ಗಾಯಗೊಂಡವರಿಗೆ

Author : ಮಂಜುಳಾ ಹಿರೇಮಠ

Pages 84

₹ 80.00




Year of Publication: 2020
Published by: ಅಹರ್ನಿಶಿ ಪ್ರಕಾಶನ
Address: ಜ್ಞಾನವಿಹಾರ ಬಡಾವಣೆ, ಕಂಟ್ರಿಕ್ಲಬ್ ಹತ್ತಿರ, ವಿದ್ಯಾನಗರ, ಶಿವಮೊಗ್ಗ- 577203
Phone: 9449174662

Synopsys

‘ಗಾಯಗೊಂಡವರಿಗೆ’ ಕವಿ ಮಂಜುಳಾ ಹಿರೇಮಠ ಅವರ ಕವನ ಸಂಕಲನ. ಈ ಕೃತಿಗೆ ಲೇಖಕ ಚಂದ್ರಶೇಖರ ತಾಳ್ಯ ಬೆನ್ನುಡಿ ಬರೆದು ‘ವರ್ತಮಾನದ ಮಹಿಳೆಯ ಬಿಕ್ಕಟ್ಟು, ಅನಗತ್ಯವಾಗಿ ಸಂಪ್ರದಾಯಕ್ಕೆ ಜೋತು ಬೀಳಬೇಕಾದ ಅನಿವಾರ್ಯ ಸ್ಥಿತಿ, ಅತ್ಯಾಧುನಿಕ ಸಂವೇದನೆ ಎಂಬ ವ್ಯರ್ಥಗೊಳ್ಳುವ ವಿಹ್ವಲತೆ, ಇಷ್ಟಿದ್ದೂ ಅವನೊಂದು ಬೆರಳಿಗಂಟಿದ ಉಗುರು, ಉಳಿಸಿಕೊಳ್ಳಲೇಬೇಕಾದ ಒಗರು ಎಂದು ಗಂಡು ಸಮಾಜದ ಕಾಠಿಣ್ಯದೆದುರು ಪ್ರೀತಿಯ ಅವಲಂಬನೆ, ಬೆಚ್ಚನೆ ನಚ್ಚಗೆ ಸಮರಸದಲ್ಲಿ ಬದುಕಬೇಕೆಂಬ ಉತ್ಕಟ ಹಂಬಲ ಇಲ್ಲಿನ ಹಲವು ಕವಿತೆಗಳ ಒಳದ್ರವ್ಯವಾಗಿದೆ ’ ಎನ್ನುತ್ತಾರೆ.

ಅಹಂಕಾರ ನಿರಸನದ ಮುಖೇನವೇ ಸಮರಸ ಬಾಳಿನ ಸುಖಾನುಭವವನ್ನು ಸಾಧಿಸುವ ಅಪೇಕ್ಷೆ ಇಲ್ಲಿನ ಹಲವು ಕವಿತೆಗಳಲ್ಲಿ ವ್ಯಕ್ತವಾಗಿರುವುದು ಉಗ್ರ ಮಹಿಳಾವಾದಕ್ಕೆ ಮುಖಾಮುಖಿಯಾಗುವಂತಿದ್ದೂ ಒಂದು ತೆರನಾದ ರಮ್ಯ ವಾತಾವರಣವನ್ನು ಬಯಸುವಂತಿದೆ. ಮಂಜುಳಾ ಹಿರೇಮಠ ಅಡುಗೆ ಮನೆಯ ನುಡಿಗಟ್ಟುಗಳನ್ನು ಬಳಸಿಕೊಂಡೇ ಸರಳ ಸ್ಪಷ್ಟ ಶೈಲಿಯಲ್ಲಿ ತಮ್ಮ ಕಾವ್ಯವನ್ನು ವಿಶಿಷ್ಟ ಕೌಶಲದಲ್ಲಿ ವಿನ್ಯಾಸಗೊಳಿಸಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.

