ಚಂಚಲ ನಕ್ಷತ್ರಗಳು

Author : ಎಂ.ಆರ್. ಭಗವತಿ

Pages 84

₹ 70.00




Year of Publication: 2005
Published by: ಸಿವಿಜಿ ಪಬ್ಲಿಕೇಷನ್ಸ್
Address: # 70, 2ನೇ ಮುಖ್ಯರಸ್ತೆ, ಜಬ್ಬಾರ ಬ್ಲಾಕ್, ವೈಯ್ಯಾಲಿ ಕಾವಲ್, ಬೆಂಗಳೂರು-560003
Phone: 0802331400

Synopsys

ಕವಯತ್ರಿ ಎಂ.ಆರ್. ಭಗವತಿ ಅವರ ಕವನ ಸಂಕಲನ-ಚಂಚಲ ನಕ್ಷತ್ರಗಳು. ಕಾವ್ಯ ವಸ್ತುವಿನಲ್ಲಿಯ ವೈವಿಧ್ಯತೆ, ಕಾವ್ಯ ಶೈಲಿ, ನವಿರಾದ ಭಾವಗಳು ಓದುಗರನ್ನು ಸೆಳೆಯುತ್ತವೆ.

About the Author

ಎಂ.ಆರ್. ಭಗವತಿ

ಲೇಖಕಿ ಎಂ.ಆರ್. ಭಗವತಿ ಅವರು ಮೂಲತಃ ಚಿಕ್ಕಮಗಳೂರುದವರು.  ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ ಪದವಿ. ಒಂದು ವರ್ಷ ಇಂಗ್ಲಿಷ್ ಉಪನ್ಯಾಸಕಿಯಾಗಿ ಕೆಲಸ. ಈಗ ಕ್ಯಾಮೆರಾ ಹಿಡಿದು ಹಕ್ಕಿಗಳ ಹಿಂದೆ ಬಿದ್ದಿದ್ದು, ದಿನಪತ್ರಿಕೆ ಮತ್ತು ಅಂತರ್ಜಾಲ ಪತ್ರಿಕೆಯಲ್ಲಿ ಹಕ್ಕಿಗಳ ಕುರಿತು ಲೇಖನ ಬರೆಯುತ್ತಿದ್ದಾರೆ. “ಅತ್ತುಬಿಡೇ ಗೆಳತಿ” (ಸುಧಾಶರ್ಮ ಚವತ್ತಿ, ಮತ್ತು ಸಿ.ಎಸ್. ಸವಿತಾ ಅವರೊಂದಿಗೆ- ಜಂಟಿಯಾಗಿ (1991), ಇವರ ಮೊದಲ (1999)ಸಂಕಲನ “ಏಕಾಂತದ ಮಳೆ”ಗೆ “ಬಿಎಂಶ್ರೀ ಸಾಹಿತ್ಯ ಪ್ರಶಸ್ತಿ” ಮತ್ತು ಎರಡನೆಯ (2005)ಸಂಕಲನ “ಚಂಚಲ ನಕ್ಷತ್ರಗಳು” “ಹರಿಹರ ಶ್ರೀ” ಪ್ರಶಸ್ತಿಗೆ ಪಾತ್ರವಾಗಿದೆ. ಕನ್ನಡದ ಹಲವಾರು ಪತ್ರಿಕೆಗಳಲ್ಲಿ ಇವರ ಅಂಕಣ ಬರೆಹ, ...

