ಅರಳು ಮರಳು

Author : ದ.ರಾ. ಬೇಂದ್ರೆ (ಅಂಬಿಕಾತನಯದತ್ತ)

Pages 400

₹ 350.00




Year of Publication: 2014
Published by: ಶ್ರೀಮಾತಾ ಪ್ರಕಾಶನ
Address: ವಿಶ್ವಶ್ರಮ ಚೇತನ, ಹುಬ್ಬಳ್ಳಿ-580 003

Synopsys

ಬೇಂದ್ರೆಯವರ ಸೂರ್ಯಪಾನ, ಹೃದಯ ಸಮುದ್ರ, ಮುಕ್ತಕಂಠ, ಚೈತ್ಯಾಲಯ, ಜೀವಲಹರಿ, ಪಂಚಕಾವ್ಯ ಗುಚ್ಚವೇ ಅರಳು-ಮರಳು.

ಬೇಂದ್ರೆಯವರ ಗೆಳೆಯರ ಗುಂಪಿನ ಮಿತ್ರ ವಿ.ಕೃ. ಗೋಕಾರು ಸಂಕಲನಕ್ಕೆ ಮುನ್ನುಡಿ ಬರೆದಿದ್ದಾರೆ. 1956 ಮತ್ತು 1957ರ ಎರಡು ವರ್ಷಗಳಲ್ಲಿ ಪ್ರಕಟವಾದ 5 ಸಂಕಲನಗಳನ್ನು ಅರಳು-ಮರಳು ಒಳಗೊಂಡಿದೆ. 1957ರಲ್ಲಿ ಮೊದಲ ಬಾರಿಗೆ ಪ್ರಕಟಗೊಂಡ ಅರಳು-ಮರಳು ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡಮಿಯ ಪುರಸ್ಕಾರ ದೊರೆತಿದೆ.

ಈ ಸಂಕಲನವನ್ನು ಶ್ರೀ ಮಾತೆಗೆ, ಧಾರವಾಡದ ತಾಯಿಗೆ, ಕವಿ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಅರ್ಪಿಸಿದ್ದಾರೆ. ಅಂಬಿಕಾತನಯದತ್ತರ ಕಾವ್ಯ ತನ್ನದೇ ಆದ ಒಂದು ಪರಂಪರೆಯನ್ನು ಕನ್ನಡದಲ್ಲಿ ನಿರ್ಮಿಸಿಕೊಂಡಿದೆ ಎನ್ನುವ ಗೋಕಾಕರು ಕವಿ ತಾನು ರಚಿಸಿದ ದಾರಿಯಲ್ಲಿಯೇ ಮುಂದುವರೆಯುವುದಿಲ್ಲ. ಪ್ರತಿಭಾವಂತ ಕವಿ ಯಾವಾಗಲೂ ಪ್ರಯೋಗಪ್ರಿಯ, ಪ್ರಗತಿಪರ ಮೊದಲು ಕಾಣದ ಸೊಬಗಿನ ಸಾಹಸಕ್ಕೆ ಅವನು ಮತ್ತೆ ಕೈ ಹಾಕುತ್ತಾನೆ. ಅನೇಕ ನವೀನ ಕಾವ್ಯ ಮುಖಗಳಲ್ಲಿ ಈ ಪ್ರಗತಿ ಕಾಣಿಸಿಕೊಳ್ಳುತ್ತದೆ. ಬೇಂದ್ರೆಯವರ ಅರಳು-ಮರಳಿನಲ್ಲಿ ಮರಳುವಿಕೆಯನ್ನು ಮೀರಿ ನಿಂತ ಅರಳುಗಳ ಚೆಂದವನ್ನು ನಾವೀಗ ನೋಡಬೇಕಾಗಿದೆ ಎನ್ನುತ್ತಾರೆ.

