ದೇವರಿಗೆ ಹೋದೆವು

Author : ಸವಿತಾ ನಾಗಭೂಷಣ

Pages 140

₹ 100.00




Year of Publication: 2018
Published by: ರೂಪ ಪ್ರಕಾಶನ
Address: ನಂ. 2406,2407/K -1 1ನೇ ಕ್ರಾಸ್, ಹೊಸಬಂಡಿಕೇರಿ ಕೆ.ಆರ್. ಮೊಹಲ್ಲ, ಮೈಸೂರು - 570004
Phone: 9342274331

Synopsys

ಕನ್ನಡದ ಲೇಖಕಿ, ಕವಯತ್ರಿ ಸವಿತಾ ನಾಗಭೂಷಣ ಅವರ ಕವನಸಂಕಲನ ’ದೇವರಿಗೆ ಹೋದೆವು’. ಇಲ್ಲಿರುವ ಅನೇಕ ಕವನಗಳು ಅವರ ಅಂತಃಕರಣದ ಭಾವವನ್ನು ಅಭಿವ್ಯಕ್ತಗೊಳಿಸುವ, ಸಾಮಾನ್ಯ ಓದುಗನಿಗೂ ಸಹಜವಾಗಿ ತಲುಪುವ ರಚನೆಗಳಾಗಿವೆ. ಬದುಕಿನ ಹಾದಿಯಲ್ಲಿ ಜತೆಗೂಡಿದ ಎಲ್ಲ ಜೀವಗಳಿಗೆ ಎಂದು ಅರ್ಪಿಸಿದ ಇವರ ಸಾಲುಗಳು  ಕವನಗಳ ಜೀವಧ್ವನಿಯನ್ನು ಇಲ್ಲಿ ತಿಳಿಸುವಂತದ್ದೇ ಆಗಿದೆ. ಸುಮಾರು ತೊಂಬತ್ತು ಕವನಗಳ ಸಂಗ್ರಹವನ್ನು ಕೃತಿ ಒಳಗೊಂಡಿದೆ. 

About the Author

ಸವಿತಾ ನಾಗಭೂಷಣ

ಚಿಕ್ಕಮಗಳೂರಿನಲ್ಲಿ ಜನಿಸಿದ ಸವಿತಾ ನಾಗಭೂಷಣ ಅವರು ಬೆಳೆದದ್ದು ಮತ್ತು ಶಿಕ್ಷಣ ಪಡೆದದ್ದು ಶಿವಮೊಗ್ಗದಲ್ಲಿ. ಮಲೆನಾಡಿನ ಅನುಭವದ ಹಿನ್ನೆಲೆಯಲ್ಲಿ ಅವರ ಬಹಳಷ್ಟು ಕವಿತೆಗಳಲ್ಲಿ ಗಿಡ-ಮರ, ಹಸಿರು-ಹೂ-ಹಣ್ಣು ಮತ್ತು ಹೊಳೆ-ಮಳೆ- ಮೋಡಗಳ ಜೀವಂತ ರೂಪಕ ಒಳಗೊಂಡಿರುತ್ತವೆ. ವರ್ತಮಾನದ ಮನುಷ್ಯನ ಆಳದ ಸಂತೋಷ-ನೆಮ್ಮದಿ, ದುಃಖ- ವಿಷಾದಗಳನ್ನು ಅಂತಃಕರಣಪೂರ್ವಕವಾಗಿ ದಾಖಲಿಸುತ್ತವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕಾವ್ಯಕ್ಕಾಗಿ ನೀಡುವ ಪ್ರಶಸ್ತಿ ಪಡೆದ ಮೊದಲ ಕವಯತ್ರಿಯಾದ (ನಾ ಬರುತ್ತೇನೆ ಕೇಳು) ಸವಿತಾ ಅವರ ಎಲ್ಲ ಸಂಕಲನಗಳಿಗೆ ವಿವಿಧ ಸಂಘ-ಸಂಸ್ಥೆಗಳ ಬಹುಮಾನ -ಪ್ರಶಸ್ತಿ ಸಂದಿವೆ. ಅವರ ವಿಶಿಷ್ಟ ಕಾದಂಬರಿ ’ಸ್ತ್ರೀಲೋಕ’ಕ್ಕೆ ಎಂ.ಕೆ. ಇಂದಿರಾ ಮತ್ತು ಬಿ.ಎಚ್. ಶ್ರೀಧರ್‍ ...

