ನೀರ ಸುಟ್ಟ ಸೂರ್ಯ

Author : ದೇವು ಮಾಕೊಂಡ

Pages 88

₹ 100.00
Year of Publication: 2023
Published by: ನೆಲೆ ಪ್ರಕಾಶನ ಸಂಸ್ಥೆ
Address: ಗುರು ಬಸವ, ವಿದ್ಯಾ ನಗರ, ಸಿಂದಗಿ, ವಿಜಯಪುರ - 586128
Phone: 9481082518

Synopsys

‘ನೀರ ಸುಟ್ಟ ಸೂರ್ಯ’ ದೇವೂ ಮಾಕೊಂಡ ಕವಿತೆಗಳು. ಈ ಕೃತಿಗೆ ಡಾ.ಆರ್. ತಾರಿಣಿ ಶುಭದಾಯಿನಿ ಅವರು ಮುನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ದೇವು ಮಾಕೊಂಡ ಅವರ ಕವಿತೆಗಳು ತಮ್ಮಷ್ಟಕ್ಕೆ ತಾವು ಬಿಚ್ಚಿಕೊಳ್ಳುತ್ತಾ ಹೋಗುವ ಗುಣವುಳ್ಳವು. ಕವಿತೆಗಳೆಂದರೆ ಗಟ್ಟಿದನಿಯಲ್ಲಿ ಮಾತನಾಡಬೇಕಾದುದಿಲ್ಲ. ಅವುಗಳಿಗೆ ಒಂದು ಒಳದನಿ ಇರುತ್ತದೆ. ಅವು ಒಳಗಿವಿಗಳಿಗೆ ಕೇಳಿದರೆ ಸಾಕು ಎನ್ನುವಂತೆ ದೇವು ಪದ್ಯ ಬರೆಯುತ್ತಾರೆ. ಹಾಗಂತ ಇವು ಸ್ವಗತ ಪದ್ಯಗಳಲ್ಲ. ಇವುಗಳಲ್ಲಿ ಇರುವ ಸೃಜನಶೀಲ ಪಸೆ ಕವಿತೆಗಳಿಗೆ ಮೃದುಲವಾದ ಸ್ಪರ್ಶ ನೀಡುತ್ತವೆ ಎಂದಿದ್ದಾರೆ.

ಜೊತೆಗೆ ದೇವು ಅವರ ಕವಿತೆಗಳ ಕಟ್ಟನ್ನು ಬಿಚ್ಚಿದರೆ ಅಲ್ಲಿ ಎರಡು ಬಗೆಯ ನಿವೇದನೆಗಳಿರುವುದನ್ನು ಕಾಣಬಹುದು: ಒಂದು, ಪ್ರೇಮ ತುಡಿತವನ್ನೇ ಪ್ರಧಾನವಾಗುಳ್ಳ ಕವಿತೆಗಳು; ಮತ್ತೊಂದು ರಾಜಕೀಯ ಶುದ್ಧತೆಗಾಗಿ ಹಂಬಲಿಸುವ ಕವಿತೆಗಳು. ಈ ಕವಿತಾ ಸಂಕಲನದಲ್ಲಿ ಪ್ರಮುಖವಾಗಿ ಕಾಣುವುದು ರಾಜಕೀಯ ಕವಿತೆಗಳೇ. ಅವರ ಕವಿತೆಗಳು ಆಳದಲ್ಲಿ ಪೊಲಿಟಿಕಲ್ ಆಗಿವೆ. ರಾಜಕೀಯ ಎಂದಾಕ್ಷಣ ಸಮಕಾಲೀನವಾಗಿ ಪ್ರಚಲಿತವಿರುವ ಪೊಲಿಟಿಕಲ್ ಕರೆಕ್ಟ್ ನೆಸ್ ತಂತ್ರ ನೆನಪಿಗೆ ಬರುತ್ತದೆ. ಅದರಲ್ಲಿಯೂ ಈಗ ಐಡೆಂಟಿಟಿ ಪಾಲಿಟಿಕ್ಸ್ ಮುನ್ನೆಲೆಯಲ್ಲಿರುವಾಗ ರಾಜಕೀಯವಾಗಿ ಕರೆಕ್ಟ್ ನೆಸ್ ಅನ್ನು ಘೋಷಿಸಿಕೊಳ್ಳುವುದು ಅನಿವಾರ್ಯ ಎನ್ನಿಸಿಬಿಟ್ಟಿದೆ. ದೇವು ಅವರು ಈ ಹಾದಿ ಹಿಡಿಯುವುದಿಲ್ಲ.

