ಇತಿಹಾಸದ ಮೊಗಸಾಲೆಯಲ್ಲಿ

Author : ಕೆ.ಟಿ.ಗಟ್ಟಿ

Pages 220

₹ 195.00




Year of Publication: 2019
Published by: ಅಂಕಿತ ಪುಸ್ತಕ
Address: #53 ಶ್ಯಾಮ್‌ ಸಿಂಗ್‌ ಕಾಂಪ್ಲೆಕ್ಸ್‌, ಗಾಂಧಿ ಬಜಾರ್‌ ಮುಖ್ಯರಸ್ತೆ, ಅನಿಕರ್‌ ಟೆಕ್ಸ್‌ಟೇಲ್ಸ್‌ ಸಿಲ್ಕ್ & ಸ್ಯಾರೀಸ್‌ ಅಂಗಡಿ ಹತ್ತಿರ, ಬಸವನಗುಡಿ, ಬೆಂಗಳೂರು-560004
Phone: 08026617100

Synopsys

ಕೆ.ಟಿ. ಗಟ್ಟಿ ಅವರ ಕಾದಂಬರಿ ಇತಿಹಾಸದ ಮೊಗಸಾಲೆಯಲ್ಲಿ. ಇತಿಹಾಸದ ಕಥಾಹಂದರವಿರುವ ಈ ಕಾದಂಬರಿಯಲ್ಲಿ ರಾಬರ್ಟ್‌ ಕ್ಲೈವ್‌ಇಂದ ರಘುರಾಮಯ್ಯನವರೆಗೆ ಇತಿಹಾಸದ ಹೆಜ್ಜೆಗಳಲ್ಲಿ ಕಾಲಿಡುತ್ತಾ ಹೋದರೆ, ಬರೀ ಇತಿಹಾಸವೇ ಅಲ್ಲ. ಸಮುದ್ರವನ್ನು ಕಡೆದ ಸರಾಸುರನ್ನು, ಮೋಹಿನಿಯ ಬೆನ್ನಿಗೆ ಬಿದ್ದ ಭಸ್ಮಾಸುರರನ್ನು, ಮಗುವನ್ನು ಪೊದರಿನಲ್ಲೆಸೆದುಹೋದ ಮೇನಕೆಯರನ್ನು ದ್ರೌಪದಿಯ ಸೀರೆಯೆಳೆದ ದುಶ್ಯಾಸನರನ್ನು, ಶ್ರೀಕೃಷ್ಣನ ಹದಿನಾರು ಸಾವಿರ ಪ್ರೇಯಸಿಯರನ್ನು, ಇಂದ್ರ, ಚಂದ್ರ, ರಾಹು, ಕೇತುಗಳನ್ನು, ಎಂದು ಸಾಯದ ಚೋಮ, ಚುಕ್ರ, ಅಂಗಾರರನ್ನು ಈ ಕಾದಂಬರಿಯಲ್ಲಿ ಕಾಣಬಹುದು. 

About the Author

ಕೆ.ಟಿ.ಗಟ್ಟಿ
(22 July 1938)

ಕಾದಂಬರಿಕಾರ, ಭಾಷಾತಜ್ಞ, ಸಮರ್ಥ ಪ್ರಾಧ್ಯಾಪಕರೆನಿಸಿದ ಕೆ.ಟಿ. ಗಟ್ಟಿಯವರು ಕಾಸರಗೋಡು ಸಮೀಪದ ಕೂಡ್ಲೂವಿನಲ್ಲಿ ಜನಿಸಿದರು. ತಂದೆ ಧೂಮಪ್ಪಗಟ್ಟಿಯವರು ಕೃಷಿಕರಾದರೂ ಯಕ್ಷಗಾನ ಕಲೆಯ ಬಗ್ಗೆ ಅಪಾರ ಒಲವಿದ್ದವರು. ತಾಯಿ ಪರಮೇಶ್ವರಿ ತುಳು-ಮಲಯಾಳಂ ಪಾಡ್ದನ ಹಾಡುಗಳನ್ನು ಕಲಿತವರು. ಉತ್ತಮ ಭಾಷೆ, ಆಕರ್ಷಕ ಶೈಲಿ, ಹೊಸ ಹೊಸ ವಸ್ತು, ಸರಳ ನಿರೂಪಣೆಗಳ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಮನೆ ಮಾತಾದ ಹಿರಿಯ ಕಥೆಗಾರ ಕೆ.ಟಿ.ಗಟ್ಟಿ ಅವರು ಎಲ್ಲಾ ಓದುಗರಿಗೆ ಚಿರಪರಿಚಿತರು. ಕೇರಳ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಬಿಎಡ್ ಪದವಿ ಪಡೆದಿರುವ ಕೆ.ಟಿ.ಗಟ್ಟಿ ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯವರು. ಜನಿಸಿದ್ದು 1938ರಲ್ಲಿ. ಸದ್ಯ ...

