಂಬರಿ ಎಂದು ಗುರುತಿಸಲು ಪ್ರಯತ್ನಿಸಿದ್ದಾರೆ. ಆದರೆ ಇದು ಒಂದು ಕಂದ ವಸ್ತುವಿನ ಬೆಳವಣಿಗೆಯ ಕಥನವನ್ನಾಗಲೀ ಅಥವಾ ಅದರ ಸುತ್ತ ಹರಡಿಕೊಳ್ಳುವ ಕಥನವನ್ನಾಗಲೀ ಒಳಗೊಂಡಿರದ ಲೇಖಕನ ಅನುಭವಗಳ ಅಸ್ತವ್ಯಸ್ತ ಜೋಡಣೆಯಾಗಿರುವುದರಿಂದ ಇದನ್ನು ಯಾವುದೇ ನಿರ್ದಿಷ್ಟ ಸಾಹಿತ್ಯ ಪ್ರಕಾರದೊಂದಿಗೆ ಗುರುತಿಸುವ ಗೋಜಿಗೆ ಹೋಗದೆ ಸುಮ್ಮನೆ ಓದಿಕೊಂಡು ಹೋಗಬಹುದಾಗಿದೆ. ಕೊನೆ ಮಾಡಲು ಮಾಡಿರುವ ಹೆಣಗಾಟ ಅನಗತ್ಯವಾಗಿತ್ತು ಅವರ ಈ ಅನುಭವಗಳ ಅಧ್ಯಾಯದಲ್ಲಿ ಲೇಖಕರು ಇದನ್ನೊಂದು ಸಮಗ್ರ ಕೃತಿಯಾಗಿ ಗುಚ್ಚ ಅವು ಬಿಡಿಬಿಡಿಯಾಗಿರುತ್ತಲೆ: ಸಾರ್ಥಕ ಓದಿನ ತೃಪ್ತಿ ಕೊಡುವಂತಿವೆ. 

