ತಲ್ಲಣ

Author : ಕುಮಾರ ಬೇಂದ್ರೆ

Pages 144

₹ 100.00
Year of Publication: 2016
Published by: ಕಾಲ ಪ್ರಕಾಶನ
Address: ನಂ. 39/3, ನೆಲ ಮಹಡಿ, 9ನೇ ಮುಖ್ಯರಸ್ತೆ, ಶಿವನಗರ, ರಾಜಾಜಿನಗರ, ಬೆಂಗಳೂರು-560 010
Phone: 080-23206778

Synopsys

‘ತಲ್ಲಣ’ ಲೇಖಕ ಕುಮಾರ ಬೇಂದ್ರೆ ಅವರ ಕಾದಂಬರಿ. ದೇವರು, ಧರ್ಮ, ನಂಬಿಕೆ, ಸಂಸ್ಕೃತಿ ಹಾಗೂ ಪರಂಪರೆಯ ಹೆಸರಿನಲ್ಲಿ ವರ್ತಮಾನದಲ್ಲಿ ನಡೆಯುತ್ತಿರುವ ಧಾರ್ಮಿಕ ಉಗ್ರವಾದ ಈಗ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿಲ್ಲ. ಮನುಕುಲಕ್ಕೆ ವಾಸಿಯಾಗದ ಅರ್ಬುತ ರೋಗವಾಗಿ, ಪ್ರಗತಿ ಪಥ, ನಾಗರಿಕತೆ, ವ್ಯಕ್ತಿ ಸ್ವಾತಂತ್ರ್ಯಕ್ಕೆ ಕಂಟಕವಾಗಿ ಪರಿಣಮಿಸಿದೆ. ಒಂದು ಧಾರ್ಮಿಕ ಮೂಲಭೂತವಾದ ಎಂಬುದು ಹೇಗೆ ರಾಷ್ಟ್ರೀಯ ಏಕತೆಯನ್ನು ವಿಘಟಿಸಿ ತನ್ನ ಸ್ವಾರ್ಥ ಸಿದ್ಧಿಸಿಕೊಳ್ಳಲು ಹವಣಿಸುತ್ತದೆ; ಜೀವಪರ ಕಳಕಳಿ ಹೊಂದಿರಬೇಕಾದ ಧರ್ಮ ಎಂಬುದು ಹೇಗೆ ಮುಖವಾಡ ತೊಟ್ಟು ಜೀವಹತ್ಯೆಗೂ ಇಳಿಯುತ್ತದೆ ಎಂಬುದಕ್ಕೆ ದೇಶದಲ್ಲಿ ನಡೆಯುತ್ತಿರುವ ವಿಚಾರವಾದಿಗಳ ಸರಣಿ ಹತ್ಯೆಗಳು ನಿದರ್ಶನವಾಗಿದೆ. ಈ ಸತ್ಯ ಅರಗಿಸಿಕೊಳ್ಳಲಾಗದ್ದು ಆದರೂ ನುಂಗಲೇಬೇಕಾದ ಕಟುಸತ್ಯ ಇದರ ಸುತ್ತ ನಡೆಯುವ ವ್ಯವಸ್ಥಿತ ಸೂಕ್ಷ್ಮ ಚಟುವಟಿಕೆ, ಸ್ವಾರ್ಥ ಉದ್ದೇಶ ಸಾಧನೆಗಾಗಿ ಜೀವ ಹತ್ಯೆಗೆ ಹವಣಿಸುವ ದುಷ್ಟ ಶಕ್ತಿಗಳು, ಅದರಲ್ಲಿ ಬಲಿಯಾಗುವ ಮುಗ್ಧ ಜೀವಗಳು, ಸಮಾಜ, ಸರಕಾರ, ಕಾನೂನು, ಇಡೀ ವ್ಯವಸ್ಥೆ ಅದಕ್ಕೆ ಸ್ಪಂದಿಸುವ ರೀತಿ 'ತಲ್ಲಣ' ಕೃತಿಯ ಜೀವಾಳ. ವೈಚಾರಿಕತೆಯನ್ನು ಹತ್ತಿಕ್ಕುವ ವ್ಯವಸ್ಥಿತ ಹಾಗೂ ಸಾಂಘಿಕ ಜಾಲ ಇಂದು ದೇಶವ್ಯಾಪಿ ಜಾಗೃತವಾಗಿದ್ದು, ನಾಗರಿಕತೆಯನ್ನು ಹಿಮ್ಮುಖವಾಗಿ ಕ್ರಮಿಸಿ, ಜನರನ್ನು ತಮ್ಮ ಹಿಡಿತದಲ್ಲಿ ಇರಿಸಿಕೊಳ್ಳುವುದೇ ಇದ ಉದ್ದೇಶ. ಈ ಉದ್ದೇಶಕ್ಕೆ ಅಡ್ಡಿಯಾಗುವವರನ್ನು ಇನ್ನಿಲ್ಲವಾಗಿಸುವುದೇ 'ಧರ್ಮ'ದ ಮುಖವಾಡ ತೊಟ್ಟ ಉಗ್ರವಾದ', ಇದೀಗ ಗೌಪ್ಯವಾಗಿ ಉಳಿಯದೇ ಬಹಿರಂಗ ಸತ್ಯವಾಗಿದ್ದು ಬಲ ಪಂಥೀಯ ಸಂಘಟನೆ, ಸರಕಾರಗಳು ಕೂಡ ಇದಕ್ಕೆ ಪರೋಕ್ಷವಾಗಿ ಬೆಂಬಲಕ್ಕೆ ನಿಂತಿರುವುದು ವಿಷಾದನೀಯ. ಇಂತಹ ಸೂಕ್ಷ್ಮಗಳಸುತ್ತ ಸಾಗುವ 'ತಲ್ಲಣ'ದ ವಸ್ತು. ಮನುಷತ್ವವೇ ಧರ್ಮ, ಮಾನವೀಯತೆಗೆ ಮಿಗಿಲಾದ ದೇವರು-ಧರ್ಮ ಕೇವಲ ಮುಖವಾಡ ಎಂಬ ಅಂಶವನ್ನು ಪ್ರತಿಪಾದಿಸುತ್ತದೆ. ಒಟ್ಟಾರೆ ಸಧ್ಯದ ಸಾಮಾಜಿಕ ಸಮಸ್ಯೆಗೆ ದನಿಯಾಗಬಲ್ಲ ಈ ಕಾದಂಬರಿ ಕುತೂಹಲಕಾರಿಯಾದ ಓದಿನ ವೇಗ, ಉತ್ತರ ಕರ್ನಾಟಕದ ಭಾಷಾವೈಶಿಷ್ಟ್ಯ ಸ್ವಗತ ಶೈಲಿಯ ತಂತ್ರ ಹಾಗೂ ಸಹಜ ಚಿತ್ರಣಗಳನ್ನು ಒಳಗೊಂಡಿದೆ ಎಂದು ನಿಸ್ಸಂದೇಹವಾಗಿ ಹೇಳಬಹುದು.

