ಅಜ್ಞಾತನೊಬ್ಬನ ಆತ್ಮಚರಿತ್ರೆ

Author : ಕೃಷ್ಣಮೂರ್ತಿ ಹನೂರು

Pages 232

₹ 110.00




Year of Publication: 2015
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560087
Phone: 080-22107789

Synopsys

ಟಿಪ್ಪು ಸುಲ್ತಾನನ ಕಾಲದ ಒಬ್ಬ ದಳವಾಯಿಯ ಕತೆಯೆಂದು ಆರಂಭವಾಗುವ ಈ ಕೃತಿಯೂ ಕಥೆಯ ಇತಿಹಾಸ, ಚರಿತ್ರೆ, ದಂತಕತೆ, ಜಾನಪದ ಅಖ್ಯಾಯಿಕೆ, ಕಾವ್ಯಮಯ ಸೌಂದರ್ಯವನ್ನೆಲ್ಲ ಬಳಸುತ್ತಾ ಒಂದರಿಂದ ಇನ್ನೊಂದಕ್ಕೆ ಸಲೀಸಾಗಿ ಸಾಗುತ್ತಾ , ದೇಶ ಕಾಲಗಳ ಸೀಮ ಗೆರೆಯನ್ನು ದಾಟುತ್ತಾ, ಅವುಗಳನ್ನು ಹಿಮ್ಮೆಟ್ಟುತ್ತಾ ಮುಂದೆ ಸಾಗುತ್ತದೆ. ಈ ಕೃತಿಯ ಸ್ವರೂಪ ವಿಸ್ಮಯಗೊಳಿಸುವಷ್ಟು ಹೊಸತರದಿಂದ ಕೂಡಿದೆ. ಈ ಕೃತಿಯಲ್ಲಿ ಒಳಗೊಂಡ ಎಲ್ಲಾ ಪಾತ್ರಗಳ, ಸನ್ನಿವೇಶಗಳ ಭಾವನಾತ್ಮಕ ತಳಮಲಗಳ ವಾಸ್ತವಿಕತೆ ಕೂಡಾ ಒಮ್ಮೆ ಓದಲು ಪ್ರಾರಂಭಿಸಿದರೆ ಓದುಗರನ್ನು ಕೊನೆಯ ಪುಟದವರೆಗೂ ಹಿಡಿದಿಟ್ಟುಕೊಳ್ಳುತ್ತದೆ. ಲೇಖಕ ಕೃಷ್ಣಮೂರ್ತಿ ಹನೂರರ ಈ ಕಾದಂಬರಿಯು ಲ್ಯಾಟಿನ್ ಅಮೆರಿಕನ್ ಕತೆ ಕಾದಂಬರಿಗಳಲ್ಲಿ ಕಾಣಸಿಗುವ ವಿಶೇಷ ಹೊಳಪನ್ನು ಓದುಗರ ಮುಂದೆ ತೆರೆದಿಡುತ್ತದೆ.

About the Author

ಕೃಷ್ಣಮೂರ್ತಿ ಹನೂರು

ಜಾನಪದ ತಜ್ಞ, ಕತೆಗಾರ, ಕಾದಂಬರಿಕಾರ ಕೃಷ್ಣಮೂರ್ತಿ ಹನೂರು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಮಾಡಿ ಸಂದರ್ಶಕ ಪ್ರಾಧ್ಯಾಪಕರಾಗಿ. 40 ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವರ ಆಜ್ಞಾತನೊಬ್ಬನ ಆತ್ಮ ಚರಿತ್ರೆ ಕಾದಂಬರಿ ಓದುಗರ ಮೇರೆಯಿಲ್ಲದ ಮೆಚ್ಚುಗೆ ಪಡೆದಿದೆ. ಅದೀಗ ಇಂಗ್ಲೀಷ್ ಗೆ ಅನುವಾದಗೊಂಡು ಪ್ರಕಟವಾಗಿದೆ. ಕೇರಿಗೆ ಬಂದ ಹೋರಿ, ಕತ್ತಲಲ್ಲಿ ಕಂಡ ಮುಖ ಮತ್ತು ಕಳೆದ ಮಂಗಳವಾರ ಮುಸ್ಸಂಜೆ ಅವರ ಕಥಾಸಂಕಲನಗಳು. ಬಾರೋ ಗೀಜಗನೆ, ನಿಕ್ಷೇಪ ಅವರ ಕಾದಂಬರಿಗಳು. ಜಾನಪದಕ್ಕೆ ಸಂಬಂಧಿಸಿದಂತೆ ಹಲವಾರು ಕೃತಿಗಳನ್ನು ಸಂಪಾದಿಸಿದ್ದಾರೆ. ಅವರು ಸಂಪಾದಿಸಿದ ವಿಶ್ವಕೋಶ ಎನ್ ಸೈಕ್ಲೋಪೀಡಿಯಾ ಆಫ್ ಫೋಕ್ ಕಲ್ಚರ್ ...

