ಬಿಡು ಸಾಕು ಈ ಕೇಡುಗಾಲಕ್ಕಿಷ್ಟು

Author : ರಮೇಶ್ ಅರೋಲಿ

Pages 116

₹ 100.00
Year of Publication: 2021
Published by: ಸಂಗಾತ ಪುಸ್ತಕ
Address: ರಾಜೂರ ಅಂಚೆ, ಗಜೇಂದ್ರಗಡ ತಾಲ್ಲೂಕು, ಗದಗ ಜಿಲ್ಲೆ- 582114
Phone: 9341757653

Synopsys

ಲೇಖಕ ಹಾಗೂ ಕವಿ ರಮೇಶ ಆರೋ;ಲಿ ಅವರ ಕವನ ಸಂಕಲನ-ಬಿಡು ಸಾಕು ಈ ಕೇಡುಗಾಲಕ್ಕಿಷ್ಟು. ಒಟ್ಟು 45 ಕವಿತೆಗಳಿವೆ. ಕೃತಿಗೆ ಬೆನ್ನುಡಿ ಬರೆದ ಸಾಹಿತಿ ಪುರುಷೋತ್ತಮ ಬಿಳಿಮಲೆ ಅವರು ‘ಸರ್ವಾಧಿಕಾರದ ಕಪಿಮುಷ್ಠಿಯಿಂದ ಬಿಡುಗಡೆ ಹೊಂದುವ ಕನಸು ಕಾಣುವ ಕವಿಯ ಕವಿತೆಗಳಿಗೆ ಗಡಿರೇಖೆಗಳಿಲ್ಲ. ಕೃತಕ ರಾಷ್ಟ್ರೀಯತೆಯ ಹಂಗೂ ಇಲ್ಲ. ಕರುಣೆಯ ಕಂದನ ಊರಾದ ಜೇರುಸೆಲಂನ ಗೋಡೆಗಳು, ರಾಯಚೂರಿನ ಬೀದಿಬದಿಯ ಬಡವರ ಬಗ್ಗೆ ಹಾಡುವುದು ಆರೋಲಿಗೆ ಚೆನ್ನಾಗಿ ಗೊತ್ತು. ಇಲ್ಲಿಯ ವ್ಯಂಗ್ಯಾತ್ಮಕ ಭಾಷೆಯಲ್ಲಿ ಯಾವ ತೊಡಕೂ ಇಲ್ಲ. ಕೊರಳೆತ್ತಿದ ಗಂಟಲಿಗೆ ಕೊಳ ತೊಡಿಸುತ್ತಿರುವ ಈ ಕೇಡುಗಾಲದ ಮುಂಜಾನೆಗಳಲ್ಲಿ ಹಾಡಬೇಕಾದ ಹಾಡು ಯಾವುದು? ಕೇಳಬೇಕಾದ ಮಾತು ಯಾವುದು? ದಿನೇ ದಿನೆ ಮಣ್ಣುಪಾಲಾಗುತ್ತಿರುವ ಹೆಣ್ಣು ಜೀವಗಳ ಗೋರಿ ಮುಂದೆ ನಿಂತು ಪಠಿಸಬೇಕಾದ ಮಂತ್ರ ಯಾವುದು? ಎಂದು ಕೇಳಿಕೊಳ್ಳುತ್ತಾರೆ. ಈ ಸಂಕಲನದ ಎಲ್ಲ ಕವಿತೆಗಳಲ್ಲೂ ಉತ್ತರಗಳನ್ನು ಕೊಡುತ್ತಾರೆ. ಇಲ್ಲಿಯ ಕವಿತೆಗಳನ್ನು ಓದಿಕೊಳ್ಳುವುದು ಮತ್ತು ಹಾಡಿಕೊಳ್ಳುವುದು ಎಂದರೆ ವರ್ತಮಾನದ ಬಿಕ್ಕಟ್ಟುಗಳಿಗೆ ಧ್ವನಿಯಾಗುವುದೆಂದೇ ಅರ್ಥ’ ಎಂದು ಪ್ರಶಂಸಿಸಿದ್ದಾರೆ. 