 

About the Author

ಮಂಜುಳಾ ಹಿರೇಮಠ

ಲೇಖಕಿ ಮಂಜುಳಾ ಹಿರೇಮಠ ಮೂಲತಃ ದಾವಣಗೆರೆಯವರು. ಎಂಎಸ್ಸಿ, ಬಿಇಡಿ, ಪದವೀಧರೆ. ನಾಗನೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕಿ.  `ಗಾಯಗೊಂಡವರಿಗೆ'- ಇವರ ಮೊದಲ ಕವಿತಾ ಸಂಕಲನ. ಈ ಕೃತಿಗೆ 2019ನೇ ಸಾಲಿನ ಮುಂಬೈನ ಜಗಜ್ಯೋತಿ ಕಲಾವೃಂದದ ಶ್ರೀಮತಿ ಸುಶೀಲ ಸೀತಾರಾಮಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ ಲಭಿಸಿದೆ. ಇವರ ಕವಿತೆ, ಪ್ರಬಂಧ ಮತ್ತು ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ...

READ MORE

Reviews

ಹೊಸ ಧಾಟಿ, ತಾಜಾ ರೂಪಕವಿಮರ್ಶೆ

ನಾವು ಕಾವ್ಯದಿಂದ ಮೊದಲು ನಿರೀಕ್ಷಿಸುವುದೇನು? ಹಿಂದೆಂದೂ ಅನುಭವಿಸಿರದ ಭಾವನೆಗಳ ಮತ್ತು ಪ್ರತಿಮೆಗಳ ಲೋಕವೊಂದು ಇದ್ದಕ್ಕಿದ್ದಂತೆ ನಮ್ಮಲ್ಲಿ ಮೂಡಿಸಬಹುದಾದ ಅಚ್ಚರಿಯನ್ನು. ಅನುಭವದ ಶುದ್ಧ ಅಭಿವ್ಯಕ್ತಿಯಾಗಿರುವ ಕಾವ್ಯ ಖಚಿತವೂ ಮೋಹಕವೂ ಆದ ಪ್ರತಿಮೆಗಳಿಂದ, ವೈಯಕ್ತಿಕ ಹಾಗೂ ಕಾಲ್ಪನಿಕ ಅವಲೋಕನಗಳ ಧ್ವನಿಯಿಂದ ಜೀವನದ ಸಂದಿಗ್ಧ ಕ್ಷಣಗಳ ಬಗೆಗೆ ನಮ್ಮಲ್ಲಿ ಅತ್ಯಂತ ಗಾಢವಾದ ಭಾವನೆಗಳನ್ನು ಉದ್ದೀಪಿಸುತ್ತದೆ.

ಮಂಜುಳಾ ಹಿರೇಮಠರ ‘ಗಾಯಗೊಂಡವರಿಗೆ’ ತನ್ನ ಹೊಸ ಧಾಟಿಯಿಂದ, ತಾಜಾ ರೂಪಕಗಳಿಂದ, ಅರ್ಥವನ್ನು ಅನುಸರಿಸಿಕೊಂಡು ಸಾಗುವ ಲಯದಿಂದ ಅಂಥ ಉದ್ದೀಪನೆಯನ್ನು ಉಂಟುಮಾಡುವ ಕವನ ಸಂಕಲನ. ಈ ಕವಿ ಮನುಷ್ಯನ ಸ್ಥಿತಿಯನ್ನು, ಅವನ ದೃಷ್ಟಿವಿಶೇಷವನ್ನು, ಅವನು ಕಳೆದುಕೊಂಡಿದ್ದರ ಮಹತ್ವವನ್ನು ಕುರಿತು ಬರೆದರೂ ಇವರ ಪರಿಪ್ರೇಕ್ಷ್ಯ ತೀರ ಖಾಸಗಿಯಾದದ್ದು. ಮುಖ್ಯವಾಗಿ ಇವರು ಅಂತರಂಗದ ಅಥವಾ ಅಂತರ್ಮುಖತೆಯ ಕವಿ; ಯಾವುದನ್ನು ನಾವು ಆತ್ಮದ ಆವರಣವೆಂದು ಪರಿಗಣಿಸುತ್ತೇವೋ ಅಂಥ ಆವರಣವನ್ನು ಅನುಭವಕ್ಕೆ ತಂದುಕೊಡುವ ಕವಿ.

