ಗೌರಿಯರು

Author : ಅಮರೇಶ ನುಗಡೋಣಿ

Pages 176

₹ 100.00
Year of Publication: 2021
Published by: ಪಲ್ಲವ ಪ್ರಕಾಶನ
Address: # ಚನ್ನಪಟ್ಟಣ ಅಂಚೆ, ಎಮ್ಮಿಗನೂರು (ವಯಾ) ಬಳ್ಳಾರಿ-583113. Phone: 9840354507.

Synopsys

ಲೇಖಕ ಡಾ. ಅಮರೇಶ ನುಗಡೋಣಿ ಅವರ ಕಾದಂಬರಿ-ಗೌರಿಯರು. ಸಂಶೋಧಕ ಡಾ. ವೀರಣ್ಣ ಬಡಿಗೇರ ಅವರು ಕೃತಿಯ ಕುರಿತು ‘ಪ್ರಾದೇಶಿಕ ಸೊಗಡಿನ ಕಥಾವಸ್ತುವನ್ನು ವಿಭಿನ್ನ ಸ್ವರೂಪದ ಶೈಲಿಯಲ್ಲಿ ಹಾಗೂ ಸ್ತ್ರೀವಾದಿ ನೆಲೆಯಲ್ಲಿ ಈ ಕಾದಂಬರಿಯು ಸುಂದರವಾಗಿ ಹಾಗೂ ತುಂಬಾ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಮೂವರು ಮಹಿಳೆಯರ ದಾಂಪತ್ಯ-ಕೌಟುಂಬಿಕ ಪರಿಸರವನ್ನು ಕೇಂದ್ರವಾಗಿಸಿಕೊಂಡು ರಚಿತವಾದ ಈ ಕೃತಿಯು ಕುತೂಹಲ ಮೂಡಿಸುತ್ತದೆ. ಸರಳ ಭಾಷೆ, ಆಕರ್ಷಕ-ಪರಿಣಾಮಕಾರಿ ಶೈಲಿ, ಕಥಾವಸ್ತು, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿಯ ಕಲಾತ್ಮಕತೆಯಿಂದ ಓದುಗರ ಗಮನ ಸೆಳೆಯುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. 

ಲೇಖಕ ಡಾ. ಕೆ. ರವೀಂದ್ರನಾಥ ಅವರು ಕಾದಂಬರಿ ಕುರಿತು ‘ ಗಂಡು-ಹೆಣ್ಣಿನ ದಾಂಪತ್ಯ-ಕುಟುಂಬವನ್ನು ವ್ಯಾಖ್ಯಾನಿಸುವುದಕ್ಕೆ ಈ ಕಾದಂಬರಿ ಯತ್ನಿಸಿದೆ. ಮೂವರು ಮಹಿಳೆಯರು ತಮ್ಮ ಬದುಕಿನಲ್ಲಿ ಎದುರಾಗುವ ಅಡೆ-ತಡೆಗಳನ್ನು ಎದುರಿಸುವ ಹಾಗೂ ಆಧುನಿಕ ಕಾಲದ ಸ್ವಾಯತ್ತತೆಯನ್ನು ಉಳಿಸಿಕೊಂಡು ಹೋಗುವ ಅನಿವಾರ್ಯತೆಯ ಭಾಗವಾಗಿ ಅವರ ಹೋರಾಟದ ಚಿತ್ರಣವಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

About the Author

ಅಮರೇಶ ನುಗಡೋಣಿ
(02 June 1969)

ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನುಗಡೋಣಿಯಲ್ಲಿ 1960 ರಲ್ಲಿ ಜನಿಸಿದ ಅಮರೇಶ ನುಗಡೋಣಿಯವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೇವನೂರು ಮಹಾದೇವರ ನಂತರದ ಲೇಖಕರಲ್ಲಿ ಶೋಷಣಾವ್ಯವಸ್ಥೆಯ ವಿವಿಧ ಮುಖಗಳನ್ನು ನುಗಡೋಣಿಯವರಷ್ಟು ಸಮರ್ಥವಾಗಿ ಚಿತ್ರಿಸಿದ ಲೇಖಕರು ಇನ್ನೊಬ್ಬರಿಲ್ಲ ಎಂದು ಹೇಳಬಹುದು. ಸಾಹಿತ್ಯದ ಹಲವು ಮಜಲುಗಳಲ್ಲಿ ಕೆಲಸ ಮಾಡಿರುವ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವರ ಕವನ ಸಂಕಲನಗಳು- ನೀನು, ಅವನು, ಪರಿಸರ. ಕಥಾ ಸಂಕಲನ- ಮಣ್ಣು ಸೇರಿತು ಬೀಜ, ಅರಿವು (ನವಸಾಕ್ಷರರಿಗಾಗಿ), ತಮಂಧದ ಕೇಡು, ಮುಸ್ಸಂಜೆಯ ಕಥಾನಕಗಳು, ಸವಾರಿ, ಹಾಗೂ ವ್ಯಕ್ತಿ ಪರಿಚಯ ಕೃತಿಯಲ್ಲಿ ಶ್ರೀಕೃಷ್ಣ ಆಲನಹಳ್ಳಿ (ಬದುಕು ...

