ಲಕ್ಷ್ಮಣ ಬಾದಾಮಿಯವರ ಮೊದಲ ಕವನ ಸಂಕಲನ-ಮನುಷ್ಯರು ಬೇಕಾಗಿದ್ದಾರೆ. ಇಲ್ಲಿಯ ಕವಿತೆಗಳು ಸಂವೇದನೆಯ ತೀವ್ರತೆಯಿಂದ ಕಾವ್ಯಗುಣ ಸಂಪನ್ನವಾಗಿವೆ. ಮುಳುಗಡೆಯಿಂದಾಗಿ 'ಆಡಿದ ಓಡಿದ ವಿರಮಿಸಿದ ಸುಖಿಸಿದ ನೆಲವೆಲ್ಲವೂ ನೀರು ಪಾಲಾಗಿ ಹೋದಾಗ ಬದುವಿನ ಬದಿಗೆ ನೆಟ್ಟಿದ್ದ ಮಾವಿನ ಮರ ಮೊದಲ ವಸಂತ ಕಾಣುವ ಮುನ್ನವೇ ಬಲಿಯಾಗಿದೆ. ಬರ್ಬರ ಸೂತಕಕ್ಕೆ ಬೊಡ್ಡಿ ಟೊಂಗೆಗಳ ಮುಗಿಸಿ ಚಿಗುರನು ನುಂಗಲು ಬರತಿದೆ ಇದಿಮಾಯಿ ಹಿನ್ನೀರು ಎಂದು ಹೃದಯಸ್ಪರ್ಶಿಯಾಗಿ ಹೇಳುತ್ತಾರೆ.
'ದಾಸಿಮಯ್ಯನೊಂದಿಗೆ' ಕವಿತೆ ಜೇಡರ ದಾಸಿಮಯ್ಯನ ಒಂದು ವಚನದೊಂದಿಗೆ ಸಮೀಕರಿಸಿ ಮುಖಾಮುಖಿಯಾಗುತ್ತದೆ. ದಾಸಿಮಯ್ಯ.. ಸಂತೆಯ ದಿನ ಬರುವ ಸಾವುಕಾರ ಸೀರೆಯ ಪಡೆವನು ಅಳತೆ ಹಾಕಿ ನೂಲು ಹಾಸು ರೇಷ್ಮೆಯ ಸಗಟು ಸಾಗಡ ಅವನದೇ ಹಂಗಾಗಿ ಅಂಗಡೀಲಿಟ್ಟಿರುವ ಸೀರೆಗೆ ತನ್ನದೇ ಲೇಬಲ್ ಹಾಕಿ ಎಂಥಾ ಮೋಸ ಮಾರಾಯ..! ಮೂಗು ಮಾಡಿದವರ ಬಿಟ್ಟು ಮೂಗುತಿ ಮಾಡಿದವರ.... ಅಂತಾರಲ್ಲ ಹಾಗಾಗುವುದಿಲ್ಲವೇ ಇದು? ನೀನಾದರೂ ಹೇಳು ದಾಸಿಮಯ್ಯ... ಸೀರೆ ಸಾವುಕಾರನದೋ.. ನೇಕಾರನದೋ..’ ಎಂದು ಬಹುಮುಖ್ಯ ಪ್ರಶ್ನೆ ಎತ್ತುತ್ತಾರೆ. ‘ಮನುಷ್ಯರು ಬೇಕಾಗಿದ್ದಾರೆ ’ ಕವಿತೆಯೂ ಮನುಷ್ಯನ ಸೋಗಲಾಡಿತನವನ್ನು, ತಿಕ್ಕುಲತನವನ್ನು ತೀಡಿ ಹೇಳುತ್ತದೆ. ವ್ಯಂಗ್ಯ-ವಿಡಂಬನೆಯು ಈ ಕಾವ್ಯದ ಗುಣವಾಗಿದೆ.
ಲಕ್ಷ್ಮಣ ಬದಾಮಿ ಬಾಗಲಕೋಟೆ ಜಿಲ್ಲೆಯ ಸಿರೂರ ಅವರ ಸ್ವಂತ ಊರು. ವೃತ್ತಿಯಿಂದ ಚಿತ್ರಕಲಾ ಶಿಕ್ಷಕರು. ‘ಭವ’, ‘ಬೇರು ಮತ್ತು ಬೆವರು’, ‘ಒಂದು ಚಿಟಿಕೆ ಮಣ್ಣು’ ಅವರ ಕಥಾಸಂಕಲನಗಳು. ‘ಮನುಷ್ಯರು ಬೇಕಾಗಿದ್ದಾರೆ’ ಅವರ ಪ್ರಕಟಿತ ಕವನ ಸಂಕಲನ. ‘ರೂಪ ನಿರೂಪ’ ಪೇಂಟಿಂಗ್ಸ್ ಗಳ ಕುರಿತ ಕೃತಿಯಾಗಿದೆ. ‘ಬಿಸಿಲ ಸೀಮೆಯ ಜಾನಪದ ಸಿರಿ’ ಅವರ ಸಂಪಾದಿತ ಕೃತಿ. ಅವರ ‘ಬೇರು ಮತ್ತು ಬೆವರು’ ಕೃತಿಗೆ ಬೇಂದ್ರೆ ಗ್ರಂಥ ಬಹುಮಾನ, ‘ಒಂದು ಚಿಟಿಕೆ ಮಣ್ಣು’ ಕಥೆಗೆ ಗುಲಬರ್ಗಾ ವಿಶ್ವವಿದ್ಯಾಲಯದ ಚಿನ್ನದ ಪದಕ ದೊರೆತಿದ್ದು ಇದೇ ಶೀರ್ಷಿಕೆಯ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ದೊರೆತಿದೆ. ...
READ MORE