ಭಾವ ಸೋಲುವ ವೇಳೆ

Author : ವಿಶ್ವನಾಥ ಅರಬಿ

Pages 110

₹ 100.00




Year of Publication: 2022
Published by: ಸಂಗೀತ ಜಗತ್ತು ಪ್ರಕಾಶನ
Address: #01 ನೆಲಮಹಡಿ ಯಂಕಾಚಿ ಬಿಲ್ಡಿಂಗ್ ಹೊಸ ವಿಠ್ಠಲ ಮಂದಿರ ರಸ್ತೆ ವಿಜಯಪುರ 586101
Phone: 9686604710

Synopsys

ಪ್ರತಿಯೊಬ್ಬ ಕವಿಯಲ್ಲಿ ಅನುಭವಗಳನ್ನು ಬಹಳ ವಿಭಿನ್ನವಾಗಿ ಹಂಚಿಕೊಳ್ಳುವ ಒಂದು ವಿಶೇಷ ಶಕ್ತಿ ಇರುತ್ತದೆ. ಆದರೆ ಅನುಭಾವಗಳನ್ನೂ ಸಹ ಅಷ್ಟೇ ತೀಕ್ಷ್ಣವಾಗಿ ಹರಿಬಿಡುವಂತಹ ಶಕ್ತಿ ಬೆರಳೆಣಿಕೆಯಷ್ಟು ಕವಿಗಳಲ್ಲಿ ಮಾತ್ರ ಕಾಣಬಹುದು. ಅಂಥವರ ಸಾಲಿನಲ್ಲಿ ಕವಿ ವಿಶ್ವನಾಥ ಅರಬಿಯವರು ನಿಲ್ಲಬಲ್ಲರೆಂಬುದಕ್ಕೆ ನಿದರ್ಶನವೇ ಈ "ಭಾವ ಸೋಲುವ ವೇಳೆ" ಕೃತಿ. ಪ್ರೇಮ ಕಾರಂಜಿ ಎಂಬ ತಮ್ಮ ಐದನೇ ಕೃತಿಯಲ್ಲಿ ಪ್ರೀತಿ-ಪ್ರೇಮ-ಪ್ರಣಯದ ಕವಿತೆಗಳನ್ನು ಅದ್ಭುತ ಅನುಭವಗಳೊಂದಿಗೆ ಲೀಲಾಜಾಲವಾಗಿ ರಚಿಸಿ ನಮಗೆಲ್ಲ ರಸದೌತಣವನ್ನು ಉಣಬಡಿಸಿರುವ ಅವರು ಇದೀಗ ಅದಕ್ಕೆ ತದ್ವಿರುದ್ಧವಾಗಿ ನೀರವ ಮೌನ ಆವರಿಸುವ, ಮನಸ್ಸಿನಾಳದಲ್ಲಿ ಹೊಕ್ಕು ನಮ್ಮ ವಿಚಾರಗಳನ್ನು ತುಸು ಹೊತ್ತು ಶಾಂತವಾಗಿ ನಿಲ್ಲಿಸುವಂತೆ ಮಾಡುವ ಭಾವನೆಯೇ ಸೋಲುವ ಭಾವಗಳನ್ನು ತುಂಬಿ ಸಾಹಿತ್ಯ ರಚನೆ ಮಾಡಿದ್ದಾರೆಂದರೆ ಅದು ಅವರ ಅನುಭಾವದಲೆಗಳ ಸಾಗರದ ಆಳವನ್ನು ಪರಿಚಯಿಸುತ್ತದೆ.

