ಪ್ರೇಮ ಕಾರಂಜಿ

Author : ವಿಶ್ವನಾಥ ಅರಬಿ

Pages 116

₹ 120.00
Year of Publication: 2022
Published by: ಸಂಗೀತ ಜಗತ್ತು ಪ್ರಕಾಶನ
Address: #01 ನೆಲಮಹಡಿ ಯಂಕಾಚಿ ಬಿಲ್ಡಿಂಗ್ ಹೊಸ ವಿಠ್ಠಲ ಮಂದಿರ ರಸ್ತೆ ವಿಜಯಪುರ 586101
Phone: 9686604710

Synopsys

ಐತಿಹಾಸಿಕ ತಾಣಗಳೊಂದಿಗೆ ಸದಾ ಕಂಗೊಳಿಸುವ ವಿಜಯಪುರದ ಯುವ ಸಾಹಿತಿಗಳಾದ ಶ್ರೀ ವಿಶ್ವನಾಥ ಬಸಪ್ಪ ಅರಬಿಯವರು 'ವಿಶ್ವ ಚೇತನ', 'ವಿಶ್ವನ ಹಾಯ್ಕುಗಳು', 'ಧರಣಿ ಮತ್ತು ಬದುಕು', ಹಾಗೂ 'ಅಬಾಬಿಗಳ ಲೋಕದಲ್ಲಿ ವಿಶ್ವ' ಎಂಬ ನಾಲ್ಕು ಕೃತಿಗಳನ್ನು ಈಗಾಗಲೇ ಕನ್ನಡಾಂಬೆಯ ಪರಮ ಪಾವನ ಪುಣ್ಯ ಮಡಿಲಿಗೆ ಅರ್ಪಿಸಿ, ಸಾಕಷ್ಟು ಓದುಗರ ಮನ ಗೆದ್ದಿದ್ದಾರೆ. ಭಿನ್ನ-ವಿಭಿನ್ನ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡಿ, ವಿವಿಧ ಸಂಘ-ಸಂಸ್ಥೆಗಳಿಂದ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆಂದು ಹೇಳಲು ಹರ್ಷವೆನಿಸುತ್ತದೆ. ವೃತ್ತಿಯಿಂದ ಗ್ರಾಮ ಲೆಕ್ಕಾಧಿಕಾರಿಗಳು ಪ್ರವೃತ್ತಿಯಿಂದ ಸಾಹಿತಿಗಳೂ ಆದ ಸೃಜನಶೀಲ ಮನೋಭಾವದ, ಮಾತೃ ಹೃದಯಿ, ಮುಗ್ಧ ಮನಸ್ಸಿನ ಪ್ರೀತಿಯ ಗಿರಿ ಶಿಖರವಾದ ಶ್ರೀ ವಿಶ್ವನಾಥರವರ ಬಾಳ ಸಂಗಾತಿ ನಾನೇ ಎಂದು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಸಂತೋಷದೊಂದಿಗೆ ಹೆಮ್ಮೆಯೆನಿಸುತ್ತದೆ.