ಈ ಸಂಕಲನದಲ್ಲಿ ಒಟ್ಟು 273 ಕವಿತೆಗಳಿವೆ. ಮಧುರ ಚೆನ್ನರನ್ನು ಕುರಿತು ಬರೆದ ಚೆನ್ನಲಿಂಗವೇ, ಕರಡಿ ಕುಣಿತ, ನೃತ್ಯ, ಯಜ್ಙ, ಟೊಂಕದ ಮೇಲೆ ಕೈ ಇಟ್ಟುಕೊಂಡು, ರವೀಂದ್ರ ದರ್ಶನ, ಜತೆಯಾದಳು ಹುಡುಗಿ, ತರಹದ ಕವಿತೆಗಳು ಈ ಸಂಕಲನದಲ್ಲಿವೆ. ಬೇಂದ್ರೆಯವರ ಕಾವ್ಯ ಸಿದ್ದಿಯ ಒಂದು ಮೈಲಿಗಲ್ಲು ಅರಳು-ಮರಳು.

About the Author

ದ.ರಾ. ಬೇಂದ್ರೆ (ಅಂಬಿಕಾತನಯದತ್ತ)
(31 January 1896 - 26 October 1981)

ಕನ್ನಡ ಕಾವ್ಯದ ಸೊಬಗು-ಸೊಗಸು ಹೆಚ್ಚಿಸಿದ ‘ಅಂಬಿಕಾತನಯದತ್ತ’ ಕಾವ್ಯನಾಮದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರನ್ನು ‘ವರಕವಿ’, ‘ಗಾರುಡಿಗ’ ಎಂದು ಗುರುತಿಸಲಾಗುತ್ತದೆ. ತಂದೆ ರಾಮಚಂದ್ರ ತಾಯಿ ಅಂಬವ್ವ. ಧಾರವಾಡದಲ್ಲಿ 1896ರ ಜನವರಿ 31ರಂದು ಜನಿಸಿದರು. ಧಾರವಾಡದಲ್ಲಿ ಮೆಟ್ರಿಕ್ (1913) ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. (1918) ಪದವಿ ಪಡೆದರು. ಕೆಲವು ಕಾಲ ಅಧ್ಯಾಪಕ ವೃತ್ತಿ ಮಾಡಿದ ಮೇಲೆ ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. (1935) ಪದವಿ ಪೂರ್ಣಗೊಳಿಸಿದರು. ಗದುಗಿನ ವಿದ್ಯಾದಾನ ಸಮಿತಿ ಪ್ರೌಢಶಾಲೆಯಲ್ಲಿ ಹೆಡ್ ಮಾಸ್ಟರ್ ಆಗಿ ವೃತ್ತಿ ಆರಂಭಿಸಿದ ಅವರು ನಂತರ ಹುಬ್ಬಳ್ಳಿಯ ನ್ಯೂ ...

READ MORE

Awards & Recognitions

Reviews

ಅರಳು-ಮರಳು

ನವೋದಯ ಕಾಲದ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ಅಂಬಿಕಾತನಯದತ್ತರ 'ಹೃದಯಸಮುದ್ರ', 'ಮುಕ್ತಕಂಠ', `ಚೈತ್ಯಾಲಯ', 'ಜೀವಲಹರಿ', 'ಸೂರಪಾನ' ಎಂಬ ಪಂಚ ಕವನ ಗುಚ್ಛಗಳ ಸಂಕಲನ 'ಅರಳು-ಮರಳು'.' ಇದರಲ್ಲಿ ಒಟ್ಟು ೨೭೬ ಕವನಗಳಿವೆ. ಇವುಗಳ ವಸ್ತು, ಲಯಗಳಲ್ಲಿ ವೈವಿಧ್ಯ ವಿರುವಂತೆ ಗುಣದಲ್ಲಿ ತರತಮಗಳಿವೆ. ಇಲ್ಲಿ ಅನುವಾದ ಗೀತಗಳಿವೆ, ಅನು ಭಾವಗೀತಗಳಿವೆ, ಚರಮಗೀತಗಳಿವೆ, ವ್ಯಕ್ತಿ ಸ್ತವನಗಳಿವೆ, ವಿಡಂಬನ ಪದಗಳಿವೆ; ಈ ಗುಂಪುಗಳಿಗೆ ಸೇರದ ರಚನೆಗಳೂ ಇವೆ. ಅಧ್ಯಾತ್ಮ, ಅನುಭಾವಗಳಿಗೇ ಇಲ್ಲಿನ ಕವನ ಸಮುದಾಯದಲ್ಲಿ ಅಗ್ರತೆ. (ನವ್ಯತೆಯನ್ನೂ ಅರಗಿಸಿ ಕೊಳ್ಳುವ ವಿಫಲ ಪ್ರಯತ್ನವನ್ನು ಕವಿ ಮಾಡಿದ್ದಾರೆ). 