READ MORE

Reviews

’ಗೌರಿಯರ’ ಕೃತಿಯ ವಿಮರ್ಶೆ

ಕಾಡುವ ತಣ್ಣನೆತ ಕಥೆಗಾರಿಕೆಯಲ್ಲಿನ ಬಿರುಕುಗಳು

ಕಥೆಗಳನ್ನೇ ಕಾದಂಬರಿಗಳಂತೆ ಬರೆಯುವ ಅಮರೇಶ ನುಗಡೋಣಿಯವರು ಕಾದಂಬರಿಯಾಗಿಯೇ ಬರೆದಿರುವ ಎರಡನೆಯ ಕೃತಿ ಇದು. ಇದರ ಶೀರ್ಷಿಕೆಯಿ ಸೂಚಿಸುವಂತೆ ಇಂದು ನಮ್ಮ ಸಮಾಜದಲ್ಲಿ ಮದುವೆ ಎಂಬ ಸಂಸ್ಥೆ ಎದುರಿಸುತ್ತಿರುವ ಬಿಕ್ಕಟನ್ನು ನಿರೂಪಿಸುವ ಪ್ರಯತ್ನವಾಗಿದೆ. ಇದರ ಹಿನ್ನೆಲೆಯಲ್ಲಿರುವ ಜಾಗತೀಕರಣದ ತಲ್ಲಣಗಳನ್ನೂ ಇದು ಸಾವಯವ ವಿವರಗಳಾಗಿ ಚಿತ್ರಿಸುತ್ತಾ ಒಟ್ಟು ಕಥಾನಕ ಒಂದು ಸಂಕೀರ್ಣತೆಯನ್ನು ಪಡೆಯುತ್ತದೆ. ಇಡೀ ಕಥೆ ಹೆಣ್ಣು ಮಕ್ಕಳ ತಾಯಿಯೊಬ್ಬಳು ಮದುವೆಯಾದ-ಆದರೆ ಆ ಮದುವೆಗಳು ಆ ತಾಯಿಗೆ ಗೊತ್ತಿಲ್ಲದಂತೆ ಒಂದೊಂದು ಕಾರಣಕ್ಕಾಗಿ ಮುರಿದು ಬಿದ್ದಿರುವ ಹೆಣ್ಣು ಮಕ್ಕಳನ್ನು ತೌರಿಗೆ ಕರೆಸಿ ನಡೆಸುವ ಗೌರಮ್ಮನ ನೋಪಿ ಪೂಜೆಯ ಎಲ್ಲ ಸಂಭ್ರಮ ಮತ್ತು ವಿವರಗಳೊಂದಿಗೆ ಮುಖಾಮುಖಿಯಾಗುತ್ತಾ ನಿರೂಪಿತವಾಗುತ್ತಾ ಹೋಗಿ ಒಂದು ತಣ್ಣನೆಯ ವಿಷಾದ ಹುಟ್ಟುಸುತ್ತದೆ. ಆದರೆ ಇದೆಲ್ಲ ಸರಳ: ರೇಖಾತ್ಮಕವಾಗಿ ನಿರೂಪಿತವಾಗಿರುವ ಈ ಕಥೆಯನ್ನು ಕಥೆಗಾರ ಹೇಳುವಂತೆ ಒಪ್ಪಿದಾಗ ಮಾತ್ರ ಆಗುವಂಥದ್ದು.

