ಅಂತರಾಳ

Author : ಶಾಂತಿನಾಥ ದೇಸಾಯಿ

Pages 250

₹ 80.00




Year of Publication: 2001
Published by: ಸ್ವಪ್ನ ಬುಕ್ ಹೌಸ್
Address: ಬೆಂಗಳೂರು

Synopsys

ಕಾದಂಬರಿಕಾರ ಶಾಂತಿನಾಥ ದೇಸಾಯಿ ಅವರ ಸಾಮಾಜಿಕ ಕಾದಂಬರಿ "ಅಂತರಾಳ". ಈ ಕಾದಂಬರಿ ಒಂದು, ದಿನಚರಿಯಲ್ಲ. ಅಂತೆಯೇ ಮಾನಸಿಕ ವೈದ್ಯನ ಟಿಪ್ಪಣಿಯೂ ಅಲ್ಲ. ತನ್ನ ಮಾನಸಿಕ ಸ್ಥಿಮಿತ್ತವನ್ನು, ಮತ್ತೆ ಗಳಿಕೊಳ್ಳಬೇಕೆಂಬ ಹಂಬಲವುಳ್ಳ, ಕಾದಂಬರಿಯ ನಾಯಕ, ವಿಕ್ರಮ್ ರಾಣೆಯ ತಡಕಾಟ, ಅವುಗಳನ್ನು ಹಿಂಬಾಲಿಸುತ್ತಾ, ಜಿಗುಟಾಗಿ ಬಿಡದೆ, ಮತ್ತೆ ಎಳೆದುಕೊಂಡು ಹೋಗುವ, ಅಂತರ್ಮುಖತೆ, ಉದ್ವೇಗ, ಆತ್ಮಲೋಪದ ಅನುಭವ ಇವೆಲ್ಲವನ್ನೂ ಒಳಗೊಂಡ ಅನನ್ಯ ಶೈಲಿಯನ್ನು ಈ ಕಾದಂಬರಿ ಒಳಗೊಂಡಿದೆ.

ಮೊದಲಿಗೆ ರಾಣೆಯು ತನ್ನ ಆದರ್ಶ ವ್ಯಕ್ತಿ, ಪುಜಾರ ಮಾಸ್ತರರ ಮೂಲಕ, ಐತಿಹಾಸಿಕ ಬದಲಾವಣೆಗಳು, ಸಾಮಾಜಿಕ ಏರುಪೇರು, ಆರ್ಥಿಕ ಪುನರ್ರಚನೆ, ತಂತ್ರಜ್ಞಾನದಿಂದ ಬಂದ, ಕ್ರಾಂತಿಕಾರಿ ವ್ಯವಸ್ಥೆ. ರಾಜಕೀಯದಲ್ಲಿನ ಆದರ್ಶವಾದಗಳನ್ನು ಮೂಲೆಗುಂಪು ಮಾಡಿದ ಪ್ರಸ್ತುತ ಸಮಾಜ. ಜೊತೆಗೆ ಮಾರ್ಕ್ಸ್, ಗಾಂಧಿ, ರಾಯ್, ನೆಹರು ಇವರುಗಳು ಕಲ್ಪಿಸಿದ ಸಾಮಾಜಿಕ ಸ್ಥಿತ್ಯಂತರಗಳು, ಮುಂದೆ ಹೇಗೆ ದುಃಸ್ವಪ್ನಗಳಾದವು, ಇವುಗಳನ್ನು ಕಾದಂಬರಿ ಸಾರ್ಥಕವಾಗಿ ಬಿಂಬಿಸುತ್ತಾ, ಜೊತೆಗೆ ಗಾಂಧಿವಾದಿಗಳಾದ, ಮಾಸ್ತರವರ, ಹತಾಶೆ, ಅವರ ಕುಟುಂಬದ ಒಳಸುಳಿಗಳು ಇವುಗಳ ಮೂಲಕ ಪರಿಚಯಿಸುವ ಪ್ರಯತ್ನ ಮಾಡಿದರೂ, ಅದೇ ಕಾದಂಬರಿಯ ಕೇಂದ್ರಬಿಂದುವಲ್ಲ.