READ MORE

Reviews

ಸಮಾಜದ ಚರಿತ್ರೆ ಹಿಡಿಯುವ ಅದ್ಭುತ ಕಾದಂಬರಿ

ಕೆ.ಟಿ. ಗಟ್ಟಿ ಯವರ ಯಶಸ್ವೀ ಕಾದಂಬರಿಗಳಲ್ಲಿ ಒಂದಾದ 'ಇತಿಹಾಸದ ಮೊಗಸಾಲೆಯಲ್ಲಿ ತುಳುನಾಡಿನ ಕರಾವಳಿ ಪ್ರದೇಶದ (ನಿರ್ದಿಷ್ಟವಾಗಿ ಕಾಸರಗೋಡು ಪ್ರದೇಶ ಇರಬಹುದು ಎಂದು ಊಹಿಸಬಹುದಾದ) ಸಾಮಾಜಿಕ ಇತಿಹಾಸವನ್ನು ಒಂದು ಕಥಾನಕದಲ್ಲಿ ಚಿತ್ರಿಸುವ ಮೂಲಕ ಇಡಿಯ ದೇಶದ ಸಮಸ್ಯೆಯನ್ನು ಧ್ವನಿಸುತ್ತದೆ ಮತ್ತು ಮನುಕುಲದ ಎದುರಿಗಿರುವ ಸಾರ್ವಕಾಲಿಕ ಪ್ರಶ್ನೆಗಳನ್ನು ಈ ಪ್ರಾದೇಶಿಕ ಕಥೆಯ ಮೂಲಕವೇ ಎತ್ತುತ್ತದೆ. ಹಾಗಾಗಿ ಈ ಕಥಾನಕ ತನ್ನ ಕಥೆಯಿಂದಾಗಿ ಆಕರ್ಷಕವಾಗಿರುವ ಜತೆಗೆ ನಿರೂಪಣೆಯ ಫ್ಯಾಂಟಸಿ ತಂತ್ರಗಳಿಂದಾಗಿ ಕಾಲ ಮತ್ತು ದೇಶಗಳನ್ನು ಈ ಕಥೆಯ ಸನ್ನಿವೇಶದಿಂದ ಬಿಡುಗಡೆಗೊಳಿಸಿ ಸಾರ್ವತ್ರಿಕಗೊಳಿಸುವ ವಿಸ್ತರಣಾ ಗುಣವನ್ನು ಹೊಂದಿದೆ.