READ MORE

Reviews

ಚರಿತ್ರೆಯೊಂದಿಗೆ ಸಲ್ಲದ ಹುಡುಗಾಟಿಕೆ

೨೦೧೨ರಲ್ಲಿ ಮೊದಲು ಪ್ರಕಟವಾದ ಈ ಕೃತಿ (ಈಗ ಏಳನೇ ಮುದ್ರಣ ಕಂಡಿದೆ. ನನ್ನ ಆಪ್ತ ಮಿತ್ರರಲ್ಲೊಬ್ಬರಾದ ಇದರ ಲೇಖಕ ಕೃಷ್ಣಮೂರ್ತಿ ಹನೂರರ ಇದರ ಮೊದಲ ಮುದ್ರಣಕ್ಕೆ ಮುನ್ನವೇ ನನಗೆ ಇದರ ಹಸ್ತಪ್ರತಿ ಕಳಿಸಿ ನನ್ನ ಅಭಿಪ್ರಾಯ ಕೇಳಿದ್ದರು. ಈ ಕೃತಿ ನನಗೆ ಇಷ್ಟವಾಗಿಲ್ಲವೆಂದು ನಾನು ಅವರಿಗೆ ಆಗ ತಿಳಿಸಿದ್ದೆ. ಆದರೆ ಈ ಕೃತಿ ಕಾರ್ನಾಡ್ ಮತ್ತು ಅನಂತಮೂರ್ತಿಯವರ ಬೆನ್ನುಡಿಗಳ ರೂಪದ ಅರ್ಹತಾ ಪತ್ರಗಳೊಂದಿಗೆ ಪ್ರಕಟವಾಗಿ ವಿಮರ್ಶಕ ಮತ್ತು ಓದುಗರಿಬ್ಬರ ವಲಯದಲ್ಲೂ ಜಯಭೇರಿ ಬಾರಿಸಿತು. ಇದರ ಸದರಿ ಏಳನೇ ಮುದ್ರಣವೇ ಇದಕ್ಕೆ ಸಾಕ್ಷಿ.