'ಪ್ರೇಮ ಕಾರಂಜಿ' ಯಲ್ಲಿನ ಕವನಗಳ ಕುರಿತು ನಾನೇನು ವಿವರಣೆ ನೀಡಲಾರೆ. ಏಕೆಂದರೆ ನಮ್ಮೀರ್ವರ ಪ್ರೀತಿಯ ಕುರುಹಾಗಿ ಹೊರ ಹೊಮ್ಮುತ್ತಿರುವ ಈ ಕೃತಿಯಲ್ಲಿನ ಎಲ್ಲ ಸಂದರ್ಭಗಳಿಗೂ ನೀವೆಲ್ಲರೂ ಪಾತ್ರಧಾರಿಗಳು. ನಿಮ್ಮ ಜೀವನಗಳಲ್ಲಿಯೂ ಸಹ ಇಂಥದ್ದೇ ಒಂದು ಪ್ರೇಮ ಮೊಳಕೆಯೊಡೆದಿರುತ್ತದೆ, ಚಿಗುರಲು ಹಾತೊರೆಯುತ್ತಿರುತ್ತದೆ ಅದಕ್ಕೆ ಮತ್ತಷ್ಟು ಪುಷ್ಠಿ ನೀಡಲು ಇಲ್ಲಿನ ಪ್ರೀತಿ, ಪ್ರೇಮ, ಪ್ರಣಯದ ಕವಿತೆಗಳನ್ನು ಸ್ವತಃ ನೀವೆಲ್ಲರೂ ನಿಮ್ಮ ಸಂಗಾತಿಗಳೊಂದಿಗೆ ಓದಲೇಬೇಕು. ನಾವಿಬ್ಬರೂ ಸಾಹಿತಿಗಳಾದ ಕಾರಣ ಒಬ್ಬರಿಗೊಬ್ಬರು ಬೆನ್ನುಡಿ ಬರೆಯುವುದರೊಂದಿಗೆ ಪರಸ್ಪರರ ಏಳ್ಗೆಗೆ ಬೆನ್ನೆಲುಬಾಗಿ ನಿಲ್ಲುವ ದೃಢ ನಿರ್ಧಾರದೊಂದಿಗೆ 21/11/2021 ರಂದು ನಮ್ಮ ಮದುವೆಯ ವೇದಿಕೆಯ ಮೇಲೆ ಪ್ರತಿಜ್ಞೆ ಮಾಡಿದ್ದೆವು. ಅದೇ ಹಾದಿಯಲ್ಲಿ ನಡೆಯುತ್ತಾ ಇದೀಗ ನಮ್ಮ ದಾಂಪತ್ಯ ಜೀವನಕ್ಕೆ ಒಂದು ವರ್ಷ ತುಂಬಿದೆ.

ಮದುವೆಯ ವಾರ್ಷಿಕೋತ್ಸವಕ್ಕೆ ನನ್ನ ಪತಿಯವರು ನನಗೆ ಉಡುಗೊರೆಯಾಗಿ ಈ 'ಪ್ರೇಮ ಕಾರಂಜಿ' ಯನ್ನು ನೀಡಲು ಇಚ್ಛಿಸಿದ್ದಾರೆಂದು ತಿಳಿದು ಆತ್ಮಾನಂದವಾಯಿತು. ಆದ್ದರಿಂದಲೇ ಅವರ ಈ ಐದನೇ ಕೃತಿಯ ಬೆನ್ನುಡಿಯಲ್ಲಿ ನಾನವರ ಪತ್ನಿ ಎಂದು ಬಹಳ ಒಲುಮೆಯಿಂದ ತಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಪ್ರೀತಿ, ಪ್ರೇಮ, ಸ್ನೇಹ, ಮಮತೆ, ಕಾಳಜಿ, ಕರುಣೆ, ಕೀಟಲೆ ಇನ್ನೂ ಅನೇಕ ಭಾವಗಳಿಗೆ ಜೀವ ತುಂಬುವ ಸುಮಧುರ ಬಂಧವೇ ದಾಂಪತ್ಯ. ಅಂಥಹ ಅರ್ಥಪೂರ್ಣ ಜೀವನಕ್ಕೆ ಕಾಲಿಟ್ಟ ಈ ಶುಭದಿನದಂದು ಒಂದು ಕೃತಿಯನ್ನೇ ನನಗಾಗಿ ರಚಿಸಿ ಒಲವವೃಷ್ಠಿ ಹರಿಸಿದ ನನ್ನಾತ್ಮಕ್ಕೆ ಅನಂತ ಧನ್ಯವಾದಗಳು. ಇನ್ನೂ ಅನೇಕ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡಿ, ಜಗತ್ತಿನ ತುಂಬೆಲ್ಲ ಓದುಗರ ಮನ ಗೆಲ್ಲುವ ಶಕ್ತಿಯನ್ನು ಎನ್ನ ಆರಾಧ್ಯ ನನ್ನ ಜಗತ್ತಿಗೆ ಕರುಣಿಸಲೆಂದು ಅಂತರಾತ್ಮದಿಂದ ಪ್ರಾರ್ಥಿಸುವೆ. ಎಚ್. ಜಿ. ಸಂಗೀತಾ ಮಠಪತಿ ಅಧ್ಯಕ್ಷರು, ಸಂಗೀತಜಗತ್ತು ಪ್ರಕಾಶನ (ರಿ) ವಿಜಯಪುರ. 