ಇಲ್ಲಿ ನೊಂದ ಪ್ರೇಮಿಯ ರೋಧನೆಯಿದೆ, ಪ್ರೇಯಸಿಗಾಗಿ ನಿವೇದನೆಯಿದೆ, ಏಕಾಂಗಿಯ ಸಂಕಷ್ಟವಿದೆ, ಭಾರವಾದ ಹೃದಯ ಬೇನೆಯಿದೆ ಹೀಗೆ ಎಲ್ಲಿಯಾದರೂ, ಯಾರ ಮಧ್ಯವಾದರೂ ಭಾವ ಸೋಲಬಹುದು ಎಂಬುದನ್ನು ಕವಿ ಮನಸ್ಸಿಗೆ ನಾಟುವಂತೆ ಕಟ್ಟಿಕೊಟ್ಟಿದ್ದಾರೆ. ಕಂದಾಯ ಕಾಯಕದಲ್ಲಿ ನಿತ್ಯ ಬಳಕೆಯಾಗುವ ಕವಿಯ ಲೇಖನಿ ಸಾಹಿತ್ಯ ರಚನೆಯಲ್ಲಿಯೂ ಸಹ ಪ್ರತಿನಿತ್ಯ ಓಡುತ್ತಲೇ ಇದೆ. ವೃತ್ತಿ ಪ್ರವೃತ್ತಿಗಳನ್ನು ಸರಿಸಮವಾಗಿ ತೂಗಿಸಿಕೊಂಡು ಹೋಗುತ್ತಿರುವ ಗ್ರಾಮ ಆಡಳಿತ ಅಧಿಕಾರಿ ಶ್ರೀ ವಿಶ್ವನಾಥ ಅರಬಿಯವರು ಭಿನ್ನ ವಿಭಿನ್ನ ಸಾಹಿತ್ಯ ಪ್ರಕಾರಗಳಲ್ಲಿ ಕೃತಿ ರಚಿಸಿದ್ದಾರೆ. ಮೊದಲಿಗೆ ಸಮಾಜಕ್ಕೆ ಚೈತನ್ಯ ನೀಡಬಯಸುವ ವಿಶ್ವ ಚೇತನ, ನಂತರ ವಿಶ್ವನ ಹಾಯ್ಕುಗಳು, ಧರಣಿ ಮತ್ತು ಬದುಕು ಎಂಬ ವಿಶೇಷ ಚುಟುಕು ಸಂಕಲನ, ವಿಜಯಪುರ ಸಾಹಿತ್ಯಕ್ಕೆ ಕೊಡುಗೆಯಾಗಿ ಅಬಾಬಿಗಳ ಲೋಕದಲ್ಲಿ ವಿಶ್ವ ಹಾಗೂ ಪ್ರೇಮ ಕಾರಂಜಿ ಎಂಬ ಪ್ರೇಮ ಕವನಗಳ ಸಂಕಲನ ಹೀಗೆ ಐದು ವಿಶಿಷ್ಟ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿ ಇದೀಗ ತಮ್ಮ ಆರನೇ ಕೃತಿಯನ್ನು ನಮ್ಮೆಲ್ಲರಿಗೆ ಒದಗಿಸಿದ್ದಾರೆ. ಭಾವ ಸೋಲುವ ವೇಳೆಯ ಕವನಗಳು ತಮ್ಮೆಲ್ಲರ ಮನಃಪಟಲಗಳಲ್ಲಿ ಹಾಯ್ದು ಹೋಗುವುದಂತೂ ನಿಶ್ಚಿತ. ಒಮ್ಮೆ ಓದಿ..... ನಿಮ್ಮ ನಿಮ್ಮ ಭಾವಕ್ಕೆ ತಕ್ಕಂತೆ ಅರ್ಥೈಸಿಕೊಳ್ಳಿ..... ಕಂದಾಯ ಕವಿ ವಿಶ್ವನಾಥ ಅರಬಿಯವರಿಂದ ಮತ್ತಷ್ಟು ಹೊಸ ಹೊಸ ಸಾಹಿತ್ಯ ಪ್ರಕಾರಗಳು ಹೊರಬರಲೆಂದು ಮನಸಾ ಶುಭ ಹಾರೈಸುತ್ತೇನೆ. ಶ್ರೀಮತಿ ಎಚ್ ಜಿ ಸಂಗೀತಾ ಮಠಪತಿ ಸಾಹಿತಿಗಳು ಮತ್ತು ಅಧ್ಯಕ್ಷರು ಸಂಗೀತ ಜಗತ್ತು ಪ್ರಕಾಶನ (ರಿ), ವಿಜಯಪುರ

About the Author

ವಿಶ್ವನಾಥ ಅರಬಿ
(02 May 1999)

