ಲಾವೋನ ಕನಸು

Author : ರಾಜೇಂದ್ರ ಪ್ರಸಾದ್

Pages 108

₹ 99.00




Year of Publication: 2014
Published by: ಸಂಕಥನ
Address: 72, 6ನೇ ಅಡ್ಡರಸ್ತೆ, ಉದಯಗಿರಿ, ಮಂಡ್ಯ-571401
Phone: 9886133949

Synopsys

ಹರೆಯದ ಮನಸ್ಸಿನ ತಲ್ಲಣ, ಕನಸುಗಳನ್ನೆಲ್ಲ ತಮ್ಮ ಕವಿತೆಯಲ್ಲಿ ಕವಿ ರಾಜೇಂದ್ರ ಪ್ರಸಾದ್ ಅಭಿವ್ಯಕ್ತಿ ಪಡಿಸಿದ್ಧಾರೆ. ತಮ್ಮ ಹೊಸ ಸಂವೇದನೆ, ಶುದ್ದ ಭಾವಲೋಕದೊಂದಿಗೆ ಕಾಣಿಸುವ ಕವಿತೆಗಳು ಉತ್ಕಟ ಪ್ರೇಮ-ಕಾಮ, ಸಂದೇಹಗಳು, ರಾಜಕೀಯ ಪ್ರಜ್ಞೆ ಅಧ್ಯಾತ್ಮದ ಭಾವಗಳು ಓದುಗರನ್ನು ಬೆರಗಾಗಿಸುತ್ತವೆ. ಭಾವಕ್ಕೆ ತಕ್ಕ ಭಾಷೆಯ ಸಂವೇದನೆ ಭಾವಕೋಶವನ್ನು ತಟ್ಟುವಲ್ಲಿ ಸಫಲವಾಗುತ್ತವೆ. ಈ ಕವನ ಸಂಕಲನಕ್ಕೆ 2016ರ ಕಡೆಂಗೊಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ ದೊರೆತಿದೆ.

About the Author

ರಾಜೇಂದ್ರ ಪ್ರಸಾದ್
(19 March 1987)

ತುಮಕೂರು ಜಿಲ್ಲೆ ಹುಲಿಯೂರು ದುರ್ಗದ ಕೊಡವತ್ತಿಯಲ್ಲಿ ಜನಿಸಿದ ರಾಜೇಂದ್ರ ಪ್ರಸಾದ್ ಪ್ರಸ್ತುತ ಮಂಡ್ಯದಲ್ಲಿ ನೆಲೆಸಿದ್ದಾರೆ. 1987 ಮಾರ್ಚ್ 19ರಂದು ಜನನ. ಎಂ.ಕಾಂ.ಪದವೀಧರರಾದ ಅವರು ಸ್ವಂತ ಉದ್ದಿಮೆಯೊಂದನ್ನು ನಡೆಸುತ್ತಿದ್ದಾರೆ. ಕಾವ್ಯ, ತತ್ವಶಾಸ್ತ್ರ,  ಕರ್ನಾಟಕ ಸಂಗೀತ, ಝೆನ್ ಪೇಟಿಂಗ್, ಬೌದ್ಧಮತ ಅಧ್ಯಯನ, ಪಾಕಶಾಸ್ತ್ರದಲ್ಲಿ ಅಪಾರ ಆಸಕ್ತಿ ಹೊಂದಿರುವ ಅವರು ಕಾವ್ಯದ ಬಗ್ಗೆ ವಿಶೇಷ ಪ್ರೀತಿಯುಳ್ಳವರು. ಭೂಮಿಗಂಧ - 2006, ಚಂದ್ರನೀರ ಹೂವು – 2013, ಒಂದಿಷ್ಟು ಪ್ರೀತಿಗೆ, ಕವಿತೆಗಳು – 2013, ಕೋವಿ ಮತ್ತು ಕೊಳಲು - 2014, ಲಾವೋನ ಕನಸು - 2016, ಬ್ರೆಕ್ಟ್ ಪರಿಣಾಮ - 2018, ನೀರೊಳಗೆ ಮಾಯದ ಜೋಳಿಗೆ - 2018 ಅವರ ಕವನ ಸಂಕಲನಗಳು. 'ಸಂಕಥನ' ಸಾಹಿತ್ಯ ಪತ್ರಿಕೆಯ ಸಂಪಾದಕರು ಮತ್ತು ಪ್ರಕಾಶರು ಆಗಿದ್ದಾರೆ. ಅವರ ...