READ MORE

Reviews

ಬೇಲಿಯ ಹಂಗಿಲ್ಲದೇ ಹರಡುವ ಪರಿಮಳ…

ತಿಳಿದಂತೆ ಮಾಡು, ನಡೆದಂತೆ ಜಾಡು ಎಂಬ ನಂಬಿಕೆಯಲ್ಲಿ ನಿರುಮ್ಮಳವಾಗಿ ಹರಿವ ನದಿಯಂತೆ ಸವಿತಾ ನಾಗಭೂಷಣ ಅವರ ಕವಿತೆಗಳು ಕನ್ನಡ ಕಾವ್ಯಸಂದರ್ಭದಲ್ಲಿ ತಮ್ಮ ಅನನ್ಯ ಚಹರೆಗಳನ್ನು ಬಿಂಬಿಸಿವೆ. ಸವಿತಾರ ಕವಿತೆಗಳಲ್ಲಿ ಆಶಯ ಮತ್ತು ಆಕೃತಿಗಳು ಬೇರೆಯಲ್ಲ. ಉಸಿರಾಟಕ್ಕೊಂದು ಸಹಜ ಲಯವಿರುವಂತೆ, ಹೆಜ್ಜೆಯಿಡುವ ಕ್ರಿಯೆಯಲ್ಲೇ ತಾಳ ಬೆರೆತಿರುವಂತೆ, ಅವರ 'ದೇವರಿಗೆ ಬಂದೆವು ಎಂಬ ಹೇಳದೆ ಇತ್ತೀಚಿನ ಸಂಕಲನದ ಕವಿತೆಗಳಿವೆ. ಕಾವ್ಯದ - ನಗರದ ಸಿದ್ಧಮಾದರಿಗಳನ್ನು ಸದ್ದಿಲ್ಲದೆ ಮೀರುವುದು ಈ ಕಾವ್ಯದ ಅಭಿವ್ಯಕ್ತಿಯ ಶಕ್ತಿ ಸಿದ್ಧಾಂತಗಳ ಒಜ್ಜೆಯಿಲ್ಲದೆ ಸಹಜ ಹರಿವಿನಲ್ಲಿ ಹಗುರವೂ ಸೂಕ್ಷ್ಮವೂ ಆದ ಕವಿತೆಗಳು ಒಳನೋಟದ ತಿಳಿವನ್ನು ತೊಡೆ ಮೆಲ್ಲಗೆ ಅರುಹುತ್ತವೆ : “ಕಲ್ಲು ಕರಗುವ ಸಮಯ ಕಾಣಬಲ್ಲವನು / ಇರುವೆಯ ಕಾಲ ಸಪ್ಪಳ ಕೇಳಬಲ್ಲವನು'

