ಭಾವ ಚಿಪ್ಪಿನೊಳಗೆ

Author : ರಂಗಸ್ವಾಮಿ ಎಸ್.

Pages 116

₹ 100.00
Year of Publication: 2019
Published by: ನಂದಿನಿ ಬುಕ್‌ ಹೌಸ್
Address: ಬೆಳ್ಳೂರು ಕ್ರಾಸ್, ಮಂಡ್ಯ

Synopsys

'ಭಾವ ಚಿಪ್ಪಿನೊಳಗೆ' ರಂಗಸ್ವಾಮಿ ಅವರ ಕವನ ಸಂಕಲನವು ಸಮಕಾಲೀನ ವಿಷಯಗಳ ಕುರಿತು ಪ್ರಶ್ನಿಸುವ, ಜನರನ್ನು ಜಾಗೃತಗೊಳಿಸುವ ಕವನಗಳ ಸಂಗ್ರಹವಾಗಿದೆ. ಕವಿತೆಗಳಲ್ಲಿ ಅಸ್ಪೃಶ್ಯತೆ, ಮೌಢ್ಯ, ಕಂದಾಚಾರ, ಸಾಮಾಜಿಕ ಅನಿಷ್ಟಗಳ ಕುರಿತು ದನಿ ಎತ್ತಿದ್ದಾರೆ. ಪ್ರೀತಿ ಪ್ರೇಮದಂತಹ ನವಿರು ಭಾವನೆಗಳನ್ನು ಚಿತ್ರಿಸುತ್ತಾರೆ. ಬದುಕಿನ ಮೌಲ್ಯ - ವಾಸ್ತವತೆಯ ಮೆರವಣಿಗೆ ಇಲ್ಲಿಯ ಬಹುತೇಕ  ಕವಿತೆಗಳಲ್ಲಿ ಕಾಣಬಹುದು.

About the Author

ರಂಗಸ್ವಾಮಿ ಎಸ್.

ಬರಹಗಾರ ರಂಗಸ್ವಾಮಿ ಎಸ್. ಅವರು ಜನಿಸಿದ್ದು ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ದಮಗಲಯ್ಯನಪಾಳ್ಯದಲ್ಲಿ. ತುಮಕೂರುನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ಡ್ರಾಮಾ ಡಿಪ್ಲೊಮಾ ಶಿಕ್ಷಣವನ್ನು ಪಡೆದರು. ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿರುವ ಇವರು ರಂಗಭೂಮಿ ಹಾಗೂ ಬೆಳ್ಳಿತೆರೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಭಗವತಿ ಕಾಡು ಹಾಗೂ ಮೌನ ಗಲ್ಲಿಗೇರಿತು ಇವರ ಪ್ರಮುಖ ಕೃತಿಗಳು. ...

READ MORE

Reviews

ಭಾವತುಮುಲಗಳ ಕಾವ್ಯರೂಪ

ಗೌರಿ ಗೋರಿ ಒಳಗೆ 

ಚರಿತ್ರೆಯು ಬರೆಯುತ್ತಾ 

ತಣ್ಣನೆ ಚಿರನಿದ್ರೆಗೆ ಜಾರಿ

ಸದ್ದು ಮಾಡುತಿದೆ”