ದ. ರಾ. ಬೇಂದ್ರೆಯವರದು ವಿಶಿಷ್ಟವಾದ ಪ್ರತಿಭೆ ; ಅದು ಜಾನಪದ ಸತ್ವವನ್ನು ಮಡುಗಟ್ಟಿಸಬಲ್ಲದು, ಹರಳು ಮಾಡಬಲ್ಲುದು. ಹೀಗಾಗಿ, ಬೇಂದ್ರೆಯವರಂತ ಜನಜೀವನಕ್ಕೆ ಹತ್ತಿರವಾದ ಕಾವ್ಯ ಬರೆದ ಕವಿಗಳು ನಮ್ಮಲ್ಲಿ ವಿರಳ. ಅವರ ಲೆಕ್ಕಣಿಗೊಂದು ಐಂದ್ರಜಾಲಿಕ ಶಕ್ತಿಯಿದೆ. ಅದು ಮಾತನ್ನು ಮಂತ್ರದ ಸ್ತರಕ್ಕೆತ್ತಬಲ್ಲುದು; ರಸಿಕರ ಕಿವಿ, ಹೃದಯ ಎರಡನ್ನೂ ಏಕಕಾಲದಲ್ಲಿ ತನ್ನ ಹಿಡಿತಕ್ಕೆ ತೆಗೆದುಕೊಳ್ಳಬಲ್ಲುದು. ಈ ದೃಷ್ಟಿಯಿಂದ ನೋಡಿದಾಗ, ಬೇಂದ್ರೆಯವರು ತಮ್ಮ ಹಿಂದಿನ ಅನೇಕ ಸಂಕಲನಗಳಲ್ಲಿ ಕೊಟ್ಟಿರುವ ಅತ್ಯುತ್ತಮ ಕವನಗಳನ್ನು ನೆನಪಿಗೆ ತರುವ, ಅದೇ ಸಾಲಿನಲ್ಲಿ ನಿಲ್ಲುವ ಕೆಲವು ಕವಿತೆಗಳು 'ಅರಳು-ಮರಳು' ಸಂಚಯದಲ್ಲಿ ಉಂಟು. ಬೆರಗು ಹುಟ್ಟಿಸುವ ಸಾಮಾಜಿಕ ಪ್ರಜ್ಞೆ, ನಾದದ ಬಿನ್ನಾಣ, ದೇಸಿಯ ಗತ್ತುಗಂಧಗಳು, ದಳದಳವಾಗಿ ಬಿಚ್ಚಿಕೊಳ್ಳುವ ಅರ್ಥದ ಹಲವು ಪದರಗಳು ಇವಗಳಲ್ಲಿ ಗೋಚರಿಸುತ್ತವೆ; ಯಾರ ಮನಸ್ಸನ್ನೂ ಇವು ಒಗ್ಗಿಸಬಲ್ಲವು. ಈ ಸತ್ಯದ ಅರಿವಿಗೆ, ಬೆಳಗಿನ ಈ ಚಿತ್ರವೊಂದನ್ನು ನೋಡಿದರೆ ಸಾಕು:

ಏಳು ಚಿನ್ನ, ಬೆಳಗಾಯ್ತು ಅಣ್ಣ, ಮೂಡಲವು ತೆರೆಯ ಕಣ್ಣ, 

ನಕ್ಷತ್ರ ಜಾರಿ, ತಮವಲ್ಲ ಸೋರಿ, ಮಿಗಿಲಹುದು ಬಾನ ಬಣ್ಣ.