ಈ ಕಥೆಯ ಕೇಂದ್ರದಲ್ಲಿರುವುದು ಅಂಬಾವರ ಗ್ರಾಮದ ದೊಡ್ಡಮನೆ ಇತಿಹಾಸದ ಎಂಬ ಜಮೀನುದಾರಿಕೆಯ ಮತ್ತು ಮೊಗಸಾ ಪಾಳೇಗಾರಿಕೆಯ ಸ್ಥಾನಿಕ ಬ್ರಾಹ್ಮಣ ಕುಟುಂಬ. ಈ ಕುಟುಂಬಕ್ಕೆ ಎರಡು ಮೂರು ಗ್ರಾಮಗಳ (ಆರಗೋಡು, ಕಣ್ಯಪುರ, ಕಣಿಯೂರು) ಒಡತನ ಮತ್ತು ಶಾನುಭೋಗಿಕೆ ಇರುತ್ತದೆ. ಸುಮಾರು ನಾಲ್ಕುನೂರು ವರ್ಷಗಳ ಹಿಂದೆ (1598ರಲ್ಲಿ) ಈ ಕುಟುಂಬದ ಮೂಲ ಪುರುಷ ಶ್ರೀಧರಯ್ಯ ಗೋಪಾಲಕೃಷ್ಣ ದೇವಸ್ಥಾನದ ಉಸ್ತುವಾರಿಯವನ ಭಾವನಾಗಿ ಊರಿಗೆ ಸೇರಿಕೊಂಡು, ನಿಧಾನವಾಗಿ ದೇವಸ್ಥಾನದ ಉಸ್ತುವಾರಿಯನ್ನು ತನ್ನ ವಶಕ್ಕೆ ಪಡೆದು, ಹಣ ಸಂಪಾದಿಸಿ ಮನೆಯನ್ನು ದೊಡ್ಡದಾಗಿ ಕಟ್ಟಿಕೊಂಡು ನೆಲೆಯೂರಿದವನು. ಹತ್ತೊಂಬತ್ತನೆಯ ಶತಮಾನದ ಕೊನೆಯಲ್ಲಿ ಈ ಕುಟುಂಬದ ಯಜಮಾನ ಶಿವಪ್ಪಯ್ಯ ಸೀಮೆಗೆ ಭಯಂಕರನಾಗಿದ್ದ ದರೋಡೆಗಾರ ರುದ್ರಪ್ಪನಾಯಕನನ್ನು ಕಾಳಗದಲ್ಲಿ ಸಂಹರಿಸಿ, ಅವನ ಇನ್ನೂರು ಜನರ ಸೈನ್ಯವನ್ನು ಸೋಲಿಸಿದ್ದರಿಂದ ಬ್ರಿಟಿಷರಿಂದ ಚಿನ್ನದ ಕಡಗಗಳನ್ನು ಪಡೆದುದಲ್ಲದೆ ಎರಡು ಗ್ರಾಮಗಳ ಒಡೆತನವನ್ನು ಪಡೆದ. ಅವನ ಮಕ್ಕಳೇ ಈಗಿನ ಮೂವರು ಯಜಮಾನರು.