ನುಗಡೋಣಿಯವರು ಇಲ್ಲಿ ತಮ್ಮ ಬಹುತೇಕ ಕಥೆಗಳಲ್ಲಿಯಂತೆ ಹೈದರಾಬಾದ್ ಕರ್ನಾಟಕ ಮೂಲದ ಸಾಮಾನ್ಯ ಲಿ೦ಗಾಯತ ಕೃಷಿ ಕುಟುಂಬದ ಚಿತ್ರವೊಂದನ್ನು ಆದರ ಬೇರು ಬಿಳಲುಗಳ ದಟ್ಟ ವಿವರಗಳೊಂದಿಗೆ ಕಟ್ಟಿಕೊಡುತ್ತಾ ಆದು 21ನೇ ಶತಮಾನದ ನಗರೀಕರಣದ ಬಿಸಿಗೆ ಸಿಕ್ಕಿ ಪಡುವ ಪಾಡನ್ನು ಪಳಗಿದ ಕಥೆಗಾರನ ನಿರ್ಲಿಪ್ತಿಯಲ್ಲಿ ಹೇಳುತ್ತಾ ಹೋಗುತ್ತಾರೆ. ಆದರೆ ಈ ನಿರ್ಲಿಪ್ತತೆ ಹಲವೆಡ ಕಥಾವಿಧಾನದೊಳಗೂ ಪ್ರವೇಶಿಸಿದಂತಾಗಿ ಕಥಾ ಧಾರೆಯಲ್ಲಿ ಹಲವು ಖಾಲಿ ಜಾಗಗಳನ್ನು ನಿರ್ಮಿಸಿ ಕಾದಂಬರಿ ಒಂದು ಉದ್ದೇಶಪೂರ್ವಕ `ರಚನೆ'ಯಾಗಿ ಕಾಣತೊಡಗುತ್ತದೆ; ಕಥೆಯ ಪರಿಣಾಮಶೀಲತೆ ಕುಗ್ಗುತ್ತಾ ಹೋಗುತ್ತದೆ, ಎಂತಹ ತಂದೆಯಾದರೂ ತಾನು ಹುಟ್ಟಿಸಿ ಸಾಕಿದ ಹೆಣ್ಣುಮಕ್ಕಳು ಇದ್ದಕ್ಕಿದ್ದಂತೆ ಒಮ್ಮೆ ತಮ್ಮ ಡೈವೋರ್ಸ್ನ ಸುದ್ದಿ ಹೇಳಿದಾಗ ತಲ್ಲಣಗೊಳ್ಳುವುದಿಲ್ಲವೆ? ಎಂದು ಆಶ್ಚರ್ಯಗೊಳ್ಳುವನ್ನು ಇಲ್ಲಿ ಕಥೆಗಾರಿಕೆಯ ಈ ನಿರ್ಲಿಪ್ತಿ ತಣ್ಣಗೆ ಓದುಗನನ್ನು ಕೊರೆಯುತ್ತದೆ. ಇನ್ನೂ ವಿಚಿತ್ರವೆಂದರೆ ಇಲ್ಲಿ ಬರುವ, ಊರುಬಿಟ್ಟು ಓದು-ಉದ್ಯೋಗ-ದಾಂಪತ್ಯಗಳ ಕಾರಣಗಳಿಂದಾಗಿ ನಗರಗಳನ್ನು ಸೇರಿರುವ ಮೂವರು ಹೆಣ್ಣುಮಕ್ಕಳ ಮದುವೆ-ದಾಂಪತ್ಯಗಳ ಪರಿಸ್ಥಿತಿ, ಮೂಲತಃ ಹಳ್ಳಿಯ ಕೃಷಿ ಕುಟುಂಬದ ತಂದೆ ತಾಯಿ (ಮತ್ತು ಅವರ ಆಪ್ತ ಬಂಧುಗಳಿಗೆ) ಅಷ್ಟು ಕಾಳಜಿಯ-ಆತಂಕಗಳ ವಿಷಯವೇ ಆಗಿರದೆ, ಅವರನ್ನೆಲ್ಲ ಎಷ್ಟೋ ವರ್ಷಗಳ ನಂತರ ಗೌರಮ್ಮನ ನೋಪಿ ಪೂಜೆಗೆಂದು ತೌರು ಮನೆಗೆ ಕರೆಸಿದಾಗ ಅವರ ಒಡೆದ ದಾಂಪತ್ಯ ಅಥವಾ 'ಲಿವ್ ಇನ್' ಜೋಡಿತನದ ಕಥೆಗಳು ಬಿಚ್ಚಿಕೊಂಡಾಗಲೂ ಕಥಾ ವಾತಾವರಣದಲ್ಲಿ ಒಂದಿಷ್ಟೂ ಭಾವನೆಗಳ ಬಿಸಿ ಬರವುದಿಲ್ಲ, ತಂದೆ, ಇರಲಿ, ಗೌರಿಪೂಜೆಗೆ ಸಂಭ್ರಮದ ಸಿದ್ಧತೆ ನಡೆಸಿರುವ ತಾಯಿಯೂ ಈ ಸಂದರ್ಭದಲ್ಲಿ ತನ್ನ ಹೆಣ್ಣುಮಕ್ಕಳ ದಾಂಪತ್ಯದ ಸ್ಥಿತಿಗತಿಗಳ ಬಗ್ಗೆ ವಿಚಾರಿಸುವುದಿಲ್ಲ. ಒಬ್ಬ ಮಗಳು ವಿವಾಹೇತರ ಸಂಬಂಧದ ಮಗುವಿನೊಂದಿಗೆ ಬಂದಿರುವಾಗಲೂ! ಈ ಇಡೀ ಕಥೆ ಗೌರಮ್ಮನ ನೋ ಪೂಜೆಯ ಸಡಗರದ ಹಿನ್ನೆಲೆಯಲ್ಲಿ ಬಿಚ್ಚಿಕೊಳ್ಳುತ್ತಾ ಊರ ಗರತಿ ಗೌರಮ್ಯಗಳ, ಸಮುಖದಲ್ಲಿ ನಡೆಯುವ ನೋಪಿಪೂಜೆಯ ಆಚರಣೆಯ ವಿವರಗಳ ಹಿನ್ನೆಲೆಯಲ್ಲಷ್ಟೇ ಈ ಹೆಣ್ಣುಮಕ್ಕಳೊಳಗಿನ ಒಂಟಿತನದ ನಿರ್ವಾತ ಓದುಗರಲ್ಲಿ ಒಂದು ಎಳೆಯನ್ನು ವಿಷಾದವನ್ನು ಹುಟ್ಟಿಸುತ್ತದೆ.

