‘ಗೈಡ್’ ಆರ್.ಕೆ. ನಾರಾಯಣ್ ಅವರ ಇಂಗ್ಲಿಷ್ ಕಾದಂಬರಿಯನ್ನು ಲೇಖಕ ಪ್ರಮೋದ ಮುತಾಲಿಕ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ರೇಲ್ವೆ ರಾಜು ಎಂದೇ ಪ್ರಸಿದ್ಧನಾದ ಒಬ್ಬ ನಿರಪಾಯಿ ಯುವಕನ ಕಥೆ ಇದು. ಯಾವ ಪೂರ್ವ ತಯ್ಯಾರಿಯೂ ಇರದೆ ಬದುಕನ್ನು ಅದು ಬಿಚ್ಚಿಕೊಂಡಂತೆ ಅದಕ್ಕೆ ತನ್ನನ್ನು ಒಡ್ಡಿಕೊಳ್ಳುತ್ತ ಹೋಗುವ ರಾಜು ಅಚಾನಕ್ ಆಗಿ ಸುಂದರ ನರ್ತಕಿ ‘ರೋಸಿ’ಯಿಂದ ಆಕರ್ಷಿತನಾಗುವನು. ಅವಳು ತನ್ನ ಸಂಶೋಧಕ ಪತಿಯಿಂದ ದೂರವಾಗುವದಕ್ಕೂ ಕಾರಣನಾಗುವನು. ಸಹಜ ಪ್ರತಿಭೆಯ ರೋಸಿಯನ್ನು ತನ್ನ ಪರಿಶ್ರಮದಿಂದ ಒಬ್ಬ ದೊಡ್ಡ ನರ್ತಕಿಯನ್ನಾಗಿ ಮಾಡುತ್ತಾನೆ. ಅವಳೊಂದಿಗೆ ತಾನೂ ಪ್ರಸಿದ್ಧಿ ಮತ್ತು ಸಂಪತ್ತನ್ನು ಸಂಪಾದಿಸುತ್ತಾನೆ. ಸಂಪಾದಿಸುವುದರ ಜೊತೆಗೆ ಸಾಕಷ್ಟು ಕಳೆದುಕೊಳ್ಳುತ್ತಾನೆ. ಜೈಲುವಾಸವನ್ನೂ ಅನುಭವಿಸುವವನು. ಜೈಲಿನಿಂದ ಹೊರಬಂದ ಮೇಲೆ ವಿಚಿತ್ರ ಪರಿಸ್ಥಿತಿಗೆ ಪ್ರಜ್ಞಾಪೂರ್ವಕವಾಗಿ ಒಪ್ಪಿಸಿಕೊಳ್ಳುತ್ತ ಒಂದರ್ಥದಲ್ಲಿ ಸಂತನಾಗಿ ಬಿಡುತ್ತಾನೆ. ಹೀಗೆ ಗೈಡ್ ರಾಜುವಿನ ಏಳು-ಬೀಳುವಿನ ಇತಿಹಾಸ. ಈ ಇತಿಹಾಸದ ನಿಗೂಢತೆಯನ್ನು ಆರ್.ಕೆ.ನಾರಾಯಣ್ ಅವರು ತಮ್ಮ ನವಿರಾದ ಹಾಸ್ಯ ಶೈಲಿಯಲ್ಲಿ ಭೇದಿಸುತ್ತಾರೆ. ಇದರೊಂದಿಗೆ ಕೆಲ ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತಾರೆ.
ಲೇಖಕ ಪ್ರಮೋದ ಮುತಾಲಿಕ ಅವರು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದು, ಅನುವಾದ ಮತ್ತು ವಿಮರ್ಶಾ ಕ್ಷೇತ್ರದಲ್ಲಿ ಕೃಷಿಮಾಡಿದ್ದಾರೆ. 1998ರಲ್ಲಿ ಚಿನುವ ಅಚಿಬೆಯ ಥಿಂಗ್ಸ್ ಫಾಲ್ ಅಪಾರ್ಟ್ ಕಾದಂಬರಿಯನ್ನು ಕಳಚಿದ ಕೊಂಡಿ ಎಂಬ ಹೆಸರಿನಲ್ಲಿ ಅನುವಾದಿಸಿದ್ದು, ಇಡೀ ಕೃತಿಯಲ್ಲಿ ಉತ್ತರ ಕರ್ನಾಟಕದ ಉಪಭಾಷೆಯ ಸೊಗಡನ್ನು ಬಳಸಿದ್ದಾರೆ. ಡಾ. ಎಚ್. ನರಸಿಂಹಯ್ಯನವರ ಆತ್ಮಕಥೆ ಹೋರಾಟದ ಹಾದಿ ಕೃತಿಯನ್ನು ಇಂಗ್ಲಿಷ್ ಗೆ ಅನುವಾದಿಸಿದ್ದಾರೆ. ಸಾಹಿತ್ಯ ವಿಮರ್ಶೆಯ ಕುರಿತಾದ ಹಲವು ಲೇಖನಗಳನ್ನು ಪ್ರಕಟಿಸಿದ್ದು, ಗೈಡ್(ಅನುವಾದಿತ ಕಾದಂಬರಿ), ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ...
READ MORE