ಆದರ್ಶ - ಅಸ್ತಿತ್ವವಾದಗಳೊಂದಿಗೆ ತೊಳಲಾಡುವ ರಾಣೆ, ತಾನು ಪ್ರೀತಿಸಿ ಮದುವೆಯಾದ ಬ್ರಾಹ್ಮಣ ಪ್ರಜ್ಞೆಯ ಯಶೋದೆಯ ಜೊತೆಗೆ ಹೊಂದಿರುವ ಪ್ರೀತಿ, ಅನ್ಯ ಹೆಣ್ಣುಗಳ ಸಹವಾಸಮಾಡಿದ, ಪಾಪಪ್ರಜ್ಞೆಯೊಂದಿಗೆ ತೊಳಲಾಡುತ್ತಾನೆ. ರಾಣೆ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತ, ಕೆಲಸಕ್ಕೆ ರಾಜೀನಾಮೆ ನೀಡಿ, ಸ್ವಂತ ಕಾಂಟ್ರಾಕ್ಟ್ ಮಾಡಲು ಆರಂಭಿಸಿದ ಪ್ರಾರಂಭದಲ್ಲಿ, ಲೋ-ಬಡ್ಜೆಟ್ ಮನೆ ನಿರ್ಮಾಣ ಮಾಡುವ ಸಂದರ್ಭದಲ್ಲಿ, ಆರ್ಕಿಟೆಕ್ಟ್ ಗಳಾದ, ವಸಂತ ಮತ್ತು ಅಶ್ವಿನಿಯರ ಪರಿಚಯವಾಗುತ್ತದೆ. ಅಶ್ವಿನಿಯೊಂದಿಗಿನ ಸ್ನೇಹ ಗಾಢವಾಗುತ್ತಾ ಹೊಗುತ್ತದೆ. ಇದರಿಂದ ರಾಣೆಯು ತನ್ನ ಟೀನೇಜ್ ಮಗನಿಂದ ದೂರವಾಗುತ್ತಾ ಹೋಗುತ್ತಾನೆ. ಪತ್ನಿ ಯಶೋದೆಗೆ ಕೂಡ ಇದರ ಅರಿವಾಗುತ್ತದೆ. ವಸಂತನಿಗೆ ಇದು ತಿಳಿದಿದ್ದರೂ ಆತನಿಗೆ, ಅಶ್ವಿನಿ ಯೊಂದಿಗೆ ಲಿವ್-ಇನ್-ರಿಲೇಷನ್ ಮಾತ್ರ ಇರುತ್ತದೆ. ವಿಚ್ಚೇದಿತ ಕುಟುಂಬದ ಮಗಳಾದ ಅಶ್ವಿನಿ, ತಂದೆಯ ಬಳಿ ಹಿಂದಿರುಗಿ ಹೋಗಿಬಿಡುತ್ತಾಳೆ. ರಾಣೆಗೆ, ತಂದೆ ಮತ್ತು ಅಜ್ಜಿಯೊಂದಿಗೆ ಭಾವನಾತ್ಮಕ ಸಂಬಂಧವಿರುತ್ತದೆ. ಅವರಿಬ್ಬರಿಗೂ, ರಾಣೆಗೆ ಇತರ ಹೆಣ್ಣುಗಳ ಸಂಬಂಧವಿರುವುದು, ಅರಿವಿರುತ್ತದೆ. ಅಜ್ಜಿ ಒಮ್ಮೆ ಹೇಳುತ್ತಾಳೆ " ನಿನಗೆ ದೇವರಲ್ಲಿ ವಿಶ್ವಾಸವಿದೆಯೇ? ಆದರೆ ಆತನಿಗೆ, ಮನುಷ್ಯನಿಗಿಂತ, ಗಿಡ, ಬಳ್ಳಿಗಳಬಗ್ಗೆ ಹೆಚ್ಚು ಪ್ರೀತಿ. ಅದಕ್ಕೆ, ಅವುಗಳು ಒಣಗಿದರೂ ಪ್ರತಿ ವರ್ಷವೂ, ಮತ್ತೆ, ಮತ್ತೆ, ಚಿಗುರಿ, ಹೂ, ತುಂಬಿ ಸುರಿಸುವಂತೆ ಮಾಡಿದ್ದಾನೆ.". ಮನುಷ್ಯ ಹಾಗಿಲ್ಲ, ಹೆಂಡತಿಯನ್ನು ಪ್ರೀತಿಯಿಂದ ನೋಡಿಕೊ, ಎಂದು ಹೇಳುತ್ತಾಳೆ. ಅಶ್ವಿನಿಯಿಂದ, ಪ್ರೇಮಭಂಗಗೊಂಡ ನಾಯಕನ, ಮೂಲಕ ಲೇಖಕರು, ಮನುಷ್ಯ ಸಂಬಂಧದಲ್ಲಿ ನವ-ನವೀನತೆ ಬಗ್ಗೆ, ಹೊಸ ಹೊಳಹುಗಳನ್ನು ತೆರೆದಿಡುವ ಪ್ರಯತ್ನಮಾಡುತ್ತಾರೆ. ಕುಟುಂಬ ವ್ಯವಸ್ಥೆ ಬದಲಾಗುತ್ತಾ ಹೋದಾಗ, ಸಮಾಜ ಎದುರಿಸಬೇಕಾದ, ಸವಾಲುಗಳನ್ನು ತೆರೆದಿಡುತ್ತಾರೆ. ಇದಕ್ಕೆ ಯಾವುದೇ ಪರಿಹಾರ ಕೊಡದೆ, ಸಂಬಂಧಗಳು, ಸುಂದರವಾಗಿಬೇಕೆಂಬ, ವಾಂಛೆ, ವ್ಯಕ್ತಪಡಿಸುತ್ತಾರೆ. ವೈಚಾರಿಕತೆಯ ಸಂದಿಗ್ಧತೆಯನ್ನು ತಳೆದ, ದೇಸಾಯಿಯವರ ಕೃತಿ, ಅನೇಕ ವಿಷಯಗಳನ್ನು ಎತ್ತಿಹಿಡಿದು, ಯಾವುದೇ ನಿಲುವನ್ನು ನಿರ್ಧಾರವಾಗಿ ಎತ್ತಿಹಿಡಿಯದೆ, ಬದುಕಿನ ಭಾರವನ್ನು ತೊಡೆದುಕೊಳ್ಳಲಾಗದೆ, ಬಾಳುವುದೇ, ಮಾನವನ ಪಾಲಿಗೆ ಬಂದ ನಿರ್ಗತಿಕತೆ ಎನ್ನುವುದು ಕಾಣುತ್ತದೆ. ಮೇಲುನೋಟಕ್ಕೆ ಸಮಕಾಲೀನ, ಭಾರತೀಯತೆಯ ಚಿತ್ರಣವೆನ್ನಬಹುದಾದರೂ, ದಾರ್ಶನಿಕ ಸತ್ವಕೂಡಿಕೊಂಡಿರುವುದು, ಕಾದಂಬರಿಯ ಯಶಸ್ಸಿಗೆ ಕಾರಣವಾಗುತ್ತದೆ. ಶಾಂತಿನಾಥ ದೇಸಾಯಿಯವರು, ಶಿವಮೊಗ್ಗದ " ಕುವೆಂಪು ವಿಶ್ವವಿದ್ಯಾಲಯದ" ಪ್ರಥಮ ವೈಸ್ ಚಾನ್ಸಲರ್ ಆಗಿದ್ದರು. ನನ್ನ ಪತಿಗೆ ಆತ್ಮೀಯರು. ನಮ್ಮನ್ನು, ಅವರು ತಮ್ಮ ಕೊಲ್ಹಾಪುರಕ್ಕೆ ಕರೆದೊಯ್ದಿದ್ದರು. ಅವರ ತಾಯಿ ಹೆಸರು "ಸಾವಿತ್ರಿ ", ಅವರ ಕೊಲ್ಹಾಪುರದ ಮನೆಯ ಹೆಸರೂ ಸಾವಿತ್ರಿ. ಅವರ ಅವಧಿ ಮುಗಿದು, ಶಿವಮೊಗ್ಗ ಬಿಡುವಾಗ, ನಿಮ್ಮದೇ ಮನೆ ಯಾವಾಗಲೂ ನಮ್ಮ ಮನೆಗೆ ಸ್ವಾಗತ ಎಂದಿದ್ದರು. ಅವರ ನಿಧನದ ನಂತರ, ಶಿವಮೊಗ್ಗಕ್ಕೆ ಬಂದಿದ್ದ ಅವರ ಪತ್ನಿ, ಸುಮಿತ್ರಾ ದೇಸಾಯಿಯವರು" ಅಂತರಾಳ " ಕೃತಿಯನ್ನು ಕೊಟ್ಟಿದ್ದರು. ಇಂದು ಅವರಿಬ್ಬರೂ ಇಲ್ಲ. "ಅಂತರಾಳ" ದ ಬಗ್ಗೆ ಬರೆಯುವಾಗ, ಮನಸ್ಸು ಭಾರವಾಗುತ್ತದೆ.