About the Author

ವಿಶ್ವನಾಥ ಅರಬಿ
(02 May 1999)

ಲೇಖಕ ವಿಶ್ವನಾಥ ಅರಬಿ ಅವರು ಮೂಲತಃ  ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಾವೂರಿನವರು. ವಿಜಯಪುರದಲ್ಲಿ ವಾಸವಾಗಿದ್ದಾರೆ. ತಂದೆ ಬಸಪ್ಪ, ತಾಯಿ ಶಂಕ್ರಮ್ಮ, ವಿಜಯಪುರದಲ್ಲಿ ಪ್ರಾಥಮಿಕ-ಪ್ರೌಢಶಿಕ್ಷಣ, ಪಿ ಯು ಸಿ.ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ, ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಎಂ.ಎ. ಸ್ನಾತಕೋತ್ತರ (ಅರ್ಥಶಾಸ್ತ್ರ)  ಪದವಿ ಪಡೆದರು. ಕಾಲೇಜು ಹಂತದಲ್ಲಿ ಚರ್ಚಾ ಸ್ಪರ್ಧೆ,ಭಾಷಣ ಸ್ಪರ್ಧೆ, ಆಶುಭಾಷಣ, ದೇಶ ಭಕ್ತಿ ಗೀತೆ ಹೀಗೆ ರಾಜ್ಯಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಹಲವು ಪ್ರಶಸ್ತಿಗಳನ್ನು ಹಾಗೂ 2016-2017 ಸಾಲಿನಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಅಣಕು ಯುವ ...

READ MORE

Reviews

ಬತ್ತದ ಪ್ರೇಮ ಕಾರಂಜಿ

     ಜೋಡಿ ಹಕ್ಕಿಗಳು 'ಪ್ರೇಮ ಕಾರಂಜಿ' ಯಲ್ಲಿ ಮನದಣಿ ಮಿಂದೆದ್ದು ರೆಕ್ಕೆ ಬಿಚ್ಚಿ ಆಗಸದಲಿ ಹಾರಾಡಿ, ಬಿಳಿ ಮೋಡದಲಿ ತೇಲಾಡಿ ಮನೋಲ್ಲಾಸದಿಂದ ಹಾಡಿವೆ, ನಲಿದಾಡಿವೆ. ಯಾರ ಬಂಧನವೂ ಇಲ್ಲ, ಯಾವ ಕಟ್ಟಳೆಯೂ ಇಲ್ಲ. ಒಂದಕ್ಕೊಂದು ರಾಗ-ತಾಳ-ಲಯದೊಂದಿಗೆ ಪ್ರೇಮದ ಗುಂಗಿನಲ್ಲಿ ಗುನುಗುಣಿಸಿವೆ. ಇವರ ಧ್ವನಿ ಕೇಳಿದ ಕೋಗಿಲೆ ನಾಚಿ ನೀರಾಗಿದೆ. ನೃತ್ಯ ನೋಡಿ ಮಯೂರಿಯೂ ನಿಬ್ಬೆರಗಾಗಿದೆ.  ಇದು ಪ್ರೇಮ ಬಂಧನ, ಮನವೇ ನಂದನ. ನಂದನದಲಿ ನಲಿದಾಡುವುದೇ ಸುಖಕರ ಜೀವನ.