ಲೇಖಕ ವಿಶ್ವನಾಥ ಅರಬಿ ಅವರು ಮೂಲತಃ  ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಾವೂರಿನವರು. ವಿಜಯಪುರದಲ್ಲಿ ವಾಸವಾಗಿದ್ದಾರೆ. ತಂದೆ ಬಸಪ್ಪ, ತಾಯಿ ಶಂಕ್ರಮ್ಮ, ವಿಜಯಪುರದಲ್ಲಿ ಪ್ರಾಥಮಿಕ-ಪ್ರೌಢಶಿಕ್ಷಣ, ಪಿ ಯು ಸಿ.ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ, ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಎಂ.ಎ. ಸ್ನಾತಕೋತ್ತರ (ಅರ್ಥಶಾಸ್ತ್ರ)  ಪದವಿ ಪಡೆದರು. ಕಾಲೇಜು ಹಂತದಲ್ಲಿ ಚರ್ಚಾ ಸ್ಪರ್ಧೆ,ಭಾಷಣ ಸ್ಪರ್ಧೆ, ಆಶುಭಾಷಣ, ದೇಶ ಭಕ್ತಿ ಗೀತೆ ಹೀಗೆ ರಾಜ್ಯಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಹಲವು ಪ್ರಶಸ್ತಿಗಳನ್ನು ಹಾಗೂ 2016-2017 ಸಾಲಿನಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಅಣಕು ಯುವ ...

READ MORE

Reviews

ಅನುಭಾವದಾಲಿಂಗನ...


