ತಾಯೊಡಲ ತಲ್ಲಣ

Author : ಜಯಲಕ್ಷ್ಮಿ ಎನ್.ಎಸ್ ಕೋಳಗುಂದ

Pages 70

₹ 70.00




Year of Publication: 2018
Published by: ಸ್ವಭಾವ ಪ್ರಕಾಶನ
Address: ಕೋಳಗುಂದ-573125, ಅರಸೀಕೆರೆ ತಾಲ್ಲೂಕು, ಹಾಸನ ಜಿಲ್ಲೆ
Phone: 8970400793

Synopsys

ಜಯಲಕ್ಷ್ಮೀ ಎನ್ ಎಸ್ ಕೋಳಗುಂದ ಅವರ ಚೊಚ್ಚಲ ಕವನ ಸಂಕಲನ-'ತಾಯೊಡಲ ತಲ್ಲಣ'. ಬಡ ಹಾಗೂ ಮಧ್ಯಮ ವರ್ಗದ ಜನದ ಬದುಕಿನ ಚಿತ್ರಣವನ್ನು ಕವಿತೆಗಳ ರೂಪದಲ್ಲಿ ಕಟ್ಟಿ ಕೊಟ್ಟಿದೆ. ವಿಭಿನ್ನ ಭಾವ ಹಾಗೂ ಶೈಲಿಯಿಂದಲೇ ಈ ಕೃತಿಯು ಓದುಗರ ಮೆಚ್ಚುಗೆಗೆ ಪಾತ್ರವಾಗುತ್ತದೆ.

ಕವನ ಸಂಕಲನದಲ್ಲಿ ಒಟ್ಟು 45 ಕವನಗಳಿವೆ. ಕೃತಿಗೆ ಮುನ್ನುಡಿ ಬರೆದ ಸಾಹಿತಿ ಡಿ.ಎಸ್. ರಾಮಸ್ವಾಮಿ ಅವರು ‘ಇಲ್ಲಿಯ ಬಹುತೇಕ ಕವಿತೆಗಳು ಸಾಮಾಜಿಕ ಹೊಣೆಗಾರಿಕೆಯನ್ನು ಎಚ್ಚರಿಸುತ್ತವೆ. ಮಹಿಳಾ ಹಕ್ಕುಗಳ ಪ್ರತಿಪಾದನೆ, ಸಾಮಾಜಿಕ ದೌರ್ಜನ್ಯಕ್ಕೆ ವಿರೋಧ, ಹೆಚ್ಚುತ್ತಿರುವ ಅಮಾನವೀಯ ವ್ಯವಸ್ಥೆಗೆ ಆತಂಕ ಇಂತಹ ಮನುಷ್ಯ ಸಹಜ ಸ್ಪಂದನೆಗಳಿಗೆ ಇಲ್ಲಿಯ ಕವಿತೆಗಳು ಮಿಡಿಯುತ್ತವೆ.’ ಎಂದು ಪ್ರಶಂಸಿಸಿದ್ದರೆ, ಬೆನ್ನುಡಿ ಬರೆದ ಮಹೇಶ ಚಟ್ನಳ್ಳಿ ಅವರು ‘ಕವಿಯ ಇರಬೇಕಾದ ಸಾಮಾಜಿಕ ಜವಾಬ್ದಾರಿಯನ್ನು ಇಲ್ಲಿಯ ಕವಿತೆಗಳು ಸಮರ್ಥವಾಗಿ ನಿರ್ವಹಿಸುತ್ತವೆ ’ ಎಂದು ಅಭಿಮಾನ ವ್ಯಕ್ತಪಡಿಸಿದ್ದಾರೆ. 

