ಸಫಾ

Author : ಪ್ರಸಾದ್ ನಾಯ್ಕ್

Pages 288

₹ 360.00
Year of Publication: 2020
Published by: ಸೃಷ್ಟಿ ಪಬ್ಲಿಕೇಷನ್ಸ್
Address: ನಂ. 121.13ನೇ ರಸ್ತೆ, ಎಂ.ಸಿ.ಲೇಔಟ್, ವಿಜಯ ನಗರ, ಬೆಂಗಳೂರು-560040
Phone: 08023153558

Synopsys

ಜಿಬೌಟಿಯ ಕೊಳಚೆಪ್ರದೇಶವೊಂದರಲ್ಲಿ ನೆಲೆಸಿರುವ ಹೆಣ್ಣು ಮಗು ಸಫಾ. ಜಿಬೌಟಿ ಎಂಬ ಹೆಸರಿನ ದೇಶವೂ ಇದೆ ಎಂದು ಹೊರಜಗತ್ತಿನ ದೇಶಕ್ಕೆ ಹೇಳಬೇಕಾದ ಪರಿಸ್ಥಿತಿಯುಳ್ಳ, ಆಫ್ರಿಕಾದ ಪುಟ್ಟ ಕೊಂಬಿನಂತಿರುವ ದೇಶದ ಮೂಲೆಯಲ್ಲಿ ಅನಾಮಿಕಳಂತಿದ್ದ ಸಫಾ ಒಂದು ಕಡೆ...

ಸೊಮಾಲಿಯಾದ ಮರಳುಗಾಡಿನಿಂದ ಬಂದು ಫ್ಯಾಷನ್ ಜಗತ್ತನ್ನು ಆಳಿ, ಹಾಲಿವುಡ್ ನ ಅಂಗಳಕ್ಕೂ ಕಾಲಿಟ್ಟು, ವಿಶ್ವಸಂಸ್ಥೆಯ ವಿಶೇಷ ರಾಯಭಾರಿಯಾಗಿ ಯೋನಿ ಛೇದನದ ವಿರುದ್ಧ ಸಾರಿದ ಮಹಾಯುದ್ಧದಿಂದಾಗಿ ವಿಶ್ವದಾದ್ಯಂತ ಸಂಚಲನವನ್ನು ಮೂಡಿಸಿದ ಲೇಖಕಿ, ನಟಿ, ಸೂಪರ್-ಮಾಡೆಲ್ ಹಾಗೂ ಸಾಮಾಜಿಕ ಕಾರ್ಯಕರ್ತೆ ವಾರಿಸ್ ಡಿರೀ ಇನ್ನೊಂದು ಕಡೆ...

ಇವರಿಬ್ಬರನ್ನೂ ಕೊಂಡಿಯಂತೆ ಬೆಸೆಯುವ ``ಡೆಸರ್ಟ್ ಫ್ಲವರ್'' ಎಂಬ ಒಂದು ಚಲನಚಿತ್ರ... ವಾರಿಸ್ ಡಿರೀಯ ಆತ್ಮಕಥನವನ್ನೇ ತೆರೆಯ ಮೇಲೆ ಮೂಡಿಸಿದ ಚಿತ್ರದಲ್ಲಿ ವಾರಿಸ್ ಳ ಬಾಲ್ಯದ ಪಾತ್ರವನ್ನು ಮನೋಜ್ಞವಾಗಿ ಅಭಿನಯಿಸುವ ಸಫಾ ಎಂಬ ಮುದ್ದು ಬಾಲಕಿ...

ಸಫಾಳನ್ನು ಯೋನಿಛೇದನಕ್ಕೊಳಪಡಿಸಬಾರದೆಂಬ ಒಪ್ಪಂದವನ್ನು ವಾರಿಸ್ ಡಿರೀಯ ಡೆಸರ್ಟ್ ಫ್ಲವರ್ ಫೌಂಡೇಷನ್ ಸಫಾಳ ಹೆತ್ತವರೊಂದಿಗೆ ಮಾಡಿದ್ದು ಹೌದಾದರೂ ಸಫಾಳ ಪತ್ರವೊಂದು ವಾರಿಸ್ ರನ್ನು ಜಿಬೌಟಿಯವರೆಗೂ ಹೇಗೆ ಎಳೆತಂದಿತು?  