ಇಲ್ಲಿ ಲೇಖಕರು ಸಾಕಷ್ಟು ಪರಿಣಾಮಕಾರಿಯಾಗಿಯೇ ಚಿತ್ರಿಸಿರುವ ಈ ಮೂವರು ಹೆಣ್ಣುಮಕ್ಕಳು ಎದುರಿಸುವ' 'ದಾಂಪತ್ಯ'ದ 'ಸಮಸ್ಯೆ'ಗಳ ಸ್ವರೂಪವನ್ನು ಮಂಡಿಸುವುದೇ ಲೇಖಕರ ಕೇಂದ್ರ ಕಾಳಜಿಯಾಗಿರುವಂತಿದ್ದು, ಇದನ್ನು ಸಾವಯವವಾಗಿ ಒಳಗೊಳ್ಳಲಾಗದೆ ಕಥನವೊಂದರ ಭಾಗವನ್ನಾಗಿ ಮಾಡಹೊರಟಿರುವುದೇ ಒಟ್ಟು ಕಥೆಯಲ್ಲಿ ಕಾಣುವ ಅಸಹಜ ಬಿರುಕಿಗೆ ಕಾರಣವಾದಂತಿದೆ. ಈ ಬಿರುಕು ಈ ಮುವರು ಹೆಣ್ಣು ಮಕ್ಕಳಲ್ಲಿ ಇಬ್ಬರು ಸಣ್ಣ ವಯಸ್ಸಿಗೇ 'ಗುಣಮಟ್ಟದ ಶಿಕ್ಷಣದ ಹೆಸರಿನಲ್ಲಿ ತಂದೆ ತಾಯಿಗಳಿಂದ ದೂರವಾಗಿ ನಗರ ಸೇರುವ, ಕಾದಂಬರಿಯ ಕಥನದ ಲಯಕ್ಕೆ ಹೊಂದದ ಬೆಳವಣಿಗೆಯಿಂದಲೇ ಆರಂಭವಾಗುತ್ತದೆನಿಸುತ್ತದೆ. ಕಥನದಲ್ಲಿ ಜಾಗತೀಕರಣದ ಆಯಾಮ ಇಲ್ಲಿಂದಲೇ ಆರಂಭವಾಗುತ್ತದೆ ಎನ್ನಬಹುದು. ಹಾಗಾಗಿಯೇ ಈ ಇಬ್ಬರ ದಾಂಪತ್ಯ ಸಮಸ್ಯೆ ಮೊದಲಿನವಳ ದಾಂಪತ್ಯ ಸಮಸ್ಯೆಯಂತೆ ಸಹಜ ಎನ್ನಿಸುವುದಿಲ್ಲ. ಇದು ಕಾದಂಬರಿ ರೂಪವು ಬೇಡುವ ಪಾತ್ರ ಪೋಷಣೆಯ ಸಮಸ್ಯೆ ಎನಿಸುತ್ತದೆ.