ಈ ಮನೆಯ ಮೊಗಸಾಲೆಯೇ ಇಲ್ಲಿ ವಾಚ್ಯ ಅರ್ಥ ದಲ್ಲಿರುವ ಇತಿಹಾಸದ ಮೊಗಸಾಲೆ. ಮಾಳಿಗೆ ಇರುವ ಈ ಮನೆಯ ಮೊಗಸಾಲೆಯ ಮೊದಲನೆಯ ಅಂತಸ್ತಿನಲ್ಲಿ ಇನ್ನೊಂದು (ಮೇಲಿನ) ಮೊಗಸಾಲೆ ಇದ್ದು, ಯಕ್ಷಗಾನ ಇತ್ಯಾದಿ ಪ್ರದರ್ಶನಗಳು ನಡೆಯುವಾಗ ದೊಡ್ಡಮನೆಯ ಹೆಂಗಸರು ಅಲ್ಲಿ ಕುಳಿತು ವೀಕ್ಷಿಸುವುದಿದೆ. ಮೇಲಿನ ಮೊಗಸಾಲೆ ಎನ್ನುವುದು ಸಾಂಕೇತಿಕವಾಗಿ ದೊಡ್ಡಮನೆಯ ಪೂರ್ವಿಕರ ಪೇತಾತ್ಮಗಳು ಕುಳಿತು ತಮ್ಮ ತಮ್ಮಲ್ಲೇ ಮಾತಾಡಿಕೊಳ್ಳುವ ಸ್ಥಳವೂ ಹೌದು. ಕಾದಂಬರಿಯ ಅದ್ಭುತರಮ್ಮ, ತಂತ್ರಗಳಲ್ಲಿ ಒಂದು ಈ ಪೇತ ಸಂಭಾಷಣೆ ಆದರೆ, ಇನ್ನೊಂದು ಯಕ್ಷಗಾನದ ಸನ್ನಿವೇಶಗಳು. ಯಕ್ಷಗಾನದ ದೃಶ್ಯಗಳನ್ನು ಕಾದಂಬರಿಯ ವಾಸ್ತವಕ್ಕೆ ಪ್ರತಿರೂಪವಾಗಿ ನಿಲ್ಲಿಸುವಂತಹ ಅಧ್ಯಾಯಗಳಿವೆ. ಅಂಬಾವರದ ಗೋಪಾಲಕೃಷ್ಣ ದೇವರ ಹೆಸರಿನಲ್ಲಿ ಈ ಕುಟುಂಬದ ಯಜಮಾನಿಕೆಯ ಯಕ್ಷಗಾನ ಮೇಳ ಇರುವುದು ಮತ್ತು ಕಲಾವಿದ ಸುಬ್ಬ ಕಾದಂಬರಿಯ ಮುಖ್ಯ ಪಾತ್ರೆಗಳಲ್ಲಿ ಒಬ್ಬನಾಗಿರುವುದರಿಂದ ಇದು ಸಹಜವಾಗಿ ಬರುತ್ತದೆ. ಮೂರನೆಯ ಅದ್ಭುತ ರಮ್ಯ ತಂತ್ರವೆಂದರೆ ಕಾಲದೇಶಗಳನ್ನು ಮೀರಿ ಕಾದಂಬರಿಯಲ್ಲಿ ಪ್ರತ್ಯಕ್ಷವಾಗುವ ಐತಿಹಾಸಿಕ ಪಾತ್ರಗಳು. ಉದಾಹರಣೆಗೆ ಜವಾಹರಲಾಲ್ ನೆಹರೂ ಅವರ ಕನಸಿನಲ್ಲಿ ಮೆಕಾಲೆ ಮತ್ತು ವಿಲಿಯಂ ಬೆಂಟಿಂಕ್ ಬಂದು ಸಂಭಾಷಣೆ ನಡೆಸುವ ಒಂದು ಸನ್ನಿವೇಶ ಇದೆ. ಕೆ. ಟಿ. ಗಟ್ಟಿಯವರು ಇತಿಹಾಸವನ್ನು ಕಾಲ ದೇಶಗಳ ವಿಶಾಲವಾದ ಬೀಸಿನ ಭಿತ್ತಿಯಲ್ಲಿ ಕಾಣಿಸಲು ಈ ತಂತ್ರವನ್ನು ಬಳಸುತ್ತಾರೆ. ಕಾದಂಬರಿಯಲ್ಲಿ ಮುಖ್ಯ ನೆಲೆಯಲ್ಲಿರುವ ಗ್ರಾಮ ಸಮಾಜದ ಅನುವಂಶೀಯ ಅಳ್ಳಿಕೆಯ ಜತೆಗೆ ದೇಶದಲ್ಲಿ ತಲೆ ಎತ್ತುವ ಅಂತಹ ಮನೋಭಾವಗಳನ್ನು ಕೂಡ ಅವರು ಗಮನಿಸುತ್ತಾರೆ. ಮುನ್ನುಡಿ ರೂಪದಲ್ಲಿರುವ ಅವರ ವೈಚಾರಿಕ ಪ್ರಬಂಧವೂ ಅಧಿಕಾರ ದಾಹ ಆನುವಂಶೀಯ ಆಳ್ವಿಕೆಗಳನ್ನು ಜಾಗತಿಕವಾಗಿ ಗುರುತಿಸಿ ಅದರ ಪರಿಣಾಮಗಳನ್ನು ಚರ್ಚಿಸುತ್ತದೆ.

ಇತಿಹಾಸದ ಮೊಗಸಾಲೆಯಲ್ಲಿ ಕಾದಂಬರಿಯ ಕಾಲಕ್ಕೆ ಸುಮಾರು ಮುನ್ನೂರು ವರ್ಷಗಳ ಇತಿಹಾಸವುಳ್ಳ, ಒಂದೆಕರೆ ವಿಸ್ತೀರ್ಣದಲ್ಲಿದ್ದ ಅರಮನೆ ಯಂತಹ ಮನೆಯಲ್ಲಿ ವಾಸಮಾಡುವ ಅವಿಭಕ್ತ ಕುಟುಂಬದ ಹದಿಮೂರನೆಯ ತಲೆಮಾರಿನ ಈಶ್ವರಯ್ಯ, ಕೇಶವಯ್ಯ ಮತ್ತು ನಾರಾಯಣಯ್ಯ ಎಂಬವರ ಆಳ್ವಿಕೆ ನಡೆದಿರುತ್ತದೆ. ಅವರ ನಾಲ್ವರು ಸಹೋದರಿಯರ ಪೈಕಿ ಇಬ್ಬರು ವಿಧವೆಯರಾಗಿ ಮನೆ ಸೇರಿದ್ದಾರೆ.