 

 

About the Author

ಜಯಲಕ್ಷ್ಮಿ ಎನ್.ಎಸ್ ಕೋಳಗುಂದ

ಲೇಖಕಿ ಜಯಲಕ್ಷ್ಮಿ ಎನ್.ಎಸ್ ಕೋಳಗುಂದ ಅವರು ಮೂಲತಃ ಅರಸೀಕೆರೆ ತಾಲೂಕಿನ ಜಾವಗಲ್ ಹೋಬಳಿಯ ಕೋಳಗುಂದ ಗ್ರಾಮದವರು. 1979 ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ಜನಿಸಿದ ಅವರು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ನಿಡಘಟ್ಟದಲ್ಲಿ ಪೂರೈಸಿದರು. ತಂದೆ- ಶಂಕರಪ್ಪ, ತಾಯಿ- ಸುಶೀಲಮ್ಮ. ಅರಸೀಕೆರೆಯ ಶ್ರೀ ಸಿದ್ದೇಶ್ವರ ಪ. ಪೂ ಕಾಲೇಜಿನಲ್ಲಿ ಪ.ಪೂ. ಶಿಕ್ಷಣ ಪಡೆದು, ಮಂಗಳೂರಿನ ಕಪಿತಾನಿಯೋ ವಿದ್ಯಾ ಸಂಸ್ಥೆಯಲ್ಲಿ ವೃತ್ತಿ ಶಿಕ್ಷಣ ಪಡೆದರು. ನಂತರ 2002ರ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನಲ್ಲಿ ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದರು. 2012-13ನೇ ಸಾಲಿನ ...

READ MORE

Reviews

ಬಹು ರೂಪಿ ಕವಿತೆಗಳು

ಜಯಲಕ್ಷ್ಮಿ ಎನ್.ಎಸ್.ಕೋಳಗುಂದ ಅವರು ತಮ್ಮ ಮೊದಲ ಕವನ ಸಂಕಲನ ‘ತಾಯೊಡಲ ತಲ್ಲಣ’ ವನ್ನು ಬಹಳ ಹಿಂದೆ ನನಗೆ ಕೊಟ್ಟಿದ್ದರು.ಎಷ್ಟು ಹಿಂದೆ ಎಂದರೆ ನನಗೆ ಕೊಟ್ಟಿದ್ದೆ ಎಂದು ಅವರೇ ಮರೆತುಬಿಡುವಷ್ಟು ಹಿಂದೆ. ನಾನು ಪ್ರತಿಕ್ರಿಯಿಸಿರಲಿಲ್ಲ. ಕಾರಣ ಇಷ್ಟೆ:ಇವರು ಬರೆಯುತ್ತಾರೆ ಎಂಬ ನಿರೀಕ್ಷೆ,ಇವರು ಈ ಧೋರಣೆಯ ಪರವಾಗಿಯೆ ಇರುತ್ತಾರೆ ಎಂಬೆಲ್ಲ ನಿರೀಕ್ಷೆಗಳನ್ನು ನನ್ನ ಬಗ್ಗೆ ಯಾರೂ ಇಟ್ಟುಕೊಳ್ಳಲು ಅವಕಾಶವಾಗದಂತೆ ನೋಡಿಕೊಳ್ಳಬೇಕಾದ್ದು ‘ ಗುಂಪಿಗೆ ಸೇರದ ಪದ’ ವಾಗಿಯೇ ಉಳಿಯಲು ಬಯಸಿದ ನನ್ನ ಅವಶ್ಯಕತೆಯಾಗಿದೆ. ಅದರ ಜೊತೆಗೆ ಹೊಸ ಕವಯತ್ರಿಯೊಬ್ಬರು ತನ್ನ ಪುಸ್ತಕವನ್ನು ಓದಲು ಕೊಟ್ಟಾಗ ಪ್ರತಿಕ್ರಿಯಿಸಬೇಕೆಂಬ ಅರಿವಿದೆ. ಪ್ರತಿಕ್ರಿಯಿಸುತ್ತಿದ್ದೇನೆ:
‘ತಾಯೊಡಲ ತಲ್ಲಣ’ ಬಹುರೂಪಿ ಕವಿತೆಗಳ ಗುಚ್ಛವಾಗಿದೆ.ಇದರಲ್ಲಿ ಚಂದದಲ್ಲಿ ಹಾಡಿಕೊಳ್ಳುವ ಹಾಡುಗಳಿವೆ. ಸೈದ್ಧಾಂತಿಕ ಕವಿತೆಗಳಿವೆ. ಸಹಜ ಕವಿತೆಗಳಿವೆ. ಸಿಟ್ಟಿನ ಕವಿತೆಗಳಿವೆ. ಹತಾಶೆಯ ಕವಿತೆಗಳಿವೆ. ಉತ್ಸಾಹದ ಕವಿತೆಗಳಿವೆ. ಹೀಗೆ ಇಲ್ಲಿನ ಕವಿತೆಗಳು ಬಹುರೂಪಿಯಾದದ್ದು.
ಇದರಲ್ಲಿ ನನಗೆ ತುಂಬ ಇಷ್ಟವಾದ ಕವಿತೆ ‘ನಾವೂ ಮನುಜರು’ ಎನ್ನುವ ಕವಿತೆ. ಎಡಪಂಥೀಯ ಬಂಡಾಯ ಶೈಲಿಯ ಕವಿತೆ ಇದು. ಸಾಮಾನ್ಯವಾಗಿ ನನಗೆ ಈ ರೀತಿಯ ಕವಿತೆ ಇಷ್ಟವಾಗುವುದಿಲ್ಲ. ಅಸತ್ಯಕ್ಕೆ ಸತ್ಯದ ಮುಖವಾಡ ತೊಡಿಸಿ ಆರಾಧನೆಯ ವೈಭವೀಕರಣ ಮಾಡುತ್ತಾ ನಿಜಾರ್ಥದಲ್ಲಿ  ‘ಸತ್’ ಎಂಬ ತಾತ್ವಿಕತೆಯ ವಿಡಂಬನೆಯನ್ನೆ ಮಾಡುವ ಬಲಪಂಥೀಯ ಆರಾಧನಾ ಕವಿತೆಗಳೂ ನನಗಿಷ್ಟವಾಗುವುದಿಲ್ಲ. ಎದುರಾಳಿಯೂ ಒಬ್ಬ ಮನುಷ್ಯನೇ/ಳೇ ಆಗಿರುತ್ತಾನೆ/ಳೆ ಎಂಬ ಪ್ರಜ್ಞೆಯನ್ನು ಕಳೆದುಕೊಂಡು ಎದುರಾಳಿಯನ್ನು ಮೆಟೀರಿಯಲ್ ನಂತೆ ನಿಂದಿಸುವ, ತನ್ನನ್ನು ತಾನು ಸರ್ವಗುಣ ಸಂಪನ್ನ/ನ್ನೆ ಎಂದು ವೈಭವೀಕರಿಸಿಕೊಂಡು ಆತ್ಮಾವಲೋಕನದ ಶಕ್ತಿಯನ್ನು ಕಳೆದುಕೊಂಡು ತನ್ನನ್ನು ತಾನು ದುರ್ಬಲನಾಗಿಸಿಕೊಳ್ಳುತ್ತಾ ಹೋಗುವ ಎಡಪಂಥೀಯ ಶೈಲಿಯ ಕವಿತೆಗಳೂ ನನಗಿಷ್ಟವಾಗುವುದಿಲ್ಲ. ನಿಜವಾಗಿ ಇವು ತಮಗಾಗಿ ಮಾತನಾಡುವುದಿಲ್ಲ. ರಾಜಕೀಯ ಸಿದ್ಧಾಂತಕ್ಕಾಗಿ ಮಾತನಾಡುತ್ತವೆ. ಆದರೆ ಜಯಲಕ್ಷ್ಮಿ  ಅವರ ಈ ಕವಿತೆ ತುಂಬ ಇಷ್ಟವಾಯಿತು:

ಊರಿನೆಲ್ಲ ಹೊಲಸ ಕಳೆದು
ಹಸನು ಮಾಡಿದ್ದಕ್ಕೆ
ಸತ್ತ ಹೆಣಗಳ ನಾರಲು ಬಿಡದೆ
ಮುಕ್ತಿ ಕಾಣಿಸಿದ್ದಕ್ಕೆ....
ನಿಮಗೆ ಮೆಟ್ಟ ಹೊಲೆದು ಕೊಟ್ಟು
ಬರಿಗಾಲಲಿ ನಡೆದಿದ್ದಕ್ಕೆ
ನಾವು ಮುಟ್ಟಿಸಿಕೊಳ್ಳದವರು...!

ಎಂದು ಪ್ರಾರಂಭವಾಗುವ ಕವಿತೆಯಲ್ಲಿರುವ ವಿಷಾದ ಕಾಡುತ್ತದೆ. ಮೇಲಾಗಿ ಈ ವಿಷಾದ ಸಿದ್ಧಾಂತಕ್ಕೆ ತನ್ನನ್ನು ಗುಲಾಮನಾಗಿಸಿಕೊಳ್ಳದೆ ತನಗಾಗಿಯೆ ಮಾತನಾಡುತ್ತದೆ. ತಣ್ಣಗೆ ಸತ್ಯವನ್ನು ಕಾಣಿಸಿಕೊಡುವಲ್ಲಿ ಕವಿತೆ ಪಡೆದುಕೊಳ್ಳುವ ತೀವ್ರತೆಯ ಒಳಗಿನ ಮೌನದ ತೀಕ್ಷ್ಣತೆ ಓದುಗರನ್ನು ಹಿಡಿದು ನಿಲ್ಲಿಸಿ ಆತ್ಮಾವಲೋಕನಕ್ಕೆ ತೊಡಗಿಸುತ್ತದೆ. ಕವಿತೆಗಿರುವ ಅಪೀಲಿಂಗ್ ನೇಚರ್ ನ ಹಿಂದೆ ಇರುವ ಒಂದು ಧ್ಯಾನಸ್ಥ ತನ್ಮಯತೆ ಅರ್ಥವಾಗಬೇಕಾದರೆ ಈ ಸಾಲುಗಳನ್ನು ನೋಡಬೇಕು:
....ನಾವು ಕೊಂದರೆ ಬಲಿ
ನೀವು ಕೊಂದರೆ ಯಾಗ
ನಾವು ಕುಡಿದರೆ ಸರೆ
ನೀವು ಕುಡಿದರೆ ಸುರೆ
ಗುಡಿಯ ಒಳಗೆ ಗಂಟೆ ಬಾರಿಸಿದರೆ ಸಜ್ಜನ
ಹೊರಗೆ ತಮಟೆ ಬಡಿದರೆ ಹೀನ.....
ಎನ್ನುವಲ್ಲಿ "ನೋಡಿ ನಮ್ಮದು ಹೀಗೆ ನಿಮ್ಮದು ಹಾಗೆ ನಿಜವಾಗಿ ಎರಡೂ ಒಂದೇ ಅಲ್ವಾ, ನಾವೂ ನೀವೂ ಒಂದೇ ಅಲ್ವಾ, ಯೋಚನೆ ಮಾಡಿ" ಎನ್ನುವ ಕವಿತೆಯ ಧ್ವನಿ ಬಹಳ ಕನ್ವೀನ್ಸಿಂಗ್ ಮತ್ತು ಸತ್ಯದ ಅರಿವನ್ನು ಹುಟ್ಟಿಸುವಂತಾದ್ದು. ಕಾವ್ಯದಂತಹ ಸಮರ್ಥ ಅಭಿವ್ಯಕ್ತಿಯ ಮಾಧ್ಯಮದಲ್ಲಿ ಇದು ಬಂದಾಗ ಅದರ ಪರಿಣಾಮ ತೀವ್ರವಾಗಿಯೆ ಇರುತ್ತದೆ.ತುಂಬಾ ಒಳ್ಳೆಯ ಕವಿತೆ ಇದು.
