ಜೀವಜಾಲದ ಸಗ್ಗ

Author : ಡಿ ಅರುಂಧತಿ

Pages 52

₹ 50.00




Year of Publication: 2022
Published by: ಧಾನ್ಯ ಪ್ರಕಾಶನ
Address: ವಕ್ಕೋಡಿ, ತುಮಕೂರು- 572107
Phone: 9686194641

Synopsys

ಲೇಖಕಿ ಡಿ.ಅರುಂಧತಿ ಅವರ ಕವನಗಳ ಸಂಕಲನ ಜೀವಜಾಲದ ಸಗ್ಗ. ಜೆ.ವಿ ಆನಂದಮೂರ್ತಿ ಅವರು ಈ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಡಾ. ಅರುಂಧತಿ ಅವರ ಕೆಲವು ಕವಿತೆಗಳು ವ್ಯಕ್ತಿಗತ ಪ್ರತಿರೋಧಕ್ಕೆ ಸೀಮಿತವಾಗಿಲ್ಲ. ಇವು ವ್ಯಕ್ತಿ ಸ್ವಾತಂತ್ಯ್ರ ಮತ್ತು ಸಮಾಜದ ಕ್ರಿಯಾಶೀಲತೆಯನ್ನು ಅವರು ಹೇಳುವಂತೆ, ಒಳಗೊಳ್ಳಬೇಕಾಗಿರುವುದನ್ನು ಸೂಚಿಸುತ್ತವೆ. ಈ ಪ್ರತಿರೋಧದ ಅಲೆಯು ಸಮಷ್ಟಿ ಬದುಕಿನ ಸ್ವಾವಲಂಬನೆಯನ್ನು ಹಾಗೂ ಚೈತನ್ಯದ ಎಲ್ಲ ಮೂಲಗಳನ್ನು ಉಳಿಸಿಕೊಳ್ಳಬೇಕೆನ್ನುವುದನ್ನೇ ಹೇಳುತ್ತವೆ. ಬಹಿರಂಗದಲ್ಲಿ ಎದ್ದುಕಾಣುವ ಲಿಂಗ ತಾರತಮ್ಯ, ಅಸ್ಪೃಶ್ಯತೆಯ ಭೀಕರತೆ, ಭಿನ್ನ ಅಭಿಪ್ರಾಯಗಳನ್ನು ದಮನ ಮಾಡುವ ಪ್ರಭುತ್ವದ ಕರ‍್ಯ ಹಾಗೂ ಸ್ತ್ರೀ ಲೋಕದ ಒಳಗುದಿಗಳನ್ನು ಸಣ್ಣ ಪ್ರಮಾಣದಲ್ಲಾದರೂ ಹಿಡಿಯುವ ಪ್ರಾಮಾಣಿಕ ಪ್ರಯತ್ನ ಡಾ. ಅರುಂಧತಿ ಅವರ ಮೊದಲ ಸಂಕಲನದ ಸ್ಥಾಯಿ ಗುಣವಾಗಿದೆ. ಒಂದು ನಿರ್ದಿಷ್ಟ ವಿಚಾರದ ಚೌಕಟ್ಟಿನಲ್ಲಿ ಬರೆಯುವುದಕ್ಕೂ, ಬದುಕಿನ ಅನುಭವಗಳು ಕಟ್ಟಿಕೊಡುವ ದರ್ಶನಗಳ ಮೂಲಕವೇ ವ್ಯಕ್ತವಾಗುವ ಕವಿತೆಗಳಿಗೂ ವ್ಯತ್ಯಾಸವಿರುವುದು ಸಹಜವೇ. ಇದರಲ್ಲಿ ಡಾ. ಅರುಂಧತಿ ಅವರ ಕಾವ್ಯ ಮಾರ್ಗ ಎರಡನೆಯದು ಎಂಬುದನ್ನು ಈ ಸಂಕಲನದ ಕೆಲವು ಕವಿತೆಗಳು ನಮ್ಮ ತಿಳಿವಿಗೆ ತರುತ್ತವೆ. ಉಪಭೋಗ ಸಂಸ್ಕೃತಿಯೊಂದಿಗೆ ಬಳುವಳಿಯಾಗಿ ಬಂದಿರುವ ಒಂಟಿತನ, ಆತ್ಮರತಿಯಂಥ ನಕಾರಾತ್ಮಕ ವ್ಯಂಜನಗಳಿಂದ ದೂರ ಸರಿದಿರುವ ಡಾ. ಅರುಂಧತಿ ಅವರ ಕವಿತೆಗಳು ಬದುಕಿನ ಕ್ರಿಯಾಶೀಲತೆ ಮತ್ತು ತರತಮಗಳಿಲ್ಲದ ಮಾನವೀಯ ಸಂಬಂಧಗಳಿಗಾಗಿ ಕೈ ಚಾಚುತ್ತದೆ.ಆಧುನಿಕೋತ್ತರವಾದದ ಅಪಾಯಕಾರಿ ತಿಳಿವಿಗೆ ಪ್ರತಿರೋಧವಾಗಿ ತಮ್ಮ ಸಾಂಪ್ರದಾಯಿಕ ಸಮಾಜದ ಸಂಸ್ಕೃತಿಯ ಮೂಲಕ ಉತ್ತರಿಸುವ ಪ್ರಯತ್ನವನ್ನು ಡಾ. ಅರುಂಧತಿ ಅವರ ಕಾವ್ಯ ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳಲಿ. ಏಕೆಂದರೆ, ಈ ಸಾಂಪ್ರದಾಯಿಕ ಸಮುದಾಯಗಳ ಲೋಕದೃಷ್ಟಿಯೇ ವಿಶಿಷ್ಟವಾದದ್ದು. ಇದನ್ನು ಅವರ ‘ಪ್ರಶ್ನೆ’ ಎನ್ನುವ ಕವಿತೆ ಕಟ್ಟಿಕೊಡುತ್ತದೆ. ಕೌಶಲವನ್ನೇ ಜ್ಞಾನ ಪರಂಪರೆಯನ್ನಾಗಿ ರೂಪಿಸಿಕೊಂಡಿರುವ ಕೆಳ ಸಮುದಾಯಗಳು ಇವು. ಹೀಗೆ ತಮ್ಮ ವೃತ್ತಿ ಕೌಶಲಗಳ ಮೂಲಕವೇ ಲೌಕಿಕ ಮತ್ತು ಅಧ್ಯಾತ್ಮಿಕ ಮಾರ್ಗಕ್ಕೆ ಚಲಿಸುವ ಈ ಸಮುದಾಯಗಳ ಲೋಕದರ್ಶನವು ಗಮನಾರ್ಹವಾದದ್ದು. ಈ ಮಾತಿಗೆ ಕನ್ನಡದ ವಚನಕಾರರು ಮತ್ತು ತತ್ತ್ವ ಪದಕಾರರ ಪರಂಪರೆಯೇ ನಮಗೆ ಉತ್ಕೃಷ್ಟ ಉದಾಹರಣೆಯಾಗಿದೆ. ತಾವು ಹೇಳುವುದಷ್ಟೇ ‘ಸತ್ಯ’, ಉಳಿದೆಲ್ಲವೂ ‘ಮಿಥ್ಯೆ’ ಎಂಬ ಏಕರೂಪಿ ಪರಂಪರೆಗೆ ತೀವ್ರವಾದ ಪ್ರತಿರೋಧವನ್ನು ತೋರಿದ, ಕನ್ನಡ ಸಮಾಜದ ಬಹುತ್ವದ ಪರಂಪರೆಗಳಿವು. ಡಾ. ಅರುಂಧತಿ ಅವರಲ್ಲಿ ಈ ಬಹುತ್ವದ ಪರಂಪರೆಯ ಬಗ್ಗೆ ಅರಿವಿದೆ. ಅದನ್ನು ಅವರು ಮುಂದಿನ ದಿನಗಳಲ್ಲಿ ಸಮರ್ಥವಾಗಿ ತಮ್ಮ ಕವಿತೆಗಳಲ್ಲಿ ತರಬಲ್ಲರು’ ಎಂಬುದಾಗಿ ಹೇಳಿದ್ದಾರೆ.

About the Author

ಡಿ ಅರುಂಧತಿ

ತುಮಕೂರು ಜಿಲ್ಲೆ ಶಿರಾ ಸೀಮೆಯ ಕಳ್ಳಂಬೆಳ್ಳ ಅರುಂಧತಿ ಅವರ ಹುಟ್ಟೂರು. ತಂದೆ ದೊಡ್ಡಲಿಂಗಯ್ಯ, ತಾಯಿ ಸಣ್ಣಲಿಂಗಮ್ಮ, ಚಿತ್ರದುರ್ಗ, ಚಳ್ಳಕೆರೆಯಲ್ಲಿ ಪ್ರಾಥಮಿಕ ಮತ್ತು ಹೈಸ್ಕೂಲ್ ವಿದ್ಯಾಭನ, ಬಳಿಕ ಬಿ.ಎಸ್ಸಿ ಅಧ್ಯಯನ. ನಂತರ ಬಳ್ಳಾರಿ ಮತ್ತು ಹುಬ್ಬಳ್ಳಿಯಲ್ಲಿ ವೈದ್ಯಕೀಯ ಪದವಿ. ಹಲವು ದಶಕಗಳಿಂದ ತುಮಕೂರಿನಲ್ಲಿ ವೈದ್ಯಕೀಯ ಸೇವೆ. ದಲಿತ ಸಂಘರ್ಷ ಸಮಿತಿ, ರಾಜ್ಯ ರೈತ ಸಂಘ, ಸಮತಾ ಸಂಘಟನೆ ಮಾನವ ಮಂಟಪ, ಬೋಧಿ ಮಂಡಲ ಇತ್ಯಾದಿ ಸಂಘಟನೆಗಳು ಮತ್ತು ಜನಪರ ಹೋರಾಟಗಳಲ್ಲಿ ಸಕ್ರಿಯ ಕಾರ್ಯಕರ್ತೆಯಾಗಿ ಕ್ರಿಯಾಶೀಲವಾಗಿ ಭಾಗಿ. ಜಿಲ್ಲಾ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ...

READ MORE

Reviews

‘ಜೀವಜಾಲದ ಸಗ್ಗ’ ಕೃತಿಯ ವಿಮರ್ಶೆ

ನೆರೂಡನ ಪ್ರಸಿದ್ಧ ಮಾತುಗಳು ಇಲ್ಲಿ ನೆನಪಾಗುತ್ತಿವೆ ‘ವಾಸ್ತವವಾದಿಯಲ್ಲದ ಕವಿ ಸತ್ತಿರುತ್ತಾನೆ. ಕೇವಲ ವಾಸ್ತವವಾದಿಯಾದ ಕವಿಯೂ ಸತ್ತಿರುತ್ತಾನೆ. ಕೇವಲ ವಿಚಾರ ಮಾತ್ರವೇ ಆಗಿರುವ ಕವಿಯನ್ನು ಮೂರ್ಖರು ಮಾತ್ರ ಅರ್ಥಮಾಡಿಕೊಳ್ಳುತ್ತಾರೆ! ಇದೂ ಕೂಡ ವಿಷಾದದ ಸಂಗತಿ’. ಡಾ. ಅರುಂಧತಿ ಅವರ ಕವಿತೆಗಳೂ ಇಂತಹ ತೊಡಕುಗಳನ್ನು ದಾಟಿ, ಜಟಿಲತೆ, ಆರ್ಭಟ, ರೊಚ್ಚು ಹಾಗೂ ಪ್ರತೀಕಾರದ ಸೋಂಕಿಲ್ಲದೆ, ಸರಳತೆಯಲ್ಲಿ ಅರಳಿವೆ. ಇಲ್ಲಿ ‘ಸರಳತೆ’ ಎಂದರೆ ಸರಳೀಕರಿಸಿದ್ದು ಎನ್ನುವ ಅರ್ಥದಲ್ಲಿ ಅಲ್ಲ! ಅನುಕಂಪ-ಕ್ರೌರ್ಯ, ನಂಬಿಕೆ-ದ್ರೋಹ ಇವುಗಳೆಲ್ಲದರ ಸಂಘರ್ಷ.ಡಾ. ಅರುಂಧತಿಯವರ ಚೊಚ್ಚಲ ಕವನ ಸಂಕಲನ ‘ಜೀವಜಾಲದ ಸಗ್ಗ’ಕ್ಕೆ ಜಿ ವಿ ಆನಂದಮೂರ್ತಿ ಬರೆದ ಮುನ್ನುಡಿ.