 

About the Author

ರಮೇಶ್ ಅರೋಲಿ
(10 July 1982)

ಕವಿ ರಮೇಶ ಅರೋಲಿ ಅವರು ಮೂಲತಃ ರಾಯಚೂರು ಜಿಲ್ಲೆಯ ಅಸ್ಕಿಹಾಳದವರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಎಳೆಯ ಪಾಪದ ಹೆಸರು ನಿಮ್ಮಂತೆ ಇಟ್ಟುಕೊಳ್ಳಿ (2010), ಜುಲುಮೆ (2014), ಒಳ ಮೀಸಲಾತಿ-ಮುಟ್ಟಲಾರದವನ ತಳಮಳ (ಸಹಸಂಪಾದನೆ) (2014), ಬಂಡಾಯದ ಬೋಳಬಂಡೆಪ್ಪ (ರಾಯಚೂರಿನ ದಲಿತ-ಬಂಡಾ ಚಳವಳಿಗಾರ ಬೋಳಬಂಡೆಪ್ಪನ ಬದುಕು-ಬರಹ), ತೀನ್‌ ಕಂದೀಲ್‌ (ನಾಟಕ) "ಬಿಡು ಸಾಕು ಈ ಕೇಡುಗಾಲಕ್ಕಿಷ್ಟು" (2021) (ಕವನ ಸಂಕಲನ) ಕೃತಿಗಳನ್ನು ರಚಿಸಿದ್ದಾರೆ. ಶಿವಮೊಗ್ಗ ಕರ್ನಾಟಕ ಸಂಘದ ಡಾ. ಜಿ.ಎಸ್‌. ಶಿವರುದ್ರಪ್ಪ ಕಾವ್ಯ ಪ್ರಶಸ್ತಿ, ಡಾ. ಪು.ತಿ.ನ. ಕಾವ್ಯ ಪುರಸ್ಕಾರ, ಬಿಡಿಗವಿತೆಗಳಿವೆ ಸಂಚಯ, ಸಂಕ್ರಮಣ, ಪ್ರಜಾವಾಣಿ ಕಾವ್ಯ ಸ್ಪರ್ಧೆಯಲ್ಲಿ ...

READ MORE

Reviews

‘ಬಿಡು ಸಾಕು ಈ ಕೇಡುಗಾಲಕ್ಕಿಷ್ಟು’ ಕೃತಿಯ ವಿಮರ್ಶೆ

ಲಯಬದ್ಧ ಕವಿತೆ ಅಂದಾಕ್ಷಣ ಅಂಥವನ್ನು ಭಾವಗೀತೆಗಳ ಸಾಲಿಗೆ ಸುಲಭವಾಗಿ ಸೇರಿಸಿಬಿಡುವ ಮುನ್ನ ‘ಬಿಡು ಸಾಕು ಈ ಕೇಡುಗಾಲಕ್ಕಿಷ್ಟು’ ಸಂಕಲನದಲ್ಲಿರುವ ಕವನಗಳನ್ನು ಒಮ್ಮೆ ಗಮನವಿಟ್ಟು ಓದಬೇಕು. ಗೇಯಗೀತೆಗಳ ,ಮೂಲಕವೇ ಗಾಢವಾದ ವಿಷಾದವನ್ನೂ ನಿತ್ಯದ ಬದುಕಿನಲ್ಲಿ ಕಾಣುವ ಅಮಾನವೀಯತೆಯನ್ನೂ ಇಷ್ಟು ಪ್ರಖರವಾಗಿ ತೆರೆದಿಡಬಹುದೇ ಎಂದು ಇಲ್ಲಿ ಅಚ್ಚರಿ ಮೂಡಿಸುತ್ತಾರೆ. ಕವಿ ರಮೇಶ ಆರೋಲಿ. ಅವರ ಈ ಕವನ ಸಂಕಲನದಲ್ಲಿರುವ 44 ಕವನಗಳಲ್ಲಿ ಬಹುಪಾಲು ಕವನಗಳು ರಾಗವಾಗಿ ಹಾಡಬಹುದಾದ ಸಾಲುಗಳಲ್ಲೇ ಸುಡುಸುಡು ವ್ಯಂಗ್ಯವನ್ನೂ ತಳಸುಮುದಾಯದ ಬದುಕನ್ನೂ ತೆರೆದಿಡುವಂಥವು.