ಈ ಸಂಕಲನದಲ್ಲಿರುವುದು ಒಂದು ರೀತಿ ಆತ್ಮನಿವೇದನೆಯ ಕಾವ್ಯವೆನಿಸಿದರೂ ಅದರಲ್ಲಿ ಆತ್ಮಾನುಕಂಪವಾಗಲೀ, ಕ್ಷುದ್ರತೆಯಾಗಲೀ ಇಲ್ಲ. ಹಾಗಾಗಿ ಇಲ್ಲಿನ ಕಾವ್ಯದಲ್ಲಿ ‘ವೈಯಕ್ತಿಕ’ ಎನ್ನಬಹುದಾದದ್ದು ಪೇಲವವಾದ ಒಂದು ನೆರಳಿನಂತಿದ್ದು ಅದು ಭಾವನೆಗಳ, ಭಾವೋತ್ಕರ್ಷದ, ವಿನಾಶದ ಪ್ರಜ್ಞೆಯನ್ನು ಜಾಗೃತಗೊಳಿಸುವಂತಿದೆ. ಹಾಗೆಂದು ಒಬ್ಬ ಹೆಣ್ಣಾಗಿ ತಮ್ಮ ಅಸ್ಮಿತೆಯನ್ನು ಮರೆತವರಲ್ಲ ಇವರು. ‘ಕಾವ್ಯದೆಡೆಗೆ ಕವಿಯೊಬ್ಬ ನಡೆವ ದೂರವಲ್ಲ ಕವಿಯೊಬ್ಬಳು ನಡೆವ ದೂರ!’ ಎಂಬ ಪ್ರಜ್ಞೆ ಇಲ್ಲಿ ಉದ್ದಕ್ಕೂ ಎಚ್ಚರವಾಗಿದೆ. ಮೇಲುನೋಟಕ್ಕೆ ಕೆಲವು ಕವನಗಳು ಪುರುಷ ವ್ಯಕ್ತಿವಿಶೇಷಗಳನ್ನು ಕುರಿತಂತೆ ತೋರಿದರೂ ಆಳದಲ್ಲಿ ಅವು ಲಿಂಗಭೇದವನ್ನು ಮೀರಿದ ಸಾಹಚರ್ಯವನ್ನು ಎತ್ತಿಹಿಡಿಯುತ್ತವೆ. ಸಂವೇದನೆಯಲ್ಲಿ ತೊಯ್ದುಹೋಗಿರುವ ಈ ಕವಿಯ ಪ್ರತಿಮೆಗಳು, ವಿಚಾರಗಳು ಓದುಗನ ಮನಸ್ಸಿನಲ್ಲಿ ದೀರ್ಘಕಾಲ ಅನುರಣಿಸುವಷ್ಟು ಶಕ್ತವಾಗಿವೆ.

ಮಂಜುಳಾ ಯಾವುದೇ ನಿರ್ದಿಷ್ಟ ಕಾವ್ಯಪಂಥದ ಹಂಗಿಲ್ಲದೆ ಬರೆಯುವವರು. ಆದ್ದರಿಂದಲೇ ಅವರು ತಮ್ಮ ಧ್ವನಿಯನ್ನು ತಮ್ಮದೇ ಭಾಷೆಯಲ್ಲಿ ಕಂಡುಕೊಳ್ಳುವಂತಾಗಿದೆ. ಆ ಭಾಷೆಯಲ್ಲಿ ಯಾವುದೇ ಶಬ್ದ ಹಗುರವೂ ಅಲ್ಲ, ಭಾರವೂ ಅಲ್ಲ. ಅಥವಾ ಅದು ಸಾಮಾನ್ಯವಾದದ್ದು ಹೇಗೋ ಹಾಗೆ ಅಸಾಮಾನ್ಯವಾದದ್ದೂ ಹೌದು. ಇಲ್ಲಿನ ಕವನಗಳಲ್ಲಿ ಆಶಯಕ್ಕೆ ಅನುಗುಣವಾಗಿ ಒದಗಿಬಂದಿರುವ ಶಬ್ದಗಳು ಪ್ರತಿಮೆಗಳಿಗೆ ಜೀವ ತುಂಬುವ ಮೂಲಕ ತಮ್ಮ ಇರವನ್ನು ತಾವೇ ಕಳೆದುಕೊಳ್ಳುತ್ತವೆ.