ಇದು ಸಫಾಳ ಕಥೆ... ತೂಗುಕತ್ತಿಯಂತೆ ತಲೆಯ ಮೇಲೆ ತೂಗುತ್ತಿರುವ ಯೋನಿ ಛೇದನವೆಂಬ ಸಾಮಾಜಿಕ ಅನಿಷ್ಟದ ಭಯದ ನೆರಳಲ್ಲೇ ಜೀವಿಸುತ್ತಿರುವ ಲಕ್ಷಾಂತರ ಸಫಾರ ಕಥೆ... ಅನಸ್ತೇಸಿಯಾಗಳ ನೆರವಿಲ್ಲದೆ, ತುಕ್ಕುಹಿಡಿದ ರೇಜರ್ ಬ್ಲೇಡುಗಳಡಿಗೆ ಹೇಳಹೆಸರಿಲ್ಲದಂತೆ ಬಲಿಯಾಗುತ್ತಿರುವ ಅಸಂಖ್ಯಾತ ಸಫಾರ ಕಥೆ... 

ವಾರಿಸ್ ಡಿರೀ ಖುದ್ದಾಗಿ ಹೇಳುವಂತೆ ಇದೊಂದು ಮರುಭೂಮಿಯ ಹೂಗಳ ಕಥೆಯಾಗಿದೆ. 

About the Author

ಪ್ರಸಾದ್ ನಾಯ್ಕ್

ದಕ್ಷಿಣಕನ್ನಡದ ಕಿನ್ನಿಗೋಳಿ ಮೂಲದವರಾದ ಪ್ರಸಾದ್ ನಾಯ್ಕ್ ಲೇಖಕರು ಮತ್ತು ಅಂಕಣಕಾರರು.  ಓದು, ಪ್ರವಾಸ ಮತ್ತು ಚಿತ್ರಕಲೆ ಇವರ ಇತರೆ ಹವ್ಯಾಸಗಳು. ಕನ್ನಡದ ಖ್ಯಾತ ಜಾಲತಾಣ 'ಅವಧಿ'ಯಲ್ಲಿ ಇವರು ಬರೆಯುತ್ತಿದ್ದ 'ಹಾಯ್ ಅಂಗೋಲಾ!' ಅಂಕಣವು ಓದುಗರಿಂದ ಅಪಾರ ಮೆಚ್ಚುಗೆಯನ್ನು ಗಳಿಸಿದ್ದು ಈ ಕೃತಿಗೆ 2018ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರವಾಸ ಸಾಹಿತ್ಯ ಪುಸ್ತಕ ಬಹುಮಾನ ಸಂದಿದೆ. ಆಫ್ರಿಕಾ ಪ್ರವಾಸ ಕಥನವಾಗಿರುವ 'ಹಾಯ್ ಅಂಗೋಲಾ!' ಇವರ ಚೊಚ್ಚಲ ಕೃತಿಯೂ ಹೌದು. ಈ ಕೃತಿಯು ಪ್ರವಾಸ ಸಾಹಿತ್ಯ ವಿಭಾಗದಲ್ಲಿ ಶಿವಮೊಗ್ಗ ಕರ್ನಾಟಕ ಸಂಘದ ಪ್ರಶಸ್ತಿಗೆ ಪಾತ್ರವಾಗಿದೆ.  ಕನೆಕ್ಟ್ ಕನ್ನಡ ವೆಬ್ ಪತ್ರಿಕೆಯ 'ಪಟ್ಟಾಂಗ' ಅಂಕಣವೂ ...