About the Author

ಕುಮಾರ ಬೇಂದ್ರೆ
(24 October 1977)

ಕುಮಾರ ಬೇಂದ್ರೆ ಜನನ 24-10-1977, ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ. ಪ್ರಾಥಮಿಕ ಶಿಕ್ಷಣವನ್ನು ಬೆಳ್ಳಟ್ಟಿಯಲ್ಲಿ ಪಡೆದರು. ಹುಬ್ಬಳ್ಳಿಯ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದಿಂದ ಚಿತ್ರಕಲಾ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ ಪಡೆದಿದ್ದಾರೆ. ಇವರು ಹುಬ್ಬಳ್ಳಿ ನಿವಾಸಿಯಾಗಿದ್ದು 'ಉದಯವಾಣಿ' ಪತ್ರಿಕೆಯಲ್ಲಿ ಉಪಸಂಪಾದಕ ವೃತ್ತಿ, ಪತ್ನಿ ಅನುಪಮ, ಪುತ್ರರು ಚೇತನ, ಚಂದನ, ಎರಡು ದಶಕದಿಂದ ಸಾಹಿತ್ಯ ಕೃಷಿಯಲ್ಲಿ ಸಕ್ರಿಯರಾಗಿದ್ದಾರೆ. ಕುಮಾರ ಬೇಂದ್ರೆ ಅವರ ಪ್ರಕಟಿತ ಕೃತಿಗಳು ಮಾದಪ್ಪನ ಸಾವು (೨೦೦೫) ಅದೃಶ್ಯ ಲೋಕದ ಮಾಯೆ (೨೦೦೭) ನಿರ್ವಾಣ (೨೦೧೧) ಗಾಂಧಿ ವೃತ್ತದ ದಂಗೆ (೨೦೧೨) ...

READ MORE

Reviews

ತಲ್ಲಣ: ಸಂಪ್ರದಾಯ- ವೈಚಾರಿಕತೆ ನಡುವಿನ ಸಂಘರ್ಷ: ಸಿ. ಎಸ್. ಭೀಮರಾಯ 

(ಕಡಮೆ ಬ್ಲಾಗ್‌ನಿಂದ)

ಉತ್ತರ ಕರ್ನಾಟಕದ ಹೊಸ ತಲೆಮಾರಿನ ಬಹುಮುಖ ಪ್ರತಿಭೆಯ ಪ್ರಮುಖ ಲೇಖಕರಲ್ಲಿ ಕುಮಾರ ಬೇಂದ್ರೆ ಒಬ್ಬರು. ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಕುಮಾರ ಬೇಂದ್ರೆಯವರು. ತಮ್ಮ ಅರಿವಿನ ವಿಸ್ತಾರವನ್ನು ಕಳೆದ
ಹದಿನೈದು ವರ್ಷಗಳಿಂದ ಕಥೆ, ಕಾವ್ಯ, ಚಿತ್ರಕಲೆ ಮತ್ತು ಸಾಹಿತ್ಯದ ಮೂಲಕ ವ್ಯಕ್ತಪಡಿಸುತ್ತ ಬಂದಿದ್ದಾರೆ.

