’ನಿನ್ನ ದಾಖಲೆ ಯಾವಾಗ ನೀಡುತ್ತಿ?’ ಕಲಾ ಪ್ರತಿರೋಧದ ಕನ್ನಡದ ಕವಿತೆಗಳ ಸಂಕಲನ. ರಾಷ್ಟ್ರೀಯ ನಾಗರಿಕ ನೋಂದಣಿ ಪ್ರಕ್ರಿಯೆಯನ್ನು ವಿರೋಧಿಸುವ ಕವಿತೆಗಳಿವು.
ಹಂಪಿ ಬಳಿಯ ಆನೆಗೊಂದಿಯಲ್ಲಿ ಜರುಗಿದ ಉತ್ಸವದಲ್ಲಿ ಕವಿ ಸಿರಾಜ್ ಬಿಸರಳ್ಳಿ ಅವರು ಎನ್ ಆರ್ ಸಿ ವಿರೋಧಿಸಿ ಬರೆದ ಕವಿತೆ ವಾಚಿಸಿದ್ದು, ಮೊಕದ್ದಮೆ ದಾಖಲಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸಂಕುಚಿತ ಮನಸ್ಥಿತಿಯನ್ನು ಇಲ್ಲಿಯ ಕವಿತೆಗಳು ವಿರೋಧಿಸುತ್ತವೆ.
ಈ ಕಾವ್ಯಾಂಶದ ಇಂಗ್ಲಿಷ್ ಕವಿತೆಗಳ ಅನುವಾದಿತ ಕನ್ನಡದ ಕವಿತೆಗಳು ಹಾಗೂ ಚಳವಳಿಯ ಪ್ರಮುಖ ಭಾಗವಾಗಿ ಪ್ರಕಟವಾದ ಭಿತ್ತಿಚಿತ್ರಗಳು, ಕಲಾಕೃತಿಗಳು ಸಂಕಲನದಲ್ಲಿ ಸೇರ್ಪಡೆಯಾಗಿವೆ.
ಹಲವರ ಮಾತು ನಾನು ಮಂದಿರ, ಮಸೀದಿ, ಚರ್ಚು, ಇಗರ್ಜಿ ಇಲ್ಲೆಲ್ಲಿ ಸಿಕ್ಕವಳು? ಬೇಡದ ಪ್ರಶ್ನೆ ನನಗೆ. ನೆನ್ನೆಯವರೆಗೂ ಭಿಕ್ಷೆ ಎತ್ತುವ ಅಜ್ಜಿ, ಪೇಪರ್ ಹಾಕುವ ಹುಡುಗ, ಕಸ ಗುಡಿಸುವ ಅಕ್ಕ-ಅಣ್ಣ ಹಾಲುಣಿಸಿದವರು ಯಾರು? ಗೊತ್ತಿಲ್ಲ; ಸರ್ವಾಧಿಕಾರಿಗಳು ಸಾವಿರ ಬರಲಿ, ಸರ್ವಾಧಿಕಾರ ಬರುವುದು ಹೋಗುವುದು; ದಾಖಲೆ ಎಂದೂ ತೋರೆವು ನಾವು ದಾಖಲೆ ಎಂದೂ ತೋರಿಸೆವು! ಅಶ್ರುವಾಯುವ ಎರಚುವಿರಿ ನೀವು ವಿಷದ ಚಹಾ ಕುದಿಸುವಿರಿ, ಪ್ರೀತಿಯ ಸಕ್ಕರೆ ಬೆರೆಸುತ ನಾವು ಗಟಗಟಗಟನೆ ಕುಡಿಯುವೆವು ! ದಾಖಲೆ ಎಂದೂ ತೋರೆವು ನಾವು ದಾಖಲೆ ಎಂದೂ ತೋರಿಸೆವು. ಈ ಹುಚ್ಚು ಸಂತೆಯೊಳು ಸೇರಲೊಪ್ಪದವರನು ಕೊಲ್ಲಲಾಗುವುದು. ಬೆಟ್ಟು ಮಾಡುವವರನು, ನಿಜ ನುಡಿದವರನು ಹಿಡಿದು ಕಟಕಟೆಯಲಿ ನಿಲ್ಲಿಸಲಾಗುವುದು; ಅವರನೂ ಕೊಲ್ಲಲಾಗುವುದು.