ಒಟ್ಟು ಹದಿನೇಳು ಮಂದಿ ಮಕ್ಕಳು ಮನೆಯಲ್ಲಿದ್ದಾರೆ. ಈ ಕುಟುಂಬದ ಬೆಳವಣಿಗೆಯ ಹಾದಿಯಲ್ಲಿ ಒಂದು ರಹಸ್ಯ ಇತಿಹಾಸವೂ ಇದೆ. ಆಗ ಕುಟುಂಬದ ಏಕೈಕ ತಲೆಯಾಗಿದ್ದ ಶಿವರಾಮಯ್ಯನಿಗೆ ಗಂಡು ಸಂತಾನ ಇಲ್ಲದಾಗ, 1705ರಲ್ಲಿ ಈ ಊರಿಗೆ ಬಂದ ಬ್ರಿಟಿಷ್ ಸಮೀಕ್ಷಕ - ಗೂಢಚಾರ ನಿಯೋಗದ ರೀತಿಯಲ್ಲಿ ಅವನ ಪತ್ತಿಯನ್ನು ಕೂಡಿ, ಗಂಡು ಸಂತಾನವನ್ನು ಕರುಣಿಸುತ್ತಾನೆ. ಆನಂತರ ಬ್ರಿಟಿಷ್ ರಕ್ತವೂ ಈ ಕುಟುಂಬದಲ್ಲಿ ಬೆರೆತು ಕೆಲವು ಮಕ್ಕಳು ಕಪ್ಪಾಗಿಯೂ, ಕೆಲವು ಮಕ್ಕಳು ಬಿಳಿಯಾಗಿಯೂ ಹುಟ್ಟತೊಡಗುತ್ತವೆ.

ಕಥಾನಕದ ಕಾಲದಲ್ಲಿ ಕುಟುಂಬದಲ್ಲಿ ಮೂವರು ಸಹೋದರರು ಆಸ್ತಿಯನ್ನು ಪಾಲುಮಾಡಿಕೊಂಡು ಆಳುತ್ತಿದ್ದಾರೆ. ಈಶ್ವರಯ್ಯ ಮತ್ತು ಕೇಶವಯ್ಯ ಕಪ್ಪು ಸಂತಾನವಾದರೆ ನಾರಾಯಣಯ್ಯ ಬಿಳಿಯ ಸಂತಾನ ಎಲ್ಲರ ಗುಣವೂ ಒಂದೇ, ಊರಿನ ಎಲ್ಲಾ ಹೆಣ್ಣುಮಕ್ಕಳ ರುಚಿ ನೋಡಬೇಕೆಂಬ ಅಸಾಧ್ಯ ಕಾಮದಾಹ ಮತ್ತು ಬಡವರನ್ನು ಶೋಷಿಸಿ ಹಣ ಮಾಡಿಕೊಳ್ಳುವ ಅದಮ್ಯ ಧನದಾಹ. ಕುಟುಂಬದ ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ಇಲ್ಲ ಪ್ರಾಯ ಮೀರಿದರೂ ಮದುವೆಯ ಭಾಗ್ಯವೂ ಇಲ್ಲ. ಯಾಕೆಂದರೆ ಅದಕ್ಕೆಲ್ಲ ಸಮಯವನ್ನಾಗಲೀ, ಹಣವನ್ನಾಗಲೀ ವಿನಿಯೋಗಿಸಲು ಈ ದುಷ್ಟರಿಗೆ ಸಮಯವಿಲ್ಲ

