ಪ್ರಹರ : ಹಾಡುವ ಗಡಿಯಾರ

Author : ಪಂಡಿತ್ ಪ್ರವೀಣ್ ಗೋಡ್ಖಿಂಡಿ

Pages 156

₹ 120.00




Year of Publication: 2021
Published by: ಸಪ್ನ ಬುಕ್ ಹೌಸ್
Address: # 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು
Phone: 08040114455

Synopsys

‘ಪ್ರಹರ : ಹಾಡುವ ಗಡಿಯಾರ’ ಕೃತಿಯು ಪಂಡಿತ್ ಪ್ರವೀಣ್ ಗೋಡ್ಖಿಂಡಿ ಅವರ ಕಾದಂಬರಿಯಾಗಿದೆ. ಶಾಸ್ತ್ರೀಯ ಸಂಗೀತವನ್ನು ಆಧರಿಸಿ ಬರೆದಿರುವ ಈ ಕಾಲ್ಪನಿಕ ಕತೆಯನ್ನು ಹಾಡುವ ಗಡಿಯಾರದ ಸುತ್ತ ಹೆಣೆಯಲಾಗಿದೆ. ಎಂಟು ಅಧ್ಯಾಯಗಳನ್ನು ಒಳಗೊಂಡಿದೆ. ಈ ಕೃತಿಯನ್ನು ಅಕ್ಷರ ಮತ್ತು ಸಂಗೀತದ ಮಿಶ್ರಣವೆಂದೇ ಹೇಳಬಹುದು. ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದ ಪರಿಪಾಟದಂತೆ ಸಮಯಾನುಸಾರ ರಾಗಗಳನ್ನು ಹಾಡುವ ಅಪರೂಪದ ಗಡಿಯಾರ ಇಲ್ಲಿನ ಆಕರ್ಷಣೆ. ಈ ಅಂಶವು ಕೃತಿಯಲ್ಲಿ ರೂಪಕವಾಗಿ ಹರಡಿಕೊಂಡು ಹೋಗಿದೆ. ಸಂಗೀತದ ಚಿಕಿತ್ಸೆಯ ಕುರಿತ ಪರಿಪಾಠವು ಇಲ್ಲಿ ಭಿನ್ನವಾಗಿ ಮೂಡಿಬಂದಿರುತ್ತದೆ. ಕಥಾನಾಯಕ ಪಂಡಿತ್ ಶಾರದಾ ಪ್ರಸಾದ್ ಬುವಾ ಅವರು ಆವಿಷ್ಕರಿಸಿದ ಹಾಡುವ ಗಡಿಯಾರ, ಚಿತ್ರದ ಜೊತೆಗೆ ವಿವರಣೆಯಲ್ಲೂ ರೋಮಾಂಚಕವಾಗಿದೆ.

 

