ರಂಗಬಿನ್ನಪ

Author : ಎಸ್.ವಿ. ರಂಗಣ್ಣ 

Pages 600

₹ 460.00
Year of Publication: 2018
Published by: ಹೇಮಂತ ಸಾಹಿತ್ಯ
Address: 972 ಸಿ, 62ನೇ ಅಡ್ಡರಸ್ತೆ, 10ನೇ ಮುಖ್ಯರಸ್ತೆ, 4ನೇ ಎಂ ಬ್ಲಾಕ್, ಮಂಜುನಾಥನಗರ, ರಾಜಾಜಿನಗರ, ಬೆಂಗಳೂರು-560010

Synopsys

ಎಸ್.ವಿ. ರಂಗಣ್ಣನವರ ರಂಗಬಿನ್ನಪ ಕಾವ್ಯವುಜೀವನದ ಎಲ್ಲ ಅಂಶಗಳು, ಎಲ್ಲ ಸಮಸ್ಯೆಗಳು, ಜನತೆಯ ಆಶೋತ್ತರ 'ಕಷ್ಟ ಕಾರ್ಪಣ್ಯ, ಮಾನವ-ಮಾನವ ಸಂಬಂಧ, ಸ್ತ್ರೀ ಪುರುಷ ಸಂಬಂಧ ದೈವದ ಪ್ರಶ್ನೆ ಮರಣಾಂತರ ಸಂಭವನೀಯ ಅಂಶಗಳು ಇವುಗಳನ್ನೆಲ್ಲ ಕುರಿತ ಚಿಂತಕನ ಸಹಾನುಭೂತಿಯ ಪ್ರತಿಕ್ರಿಯೆಯಾಗಿದೆ. ಜೀವನದ ಸಂಕೀರ್ಣತೆಯನ್ನು ವಿಶ್ಲೇಷಿಸಲು, ದೈವತ್ವದ ಅದ್ಭುತ ಅನಿರ್ವಚನೀಯ ಅನಿರೀಕ್ಷಿತ ಘಟನೆಗಳನ್ನು ರಕ್ಷಿಸಿ ಸಮನ್ವಯಗೊಳಿಸಲು ಪ್ರಯತ್ನಿಸಿದ್ದಾರೆ. 

About the Author

ಎಸ್.ವಿ. ರಂಗಣ್ಣ 
(24 December 1898 - 17 February 1987)

ಕನ್ನಡ ಮತ್ತು ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದಲ್ಲಿ ಪ್ರಾವೀಣ್ಯ ಪಡೆದಿದ್ದ ಎಸ್.ವಿ. ರಂಗಣ್ಣನವರು ಹಾಸನ ಜಿಲ್ಲೆಯ ಸಾಲಗಾಮೆಯಲ್ಲಿ  1898ರ ಡಿಸೆಂಬರ್ 24ರಂದು ಜನಸಿದರು. ತಂದೆ ವೆಂಕಟಸುಬ್ಬಯ್ಯ- ತಾಯಿ ವೆಂಕಟಲಕ್ಷ್ಮಮ್ಮ. ವಿದ್ಯಾಭ್ಯಾಸ ಚಿಕ್ಕಮಗಳೂರು, ಬೆಂಗಳೂರು, ಮೈಸೂರುಗಳಲ್ಲಿ ನಡೆಯಿತು. ಸೆಂಟ್ರಲ್ ಕಾಲೇಜಿನಲ್ಲಿ ಓದಿ ಬಿ.ಎ. ಪದವಿ (1921)  ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ಗಳಿಸಿದರು. 1923ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ನೇಮಕಗೊಂಡರು. ತುಮಕೂರಿನಲ್ಲಿ (1928-33), 1933ರಿಂದ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ, ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿ 1954ರಲ್ಲಿ ನಿವೃತ್ತರಾದರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬಿ.ಎಂ.ಶ್ರೀ. ಅವರು ...