About the Author

ಶಾಂತಿನಾಥ ದೇಸಾಯಿ
(22 July 1929 - 26 March 1998)

ನವ್ಯಕಾದಂಬರಿಕಾರರು, ವಿಮರ್ಶಕರು, ಕಥೆಗಾರರೆಂದೇ ಪ್ರಸಿದ್ಧರಾಗಿದ್ದ ಶಾಂತಿನಾಥ ದೇಸಾಯಿಯವರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ. ಪ್ರಾಥಮಿಕ ಮತ್ತು ಮೆಟ್ರಿಕ್ ವಿದ್ಯಾಭ್ಯಾಸವನ್ನು ಧಾರವಾಡದಲ್ಲಿ ಮುಗಿಸಿದರು. ಮುಂದೆ ಮುಂಬಯಿಯ ವಿಲ್ಸನ್ ಕಾಲೇಜಿನಿಂದ ಬಿ.ಎ. ಹಾಗೂ ಎಂ.ಎ. ಪದವಿ ಪಡೆದರು. ಆನಂತರ ಬ್ರಿಟಿಷ್ ಸ್ಕಾಲರ್‌ಷಿಪ್ ಪಡೆದು ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ಅಧ್ಯಯನ ಮಾಡಿದರು.ಅಲ್ಲಿಂದ  ಹಿಂದಿರುಗಿ ಬಂದನಂತರ ಕರ್ನಾಟಕ ವಿಶ್ವವಿದ್ಯಾಲಯ, ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಉಪ ಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ನಂತರ 1988ರಲ್ಲಿ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸಲ್ಲಿಸಿದ ಸೇವೆಸಲ್ಲಿಸಿದರು. ಕರ್ನಾಟಕ ಮತ್ತು ಕೇಂದ್ರ ಸಾಹಿತ್ಯ ಅಕಾಡಮಿ ಮತ್ತು ಜ್ಞಾನಪೀಠ ...

READ MORE

Related Books