ಹನೂರರು ಮೊನ್ನೆ 'ಈಗ ಒಂದಿಷ್ಟು ಬದಲಾವಣೆ ಮತ್ತು ವಿಸ್ತರಣೆ ಮಾಡಿರುವೆ. ಈಗ ನಿಮಗೆ ಇಷ್ಟವಾಗಬಹುದು; ಓದಿ ನೋಡಿ' ಎಂದು ಈ ಏಳನೇ ಮುದ್ರಣವನ್ನು ನನಗೆ ಕಳಿಸಿದ್ದಾರೆ. ಕೃತಿಯ “ಜಯಭೇರಿ ಯ ಹಿನ್ನೆಲೆಯಲ್ಲಿ ಎರಡು ದಿನ ಪಟ್ಟಾಗಿ ಕೂತು ಓದಿದೆ, ಆದರೆ ನನ್ನ ಅಭಿಪ್ರಾಯ ಕಿಂಚಿತ್ತೂ ಬದಲಾಗಲಿಲ್ಲ, ಏಕೆಂದು ನನ್ನ ಹಳೆಯ ಅಭಿಪ್ರಾಯಗಳನ್ನೇ ಹೊಸದಾಗಿ ಹೇಳುವುದಾದದರೆ, ಈ ಕಥೆಯ ನಿರೂಪಕನ ವ್ಯಕ್ತಿತ್ವ ಮತ್ತು ಹಲವೆಡೆ ತಾನಿಲ್ಲದೆಡೆಯ ಕಥೆಯನ್ನು ಹೇಳುವ ಮೂಲಕ ಅನುಮಾನಾಸ್ಪದವೂ ಆಗಿರುವ ಆತನ ನಿರೂಪಣೆಯೇ ವಿಶ್ವಾಸಾರ್ಹವೆನಿಸುವುದಿಲ್ಲ. ಎರಡನೆಯ ತರಗತಿಯವರೆಗೆ ಓದಿರುವನೆಂದು ಹೇಳಲಾಗುವ ಕಥಾ ನಾಯಕನೂ ಆದ ಈ ನಿರೂಪಕ ಜೀವನಪೂರ್ತಿ ಲೇಖಕರ ಆಗತ್ಯಗಳ ಹೊರತಾಗಿ ಇನ್ನಾವ ಲಂಗು ಲಗಾಮು ಇಲ್ಲದ ವರ್ಣಾನಾತೀತ ಕ್ರೌರ್ಯ ಮತ್ತು ತೃಣ ಮಾತ್ರವೂ ವಿಚಾರವಿಲ್ಲದೆ ಭಂಡ ಬಾಳನ್ನು ನಡೆಸಿಕೊಂಡು ಬಂದವನಾಗಿ ತನ್ನ ಆತ್ಮ ಚರಿತ್ರೆಯನ್ನು ಅದನ್ನು ಇನ್ನೊಬ್ಬರು ಹಸನುಗೊಳಿಸಿ ಪ್ರತಿ ಮಾಡಿದ್ದಾರೆಂಬ ತಂತ್ರ ಬಳಕೆಯ ಮತ್ತು ಕೊನೆಯಲ್ಲಿ ಕೃತಕವಾಗಿ ಸೇರಿಸಿದಂತಿರುವ ಅಧ್ಯಾತ್ಮಿಕ ಒಲವಿನ ಅಧ್ಯಾಯದ ಹೊರತಾಗಿಯೂ-ಬರೆಯುವ ದರ್ದು ಇರುವ ಯಾವ ಲಕ್ಷಣಗಳೂ ಈ ನಿರೂಪಣೆಯಲ್ಲಿ ಕಾಣುವುದಿಲ್ಲ.

ಇನ್ನು ಹೈದರ್-ಟಿಪ್ಪು ರಾಜ್ಯಭಾರದಲ್ಲಿ ಈ ಇಬ್ಬರಿಗೂ-ಕೆಲವೊಮ್ಮೆ ದಿವಾನ್ ಪೂರ್ಣಯ್ಯನವರಿಗೂ-ಆಪ್ತ ಸಲಹಾಕಾರನಂತೆ ಚಿತ್ರಿತವಾಗಿರುವ ಈ ಹೆಸರಿಲ್ಲದ ನಿರೂಪಕ ವ್ಯಕ್ತಿತ್ವದ ಹಿನ್ನೆಲೆಯನ್ನು ಲೇಖಕರು ಚಿತ್ರಿಸಿರುವ ಪರಿ ನೋಡಿದರೆ, ಈ ಹೈದರ್-ಟಿಪ-ಪೂರ್ಣಯ್ಯನವರ ಆಡಳಿತ ವೈಖರಿಯನ್ನು ಚರಿತ್ರೆ ನಮಗೆ ಹೇಳುವ ಸಂಗತಿಗೆ ವಿರುದ್ಧವಾಗಿ, ಹುಡುಗಾಟಿಕೆಯ ಮಟ್ಟಕ್ಕೆ ಇಳಿಸಿಬಿಟ್ಟಿದೆ ಎನಿಸದಿರದು, ಇವರ ರಾಜ್ಯಭಾರದಲ್ಲಿ ಎತ್ತಂದರತ್ತ ಕತ್ತಿ ಬೀಸಿ ನಡೆಸುವ ಕೊಲೆ, ಲೂಟಿ, ಹೆಣ್ಣು ಮಕ್ಕಳ ಅಪಹರಣ ಇತ್ಯಾದಿ ದುರ್ವ್ಯವಹಾರಗಳ ಹೊರತಾಗಿ ಇನ್ನೇನೂ ನಡದೇ ಇಲ್ಲವೇನೋ ಎಂಬ ಅಭಿಪ್ರಾಯ ಮೂಡುತ್ತದೆ. ಕಥಾ ನಡಿಗೆಯ ಈ ಏಕಪಕ್ಷೀತೆಯ ಕಾರಣಂದಿಂದ ಕಥೆಯಲ್ಲೇ ಹುಟ್ಟುವ ಅನೇಕ ಪ್ರಶ್ನೆಗಳು, ವಿಸಂಗತಿಗಳು ಉತ್ತರವಿಲ್ಲದೆ ಹಾಗೇ ಉಳಿದುಹೋಗುವುದು ಸಹಜ. ಇಂತಹವು ಇಲ್ಲಿ ಹಲವಿವೆ.