READ MORE

Reviews

ಬೀಪ್, ಬೀಪ್ ..... ಬೀಪ್,

ಕೊನೆಗೂ, ಕವಿತೆಯನ್ನು ಕಟ್ಟುವುದು ಒಂದು ಸಂವೇದನಶೀಲವಾದ ಹೃದಯವೇ. ಅವು ತಲುಪುವುದೂ ಅಂತಹ ಕೇಂದ್ರಗಳಿಗೆ ಮಾತ್ರವೇ. ಆದರೆ ನಿಜವಾದ ಸವಾಲೆಂದರೆ ಪ್ರತಿಯೊಂದು ಮನುಷ್ಯಜೀವಿಗಳಿಗೂ ಅಂತಹ ಕಟ್ಟುವ, ಕೇಳುವ ಸಾಮರ್ಥ್ಯ ಇದೆಯೆಂದು ನಂಬುವುದು ಮತ್ತು ಹಾಗೆ ಬದುಕುವುದು. ಕವಿತೆಯ ಹುಟ್ಟು ಏಕಾಂತದ ಮಳೆಯ ಕೃಪೆಯಾದರೆ, ಅದರ ಗ್ರಹಿಕೆಯೂ ಅಂತಹುದೇ ಅನುಭವ, ಶ್ರೀಮತಿ ಭಗವತಿಯವರ ಕವಿತೆಯ ಮೂಲಸೆಲೆಯಿರುವುದೂ ಇಂತಹ ನಂಬಿಕೆಯಲ್ಲಿಯೇ, ಅವರು ತಮ್ಮ ಓದುಗರಿಗೆ ಉಪನ್ಯಾಸ ನೀಡುವುದಿಲ್ಲ, ಸಂದೇಶ ಕೊಡುವುದಿಲ್ಲ. ವಾಚಾಳಿಯಂತೆ, ಅವರೊಂದಿಗೆ ಮಾತನಾಡುವುದೂ ಇಲ್ಲ. ಹಾಗೆ ನೋಡಿದರೆ, ಓದುಗರು ಅವರ ಗಮನದಲ್ಲಿಯೇ ಇಲ್ಲ. ಆದರೆ ಅವರ ಸ್ವಗತಕ್ಕೆ ನಮ್ಮನ್ನು ಕಲಕುವ, ಕೆಣಕುವ ಶಕ್ತಿ ಇದೆ. ಅವರ ಮೊದಲ ಸಂಕಲನದಲ್ಲಿ ಅಲ್ಲಲ್ಲಿ ಹೇಳಿಕೆಗಳಿರುತ್ತಿದ್ದವು, ಆಲೋಚನೆಗಳಿರುತ್ತಿದ್ದವು. ಆದರೆ ಇಲ್ಲಿರುವುದು ಭಾವಶಿಲ್ಪಗಳ ಸರಣಿ ಮಾತ್ರವೇ. ಅವು ನಮಗೇ ತಿಳಿಯದಂತೆ ನಮ್ಮೊಳಗೆ ಚಲಿಸಿ ಸ್ಪಂದನಗಳನ್ನು, ವಿಚಾರಗಳನ್ನು ಹುಟ್ಟಿಸುತ್ತವೆ, ಮತ್ತೆ ಮರೆಗೆ ಸರಿಯುತ್ತವೆ.

ನಮ್ಮ ಕಾಲದ ಕವಿತೆಯ ಒಂದು ಸೆಲೆಯು, ನೆನಪುಗಳನ್ನು ಹೇಳುತ್ತದೆ, ಆದರೆ ನೆನಪಿನಲ್ಲಿ ಉಳಿಯುವುದಿಲ್ಲ. ಕವಿಯು ಕಿವಿಗಳಿಗೆ ವಿದಾಯಹೇಳಿ, ಭಾವನೆಗಳಲ್ಲಿ ನೆಲೆಸಿದಾಗ, ಕವಿತೆಯು ಚಿತ್ರಮಯವಾದ ಶೀಘ್ರಲಿಪಿಯಲ್ಲಿ ಬರೆದ ಗದ್ಯವಾಗುತ್ತದೆ. ಲಯದ ಲೋಕದಲ್ಲಿಯೂ ಗದ್ಯದ ಒಳಲಯಗಳದೇ ರಾಜ್ಯಭಾರ. ಇದು ಮುದ್ರಣವೆಂಬ ಮಾಯಾಂಗನೆಗೆ ಕೊಟ್ಟ ಬಲಿಯೆಂದೇ ತೋರುತ್ತದೆ. ನಾದವನ್ನು ನೆಮ್ಮಿದ ಸುಗಮಸಂಗೀತವಾಗಲೀ ಶಾಬ್ದಿಕ ಚಮತ್ಕಾರವನ್ನು ನೆಚ್ಚಿಕೊಂಡ ಹನಿಗವನಗಳಾಗಲಿ, ಕಳೆದುಹೋದ ಕವಿತೆಗೆ ಪರ್ಯಾಯಗಳಾಗಿ ರೂಪುಗೊಂಡಿಲ್ಲ. ಇಂಥ ವಸ್ತುಸ್ಥಿತಿಯನ್ನು ಗುಣ-ದೋಷಗಳ ಇಂಚುಪಟ್ಟಿಯಿಂಡ ಅಳೆಯದೆ ನಡೆಯುತ್ತಿರುವ ವಿದ್ಯಮಾನವೆಂದು ತಿಳಿದು ಬರುತ್ತಿರುವ ಕವಿತೆಗಳ ಅನುಸಂಧಾನಕ್ಕೆ ತೊಡಗುವುದು ಚೆನ್ನು. ಏಕೆಂದರೆ ಇದು ಒಬ್ಬ ಕವಿಯ ಸಮಸ್ಯೆಯಲ್ಲ. ಒಂದು ಪೀಳಿಗೆಯ ಸಮಸ್ಯೆ. ಸಮಸ್ಯೆಯಲ್ಲ ಎನ್ನುವುದಾದರೆ, ಕನ್ನಡ ಕವಿತೆಯು ಇಟ್ಟಿರುವ ಇನ್ನೊಂದು ಹೆಜ್ಜೆ.

