ಸಾವು ಎನ್ನುವುದು ಒಂದು ಸಹಜ ಘಟನೆ ಎಂದು ಸ್ವೀಕರಿಸುವವರಿಗೆ ಅದು ಸ್ವಾಭಾವಿಕವಾದರೆ, ಅದೊಂದು ಶಿಕ್ಷೆ, ಅನಪೇಕ್ಷಿತ ಸಂತಾಪ ಎಂದು ಭಾವಿಸುವುದು ಮತ್ತೊಂದು ಧೋರಣೆ ಎನ್ನಬಹುದು. ಅಳಿದ ವ್ಯಕಿಗಳು, ಉಳಿದವರ ನೆನಪಿನಲ್ಲಿ ಕಾಡುವುದಾದರೆ ಅದು ಭಾವ ತೀವ್ರತೆಯಿಂದಲೋ, ವ್ಯಕ್ತಿಗತ ಗೌರವ ಭಾವದಿಂದಲೋ, ಸಹಜ ಮಾನವ ಸಂಬಂಧಗಳ ರೀತಿಯಿಂದಲೋ, ಅಳಿಸಲಾಗದ ಸಿಹಿಕಹಿ ಅನುಭವಗಳಿಂದಲೋ ಒಟ್ಟಿನಲ್ಲಿ ಮರೆಯಾದ ವ್ಯಕ್ತಿ ನಮ್ಮಲ್ಲಿ ಉಳಿದು ಬಿಡುತ್ತಾನೆ. ಅಳಿದ ವ್ಯಕ್ತಿಯ ಬದುಕಿನ ಸಂಕಷ್ಟಗಳು, ಜೀವನ ಕ್ರಮ, ಅನುಭವಿಸಿದ ದೈಹಿಕ, ಮಾನಸಿಕ ಹಿಂಸೆಯನ್ನು ಹತ್ತಿರದಿಂದ ಕಂಡು ನೊಂದ ಲೇಖಕ, ರಂಗಕರ್ಮಿ ಯೋಗೇಶ್ ಮಾಸ್ಟರ್ ಅವರನ್ನು ಅಮೃತ ಎಂಬ ಈ ಪುಸ್ತಕ ಬರೆಯುವ ಮಟ್ಟಕ್ಕೆ ಕಾಡಿತು.
ಲವು ಮತ್ತು ಚೆಲುವನ್ನು ಬಲ್ಲವರಿಗೆ ಸಾವಲ್ಲಿ ನೋವಿಲ್ಲ ಎಂಬ ಮನೋಧೋರಣೆಯನ್ನು ಕಂಡುಕೊಂಡ ಲೇಖಕರಿಗೆ ಬಂಟಿ ಎಂದು ಕರೆಸಿಕೊಳ್ಳುತ್ತಿದ್ದ ಆದಿತ್ಯನ ಬದುಕಿನ ಸಾವು-ನೋವುಗಳ ಜೀವನ ಹೋರಾಟವನ್ನು ಓದುಗರಿಗೆ ನೀಡಿದರು. ಈ ಪುಸ್ತಕ ಸಾವಿನ ಬಗ್ಗೆ, ವ್ಯಕ್ತಿ ಸಂಬಂಧದ ಬಗ್ಗೆ ಬಹಳವಾಗಿ ಕಾಡುವ, ಮನಸ್ಸು ತೊಳಲಾಟಕ್ಕೆ ಬೀಳುವ ಹೊಯ್ದಾಟದ ದಾರಿಯನ್ನು ತೋರುತ್ತಲೇ ಸಾವಿನ ಭಯವನ್ನು ಸಹಜವಾಗಿಡುವ ಮನಃಸ್ಥಿತಿಯನ್ನು ನಮ್ಮಲ್ಲಿ ಸಿದ್ಧಪಡಿಸುತ್ತದೆ.
ಲೇಖಕ, ನಾಟಕಕಾರ, ಚಲನಚಿತ್ರ- ಸಂಗೀತ ನಿರ್ದೇಶಕ ಯೋಗೇಶ್ ಮಾಸ್ಟರ್ ಅವರು ಜನಪ್ರಿಯ-ಪ್ರಮುಖ ಲೇಖಕರು. ಕಾದಂಬರಿ-ನಾಟಕ-ಕವಿತೆ-ಮಕ್ಕಳ ಸಾಹಿತ್ಯ ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಬರೆಯುತ್ತಿರುವ ಮಾಸ್ಟರ್ ಅವರು ಇದುವರೆಗೆ 230ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ...
READ MORE