READ MORE

Awards & Recognitions

Reviews

ರಂಗಬಿನ್ನಪ 

ರಂಗಬಿನ್ನಪ, ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟ ವಿಭಾಗಕ್ಕೆ ಸೇರುವ ಗ್ರಂಥ. ಲೇಖಕರೇ ಇದನ್ನು ಪ್ರಾರಂಭದೆಸೆಯಲ್ಲಿ ವಚನಗಳು ಎಂದು ಕರೆದರು. ಈ ಗ್ರಂಥವನ್ನು ಇಂಥ ಒಂದು ಪ್ರಕಾರಕ್ಕೆ ಸೇರಿದುದೆಂದು ವಿಂಗಡಿಸಿ ಹೇಳುವುದು ಕಷ್ಟ. ಇದರಲ್ಲಿ ಅನೇಕ ಕಿರು ಉತ್ಕೃಷ್ಟ ವಚನಗಳೊಂದಿಗೆ, ಹತ್ತು ಹನ್ನೆರಡು ಪುಟಗಳನ್ನು ಆಕ್ರಮಿಸುವ ಗದ್ಯ, ಕವಿತೆಗಳೂ ಇವೆ. ಇದರಲ್ಲಿ ಸಾವಿರದ ಇನ್ನೂರ ಹನ್ನೆರಡು ವಚನಗಳಿವೆ. ಈ ಬಗೆಯ ಸ್ವವಿಷಯಕ ಸಾಹಿತ್ಯದಲ್ಲಿ ಇದು ಅತಿ ವಿಸ್ತಾರವೂ ಶ್ರೇಷ್ಠವೂ ಆದ ಗ್ರಂಥವಾಗಿದೆ. ಈ ಗ್ರಂಥ, ಜೀವನದ ವಿಷಯಕ್ಕೆ ಜೀವನದ ಎಲ್ಲ ಅಂಶಗಳು, ಎಲ್ಲ ಸಮಸ್ಯೆಗಳು, ಜನತೆಯ ಆಶೋತ್ತರ 'ಕಷ್ಟ ಕಾರ್ಪಣ್ಯ, ಮಾನವ-ಮಾನವ ಸಂಬಂಧ, ಸ್ತ್ರೀ ಪುರುಷ ಸಂಬಂಧ ದೈವದ ಪ್ರಶ್ನೆ ಮರಣಾಂತರ ಸಂಭವನೀಯ ಅಂಶಗಳು ಇವುಗಳನ್ನೆಲ್ಲ ಕುರಿತ ಚಿಂತಕನ ದ್ರಷ್ಟಾರಕನ ಅನುಕಂಪ. ಸಹಾನುಭೂತಿಯ ಪ್ರತಿಕ್ರಿಯೆಯಾಗಿದೆ. ಜೀವನದ ಸಂಕೀರ್ಣತೆಯನ್ನು ವಿಶ್ಲೇಷಿಸಲು, ದೈವತ್ವದ ಅದ್ಭುತ ಅನಿರ್ವಚನೀಯ ಅನಿರೀಕ್ಷಿತ ಘಟನೆಗಳನ್ನು ರಕ್ಷಿಸಿ ಸಮನ್ವಯಗೊಳಿಸಲು ಪ್ರಯತ್ನಿಸಲು ಲೇಖಕರಿಗೆ ಅಪಾರವಾದ ಅನುಭವ ಮತ್ತು ಕಾವ್ಯ ಸತ್ವದ ಅರಿವು ಇದೆ. ಶ್ರೀಮಾನ್ ಎಸ್. ವಿ. ರಂಗಣ್ಣನವರು ತಮ್ಮ ಅಪಾರವಾದ ಪಾಶ್ಚಾತ್ಯ ಪೌರ್‍ವಾತ್ಯ ಸಾಹಿತ್ಯಗಳ ದೀರ್ಘ ವ್ಯಾಸಂಗ ಬಹುಶ್ರುತುತ್ವ ಜೀವನದ ನಾನಾ ಕ್ಷೇತ್ರಗಳ ಉಚ್ಚ ನೀಚ ಪ್ರವೃತ್ತಿಗಳ ಅರಿವು ವಿವೇಕಿ, ಜೀವನದ ಸಾಫಲ್ಯವನ್ನೂ ಪೂರ್ಣತೆಯನ್ನೂ ವೀಕ್ಷಣೆಯಿಂದಲೂ ಪ್ರತಿಭೆಯಿಂದಲೂ ಅಂತಃಕರಣದಿಂದಲೂ ಸ್ಪರ್ಶಿಸಬಲ್ಲರು. “ಚೆನ್ನಾಗಿ ಬಾಳಬೇಕು. ಜೀವನ ಸುಂದರವಾಗಿರಬೇಕು, ಜೀವ ರಕ್ಷಣೆಗೆ ಅರ್ಹ, ಮಾನವತೆ ಎಲ್ಲ ಧರ್ಮಕ್ಕಿಂತ ದೊಡ್ಡ ಧರ್ಮ, ಮಾನವ ದೇಹ ದಿವ್ಯ, ಕಷ್ಟಗಳನ್ನೂ ದೃಢತೆಯಿಂದ ಸೈರಿಸಬೇಕು. ಸ್ವರ್ಗ ನರಕಗಳು ಇವೆಯೋ ಇಲ್ಲವೋ ಬಲ್ಲವರಾರು ? ಆದರೆ ಈ ಪ್ರಪಂಚದಲ್ಲಿಯೇ ಸ್ವರ್ಗನರಕಗಳನ್ನು ಸೃಷ್ಟಿಸುವ ಶಕ್ತಿ, ಅವಕಾಶ ನಮಗೆ ಇದೆ.

