‘ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯಾ’ ಕೃತಿಯು ಎನ್. ಸಂಧ್ಯಾರಾಣಿ ಹಾಗೂ ಭಾರತಿ ಬಿ. ಅವರ ಕವನಸಂಕಲನ. ಕೃತಿಗೆ ಮುನ್ನುಡಿ ಬರೆದಿರುವ ಕೆ. ವೈ ನಾರಾಯಣಸ್ವಾಮಿ ಅವರು, `ಈ ಸಂಯುಕ್ತ ಸಂಕಲನವು ಒಂದು ನಿರ್ದಿಷ್ಟ ವಸ್ತುವೊಂದನ್ನು ಕುರಿತು ತಾವು ತೀವ್ರವಾಗಿ ಪರಿಭಾವಿಸಿ ಬರೆದ ಮನೋಯಾನಗಳ ಹಾಗೂ ಅನುಭವ ಪ್ರಯಾಣಗಳ ಅಗ್ನಿದಿವ್ಯದಂತಹ ನಿರೂಪಣೆಗಳ ಸಂಕಲನವಾಗಿರುವುದು ಇದರ ವಿಶೇಷ. ಇಲ್ಲಿ ಸಂಕಲಿತವಾದ ಕವಿತೆಗಳಲ್ಲಿ ಒಳ ಸಂವಾದಗಳು ಏರ್ಪಡುವ ಮಾದರಿಗಳನ್ನು ಕಾಣಬಹುದು. ಇಬ್ಬರು ಸಮಕಾಲೀನ ಕವಿಗಳು ಹೀಗೆ ಜಿದ್ದಿಗೆ ಬಿದ್ದಂತೆ ಅನಾದಿಯಿಂದ ಮನುಷ್ಯಲೋಕ ಶೋಧಿಸುತ್ತಿರುವ ಸಂಗತಿಯನ್ನೇ ಬೆನ್ನುಹತ್ತಿ ಹಲ್ಲುಕಚ್ಚಿ ಬರೆದಿರುವುದು ಸೋಜಿಗವಾಗಿದೆ. ಆದ ಕಾರಣ, ಇದು ಕನ್ನಡ ಕಾವ್ಯಲೋಕದಲ್ಲಿ ಒಂದು ಅಪರೂಪದ ಪ್ರಯೋಗವೆಂದೇ ಹೇಳಬೇಕು. ಈ ಸಂಕಲನದ ಮತ್ತೊಂದು ಮುಖ್ಯವಾದ ಸಾಧನೆಯೆಂದರೆ, ಇಲ್ಲಿನ ನಿರೂಪಣೆಗಳು ವರ್ತಮಾನದಲ್ಲಿ ಕನ್ನಡದ ಮಹಿಳಾ ಕಾವ್ಯ ಎದುರಿಸುತ್ತಿರುವ ಬಿಕ್ಕಟ್ಟೊಂದನ್ನು ಸುಲಭವಾಗಿ ದಾಟಿರುವುದು. ಸ್ತ್ರೀವಾದ ಕಲಿಸಿದ, ಹೆಣ್ಣನ್ನು ಬಲಿಪಶುಪೆಂದು ಬಿಂಬಿಸಿದ ನೆಲೆಯಿಂದ ಬಿಡುಗಡೆಗೊಂಡು ಆಲೋಚಿಸುತ್ತಿರುವ ವಿಧಾನ ಆರೋಗ್ಯಕರವಾದ ಬೆಳವಣಿಗೆಯಾಗಿದೆ’ ಎಂದು ಪ್ರಶಂಸಿಸಿದ್ದಾರೆ.
ಭಾರತಿ ಬಿ ವಿ ಅವರು ಜನಿಸಿದ್ದು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ. ಬಿ.ಕಾಂ ಪದವೀಧರೆಯಾಗಿರುವ ಇವರಿಗೆ ಕವಿತೆ ರಚನೆ, ಅನುವಾದ, ಪ್ರವಾಸ ಹವ್ಯಾಸಗಳಾಗಿವೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿರುವ ಇವರು 'ಸಾಸಿವೆ ತಂದವಳು', 'ಮಿಸಳ್ ಭಾಜಿ', 'ಕಿಚನ್ ಕವಿತೆಗಳು', 'ಜಸ್ಟ್ ಮಾತ್ ಮಾತಲ್ಲಿ', 'ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯ', 'ನಕ್ಷತ್ರಗಳ ಸುಟ್ಟ ನಾಡಿನಲ್ಲಿ', 'ಎಲ್ಲಿಂದಲೋ ಬಂದವರು' ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ 'ಸಾಸಿವೆ ತಂದವಳು' ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘದ ಎಂ.ಕೆ ಇಂದಿರಾ ಪ್ರಶಸ್ತಿ ಹಾಗೂ 'ಮಿಸಾಳ್ ಬಾಜಿ' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಬಂದಿದೆ. ...
READ MORE