ನಿಮ್ಮ ಮಾತುಕತೆಗಳಲ್ಲಿ ಹುದುಗಿದ ಬೆಕ್ಕು
ಸಂಶಯದ ಪಂಜವೆತ್ತಿ
ನನ್ನ ನಂಬಿಕೆಯ ನೀಯತ್ತು ಹಕ್ಕು
ಕೊನೆಗೆ ಸಾಚಾತನವನ್ನು ಪರಚಿ, ಒತ್ತಿ
ನೋವಿಗೆ ಕಣ್ಣು ತುಂಬಿದ್ದರೂ
ಚೆಲ್ಲಿದ ರಕ್ತದಲ್ಲಿ ರಾಷ್ಟ್ರೀಯತೆಯ ಧಾತುಗಳ
ನನ್ನೆದುರಿನಲ್ಲೇ ತನಿಖೆ ಮಾಡುವುದನ್ನು
ಹುಸಿನಗುತ್ತಾ ಎದುರಿಸುವುದಿದೆಯಲ್ಲಾ
ಅದು ಬಲು ಕಷ್ಟದ ಕೆಲಸ
– ಕೆ ಎಸ್ ನಿಸಾರ್ ಅಹ್ಮದ್
ಸಾವಿರಾರು ವರ್ಷಗಳಿಂದ ಬಾಳಿ ಬದುಕಿ ಬಹುತ್ವದ ಭಾರತ ಕಟ್ಟಿದವರಿಗೆ, ಇಲ್ಲಿಯ ಮಣ್ಣಿನ ಕಣಕಣದಲ್ಲೂ ರಕ್ತವನ್ನೇ ಬೆವರಾಗಿಸಿದವರಿಗೆ, ಈ ನೆಲದೊಂದಿಗಿನ ಸಂಬಂಧದ ದಾಖಲೆ ಒದಗಿಸಿ ಎಂದು ಕೇಳುವುದೇ ಮೂರ್ಖತನ. ಇಂತಹ ಮೂರ್ಖತನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜಾತಿ, ಧರ್ಮ, ಭಾಷೆ, ಪ್ರದೇಶ, ಲಿಂಗ ಭೇದಗಳನ್ನು ಮೀರಿ ದೇಶಾದ್ಯಂತ ಪ್ರತಿಭಟನೆಯ ಕಿಚ್ಚು ಹಬ್ಬಿದೆ. ಸ್ವಾತಂತ್ರ್ಯ ಚಳವಳಿಯನ್ನು ನೆನಪಿಸುವಂತೆ ಸಾಗರದ ಅಲೆಗಳಂತೆ ಜನ ಮುನ್ನುಗ್ಗುತ್ತಿದ್ದಾರೆ. ಈ ಶತಮಾನದ ’ಅವಮಾನಿತ ಕಾಲ’ ಎಂದೇ ವ್ಯಾಖ್ಯಾನಿಸಬಹುದಾದ ಈ ಕಾಲದಲ್ಲಿ ಕಾವ್ಯ ಬೀದಿಗೆ ಬರದಿರಲು ಸಾಧ್ಯವೇ ಇಲ್ಲ.
ಕೊಪ್ಪಳದ ಕವಿ ಹಾಗೂ ಪತ್ರಕರ್ತ ಸಿರಾಜ್ ಬಿಸರಳ್ಳಿಯವರು ಇತ್ತೀಚೆಗೆ ನಡೆದ ಆನೆಗೊಂದಿ ಉತ್ಸವದಲ್ಲಿ ತಾವು ರಚಿಸಿದ್ದ ’ನಿನ್ನ ದಾಖಲೆ ಯಾವಾಗ ನೀಡುತ್ತಿ?’ ಎಂಬ ಕವಿತೆಯೊಂದನ್ನು ಓದಿದರು. ಪ್ರಭುತ್ವದ ಭಕ್ತರು ನೀಡಿದ ದೂರಿನ ಮೇರೆಗೆ ಪೊಲೀಸರು ಕವಿಯ ಮೇಲೆ ಎಫ್ ಐ ಆರ್ ಹಾಕಿದ್ದಾರೆ. ಕವಿಗಳನ್ನು ದೇಶದ್ರೋಹಿಗಳೆಂದು, ಕವಿತೆಗಳನ್ನು ದೇಶದ್ರೋಹದ, ಧರ್ಮದ್ರೋಹದ ಕೃತ್ಯಗಳು ಎಂದು ಪರಿಗಣಿಸುವ ಪರಿಪಾಠ ಇಂದು ನಿನ್ನೆಯದೇನೂ ಅಲ್ಲ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ’ನರಬಲಿ’ ಎಂಬ ಕವಿತೆ ಬರೆದ ದ.ರಾ.ಬೇಂದ್ರೆ ಅವರನ್ನೂ ಜೈಲಿಗೆ ತಳ್ಳಿತ್ತು ಅಂದಿನ ಬ್ರಿಟಿಷ್ ಸರ್ಕಾರ. ಆಮೇಲೆಯೂ ಇಂತಹ ಪ್ರಕರಣಗಳು ಆಗಾಗ ನಡೆದದ್ದಿದೆ. ಆದರೆ, ಪ್ರತಿರೋಧದ ದನಿಗೆ ಮುಖಾಮುಖಿಯಾಗಲು ಬೆದರಿದ ಪ್ರಭುತ್ವ ಇಂದು ಈ ದಾಳಿಯನ್ನು ತೀವ್ರಗೊಳಿಸಿದೆ.