READ MORE

Reviews

ಅಗ್ನಿಕುಂಡದಿಂದ ಪಾರಾದ ಹೂವು

ಪ್ರಖ್ಯಾತ ರೂಪದರ್ಶಿ, ಸೋಮಾಲಿಯಾ ಮೂಲದ ವಾರಿಸ್ ಡಿರಿ ಅವರ ‘ಸೇವಿಂಗ್‌ ಸಫಾ’ ಕೃತಿಯನ್ನು ಪ್ರಸಾದ್ ನಾಯ್ಕ್‌ ಕನ್ನಡಕ್ಕೆ ತಂದಿದ್ದಾರೆ. ‘ಹಾಯ್ ಅಂಗೋಲಾ’ ಎಂಬ ಕೃತಿಯ ಮೂಲಕ ಪ್ರಸಾದ್‌ ಈಗಾಗಲೇ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಿದ್ದಾರೆ. ‘ಸಫಾ’, ಆಫ್ರಿಕಾದ ಪೂರ್ವತೀರದ ಇಥಿಯೋಪಿಯಾದ ಅದೇ ಹೆಸರಿನ ಬಾಲಕಿಯೊಬ್ಬಳ ಕಥಾನಕ.

ವಾರಿಸ್ ಅವರ ತವರು ಸೋಮಾಲಿಯಾ ಮತ್ತು ಇಥಿಯೋಪಿಯಾ ಎರಡೂ ಅಕ್ಕಪಕ್ಕದ ದೇಶಗಳು. ವಾರಿಸ್ ಡಿರಿಯ ಆತ್ಮಕತೆ ‘ಡೆಸರ್ಟ್ ಫ್ಲವರ್’ ಅನ್ನು ಲೇಖಕ ಜಗದೀಶ್ ಕೊಪ್ಪ ಅವರು ಈಗಾಗಲೇ ‘ಮರುಭೂಮಿಯ ಹೂ’ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ. ಆಫ್ರಿಕಾದ ಸಾಹಿತ್ಯ ಅಂದಕೂಡಲೇ ನಮ್ಮ ತಲೆಮಾರಿನವರಿಗೆ ಮೊದಲು ನೆನಪಾಗುವುದು, ಚಿನುವ ಅಚಿಬೆಯ ‘ಥಿಂಗ್ಸ್ ಫಾಲ್ ಅಪಾರ್ಟ್’ ಕೃತಿ ಮತ್ತು ಓಲೆ ಸೊಯಿಂಕನ ಕವಿತೆಗಳು.

‘ಮರುಭೂಮಿಯ ಹೂ’ ಓದಿದವರಿಗೆ ಸೋಮಾಲಿಯಾ ಮತ್ತು ಇಥಿಯೋಪಿಯಾದಲ್ಲಿ ಮುಸ್ಲಿಂ ಸಮುದಾಯದಲ್ಲಿರುವ ಸ್ತ್ರೀ ಸುನ್ನತಿ ಅಥವಾ ‘ಯೋನಿ ಛೇದನ’ವೆಂಬ ಅಮಾನುಷ ಆಚರಣೆಯ ಕುರಿತು ತಿಳಿದಿರುತ್ತದೆ (ಫಿಮೇಲ್ ಜನೈಟಲ್ ಮ್ಯುಟಿಲೇಷನ್/ ಎಫ್‌ಜಿಎಂ). ಬಾಲ್ಯದಲ್ಲಿ ಸ್ವತಃ ಯೋನಿ ಛೇದನಕ್ಕೊಳಗಾಗಿ ದೈಹಿಕವಾಗಿ, ಮಾನಸಿಕವಾಗಿ ನೋವನ್ನು ಅನುಭವಿಸಿದ ವಾರಿಸ್, ಈ ಪದ್ಧತಿಯ ವಿರುದ್ಧ ದೊಡ್ಡ ಹೋರಾಟವನ್ನೇ ಮಾಡುತ್ತಿದ್ದಾರೆ.