ಜೇನ್ನೊಣದ ಹೆದೆಗೆ ಹೂಬಾಣ ಹೂಡಿ ಝಂ ಎಂದು ಬಿಟ್ಟ ಮಾರ,

ಗುಡಿಗೋಪುರಕ್ಕು ಬಲೆಬೀಸಿ ಬಂದ ಆಗೊ ಬೆಳಕು-ಬೇಟೆಗಾರ.

 

’ಟೊಂಕದ ಮ್ಯಾಗ ಕೈ ಇಟುಕೊ೦ಡು' ಕವನದ ಚಿತ್ರಕಥೆ ಜೀವಂತಿಕೆ, ನಾಟಕೀಯತೆಗಳಾಗಲಿ, ’ಬೀದಿ ನಾಯಿ ರಾಧೆ'ಯ ಅನುಕಂಪಪೂರಿತ ವ್ಯಂಗ್ಯವಾಗಲಿ, ಭಾವಗೀತೆಯ ಮಿತಿಯಲ್ಲೆ ಒಂದು ಜೀವನ ಚರಿತ್ರೆಯನ್ನು ಅಡಗಿಸುವ ’ಕತೆಯಾದಳು ಹುಡುಗಿ'ಯ ಸ್ವಾರಸ್ಯವಾಗಲಿ ನಿಸ್ಸಂದೇಹವಾಗಿ ಪ್ರಥಮದರ್ಜೆಯವು.

ಸ್ವಲ್ಪ ತಕರಾರಿಗೆ ಕಾರಣವಾಗತಕ್ಕವು ಬೇಂದ್ರೆಯವರ ಆಧ್ಯಾತ್ಮಿಕ ಪದ್ಯಗಳು. ಇವುಗಳಲ್ಲಿ ಕೆಲವು ಸುಷ್ಠುವಾಗಿದ್ದು ಸಹೃದಯ ಗಮ್ಯವಾಗಿದ್ದರೆ, ಇನ್ನು ಹಲವು ಅಮೂರ್ತವಾಗಿದ್ದು ಕವಿಯ ಮೂಲಾನುಭವದ ಬಗೆಗೇ ಸಂದೇಹ ಮೂಡಿಸುತ್ತವೆ. 'ಹೃದಯ ಸಮುದ್ರ'ದ ಈ ಪಂಕ್ತಿಗಳನ್ನು ನೋಡಿ :

ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರಾ,

ಮಿಂಚು ಬಳಗ ತೆರೆತೆರೆಗಳಾಗಿ ಅಲೆಯುವುದು ಪುಟ್ಟಪೂರಾ. 

ಅದು ನಮ್ಮ ಊರು, ಇದು ನಿಮ್ಮ ಊರು, ತಂತಮ್ಮ ಊರೊ ಧೀರಾ

ಅದರೊಳಗೆ ನಾವು, ನಮ್ಮೊಳಗೆ ತಾವು, ಅದು ಇಲ್ಲವಣ್ಣ ದೂರಾ.

ಯಾರಿಗೆ ತಾನೆ ಗ್ರಾಹ್ಯವಾಗುವುದಿಲ್ಲ, ಮೆಚ್ಚಾಗುವುದಿಲ್ಲ ? ಇಂಥ ಕವಿತೆಗಳಿಗೆ ಒಪ್ಪುತ್ತದೆ, ವಿ. ಕೃ. ಗೋಕಾಕರು ಮುನ್ನುಡಿಯಲ್ಲಿ ಆಡಿರುವ ಈ ಉಕ್ತಿ: “ಇಲ್ಲಿ ಮುಖ್ಯವಾದುದು ಕವಿಯು ಆರ್ಷದೃಷ್ಟಿ.....ಬೇಂದ್ರೆಯವರು, ಸಾಧಕರು ನಿಜ. ಆದರೆ ಅವರಲ್ಲಿ ಅಂಬಿಕಾತನಯದತ್ತನೆಂಬ ವರಕವಿ ಗೂಡುಗಟ್ಟಿದ್ದಾನೆ. ಆದರೆ, ಮೌನಾs, ಮೌನಾss, ಮೌನಾsss ಮೌನ-ವಿಮಾನಾರೂಢಾ