ಒಂದು ಕವಿತೆಯ ಮೇಲೆ ಎಫ್ ಐ ಆರ್ ದಾಖಲಿಸಿದ್ದನ್ನು ಪ್ರತಿಭಟಿಸಿ, ಸಿ.ಎ.ಎ-ಎನ್.ಆರ್.ಸಿ-ಎನ್.ಪಿ.ಆರ್ ಗಳನ್ನು ಪ್ರಶ್ನಿಸುವ, ಪ್ರಭುತ್ವಕ್ಕೆ ಸೆಡ್ಡು ಹೊಡೆಯುವ ಸಾಲು ಸಾಲು ಕವಿತೆಗಳು ಬಂದಿವೆ. ಅಕ್ಷರ ಲೋಕದ ಈ ಸಾತ್ವಿಕ ಪ್ರತಿರೋಧ ಹೇಗಿದೆ ಎಂದರೆ ಸಿರಾಜ್ ಬಿಸರಳ್ಳಿ ಅವರ ಕವಿತೆ, ಕೇವಲ ಎರಡು ದಿನಗಳಲ್ಲಿ 11 ಭಾಷೆಗಳಿಗೆ ಅನುವಾದವಾಗಿ ’ವೈರಲ್ ಆಗಿದೆ.
ಈಗಾಗಲೇ ಎನ್‌ಆರ್‌ಸಿ-ಪ್ರತಿರೋಧದ ಸಭೆ, ರ‍್ಯಾಲಿ, ಮೆರವಣಿಗೆಗಳಲ್ಲಿ ಕವಿತೆ ವಾಚನ ಸಾಮಾನ್ಯವಾಗಿದೆ. ಅತ್ಯಂತ ಸೃಜನಶೀಲ ಪೋಸ್ಟರುಗಳು, ಬ್ಯಾನರುಗಳು, ಕಲಾಕೃತಿಗಳು ದೇಶಾದ್ಯಂತ ಪ್ರತಿರೋಧದ ಭಾಗವಾಗಿ ಬಂದಿವೆ. ಇದನ್ನು ’ಎನ್‌ಆರ್‌ಸಿ ವಿರುದ್ಧ ಕಲಾ ಪ್ರತಿರೋಧ’ ಎಂದು ಕರೆಯಬಹುದಾದಷ್ಟು ನಿಚ್ಚಳವಾದ ಟ್ರೆಂಡ್ ಆಗಿದೆ.
’ನಿನ್ನ ದಾಖಲೆ ಯಾವಾಗ ನೀಡುತ್ತಿ?’ ಇಂತಹ ಕಲಾ ಪ್ರತಿರೋಧದ ಕವಿತೆಗಳ ಸಂಕಲನ. ಕನ್ನಡದಲ್ಲಿ ಪ್ರಮುಖವಾಗಿ ಎನ್‌ಆರ್‌ಸಿ ಗೆ ಪ್ರತಿರೋಧದ ಹಿನ್ನೆಲೆಯಲ್ಲಿ ಬಂದ ಕವಿತೆಗಳಿವೆ. ಇವಲ್ಲದೆ, ಚಳವಳಿಯ ’ಅಧಿಕೃತ ಗೀತೆ’ಯೇ ಆಗಿರುವ ವರುಣ್ ಗ್ರೋವರ್ ಅವರ ’ಹಮ್ ಕಾಗಜ್ ನಹೀ ದಿಖಾಯೆಂಗೆ’ ಸೇರಿದಂತೆ ಹಿಂದಿ, ಇಂಗ್ಲಿಷ್ ಮತ್ತಿತರ ಭಾಷೆಗಳಲ್ಲಿ ಎನ್.ಆರ್.ಸಿ ಗೆ ಪ್ರತಿರೋಧ ಚಳವಳಿಯ ಭಾಗವಾಗಿ ಬಂದ ಕೆಲವು ಪ್ರಮುಖ ಕವಿತೆಗಳ ಅನುವಾದಗಳೂ ಇವೆ.