ವಾರಿಸ್ ಜೀವನಕತೆ ಸಿನೆಮಾ ಆದಾಗ ಬಾಲ್ಯದ ವಾರಿಸ್ ಪಾತ್ರಕ್ಕೆ ಆಯ್ಕೆ ಆದವಳು ಇಥಿಯೋಪಿಯಾದ ಜಿಬೌಟಿಯ ಸಫಾ ಎಂಬ ಏಳರ ಬಾಲೆ. ಸಿನೆಮಾ ಬಿಡುಗಡೆಯಾದ ನಂತರದ ದಿನಗಳಲ್ಲಿ ಸಫಾ ಕೂಡಾ ಯೋನಿಛೇದನ ಸಂಪ್ರದಾಯಕ್ಕೆ ಬಲಿಪಶುವಾಗುತ್ತಾಳೆ ಅನ್ನಿಸಿದಾಗ ವಾರಿಸ್‌, ಅವಳ ನೆರವಿಗೆ ಧಾವಿಸುತ್ತಾರೆ. ಸಫಾಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ನೋಡಿಕೊಳ್ಳುವುದಲ್ಲದೆ, ಅವಳ ತಂದೆ, ತಾಯಿಗೆ ಆರ್ಥಿಕ ನೆರವಿನ ವಾಗ್ದಾನವನ್ನೂ ಮಾಡುವ ವಾರಿಸ್‌, ಅದಕ್ಕೆ ಪ್ರತಿಯಾಗಿ, ಸಫಾಳನ್ನು ಈ ಅಮಾನುಷ ಕೃತ್ಯಕ್ಕೆ ಒಳಪಡಿಸಬಾರದು ಎಂಬ ಷರತ್ತು ಹಾಕುತ್ತಾರೆ. 

ಹುಡುಗಿ ದೊಡ್ಡವಳಾಗುವ ಮೊದಲೇ ಅವಳ ಲೈಂಗಿಕತೆಯನ್ನು ನಿಯಂತ್ರಿಸಲು ಅವಳ ಜನನಾಂಗದ ಕ್ಲಿಟೋರಿಸ್ ಭಾಗವನ್ನು ಕತ್ತರಿಸಿ, ಯೋನಿದ್ವಾರಕ್ಕೆ ಮೂತ್ರ ವಿಸರ್ಜನೆಗಾಗಿ ಮಾತ್ರ ಚಿಕ್ಕ ಜಾಗವನ್ನು ಬಿಟ್ಟು ಉಳಿದ ಭಾಗವನ್ನು ಹೊಲಿಯುವ ಒಂದು ಅಮಾನುಷ ಕ್ರಿಯೆ ಎಫ್‌ಜಿಎಂ. ಇದನ್ನು ಹಳ್ಳಿಯ ಒಬ್ಬ ವೃದ್ಧೆ ಹಳೆಯ ಬ್ಲೇಡ್ ಬಳಸಿ ಒಡ್ಡೊಡ್ಡಾಗಿ ಮಾಡುತ್ತಾಳೆ. ಎಷ್ಟೋ ಹೆಣ್ಣುಮಕ್ಕಳು ಈ ಕ್ರಿಯೆಯಿಂದಾದ ರಕ್ತಸ್ರಾವದಿಂದಾಗಿ ಮರಣವನ್ನೇ ಹೊಂದುತ್ತಾರೆ. ಸ್ವತಃ ವಾರಿಸ್, ತಮ್ಮ ಸಹೋದರಿಯನ್ನು ಈ ಅನಿಷ್ಟ ಪ್ರಕ್ರಿಯೆಯಲ್ಲಿ ಕಳೆದುಕೊಂಡವರು. ಎಫ್‌ಜಿಎಂ ಮಾಡುವುದರಿಂದ ಹುಡುಗಿಯ ಯೋನಿಪಾವಿತ್ರ್ಯ ಉಳಿದಿದೆ ಎಂದು ಯಾರಾದರೂ ಹೆಣ್ಣಿನ ತಂದೆಗೆ ಹಣ ಕೊಟ್ಟು ಅವಳನ್ನು ಮದುವೆಯಾಗುವುದು ಅಲ್ಲಿ ಬೆಳೆದುಬಂದ ಕೆಟ್ಟ ಪರಂಪರೆ. ವಾರಿಸ್ ಅವರ ಬುಡಕಟ್ಟಿನಲ್ಲಿ ಈ ಮೂಢನಂಬಿಕೆ ಎಷ್ಟು ಬಲವಾಗಿದೆ ಎಂದರೆ, ಹೀಗೆ ಮಾಡದಿರುವ ಹುಡುಗಿಯನ್ನು ಮದುವೆಯಾಗಲು ಯಾರೂ ಮುಂದೆ ಬರುವುದಿಲ್ಲ.