READ MORE

Excerpt / E-Books

ಘೋಷಣೆ ಮತ್ತು ಜಾಹೀರಾತುಗಳ ಗಡಿ ದಾಟುವ ಕವಿತೆಗಳು ಕನ್ನಡ ಸಾಹಿತ್ಯದ ಇತಿಹಾಸವನ್ನು ನೋಡಿದವರಿಗೆ ಅದು ಸುಮಾರು ಇನ್ನೂರು ವರ್ಷಗಳಿಗೊಮ್ಮೆ ತೀವ್ರವಾಗಿ ಬದಲಾಗುತ್ತಾ ಹೋದ ವಿಷಯ ತಿಳಿಯುತ್ತದೆ. 10ನೇ ಶತಮಾನದಲ್ಲಿ ಆದಿ ಕವಿ ಪಂಪನಿಂದ ಆರಂಭವಾದ ಚಂಪೂ ಪರಂಪರೆ ಮುಂದೆ 12ನೇ ಶತಮಾನದ ಹೊತ್ತಿಗೆ ವಚನ ಸಾಹಿತ್ಯಕ್ಕೆ ಸ್ಥಳ ಬಿಟ್ಟುಕೊಟ್ಟಿತು. 14ನೇ ಶತಮಾನದಲ್ಲಿ ಭಕ್ತಿ ಪ್ರಧಾನ ಸಾಹಿತ್ಯ ಬೆಳೆದು ಬಂದರೆ, 16ನೇ ಶತಮಾನದಿಂದೀಚೆಗೆ ಶಾಸ್ತ್ರ ಸಾಹಿತ್ಯ ಮೇಲುಗೈ ಸಾಧಿಸಿತು. 18ನೇ ಶತಮಾನವು ಹಲವು ಬಗೆಯ ಅನುವಾದಗಳಿಗೆ ಸಾಕ್ಷಿಯಾಯಿತು. 20ನೇ ಶತಮಾನದಲ್ಲಿ ಹೊಸಗನ್ನಡ ಸಾಹಿತ್ಯ ಆರಂಭವಾಯಿತು. ಹೀಗೆ ಸುಮಾರಾಗಿ 200 ವರ್ಷಗಳಿಗೊಮ್ಮೆ ಬದಲಾಗುತ್ತಾ ಬಂದ ಕನ್ನಡ ಸಾಹಿತ್ಯವು 20ನೇ ಶತಮಾನದಲ್ಲಿ ಮಾತ್ರ ನಾಲ್ಕು ಬಾರಿ ಬದಲಾಯಿತು. ಅದನ್ನೀಗ ನಾವು ನವೋದಯ ( 1900-1940), ಪ್ರಗತಿ ಶೀಲ ( 1940-50), ನವ್ಯ ( 1950-1975) ಮತ್ತು ಬಂಡಾಯ –ದಲಿತ ( 1975-1990) ಸಾಹಿತ್ಯ ಘಟ್ಟಗಳೆಂದು ಗುರುತಿಸುತ್ತೇವೆ. ಈ ಗುರುತಿಸುವಿಕೆಯು ಸ್ಥೂಲವಾಗಿ ಸಾಹಿತ್ಯ ಪರಂಪರೆಯೊಂದು ಕ್ರಿಯಾಶೀಲವಾಗುತ್ತಿರುವುದನ್ನು ಸಂಕೇತಿಸುತ್ತದೆಯೇ ವಿನಾ ಬೇರೇನಿಲ್ಲ.