'ನವ ಚೇತನ'ಎಂಬ ಹಾಡಿನ ರೂಪದ ರಚನೆಯೊಂದು ಹೀಗಿದೆ:
ನವ ಬಾನಿನ ನವ ಅರುಣನ
ನವ ಕಿರಣದ ಆಯನ
ನವ ಚೇತನ ನವ ಭಾವನ
ನವ ಜೀವನಕಥನ....
ಸುಶ್ರಾವ್ಯವಾಗಿ ಹಾಡಲು ಪ್ರಾಸ,ಲಯಗಳನ್ನು ಹೊಂದಿರುವ ರಚನೆ ಇದು.'ಗುರು ನಮನ' ದಂತಹ ರಚನೆ ಭಾವಗೀತಾತ್ಮಕ ಸ್ವರೂಪದ್ದಾಗಿದೆ. ಭಾವಗೀತೆಯಂತೆಯೇ ತೋರುತ್ತಾ ಕಾವ್ಯವಾಗಿ ಜಿಗಿಯುವ 'ಪಂಜರ ಪಕ್ಷಿ' ಈ ಸಂಕಲನದ ಇನ್ನೊಂದು ಕಾಡುವ ಕವಿತೆ. ತಾಯಿಯ ಬಗ್ಗೆ ಬರೆದರೆ ಲಂಕೇಶ್, ಹಕ್ಕಿಯ ಬಗ್ಗೆ ಬರೆದರೆ ಬೇಂದ್ರೆ ಪ್ರಭಾವ ಬೀರದಿರುವ ಕವಿತೆಗಳು ವಿರಳ."ನಾ ರೆಕ್ಕೆ ಬಿಚ್ಚಿ ಹಾರಿದೆ ಆ ಅಗಾಧ ಆಗಸಕ್ಕೆ ಹಾರಿದಷ್ಟು ಎತ್ತರಕ್ಕೆ"ಎನ್ನುವಾಗ ಬೇಂದ್ರೆಯವರ ನೆರಳಿನಲ್ಲೆ ಕವಿತೆ ಸಾಗುತ್ತದೆ ಎನಿಸಿದರೂ ಕ್ರಮೇಣ ಅದು ನೆರಳನ್ನು ಪ್ರತ್ಯೇಕಿಸಿಕೊಂಡು ಸ್ವತಂತ್ರವಾಗುತ್ತದೆ. ಹಲವು ಅರ್ಥಗಳನ್ನು ಹೊಳೆಯಿಸುತ್ತಾ ಹೋಗುತ್ತದೆ.
"ಎಚ್ಚರಾಗಿ ಕಣ್ತೆರೆಯಲು
ನಾ ಪಂಜರದಲೆ ಇದ್ದೆನು
ಇಷ್ಟು ಕಾಲ ಕಂಡಿದ್ದು ಕನಸು
ಪಂಜರದಲಿರುವುದೇ ಮನಸು"