ಮಧುಗಿರಿ ಸೀಮೆಯ ಮಣಿಗಾರ(ಚಮಾರಿಕ ಕುಲವೃತ್ತಿಯ ಮಾದಿಗರು) ಹಟ್ಟಿಯ ಹಲವು ರ೦ಗರ ಮಧ್ಯ ಓದು ಬರಹ ಕಲಿಯ ಹೊರಟ ಮರಂಗ ಇಲ್ಲಿ ಓದೋರಂಗನೆಂಬ ಹೆಸರು ಪಡೆದು ಈ ಕೃತಿಯ ಹಿನ್ನೆಲೆಯಲ್ಲಿ ವಿವಿಧ ರೂಪಗಳಲ್ಲಿ ಕ್ರಿಯಾಶೀಲನಾಗಿದ್ದಾನೆ. ವಪ್ಪಾರದ ತುಂಬ ಇಟ್ಟಾಡುವ ಕೋಳಿಗಳು ಇಡುವ ಮೊಟ್ಟೆಗಳು ಮರಿಯಾಗುವ ಸೃಷ್ಟಿಕಾರ್ಯ'ದ ಕೌತುಕದ ಅನುಭವ, ಬರಗಾಲದಲ್ಲಿ ಎರಗುವ ದಾರುಣ ಹಸಿವನ್ನು ನೀಗಿಸಲು ಅಪ-ಅಮ್ಮ ಪಡುವ ಬವಣೆಯ ಚಿತ್ರಗಳು ಎಲ್ಲೂ ಸ್ವಯಂ ಮರುಕದ ಮಸಿ ತುಂಬಿಕೊಂಡು ಜುಗುಪ್ಸೆ ಹುಟ್ಟಿಸದೆ ಒಂದು ಹದದ ಭಾವುಕತೆಯ ಬರವಣಿಗೆಯ ಮೂಲಕ ನಮಗೆ ಆಪ್ತವಾಗುತ್ತಾ ಹೋಗುವ ಈ ಕೃಷಿ, ಒಮ್ಮೆ ಓದೋರಂಗ ಓದು ಮುಗಿಸಿ ಸರ್ಕಾರಿ ಚಾಕರಿಗೆ ಸೇರಿ (ಬೆಂಗಳೂರೆಂಬ) ಮಾಯಾನಗರಿಯ ಕತೆ ಹೇಳತೊಡಗಿದೊಡನೆ ಹದ ತಪ್ಪಿ (ಲೇಖಕ ಕಾರ್ಮಿಕ ಅಧಿಕಾರಿಯಾಗಿ ಕ೦ಡ, ಎದೆ ಬಿರಿಯುವ ಹೀರಾಲಾಲ, ಚಿನ್ನಿಕೃಷ್ಣ, ಕಲ್ಲಮರ ಪ್ರಸಂಗಗಳೂ ಸೇರಿದಂತೆ) ಸಾಮಾಜಿಕ ಮತ್ತೆ ಕೆಂಚಮ್ಮನ ಕಥೆಯ ಮೂಲಕ ಗ್ರಾಮ ಮೂಲಕ್ಕೆ ಮರಳಿ ಮುಂದೆ ಕಥೆ ಹೇಳುವ ಇಲ್ಲಿ ಗೋಚ ಸಿರಿಯಮ್ಮ(ಜಿ) ಪಾತ್ರದ ಮೂಲಕ ನಗರ ಮತ್ತು ಗ್ರಾಮ ಕಥನಗಳ ಮಧ್ಯೆ ತುಯ್ದಾಡುತ್ತಾ, ಧ್ವನಿಗೆ ಇರುವ ಎರಡೂ ಕಡೆಯ ಮನುಷ್ಯ ಬದುಕಿನ ಆಳ-ಎತ್ತರಗಳನ್ನು ಮುಟ್ಟುತ್ತಾ ಕೊನೆಗೆ ಲೇಖಕರ ಅತ್ಯಭಿಮಾನದ ಗುರುವರ್ಯರಾದ (ಮತ್ತು ನಮ್ಮ ಕಾಲದ ಕನ್ನಡ ಸಾಂಸ್ಕೃತಿಕ ಲೋಕದ ದುರಂತ ನಾಯಕನಂತೆ ಕಾಣುವ) ದಿವಂಗತ ಕೆ.ಎಂ. ಶಂಕರಪ ಎಂಬ ಆಸಾತ್ಮದ ಸನ್ನಿಧಾನವನ್ನು ಸೇರಿ (ಏಕೋ ದೇವನೂರ ಮಹಾದೇವ ಅವರನ್ನುಳಿದು ಇನ್ನೆಲ್ಲ) ಅವರ (ಪರ ಮತ್ತು ಇಹಲೋಕವಾಸಿಗಳಿಬ್ಬರನ್ನೂ ಒಳಗೊಂಡ) ಇಡೀ ಪಟಾಲಂನ ಸಭೆಯಲ್ಲಿ ಹೊಸ ತಲೆಮಾರಿನ ಆಸೆಯಂತಿರುವ ಮಂಗಳೆಯು ಸಭೆಯ “ಓಂ ಮಣೋ ಪದೇಹಂ' ಮಂತ್ರಘೋಷದ ಮಧ್ಯೆ ಐಕ್ಯತೆಯ ಸಂದೇಶದೊಂದಿಗೆ ಅಕ್ಷರ ಬೀಜ ಬಿತ್ತನೆ ಮಾಡುವುದರೊಂದಿಗೆ ಶುಭಂ ಹೇಳುತ್ತದೆ. 