ಪ್ರಸ್ತುತ ‘ತಲ್ಲಣ’ ಕುಮಾರ ಬೇಂದ್ರೆಯವರ ಮೂರನೇ ಕಾದಂಬರಿ. ಅವರು ವರ್ತಮಾನದಲ್ಲಿ ಘಟಿಸಿದ ನೈಜ ಘಟನೆಗಳಿಗೆ ಕಲ್ಪನೆಯ ಎರಕ ಹುಯ್ದು ಈ ಕಾದಂಬರಿ ರಚಿಸಿದ್ದಾರೆ. ನಮ್ಮ ಕಣ್ಣೆದುರು ರಾಚುವ ವರ್ತಮಾನದ ವಿವಿಧ ವಿಚಿತ್ರ ಘಟನೆಗಳನ್ನು ಇಲ್ಲಿ ಶೋಧಿಸುವ ಬಗೆ ಈ ಕಾದಂಬರಿಯಲ್ಲಿ ಕಂಡುಬರುತ್ತದೆ. ನಾಡಿನ ಹಿರಿಯ ಸಂಶೋಧಕ, ಪ್ರಗತಿಪರ ಚಿಂತಕ ಮತ್ತು ವೈಚಾರಿಕ ಪ್ರಜ್ಞೆಯ ಪ್ರತೀಕ ಡಾ. ಎಂ.ಎಂ. ಕಲಬುರ್ಗಿಯವರ ಹತ್ಯೆಯಂತಹ ಒಂದು ನೇರ ಜಾಡಿನಲ್ಲಿ ಬೆಳೆಯುತ್ತ ಹೋಗುವ ಈ ಕಾದಂಬರಿ ಹೆಚ್ಚು ಕುತೂಹಲ ಹುಟ್ಟಿಸುತ್ತದೆ. ವಿಚಾರದ ದುರಂತವೇ ಇದು. ಅದು ವಿಚಾರ ಸತ್ತುಹೋದವರ ನಡುವೆ ಅಪಾಯಕಾರಿ ಕ್ರಿಯೆ. ಕೆಲವೊಮ್ಮೆ ಈ ಪ್ರಪಂಚದಲ್ಲಿ ಒಂದು ಹೊಸ ವಿಚಾರವೇ ದೊಡ್ಡ ಅಪರಾಧವಾಗುವ ಅಪಶ್ಯವಿದೆ. ಬೇಂದ್ರೆ ಅವರ ಈ ಕಾದಂಬರಿಯಲ್ಲಿನ ಶಂಕರ ಪಾಟೀಲರು ಕೂಡ ಈ ಕಾರಣಕ್ಕಾಗಿಯೇ ಗುಂಡೇಟಿಗೆ ಬಲಿಯಾಗಿದ್ದಾರೆ. ಹಲುವು ನೆಲೆಗಳಲ್ಲಿ ಈ ಕಾದಂಬರಿ ಇದನ್ನು ಸಾಧಿಸಲು ಪ್ರಯತ್ನಿಸಿದೆ. ವರ್ತಮಾನದ ಸುದ್ದಿಗಳು, ಗಾಸಿಪ್ ಗಳು ಕೊಲೆ, ಹೋರಾಟ, ಚಳವಳಿ, ಅಂತಃಕರಣದಿಂದ ವಂಚಿತವಾಗುವ ಜೀವಗಳು ಈ ಕಾದಂಬರಿಯ ಮುಖ್ಯ ಕಥಾ ವಸ್ತುಗಳು. ಲೇಖಕರು ವರ್ತಮಾನದ ನೈಜ ಘಟನೆಗಳನ್ನು ಕಲಾತ್ಮಕವಾಗಿ ಚಿತ್ರಿಸಿದ್ದಾರೆ. ವರ್ತಮಾನದ ನೈಜ ಘಟನೆಗಳನ್ನು ಹೇಗಿವೆಯೋ ಹಾಗೆ ಹಸಿಹಸಿಯಾಗಿ ಇಡುವುದರಲ್ಲಿ ಯಾವುದೇ ತಪ್ಪು ಕಂಡುಬರುವುದಿಲ್ಲ. ಆದರೆ ಇವೆಲ್ಲವುಗಳನ್ನು ಕ್ರಮಬದ್ಧವಾಗಿ ಜೋಡಿಸುವ ಕೊಂಡಿ ಕಥಾ ಹಂದರದಲ್ಲಿ ಇರಬೇಕಾದದ್ದು ಅತೀವ ಅವಶ್ಯ. ಇಲ್ಲಿ ಅದು ವಿಭಿನ್ನವಾಗಿದೆ. ಈ ನಿಟ್ಟಿನಲ್ಲಿ ಅನುಭವಗಳನ್ನು ವ್ಯವಸ್ಥಿತವಾಗಿ ಜೋಡಿಸುವ ಕೊಂಡಿ ಒಂದು ಸಿದ್ಧ ಮಾದರಿ ಎಂದು ವಾದಿಸಬಹುದು. ಹಾಗಾಗಿ ಈ ಕಾದಂಬರಿ ಒಂದು ಹೊಸ ಬಗೆಯ ಬರೆವಣಿಗೆ ಎನ್ನಬಹುದು.