ಎನ್ನುವಲ್ಲಿ ಮೇಲ್ನೋಟಕ್ಕೆ ಹತಾಶೆಯ ಸ್ಥಾಯೀ ಭಾವ ಕಾಣಿಸುತ್ತದೆ. ಆದರೆ ಅಲ್ಲೇ ಕವಿತೆಯು ಗೂಢವಾಗುತ್ತಲೂ ಹೋಗುತ್ತದೆ. ಇದು ಕೇವಲ ಕನಸು ಮತ್ತು ವಾಸ್ತವದ ಮುಖಾಮುಖಿಯಷ್ಟೇ ಅಲ್ಲ. ನಿಜವಾಗಿಯೂ ಮನಸು ಪಂಜರದಲ್ಲೆ ಇರುವುದು ಹೊರತು ಆಗಸದಲ್ಲಲ್ಲ. ಕೆಲವು ಮನಸುಗಳದು ಸ್ವಲ್ಪ ದೊಡ್ಡ ಪಂಜರವಿರಬಹುದು, ಕೆಲವು ಚಿಕ್ಕದಿರಬಹುದು. ಆದರೆ ಮನಸಿಗೆ ಪಂಜರವನ್ನು ಮೀರಲು ಆಗುವುದಿಲ್ಲ. ಆದರೆ ಮೀರುವ ಬಯಕೆ ಇರುತ್ತದೆ. ಹೀಗೆ ಇದು ಲೌಕಿಕ ಮತ್ತು ಅಧ್ಯಾತ್ಮದ ಮುಖಾಮುಖಿಯೂ ಆಗುತ್ತದೆ. ಜಯಲಕ್ಷ್ಮಿ ಅವರಿಗೆ ಸಹಜವಾಗಿ ಸಿದ್ಧಿಸಿರುವ ಕೌಶಲ ಉದ್ವಿಗ್ನತೆಗೊಳಗಾಗದೆ ಮಾನಸಿಕ ಸ್ಥಿರತೆಯಿಂದ ಬರೆಯುವುದು. ಆ ಸ್ಥಿರತೆಯೂ ಕೂಡ ಕವಿತೆಯ ಅರ್ಥವ್ಯಾಪ್ತಿಯನ್ನು ಹಿಗ್ಗಿಸುತ್ತದೆ.
"ಹಿಮಗಿರಿಯ ಅಂಚಿನಲಿ ಕೊಂಚವೂ ತಂಪಿಲ್ಲ" ಎಂದು ಪ್ರಾರಂಭವಾಗುವ ‘ಹಿಮಗಿರಿಯ ಕಾವು’ ಪ್ರಕೃತಿಯ ಸಹಜ ಸ್ಥಿತಿಯನ್ನು ಮಾನವ ಚಟುವಟಿಕೆಗಳು ಹೇಗೆ ಬೀಭತ್ಸವಾಗಿಸುತ್ತಾ ಹೋಗುತ್ತವೆ ಎಂಬುದನ್ನು ಕಾಣಿಸುತ್ತಾ "ಮತ್ತೆಂದು ಬರುವುದೊ ತಂಪಿನ ಭಾವ" ಎಂಬ ನಿರೀಕ್ಷೆಯಲ್ಲಿ ಮುಗಿಯುತ್ತದೆ. ‘ತೀರಿದ ಸಂಬಳ’ಮಧ್ಯಮ ವರ್ಗದ ಯಾವತ್ತೂ ಜಂಜಾಟಗಳನ್ನು ಹೇಳುತ್ತಾ,"ದುಡಿಮೆಯ ದಾರಿ ಹುಡುಕಬೇಕಿದೆ ಬಿಡುವಿನ ಸಮಯದಿ