ಒಬ್ಬ ಕವಿಯಾದವನ ಆಶಯ ಮತ್ತು ಆಂತರ್ಯದ ಒಳತುಡಿತಗಳೇನು ಎನ್ನುವುದಕ್ಕೆ ಈ ಸಾಲುಗಳೇ ಸಾಕು ಬೆಳಕು ಚೆಲ್ಲಲು. ರಂಗಸ್ವಾಮಿ ಎಸ್. ಅವರ ಭಾವ ಚಿಪ್ಪಿನೊಳಗೆ' ಕವನ ಸಂಕಲನದ ಈ ಸಾಲುಗಳು ಅವರ ಒಟ್ಟು ಆಶಯ ಮತ್ತವರ ಆಂತರ್ಯದ ತುಡಿತಗಳ ಭಾವನೆಗಳನ್ನು ವ್ಯಕ್ತಮಾಡುತ್ತವೆ. ಪ್ರಕೃತಿಂರೊಳಗಿನ ಪ್ರೀತಿ-ದ್ವೇಷ, ಅಸೂಯೆ, ಪ್ರೇಮದ ಅಮಲಿನ ಗೋವುಗಳ ಸಂಗತಿಗಳನ್ನು ಅತ್ಯಂತ ಸೂಕ್ಷ್ಮವಾಗಿ ಗುರುತಿಸಿ, ಅಕ್ಷರಕ್ಕಿಳಿಸಿರುವ ಅವರು ಒಂದು ಸಂಸ್ಕೃತಿಯ ಸಿರಿಯ ಒಡಲಿನ ನೋವುಗಳನ್ನು ಬಂಡಾಯದ ರೂಪದಲ್ಲಿ ತೆರೆದಿಟ್ಟಿದ್ದಾರೆ. ರಂಗಸ್ವಾಮಿ ಅವರೆ ಮೂಲತಃ ರಂಗಭೂಮಿಯ ಹಿನ್ನೆಲೆಯುಳ್ಳವರಾಗಿರುವುದರಿಂದ ಸಾಹಿತ್ಯವನ್ನು ಕೂಡ ಅಷ್ಟೆ ಸಮಚಿತ್ತವಾಗಿ ಅಧ್ಯಯನ ಮಾಡಿದ್ದಾರೆ ಎನ್ನುವುದು ಅವರ ಕವನ ಸಂಕಲನದ ಕವಿತೆಗಳನ್ನು ಓದಿದಾಗ ಮನನವಾಗುತ್ತದೆ. ಕವಿತೆಗಳ ಸಾಲುಗಳ ರೂಪಕಗಳೇ ಅದನ್ನು ಧ್ವನಿಸುತ್ತವೆ. 

ಬದುಕಿನ ಈ ಬವಣೆಯನ್ನು ಪ್ರಕೃತಿಯ ಜೊತೆ ಜೊತೆಗೆ ಪ್ರೀತಿಯ ನೋವು, ಬದುಕಲ್ಲಾಗುವ ಬದಲಾವಣೆ, ನೋವಿನ ಸಂಕಟಗಳು ಹಾಗೂ ಜೀವದ ಅಮಲಿನ ಅಪ್ರಮೇಯವನ್ನು ಒಂದು ಚಿತ್ರಣವಾಗಿ ಪಡಿ ಮೂಡಿಸಿದ್ದಾರೆ. ತಮ್ಮಲ್ಲಿರುವ ಕವಿತಾ ಶಕ್ತಿಯನ್ನು ಸಮರ್ಥವಾಗಿ ಹೊರ ಹೊಮ್ಮಿಸಿದ್ದಾರೆ.