    ವೃತ್ತಿಯಿಂದ ಗ್ರಾಮ ಲೆಕ್ಕಿಗರಾದ ವಿಶ್ವನಾಥ ಅರಬಿ ಅವರ ಬರವಣಿಗೆಯು ಕಾರಂಜಿಯಾಗಿ ಬಹುಜನ ಹಿರಿಯರು, ಪ್ರಾಧ್ಯಾಪಕರು ಕಣ್ಣರಳಿಸಿ ನೋಡುವಂತೆ ಮಾಡಿದೆ. ವಯೋಮಾನದಿಂದ ತುಂಬಾ ಚಿಕ್ಕವರು, ಬರವಣಿಗೆ ಸಕ್ಕರೆಯ ಮಳಲು, ಹಾಲ್ಜೇನಿನ ಹೊನಲು. ಇದು ಅತಿಶಯೋಕ್ತಿಯ ಮಾತಲ್ಲ. ಇವರ ಬದುಕು ಅರಿತು ಬೆರೆತ ಹಾಲು ಜೇನು. ಇವರ ಅರಗಿಣಿ, ಮುದ್ದು ಮಣಿ, ಪ್ರೇಮದ ಖಣಿ ಅರ್ಧಾಂಗಿನಿ ಸಂಗೀತಾ ಹೆಸರಿಗೆ ತಕ್ಕ ಸರಸ್ವತಿ ಪುತ್ರಳು. ಬರಹದಲ್ಲಿ, ಮಾತಿನಲ್ಲಿ ನುರಿತವಳು. ಜೋಡಿ ಹಕ್ಕಿಗಳ ಮೊಗದಲ್ಲಿ ಸದಾ ನಗೆ ತೇಲಾಡುತ್ತಿರುತ್ತದೆ. ಅರಳಿದ ಮಲ್ಲಿಗೆ, ಬಿರಿದ ಕಮಲದಂತೆ. ಅರೆ! ಪ್ರೇಮ ಕಾರಂಜಿಯ ಬಗ್ಗೆ ಹೇಳುವುದನ್ನು ಬಿಟ್ಟು ಹಕ್ಕಿಗಳ ಕಕ್ಕುಲಾತಿಯ ಬರವಣಿಗೆಯ ಝರಿ ಹರಿಯಿತಲ್ಲ! ಹೌದು, ಶತಸತ್ಯ! ಬರಹದಲ್ಲಿ ಓಡುತ್ತಿದ್ದಾರೆ. ಹಿಂದೆ-ಮುಂದೆ ಅನ್ನುವ ಗೊಂದಲವೇ ಇಲ್ಲ.

ವಿಶ್ವನಾಥ ತನ್ನ ಮನದಿಂಗಿತವನ್ನು ಮನದನ್ನೆಯಲ್ಲಿ ಕಂಡಿದ್ದಾನೆ. ಮನದಿಚ್ಛೆ ಉಂಡಿದ್ದಾನೆ, ಉಂಡಿದನ್ನೇ ಕಂಡಿದ್ದನ್ನೇ ಇಲ್ಲಿ ಹಂಚಿಕೊಂಡಿದ್ದಾನೆ. ಪ್ರಾಂಜಲ ಮನಸ್ಸಿನಿಂದ ತನ್ನ ಅರಗಿಣಿಯನ್ನು ಕೊಂಡಾಡಿದ್ದಾನೆ. ಶಬ್ದಗಳು ಸಾಲದ್ದಕ್ಕೆ ಸೋತಿದ್ದಾನೆ. ಅಲ್ಲಲ್ಲಿ ಮೌನಿಯಾಗಿದ್ದಾನೆ. ಇವರೀರ್ವರ ಕವಿತೆಗಳನ್ನು ಮನಸಾರೆ ಓದಿ ನಾಲ್ಕು ಸಾಲು ಬರೆದಿದ್ದೇನೆ. ಆದರೂ ಪ್ರೇಮ ಕಾರಂಜಿಗೆ ಬರೆಯುವ ಅವಶ್ಯಕತೆ ಇಲ್ಲವೆಂದರೂ ಕೇಳಲೇ ಇಲ್ಲ. ಒಲವಿನ ಒತ್ತಾಯಕ್ಕೆ ಹಸ್ತಪ್ರತಿ ಬಿಚ್ಚಿ ಅರೆಗಳಿಗೆ ಕಣ್ಣಾಡಿಸಿದೆ. ತುಂಬಾ ಖುಷಿಯಾಯಿತು. ಒಂದೇ ಉಸಿರಿನಲ್ಲಿ ಓದಿ ಮುಗಿಸಿದೆ. ನಾಲ್ಕು ಮಾತು ಬರೆಯಲು ನಾನೊಪ್ಪದಿದ್ದರೂ ಮನ ಒಪ್ಪಿತು. ಪ್ರೇಮ ಕಾರಂಜಿ ಮನದಣಿ ನೋಡಿ ಕಣ್ತುಂಬಿಕೊಂಡೆ.