ಪ್ರತಿಯೊಂದು ಅಕ್ಷರವೂ ಹೊರಹೊಮ್ಮುವ ಮುನ್ನ ಅಂತರಾಳದೊಳಗೊಂದು ನಾದ ಹೊರಡುತ್ತದೆ, ಅದು ಅನುಭವವೊ? ಅನುಭಾವವೊ? ಕಲ್ಪನೆಯೊ? ವಾಸ್ತವವೊ? ಎಂಬುದು ಬರಹಗಾರರಿಗೆ ಬಿಟ್ಟಿದ್ದು. ಈ ಎಲ್ಲ ಆಯಾಮಗಳಲ್ಲಿ ತಮ್ಮದೇ ವಿಶೇಷ ಛಾಪನ್ನು ಮೂಡಿಸಲು ಹೊರಟಿರುವ ಕವಿ ವಿಶ್ವನಾಥ ಅರಬಿ ಅವರಿಗೆ ಮೊಟ್ಟ ಮೊದಲನೆಯದಾಗಿ ಅಭಿನಂದನೆಗಳು. ಸಾಮಾನ್ಯವಾಗಿ ಸಾಹಿತ್ಯದ ರಚನೆ ಕಲ್ಪನೆಯನ್ನು, ವಾಸ್ತವ ಘಟನೆಯನ್ನು, ಸ್ವತಃ ಅನುಭವಿಸಿದ ಅನುಭವಗಳನ್ನು ಅಥವಾ ಅನುಭವಗಳನ್ನೂ ಮೀರಿದ ಅನುಭಾವಗಳನ್ನು ಆಧರಿಸಿರುತ್ತದೆ. ಇಲ್ಲಿ ಕವಿ ತನ್ನ ಅನುಭಾವದ ಮುಖೇನ ಸಾಹಿತ್ಯ ರಚಿಸಿರುವುದು ಪ್ರಶಂಸನೀಯ ಮತ್ತು ಹೆಮ್ಮೆಯ ಸಂಗತಿ. ನೊಂದ ಹೃದಯಗಳ ವೇದನೆಯನ್ನು ಕಣ್ಣಾರೆ ಕಂಡಂತೆ ಬಿಚ್ಚಿಡುವುದು ಅಥವಾ ತಾವೇ ಸ್ವತಃ ಅನುಭವಿಸಿದಂತೆ ಹೊರ ಹಾಕುವುದು ಕೆಲ ಪರಿಣಿತ ಸಾಹಿತಿಗಳಿಗೆ ಮಾತ್ರ ಸಾಧ್ಯವಾಗುತ್ತದೆ. ಅದರಲ್ಲೂ ಇಂತಹ ಸಂದರ್ಭಗಳನ್ನು ಗದ್ಯ ಶೈಲಿಯಲ್ಲಿ ರಚಿಸುವುದು ಸುಲಭ ಸಾಧ್ಯ. ಆದರೆ, ಓದುವವರ ಮನ ಹಿಂಡುವಂತೆ ಪದ್ಯ ಶೈಲಿಯಲ್ಲಿ ಕಾವ್ಯ ರಚಿಸುವುದು ಕಷ್ಟಸಾಧ್ಯ. ಅಂದರೆ ಗಟ್ಟಿತನದ ಸಾಹಿತ್ಯವನ್ನು ರಚಿಸುವುದು ಅಷ್ಟೊಂದು ಸುಲಭದ ಮಾತಲ್ಲ ಎಂದರ್ಥ. ಇಂತಹ ಗಟ್ಟಿ ಸಾಹಿತ್ಯವನ್ನು ರಚಿಸುವ ದಿಟ್ಟ ಕಾರ್ಯದಲ್ಲಿ ತೊಡಗಿರುವ ಕವಿ ವಿಶ್ವನಾಥರವರ ಭಾವ ಸೋಲುವ ವೇಳೆ ಕೃತಿಯು ಅವರ ಸಾಹಿತ್ಯ ಜ್ಞಾನದ ಆಳವನ್ನು ಪರಿಚಯಿಸುತ್ತದೆ. ಸದಾ ಎಲ್ಲರೊಂದಿಗೆ ನಗುನಗುತ್ತಾ ಸಂತೋಷದಿಂದ ಜೀವನ ಸಾಗಿಸುತ್ತಿರುವುದರ ಜೊತೆಗೆ ಪ್ರೀತಿ-ಪ್ರೇಮ-ಪ್ರಣಯದ ಕುರಿತಾದ ಅದ್ಭುತ ಕವನಗಳ ಗುಚ್ಛವನ್ನು ಪ್ರೇಮ ಕಾರಂಜಿಯಾಗಿಸಿ ಓದುಗರ ಮನ ತಲುಪಿಸಿರುವ ಅದೇ ವಿಶ್ವನಾಥ ಅರಬಿ ಅವರು ಇದೀಗ ಅದಕ್ಕೆ ತದ್ವಿರುದ್ಧವಾದ ವಿರಹ ವೇದನೆಯುಳ್ಳ ಮನ ಮಿಡಿಯುವ ಸಾಹಿತ್ಯ ರಚನೆ ಮಾಡುವುದು ಸುಲಭದ ಮಾತಲ್ಲ. ಪ್ರೇಮ ಕಾರಂಜಿಯಲ್ಲಿ ಎಷ್ಟು ಪ್ರೀತಿಯನ್ನು ಹೊರ ಹಾಕಿದ್ದಾರೋ ಅದಕ್ಕೆ ಸ್ಪರ್ಧೆ ನೀಡುವಂತೆ ಭಾವ ಸೋಲುವ ವೇಳೆಯಲ್ಲಿ ವಿರಹವನ್ನು ಹೊರ ಹಾಕಿದ್ದಾರೆ. ಆದರೆ, ಕವಿ ಸ್ಪಷ್ಟನೆ ನೀಡುತ್ತಾರೆ ಪ್ರೇಮ ಕಾರಂಜಿ ಅನುಭವವಾದರೆ ಭಾವ ಸೋಲುವ ವೇಳೆ ಅನುಭಾವವಾಗಿದೆ ಎಂದು. ಮನ ಕಲಕುವ ಕೃತಿ ಭಾವ ಸೋಲುವ ವೇಳೆಯೊಳಗಿನ ಎಲ್ಲ ಕವಿತೆಗಳನ್ನು ತಾವೆಲ್ಲರೂ ಓದಲೇಬೇಕು. ಈಗಾಗಲೇ ಎಲ್ಲ ಕವನಗಳನ್ನು ಓದಿ ಸಾಕಷ್ಟು ತೃಪ್ತಿಪಟ್ಟ ನಾನು ಅದರಲ್ಲೊಂದಿಷ್ಟು ಕವನಗಳನ್ನು ತಮಗೆ ಪರಿಚಯಿಸುತ್ತೇನೆ.