ಸಫಾಳನ್ನು ಇದರಿಂದ ರಕ್ಷಿಸಲು ಮತ್ತು ಅಂತಹ ಹಲವಾರು ಹೆಣ್ಣು ಮಕ್ಕಳ ಹೆತ್ತವರಿಗೆ ಅರಿವು ಮೂಡಿಸಲು, ತಾವು ಸ್ಥಾಪಿಸಿದ ‘ಡೆಸರ್ಟ್ ಫ್ಲವರ್’ ಸಂಸ್ಥೆಯ ಮೂಲಕ ವಾರಿಸ್ ನಡೆಸುವ ಪ್ರಯತ್ನದ ಕಥೆಯೇ ಈ ಕೃತಿ. ಪುಟ್ಟ ಹುಡುಗಿ ಸಫಾ, ವಾರಿಸ್‌ಗೆ ಬರೆಯುವ ಪತ್ರದ ಮೂಲಕ ಆರಂಭವಾಗುವ ಕೃತಿ ‘ಸೇಫ್ ಆದ ಸಫಾ’ ಎಂಬ ಅಧ್ಯಾಯದೊಡನೆ ಮುಗಿಯುತ್ತದೆ. ‘ಡೆಸರ್ಟ್ ಫ್ಲವರ್’ ಚಿತ್ರ ತಯಾರಿಕೆಯ ಸಂದರ್ಭದಲ್ಲಿ ಚಿಕ್ಕ ವಯಸ್ಸಿನ ವಾರಿಸ್ ಪಾತ್ರಕ್ಕಾಗಿ ಬಾಲಕಿಯನ್ನು ಹುಡುಕಲು ವಾರಿಸ್ ತಮ್ಮ ಸಹಾಯಕಿಯೊಡನೆ ಯುರೋಪ್‌ನಿಂದ ಇಥಿಯೋಪಿಯಾದ ಜಿಬೌಟಿಗೆ ಬರುತ್ತಾರೆ. ಅಲ್ಲಿ ಸಫಾಳ ಆಯ್ಕೆಯ ನಂತರ ಅವಳ ತಂದೆ ಇದ್ರೀಸ್‌ ದುಡ್ಡು ಪಡೆದ ಬಳಿಕವೇ ನಟನೆಗೆ ಒಪ್ಪಿಗೆ ಕೊಡುತ್ತಾನೆ.