ಪಂಚಭೂತಗಳನ್ನು ತನ್ನ ಸಂವೇದನೆಯೊಳಗಿಟ್ಟುಕೊಂಡು ಸಲಹುವ ಅಕ್ಷರದಮ್ಮನಂತೆ ಇಲ್ಲಿನ ಕವಿತೆಗಳು ಭಾಸವಾಗುತ್ತವೆ. ಸೂರ್ಯ, ಚಂದ್ರ, ತಾರೆ, ದಕ್ಕೆ ನದಿ, ಬೆಟ್ಟ, ಬೇಲಿಹೂ, ಹುಲ್ಲು, ಎಲ್ಲವೂ ಕವಯಿತ್ರಿಯ ಸಂವೇದನೆಯ ಭಾಗವಾಗಿ ಮಿಡಿಯುತ್ತವೆ. ಜಾತಿ-ಮತ, ಧರ್ಮ-ಸಿದ್ಧಾಂತಗಳ ಮಿತಿಯಾಚೆ ಜಿಗಿಯಲು ಇಲ್ಲಿನ ದು ಕವಿತೆಗಳಿಗೆ ಯಾವ ತಾಲಿಮೂ ಬೇಕಾಗಿಲ್ಲ. ಮೇಲೆ-ಕೆಳಗೆ, ಎಡ-ಬಲಗಳಲ್ಲಿ ತ್ತು ಎಲ್ಲವನ್ನೂ ವಿಭಜಿತವಾಗಿ ಪರಿಭಾವಿಸುವ ಈ ಪಕಬ್ದ ಕಾಲದಲ್ಲಿ ಬೇಲಿಯ ಹಂಗಿಲ್ಲದೇ ದ ಹರಡುವ ಪರಿಮಳದಂತೆ ಈ ಕವಿತೆಗಳು ಕಾಲದೇಶಗಳ ಕಟ್ಟು ಮೀರುತ್ತವೆ. ತಮ್ಮೊಳಗೇ ವು ಬೆರೆತಿರುವ ವಿಶ್ವಾತ್ಮಕ ಸಂವೇದನೆಯೊಂದಿಗೆ ಸುಮ್ಮನೇ ಹರಿಯುತ್ತ ಹೋಗುವ ಕವಿತೆಗಳಿಗೆ ಕ್ಷ ಕಟ್ಟುವ ಹಠವಿಲ್ಲ, ಬಿದ್ದುಹೋಗುವ ಭಯವೂ ಇಲ್ಲ.

ಮಮತೆ ಮತ್ತು ಸಮತೆಗಳು ಸವಿತಾರ ಕಾವ್ಯದ ಎರಡು ಕಣ್ಣುಗಳು, ಸಮಾಜವಾದಿ ಪರಿಸರದಲ್ಲಿ ಅರಳಿದ ಅವರ ಕಾವ್ಯ ತಾಯ್ತನದ ಸಂವೇದನೆಯನ್ನು ತನ್ನ ಲೋಕದೃಷ್ಟಿಯಾಗಿ ವಿಸ್ತರಿಸಿಕೊಂಡಿದೆ. ಸಮಾಜವಾದ ಹಾಗೂ ಸ್ತ್ರೀವಾದಗಳು ಸಿದ್ದಾಂತ ಮಾತ್ರವಾಗದೆ ಜೀವನಧರ್ಮವೇ ಆಗುವ ಹದಗೊಂಡ ಪಕ್ವ ಮನಸ್ಥಿತಿ ಇಲ್ಲಿನ ಕವಿತೆಗಳ ಜೀವಾಳ. ಆದ್ದರಿಂದಲೇ ಗಾಂಧಿ, ಅಂಬೇಡ್ಕರ್, ಇರೋಂ ಶರ್ಮಿಳಾ ಕುರಿತ ಕವಿತೆಗಳು ಇಂದಿನ ಕಾವ್ಯಧೋರಣೆಗಳಿಗಿಂತ ಭಿನ್ನವಾಗಿ ಧ್ವನಿಸುತ್ತವೆ. 'ನಗರ ನಕ್ಸಲರು' ಎಂಬ ಕವಿತೆ ಆಧುನಿಕತೆಯ ಹಳವಂಡಗಳನ್ನು ತನ್ನ ಕಾಳಜಿ ಭರಿತ ವ್ಯಂಗ್ಯದಲ್ಲಿ ಕಂಡರಿಸುತ್ತದೆ. ಯಂತ್ರನಾಗರಿಕತೆ ಕಟ್ಟಿಕೊಟ್ಟ ಸರಕು ಸಂಸ್ಕೃತಿಯ ವಿರೋಧಾಭಾಸಗಳನ್ನು ಕಾಣಿಸುವಾಗಲೆಲ್ಲ ಮೃದು ಲೇಖನಿ ಮೊನಚಾಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಈ ಕವನ ಸಂಕಲನ ಹೃದಯಕ್ಕೆ ಹತ್ತಿರವಾಗುವುದು ಒಳಗೊಳಗೆ ಹರಿವ ಅಪರಿಮಿತ ಪ್ರೇಮದಿಂದಾಗಿ, ಎಲ್ಲೂ ದ್ವೇಷ ಮೊಳೆಯದಿರಲಿ, ಯುದ್ದಗಳು ಸಂಭವಿಸದಿರಲಿ ಎಂಬ ಆರ್ತಮೊರೆ ಕವಿತೆಗಳನ್ನು ಮಾತೃಹೃದಯದ ಸೊಲ್ಲುಗಳನ್ನಾಗಿಸಿದೆ. 'ರಕ್ತ ದೇಹದಲ್ಲಿ ಹರಿಯಬೇಕು ಬೀದಿಯಲ್ಲಿ ಚೆಲ್ಲಬಾರದು' ಎಂಬ ಎಚ್ಚರ ಚೂರಾದ ಜಗತ್ತನ್ನು ಜೋಡಿಸುವ ಕಾಳಜಿಯಲ್ಲಿ ಮೂಡಿದ್ದು.