ಸಾರ್ವಜನಿಕ ಜೀವನ, ದಲಿತ ಮತ್ತು ರೈತ ಚಳವಳಿಗಳೊಂದಿಗಿನ ನಿರಂತರ ಸಂಪರ್ಕ, ಮಹಿಳಾ ಸಂಘಟನೆ, ಸಾಹಿತಿ ಕಲಾವಿದರೊಂದಿಗೆ ಬೆರೆವ ಗುಣ, ನಿರ್ಲಕ್ಷಿತ ಸಮುದಾಯಗಳಿಗೆ ತೋರುವ ಕಾರುಣ್ಯ ಹಾಗೂ ವೈದ್ಯ ವೃತ್ತಿಯಲ್ಲಿ ಹಲವಾರು ದಶಕಗಳಿಂದ ತಮ್ಮನ್ನು ಇಡಿಯಾಗಿ ತೊಡಗಿಸಿಕೊಂಡಿರುವ ಡಾ. ಅರುಂಧತಿ ತುಮಕೂರಿನ ಪ್ರಗತಿಪರ ವಲಯದಲ್ಲಿ ಕೇಳಿಬರುವ ಗೌರವದ ಹೆಸರು. ಸಂಕೋಚ ಹಾಗೂ ಸದಾ ಮೌನದಲ್ಲೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಡಾ. ಅರುಂಧತಿ ಹಲವಾರು ದಶಕಗಳಿಂದ ತಾವು ಅಲ್ಲಲ್ಲಿ ಬರೆದ ಕವಿತೆಗಳನ್ನು ಒಗ್ಗೂಡಿಸಿ ಇದೀಗ ತಮ್ಮ ‘ಜೀವ ಜಾಲದ ಸಗ್ಗ’ ಚೊಚ್ಚಲು ಕವನ ಸಂಕಲನದೊಂದಿಗೆ ನಮ್ಮ ಮುಂದೆ ನಿಂತಿದ್ದಾರೆ. ಹೊಸಗನ್ನಡದ ಯಾವ ಪಂಥಗಳಿಗೂ, ವರ್ಗೀಕರಣಕ್ಕೂ ಸೇರದ ಹಾಗೂ ಯಾವ ಕವಿಗಳ ಪ್ರಭಾವದಲ್ಲೂ ಕಾಣಿಸಿಕೊಳ್ಳದ ಈ ಸಂಕಲನದ ಕವಿತೆಗಳು ಪ್ರಯೋಗಶೀಲತೆಯ ದೃಷ್ಟಿಯಿಂದ ತಾಜಾ ತನದಿಂದ ಕೂಡಿವೆ.