ಸಫಾಳಿಗೆ ಯೋನಿಛೇದನ ಕ್ರಿಯೆ ಆಗಿದೆಯೇ ಎಂದು ಕೇಳಿದಾಗ, ‘ಇಲ್ಲ ಆದಷ್ಟು ಬೇಗ ಮಾಡಿಸಬೇಕು, ಹಣ ಇಲ್ಲದಿರುವುದರಿಂದ ನಿಂತುಹೋಗಿದೆ. ಅವಳಿಗೆ ಯೋನಿಛೇದನ ಮಾಡಿಸಿದರೆ ಮದುವೆಯಲ್ಲಿ ವಧುದಕ್ಷಿಣೆಯಾಗಿ ನಮಗೆ ಹಣ ಸಿಗುತ್ತದೆ’ ಎಂದು ಹೇಳುತ್ತಾನೆ. ಹಾಗೆ ಮಾಡುವುದರಿಂದ ಆಗುವ ಅಪಾಯವನ್ನು ಆತನಿಗೆ ತಿಳಿಸುವ ಯತ್ನ ನಡೆಯುತ್ತದೆ. ಸಫಾಳ ನಟನೆಗೆ ಒಪ್ಪಂದ ಮಾಡಿಕೊಳ್ಳುವಾಗ ಅವಳಿಗೆ ಯೋನಿಛೇದನ ಮಾಡಿಸಬಾರದು ಎಂಬ ಕರಾರನ್ನೂ ಹಾಕಲಾಗುತ್ತದೆ. ಆದರೆ, ಚಿತ್ರದ ಕೆಲಸ ಮುಗಿದು ವಾರಿಸ್ ಅವರು ಪ್ಯಾರಿಸ್‌ಗೆ ಮರಳಿದ ಕೆಲವು ಸಮಯದ ನಂತರ ಸಫಾಳ ತಂದೆ ಕರಾರು ಮುರಿದು, ಅವಳನ್ನು ಎಫ್‌ಜಿಎಂಗೆ ಗುರಿಪಡಿಸಬಹುದು ಎಂಬ ಸುದ್ದಿ ಬಂದಾಗ ಅವರು ಜಿಬೌಟಿಗೆ ಧಾವಿಸುತ್ತಾರೆ. ಇದ್ರೀಸ್‌ನ ಹಣದ ದಾಹವನ್ನು ಮತ್ತೆ ತಣಿಸಬೇಕಾಗುತ್ತದೆ.

ಸಫಾಳ ಕುಟುಂಬ ವಾಸವಾಗಿರುವ ಬಲ್ಬಲ್ಲ ಎಂಬ ಕೊಳೆಗೇರಿಯ ವಿವರಗಳು ಇಥಿಯೋಪಿಯಾದ ಬಡತನದ ಕಟುವಾಸ್ತವದ ಚಿತ್ರಣವನ್ನು ಕೃತಿಯಲ್ಲಿ ಸಮರ್ಥವಾಗಿ ಕಟ್ಟಿಕೊಟ್ಟಿವೆ. ಈ ಕೃತಿ ನೈಜ ಅನುಭವದ ಕಥೆಯಾದರೂ ಕಾದಂಬರಿಯಂತೆ ಓದಿಸಿಕೊಳ್ಳುತ್ತದೆ. ಸಫಾಳ ಕುರಿತು ಕೆಲವು ಅಧ್ಯಾಯಗಳು, ಇನ್ನುಳಿದ ವಿವರಗಳು ವಾರಿಸ್ ಅವರ ಹೋರಾಟದ ಕಥೆಗೆ ಮೀಸಲಾಗಿವೆ. ಇಥಿಯೋಪಿಯಾದ ಕುರಿತು ಓದುವಾಗ ಅಲ್ಲಿನ ಜೀವನ ಮತ್ತು ಸಂಸ್ಕೃತಿಯ ಕುರಿತು ಹಲವು ವಿಚಾರಗಳು ಕಣ್ಮುಂದೆ ಮೆರವಣಿಗೆ ಹೊರಡುತ್ತವೆ. ಇಥಿಯೋಪಿಯಾದ ಸಮಾಜ, ಸಂಸ್ಕೃತಿ, ಧಾರ್ಮಿಕ ಮೂಢನಂಬಿಕೆಗಳ ಕುರಿತು ಮಾತ್ರವಲ್ಲದೆ, ಇಪ್ಪತ್ತೊಂದನೇ ಶತಮಾನದಲ್ಲೂ ಹೆಣ್ಣಿನ ಮೇಲೆ ನಡೆಯುವ ಕ್ರೌರ್ಯವನ್ನು ತಡೆಯುವುದು ಎಷ್ಟೊಂದು ಕಷ್ಟ ಎಂಬ ಅರಿವನ್ನು ಮೂಡಿಸುವಲ್ಲಿ ಕೃತಿ ಯಶಸ್ವಿಯಾಗಿದೆ.