`ಸ್ವರ್ಗವಹುದಯ್ಯ ? ಸ್ವರ್ಗವೆಲ್ಲಿಲ್ಲವಯ್ಯ ?

ಹಚ್ಚಹಸುರನೆ ನೋಡಿ, ಹರಿವ ಹೊಳೆಯನೆ ಕಂಡು,

ಮನವೊಂದಾಗೆ ಅದೆ ಸ್ವರ್ಗ, ಮಚ್ಚ

ರಿಲ್ಲದ ಮಾಂದ್ಯವಿಲ್ಲದ ಶುದ್ಧ ಸಂತೋಷವೇ 

ಸ್ವರ್ಗ, ಆ ಸಂತೋಷದೊಳು ನೀನಿಹಯಯ್ಯ

ಮಾವಿನಕೆರೆ ರಂಗಯ್ಯ 

ರಂಗಬಿನ್ನಪವನ್ನು, ರಂಗಣ್ಣನವರ ಜೀವನಧರ್ಮಶಾಸ್ತ್ರವೆಂದು ಕರೆಯಬಹುದು. ಇಲ್ಲಿ ಗೀತೆ ಕಥನ ವರ್ಣನೆ ಹೇಳಿಕೆ ಚಾಟೂಕ್ತಿ ನಾಟುನುಡಿ ಸಂಭಾಷಣೆ ಶಬ್ದ ಚಮತ್ಕಾರ ವಿಡಂಬನೆ ಪರಿಹಾಸ ಎಲ್ಲವೂ ಇವೆ. ಅನುಭವಗಳಲ್ಲಿ ಒಂದು ಮಟ್ಟ ಮೀರಿ ತೀಕ್ಷಣತೆ ಉತ್ಕಟತೆ ಒದಗಿದಾಗ, ಅಭಿವ್ಯಕ್ತಿ ಕಾವ್ಯಮಯವಾಗುತ್ತದೆ. ಉಳಿದೆಡೆ ಸರಳವೂ ವಿವೇಕಪೂರಿತವೂ ಆದ ಜೀವನ ಮಾರ್ಗಸೂಚಿಯಾಗುತ್ತದೆ. ಮಾನವನ ಕನಿಕರ ಅವಸ್ಥೆಯನ್ನು ಕವಿ ಹೀಗೆ ವರ್ಣಿಸಿದ್ದಾನೆ :

ಘನವಿಪತ್ತಿಗೆ ಬಾಯುಂಟು ನೆರೆಯುಂಟು 

ಅಲ್ಪ ಕಷ್ಟವದು ಲಜ್ಜೆಗಾತಿ ಏಕಾಕಿ ಮೂಕಿ 

ಮನೆ ಕುಸಿದು ಬಿದ್ದರೆ ಮಂದಿಯ ಕರೆಯಬಹುದು

ಮುಳ್ಳು ಮುರಿದಾಗ ರಂಪಗೈದವ ಮಡ್ಡಿಯೆನಿಸುವನು 

ಹಾವು ಕಚ್ಚಿದರೆ ಹಲವು ಪಂಡಿತರ ಹಸ್ತಗುಣ ಚಾಲಿತವಾದೀತು

ಕಟ್ಟಿರುವೆ ಕಡಿದಾಗ ಕಿರಚಲಾದೀತೆ ? 

ರಂಗಬಿನ್ನಪ ದಿಟವಾಗಿ ಒಂದು ಉತ್ತಮ ಗ್ರಂಥ. ಪ್ರತಿಯೊಂದು ಬಿನ್ನಪದಲ್ಲಿಯೂ ಅದು ವಿಸ್ತಾರವಾಗಿರುವಲ್ಲಿ ಸಹ- ಕೆಲವು ಅಪೂರ್ವ ಸತ್ಯಗಳ ಝಳಕು ಹೊಳೆಯುತ್ತದೆ. ಇದನ್ನು ಓದುವಾಗ ಡಿ. ವಿ. ಜಿ. ಯವರ 'ಕಗ್ಗದ ನೆನಪು ಪದೆ ಪದೆ ಬರುತ್ತದೆ. ಇಬ್ಬರಿಗೂ ಸ್ಫೂರ್ತಿ ನೀಡಿರುವುದು ಈ ನಾಡಿನ ನೆಲವೆ.

-ಗೊರೂರು ರಾಮಸ್ವಾಮಿ ಅಯ್ಯಂಗಾರ್‌

ರಂಗಬಿನ್ನಪ (ವಚನಗಳು) 

ಮೊದಲನೆಯ ಆವೃತ್ತಿ 1963 ಕಾವ್ಯಾಲಯ ಮೈಸೂರು, 

ಕೌನ್ ಅಷ್ಟ 645 ಪುಟಗಳು  ಬೆಲೆ ರೂ. 25-00 40-00 

ಕೃಪೆ: ಗ್ರಂಥಲೋಕ, ಜನೆವರಿ 1981

Related Books