ಸಿದ್ಧಗೊಂಡ ಮಾದರಿಯಲ್ಲಿ ಕಾವ್ಯ ರಚಿಸುವುದು ಒಂದು ಹಂತದಲ್ಲಿ ಸುಲಭವೆನಿಸಬಹುದು! ಆದರೆ, ಈ ಔದಾರ್ಯದ ದಾರಿ ಕವಿಯೊಬ್ಬನ ವ್ಯಕ್ತಿ ವೈಶಿಷ್ಟ್ಯಗಳನ್ನು ಮರೆಮಾಚಿಸುತ್ತದೆ. ಈ ಅಪಾಯದಿಂದ ಬಿಡಿಸಿಕೊಂಡು, ರೂಢಿಗತವಾದ ಯೋಚನಾಕ್ರಮಗಳನ್ನು ಬಿಟ್ಟು, ಸಕಲಜೀವರಾಶಿಗಳ ವಿಮೋಚನೆಯ ಬೆಳಕಿನತ್ತ ನಡೆಯುವುದೇ ಕಲೆಯ ದಾರಿ. ಈ ತಿಳಿವು ಡಾ. ಅರುಂಧತಿ ಅವರಿಗೆ ಇದೆ ಎಂದು ಭಾವಿಸಿದ್ದೇನೆ.

ಡಾ. ಅರುಂಧತಿ ಅವರು ತಮ್ಮ ಕವಿತೆಗಳಲ್ಲಿ ಬಾಲ್ಯದ ಜ್ಞಾಪಕ ಚಿತ್ರಶಾಲೆಯನ್ನೆಲ್ಲಾ ಕೆದಕಿ, ಆಪ್ತವಾಗಿ ರೂಪಿಸಿರುವ ಕವಿತೆಗಳ ಜೊತೆಗೆ, ವರ್ತಮಾನದ ಸಮಾಜದ ಜುಗುಪ್ಸೆ ಹುಟ್ಟಿಸುವ ಎಲ್ಲ ಬರ್ಬರತೆಯ ಬಗೆಗೆ ಪ್ರತಿರೋಧ ತೋರುತ್ತಾ ಹಾಗೂ ಇದರ ಜೊತೆಗೆ ಸ್ವಾತಂತ್ರ್ಯ, ಸಮಾನತೆ ಹಾಗೂ ಲಿಂಗ ಸಮಾನತೆಯು ಭವಿಷ್ಯದ ಅಲೆಯಾಗಿರಬೇಕು ಎಂಬುದನ್ನು ಅಂತರ್ಗತ ಮಾಡಿಕೊಂಡಿರುವ ಕವಿತೆಗಳಾಗಿವೆ. ಎಳೆತನದ ನೆನಪುಗಳು, ತಾರುಣ್ಯದ ಕನಸುಗಳು, ತಾಯ್ತನದ ಸಂತಸ, ಹೆಣ್ಣಿನ ತಲ್ಲಣ ಹೀಗೆ ವೈಯಕ್ತಿಕ ಅನುಭವ ಪ್ರಪಂಚದ ನಡುವಿನಿಂದ ಈ ಸಂಕಲನದ ಕವಿತೆಗಳು, ಶಿಶಿರ ಮಾಸದ ಚಂದ್ರನ ತಂಪು ಕಿರಣಗಳಂತೆ ಮೈ ಪಡೆದಿವೆ.