ಈ ಸಂಕಲನದ ವಿಶಿಷ್ಟ ಲಕ್ಷಣಗಳಲ್ಲಿ ಒಂದು, ಭಗವತಿಯವರು ತಮ್ಮ ಹಲವು ಕವನಗಳಲ್ಲಿ ಲಿಂಗನಿರ್ದಿಷ್ಟ ದೃಷ್ಟಿಕೋನದ ನೆಲೆಯಿಂದ ಬಿಡುಗಡೆ ಪಡೆದಿರುವುದು. ಗಂಡು ಬರೆದಿರುವ ಕವಿತೆಗಳನ್ನು ಗಂಡು ಬರೆದಿರುವ ಕವಿತೆಗಳೆಂದು ಯಾರೂ ನೋಡುವುದಿಲ್ಲ. ಆದರೆ ಹೆಣ್ಣು ಬರೆದಾಗ ನಮ್ಮ ನಿರೀಕ್ಷೆಗಳು ಬದಲಾಗುತ್ತವೆಯೇ? ವಿಶಿಷ್ಟ ಅನುಭವಗಳ ಅಭಿವ್ಯಕ್ತಿಗಾಗಿ ಹಾತೊರೆಯುತ್ತೇವೆಯೇ? ಅಂತಹುದನ್ನೇ ಹುಡುಕುತ್ತೇವೆಯೇ? ಈ ಬಗೆಯ ನಿರೀಕ್ಷೆಗಳೇ ಪರಿಮಿತಿಯಾಗಿ, ಹೊರೆಯಾಗಿ ಪರಿಣಮಿಸುತ್ತವೆಯೇ? ಇವು ಈ ಸಂದರ್ಭದಲ್ಲಿ ಕೇಳಿಕೊಳ್ಳಬೇಕಾದ ಪ್ರಶ್ನೆಗಳು. ಅದೇನೇ ಇರಲಿ, ಭಗವತಿಯವರ ಅನೇಕ ಕವಿತೆಗಳು ಗಂಡೂ ಅಲ್ಲದ ಹೆಣ್ಣೂ ಅಲ್ಲದ, ನಡುವೆ ಸುಳಿವ ಆತ್ಮದ ಮಾತುಗಳಾಗಿರುವುದರಿಂದಲೇ ವಿಸ್ತಾರಗಳನ್ನು, ವ್ಯಾಪ್ತಿಯನ್ನು, ಆಸಕ್ತಿಯ ಹೊಸ ಕೇಂದ್ರಗಳನ್ನು ಪಡೆದುಕೊಂಡಿವೆ. ಇವುಗಳಿಗೆ ಪೂರಕವಾಗಿ ನೂರಕ್ಕೆ ನೂರರಷ್ಟು ಸ್ತ್ರೀ ವಿಶಿಷ್ಟವಾದ ಕವಿತೆಗಳೂ ಇಲ್ಲಿ ಮಂಡಿತವಾಗಿವೆ. ಈ ಎರಡು ಗುಂಪಿನ ಕವಿತೆಗಳ ಹೋಲಿಕೆಯೂ ಕುತೂಹಲಕಾರಿಯಾಗಬಹುದು. ಒಂದಂತೂ ನಿಜ, ಇಲ್ಲಿನ ದಟ್ಟ ವಿಷಾದವು ಆಕ್ಷೇಪಣೆ, ಆರೋಪಣೆ ಮತ್ತು ಅಕ್ರಮಣಶೀಲತೆಗಳಿಂದ ಸಂಪೂರ್ಣವಾಗಿ ಮುಕ್ತವಾಗಿದೆ. ವ್ಯಂಗ್ಯವೂ ಬಹಳ ಬಹಳ ಅಪರೂಪದ ಅತಿಥಿಯೇ. ಗಂಡಿರಲಿ,