ದೇಹಕ್ಕೆ ಜೀವ ತುಂಬಿತು
ನನ್ನವಳ ಪ್ರೇಮ
ಹೃದಯಕ್ಕೆ ಭಾವ ತುಂಬಿತು
ನನ್ನವಳ ಪ್ರೇಮ

ನಾ ಪ್ರೇಮಕ್ಕೆ ಬಲಿಯಾದೆ
ಆಕೆಯ ನಗುವಿಗೆ ಸೋತು
ನಾ ಮೋಹಕ್ಕೆ ಒಳಗಾದೆ
ಆಕೆಯ ಹಾಲ್ಗೆನ್ನೆಗೆ ಸೋತು (ಪ್ರೇಮ ಕಾರಂಜಿ)

ಈ ಕವಿತೆಯ ಸಾಲು ಸಾಲಿನಲ್ಲೂ ಪ್ರೇಮದ ಹಕ್ಕಿ 'ಸಂಗೀತಾ' ತುಂಬಿಕೊಂಡಿದ್ದಾಳೆ. ಅವಳದೇ ಪ್ರತಿರೂಪ ಝರಿಯಾಗಿ ಹರಿದು ಬಂದಿದೆ. ಬನದಲ್ಲಿ ಸಾವಿರ ಸಾವಿರ ಹಕ್ಕಿಗಳಿದ್ದರೂ ವಿಶ್ವನಾಥನಿಗೆ ಕಾಣುವುದು ಒಂದೇ ಹಕ್ಕಿ, ಅದುವೇ ಬೆಳ್ಳಿ ಚುಕ್ಕಿ.

ಪ್ರೀತಿ ಎಂದರೆ;
ಒತ್ತಾಯಕ್ಕೆ ಒಳಗಾಗುವುದಲ್ಲ
ಒತ್ತಡಕ್ಕೆ ಮಣಿಯುವುದಲ್ಲ
ಪ್ರತಿಷ್ಠೆಯ ಬಯಸುವುದಲ್ಲ
ಅನುಮಾನದ ಸಂಬಂಧವಲ್ಲ

ಪ್ರೀತಿ ಎಂದರೆ ;
ಮುಗ್ಧ ಮನಸ್ಸುಗಳ ಮಿಲನ
ಆತ್ಮಗಳೆರಡರ ಸಮ್ಮಿಲನ
ಕೊನೆಯಿರದ ಬಂಧನ
ಪ್ರೇಮಿಗಳ ಪಾಲಿನ ಶಾಸನ
ಮುಂಗಾರು ಮಳೆ ಹನಿಯಂತೆ
ಘಮಘಮಿಸುವ ಸುಮದಂತೆ (ಪ್ರೀತಿ ಎಂದರೆ)

ಅಬ್ಬಾ! ಎಷ್ಟು ಅರ್ಥಪೂರ್ಣವಾಗಿದೆ ಪ್ರೀತಿ ಎನ್ನುವ ಎರಡಕ್ಷರಗಳ ಮಿಲನ.
ಪ್ರೀತಿ ಮಾಸದ ವಸ್ತು, ಪ್ರೀತಿ ಶಾಶ್ವತ ನಿಧಿಯು,
ಪ್ರೀತಿ ಹಣ ನೀಡಿ ಪೇಟೆಯಲಿ ತರುವಂಥ
ತೂತು ಮಡಕೆಯೇ ಪ್ರಭುಲಿಂಗ - ಪಗುಸಿ
ಎನ್ನುವ ಹಾಗೆ ವಿಶ್ವನಾಥರ ಪ್ರೀತಿ ಶಾಶ್ವತ ನಿಧಿಯೇ ಆಗಿದೆ. ಪ್ರೀತಿಯ ಬೆಸುಗೆಯೇ ಮದುವೆ. ಅದನ್ನಿಲ್ಲಿ ತುಂಬಾ ಅರ್ಥಪೂರ್ಣವಾಗಿ ಹೇಳಿದ್ದಾರೆ.