ಈ ಕಾದಂಬರಿಗಾಗಿ ಅವರು ವಿಭಿನ್ನ ನಿರೂಪಣಾ ವಿಧಾನವನ್ನೇ ಸೃಷ್ಟಿಸಿದ್ದಾರೆ. ಈ ಕಾದಂಬರಿಯಲ್ಲಿ ಜಯಶ್ರೀದೇವಿ, ಸೃಜನ್, ವಿವೇಕ, ವಿಕ್ರಮ, ಜಾನಕಿ, ಶೀಲಾ, ಜಗನ್ನಾಥರಾವ್ ಮುಂತಾದ ಪಾತ್ರಗಳ ಹೆಸರಿನಡಿ ಅವರದೇ ಮನಸ್ಸಿನ ವಿಚಾರದಲ್ಲಿ ನಿರೂಪಿತಗೊಳ್ಳುತ್ತ ಬೆಳೆಯುವ ಕಾದಂಬರಿ ಓದುಗರಿಗೆ ಸಾಕಷ್ಟು ಕುತೂಹಲ ಹುಟ್ಟಿಸುತ್ತದೆ. ಅವರವರ ಪಾಲಿಗೆ ಬಂದ ಕರ್ತವ್ಯಗಳು, ಅನಿರೀಕ್ಷಿತ ವಾಗಿ ಎದುರಾದ ಆಘಾತಗಳಿಗೆ ಆ ಪಾತ್ರಗಳು ತೆರೆದುಕೊಂಡ ಬಗೆ, ಅವರ ಬದುಕಿನ ತಲ್ಲಣಗಳು, ಎದುರಿಸಿದ ದುಃಖ ದುಮ್ಮಾನಗಳು ಹೀಗೆ ಎಲ್ಲವನ್ನು ಆಯಾ ಪಾತ್ರಗಳ ಬಾಯಿಯಿಂದಲೇ ಹೇಳಿಸಿರುವುದು ಈ ಕೃತಿಯ ವಿಶೇಷ. ಧಾರ್ಮಿಕ ನಂಬಿಕೆಗಳಿಂದ ಇತಿಹಾಸದಲ್ಲಿ ಮಾತ್ರವಲ್ಲ. ವರ್ತಮಾನದ ದಿನಗಳಲ್ಲಿಯೂ ಅನೇಕ ರಕ್ತದ ನದಿಗಳು ಹರಿದಿವೆ. ಧರ್ಮ ಸಂಸ್ಕೃತಿ ಸಂಪ್ರದಾಯ ನಾಗರಿಕತೆ ಸಭ್ಯತೆ ಮೊದಲಾದ ಸಮಾಜದ ಮುಖವಾಡಗಳ ಹಿಂದೆ ಅಡಗಿರುವ ಹಿಂಸೆಯನ್ನು ಬೇಂದ್ರೆಯವರು ಈ ಕೃತಿಯಲ್ಲಿ ಅದರ ನಿಜ ಸ್ವರೂಪದಲ್ಲಿ ಗುರುತಿಸಿದ್ದಾರೆ. ನಮಗೆ ಪರಿಚಿತವಿರುವ ಹಳ್ಳಿ ನಗರಗಳ ಪರಿಸರದಿಂದಲೇ ತಮ್ಮ ಕಾದಂಬರಿಗೆ ವಸ್ತು ಪಾತ್ರವನ್ನು ಆಯ್ದುಕೊಂಡಿರುವ ಲೇಖಕರು ನಮನಮ್ಮೆದುರಿಗಿರಿಸಿರುವ ಅಮಾನವೀಯ ಮುಖಗಳು ಓದುಗರನ್ನು ಬೆಚ್ಚಿಬೀಳುವಂತೆ ಮಾಡುತ್ತವೆ.

ಇಂದು ಜಗತ್ತಿನ ಅನೇಕ ಧರ್ಮಗಳಾಗಿ ಉಳಿದಿಲ್ಲ. ಆಧ್ಯಾತ್ಮಿಕತೆ ಆಧ್ಯಾತ್ಮಿಕತೆಯಾಗಿ ಉಳಿದಿಲ್ಲ. ಆಧುನಿಕ ರಾಜಕಾರಣದ ಅಯೋಮಯ ಭಾಗಗಳು ಅಫೀಮ್ ಭಾಗಗಳ ಜೊತೆ ಸೇರಿಕೊಂಡು ಭಯಾನಕ ಧರ್ಮವೊಂದು ತಯಾರಾಗಿದೆ. ಅದರ ಅಟ್ಟಹಾಸ ಈಗ ಎಲ್ಲೆಡೆ ವಿಜೃಂಭಿಸುತ್ತಿದೆ. ಆದರೆ ಈ ಬೆಳವಣಿಗೆ ಬೆಳೆಯುತ್ತಿರುವ ಭಾರತ ದೇಶಕ್ಕೆ ಮಾರಕವಾಗಿದೆ. ಸಮಕಾಲೀನ ಭಾರತೀಯ ಜೀವನದಲ್ಲಿ ಇಲ್ಲಿಯವರೆಗೆ ನಳನಳಿಸುತ್ತಿದ್ದ ಬಹುಮುಖಿ ಸಂಸ್ಕೃತಿ ನಿರ್ನಾಮವಾಗುತ್ತಿದೆ. ಮತೀಯ ಮೂಲಭೂತವಾದದ ಒಂದು ಪ್ರಮುಖ ಪರಿಣಾಮವೆಂದರೆ ಏಕರೂಪದ ಧರ್ಮ, ಸಂಸ್ಕೃತಿ ಮತ್ತು ಸಂಪ್ರದಾಯಗಳು ಅಪಾಯಕಾರಿ ರೀತಿಯಲ್ಲಿ ಮುಖ್ಯವಾಗುತ್ತಿರುವುದು. ಇಂದಿನ ಈ ವಿಷಮ ಸ್ಥಿತಿಯಲ್ಲಿ ಯಾವ ಧರ್ಮ, ದೇವರು ಜಾತಿ ಮತ ಪಂಥ ಪಂಗಡಗಳೆಲ್ಲವೂ ಕೊಳೆತು ನಾರುವಷ್ಟು ಹೊಲಸಾಗಿ ಹೊಗಿವೆ. ಈ ಪರಿಸ್ಥಿತಿ ಎಲ್ಲರನ್ನು ಕಂಗೆಡಿಸಿದೆ. ಇದನ್ನೆಲ್ಲಾ ಕಿತ್ತುಹಾಕುವ ಪ್ರಾಮಾಣಿಕ ಸತ್ವಶಾಲಿಗಳು ಇಂದು ಧೀರತನದಿಂದ ಮುಂದಾಗಬೇಕಿರುವುದು ಅವಶ್ಯಕ. ಜನತೆಯ ಕ್ರಿಯಾಶೀಲತೆಯನ್ನು, ಒಳಗಿನಿಂದಲೇ ಕೊರೆದುಹಾಕುವ ಅದರ ಧೀಮಂತಿಕೆಯನ್ನು ನಾಶ ಮಾಡುವ ಮೌಢ್ಯಗಳನ್ನು, ಪುರೋಹಿತಶಾಹಿಗಳನ್ನು ಉಗ್ರವಾಗಿ ಎದುರಿಸಬೇಕಾಗಿದ್ದು ಈ ಯುಗದ ಧರ್ಮ. ವೈಚಾರಿಕ ಲೇಖಕ ಕಲಾವಿದರು ಈ ದೇಶದಲ್ಲಿ ಸಾಂಪ್ರದಾಯಿಕ ಧರ್ಮದ ಕೊಳಕುಗಳ ವಿರುದ್ಧ ಬಂಡೇಳಬೇಕಾದದ್ದು ಅನಿವಾರ್ಯ. ಪ್ರಗತಿಪರ ಚಿಂತಕರು ದೇಶದಲ್ಲಿ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳನ್ನು ಈ ಕಾದಂಬರಿ ಎಳೆ ಎಳೆಯಾಗಿ ಬಿಚ್ಚಿ ತೋರಿಸುತ್ತದೆ. ಲೇಖಕರು ವರ್ತಮಾನದ ಬದುಕನ್ನು ನಿಷ್ಟುರವಾಗಿ, ಆದರೆ ಅನುಕಂಪದಿಂದ ಕಂಡಿರುವ ಕ್ರಮ ನೈತಿಕ ಮತ್ತು ವೈಚಾರಿಕ ಕ್ರಮಗಳಿಂದ ಕೂಡಿದೆ.