'ಸ್ತ್ರೀಲೋಕ'ದಂತಹ ವಿಶಿಷ್ಟ ಕಥನವನ್ನು ಕನ್ನಡಕ್ಕೆ ಕೊಟ್ಟ ಸವಿತಾರ ಪ್ರಸ್ತುತ ಸಂಕಲನದಲ್ಲಿನ ದೇವಿ, ಸರಸಕ್ಕನ ಸದ್ದು, ಕುರುಹು ಮುಂತಾದ ಕವಿತೆಗಳು ಹೆಣ್ಣನದ ಜೊತೆ ನಡೆಸುವ ಅನುಸಂಧಾನ ವಿಶಿಷ್ಟ ಬಗೆಯದು. ತಾಯ್ತನವೆಂಬ ಸತ್ಯ ದೇವರು ಎಂಬ ಕಲ್ಪನೆಗಿಂತ ಹಿರಿದು ಎಂಬುದನ್ನು 'ಸ್ವಾಮಿಯೇ..' ಕವಿತೆ ಮಿಂಚಿನಂತೆ ಹೊಳೆಯಿಸುತ್ತದೆ: 'ಬಾ ಕಂದ / ಕಳ್ಳುಬಳ್ಳಿಯಿಂದ ಸುತ್ತಿ ಒತ್ತಿ ಒಡಲೊಳಗಿರಿಸಿ | ಉರಿಸುವ ಹೊತ್ತಿಕೋ...'

ಪರಮ ಲೌಕಿಕ ಕಣಗಳಲ್ಲೇ ಅಲೌಕಿವನ್ನು ಮೂಡಿಸುವ ಬೆರಗು ಇಲ್ಲಿ ಸಂಭವಿಸಿದೆ. ಇದು ಆಶಯವೂ ಹೌದು, ಕಾವ್ಯತಂತ್ರವೂ ಹೌದು. ಸವಿತಾರ ಕವಿತೆಗಳು ಕಾಣಿಸುವ ದೇವರು ನಿರಚನೆಯಿಂದಲೇ ದಕ್ಕುವಂಥವನು/ಳು. ಮನುಷ್ಯರೊಳಗೇ ಇರುವ ದೈವಿಕತೆಯ ಸಾಕ್ಷಾತ್ಕಾರವು ಕೃತಕವಾಗಿ ಕಟ್ಟಿಕೊಂಡ ವೇಷಗಳು ಕಳಚಿದಾಗಲೇ ಆಗುವುದು. ತಾನು ಮಾಡುತ್ತಿರುವುದು ಅಂಥ ಮಹತ್ತರವಾದ ನಿರಚನೆಯನ್ನು ಎಂಬ ಠೇಂಕಾರವಿಲ್ಲದೇ ತನ್ನಪಾಡಿಗೆ ಗುನುಗಿಕೊಳ್ಳುವ ಹಾಡಿನಂತೆ ಇಲ್ಲಿನ ಕವಿತೆಗಳು ಎದೆಗಿಳಿಯುತ್ತವೆ.

-ಡಾ. ಗೀತಾ ವಸಂತ

ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕ ಪತ್ರಿಕೆ (ಜುಲೈ- 2019)

 

Related Books