ಹೆಣ್ಣಿರಲಿ, ಜೊತೆಜೀವಗಳಿಗೆಲ್ಲ ಅವುಗಳದೇ ವಿಷಾದದ ಔತಣವಿದೆಯೆಂಬ ತಿಳಿವಳಿಕೆಯು ಈ ಸಂಕಲನದ ವಿವೇಕವನ್ನು ರೂಪಿಸಿದೆ. ಈ ನಿಲುವು ಪೊಲಿಟಿಕಲಿ ಕರೆಕ್ಟ್ ಹೌದೋ ಅಲ್ಲವೋ ಎನ್ನುವುದರ ಬಗ್ಗೆ ಇವರ ಕವಿತೆ ತಲೆಕೆಡಿಸಿಕೊಂಡಿಲ್ಲ. ಒಳ್ಳೆಯ ಕವಿತೆಗೆ ಅಂತಹ ಹಂಗುಗಳು ಇರುವುದಿಲ್ಲವೇನೋ,

ಅವರ ಕಣ್ಣುಗಳಲ್ಲಿ ಉರಿಯಿರಲಿಲ್ಲ, ಹಸಿವಿತ್ತು

ಮೈಯ ಖಂಡಖಂಡಗಳಲ್ಲಿ ಭೂಪಟದ ಸಾಕ್ಷಿಯಿತ್ತು

ಯಮವೈದ್ಯನ ಕತ್ತರಿ ಚಾಕುವಿಗೆ

ರಕ್ತಮಾಂಸ ಹತ್ತಿಯಲ್ಲಿ ಅದ್ದಿದ ದೇಹಪ್ರಯೋಗ

ಇಂಥ ಕಡೆ ಭಗವತಿಯವರ ಕವಿತೆಯು ಪಡೆದುಕೊಳ್ಳುವ ಆಯಾಮಗಳು ಇಂದು ಅಪರೂಪವಾದವು. ಇವು ಸ್ವಂತದ ಜಂಜಡಗಳನ್ನು, ಭಾವನಾತ್ಮಕ ನಿವೇದನೆಯ ಮಿತಿಗಳನ್ನು ಮೀರುತ್ತವೆ. ಕವಿಯು ಈ ಜಗತ್ತಿನ ರಚನಾತ್ಮಕ ವಿನ್ಯಾಸದಲ್ಲಿ, ತಾನು ಕೇವಲ ಒಂದು ಬಿಂದು, ಒಂದು ಧೂಳಿನ ಕಣ ಎಂಬ ಸಂಗತಿಯನ್ನು ಗ್ರಹಿಸುತ್ತಾರೆ. ಆದರೆ ಈ ತಿಳಿವಳಿಕೆಯು ಮನುಷ್ಯನಿಗಿರುವ ಸಂವೇದನಶೀಲತೆಯೆಂಬ ಪವಾಡವನ್ನು ಮರೆಸುವುದಿಲ್ಲ. ಅವರ ವಿನಯದಲ್ಲಿಯೇ ವಿಸ್ಮಯವೂ ಇದೆ.