‘ಹಕ್ಕಿ ಆಕಾಶದ್ದು’ ಎಂಬ ಮೊದಲ ಕವನವನ್ನೇ ತೆಗೆದುಕೊಳ್ಳಿ. ಇಲ್ಲಿ ಹಕ್ಕಿಯ ಮೂಲಕ ಕವನ ಅಂತರಂಗ ಬಹಿರಂಗಗಳ ಬಗ್ಗೆ, ಕಾಲದ ಬಗ್ಗೆ, ಎಲ್ಲೆ ಮೀರಿ ಬದುಕಬಯಸುವ ಮನುಷ್ಯನ ಮನೋಭಿಲಾಷೆಯ ಬಗ್ಗೆ ಮಾತಾಡುತ್ತದೆ.

ನಿರಂತರ ಬೆಳಗುವ

ಸೂರ್ಯನಂತಲ್ಲ ಇಲ್ಲಿ ಯಾರ ಪ್ರೀತಿ

ಅದು ಗಳಿಗೆ ಮಾತ್ರ

ಉರಿದು ತೀರುವ

ಬರೀ ಒಂದು ಮೇಣದ ಬತ್ತಿ

 ಎಂಬ ‘ಹೆಬ್ಬಂಡೆ ಮೌನ’ ಕವನದ ಈ ಸಾಲುಗಳನ್ನು ಬೇಂದ್ರೆಯವರ ‘ನೀ ಕೂತಿ ಬೆಂಕಿಯನು ನಂಬಿ /ಪ್ರೀತಿಯದಕೆಂಬಿ / ಕಪ್ಪುರದ ಗೊಂಬಿ’ ಎಂಬ ಸಾಲುಗಳೊಡನೆ ಹೋಲಿಸಿದಾಗ ಪ್ರೀತಿಯ ರೂಪಕದ ಸಾರ್ವತ್ರಿಕತೆಗೂ ವೈಯಕ್ತಿಕತೆಗೂ ಇರುವ ವ್ಯತ್ಯಾಸ ಗೊತ್ತಾಗುತ್ತದೆ.

ದಾಹ ತಣಿಸದ

ಎಲ್ಲ ನದಿಗಳೂ ಹೀಗೆಯೇ

ಬಾಯಾರಿ ಮೊಗೆಯಲೆತ್ನಿಸಿದಾಗ

ನೆರೆಯಾಗಿ ಸಾಗರ ಹೊಕ್ಕು

ಉಪ್ಪು ನೊರೆಯಾಗುತ್ತವೆ (ಹೆಬ್ಬಂಡೆ ಮೌನ).