ನನ್ನಾಳದ ನುಡಿಗಳಿಂದು
ಸೋತು ಮೌನವಾಗಿವೆ
ನಾನಂತೂ ಬದುಕಿದ್ದು
ಜೀವಂತ ಶವವಾಗಿರುವೆ

ನಾ ಸತ್ತ ಬಳಿಕ ನೀನು
ದಯವಿಟ್ಟು ಅಳಬೇಡ
ಅಲ್ಲ ನೆನಪೇ ತೆಗೆಯಬೇಡ
ನಾನಿನ್ನು ಬರುವೆನು,
ಅಲ್ಲ ಬರದೆ ಹೋಗುವೆನು    (ಭಾವ ಸೋಲುವ ವೇಳೆ)

ಕೃತಿಯ ಮೊದಲ ಕವನವೇ ಭಾವ ಸೋಲುವ ವೇಳೆ. ಮನುಷ್ಯನ ಜೀವನದಲ್ಲಿ ಭಾವಗಳಿಗೆ ಸ್ಪಂದನೆ ಸಿಗದಿದ್ದಾಗ, ಆತನ ನುಡಿಗಳನ್ನು ಆಲಿಸುವ ಮನಸ್ಸುಗಳು ದೂರ ತಳ್ಳಿದಾಗ ಆ ಮನುಷ್ಯ ಬಹಳಷ್ಟು ಜಿಗುಪ್ಸೆಗೊಳಗಾಗುತ್ತಾನೆ. ಇಂತಹ ಸಂದರ್ಭಗಳಲ್ಲಿ ವ್ಯಕ್ತಿ ಬದುಕಿದ್ದರೂ ಸತ್ತಂತೆ ಎಂಬ ಕಟು ಸತ್ಯವನ್ನು ಕವಿ ಬಿಚ್ಚಿಟ್ಟಿದ್ದಾರೆ. ನೊಂದ ಹೃದಯ ಸಾವಿಗೆ ಶರಣಾಗುವಾಗ ಹೇಳುತ್ತಿರುವ ನುಡಿಗಳು ಎದೆಗೆ ನಾಟುವಂತಿವೆ. ಇದು ಕೇವಲ ದೇಹಕ್ಕೆ ಸಾವಲ್ಲ ಭಾವಕ್ಕೆ ಸಾವು.

ದೂರ ದೂರ ನೀ ಹೋಗದಿರು
ಅನುಕ್ಷಣವು ನನ್ನ ಜೊತೆಗಿರು
ನಿನ್ನನ್ನೆ ನಂಬಿರುವೆನು ನಾನು
ಎಂದಿಗೂ ನಿನ್ನನ್ನೆ ಪ್ರೀತಿಸುವೆನು

ಈಗಾಗಲೇ ನಾನು ಸತ್ತಿರುವೆ
ನೊಂದು ಬೆಂದು ಹೋಗಿರುವೆ
ಕನಸುಗಳು ತೂರಿ ಹೋಗಿವೆ
ಮನಸು ಮೌನವಾಗಿ ಕೂತಿದೆ (ನನ್ನ ನೋವನ್ನು ಹೇಳಬೇಕಿದೆ)

ಈ ಕವನ ಸ್ವತಃ ನನ್ನನ್ನು ಬಹಳಷ್ಟು ಕಾಡಿದೆ. ನನ್ನ ನೋವನ್ನು ಹೇಳಬೇಕಿದೆ ಕವನದಲ್ಲಿ ಪ್ರೀತಿಸಿ ದೂರ ಹೋಗುತ್ತಿರುವ ಪ್ರೇಯಸಿಯೆಡೆಗಿನ ನಿವೇದನೆಯಿದೆ, ಅದು ಹೃದಯಕ್ಕೆ ಸೂಜಿಯಿಂದ ಮೀಟುವಂತಿದೆ. ನಂಬಿದ ಜೀವ ನಮ್ಮಿಂದ ದೂರವಾಗುವಾಗ ಆಗುವ ನೋವನ್ನು ಕಣ್ಣು ಕಟ್ಟುವಂತೆ ಕವಿ ಹಿಡಿದಿಟ್ಟಿದ್ದಾರೆ. ಈಗಾಗಲೇ ನಾನು ಸತ್ತಿರುವೆ ಎನ್ನುವ ಧ್ವನಿ ಭಾವದಿಂದ ಸತ್ತಿದೆ ಎಂಬುದರ ನಿಲುವನ್ನು ತೋರಿಸುತ್ತದೆ. ಮನಸ್ಸು ಮೌನವಾಗಿ ಕೂತಿದೆ ಎನ್ನುವಲ್ಲಿ ಚೈತನ್ಯದ ಸಾವನ್ನು ಕಾಣಬಹುದು. ಮಾತು ಮೌನವಾಗುವುದನ್ನು ನೋಡಿದ್ದೇವೆ ಮನಸ್ಸು ಮೌನವಾಗುವುದನ್ನು ಇಲ್ಲಿ ಕವಿ ಬಹಳ ನೋವಿನಿಂದ ವ್ಯಕ್ತಪಡಿಸಿದ್ದಾರೆ.