About the Author

ಪಂಡಿತ್ ಪ್ರವೀಣ್ ಗೋಡ್ಖಿಂಡಿ

ಪಂಡಿತ್ ಪ್ರವೀಣ್ ಗೋಡ್ಖಿಂಡಿ ಅವರು ಮೂಲತಃ ಧಾರವಾಡದವರು. ಕೊಳಲು ವಾದಕರೆಂದೇ ಪ್ರಸಿದ್ದರು. ಸಂಗೀತ ನಿರ್ಮಾಪಕ ಹಾಗೂ ನಿರ್ದೇಶಕರು. ಟಿ. ವಿ ಧಾರಾವಾಹಿಗಳಿಗೆ, ಬ್ಯಾಲೆ, ಚಲನಚಿತ್ರ, ಮತ್ತು ನಾಟಕಗಳಿಗೆ ಸಂಗೀತ ಸಂಯೋಜನೆ ಮಾಡಿರುತ್ತಾರೆ. ಅವರ ಪ್ಯೂಶನ್ ಆಲ್ಬಮ್ ಗಳು ಪ್ರಸಿದ್ದಿ ಪಡೆದಿವೆ. ‘ರಾಗರಂಜಿನಿ’ ಎಂಬ ರಾಗದ ಆಧಾರದ ಮೇಲೆ ಪ್ರಾಯೋಜಿಸಿದ ‘ಟೆಲಿವಿಶನ್ ಶೋ’ ಎಲ್ಲರ ಗಮನ ಸೆಳೆದಿದೆ. ದಕ್ಷಿಣ ಅಮೆರಿಕದ ಕೊಳಲು ವಾದಕರ ಸಂಘದಿಂದ ಏರ್ಪಡಿಸಿದ್ದ 5 ದಿನಗಳ ಕೊಳಲು ಸಮ್ಮೇಳನದಲ್ಲಿ ವಿಶ್ವದ ವಿವಿಧ ದೇಶಗಳ ಒಟ್ಟು 125 ಬಾನ್ಸುರಿ ವಾದಕರಲ್ಲಿ ಅವರು ಒಬ್ಬರು. ಅರ್ಜೆಂಟೀನಾ ದಲ್ಲಿ ನಡೆದ ವಿಶ್ವ ಕೊಳಲುವಾದಕರ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ...

READ MORE

Reviews

‘ಪ್ರಹರ ಹಾಡುವ ಗಡಿಯಾರ’ ಕೃತಿಯ ವಿಮರ್ಶೆ

ರಾಗದ ಪ್ರಜ್ಞೆಯ ಹಾಡುವ ಹೊತ್ತಿಗೆ ,,,,,

ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಮನೆಯೊಳಗೆ ಬಂಧಿಯಾಗಿದ್ದ ಹಲವರು ಹೊಸ ಹೊಸ ಹವ್ಯಾಸಕ್ಕೆ ತೆರೆದುಕೊಂಡರು. ಇದೇ ಲಾಕ್‌ಡೌನ್ ಪಂಡಿತ್ ಪ್ರವೀಣ್ ಗೋಡ್ಖಂಡಿ ಅವರನ್ನು ಸಾಹಿತಿಯನ್ನಾಗಿಸಿದೆ. ಸಪ್ತ ಸ್ವರ ನುಡಿಸಿದ ಕೈ ಇದೀಗ ಕಾದಂಬರಿಯೊಂದಕ್ಕೆ ಜನ್ಮವಿತ್ತಿದೆ. ಪ್ರಸಕ್ತ ಕಾಲದ ಮನರಂಜನಾ ವೇದಿಕೆ 'ಒವರ್ ದಿ ಟಾಪ್'ಗಾಗಿ (ಒಟಿಟಿ) ಶಾಸ್ತ್ರೀಯ ಸಂಗೀತ ಆಧಾರಿತ ಕಥೆಯೊಂದನ್ನು ಇಂಗ್ಲಿಷ್‌ನಲ್ಲಿ ಬರೆದಿದ್ದ ಪ್ರವೀಣ್ ಅವರು, ಆಪ್ತರಾದ ಜಯಂತ ಕಾಯ್ಕಿಣಿ ಅವರ ಸಲಹೆಯಂತೆ ಅದನ್ನು ಕನ್ನಡದಲ್ಲೇ ಇದೀಗ ಬರೆದು ಪ್ರಕಟಿಸಿದ್ದಾರೆ.