ನಮ್ಮ ಕಾಲದ ಒಂದು ಪುರಾಣ ಸೃಷ್ಟಿಸಲೆಳಸುವ ಈ ಕಥೆಗಾರಿಕೆಯ ಕಸರತ್ತಿನಲ್ಲಿ ತುಂಬಾಡಿಯವರ ಬರವಣಿಗೆ ಅಲ್ಲಲ್ಲಿ ಕನ್ನಡದ ಅತ್ಯುತ್ತಮ ಬರವಣಿಗೆಯ ಶೃಂಗಗಳನ್ನು ಮುಟ್ಟುವ ಬೆರಗನ್ನೂ ನಾವು ಕಾಣಬಹುದು. ಉದಾ: 'ಕಪಿಲೆಬಾನಿ' ಎಂಬ ಅಧ್ಯಾಯ ಮೂಲಕವೇ ಅತ್ಯಂತ ಕೀಳಾದುದೆಂದು ಪರಿಗಣಿಸಲ್ಪಟ್ಟ ಚರ್ಮದ ಕಾಯಕ ಜಗತ್ತಿಗೆ ಜೀವಾಧಾರವಾದ ಅನ್ನಚಕ್ರವನ್ನೇ ತಿರುಗಿಸುತ್ತಿರುವ ಮಹಾನ್ ದರ್ಶನದ ಕಾವ್ಯವಾಗಿ ತನ್ನ ಸಕಲ ಸೌಂದರ್ಯಗಳೊಂದಿಗೆ ಬೆಳೆದು ನಿಂತು ನಿಮ್ಮ ಸಂವೇದನಾ ಲೋಕವನ್ನೇ ಒಮ್ಮೆ ನವೀಕರಿಸಿಬಿಡುತ್ತದೆ. 'ಒಂದಾನೊಂದು ಕಾಲದಲ್ಲಿ', 'ಕದಿರಿಗನ್ನುಣ್ಣಿಮೆ' ಮತ್ತು 'ಹೆಣ್ಣುಮುನಿ' ಅಧ್ಯಾಯಗಳು ಕೂಡ ಅಪರೂಪದ ಕಲೆಗಾರಿಕೆಯ ಉದಾಹರಣೆಗಳು. ಈ ಕಲೆಗಾರಿಕೆಯೇ, ಇಲ್ಲಿನ ನಿರೂಪಣೆಗಳು ತಳವರ್ಗದ ತಾಜಾ ಅನುಭವಗಳೇ ಆದರೂ, ಎಲ್ಲಿಯೂ ಇಂತಹ ನಿರೂಪಣೆಗಳಲ್ಲಿ ಸಾಮಾನ್ಯವಾಗಿ ಕಾಣುವ ಸಾಮಾಜಿಕ ಕಹಿ ಇಲ್ಲ. ದೊಡ್ಡ ಮಟ್ಟದ ಕಲೆಗಾರಿಕೆಗೆ ಮಾತ್ರ ಇದು ಸಾಧ್ಯವಾಗುವ ಹದ. ಇನ್ನು, ಒಳಕೋಣೆ 'ಬೆಳ್ಳಿಲಿ ಬೇಟೆ' ಎಂಬ ಅಧ್ಯಾಯ ತುಂಬಾಡಿಯವರ ಅನುಭವ ವೈವಿಧ್ಯ ಮಾತ್ರ ಸೃಷ್ಟಿಸಬಲ್ಲ ವಿಶಿಷ್ಟ ಹದದ ಲಘುಶೈಲಿಯ ಬರವಣಿಗೆ, ಇವುಗಳ ಜೊತೆಗೆ 'ಗಜಲಕ್ಷ್ಮಿ', 'ನೀಲವ 'ಗೌಡರಾಳು ಗುಂಡ' ಎಂಬ 'ಹಸಿ' ಬರಹಗಳೂ ಇವೆ ಎಂಬುದನ್ನೂ ಇಲ್ಲಿ ಹೇಳಬೇಕು. ಇಂತಹ ಹಸಿತನವನ್ನು ಕುರಿತ ದೌರ್ಬಲ್ಯವೇ ತುಂಬಾಡಿಯವರು ಈ ಕೃತಿಯಲ್ಲಿ ನಡಿಗೆಯನ್ನು ಬಿಟ್ಟು ಅಲ್ಲಲ್ಲಿ ನೆಗೆದಾಡಿ, ಬರವಣಿಗೆಯ ಅವಿಭಾಜ್ಯತೆಯಿಂದ ವಂಚಿತರಾಗುವಂತೆ ಮಾಡಿರುವುದು. ಪುಸ್ತಕದ ಪ್ರತಿ ಪುಟದಲ್ಲೂ ತಪ್ಪು ಕಾಗುಣಿತಗಳ ಪದಗಳಿವೆ. ಲೇಖಕರು ಆಡುಮಾತಿನ ಕ್ಲಿಷ್ಟ ಸಂಭಾಷಣೆಯನ್ನೂ ಸರಿಯಾಗಿ ಬರೆಯುವ ಸಾಮರ್ಥ್ಯವನ್ನು ಇಲ್ಲಿ ತೋರಿಸುವುದರಿಂದ, ಇದು ಕನ್ನಡ ಶಬ್ಧಕೋಶವನ್ನು ಸರಿಯಾಗಿ ಗಮನಿಸದ ಲೇಖಕರ ಔದಾಸೀನ್ಯನ ದ್ಯೋತಕವೇ ಇರಬಹುದೆನ್ನಿಸುತ್ತದೆ.

(ಕೃಪೆ: ಹೊಸಮನುಷ್ಯ, ಬರಹ : ಡಿ. ಎಸ್. ನಾಗಭೂಷಣ)

===

 

Related Books