ಅವರ ಭಾವಲೋಕದ ಅನುಭವವನ್ನು ಒಂದು ರೀತಿ ಅನುಭಾವವಾಗಿ ಕಾವ್ಯದೊಳಗೆ ಅನಾವರಣಗೊಳಿಸಿದ್ದಾರೆ. ಆಂತರ್ಯದ ಒಳತುಡಿತಗಳ ಅವಾಂತರಗಳನ್ನು ಪ್ರೇಮದ ಜೊತೆ ನಿಲ್ಲಿಸಿ ಬದುಕನ್ನು ಮತ್ತು ಜೀವದ ಜೀವ ನಾಡಿಯ ಪರಿಭ್ರಮಣವನ್ನು ರೂಪಿಸಲು ರಂಗಸ್ವಾಮಿ ಹೊರಟಿದ್ದಾರೆ. - 'ಕಳೇಬರ' ಕವನದ ಸಾಲಿನ ಆ ಸೂಕ್ತ ಅರ್ಥ ನಿಜಕ್ಕೂ ಒಂದು ವೃತ್ತಾಂತದ ಆಗು-ಹೋಗುಗಳ ಬದುಕಿನ ಕಾಲಾಂತರಂಗದ ಅರ್ಥವನ್ನು ಎಷ್ಟೊಂದು ಸಲೀಸಾಗಿ ಹೇಳುತ್ತದೆ. ಹಾಗೆಯೇ 'ಭಾವ ಚಿಪ್ಪಿನೊಳಗೆ' ಕವನದಲ್ಲೂ 'ನನ್ನ ಏಕಾಂತದ ರಾತ್ರಿಗಳಲ್ಲಿ ಸುಶ್ರಾವ್ಯರಾಗ ಹಾಡು' ಎಂಬುದು ಕೂಡ ತನ್ನ ಪ್ರೇಮದ ಅಮಲಿನ ಅಸಂತುಷ್ಟತೆಯನ್ನು  ಹೇಳುತ್ತಾ ಹೋಗುತ್ತಾರೆ. 'ನೆನಪು' ಕವನದಲ್ಲಿ ಹಿಟ್ಲರನ ಹೆಣ್ಣು ರೂಪವೇ? ನನ್ನಂಥ ನನ್ನ ಮೇಲೆ ಸರ್ವಾಧಿಕಾರ ಸ್ಥಾಪಿಸಿರುವೆ” ಎನ್ನುವ ಮೂಲಕ ಹೆಣ್ಣು ಗಂಡಿನ ಮೇಲಿನ ಸರ್ವಾಧಿಕಾರದ ಧೋರಣೆಗಳು ಒಂದರ್ಥದಲ್ಲಿ ಜೀವನರಾಗಕ್ಕೆ ಕಾರಣ ಎಂದು ಹೇಳುತ್ತಾರೆ. ಈ ಧೋರಣೆ ಎಂದೂ ಆಕ್ರೋಶಕ್ಕೆ ಕಾರಣವಾಗುವುದಿಲ್ಲ ಬದಲಿಗೆ ಆಕೆ ಮತ್ತೆ ಮತ್ತೆ ನೆನಪಾಗುತ್ತಾಳೆ ಎನ್ನುವ ಆವರ ಆ ನುಡಿಗಳ ಭಾವಾರ್ಥ ಒಂದು ಹೆಣ್ಣಿನ ಗಾಂಭೀರ್ಯತೆ ಮತ್ತು ಆಕೆಯ ಜವಬ್ದಾರಿಯನ್ನು ಅತ್ಯಂತ ಸರಳವಾಗಿ ವಿವರಿಸುವಲ್ಲಿ ಸಫಲವಾಗಿದೆ. ಇನ್ನೂ ಅವರ ಒಟ್ಟು ಕವನವನ್ನು ರೂಪಿಸುವಂತಿರುವ “ಮನದಾಳದ ನೋವಿನ ಸಾಲುಗಳನ್ನು, ಪ್ರೇಮ, ಕಾಮ, ಭಗ್ನ ಕನಸುಗಳ ವಿಷಾದದ ವಿಷಯ ಗೀತೆಗಳನ್ನೇನು' ಎಂಬ ಈ ಸಾಲುಗಳು ಭಾವಾನುಭವದ ನೋವಿನ ಸಂಗತಿಗಳನ್ನು ವಿಷಣ್ಣವಾಗಿ ಬಡಿಸಿಟ್ಟಿದ್ದಾರೆ. ಒಂದು ತುಂತುರು ಮಳೆಯ ಸಂಜೆ" ಎಂಬ ಕವನದ ಸಾಲುಗಳಲ್ಲಿ ಮೌಡ್ಯದ ಜಾಡು ಹಿಡಿದ ಮತ್ತು ಗೊಡ್ಡು ನಂಬಿಕೆಗಳನ್ನು ನಂಬಿ ಹೆಣಗಾಡುವ ಆತುರುವನ್ನು ಸುಡುಗಾಡು ನಡೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸುವ ಅವರು 'ಕಸೂತಿ ಕಲೆಯಲ್ಲಿನ ಬದುಕನ್ನು ಸಮಚಿತ್ತವಾಗಿ ಸಮರ್ಪಿಸುವ ಆವರ ಅರ್ಪಣಾ ಭಾವಗಳು..ನಾಯಿ ಮತ್ತು ಮುಗಿಲು' ರೂಪಕ ಆವರ ಆಶಯಗಳ ಅನಿವಾರ್ಯತೆಗಳನ್ನು ಹೇಳುವ ಪರಿಪಾಠವನ್ನು ತೋರ್ಪಡಿಸುತ್ತದೆ. 