ಈ ಕಾದಂಬರಿ ಸ್ತ್ರೀ ಸಮುದಾಯದ ಶೋಷಣೆಯನ್ನು, ಅವರಿಗೆ ಧ್ವನಿಯಿಲ್ಲದಿರುವುದನ್ನು ಅತ್ಯಂತ ಧ್ವನಿಪೂರ್ಣವಾಗಿ ದಾಖಲಿಸಿದೆ. ಈ ಕಾದಂಬರಿಯಲ್ಲಿ ಮೂವರು ಹೆಂಗಸರು ದೊಡ್ಡಮನೆಯವರ ಕಾಮಕ್ಕೆ ಬಲಿಯಾಗಲು ಒಪ್ಪದೆ ಧಿಕ್ಕರಿಸಿ ಸ್ವಂತ ಬದುಕನ್ನು ಕಟ್ಟಿಕೊಳ್ಳುತ್ತಾರೆ. ಯಕ್ಷಗಾನ ಕಲಾವಿದ ಸುಬ್ಬನ ಪೇಯಸಿ (ಮತ್ತು ನಂತರ ಪತ್ನಿ) ಅಕ್ಕಮ್ಮ, ಕಳ್ಳಭಟ್ಟಿ ದಂಧೆಯ ಪೀಯಾದ ಬಾಯಿ, ಮತ್ತು ಅಣ್ಣ ಮಡಿವಾಳನ ಮಗಳು, ನರ್ಸ್ ಉದ್ಯೋಗದ ಕಲ್ಯಾಣಿ. ಕಲ್ಯಾಣಿ ತನ್ನ ಆರ್ಥಿಕ ಸ್ವಾತಂತ್ರ್ಯ ಮತ್ತು ವಿದ್ಯಾಭ್ಯಾಸದ ನೆರವಿನಿಂದಾಗಿ ಸ್ವಂತಿಕೆಯುಳ್ಳವಳು. ಆದರೆ ದೊಡ್ಡಮನೆಯ ಯುವ ತಲೆಮಾರಿನ ಸುಸಂಸ್ಕೃತ ಯುವಕ ರಘುರಾಮಯ್ಯನಿಗೆ ಮೋಸವನ್ನೇ ಮಾಡುತ್ತಾಳೆ.

ದೊಡಮನೆಯವರ ಶೋಷಣೆಯ ಅತ್ಯಂತ ದಾರುಣ ಘಟನೆ ದಲಿತ ಹೆಂಗಸು ಅಂಗಾರು ತೋಟದಲ್ಲಿ ಬಿದ್ದ ಅಡಿಕೆಯನ್ನು ಹೆಕ್ಕುತ್ತಿದ್ದಾಗ ಧನಿಯಾದ ಕೇಶವಯ್ಯ ಅವಳಿಗೆ ನೀಡಿದ ಶಿಕ್ಷೆ ಅವಳ ಬಟ್ಟೆ ಬಿಚ್ಚಿಸಿ, ಅವಳ ನಗ್ನ ದೇಹದ ಸೊಂಟಕ್ಕೆ ಅಡಿಕೆಯ ಮಾಲೆಯನ್ನು ಸುತ್ತಿಸಿ, ಅವಳ ಬಟ್ಟೆಯಿಂದಲೇ ಅವಳು ಹೆಕ್ಕಿದ ಅಡಿಕೆಗಳನ್ನು ಕಟ್ಟಿಸಿ, ಅವಳಿಂದಲೇ ಹೊರಿಸಿಕೊಂಡು ಬಂದು ಅಂಗಳಕ್ಕೆ ಸುರಿಯಿಸುತ್ತಾನೆ. ಅವಳು ಮನೆಗೆ ಬಂದು ಅನ್ನ ನೀರು ನಿರಾಕರಿಸಿ ಅಳುತ್ತಾ ಮಲಗುತ್ತಾಳೆ. “ಅವಳ ದೇಹದಲ್ಲಿ ಜೀವಂತವಾಗಿದ್ದುದು ಕಣ್ಣೀರು ಮಾತ್ರ ಎಂಬಂತಿತ್ತು.” ಮೂರನೆಯ ದಿನ ಅವಳು ಕೊನೆಯುಸಿರೆಳೆಯುತ್ತಾಳೆ. 

ಮಂಗಳೂರಿನಲ್ಲಿದ್ದ ರಘುರಾಮಯ್ಯನಿಗೆ ಈ ಸುದ್ದಿ ತಿಳಿದಾಗ, “ನೀವು ಹೀಗೆ ಮಾಡಿದ್ದು ಸರಿಯಲ್ಲ ಚಿಕ್ಕಪ್ಪ. ಇದರಿಂದ ಒಳ್ಳೆಯದಾಗುವುದಿಲ್ಲ” ಎನ್ನುತ್ತಾನೆ. ಇದೇ ಕಾದಂಬರಿಯ ಕ್ಲೈಮ್ಯಾಕ್ಸ್‌ ಅನ್ನಬಹುದು. 