ಗಳಿಸಬೇಕಿದೆ"ಎಂದು ಸರಳವಾಗಿ ಕೊನೆಗೊಳ್ಳುತ್ತದೆ. ಆದರೆ ಇಲ್ಲಿ ಸರಳತೆ ಇದೆಯೆ ಹೊರತು ಏನನ್ನೂ ಹೇಳದೆ ವಿಶ್ರಮಿಸುವುದಿಲ್ಲ. ಕವಿತೆ ಜೀವನಾವಶ್ಯಕತೆಯನ್ನು ಬಯಸುತ್ತದೆಯೆ ಹೊರತು ಶ್ರೀಮಂತಿಕೆಗೆ ಹಪಹಪಿಸುವುದಿಲ್ಲ. ದುಡಿಮೆಯ ದಾರಿಯನ್ನು ಹುಡುಕುತ್ತದೆಯೆ ಹೊರತು ದುಡಿಯದೆ ದುಡ್ಡು ಮಾಡುವ ದಾರಿಯನ್ನಲ್ಲ. ದುಡಿಯದೆ ದುಡ್ಡು ಮಾಡುವ ದಾರಿಯೊಂದರ ಇರುವಿಕೆಯೆ ಕವಿತೆಯ ಪರಿಗಣನೆಯಲ್ಲಿ ಇಲ್ಲ. ಯಾವುದೆ ಸಮಾಜದಲ್ಲಿ ಜೀವನ ಮೌಲ್ಯಗಳ ನಿರ್ಮಾಪಕ ವರ್ಗವಾದ ಮಧ್ಯಮ ವರ್ಗ ಆ ಮೌಲ್ಯಗಳನ್ನು ಯಾವ ವಿಧಾನದಲ್ಲಿ ಕಾಪಾಡಿಕೊಳ್ಳುತ್ತದೆ ಎಂಬುದನ್ನೂ ಕವಿತೆ ಹೇಳುತ್ತದೆ.
‘ಮೇಘ ಮಲ್ಲಾರ’ ಕವಿತೆ ರೈತಾಪಿ ಜನರ ಮಳೆಯ ನಿರೀಕ್ಷೆಯ ಕುರಿತಾಗಿ ಹೇಳುತ್ತಲೆ ಜೀವನವು ಪ್ರಕೃತಿಯೊಂದಿಗಿನ ತಾದಾತ್ಮ್ಯತೆ ಹೊಂದಿರುವುದನ್ನು ಕಾಣಿಸುತ್ತದೆ.’ಭಗ್ನ ಪ್ರತಿಮೆಗಳು’ಕವಿತೆ ಸರಿ ಹೊತ್ತಿನ ಮೂರ್ತಿ ಸ್ಥಾಪನೆಯ ಪ್ರವೃತ್ತಿಯ ವಿಡಂಬನೆಯನ್ನು ಮಾಡುತ್ತದೆ."...ಜಾತಿ ಧರ್ಮ ಬೇಡವೆಂದವರ ಹೆಸರಲ್ಲಿ ಹೊಸತೊಂದು ಧರ್ಮೋದಯವಿಲ್ಲಿ!"ಎನ್ನುವು ಅದ್ಭುತವಾದ ವಿಡಂಬನೆ. ‘ಅಪ್ಪನೆಂದರೆ' ಕವಿತೆಯು ಯಾವುದೆ ವ್ಯಕ್ತಿತ್ವದ ಬಹು ರೂಪತೆಗಳನ್ನು ತೆರೆದಿಡುತ್ತದೆ.
ಜಯಲಕ್ಷ್ಮಿಯವರದು ಸ್ವತಂತ್ರವಾದ; ಸ್ವಲ್ಪ ವಿಶಿಷ್ಠ ಎನ್ನುವ ಭಾಷಾ ಶೈಲಿ. ಈ ಭಾಷಾ ಶೈಲಿಯ ಮೇಲೆ ಅವರ ಮನಸ್ಥಿತಿಯ ಪ್ರಭಾವವೂ ಇದೆ. ಬಹುತೇಕವಾಗಿ ಮಹಿಳಾ ಸಾಹಿತ್ಯ ಎನ್ನುವುದು "ಮಹಿಳೆಯರಿಗೆ ಅನ್ಯಾಯವಾಗಿದೆ. ಮತ್ತು ಈ ಅನ್ಯಾಯಕ್ಕೆ ಗಂಡುಸೇ ಕಾರಣ...ಅಲ್ಲಲ್ಲ..