‘ಊರ ಮ್ಯಾರಿಗೆಲ್ಲ ಉಕ್ಕಿನ ಗಿಡವಾಗಿ/ ಗಾಳಿಯ ಅಲೆಯೆಲ್ಲ ಕಂಪನಿ ಅಡವಾಗಿ/ ಚಿಲಿಪಿಲಿ ಸದ್ದಡಗಿತೋ ಗಿಳಿರಾಮ/ ಚೀರೋದು ರದ್ದಾಯಿತೋ ಗಿಳಿರಾಮ’ ಎಂಬ ಸಾಲುಗಳಲ್ಲಿ ನಾಡು ಕೈಗಾರೀಕರಣದ ಪಾಲಾದ ಕಥೆಯಿದು. ‘ಹೊಡೆವ ಕೈಯೊಂದು ತಡೆಯದ ನೂರೊಂದು/ ನಿಂತು ನೋಡಿತ್ತ ಅಲ್ಲೊಂದು! ಇಲ್ಲೊಂದು/ಸಂಗತಿ ನೋಡ ಖುದ್ದು ಬಂದು’ (ಗುಬ್ಬಿಯ ಕಣ್ಣಾಗ ಗುಲಗಂಜಿ ಮೂಡ್ಯಾವ) ಎನ್ನುತ್ತಾ ಕವನ ಶೋಷಣೆಯ  ವಿರುದ್ಧ ಕೆಂಡ ಕಾರುತ್ತದೆ. ಕೃತಿಗೆ ಶೀರ್ಷಿಕೆ ಕೊಟ್ಟ ‘ಬಿಡು ಸಾಕು ಈ ಕೇಡುಗಾಲಕ್ಕಿಷ್ಟು’ ಕವನದಲ್ಲಂತೂ, ‘ಹ್ಯಾಪಿ ಯುಗಾದಿ’ ಯೆಂಬ ಕಂಪನಿಯ ಜಾಹೀರಾತಿಗೆ / ಖುಷಿ ಹಚ್ಚಿ ಗಾಳಿಮಾತಿನಲಿ ತೊಡಗಿರುವವರ ನಡುವೆ/ ಮೂಗರಿಬ್ಬರ ಸನ್ನೆ ಕೇಳಿ ಎಲೆಗಳಾದರೂ ಅಲುಗುವುದಿಲ್ಲ/ ಬಿಡು ಸಾಕು  ಇಷ್ಟು ಈ ಕೇಡುಕಾಲಕ್ಕೆ ಎಂಬಂತಹ ಕಂಪಿಸುವ ಸಾಲುಗಳು ಹಲವು, ಲಯಕ್ಕೆ ಹೊರತಾದ ಕವನಗಳನ್ನೂ ಯಶಸ್ವಿಯಾಗಿ ಬರೆದಿದ್ದಾರೆ ಆರೋಲಿ. ಅವರ ಕಾವ್ಯಮಾರ್ಗವನ್ನು ದೇಸಿ ಪರದೇಸಿಗಳ ಕಾಲ ಮಾಡಿಕೊಂಡ ಮಾರ್ಗ ಎಂದಿರುವ ಕವಯಿತ್ರಿ ಲಲಿತಾ ಸಿದ್ದಬಸವಯ್ಯ. ‘ಆರೋಲಿಯವರು ಮಾಡಿರುವುದು ಸುಣ್ಣದ ಕುದಿಯನ್ನು ಅರಳೀಮರದ ಕೊಂಬೆಗೆ ಬೆಸೆದಂತಹ ಕಸಿ, ಅದು ವಿರೋಧಾಭಾಸವನ್ನೇ ಕಕ್ಕುವಂಥದ್ದು, ಅದು ಸಾಲೂ ಸಾಲಲ್ಲೂ ಒಡೆದು ಕಾಣಿಸಬಹುದಾದ ಎಲ್ಲಾ ಸಾಧ್ಯತೆಗಳನ್ನೂ ಕವಿ ಪ್ರತಿಭೆಯ ಮೂಲಕ ನಿವಾರಿಸಿಕೊಂಡಿದ್ದಾರೆ ಎಂದಿದ್ದಾರೆ. 

(ಕೃಪೆ ; ವಿಜಯಕರ್ನಾಟಕ, ಬರಹ ; ವಿದ್ಯಾರಶ್ಮಿ)

Related Books