ಆಳವಾದ ವಿಷಾದ ಮತ್ತು ಮಗುವಿನ ಮೂಲಕವಾಗಿ ಮೂಡಿರುವ ಮಾತೃಭಾವದ ಫಲವಾದ, ಕಾಪಾಡಿಕೊಳ್ಳಬೇಕು ಎಂಬ ತಿಳಿವಳಿಕೆಗಳು ಈ ಸಂಕಲನದ ಇನ್ನೊಂದು ಕೇಂದ್ರ. ಮೊದಲ ಸಂಕಲನದಲ್ಲಿಯೂ ವ್ಯಾಪಕವಾಗಿದ್ದ ಈ ವಿಷಾದವು ಉಲ್ಲಾಸದ ಬಿಡುವುಗಳನ್ನು ಪಡೆಯುವುದು ಬಹಳ ಅಪರೂಪ. ಮನುಷ್ಯ ಸಂಬಂಧಗಳಲ್ಲಿ ಉಂಟಾಗುವ ಬಿರುಕುಗಳೇ ಈ ವಿಷಾದದ ಮೂಲವಾಗಿರುವುದರಿಂದ ಇದರಿಂದ ಬಿಡುಗಡೆಯು ಈ ಕವಿಗೆ ಕಷ್ಟವೆನಿಸುತ್ತದೆ. ಮೊದಲ ದಿನ ಮೌನ, ಅಳುವೇ ತುಟಿಗೆ ಬಂಂತೆ ಎಂದು ಮೊದಲಾಗುವ ನರಸಿಂಹಸ್ವಾಮಿಯವರ ಕವಿತೆಯೂ ಇಲ್ಲಿ ಮುಂದುವರಿಯುವ ಪರಿ ಹೀಗಿದೆ :

ಜೊತೆಯಾದ ವರ್ಷಕ್ಕೆ

ನಡುಗುವ ಆಕಾಶ, ಸುಡುವ ಭೂಮಿ - ಕಳೆದುಹೋದವು

ವರ್ಷಗಳು ಸಾಲು ಸಾಲು (ಮೊದಲ ಮಳೆ)

ಇಂಥ ದುಃಖವು ಹೊರ ಜಗತ್ತಿನ ಕಡೆಗೆ ಹರಿದಾಗ ಪಡೆಯುವುದೂ ಅಂತಹುದೇ ಆಯಾಮವನ್ನು:

ಮುಸುಕುದಾರಿ ಬ್ರಹ್ಮಾಡದಲ್ಲಿ ಬೀಸೋ ಗಾಳಿಗೆ

ಪುಟ್ಟ ಧೂಳಿನ ಕಣದ ಅರಣ್ಯರೋದನ

ಪಂಖದ ಗಾಳಿಯಲ್ಲೂ ಬೆವರುತಿದೆ ಮೈ

ಯಾವ ಕಣ್ಣುಗಳಲ್ಲೂ ದೀಪವಿಲ್ಲ. (ಕಾರ್ತೀಕದ ಕಡೇ ದಿನ)

ಇಂಥ ವಿಷಾದದ ನಡುವೆಯೂ ಕುಣಿಯೋಣ ಬಾರಾ, ಕುಣೀಯೋಣ ಬಾ ಎನ್ನುವ ಹದಿನಾಲ್ಕು ಲೋಕಕ್ಕೆ ಚಿಮ್ಮಲಿ ಈ ಸುಖ ಎನ್ನುವ ಧೀರ ಉನ್ಮತ್ತತೆಯ ಸೆಲೆಗಳನ್ನು ಹುಡುಕುವುದೂ ಕವಿಯ ಕಾಯಕವಾಗಬೇಕಲ್ಲವೇ. ನನ್ನ ಜಂಜಡಗಳಾಚೆಗೆ, ಅಷ್ಟೇಕೆ ಅನೇಕ ಸಲ ಅವುಗಳ ನಡುವೆ ನನ್ನಲ್ಲಿಯೂ ಕೂಡ ಚಿಮ್ಮುತ್ತಿರುವ ಹರ್ಷ-ಉಲ್ಲಾಸಗಳನ್ನು ಕಾಣುವುದು. ಕಂಡರಿಸುವುದು ಈ ಕವಿಗೆ ಸಾಧ್ಯವಾಗಬೇಕು, ಇಲ್ಲವಾದರೆ ಒಂದು ಬಗೆಯ ಅಳುಬುರುಕುತನದ ಸೂಕ್ಷ್ಮರೂಪಗಳಲ್ಲಿ ರಮಿಸುವುದೇ ರೂಢಿಯಾಗಿಬಿಡುತ್ತದೆ. ಭಗವತಿಯವರು ವೈಚಾರಿಕತೆಯ ಮೂಲವಾದ ಹೊರದಾರಿಗಳನ್ನು ಈಗಾಗಲೇ ಕಂಡುಕೊಂಡಿದ್ದಾರೆ. ಅವರು ಅಷ್ಟೊಂದು ಇಷ್ಟಪಡುವ ಮಗುತನದಲ್ಲಿ, ಅದರ ಕಣ್ಣುಗಳ ಅಗಾಧ ವಿಸ್ಮಯದಲ್ಲಿ ಇನ್ನೊಂದು ಬಗೆಯ ಬಿಡುಗಡೆಯಿದೆ. ಆಗ ಚಂದ್ರಲೋಕಕ್ಕೆ ಪಯಣ ಸಾಧ್ಯವಾಗುತ್ತದೆ. ಇಂಥ ಅರಿವು ಅಪೇಕ್ಷೆ ಕವಿಯಲ್ಲೇ ಮೂಡುತ್ತಿದೆ ಕೂಡ :