ಮದುವೆ ಎಂದರೆ;
ಗಂಡು-ಹೆಣ್ಣಿನ ಅದ್ಭುತ ಬಂಧ
ಕೊನೆಯಿರದ ಶಾಶ್ವತ ಸಂಬಂಧ
ಹಾಲ್ಜೇನಿನ ಅನುಬಂಧ
ಅನುಭವಗಳ ನವೀನ ಪ್ರಬಂಧ (ಮದುವೆ ಎಂದರೆ)

ಮದುವೆಯೆಂದರೆ ಏನೆಂಬುದನ್ನು ಮುತ್ತು ಪವಣಿಸಿದಂತೆ ಕಟ್ಟಿಕೊಟ್ಟಿದ್ದಾರೆ. ಕೊನೆಯದಾಗಿ ತಮ್ಮದೇ ಆದ ಅನುಭವದ ಪ್ರಬಂಧವನ್ನೇ ಕಾವ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ. ನಿಜವಾಗಿಯೂ ಈ ತರುಣ ಪ್ರೇಮಿಗಳ ಕಥನ ಕಾವ್ಯ ಇದಾಗಿದೆ. ಇಡೀ ಕಾವ್ಯದುದ್ದಕ್ಕೂ ಸಂಗೀತಾ-ವಿಶ್ವನಾಥರ ಹೆಜ್ಜೆ ಗುರುತುಗಳು ಮೂಡಿವೆ. ತನ್ನಂತರಂಗದ ಭಾವನೆಗಳನ್ನು ಶಬ್ದಗಳ ಮೂಲಕ ಸುಂದರವಾಗಿ ಹಂದರ ಹಾಕಿದ್ದಾರೆ.

ಮುಗ್ಧ ಮಗುವಿನಂಥ
ಮನಸು ಅವಳದು
ಪ್ರಕೃತಿ ಮಾತೆಯಂಥ
ಪ್ರೀತಿ ಆ ಹೆಣ್ಣಿನದು

ಹೆಣ್ಣು ನಿಸರ್ಗವಾಗಿ
ಸ್ವರ್ಗ ನೀಡಿದಳು
ಅವಳು ಮಾತೆಯಾಗಿ
ಮಡಿಲ ನೀಡಿದಳು

ವಿಶ್ವನಾಥನ ಕಣ್ಮುಂದೆ ಸದಾ ಸಂಗೀತಾಳೆ ನರ್ತಿಸುತ್ತಾಳೆ. ಮಗುವಾಗಿ ನಗುತ್ತಾಳೆ, ಮಾತೆಯಾಗಿ ಮಡಿಲ ಪ್ರೀತಿ ನೀಡುತ್ತಾಳೆ. ಏನೆಲ್ಲಾ ಪ್ರೀತಿಯನ್ನು ಸಂಗೀತಾಳಿಂದ ಪಡೆದ ವಿಶ್ವನಾಥ ಆನಂದ ಸಾಗರದಲ್ಲಿ ಮಿಂದೆದ್ದು, ಸಗ್ಗ ಸುಖವನ್ನು ಅನುಭವಿಸಿದ್ದಾರೆ. ಪ್ರೀತಿ ಎಲ್ಲೂ ಸೋತಿಲ್ಲ, ಸೊರಗಿಲ್ಲ.

ನಿನ್ನ ತುಟಿಗಳಿಗೆ ಬೇಡ ಕೃತಕ ಬಣ್ಣ
ನಾನೇ ನೀಡುವೆನು ಅವುಗಳಿಗೆ ಖಡಕ್ ಬಣ್ಣ
ನೀ ಬಯಸುವ ಅದೇ ಕೆಂಪು ಬಣ್ಣ
ವೀಳ್ಯದೆಲೆಯ ತಿಂದು ನಾಲಿಗೆಯಿಂದ ಸವರುವೆನು ಬಣ್ಣ
ಬಾ ನನ್ನ ಬಂಧನದಲ್ಲಿ ನೀಡುವೆ ನಾ ಪ್ರೇಮಪಾನ (ಪ್ರೇಮಪಾನ)