ಚಳವಳಿಗಾರರೇ ಕವಿಗಳಾದಾಗ ಅವರ ಕವಿತೆಗಳಲ್ಲಿ ಸೂಕ್ಷ್ಮಗಳಿಲ್ಲದ ದೊಡ್ಡದನಿ, ನೇರವಾಗಿ ಎಲ್ಲವನ್ನೂ ಹೇಳಿಬಿಡುವ ತವಕ, ಪ್ರತೀಕಾರ ಹಾಗೂ ತಮ್ಮ ನೆಲದ ಸಾಂಸ್ಕೃತಿಕ ವಿವರಗಳಲ್ಲಿ ಬೇರುಬಿಡದ ಕವಿತೆಗಳು ನಮ್ಮ ಮುಂದೆ ನಿಲ್ಲುತ್ತವೆ! ಆದರೆ ಈ ಗುಣ ಎಲ್ಲ ಹೋರಾಟಗಾರ ಕವಿಗಳಲ್ಲೂ ಇರುತ್ತದೆ ಎನ್ನುವುದು ನನ್ನ ಆರೋಪವಲ್ಲ! ಇದಕ್ಕೆ ಅಪವಾದವಾಗಿ ಹಲವಾರು ಕವಿಗಳು ನಮ್ಮ ಮುಂದಿದ್ದಾರೆ. ಇಂತಹ ತೊಡಕುಗಳನ್ನು ದಾಟಿದ ಶ್ರೇಷ್ಟ ಕವಿಗಳು ಕನ್ನಡದಲ್ಲೂ ಇದ್ದಾರೆ. ನೆರೂಡನ ಪ್ರಸಿದ್ಧ ಮಾತುಗಳು ಇಲ್ಲಿ ನೆನಪಾಗುತ್ತಿವೆ ‘ವಾಸ್ತವವಾದಿಯಲ್ಲದ ಕವಿ ಸತ್ತಿರುತ್ತಾನೆ. ಕೇವಲ ವಾಸ್ತವವಾದಿಯಾದ ಕವಿಯೂ ಸತ್ತಿರುತ್ತಾನೆ. ಕೇವಲ ವಿಚಾರ ಮಾತ್ರವೇ ಆಗಿರುವ ಕವಿಯನ್ನು ಮೂರ್ಖರು ಮಾತ್ರ ಅರ್ಥಮಾಡಿಕೊಳ್ಳುತ್ತಾರೆ! ಇದೂ ಕೂಡ ವಿಷಾದದ ಸಂಗತಿ’. ಡಾ. ಅರುಂಧತಿ ಅವರ ಕವಿತೆಗಳೂ ಇಂತಹ ತೊಡಕುಗಳನ್ನು ದಾಟಿ, ಜಟಿಲತೆ, ಆರ್ಭಟ, ರೊಚ್ಚು ಹಾಗೂ ಪ್ರತೀಕಾರದ ಸೋಂಕಿಲ್ಲದೆ, ಸರಳತೆಯಲ್ಲಿ ಅರಳಿವೆ. ಇಲ್ಲಿ ‘ಸರಳತೆ’ ಎಂದರೆ ಸರಳೀಕರಿಸಿದ್ದು ಎನ್ನುವ ಅರ್ಥದಲ್ಲಿ ಅಲ್ಲ! ಅನುಕಂಪ-ಕ್ರೌರ್ಯ, ನಂಬಿಕೆ-ದ್ರೋಹ ಇವುಗಳೆಲ್ಲದರ ಸಂಘರ್ಷ. ಎಲ್ಲಕ್ಕಿಂತ ಮಿಗಿಲಾಗಿ ಮಾನವ ಕರುಣೆಯೇ ಶಿಖರದಲ್ಲಿರುವುದು ಈ ಸಂಕಲನದ ದೊಡ್ಡಗುಣ. ಸಾಮಾಜಿಕ ಬದಲಾವಣೆಯ ಧ್ವನಿಯನ್ನು ಮಂದ್ರ ಸ್ವರದಲ್ಲಿ ಒಳಗೊಂಡಿರುವ, ಬಹುಪಾಲು ಮೆದು ಮಾತಿನ ರೂಪದಲ್ಲಿರುವ ಡಾ. ಅರುಂಧತಿ ಅವರ ಕವಿತೆಗಳು ಈ ಕಾರಣಕ್ಕಾಗಿ ನಮ್ಮ ಓದಿಗೆ ಹೆಚ್ಚು ಸಮೀಪವಾಗುತ್ತವೆ.