ಲೇಖಕರು ತಮ್ಮ ಮೊದಲ ಮಾತುಗಳಲ್ಲಿ ಹೈದರ್, ಟಿಪ್ಪು ಮತ್ತು ಶ್ರೀರಂಗಪಟ್ಟಗಳೆಂಬುವು ಇಲ್ಲಿ ನಿಮಿತ್ತ ಮಾತ್ರವೆಂದು ಹೇಳುವರಾದರೂ, ಇನ್ನೂ ಪೌರಾಣಿಕವಾಗದಿರುವ ಇತ್ತೀಚಿನ ಚರಿತ್ರೆಯ ಭಿತ್ತಿಯಲ್ಲೇ ತಮ್ಮ ಕಥೆಯನ್ನು ಸ್ಥಿತಗೊಳಿಸಿ ಈ ಮೂರಕ್ಕೂ ಬಹುಮುಖ್ಯ ಪಾತ್ರವಿರುವಂತೆ ಬರವಣಿಗೆಯನ್ನು ವಿನ್ಯಾಸಗೊಳಿಸಿರುವ ಲೇಖಕರು ಚರಿತ್ರೆಗೂ ಜವಾಬ್ದಾರರಾಗಿರಬೇಕಾಗುತ್ತದೆ. ಇಲ್ಲಿ ಕಾಣುವ ಅಪ್ಪಟ ಗಾಂವುಟಿ ಮಾತುಗಾರಿಕೆ ಮತ್ತು ಎಂತಹುದೇ ವೈವಿಧ್ಯಮಯ ಜಾನಪದ ಜ್ಞಾನದ ಪ್ರದರ್ಶನಗಳ ಮೂಲಕ ಯಾರೂ ಮರುಚರಿತ್ರೆ ಬರೆಯಲಾರರು; ಬರೆಯಲಾಗದು ಕೂಡ, ನಮ್ಮ ನಡುವೆ ಅಪಾರ ಜಾನಪದ ತಿಳುವಳಿಕೆಗೆ ಹೆಸರಾದ ಹನೂರರು ಇಲ್ಲಿ ಇಂತಹ ಪ್ರಯತ್ನ ಮಾಡಿದಂತಿದೆ. ಜೊತೆಗೆ ಅವರಿಗೆ ಪ್ರಿಯವಾದ ಅರಮನೆ ಎಂದರೆ ಲೂಟಿ, ಹಾದರ,ಬಡಜನರ ಶೋಷಣೆ, ಯುದ್ಧವೆಂಬ ಆದರೆ ಸಾರಾ ಸಗಟಾದ ನಂಬಿಕೆಯನ್ನಾಧರಿಸಿದ ಸರಳೀಕೃತ ಇತಿಹಾಶ ಮೀಮಾಂಸೆಯನ್ನು ಮಂಡಿಸಲು ಇದೊಂದು ವೇದಿಕೆಯೂ ಆದಂತಿದೆ. ಆದರೆ ಇಂತಹ ಸರಳ ಭಾವುಕತೆ ಜನಪ್ರಿಯ ಬರವಣಿಗೆಯ ಪಟ್ಟುಗಳನ್ನು ಸೃಷ್ಟಿಸಬಹುದೇ ಹೊರತು ಕಲಾಕೃತಿಯೊಂದನ್ನಲ್ಲ.

-ಡಿಸ್ಸೆನ್

ಕೃಪೆ: ಹೊಸ ಮನುಷ್ಯ ಆಗಸ್ಟ್‌ 2020

Related Books