ಇಟ್ಟ ಕಡೆ ಇರದೆ, ಕೂತ ಕಡೆ ಕೂರದೆ

ಕೊರಳುದ್ದ ಕೊಂಕಿಸಿ, ಮಾರುತ್ತರ ಪ್ರತಿಪದಕ್ಕೂ

ಹೊಸ ಭಾಷೆ ಟಂಕಿಸಿ ನಿನ್ನದೇ ಕಿಲಕಿಲ

ಮನೆಯ ತುಂಬಾ.

ಚಂಚಲ ನಕ್ಷತ್ರಗಳು ಸಂಕಲನಕ್ಕೆ ಮುನ್ನುಡಿಯಾಗಿ ಕೆಲವು ಮಾತುಗಳನ್ನು ಬರೆಯಬೇಕೆಂದು ಕೇಳುವುದರ ಮೂಲಕ ಕವಿ ನನ್ನ ಬಗ್ಗೆ ಗೌರವವನ್ನು ತೋರಿಸಿದ್ದಾರೆ. ಅವರಿಗೆ ಕೃತಜ್ಞನಾಗಿದ್ದೇನೆ. ಇಂತಹ ಬರವಣಿಗೆಯು ಪ್ರತಿಸ್ಪಂದನವಲ್ಲದೆ ಬೇರೇನೂ ಅಲ್ಲ. ಭಗವತಿಯವರ ಒಂದು ಕವಿತೆಯು

ಹೆಲೋ!

ಯಾರಾದರೂ

ಇದ್ದೀರಾ..........?

ಇದ್ದೀ...........

ಇ.............

........!!!

ಎಂದು ಮುಗಿಯುತ್ತದೆ. ಇಂಥ ಕರೆಗೆ ಉತ್ತರಿಸುವ ಅನೇಕರು ಇದ್ದರು, ಇದ್ದಾರೆ ಮತ್ತು ಇರುತ್ತಾರೆ ಎಂಬ ಭರವಸೆಯೊಂದಿಗೆ, ನಾನು ಬದಿಗೆ ಸರಿಯುತ್ತೇನೆ.

-ಎಚ್.ಎಸ್. ರಾಘವೇಂದ್ರರಾವ್ (ಕೃತಿಯ ಮುನ್ನುಡಿ)

---------------------------------------------------------------------------------------------

ಚಂಚಲ ನಕ್ಷತ್ರಗಳು

ಮಳೆಯ ನಂತರ ಎಲೆಗಳಿಂದ ಉದುರುವ ಹನಿಗಳೆಲ್ಲಾ ’ಉಪಮಳೆ’ ಎಂದು ಕರೆದಿದ್ದರು ಎಂ. ಆರ್ ಭಗವತಿ ತಮ್ಮ ಮೊದಲ ಕವನ ಸಂಕಲನ ’ಏಕಾಂತದ ಮಳೆ’ಯಲ್ಲಿ. ಹಾಗೆ ನೋಡಿದರೆ, ’ಇಂದಿನ ಕವಿತೆ’ ಕೂಡ ತನ್ನ ಆವರಣವನ್ನೂ ಜೀವನವನ್ನೂ ’ಉಪಕವಿತೆಗಳ’ ಮೂಲಕವೇ ಕಲ್ಪಿಸಿಕೊಳ್ಳುತ್ತಿದೆಯೇನೋ. ಭಗವತಿ ಅವರ ಈ ಎರಡನೇ ಸಂಕಲನದ ರಚನೆಗಳು ಕಾಣದ ಇಡಿಯ ಒಂದೊಂದು ಬಿಡಿಯನ್ನು ತಮ್ತಮ್ಮ ಕೈಲಿ ಇಟ್ಟುಕೊಂಡು ಸಹಯೋಗಕ್ಕಾಗಿ ಸ್ಪಂದಿಸುತ್ತಿರುವಂತೆ ಭಾಸವಾಗುತ್ತದೆ.