ಪ್ರತಿ ಕವನಗಳೂ ಬದುಕಿನಲ್ಲಿ ಸಾಗುವ ದೋಣಿಯಲ್ಲಿ ಜೀವವನ್ನು ಹಿಡಿದಿಟ್ಟುಕೊಂಡು ಬಿಮ್ಮನೆ ಕೂತು ಆತಂಕದಲ್ಲಿ ದಡ ಸೇರುವ ಗುರಿಯನ್ನು ತಲುಪುವ ಆ ಕ್ಷಣದ ಅವಾಂತರಗಳನ್ನು ತಮ್ಮ ಒಳನುಡಿಯ ಒಡಲಿನ ರದ್ರಾವೇಶವನ್ನು ತೋರಿಸುತ್ತವೆ. ಬದುಕಿನ ಕವಲುಹಾದಿಗಳನ್ನು ಹೇಗೆ ಬಿಡಿಸಿ ಹೋಗಬೇಕು ಎನ್ನುವ ಜಾತೀತ ಭಾವಗಳಿಗೆ ನೀಡುವ ಬಂಡಾಯದ ಆಕ್ರೋಶ. ಜೀವನಾನುಭವದ ಒಟ್ಟು ಕಂಡಿಕೆಗಳ ಅನುರೂಪವೆ ಭಾವ ಚಿಪ್ಪಿನೊಳಗೆ" ಕವನ ಸಂಕಲನದಲ್ಲಿ ರೂಪಿತವಾಗಿವೆ. ಅವೇ ಕವಿಯ ಮೂಲ ಆಶಯವಾಗಿದೆ. 

ಒಂದು ಸಮಾಜದ ಸ್ಥಿತಿಯ ನೆಲಗಟ್ಟನ್ನು ಕವಿಯಾದವನು ನೋಡುವ ಆ ಭಾವ ಆತನೊಳಗಿನ ಎಲ್ಲಾ ರೀತಿಯ ಸಂಗತಿಗಳನ್ನು ಅನುರಣಿಸುವ ಪರಿಪಾಟವೇ ಆಗಿರುತ್ತದೆ. ಈ ಎಲ್ಲಾ ಸೌಂದರ್ಯಾನುಭವದ ಅಸಂಗತಿಗಳು ಇಲ್ಲಿ ಒಡಮೂಡಿವೆ ಎನ್ನಬಹುದು. ಒಟ್ಟಾರೆ ಇಲ್ಲಿಯ ಬಹುತೇಕ ಕವನಗಳು ಕವಿಯ ಗಟ್ಟಿತನ, ಭಾಷಾ ಬಳಕೆಯ ಸಮರ್ಥತೆಯನ್ನು ಧ್ವನಿಸುತ್ತವೆ.


- ತುರುವನೂರು ಮಂಜುನಾಥ್

ಕೃಪೆ : ಸಂಯುಕ್ತ ಕರ್ನಾಟಕ (2020 ಫೆಬ್ರುವರಿ 16)

Related Books