ಬರಲಿಲ್ಲ ಅವನು
ನನ್ನ ಶವದೆದುರು ಅಳಲು
ನಾನೂ ಸತ್ತಿದ್ದೆ ಬದುಕಿದ್ದಾಗಲೇ
ಅವನೂ ಅರಿತಿದ್ದ
ಆದರೂ ಅರಿಯದಂತಿದ್ದ

ನಾನು ನನ್ನ ದೇಹಕ್ಕೆ
ಯಾವ ರೀತಿ ಅಂತ್ಯ ನೀಡಲಿ
ದೇಹಕ್ಕೆ ಹೇಗಾದರೂ ಸಿಕ್ಕೀತು
ಆತ್ಮಕ್ಕೆ ಹೇಗೆ ಸಿಗುವುದು?     (ಕಟ್ಟಕಡೆಯ ಸಾಂತ್ವನ)

ಸಂಘಜೀವಿಯಾಗಿ, ಭಾವಜೀವಿಯಾಗಿ ಸಮಾಜದಲ್ಲಿ ಎಲ್ಲರೊಡನೆ ಉತ್ತಮ ಸ್ನೇಹ ಸಂಬಂಧದೊಂದಿಗೆ ಜೀವನ ನಡೆಸುತ್ತಿರುವ ವಿಶ್ವನಾಥರವರು ಇಂತಹ ಕವನಗಳನ್ನು ಬರೆಯಲು ಸಾದ್ಯವೇ ಎಂದು ಒಂದು ಕ್ಷಣ ನನಗೇ ಕಾಡಿದ್ದುಂಟು. ಆದರೂ ಅನುಭಾವದ ನೈಜ ಅರ್ಥವನ್ನು ನಾನು ಈ ಕೃತಿಯಲ್ಲಿ ಕಂಡಿದ್ದೇನೆ. ಕಟ್ಟಕಡೆಯ ಸಾಂತ್ವನ ಎನ್ನುವ ಕವನದ ಶೀರ್ಷಿಕೆಯೇ ಮೊದಲು ಹೃದಯವನ್ನು ಘಾಸಿಗೊಳಿಸುತ್ತದೆ. ಪ್ರೀತಿ-ಪ್ರೇಮಗಳಿಂದ ದೂರ ಉಳಿದು ವಿರಹ ವೇದನೆಯನ್ನು ಹಂಚಿಕೊಳ್ಳುವಾಗ ಆಧ್ಯಾತ್ಮವನ್ನು ಒಳಗೆಳೆಯುವುದು ಸುಲಭವಲ್ಲ. ದೇಹಕ್ಕೆ ಅಂತ್ಯ ನೀಡಬಲ್ಲೆ ಆದರೆ ಆತ್ಮಕ್ಕೆ ಹೇಗೆ ಅಂತ್ಯ ನೀಡಲಿ ಎಂಬ ಕವಿಯ ಪ್ರಶ್ನೆಯು ವಿಶ್ವನಾಥರವರ ಆಧ್ಯಾತ್ಮಿಕ ಅರಿವನ್ನು ನಮಗೆಲ್ಲ ಪರಿಚಯಿಸುತ್ತದೆ.