’ಬೆಳಕು ಕ್ಷೀಣವಾಗಿರುವಲ್ಲಿ ಹೋಗುವ ಕನಸು’, ’ಬೆವರು ಒರೆಸಲು ನಕ್ಷತ್ರಗಳು ಸಾಕು’, ’ಅಲ್ಲ್ಲಿ ಹುಟ್ಟುವ ಹೊಸ ಗಾಳಿಗೆ ಇನ್ನೊಂದು ಹೆಸರಿಡೋಣ’- ಇಂಥ ಚಲನಶೀಲ ಉಲಿಗಳಿವೆ ಇಲ್ಲಿ. ’ಅಗಾಧ ಕಟೌಟ್ ಗಳು’, ’ಕುಸಿದ ಮರಳ ರಾಶಿಯಲ್ಲಿ ಚಾಕಲೇಟು ಹುಡುಕುವ ಕೈ’, ’ವಿದ್ಯುತ್ ತಂತಿಗೆ ಸಿಕ್ಕು ಸತ್ತು ಬಿದ್ದ ಕಾಗೆ’- ಇಂಥ ಇಂದಿನ ಚಿತ್ರಗಳಲ್ಲಿ ಮಾತಾಡುವ ಭಗವತಿ ಅವರ ಕವಿತೆ ’ಕೈಯಲ್ಲಿ ಕಾಸಿಲ್ಲದಾಗ ಕೈ ಬೀಸಿ ನಡೆಯಿರಿ’ ಅನ್ನುತ್ತದೆ. ಮತ್ತು ’ಮಂದಿರವೊ ಮಸೀದಿಯೊ. ಕೆದವಿದ ಕಂಬದ ನಡುವೆ ಒಂದು ದೀಪವಿತ್ತಲ್ಲ, ಅದು ಎಲ್ಲಿ ಹೋಯಿತು’ –ಎಂಬ ಆಳವಾಗಿ ಅನುರಣಿಸುವ ಪ್ರಶ್ನೆಯನ್ನು ಕೇಳುತ್ತದೆ.

ಭಗವತಿ ಅವರ ಹೆಚ್ಚಿನ ರಚನೆಗಳು ಅವರೇ ವರ್ಣಿಸುವ ಬೆಕ್ಕಿನ ಕಣ್ಣುಗಳಂತೆ “ಕತ್ತಲಿಗೆ ಟಾರ್ಚು ಬಿಟ್ಟ ಹಾಗೆ, ಕಣ್ಣಿಗೆ ನಕ್ಷತ್ರ ಇಟ್ಟ ಹಾಗೆ, ಕತ್ತಲನ್ನು ಬೆಳಕನ್ನು ಒಟ್ಟಿಗೇ ಇಟ್ಟುಕೊಂಡಿವೆ”. ಹೇಳುವ ಆತುರಕ್ಕಿಂತ , ’ಎನೋ ಹೇಳದೆ ಬಿಟ್ಟೆ’ ಎಂಬ ಆರ್ತ ಆತಂಕವೇ ಅವರ ಎಲ್ಲಾ ಕವಿತೆಗಳನ್ನು ಹಿಡಿದಿಡುವ ಜೀವ ಸೂತ್ರವಾಗಿದೆ. ಸಂಕಲನದಲ್ಲಿ ಮಾತ್ರ ಕವಿ ನಮಗೆ ಸಿಗಬಹುದಾಗಿರುವ ’ಉಪಕವಿತೆ’ಗಳ ಈ ಕಾಲದಲ್ಲಿ, ಈ ಸಂಕಲನ ಎಲ್ಲಾ ಕಾವ್ಯಾಸಕ್ತರನ್ನು ಮುಟ್ಟಲಿ. ಹೇಳದೇ ಬಿಟ್ಟ ಸಂಗತಿಗಳು ಭಗವತಿ ಅವರ ಬರವಣಿಗೆಗೆ ಧ್ವನಿಯನ್ನೂ, ಸವಾಲನ್ನೂ, ಸ್ಪೂರ್ತಿಯನ್ನು ಕೊಡುತ್ತಿರಲಿ.

-ಜಯಂತ ಕಾಯ್ಕಿಣಿ (ಕೃತಿಯ ಬೆನ್ನುಡಿ)

Related Books