ಕಾದಂಬರಿ ಈ ಮನೆಯ ಯಜಮಾನರ ಶೋಷಣೆ ಗಳನ್ನು ಹಲವಾರು ಸನ್ನಿವೇಶಗಳಲ್ಲಿ ದಾಖಲಿಸಿದ ಬಳಿಕ ಪ್ರಸ್ತುತ ತಲೆಮಾರಿನ ಯುವಕ ರಘುರಾಮಯ್ಯ ಬದುಕಿನ ನಿಜವಾದ ಮೌಲ್ಯ ಅರಿತು ಕುಸಿಯುತ್ತಿರುವ ಈ ಮನೆಯನ್ನು ಎತ್ತಿ ನಿಲ್ಲಿಸಲು ಮಾಡುವ ವಿಫಲ ಪ್ರಯತ್ನಗಳನ್ನು ದಾಖಲಿಸುತ್ತದೆ. ರಘುರಾಮಯ್ಯನೇ ಕಾದಂಬರಿಯ ದುರಂತ ನಾಯಕ. ಅವನು ಪ್ರೀತಿಸಿದ ಕಲ್ಯಾಣಿ ಅವನಿಗೆ ಕೈ ಕೊಡುತ್ತಾಳೆ. ಯಕ್ಷಗಾನ ಮೇಳ ವನ್ನು ಮತ್ತೆ ಹೊರಡಿಸಲು ಅವನು ಆಸ್ತಿಯನ್ನು ಮಾರಿ ಬಂಡವಾಳ ಹೂಡಿದರೂ ವಿಫಲನಾಗುತ್ತಾನೆ. ಬೆಳೆದುನಿಂತ ಹೆಣ್ಣುಮಕ್ಕಳಿಗೆ ಮದುವೆ ಮಾಡಬೇಕಾಗಿದೆ. ಅತ್ತ ಮೂರ್ಖನಾದ ಚಿಕ್ಕಪ್ಪನ ಮಗ ವಾಸುದೇವಯ್ಯ ಆಸ್ತಿ ಮಾರಿ ಇರಿಸಿದ್ದ ಹಣದ ಕಟ್ಟನ್ನು ಸೆಳೆದುಕೊಂಡು ಮನೆಬಿಟ್ಟು ಹೋಗಿ, ಸೂಳೆಯೊಬ್ಬಳ ಮಗಳನ್ನು ಮದುವೆಯಾಗಿ ಅಲ್ಲೇ ನೆಲೆಸಿದವನು, ರಹಸ್ಯವಾಗಿ (ಬಹುಶಃ ಹಣಕ್ಕಾಗಿ) ಮನೆಗೆ ನುಗ್ಗಿ ತನ್ನ ಅಪ್ಪ ಕೇಶವಯ್ಯನನ್ನೇ (ರಘುರಾಮನ ಚಿಕ್ಕಪ್ಪ) ಕೊಂದು ಓಡುವ ದೃಶ್ಯದೊಂದಿಗೆ ಕಾದಂಬರಿ ಕೊನೆಗೊಳ್ಳುತ್ತದೆ. ರಘುರಾಮನ ವ್ಯಕ್ತಿತ್ವವನ್ನು ನೋಡಿದರೆ ಅವನು ಈ ಎಲ್ಲ ಅನ್ಯಾಯದ ಇತಿಹಾಸದ ಭಾರದಿಂದ ಮುಕ್ತ ನಾಗಿ ಹೊಸ ಬದುಕನ್ನು ಪ್ರಾರಂಭಿಸಬಹುದು ಎಂದು ಊಹಿಸಬಹುದಾದರೂ ಲೇಖಕರು ಆ ಸೂಚನೆ ಕೊಡದೆ ಕಾದಂಬರಿಯನ್ನು ಮುಗಿಸಿದ್ದಾರೆ. ಅನ್ಯಾಯದ ಸಾಮ್ರಾಜ್ಯದ ಪತನವೇ ಕಾದಂಬರಿಯ ಆಶಯವಾಗಿರುವುದರಿಂದ ಈ ಬಗೆಯ ಕೊನೆಯಿದೆ ಅನಿಸುತ್ತದೆ. ಕೆ. ಟಿ ಗಟ್ಟಿಯವರ ಕಾದಂಬರಿಗಳಲ್ಲಿ ಈ ಕಾದಂಬರಿಗೆ ಅತ್ಯಂತ ವಿಶಿಷ್ಟವಾದ ಸ್ಥಾನವಿದೆ. ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಕೂಡ.

- ಡಾ. ಬಿ. ಜನಾರ್ದನ ಭಟ್

ಕೃಪೆ : ಹೊಸದಿಗಂತ (2020 ಮಾರ್ಚಿ 15)

Related Books