ಜಾತಿ ಕಾರಣ...ಇಲ್ಲಿಲ್ಲ ಮೇಲ್ಜಾತಿಯೇ ಕಾರಣ...ಅಲ್ಲಲ್ಲ ಹಿಂದೂ ಧರ್ಮವೇ ಕಾರಣ" ಎನ್ನುವ ಸೀಮಿತ ವ್ಯಾಪ್ತಿಗೆ ಸಂಕುಚಿತಗೊAಡು, ಸಹಜವಾಗಿ ನಡೆದ ಸಂಗತಿಗಳಲ್ಲೂ ಅನ್ಯಾಯವನ್ನೆ ಕಷ್ಟಪಟ್ಟು ಅರ್ಥೈಸಿ ಹೇಳಿ ಮಹಿಳೆಯರ ದುರ್ಬಲೀಕರಣವನ್ನೆ ಉತ್ತೇಜಿಸುವ ಸಾಹಿತ್ಯವಾಗಿ ಕಾಣಿಸುತ್ತಿರುವಾಗ ಜಯಲಕ್ಷ್ಮಿಯವರು ಅದಕ್ಕಿಂತ ಭಿನ್ನವಾಗಿ ನಿಲ್ಲುತ್ತಾರೆ. ಹಳೆಯ ತಲೆಮಾರಿನ ಅಜ್ಜಿಯಂದಿರಲ್ಲಿ ಆ ಮನಸ್ಥಿತಿ ಇತ್ತು. ತ್ರಿವೇಣಿ, ಜ್ಯೋಸ್ನಾ ಕಾಮತ್, ಟಿ.ಸುನಂದಮ್ಮ ಅವರಂತಹವರ ಸಾಹಿತ್ಯದಲ್ಲೂ ಆ ಮನಸ್ಥಿತಿ ಇತ್ತು. ಒಬ್ಬ ಲೇಖಿಕೆ ಕೇವಲ ಮಹಿಳೆಯರ ಪ್ರತಿನಿಧಿಯಾಗಿ ಮಾತನಾಡದೆ ಇಡೀ ಸಮಾಜದ ಪ್ರತಿನಿಧಿಯಾಗಿ ಒಟ್ಟೂ ಬದುಕಿನ ಹಲವು ಕ್ಷೇತ್ರಗಳನ್ನು ಸ್ವತಂತ್ರ ದೃಷ್ಟಿಯಲ್ಲಿ ಅರ್ಥ ಮಾಡಿಕೊಂಡು ಹೇಳುವ ಮನಸ್ಥಿತಿ ಜಯಲಕ್ಷ್ಮಿಯವರಲ್ಲಿ ಇದೆ. ಅವರ ದೃಷ್ಟಿಕೋನದ ವ್ಯಾಪಕತ್ವದಿಂದಾಗಿ ಸಹಜವಾಗಿ ಅವರ ಭಾಷೆಯಲ್ಲಿ ಒಂದು ವೈಶಿಷ್ಠ್ಯ ಮತ್ತು ಸಂಯಮ, ವಸ್ತುವನ್ನು ಗ್ರಹಿಸುವಲ್ಲಿ ಹೆಚ್ಚು ವಿವೇಕ ಇಲ್ಲಿನ ಕವಿತೆಗಳಲ್ಲಿ ಕಾಣಿಸುತ್ತಿದೆ. ಈ ಪರಂಪರೆ ಬೆಳೆಯುತ್ತಾ ಹೋದರೆ ಮುಂದೆ ಸಾಹಿತ್ಯವನ್ನು ಮಹಿಳಾ ಸಾಹಿತ್ಯವೆಂದು ಪ್ರತ್ಯೇಕಿಸಿ ಓದಬೇಕಾದ ಅವಶ್ಯಕತೆ ಹೊರಟು ಹೋಗಬಹುದು. ಹಾಗಾಗಲಿ ಎಂದು ಹಾರೈಸುತ್ತಾ ತಮ್ಮ ಮೊದಲ ಕೃತಿಯನ್ನು ನನಗೆ ಓದಲು ಕೊಟ್ಟದ್ದಕ್ಕಾಗಿ ಜಯಲಕ್ಷ್ಮಿ ಅವರಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
-ಅರವಿಂದ ಚೊಕ್ಕಾಡಿ, ಸಾಹಿತಿ

Related Books