ಇದು ಹೌದಾದರೆ, 200 ವರ್ಷಗಳಿಗೊಮ್ಮೆ ಸ್ಥೂಲವಾಗಿ ಬದಲಾಗುತ್ತಾ ಹೋದ ಕನ್ನಡ ಸಾಹಿತ್ಯವು 20 ನೇ ಶತಮಾನದಲ್ಲಿ ಇದ್ದಕ್ಕಿದ್ದಂತೆ ನಾಲ್ಕು ಬಾರಿ ಬದಲಾದದ್ದೇಕೆ ಎಂಬ ಪ್ರಶ್ನೆ ಉದಿಯಿಸುತ್ತದೆ. ಈ ಪ್ರಶ್ನೆಯು ಮೂಲತಃ ನಮ್ಮ ಸೃಜನಶೀಲ ಚಟುವಟಿಕೆಗಳು ಸಮಕಾಲೀನ ಸಮಾಜದೊಂದಿಗೆ ಹೊಂದಿರುವ ಸಂಬಂಧವನ್ನು ಸ್ಪಷ್ಟಪಡಿಸುತ್ತದೆ. ಈ ಸಂಬಂಧಗಳ ಸ್ವರೂಪ ಮತ್ತು ಪರಿಣಾಮಗಳನ್ನು ಚಾರಿತ್ರಿಕವಾಗಿ ವಿಶ್ಲೇಷಿಸುವುದು ನನ್ನ ಉದ್ದೇಶವಲ್ಲ. ಆದರೆ, ಅದನ್ನು ಈ ಕವನ ಸಂಕಲನದ ಲೇಖಕ ರಾಜೇಂದ್ರ ಪ್ರಸಾದ್ ಅವರ ಕವಿತೆಗಳ ಸಂದರ್ಭದಲ್ಲಿರಿಸಿ ನೋಡಬೇಕೆಂದು ನಾನು ಬಯಸುತ್ತೇನೆ. ಏಕೆಂದರೆ ಅವರ ಕವಿತೆಗಳು ಕನ್ನಡ ಕಾವ್ಯ ಹಿಡಿಯುತ್ತಿರುವ ಹೊಸ ಹಾದಿಯನ್ನು ಸಂಕೇತಿಸುತ್ತಿರುವಂತೆ ನನಗೆ ಭಾಸವಾಗುತ್ತಿದೆ. ನಮಗೆಲ್ಲ ತಿಳಿದಿರುವಂತೆ, ಕಳೆದ ಸುಮಾರು 20 ವರ್ಷಗಳಲ್ಲಿ ಜಗತ್ತು ತೀವ್ರವಾಗಿ ಬದಲಾಗಿದೆ. 90ರ ದಶಕದಲ್ಲಿ ಜಾರಿಗೆ ಬಂದ ಆರ್ಥಿಕ ಉದಾರೀಕರಣವು ಜಗತ್ತಿನ ರೀತಿ ನೀತಿಗಳನ್ನು ಆಳವಾಗಿ ಬದಲಾಯಿಸಿದೆ. ಮೂಲತಃ ಆರ್ಥಿಕ ಉದಾರೀಕರಣ ಎಂಬ ಪದವು ಅರ್ಥಶಾಸ್ತ್ರಕ್ಕೆ ಸಂಬಂಧಿಸಿದೆಯಾದರೂ ಇಂದು ಅದು ಮಾನವ ಬದುಕಿನ ಎಲ್ಲ ಅಂಗಗಳಿಗೂ ವ್ಯಾಪಿಸಿಕೊಂಡು ಒಂದು ಸಾಂಸ್ಕೃತಿಕ ಪದವಾಗಿ ಪರಿವರ್ತನೆ ಹೊಂದಿದೆ. ನಾವಿಂದು ಹೊಸ ತಲೆಮಾರೆಂದು ಗುರುತಿಸುವ 20-30 ವರ್ಷಗಳ ನಡುವಣ ವಯಸ್ಸಿನವರು ಈ ಹೊಸ ಸಂಸ್ಕೃತಿಯ ಪರಿಣಾಮ ಮತ್ತು ಅದರ ವಾರೀಸುದಾರರು. ರಾಜೇಂದ್ರ ಪ್ರಸಾದ್ ಅವರಂಥ ಸೂಕ್ಷ್ಮ ಮನಸ್ಸಿನ ಕೆಲವರನ್ನು ಹೊರತು ಪಡಿಸಿದರೆ, ಬಹುತೇಕ ಯುವಕರು ಜಾಗತೀಕರಣದ ಪರಿಕಲ್ಪನೆ. ಆಶಯ, ಯೋಜನೆ ಮತ್ತು ಗುರಿಗಳನ್ನು ವ್ಯಕ್ತಿ ಕೇಂದ್ರಿತ ಮತ್ತು ಖಾಸಗಿ ಮಾರುಕಟ್ಟೆಯ ಗ್ರಾಹಕ ಉದ್ದೇಶಗಳಿಗೆ ಅನುಗುಣವಾಗಿ ಮರು-ವಿನ್ಯಾಸಗೊಳಿಸಿಕೊಂಡು ಬೆಳೆಯುತ್ತಿದ್ದಾರೆ. ಇವರಿಗೆ ವಾಸ್ತವವಾಗಿ ಚರಿತ್ರೆಯೂ ಬೇಡ, ವರ್ತಮಾನವೂ ಬೇಡ. ಆದರೆ ಅವುಗಳ ಕುರಿತಾದ ಕೆಲವು ಘೋಷಣೆಗಳು ಬೇಕು, ಜಾಹೀರಾತುಗಳು ಬೇಕು. ಈ ಘೋಷಣೆಗಳನ್ನು ಕಟ್ಟಿದ, ಜಾಹೀರಾತುಗಳನ್ನು ಆಗು ಮಾಡಿದ ವ್ಯಾಪಾರಿಗಳ ಭಾಷೆಯ ಅರ್ಥ ತಿಳಿಯದವರೊಡನೆ ಜನರ ಒಟ್ಟು ನಿರೀಕ್ಷೆಗಳು, ಮತ್ತು ಧೋರಣೆಗಳು ಕೂಡ ಬದಲಾಗುತ್ತಾ ಹೋಗುತ್ತಿವೆ. ನನಗೆ ರಾಜೇಂದ್ರ ಪ್ರಸಾದ್ ಅವರ ಕವಿತೆಗಳು ತುಂಬಾ ಮುಖ್ಯವಾಗಿ ತೋರುವುದು, ಅವರು ಘೋಷಣೆ ಮತ್ತು ಜಾಹೀರಾತುಗಳ ಭಾಷೆಯಿಂದ ದೂರ ಸರಿದಿದ್ದಾರೆ ಎಂಬ ಕಾರಣಕ್ಕೆ. ಜಾಗತೀಕರಣ ತಂದು ಕೊಟ್ಟ ಲೌಕಿಕ ಆಸೆ ಮತ್ತು ಒತ್ತಡಗಳನ್ನು ನಿರಾಕರಿಸಿ, ಅವರು ಕಾವ್ಯಕ್ಕೆ ಒಂದು ಬಗೆಯ ಮೌನ ಮತ್ತು ನಿಗೂಢತೆಯ ಆಯಾಮವನ್ನು ತಂದು ಕೊಟ್ಟಿದ್ದಾರೆ. ಇದು ಪರೋಕ್ಷವಾಗಿ ಸಮಕಾಲೀನ ಜಗತ್ತಿನ ಮುಖ್ಯ ಆಶಯಗಳಿಗೆ ಒಡ್ಡಿದ ತೀವ್ರವಾದ ಸವಾಲು ಮತ್ತು ತೋರಿದ ಆಳವಾದ ಪ್ರತಿಭಟನೆ. ಈ ಅರ್ಥದಲ್ಲಿ ಜಗತ್ತಿನೊಡನೆ ಇಂದು ಗಂಭೀರವಾಗಿ ಸಂವಾದಿಸಬೇಕಾದ ಒಂದು ಕ್ರಮವನ್ನು ರಾಜೇಂದ್ರ ಅವರು ತಮ್ಮ ಕವಿತೆಗಳಲ್ಲಿ ತೋರಿಸಿಕೊಟ್ಟಿದ್ದಾರೆ. ಇಷ್ಟು ಹೇಳಿದ ಆನಂತರ ನಾನು ಮತ್ತೆ ಅವರ ಕವಿತೆಗಳನ್ನು ಇಲ್ಲಿ ವಿಶ್ಲೇಷಣೆಗೆ ಎತ್ತಿಕೊಳ್ಳಬೇಕಾಗಿಲ್ಲ. ಆದರೂ, ಒಂದೆರಡು ಕವಿತೆಗಳನ್ನು ಉದಾಹರಣೆಗಾಗಿ ಮಾತ್ರ ನೀಡುತ್ತಿದ್ದೇನೆ. ಸಂಕಲನದ ಮೊದಲ ಕವಿತೆಯಾದ ‘ ಪ್ರಾರ್ಥನೆ’ ಇಂತಿದೆ- ‘ ಪ್ರಭುವೇ, ಎಂದೂ ಏನೂ ಕೇಳದ ನಾನು ಮಂಡಿಯೂರಿ ಬೊಗಸೆಯಷ್ಟು ಪ್ರೀತಿ ಬೇಡಿದೆ ನಿನ್ನ ಕರುಣೆಯ ಖಡ್ಗ ಕೈಯನ್ನೇ ಕತ್ತರಿಸಿತು. ಸಾವರಿಸಿಕೊಂಡು ಕಾಣಲು ಯತ್ನಿಸಿದೆ, ಕಣ್ಣನ್ನೇ ಇಂಗಿಸಿದೆ. ಕಿವಿಗೊಟ್ಟು ಆಲಿಸಲೋದರೆ, ತಮಟೆಯನ್ನೇ ಒಡೆದುಹಾಕಿದೆ. ಹೇಳಿಕೊಳ್ಳಲು ಶುರುವಾದೆ ನಾಲಿಗೆ ಬೀಳಿಸಿದೆ. ಏನೂ ತೋಚದೆ ಕಡೆಗೆ ಎದೆಯನ್ನೇ ನನಗಿತ್ತು ಶರಣಾದ ಬಳಿಕ ನಾವಿಬ್ಬರೂ ಶವವಾಗಿ ಹೋದೆವು ಭಕ್ತ ಸತ್ತ ಬಳಿಕ ದೇವನುಳಿಯಲಿಲ್ಲ’ ( ಪುಟ: 15) ಈ ಕವನ ಭಕ್ತ ಮತ್ತು ಭಗವಂತನ ನಡುವಣ ಸಂಬಂಧವನ್ನು ಹೊಸ ಬಗೆಯಲ್ಲಿ ಕಂಡರಿಸುತ್ತದೆ. ನಮ್ಮ ಹಳೆಯ ಕ್ರಮಗಳಲ್ಲಿ ಭಕ್ತನು ಭಗವಂತನಲ್ಲಿ ಐಕ್ಯನಾಗಬಯಸುತ್ತಾನೆ. ಇದು ಶರಣಾಗತ ಭಾವದ ಭಜನಾ ಭಾಷೆಯನ್ನು ಸೃಷ್ಟಿಸಿ, ಜೀವದ ಅಂತಿಮ ಗುರಿ ಶರಣಾಗತಿಯೇ ಎಂದು ಘೋಷಿಸುತ್ತದೆ. ಈಚಿನ ದಿನಗಳಲ್ಲಿ ವೈಜ್ಞಾನಿಕ ಅನ್ವೇಷಣೆಗಳು ಹೆಚ್ಚಾಗುತ್ತಿದ್ದಂತೆ ದೇವರ ಅಸ್ತಿತ್ವವನ್ನೇ ನಿರಾಕರಿಸುವ ಪ್ರವೃತ್ತಿ ಬೆಳೆಯುತ್ತಿದೆ.ಇಂಥ ಚಿಂತನಾ ಕ್ರಮವು ದೇವರೊಡನೆ ಜಗಳಾಡುವ ಬಂಡಾಯದ ಭಾಷೆಯನ್ನು ಸೃಷ್ಟಿಸುತ್ತದೆ. ಇವೆರಡೂ ಕ್ರಮಗಳನ್ನು ಮೀರುವ ರಾಜೇಂದ್ರರು ಭಕ್ತನನ್ನು ಭಗವಂತನೇ ಹಂತ ಹಂತವಾಗಿ ನಾಶಮಾಡುವ ವಿನೂತನ ಕ್ರಮವನ್ನು ಅನುಸರಿಸುತ್ತಾ, ಕೊನೆಗೆ ಭಕ್ತನಿಲ್ಲದೆ ಭಗವಂತನೂ ಇಲ್ಲವಾಗಿಬಿಡುವ ಅದ್ಭುತವನ್ನು ಒದುಗರ ಮುಂದಿಡುತ್ತಾರೆ. ಭಕ್ತನ ಯಾವ ಬೇಡಿಕೆಗಳನ್ನೂ ಈಡೇರಿಸದೆ, ಕೇವಲ ಕ್ರೌರ್ಯದಿಂದ ವರ್ತಿಸುವ ಪ್ರಭುವು ಅದೇ ಕಾರಣಕ್ಕೆ ತಾನೇ ಇಲ್ಲವಾಗುವ ಇಲ್ಲಿಯ ಕಾವ್ಯ ಪ್ರತಿಮೆಗೆ ಅನೇಕ ಬಗೆಯ ಅರ್ಥವ್ಯಾಪ್ತಿ ಇರುವುದನ್ನು ಮರೆಯಬಾರದು. ನಾನು ಆರಂಭದಲ್ಲಿ ಹೇಳಿದ ಗ್ರಾಹಕ ಕೇಂದ್ರಿತ ಅರ್ಥವ್ಯವಸ್ಥೆಯಲ್ಲಿ ಬಂಡವಾಳಗಾರ ಮತ್ತು ಗ್ರಾಹಕರ ನಡುವಣ ಸಂಬಂಧಗಳೂ ಹೀಗೆಯೇ ಇರುತ್ತದೆ. ಅವು ಒಂದಕ್ಕೊಂದು ಎಷ್ಟು ಅಂಟಿಕೊಂಡಿವೆ ಎಂದರೆ, ಒಂದನ್ನು ಬಿಟ್ಟು ಇನ್ನೊಂದಿರಲಾರದು. ಹೀಗೆ ಹೊಸ ಅನುಭವವನ್ನು ಕೊಡುವ ರಾಜೇಂದ್ರರ ಕವಿತೆಗಳು, ಅದರ ಜೊತೆ ಜೊತೆಗೆ ಬಹುರೂಪೀ ಅರ್ಥಗಳಿರುವುದನ್ನೂ ತೆರೆದಿಡುತ್ತದೆ. ಒಳ್ಳೆಯ ಕವಿತೆಗಳ ಲಕ್ಷಣವೇ ಅದು. ಗಮನಿಸಬೇಕಾದ ಇನ್ನೊಂದು ಮುಖ್ಯವಾದ ಅಂಶವೆಂದರೆ, ಕಾರಣಾಂತರಗಳಿಂದ ಸ್ವಲ್ಪ ಜಡವಾಗಿಬಿಟ್ಟಿರುವ ಕಾವ್ಯ ಭಾಷೆಗೆ ರಾಜೇಂದ್ರರು ಹೊಸ ಕಸುವು ತುಂಬಿರುವುದು. ಸಮಕಾಲೀನ ಜಗತ್ತ್ತಿಗೆ ಅತಿಯಾಗಿ ಅಂಟಿಕೊಂಡಿರುವ ಕಾವ್ಯವು ಸದಾ ತನ್ನ ಮೂಲ ಗುಣವಾದ ಮಾಂತ್ರಿಕತೆಯಿಂದ ದೂರ ಸರಿಯುತ್ತದೆ. ಆಗ ಪ್ರತಿಭಾಶಾಲಿ ಕವಿಗಳು,ಜಡ್ಡುಗಟ್ಟಿದ ಭಾಷೆಯನ್ನು ಮುರಿದು, ಅದನ್ನು ಹೊಸದಾಗಿ ಕಟ್ಟುತ್ತಾರೆ. ಕಾವ್ಯಕ್ಕೆ ಮಾಂತ್ರಿಕತೆಯ ಸ್ವರೂಪ ನೀಡುತ್ತಾರೆ. ಯಾರು ಭಾಷೆಯನ್ನು ಮುರಿದು ಕಟ್ಟಬಲ್ಲರೋ ಅವರಿಗೆ ಕಾವ್ಯ ಒಲಿದಿದೆ ಎಂದೇ ಅರ್ಥ. ಹೀಗೆ ಭಾಷೆಯನ್ನು ಮಾಂತ್ರಿಕಗೊಳಿಸಿದ ಕವಿಗಳ ದೊಡ್ಡ ಪಟ್ಟಿಯೇ ಕನ್ನಡದಲ್ಲಿ ಸಿಗುತ್ತದೆ. ಈ ಸಾಲಿಗೆ ಸೇರಬಲ್ಲ ಶಕ್ತಿ ಇರುವ ಕವಿ ರಾಜೇಂದರ ಪ್ರಸಾದ್. ಅವರಿಗೆ ಕಾವ್ಯ ಭಾಷೆಯನ್ನು ಹೊಸದು ಗೊಳಿಸುವ ಶಕ್ತಿಯೂ ಇದೆ, ಹೊಸದು ಗೊಳಿಸಲು ಕಾಯುವಷ್ಟು ತಾಳ್ಮೆಯೂ ಇದೆ. ಈ ಸಂಕಲನದ ‘ ಕತ್ತಲಿಗೆ ಅಡವಿತ್ತ ಬೆತ್ತಲ ಮೈ’ ಕವನದ ಭಾಷೆಯನ್ನು ಗಮನಿಸಿ- ‘ ಹಸಿದ ಉರಿಮೈ ತುಂಬಾ ಕೆಂಡದ ಮಳೆ ಆಷಾಡದ ಗಾಳಿ ಬೀಸಿದಂತೆಲ್ಲಾ ಬಾಯ್ಬಿಡುವ ಕಿಡಿಬೀಜಗಳು ಕಣ್ಣು ಮುತ್ತುಗದ ಹೂವಿನ ಬಣ್ಣ ಕಾಲುಗಳು ಕಡಲ ಕಿನಾರೆಯಂತೆಯೂ ಕೈಗಳು ಹಸಿರು ತುಂಬಿದ ಗದ್ದೆಯ ಬಯಲಂತೆಯೂ ತೋರುತ್ತಾ ಸರಿರಾತ್ರಿಯ ಹೊತ್ತಿಗೆ ಕೊಂಡದ ಮುಂದೆ ಹಸಿ ಕರಗವ ಹೊತ್ತು, ಮೈದುಂಬಿದ ದೇವರ ಬಲಬಂಟನಂತ ನುಗ್ಗುತಾನೇ ಅವನು ಉರಿಯ ಗೆಣೆಕಾರ ಉರಿಗದ್ದಿಗೆ ಹರಿಕಾರ ಉರಿಮೈಯ ಮಾಯಿಕಾರ ಅವನು’ ( ಪುಟ: 17) ಇಲ್ಲಿ ಬರುವ ಎಲ್ಲ ರೂಪಕಗಳೂ ನವ ನವೀನವಾಗಿರುವುದರಿಂದಲೇ ಕಾವ್ಯಕ್ಕೆ ಚೈತನ್ಯ ಪ್ರಾಪ್ತಿಸಿದೆ.