ಆದರೆ ನುಗಡೋಣಿ ಪೂರ್ಣ ಹಳ್ಳಿಯ ಕಥೆ ಹೇಳುವಾಗ, ತಮ್ಮ ಕಥಾ ಪ್ರತಿಭೆ ಮುಕ್ಕಾಗದಂತೆ ಬರೆಯುತ್ತಾರೆ. ಮುಖ್ಯವಾಗಿ ಮೂಲಮನೆ ಪಾಲಾಗಿ, ಅಣ್ಣ, ಪಾಲಾದ ತಮ್ಮನ ಪ್ರೀತಿ-ಸಹಕಾರಗಳಿಂದಲೇ ತೋಟವನ್ನು ಬೆಳೆಸುವ ಕಥೆ, ಅದರೊಂದಿಗೆ ಜೋಡಿಸಿಕೊಂಡ ತಮ್ಮನ ಕುಟುಂಬದ ಕಥೆ ಸೇರಿ ಕಾದಂಬರಿಯಲ್ಲಿ ಒಂದು ವಿಶಾಲ ಸಾವಯವ ಕೌಟುಂಬಿಕ ಕಟ್ಟಡ ನಿರ್ಮಾಣವಾಗಿದೆ. ಇದಕ್ಕೆ ಆಸರೆಯಾಗಿರುವುದು ನುಗಡೋಣಿಯವರ ಬಹುತೇಕ ಕತೆಗಳಲ್ಲಿ ಕಂಡುಬಂದು, ಕಥೆಗೊಂದು ತಂಪು ನೆರಳಿನ ಗುಣ ನೀಡುವ ಮಠ ಮತ್ತು ಅದರ ಸ್ವಾಮೀಜಿ, ಆದರೆ ಇವರ ಕಥೆಗಳಾಚೆ ಈ ಮಠ ಮತ್ತು ಈ ಸ್ವಾಮಿಗಳು ಎಷ್ಟು ನಿಜವೆನ್ನಿಸುತ್ತವೋ ತಿಳಿಯದು. ಆದೇನೇ ಇರಲಿ, ಇಲ್ಲಿನ ತೋಟ ಸೊಗಸಾಗಿ ಬೆಳೆದಂತೆ ಅದು ಜಾಗತೀಕರಣದ ಹೊಸ ಬಂಡವಾಳಶಾಹಿಗಳ ಹದ್ದಿನ ದೃಷ್ಟಿಗೆ ಬಿದ್ದಾಗ ಅದರ ರಕ್ಷಣೆಗೆ ಒದಗುವವರು ಈ ಸ್ವಾಮೀಜಿಯೇ, ಅಂದರೆ ಈ ಮೂಲಕ ನುಗಡೋಣಿಯವರು ಜಾಗತೀಕರಣಕ್ಕೆ ಉತ್ತರ ಮಠ ಎಂದು ಹೇಳುತ್ತಿದ್ದಾರೆಯೇ ಎಂದು ಆಶ್ಚರ್ಯವಾಗುತ್ತದೆ. ಇಂದು ಮಠಗಳೇ ಸಾರಾಸಗಟಾಗಿ ಜಾಗತೀಕರಣಗೊಂಡು ಪಟ್ಟಭದ್ರ ಹಿತಾಸಕ್ತಿಗಳಾಗಿ ರಾಜ್ಯದ ರಾಜಕಾರಣವನ್ನು ನಿಯಂತ್ರಿಸುವಂತಾಗಿರುವಾಗ?

(ಕೃಪೆ: ಹೊಸಮನುಷ್ಯ. ಬರಹ: ಡಿ.ಎಸ್. ನಾಗಭೂಷಣ)

Related Books