ಅಮೃತಾತ್ಮಾ, ತರ ! ಉತ್ತರ : ಭೋs.. ಊರ್ಧ್ವೋರ್ಧ್ವೋ, ಭೋ

ಇತ್ಯಾದಿಯಾಗಿ ಬೇಂದ್ರೆ, ಉಗ್ಗಡಿಸತೊಡಗಿದಾಗ, ಇದು ಬರಿಯ ನುಡಿಕಸರತ್ತು ಎನಿಸಿಬಿಡುತ್ತದೆ. ಕಡೆಯಪಕ್ಷ, ಓದುಗನಿಗೆ ಕವಿಯ ಅನುಭೂತಿ ಸಂವಹನಗೊಳ್ಳುವುದಿಲ್ಲ. 

ಈ ಶಬ್ದ ಚಮತ್ಕಾರವಂತೂ ಬೇಂದ್ರೆಯವರ ಜಾಯಮಾನದಲ್ಲಿ ಹಾಸು ಹೊಕ್ಕಾಗಿದೆ. ಉದಾಹರಣೆಗೆ :

ನನ್ನ ಯಕ್ಷಿ (x)ಗೆ 

ನನ್ನ ಸಾಕ್ಷಿ (psyche)ಗೆ

ಶ್ಲೇಷೆಯೂ ಒಮ್ಮೊಮ್ಮೆ ಅರ್ಥಪೂರ್ಣವಾಗುವುದುಂಟು; ನಿದರ್ಶನಕ್ಕೆ

ಅಶೋಕವೃಕ್ಷದ ನೆರಳಿನಲಿ, 

ಸಶೋಕ ಸೀತೆಯ ಕಂಡಿದ್ದೆ.

ಅಶೋಕಚಕ್ರದ ಧ್ವಜದಡಿಗೆ

ಸಶೋಕ ಜನತೆಯ ಕಾಣುತಿಹೆ. 

ಆದರೂ ಇಂಥ ಬೆಡಗು, ಚಮತ್ಕೃತಿ, ವಾಚಾಲತೆಗಳನ್ನು ಕಳೆದು ನೋಡಿದಾಗಲೇ ಬೇಂದ್ರೆಯವರ ಕಾವ್ಯದ ಗಟ್ಟಿತನ ಗೊತ್ತಾಗತಕ್ಕದ್ದು.

ಒಟ್ಟಾರೆ, 'ಅರಳು-ಮರಳು' ಗೊಂಚಲಿನ ಕವಿತೆಗಳಲ್ಲಿ ಸಕ್ಕರೆ ಮರಳುಗಳ ಮಿಶ್ರಣವಿದೆ; ಸೋಸುವ ಕೆಲಸ ಸಹೃದಯರದು, ಇಲ್ಲಿ ಅರಳುಗಳಿವೆ, ಕಾವ್ಯಕ್ಕೆ ಮೂಲಭೂತವಾಗಿ ಬೇಕಾದ ಮರುಳು ಸಾಕಷ್ಟಿದೆ ಎನ್ನುವುದು ಮುಖ್ಯವಾದ ಮಾತು.

ಡಾ. ಸಿ. ಪಿ. ಕೃಷ್ಣಕುಮಾರ್


 

ಅರಳು-ಮರಳು (ಪಂಚಕಾವ್ಯ ಗುಚ್ಚ) 

 ಮೊದಲ ನೆಯ ಆವೃತ್ತಿ 1957 

ಸಮಾಜ ಪುಸ್ತಕಾಲಯ ಶಿವಾಜಿ ಬೀದಿ ಧಾರವಾಡ

ಕ್ರೌನ್ ಅಷ್ಟ 550 ಪುಟಗಳು  ಬೆಲೆ 10-00 12-00 

 

ಕೃಪೆ: ಗ್ರಂಥಲೋಕ ಜೂನ್‌ 1981






 

Related Books