ಇತರ ಕೆಲವು ಕವಿತೆಗಳಲ್ಲಿ ಬರುವ ‘ ನೆನಪಿನ ಮಳೆ ನಕ್ಷತ್ರ’, ‘ಉದುರುವ ಎಲೆ ಎಂದೂ ಬೀಸುವ ಗಾಳಿಯ ದ್ವೇಷಿಸೋಲ್ಲ ‘ಧರ್ಮಯುದ್ದ ಘೋಷಣೆಗೂ ಮೊದಲು ಅಶ್ವಮೇಧ ಯಾಗ ಗ್ಯಾರಂಟಿ’, ಮೊದಲಾದ ಸಾಲುಗಳನ್ನು ತುಂಬ ಖುಷಿಯಿಂದ ಓದುವಂತಾದುದು. ಅಲ್ಲಿರುವ ರೂಪಕ ಶಕ್ತಿಯ ನಾವಿನ್ಯ ಮತ್ತು ಭಾಷೆಯ ಹೊಸತನದಿಂದ. ಚರಿತ್ರೆ ಮತ್ತು ವರ್ತಮಾನದ ಕುರಿತು ಈಚಿನ ದಿನಗಳಲ್ಲಿ ಬಹಿರಂಗ ಭಾಷಣಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿರುವ ಘೋಷಣೆಗಳು ಮತ್ತು ವಾದಗಳು ತುಂಬಾ ಪೊಳ್ಳಾದುದು. ಬಹುಮಟ್ಟಿಗೆ ರಾಜಕಾರಣಿಗಳ ಭಾಷಣಗಳಂತಿರುವ ಇವು ನಮ್ಮ ತಿಳಿವಳಿಕೆಯನ್ನು ಹೆಚ್ಚಿಸುವ ಕೆಲಸವನ್ನು ಮಾಡುವುದಿಲ್ಲ. ಇತಿಹಾಸ ಮತ್ತು ವರ್ತಮಾನಗಳ ಸಂಕೀರ್ಣ ಪರಿಸ್ಥಿತಿಗಳ ಕುರಿತು ಆಳವಾದ ತಿಳಿವಳಿಕೆ ಇಲ್ಲದೆ ಮಾತಾಡುವ ಇಂಥ ಸಂಕಥನಗಳ ನಡುವೆ ರಾಜೇಂದ್ರರು ‘ನಾಗರಿಕತೆಯ ಕೊನೆಯ ಮೆಟ್ಟಲಿ’ನ ಬಗೆಗೆ ಬರೆದ ಮಾತುಗಳನ್ನು ಓದಿಕೊಳ್ಳಬೇಕು- ‘ಪ್ರತಿಯೊಂದು ನಾಗರಿಕತೆಯು ಕಾಲಗತಿಯ ಕಂಡು ಮಣ್ಣಾಗುತ್ತದೆ, ಅವಲೋಕಿಸಿ. ಎಲ್ಲೋ ಒಂದೊಂದು ತಡ. ಅಂದ ಮಾತ್ರಕ್ಕೇನೂ ಅದರ ಕಾಲು ಹೂತಿಲ್ಲ. ದಾರಿ ನಿಂತಿಲ್ಲ. ವಯಸಾದಷ್ಟೂ ಚೇಷ್ಟೆ.  ಮೊದಲು ತಟ್ಟೆಗೆ ಕೈ ಹಾಕುತ್ತದೆ ಅಮೇಲೆ ಮೈಗೆ ಅದಾದ ಮೇಲೆ ಮೆದುಳಿಗೆ ಸುಮ್ಮನಂತೂ ಇರೋಲ್ಲ! ಕಡೆಯ ಕಲಿಗಾಲದಲ್ಲಿ ಕಿಡಿಯ ಧೂಳನ್ನ ಧೋ ಎಂದು ಮೈಮೇಲೆ ಸುರಿದುಕೊಳ್ಳುತ್ತದೆ. ಕವಿಗಳು, ಸಂತರು ಕೊರಗುತ್ತಾರೆ. ರಾಜರು, ಪುರೋಹಿತರು ಕೈಕುಲುಕುತ್ತಾರೆ. ನಾಗರಿಕತೆಯ ನಡುಹಗಲ ಕೊಲೆಗೆ ಯಾವ ಸಾಕ್ಷ್ಯವೂ ದಕ್ಕುವುದಿಲ್ಲ . ಬಲಿಗಂಬದ ಬಳಿ ಎಣಿಸಲಾರದಷ್ಟು ಮುಂಡಗಳು ಶುರುವಾಗುತ್ತದೆ’. ( ಪುಟ: 29) ಇದು ಚರಿತ್ರೆಯ ನಿರೂಪಣೆಯಾಗಿದ್ದರೆ, ವರ್ತಮಾನದ ಕತೆ ಹೀಗೆ- ‘ ಅಟ್ಟ ಸೇರಿದ್ದ ತುಕ್ಕಿನ ಖಡ್ಗಗಳಿಗೆ ಸಾಣೆ ಹಿಡಿಯಲಾಗುತ್ತಿದೆ, ಪಟ್ಟಾಭಿಷೇಕ ಆಯುಧ ಪೂಜೆ, ಶಸ್ತಾಸ್ತ್ರ ವೀಕ್ಷಣೆ, ಖಾಸಗಿ ದರ್ಬಾರು ಮೊದಲು ಮುಗಿಯಲೆಂದು ಮುಹೂರ್ತಕ್ಕೆ ಕಾಯಲಾಗಿದೆ. ಪಟ್ಟದಕುದುರೆ ಹಿಡಿದು ಕಟ್ಟಿದ್ದ ಕವಿಗಳು, ಕಲಾವಿದರು, ಜನರೂ -ಜನೋಪಕಾರಿಗಳ ಪಟ್ಟಿ ಸಿದ್ದವಾಗುತ್ತಿದೆ. ಹೆಮ್ಲಾಕ್ ವಿಷದ ಬಟ್ಟಲುಗಳು, ನೇಣುಗಂಬಗಳು ಗಿಲೋಟಿನ್ನು ಯಂತ್ರಗಳು, ಗ್ಯಾಸ್ ಚೆಂಬರುಗಳು ಈಗ ನಡೆಯುವುದಿಲ್ಲ. ಸದ್ದಿಲ್ಲದ ಪ್ರಾಣಹರಣ, ಅಧಿಕಾರದ ಕೈಗೆ ಕಾನೂನು ಸುಲಭ! ಗೋ ಗ್ರಹಣದಲಿ ಸತ್ತರೆ ದೋಷವಿಲ್ಲವಂತೆ ಹೊಸಸಂವಿಧಾನ ಭಕ್ತ ಸೇವಕರಿಂದ ಗೋ ಮೂತ್ರಪಾನ -ಪಾರಾಯಣ ಆರ್ಯಾವರ್ತದ ಉದ್ದಗಲಕ್ಕೂ ಹರತಾಳ ಕಲ್ಯಾಣ ರಾಜ್ಯಕ್ಕೆ ರಾಮರಾಜ್ಯದ ನಾಮಕರಣ! ಗದ್ದುಗೆಗೆ ಬಂದದ್ದು ಮಾತ್ರ ಕ್ರಿಮಿಸಂತಾನ. ಎಷ್ಟು ರಕ್ತವೋ ಎಷ್ಟು ರೋಗವೊ ಅಂದಾಜು ಅಡಗಿಹೋಗಿದೆ. ಹುಚ್ಚರ ಸಂತೆಯಲಿ ಜನರು ಕಳೆದುಹೋಗಿದ್ದಾರೆ’ (ಪ್ರಧಾನ ಸೇವಕರು, ಕರಸೇವಕರು ಮತ್ತು ಗೋ-ಕರು, ಪುಟ: 31) ತುಂಬ ಧೈರ್ಯದಿಂದ ವರ್ತಮಾನಕ್ಕೆ ಮುಖಾಮುಖಿಯಾದ ಕವಿತೆ ಇದು.