ಧಾರ್ಮಿಕ, ಸಾಮಾಜಿಕ ಮತ್ತು ಪ್ರಭುತ್ವ ವ್ಯವಸ್ಥೆಗಳ ವಿರುದ್ಧ ಪ್ರತಿರೋಧಿಸಿದ ಚೇತನಗಳ ಧ್ವನಿರೂಪ ಕುಮಾರ ಬೇಂದ್ರೆ ಅವರ ತಲ್ಲಣ. ಹಿಂದೂ ಸಂಸ್ಕೃತಿ ವಿರೋಧಿ ಕಲಾವಿದನೆಂದು ಕರೆಸಿಕೊಳ್ಳುವ ಸೃಜನ್ ಹಿಂದೂ ಸಂಘಟನೆಯಿಂದ ವಿರೋಧಕ್ಕೊಳಗಾಗಿ ದೇಶದ್ರೋಹಿಯ ಆಪಾದನೆ ಹೊತ್ತು ಪೊಲೀಸ್ ದೌರ್ಜನ್ಯಕ್ಕೆ ಒಳಗಾಗುವುದು, ಪ್ರತಿ ಕ್ಷಣವೂ ಸಾವಿನ ಸಂಕೋಲೆಗಳಿಂದ ಪಾರಾಗುತ್ತ, ಅನ್ಯಾಯದ ವಿರುದ್ಧ ಸಿಡಿದೇಳುತ್ತ, ದುರ್ಬಲ ಕೈಗಳಿಗೆ ಸಹಾಯ ಮಾಡುತ್ತ ಹೊರಟವನಿಗೆ ಯಾವಾಗ ಬೆಳಕಾದೀತು ಎನ್ನುವ ಚಿಂತೆ ಇದೆ, ಭಯವಿದೆ, ಆದರೂ ಭರವಸೆಯಿದೆ. ವೆಲ್ಲವುಗಳು ಅವನು ನಡೆಸಿದ ವೈಚಾರಿಕತೆಯ ವಿರುದ್ಧದ ಸಮರದಲ್ಲಿ ಕಾಣುತ್ತವೆ. ಇದು ಜಗತ್ತಿನ ವೈಚಾರಿಕ ಬರಹಗಾರರ ಸಂಕಟ, ತಲ್ಲಣ ಮತ್ತು ದುರಂತಗಳ ಹಾದಿ. ಜಯಶ್ರೀದೇವಿ, ಜಾನಕಿ, ಕೃತಿ, ಶೀಲಾ ಪಾತ್ರಗಳು ಸ್ವತಃ ತಾವೇ ಒಂದು ಕಾದಂಬರಿಯ ಕೇಂದ್ರವಾಗುವ ಸಾಧ್ಯತೆಗಳನ್ನು ಪಡೆದಿದ್ದರೂ ಮೂಲ ವಸ್ತುವಿಗೆ ಪೋಷಕವಾಗುತ್ತವೆ. ಮೇಲು ನೋಟಕ್ಕೆ ಸೃಜನ್ ನೇ ಕಾದಂಬರಿಯ ಪ್ರಧಾನ ಪಾತ್ರವೆಂದು ಭಾಸವಾದರೂ ಮತ್ತೊಂದು ನೆಲೆಯಲ್ಲಿ ಇದು ಹಲವು ನಾಯಕ- ನಾಯಕಿಯರನ್ನು ಹೊಂದಿದೆ. ಎಲ್ಲರು ವಿಕಸನದ ಮತ್ತು ಪತನದ ಬೇರೆಬೇರೆ ಹಂತದಲ್ಲಿ ಇರುವವರು. ಹೀಗಾಗಿ ತಲ್ಲಣ ಒಂದು ಕುಟುಂಬದ ಕಥೆಯಲ್ಲ. ಅದು ವ್ಯಕ್ತಿ ಕೇಂದ್ರದಿಂದ ಹೊರಟು ಸಮಕಾಲೀನ ಸಾಮಾಜಿಕ, ಧಾರಾಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ಗತಿ- ಸ್ಥಿತಿಯನ್ನು ತನ್ನ ತೆಕ್ಕೆಗೆ ತಂದುಕೊಳ್ಳುವ ಕಥೆಯಾಗಿ ಕಾಣುತ್ತದೆ.