‘ಸಫಾ’ ಓದಿದ ನಂತರ ಮತ್ತೆ ‘ಡೆಸರ್ಟ್ ಫ್ಲವರ್’ ಸಿನೆಮಾ ನೋಡಿದೆ. ಆ ಪುಟ್ಟ ಹುಡುಗಿ, ಮುದುಕನೊಂದಿಗೆ ಮದುವೆಯಾಗದಂತೆ ನೋಡಿಕೊಳ್ಳಲು ತಾಯಿಯೇ ಮನೆಯಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುವುದು,  ಮರುಭೂಮಿಯಲ್ಲಿ ಭಯದಿಂದಲೇ ಹಗಲು ರಾತ್ರಿ ಓಡಿ, ಚಿಕ್ಕಮ್ಮನ ಮನೆಗೆ ಬರುವುದು, ಅಲ್ಲಿಂದ ಅವರ ಕುಟುಂಬದ ಜತೆ ಇಂಗ್ಲೆಂಡ್‌ಗೆ ಹೋಗುವುದು, ಕೆಲವು ವರ್ಷಗಳ ನಂತರ ಅವಳ ತಿಂಗಳ ಯಾತನೆಯ ಸಂದರ್ಭದಲ್ಲಿ ಆಸ್ಪತ್ರೆಗೆ ಹೋದಾಗ ಅಲ್ಲಿಯ ವೈದ್ಯರಿಗೆ ಇವಳ ಸಮಸ್ಯೆ ಏನೆಂದು ತಿಳಿಸಲು (ಭಾಷಾಂತರಕ್ಕಾಗಿ) ಆಸ್ಪತ್ರೆಯಲ್ಲಿದ್ದ ಆಫ್ರಿಕಾದ ಕೆಲಸಗಾರನು ವೈದ್ಯರಿಗೆ ವಿವರಿಸುವ ಬದಲು ಅವಳನ್ನೇ ನಿಂದಿಸುವುದು... ಒಂದೊಂದು ದೃಶ್ಯ ಹಾದುಹೋದಾಗಲೂ ಕಣ್ಣುಗಳು ಹನಿಗೂಡುತ್ತವೆ. ಹೌದು, ಯೋನಿಛೇದನದ ನೋವು ಅವಳದೇ ಸಮುದಾಯದ ಗಂಡಿಗೇ ಅರ್ಥವಾಗುವುದಿಲ್ಲ.

ವಾರಿಸ್ ವಿಶ್ವಸಂಸ್ಥೆಯ ರಾಯಭಾರಿಯಾಗಿ ಎಫ್‌ಜಿಎಂ ವಿರುದ್ಧ ಕೆಲಸ ಮಾಡಿದ್ದಾರೆ. ಮಾನವ ಹಕ್ಕುಗಳ ಹೋರಾಟಗಾರರಾಗಿ ಕೆಲಸ ಮಾಡಲು ತಮ್ಮ ಮಾಡೆಲಿಂಗ್ ವೃತ್ತಿಯನ್ನು ಬಿಟ್ಟು ಪೂರ್ಣಕಾಲಿಕವಾಗಿ ತೊಡಗಿಸಿಕೊಂಡಿದ್ದಾರೆ. ಅವರ ಈ ಅಪರೂಪದ ಕೃತಿಯನ್ನು ಪ್ರಸಾದ್‌ ಸಮರ್ಥವಾಗಿ ಅನುವಾದಿಸಿದ್ದಾರೆ. 

ಎಲ್.ಸಿ. ಸುಮಿತ್ರಾ

ಕೃಪೆ : ಪ್ರಜಾವಾಣಿ (2020 ಆಗಸ್ಟ್ 30)

Related Books