ನಿನ್ನ ಸೌಂದರ್ಯ ಕೃತಕವಾಗುವುದು ಬೇಡ, ನೈಜವಾಗಿರಲಿ. ಯಾವ ಬಣ್ಣದ ಅಗತ್ಯವೂ ನಿನಗಿಲ್ಲ. ಆ ಬ್ರಹ್ಮ ತಿದ್ದಿ, ತೀಡಿ ಮಾಡಿದ ನೈಜ ಚಿಲುಮೆ ನೀನು. ತುಟಿಗೆ ಕೃತಕ ಬಣ್ಣ ಬೇಡ ನಾನೇ ಹಚ್ಚುತ್ತೇನೆ ವೀಳ್ಯದೆಲೆಯ ಬಣ್ಣ. ಈ ಮಾತಿನಲ್ಲಿ ಪ್ರೀತಿ ಮಡುಗಟ್ಟಿ ನಿಂತಿದೆ, ತುಟಿ ಅಂಚಿನಲಿ ಮಿಂಚಿದೆ.

ತರುಣ ಕವಿ ವಿಶ್ವನಾಥ ಅರಬಿ ಅವರು ವೃತ್ತಿಯಿಂದ ಗ್ರಾಮ ಲೆಕ್ಕಿಗರಾದರೂ ಕಾವ್ಯ ಕಟ್ಟುವುದರಲ್ಲೂ ಲೆಕ್ಕ ಹಾಕಿಯೇ ಲೆಕ್ಕನಿಕೆ ಓಡಿಸಿದ್ದಾರೆ. ಎಲ್ಲೂ ಎಡವಿಲ್ಲ. ಪ್ರೇಮ ಕಾರಂಜಿ ಕೊನೆಯವರೆಗೂ ನಯನಮನೋಹರವಾಗಿ ಚಿಮ್ಮಿದೆ. ಚೆಲುವಿನ ಚಿತ್ತಾರ ಮೂಡಿ ಬಂದಿದೆ. ಸುಮಾರು ಐವತ್ತು ಕವಿತೆಗಳ ಗುಚ್ಛ ಇದಾಗಿದೆ. ಎಲ್ಲವೂ ನವ ಜೋಡಿಗಳ ಭಾವ-ಅನುಭಾವ ತುಂಬಿದ ಸಾಲುಗಳೇ ಕಾವ್ಯದ ಮಾಲೆಯಾಗಿದೆ. ಇವರು ಬಾಳಿನುದ್ದಕ್ಕೂ ಇದೇ ಪ್ರೇಮ ಕಾರಂಜಿಯನ್ನು ಸೊರಗದ ಹಾಗೆ ನೋಡಿಕೊಂಡು ಹೋದರೆ ಆದರ್ಶ ಬದುಕು ಇವರದ್ದಾಗುತ್ತದೆ. ಆಗಲಿ ಎಂದು ನಾನು ಮನದುಂಬಿ ಹಾರೈಸುತ್ತೇನೆ.

ಸಂಗೀತಾ-ವಿಶ್ವನಾಥರ ಬರಹ ಹೀಗೆ ಮುಂದುವರೆಯಲಿ ಸಾರಸ್ವತ ಲೋಕದಲ್ಲಿ ಜೋಡಿ ಧೃವತಾರೆಯಾಗಿ ಮಿನುಗಲಿ. ಪ್ರೇಮ ಕಾರಂಜಿ ಮುದ್ರಣಗೊಳ್ಳುವ ಮುನ್ನವೇ ಓದಿ ಆನಂದಿಸುವ ಭಾಗ್ಯ ನನಗೊದಗಿಸಿಕೊಟ್ಟಿದ್ದಕ್ಕೆ ಈರ್ವರಿಗೂ ಶುಭ ಕೋರುವೆ.


ಪ ಗು ಸಿದ್ದಾಪುರ
ಖ್ಯಾತ ಮಕ್ಕಳ ಸಾಹಿತಿಗಳು ಮುಳವಾಡ

ಚಂದನ
೦೭-೦೭-೨೦೨೨

Related Books