ಅವರಿಗೆ ರಾಜಕೀಯ ಎನ್ನುವುದು ನಮ್ಮ ಬದುಕಿಗೆ ಸಂಬಂಧಿಸಿದ ಆಂತರಂಗಿಕವಾದ ಮೌಲ್ಯ ಎನ್ನುವುದರ ಕಡೆಗೆ ಆಸಕ್ತಿ ಇದೆ. ರಾಜಕಾರಣ ಎನ್ನುವುದು ಗಾಂಧಿ ಹೇಳುವಂತೆ ಒಳಗೂ ಹೊರಗೂ ಇರುವಂತದ್ದು; ಒಳಗಿನ ಯುದ್ಧವನ್ನು ಗೆಲ್ಲದ ಹೊರತು ಹೊರಗಿನ ಯುದ್ಧ ಗೆಲ್ಲಲು ಸಾಧ್ಯವಿಲ್ಲ ಎನ್ನುವ ನಂಬಿಕೆ. ಇದು ದೇವು ಅವರಲ್ಲೂ ಕಾಣುತ್ತದೆ. ಹಾಗಾಗಿ ಅವರ ಕವಿತೆಗಳು ರಾಜಕೀಯವನ್ನು ಕುರಿತು ಧ್ಯಾನಿಸುತ್ತವೆ. ಹೀಗೆ ಶುದ್ಧತೆಗಾಗಿ ಹಂಬಲಿಸುವ ಕವಿಗಳು ಸಾಮಾನ್ಯವಾಗಿ ವ್ಯಂಗ್ಯ ಅಥವಾ ತುಸು ಜಾಡಿಸುವ ಧಾಟಿಯನ್ನು ಮೈಗೂಡಿಸಿಕೊಂಡು ಬರೆಯುತ್ತಿರುತ್ತಾರೆ ಎಂದಿದ್ದಾರೆ.

About the Author

ದೇವು ಮಾಕೊಂಡ

ಯುವ ಬರಹಗಾರ ದೇವು ಮಾಕೊಂಡ ಅವರು ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದವರು. ಸಿಂದಗಿಯಲ್ಲಿ ಪ್ರೌಢಶಾಲಾ ಶಿಕ್ಷಕರಾಗಿದ್ದಾರೆ. ‘ಬಿಕರಿಗಿಟ್ಟ ಕನಸು, ಹೆಗ್ಗೇರಿಸಿದ್ದ ಚರಿತೆ’ ಅವರ ಪ್ರಕಟಿತ ಕವನ ಸಂಕಲನಗಳು. ಹಲವಾರು ಲೇಖನಗಳು ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟವಾಗಿವೆ. ಗುರುರತ್ನ, ವಿದ್ಯಾಸಿರಿ ವಿಷಾರದ, ಕನ್ನಡ ಪುಸ್ತಕ ಪ್ರಾಧಿಕಾರದಿಂದ ಹಸ್ತಪ್ರತಿ ಬಹುಮಾನ, ಆಕಾಶವಾಣಿ ಭದ್ರಾವತಿಯಿಂದ ಪ್ರತಿಭಾ ಪ್ರಶಂಸಾ ಪ್ರಶಸ್ತಿಗಳು ಲಭಿಸಿವೆ. ಅಲ್ಲದೇ ವಿಜಯಪುರ ಜಿಲ್ಲಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮೀರವಾಡಿ ದತ್ತಿ ಪ್ರಶಸ್ತಿಯೂ ದೊರೆತಿದೆ.  ...

READ MORE

Related Books