ಕಾದಂಬರಿಯಲ್ಲಿ ಬರುವ ಪ್ರಗತಿಪರ ಚಿಂತಕರ ಕೊಲೆ, ರಾಜಕೀಯ ಕುತಂತ್ರ, ಭಗ್ನ ಪ್ರೇಮ, ರಾಷ್ಟ್ರ ನಾಯಕರ ಹಿತ ಕಾಯುವಿಕೆ, ಸಂಸ್ಕೃತಿ- ಸಂಪ್ರದಾಯಗಳ ಸಂರಕ್ಷಣೆ ಇತ್ಯಾದಿ ಸಂಗತಿಗಳು ಕಥಾನಾಯಕರನ್ನು ದುರಂತ- ರಮ್ಯ ನೆಲೆಗಳಲ್ಲಿ ಚಿತ್ರಿಸುತ್ತವೆ. ಸಿನಿಮಾಕ್ಕೆ ಬೇಕಾಗುವ ಜನಪ್ರಿಯ ಅಂಶಗಳೆಲ್ಲವೂ ಈ ಕಾದಂಬರಿಯಲ್ಲಿವೆ. ಕೆಲವು ನಾಟಕೀಯ ಅಂಶಗಳಿಂದಾಗಿ ಕಥೆಯ ಆರಂಭ ಮತ್ತು ಅಂತ್ಯಕ್ಕೆ ಸಮೃದ್ಧಿ ದೊರೆತಿದೆ. ಕಾದಂಬರಿಯಲ್ಲಿನ ರಸಭರಿತ ಸನ್ನಿವೇಶಗಳು, ಸಹಜವೆನ್ನಿಸುವ ಪಾತ್ರಗಳು, ರೋಚಕವಾದರೂ ಅಸಂಭವ ಎನ್ನಿಸದ ಸಾಹಸ ಪ್ರಸಂಗಗಳು, ಪೊಲೀಸ್- ಪತ್ತೇದಾರಿ ಚರ್ಚೆಗಳು ಕುತೂಹಲದಿಂದ ಓಡಿಸಿಕೊಳ್ಳುತ್ತವೆ. ಜನಪ್ರಿಯ ಹಾಗೂ ಸಾಮಾಜಿಕ ಶೈಲಿಯಂತೆಯೂ ತಲ್ಲಣ ಸಹಜವಾಗಿ ಓದುಗರನ್ನು ತನ್ನತ್ತ ಆಕರ್ಷಿಸುತ್ತದೆ.

- ಸಿ. ಎಸ್. ಭೀಮರಾಯ
ಆಂಗ್ಲ ಉಪನ್ಯಾಸಕರು, ಕಲಬುರಗಿ

(ಕಡಮೆ ಬ್ಲಾಗ್‌ನಿಂದ)

Related Books