ಹೀಗೆ, ಈ ಕವನ ಸಂಕಲನವನ್ನು ಓದುತ್ತಾ ಹೋದಂತೆ ಹೊಸ ಅನುಭವ ಲೋಕಕ್ಕೆ ತೀವ್ರವಾಗಿ ತೆರೆದುಕೊಂಡಂತಾಗುತ್ತದೆ. ಸುಮ್ಮನೆ ಕೆಳಗಿನ ಕೆಲವು ಸಾಲುಗಳನ್ನು ಗಮನಿಸಬಹುದು- ‘ ಅಳುವ ಕಂದನಿಗಾಗಿ ಕಟ್ಟಿದ ಪದಗಳನು ಅವ್ವ ಯಾವತ್ತೂ ಬಿಕರಿಗೆ ಇಟ್ಟಿರಲಿಲ್ಲ ; ಮಣ್ಣೊಳಗೆ ಬೀಜ ಹುದುಗಿಸಿ, ಬೆಳೆದು ಬದುಕಲಾರದ ಹೆಳವನೊಬ್ಬ ಕದ್ದು ಅವುಗಳನು ಬುಟ್ಟಿಯ ತುಂಬಿ ಊರೂರು ಬೀದಿಯ ಸುತ್ತಿ ಕೂಗಿ ಕೂಗಿ ದಣಿದ. ಯಾರು ಕೊಳ್ಳುವರು ಕಳ್ಳಮಾಲನು ಎಲ್ಲ ಮನೆಗಳಲೂ ಅವ್ವಂದಿರ ಪದ, ಸಂಪದಗಳ ತಿಜೋರಿ ತುಂಬಿ ತುಳುಕಿರುವಾಗ?’ ( ಅವ್ವ ಮತ್ತು ಕವಿ, ಪುಟ 44).  ‘ಕವಿಸಭೆಯಲ್ಲಿ ಏನಿದು ಗೌಜುಗದ್ದಲ ಎಷ್ಟೇಷ್ಟು ಮಾತು ಅರಿಯದಷ್ಟು ಅಕ್ಷರ - ಚೆಲ್ಲಾಟ, ಕೂಗಾಟ, ಮೇಳಾಟ, ಮುಲುಕಾಟ! ಇಲ್ಲಿ ಕೆಪ್ಪಾದ ಕಿವಿಗಳನ್ನು ಒಮ್ಮೆ ಚುರುಕಾಗಿ ಉಪ್ಪರಿಗೆಯ ಆಚೆಗೆ ರವಷ್ಟು ಕಣ್ಣಿಟ್ಟು ಕೇಳಿಕೊಳ್ಳಿ ನೋಡಿಕೊಳ್ಳಿ ಊರ ಕೋಟೆಯ ಮೇಲೆ ಉರಿಯ ಬಾವುಟಗಳು ಏರುತ್ತಿವೆ ಹಾರುತ್ತಿವೆ. ಫಿರಂಗಿಗಳು, ಕಾಡತೂಸುಗಳ ನುಗ್ಗುತ್ತಿವೆ. ನಂಜಿನ ಹೊಗೆಯ ನೊಗಹೊತ್ತು... ಹೆಂಗಸರ ಮೈತುಂಬಾ ರಣಗಾಯಗಳು ಕೀವು ತುಂಬಿ ನರಳುತ್ತಿವೆ ಮಕ್ಕಳು, ಹಸುಗೂಸುಗಳು ಸುಟ್ಟು ಬೀದಿಯಲ್ಲಿ ಬಿದ್ದಿವೆ ಅನ್ನದ ತಟ್ಟೆಗೆ ಹುಳುಗಳು ಮುತ್ತಿ ಕೇಕೆ ಹಾಕುತ್ತಿವೆ ಹಳೇರಾಜರ ಪುತ್ಥಳಿ ನೆಲಗಚ್ಚುತ್ತಿದೆ ಹೊಸ ಪಾಳೆಯ ಪಟ್ಟಿನ ಪಟ್ಟದ ಕತ್ತಿಗೆ ನಿತ್ಯ ರಕ್ತದೋಕುಳಿ’ ( ದುರಿತಕಾಲದ ಕವಿಯ ದುಮ್ಮಾನಗಳು, ಪುಟ 55).  ‘ನಡುಹಗಲು ನೆತ್ತಿಯ ಮೇಲೆ ಕೂತು ತೂಕಡಿಸುವಾಗ ಪಶ್ಚಿಮಚೀನಾದಿಂದ ನೀರೆಮ್ಮೆಯ ಮೇಲೆ ಹೊರಟು ಲಾವೋ ತಾತ ಕಾವೇರಿಯ ದಡಕ್ಕೆ ಬಂದಿದ್ದ!’ (ಲಾವೋನ ಕನಸು, ಪುಟ: 72). ‘ಅಕ್ಕ ಕೇಳೇ ಉರಿಯು ನೀಗಿಕೊಂಡ ಮಾಗಿಯ ನಡುರಾತ್ರಿಯ ಕಲ್ಲುಕರಗುವ ಕಲಿಸಮಯದಲ್ಲಿ ಅಂಗಳದಿ ಉರಿಮಾರಿಯೊಬ್ಬಳು ನಿಂದು ಬ್ರಹ್ಮಕಪಾಲವ ಹಿಡಿದು ಎನ್ನ ತಲೆಯನ್ನೇ ಭಿಕ್ಷೆ ಬೇಡುತ್ತಿದ್ದಾಳೆ! ಗಜತೂಕದ ಮೊಲೆಗಳೆರಡು ಹಿಂದುಮುಂದಾಗಿ ತನ್ನ ತಲೆಯನ್ನು ಎರಡು ಸೀಳು ಮಾಡಿ ನಾಲ್ಕು ಕೈಗಳಲಿ ಹಿಡಿದು ಮತ್ತೆರೆಡು ಉರುಮೆಯ ಸಪ್ಪಳವ ಮಾಡುತ್ತಾ ಮಗದೆರಡು ಮದ್ಯದ ಕುಡಿಕೆ, ಕುಡುಗೋಲ ಹಿಡಿದು ಇನ್ನೆರಡು ಒಂದಾಗಿ ಕಪಾಲ ಪಾತ್ರೆಯ ರಕ್ತವ ಮೊಗೆಯುತ್ತಾ ಅವ್ವಾs ತಲೆಯಿಲ್ಲದ ಕುತ್ತಿಗೆಯಲಿ ಉರಿಯನ್ನೇ ಉಗುಳುತ್ತಾ ಭಿಕ್ಷವ ಕೂಗುತ್ತಿದ್ದಾಳೆ!’ ( ಎರಡು ಸಪುನಗಳು, ಪುಟ 74). ಹೀಗೆ ಈ ಕವನ ಸಂಕಲನದ ತುಂಬೆಲ್ಲ ಹೊಸ ವಸ್ತು, ಹೊಸ ಪರಿಭಾಷೆಗಳು ಮತ್ತು ಹೊಸ ಬಗೆಯ ಪ್ರತಿಮೆಗಳು. ಇವನ್ನು ಓದಲು, ತಿಳಿಯಲು ಸ್ವಲ್ಪ ತಯಾರಿ ಬೇಕು. ಅಷ್ಟು ಮಾಡಿಕೊಂಡರೆ ಕಾವ್ಯ ಕೊಡುವ ಸುಖವನ್ನು ಅದರ ನಿಜವಾದ ಅರ್ಥದಲ್ಲಿ ಅನುಭವಿಸಲು ಸಾಧ್ಯ. ಕನ್ನಡ ಕಾವ್ಯ ಲೋಕದ ಗಡಿ ರೇಖೆಗಳನ್ನು ಹೀಗೆ ಗಂಭೀರವಾಗಿ ವಿಸ್ತರಿಸುತ್ತಿರುವ ರಾಜೇಂದ್ರ ಪ್ರಸಾದ್ ಅವರಿಗೆ ಅಭಿನಂದನೆಗಳು.

-ಪುರುಷೋತ್ತಮ ಬಿಳಿಮಲೆ (ಕೃತಿಗೆ ಬರೆದ ಮುನ್ನುಡಿ)

Related Books