ಶಾಸ್ತ್ರೀಯ ಸಂಗೀತವನ್ನು ಆಧರಿಸಿ ಬರೆದಿರುವ ಈ ಕಾಲ್ಪನಿಕ ಕಥೆಯನ್ನು ಹಾಡುವ ಗಡಿಯಾರದ ಸುತ್ತಮುತ್ತ ಹೆಣೆಯಲಾಗಿದೆ. ಇದು ಅಕ್ಷರ ಮತ್ತು ಸಂಗೀತದ ಮಿಶ್ರಣ. ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಪರಿಪಾಟದಂತೆ ಸಮಯಾನುಸಾರ ರಾಗಗಳನ್ನು ಹಾಡುವ ಅಪರೂಪದ ಗಡಿಯಾರ ಇಲ್ಲಿನ ಆಕರ್ಷಣೆ. ಇದು ಕೃತಿಯಲ್ಲಿ ರೂಪಕವಾಗಿ ಅವರಿಸುತ್ತಾ ಹೋಗುತ್ತದೆ. ಇಲ್ಲಿ ಸಂಗೀತವನ್ನು ಬಳಸಿಕೊಂಡು ನೀಡುವ ಚಿಕಿತ್ಸೆಯ ಕುರಿತು ಬರವಣಿಗೆ ಇದೆ.

ಕಥಾನಾಯಕ ಪಂಡಿತ್ ಶಾರದಾಪ್ರಸಾದ್ ಬುವಾ ಅವರು ಆವಿಷ್ಕಾರಿಸಿದ ಹಾಡುವ ಗಡಿಯಾರ, ಚಿತ್ರದ ಜೊತೆಗೆ ವಿವರಣೆಯಲ್ಲೂ ರೋಮಾಂಚಕವಾಗಿದೆ. ಇಲ್ಲಿ ಅವಾಗಾವಾಗಿನ ರಾಗದ ಪ್ರಸ್ತಾಪವಿದೆ. ಸಂಗೀತದ ತಾಂತ್ರಿಕ ಮತ್ತು ಸುಪ್ತ ಸಂಗತಿಗಳ ಅರ್ಥ ಮತ್ತು ಟಿಪ್ಪಣಿಯೂ ಅದೇ ಪುಟದಲ್ಲಿ ಅಡಕವಾಗಿದೆ. ಸಂಗೀತದ ಪರಿಚಯವಿಲ್ಲದವರೂ ಇದನ್ನು ಓದಬಹುದು, ಅನುಭವಿಗಳಿಗೆ ಮತ್ತಷ್ಟು ರುಚಿಸಲೂಬಹುದು. ಒಂದರ್ಥದಲ್ಲಿ ಎಂಟು ಅಧ್ಯಾಯಗಳ ಈ ಕಾದಂಬರಿಯು ಸಂಗೀತವನ್ನು ಉಸಿರಾಡುತ್ತಿದೆ. ಜೊತೆಗೆ, ಮುನ್ನುಡಿ ಬರೆದ ಪಂ.ವಿನಾಯಕ ತೊರವಿ ಅವರು ಹೇಳಿದಂತೆ ಈ ಕೃತಿಯು 'ನಶಿಸಿ ಹೋಗುತ್ತಿರುವ ರಾಗ ಸಮಯದ ಪ್ರಜ್ಞೆಯನ್ನು ಪುನಃ ಸ್ಥಾಪಿಸುವ ಗೋಡ್ಖಂಡಿ ಅವರ ಪ್ರಯತ್ನ. ಕನ್ನಡ ಬರವಣಿಗೆಯಲ್ಲಿ ಸಂಪೂರ್ಣ ಹಿಡಿತವಿಲ್ಲದೇ ಇದ್ದರೂ ಕಥೆ ಸರಾಗವಾಗಿ ಓದಿಸಿಕೊಂಡು ಹೋಗುವಂತಿದೆ. ಸಂಭಾಷಣೆಗಳು ಧಾರವಾಡ ಕನ್ನಡದ ಸೋಗು ತೊಟ್ಟಿವೆ. 

(ಕೃಪೆ : ಪ್ರಜಾವಾಣಿ 2022 ಫೆ. 20)

‘ಪ್ರಹರ ಹಾಡುವ ಗಡಿಯಾರ’ ಕೃತಿಯ ವಿಮರ್ಶೆ (ಪ್ರಜಾವಾಣಿ)

Related Books