ಹೀಗೆ ಕೃತಿಯ ಉದ್ದಕ್ಕೂ ಒಂದೊಂದು ಕವಿತೆಗಳೂ ಸಹ ಒಂದೊಂದು ನಿಲುವಿನಿಂದ ಭಾವ ಸೋತ ಬಗೆಯನ್ನು ಪರಿಚಯಿಸುತ್ತವೆ. ಅಲ್ಲಲ್ಲಿ ಸಾಂತ್ವನವನ್ನೂ ಹೇಳುತ್ತವೆ. ಕಂಡುಂಡ ಅನುಭವಗಳನ್ನು ಹಂಚಿಕೊಳ್ಳುವಲ್ಲಿ ಯಶಸ್ವಿಯಾದ ಕವಿ ವಿಶ್ವನಾಥ ಅರಬಿಯವರು ಇದೀಗ ಕಂಡ ಅನುಭವಗಳನ್ನು ಉಂಡಂತೆ ಹಂಚಿಕೊಳ್ಳುವಲ್ಲಿಯೂ ಸಹ ಯಶಸ್ಸನ್ನು ಪಡೆದಿದ್ದಾರೆಂದರೆ ಅತಿಶಯೋಕ್ತಿಯಾಗಲಾರದು. ಕವಿ ವಿಶ್ವನಾಥ ಅರಬಿಯವರನ್ನು ಬಹಳ ಹತ್ತಿರದಿಂದ ಕಂಡಿರುವ ನಾನು ಅವರ ಅನುಭವಕ್ಕೂ, ಅನುಭಾವಕ್ಕೂ ಇರುವ ವ್ಯತ್ಯಾಸಗಳನ್ನು ಸಲೀಸಾಗಿ ಗುರುತಿಸಬಲ್ಲೆ ಎಂಬ ಕಾರಣಕ್ಕೆ ಈ ಭಾವ ಸೋಲುವ ವೇಳೆ ಕೃತಿಗೆ ಮುನ್ನುಡಿ ಬರೆಯುವ ಜವಾಬ್ದಾರಿಯನ್ನು ನನಗೆ ಒದಗಿಸಿದರು. ಇಂತಹ ಅತ್ಯುತ್ತಮ ಅವಕಾಶ ನನಗೆ ಒದಗಿ ಬಂದಿದ್ದನ್ನು ಸಂತೋಷದಿಂದ ನಿಭಾಯಿಸಿರುವೆನೆಂದು ತಮ್ಮೆದುರು ಹೇಳುತ್ತಾ ಕವಿಗೆ ಧನ್ಯವಾದಗಳನ್ನು ತಿಳಿಸುವೆ.

ಈಗಾಗಲೇ ವಿಶ್ವ ಚೇತನ, ವಿಶ್ವನ ಹಾಯ್ಕುಗಳು, ಧರಣಿ ಮತ್ತು ಬದುಕು, ಅಬಾಬಿಗಳ ಲೋಕದಲ್ಲಿ ವಿಶ್ವ, ಎಲೆಯ ಮರೆಯ ಕಾಯಿಗಳು ಮತ್ತು ಪ್ರೇಮ ಕಾರಂಜಿ ಕೃತಿಗಳನ್ನು ಕನ್ನಡಮ್ಮನ ಮಡಿಲಿಗೆ ಅರ್ಪಿಸಿದ್ದಾರೆ. ಕವಿ ವಿಶ್ವನಾಥ ಅರಬಿಯವರು ಇದೀಗ ಭಾವ ಸೋಲುವ ವೇಳೆ ಕೃತಿಯನ್ನು ಕನ್ನಡಮ್ಮನ ರೂಪದಲ್ಲಿರುವ ತಮ್ಮೆಲ್ಲರ ಮಡಿಲಿಗೆ ಹಾಕಿದ್ದಾರೆ. ಲಾಲನೆ, ಪಾಲನೆ, ಪೋಷಣೆ ಮಾಡುವುದು ನಿಮ್ಮ ಜವಾಬ್ದಾರಿ. ಇಷ್ಟು ದಿನದ ಅದೇ ಪ್ರೀತಿಯನ್ನು ಇನ್ನು ಮುಂದೆಯೂ ಸಹ ತಾವು ನೀಡಿ ಹರಸಿ ಹಾರೈಸಿರೆಂದು ವಿನಂತಿಸಿಕೊಳ್ಳುತ್ತಾ ವಿಶ್ವನಾಥರವರಿಗೆ ಶುಭಾಶಯಗಳನ್ನು ತಿಳಿಸುವೆ........
             
ಎಚ್ ಜಿ ಸಂಗೀತಾ ಮಠಪತಿ
ಸಾಹಿತಿಗಳು ಮತ್ತು ಅಧ್ಯಕ್ಷರು
ಸಂಗೀತಜಗತ್ತು ಪ್ರಕಾಶನ (ರಿ) ವಿಜಯಪುರ

Related Books