ಇಲ್ಲಿ ಬಾಯಾರಿ, ನೆರೆ, ಸಾಗರ, ನೊರೆ ಮುಂತಾದ ಶಬ್ದಗಳು ಭಾವವೊಂದನ್ನು ಹೇಗೆ ಅಭಿನಯಿಸಿ ತೋರಿಸುತ್ತಿವೆ ನೋಡಿ. ‘ನಾನು ಮತ್ತು ನಾನಲ್ಲ’, ‘ಅರ್ಥವಾಗದೇ ಹೋದದ್ದು’, ‘ಸಮಾನಾಂತರ’, ‘ಪ್ರತಿಮೆಯಾಗೋಣ ಬಾ’, ‘ಪ್ರಣಯ ಕವಿತೆ’, ‘ದಾಂಪತ್ಯ’, ‘ಒಲವಿನ ಒಗರು’ ಮುಂತಾದ ಕವನಗಳು ಪ್ರೇಮ, ದಾಂಪತ್ಯ, ಸಹಬಾಳ್ವೆ ಮೊದಲಾದವುಗಳನ್ನು ಹೊಸ ಬಗೆಯಲ್ಲಿ ವ್ಯಾಖ್ಯಾನಿಸುತ್ತವೆ.

ಇಲ್ಲಿನ ಕವನಗಳದು ಒಳಮುಖವಾದ, ವಿಚಾರಶೀಲತೆಯ, ಕೇಳಿಸಿಯೂ ಕೇಳಿಸದಂಥ ಮೃದುವಾದ ಧಾಟಿ. ಅಪಾರವನ್ನು ಸಂಗ್ರಹವಾಗಿ ಹೇಳುವ, ಭಾವನೆಗಳನ್ನು ಹದ್ದುಮೀರದಂತೆ ನಿಯಂತ್ರಿಸುವ, ಅನುಭವವನ್ನು ಹೊಸದೇ ಆಕೃತಿಯಲ್ಲಿ ಹಿಡಿದುಕೊಡುವ ಈ ಧಾಟಿಯಿಂದಾಗಿ ಕವನಗಳು ಬಹುಮಟ್ಟಿಗೆ ನೇರವಾಗಿ ಹೃದಯದಿಂದಲೇ ಮೂಡಿಬಂದಂತಿವೆ; ಸ್ವಚ್ಛಂದವಾಗಿದ್ದೂ ಬಂಧ ಲಯಗಳ ಆಸರೆಯನ್ನು ಬಿಟ್ಟುಕೊಡದೆ ಅತ್ಯಂತ ಎಚ್ಚರದಿಂದ ರೂಪುಗೊಂಡಂತಿವೆ. ಇವುಗಳಲ್ಲಿ ಅರ್ಥಾನುಸಂಧಾನವಿದೆ, ಸ್ಪಷ್ಟತೆಯಿದೆ, ಎಲ್ಲಕ್ಕಿಂತ ಮಿಗಿಲಾಗಿ ಮೃದುತ್ವವಿದೆ.

ಇವತ್ತಿನ ವಸ್ತುಸ್ಥಿತಿಯನ್ನು, ವಾಚ್ಯವಾಗಿಯಾದರೂ ಸರಿ, ಪ್ರತಿಬಿಂಬಿಸಿಬಿಡಬೇಕೆಂದು ಹೊರಡುವ ಕವಿ ಒಣ ಹೇಳಿಕೆಗಳನ್ನು ಪೋಣಿಸುವುದಕ್ಕಾಗಿ ಭಾಷೆಯನ್ನೇ ಹಿಂಸಿಸುತ್ತಿರುತ್ತಾನೆ. ಆದರೆ ಮಂಜುಳಾ ಪ್ರಜ್ಞಾಪೂರ್ವಕವಾಗಿ ಸಂಸ್ಕರಿಸಿಕೊಂಡ ತಮ್ಮದೇ ಭಾಷೆಯ ಕೋಮಲತೆಯಲ್ಲಿ ನಂಬಿಕೆಯಿಟ್ಟು ಮನುಷ್ಯ ಜೀವನದ ಅತಾರ್ಕಿಕತೆಯನ್ನೂ ದುರಂತವನ್ನೂ ಭಾವಗೀತಾತ್ಮಕವಾಗಿ ಪಡಿಮೂಡಿಸುವವರು.