ಇಲ್ಲಿರುವ ಕವಿತೆಗಳಲ್ಲಿ ’ನನ್ನ ದಾಖಲೆ ಕೇಳುವ ಮೊದಲು ನಿಮ್ಮ ದಾಖಲೆ ತೋರಿಸಿ’ ಎಂದು ಸವಾಲು ಹಾಕುವ ಹಾಗೂ ’ಅವರ’ ಕೆಟ್ಟ ಭೀಕರ ದಾಖಲೆಗಳನ್ನು ಬಯಲಿಗೆಳೆಯುವ ಕವಿತೆಗಳು ಒಂದು ವಿಧ. ನಮ್ಮ ಗುರುತು ದಾಖಲೆಗಳಲ್ಲಿ ಅಲ್ಲ, ನೆಲದಲ್ಲಿ ಹಾಸುಹೊಕ್ಕಾಗಿರುವ ನಮ್ಮ ಬದುಕಿನ ವಿವಿಧ ಆಯಾಮಗಳಲ್ಲಿ ಇದೆ ಎಂದು ದೃಢವಾಗಿ ತಿಳಿಹೇಳುವ ಕವಿತೆಗಳು ಇನ್ನೊಂದು ವಿಧ. ಕವಿತೆಗೆ ಬೆದರಿ ಕೇಸು ಹಾಕುವುದನ್ನು ಮತ್ತಿತರ ದಮನ ಕ್ರಮಗಳನ್ನು ಎದುರಿಸುವ, ಲೇವಡಿ ಮಾಡುವ, ಜನರ ದನಿಯಾಗಬಲ್ಲ ಕಾವ್ಯದ ಶಕ್ತಿಯನ್ನು ಎತ್ತಿ ಹಿಡಿಯುವ ಕವಿತೆಗಳು ಮಗದೊಂದು ವಿಧ. ಇವಲ್ಲದೆ, ಹಿಟ್ಲರನ ನಾಜಿವಾದ ಅವನೊಂದಿಗೆ ಸತ್ತಿಲ್ಲ ಎಂಬುದರ ಕುರಿತು ಬರೆದ ಆಡೆನ್ ಅವರ ಚಾರಿತ್ರಿಕ ಕವಿತೆಯ ಅನುವಾದವೂ ಇಲ್ಲಿದೆ. ಸರ್ವಾಧಿಕಾರಿ, ಅದರಲ್ಲೂ ಧರ್ಮದ ಹೆಸರಿನಲ್ಲಿ ಸಮರ್ಥಿಸಿಕೊಳ್ಳುವ, ಪ್ರಭುತ್ವಗಳ ದಮನದ ವಿರುದ್ಧ ಚಳವಳಿಗಳ ಪ್ರತಿರೋಧದ ಗೀತೆಯಾಗಿದ್ದು, ಎನ್‌ಆರ್‌ಸಿ ವಿರುದ್ಧ ಚಳವಳಿಯಲ್ಲೂ ವ್ಯಾಪಕವಾಗಿ ಕೇಳಿ ಬಂದಿರುವ ಫೈಜ್ ಅಹ್ಮದ್ ಫೈಜ್ ಅವರ ’ಹಮ್ ದೇಖೇಂಗೆ’ಯ ಅನುವಾದವೂ ಇದೆ. ಇವಲ್ಲದೆ, ಪ್ರತಿರೋಧದ ಭಾಗವಾಗಿ ಬಂದ ಪೋಸ್ಟರುಗಳು, ಕಲಾಕೃತಿಗಳು ಇಲ್ಲಿವೆ.
ಕೃಪೆ: ಪುಸ್ತಕ ಪ್ರೀತಿ, 2020, ಫೆಬ್ರುವರಿ 18.
©2023 Book Brahma Private Limited.