ಈ ಸಂಕಲನದ ಎಲ್ಲ ಕವನಗಳೂ ಪರಿಪೂರ್ಣವಾಗಿವೆಯೆಂದು ಹೇಳಲಾರೆ. ಹೆಚ್ಚುಕಡಿಮೆ ಸ್ವಚ್ಛಂದ ಲಯದಲ್ಲೇ ಇರುವ ಇಲ್ಲಿನ ಕೆಲವು ಕವನಗಳಲ್ಲಿ ನಮ್ಮ ಕಾಲದ ಹೊಸ ಕವಿಗಳಲ್ಲಿ ಸಾಮಾನ್ಯವಾಗಿ ಕಾಣುವ ‘ಕಣ್ಣೀರನು’, ‘ಕ್ಷಣದಲಿ’, ‘ಜ್ವಾಲೆಯಲು’ ಮೊದಲಾದ ಪ್ರಯೋಗಗಳಿವೆ. ಕಾವ್ಯಭಾಷೆಯಲ್ಲಿ ಒತ್ತಕ್ಷರಗಳಿಲ್ಲದೆ ಕೊನೆಯಾಗುವ ಇಂಥ ಶಬ್ದಗಳಿರಬೇಕೆಂಬ ನಿಯಮವೇನಿದೆ? ‘ಒಂದು ಮಳೆಯನ್ನು ಏನೆಲ್ಲಾ ಮಾಡಬಹುದು’ ಎಂಬ ಚಿತ್ರವತ್ತಾದ ಕವನದಲ್ಲಿ ಒಂದೊಂದು ನುಡಿಯೂ ‘ಎಂದರ್ಥ’ ಎಂದು ಕೊನೆಗೊಳ್ಳುವುದರಿಂದ ಕವನದ ಅರ್ಥಬಾಹುಳ್ಯಕ್ಕೆ ಮಿತಿಯೊಡ್ಡಿದಂತಾಗಿದೆ. ‘ಹೆಂಗಸರ ಪದ್ಯ’ ಎಂಬ ಕವನದಲ್ಲಿರುವ 

ಕಿರುಗುಟ್ಟುವ ತೊಟ್ಟಿಲ ಸದ್ದಿಗೆ

ಎಚ್ಚೆತ್ತು ಬರುವಷ್ಟರಲ್ಲಿ

ರಚ್ಚೆ ಹಿಡಿದ ಮಗಳ

ಹಗುರವಾಗಿ ಮೇಲೆತ್ತಿ

ರಮಿಸಿ, ಮುತ್ತಿಟ್ಟು

ಎದೆಗೆ ಹಾಕಿ

ಹಾಲೂಡಿಸುತ್ತಾ

ಬರೆದ ಸಾಲುಗಳು

ಹೆಂಗಸರು ಬರೆದ ಪದ್ಯಗಳು

ಯಾವಾಗಲೂ

ಅಕ್ಕರೆಯನು ಜಿನುಗಿಸುತ್ತವೆ

 ಎಂಬ ಈ ಭಾಗವನ್ನು ಹನ್ನೊಂದು ಸಾಲುಗಳಾಗಿ ವಿಭಾಗಿಸುವ ಅಗತ್ಯವೇನೆಂದು ಗೊತ್ತಾಗುವುದಿಲ್ಲ. ಇರಲಿ, ಇವೇನೂ ಅಷ್ಟು ಗಣನೀಯವಾದ ದೋಷಗಳಂತೂ ಅಲ್ಲವೇ ಅಲ್ಲ. ಮುಖ್ಯವಾದ ಮಾತೆಂದರೆ ಮಂಜುಳಾ ಅವರು ನಿಜವಾದ ಕವಿಯೆನ್ನುವುದು. ಅವರನ್ನು ‘ಇವರು ಭರವಸೆ ಹುಟ್ಟಿಸುವ ಕವಿ’ ಎಂದರೆ ಅದೊಂದು ಕ್ಷೀಷೆಯಾದೀತಷ್ಟೆ.

ಎಸ್. ದಿವಾಕರ್

ಕೃಪೆ : ಪ್ರಜಾವಾಣಿ (2021 ಫೆಬ್ರುವರಿ 28)

Related Books