.…ಬೆಳೆದು ನಿಂತ ಎಳೆಜೀವದ ಸಾವು
ತಾಯಿ ಹೃದಯದ ಬೆಚ್ಚಿ ಬೀಳಿಸುತ್ತಿದೆ
ಯೇನಕ್ಷತ್ರಗಳ ನಾಡಿನಲ್ಲಿ ಪಯಣಿಸುವ
ಜೀವವೊಂದು ಅವಮಾನದಲಿ ಬೆಂದು
ಇಲ್ಲವಾಗಿದ್ದು ನನ್ನ ಎದಯುರಿಯೇ
ಒಂದು ಹತ್ತಾಗಿ ಹತ್ತು ಕೋಟಿಯಾಗಿ
ದಿಕ್ಕುಗಳ ಆವರಿಸುವ ಈ ಹೊತ್ತಿನಲ್ಲಿ
ನಿನ್ನ ನಿರ್ಗಮನ ಕೆಲಹೊತ್ತು
ಶೂನ್ಯವುಂಟು ಮಾಡಿದ ದುಗುಡವೇ
ನಿನ್ನ ಕಪ್ಪು ಕಂಗಳ ಅಂತಸತ್ವಕೆ
ಎಂಥಾ ಶಕ್ತಿಯಿತ್ತು! ವೇಮುಲ
(ರೋಹಿತ್ ವೇಮುಲ) 

ಎಳೆತನದ ನೆನಪುಗಳು, ತಾರುಣ್ಯದ ಕನಸುಗಳು, ತಾಯ್ತನದ ಸಂತಸ, ಹೆಣ್ಣಿನ ತಲ್ಲಣ ಹೀಗೆ ವೈಯಕ್ತಿಕ ಅನುಭವ ಪ್ರಪಂಚದ ನಡುವಿನಿಂದ ಈ ಸಂಕಲನದ ಕವಿತೆಗಳು, ಶಿಶಿರ ಮಾಸದ ಚಂದ್ರನ ತಂಪು ಕಿರಣಗಳಂತೆ ಮೈ ಪಡೆದಿವೆ.

ಗಾಯಗೊಂಡಿರುವ ತನ್ನ ಮಗುವನ್ನು ಸಂತೈಸುವ ತಾಯಿಯ ಧ್ವನಿಯಂತಿದೆ. ವ್ಯವಸ್ಥೆಯ ದಮನಕಾರಿ ಪ್ರವೃತ್ತಿಗೆ ಬಲಿಯಾದ ರೋಹಿತ್ ವೇಮುಲನಂಥ ಸಾವಿರಾರು ತರುಣರ ಮರುಹುಟ್ಟನ್ನು ಈ ಕವಿತೆಯ ತಾಯಿ ಬಯಸುತ್ತಿದ್ದಾಳೆ. ತನ್ನೊಳಗಿನ ಆದ್ರತೆಯಿಂದಲೇ ಈ ಕವಿತೆ ಸಾಮಾಜಿಕ ಬದಲಾವಣೆಯಲ್ಲಿ ಅಚಲ ನಂಬಿಕೆಯಿಟ್ಟಿರುವ ಡಾ. ಅರುಂಧತಿ ಅವರ ಎಲ್ಲ ಕವಿತೆಗಳ ಮುಖ್ಯ ಆಶಯದಂತಿದೆ. ಈ ಹಿನ್ನೆಲೆಯಲ್ಲಿ ‘ಪ್ರಶ್ನೆ’, ‘ಮನೆಗೊಂದು ಹಿರಿಜೀವ’, ‘ಅಮ್ಮ’, ‘ಅವ್ವನ ಗಡಿಯಾರ’, ‘ರೋಹಿತ್ ವೇಮುಲ’, ‘ವಸಂತ’, ‘ಅಂಬೇಡ್ಕರ್’ ಸಂಕಲನದ ಮುಖ್ಯ ಕವಿತೆಗಳಾಗಿವೆ.

….. ಸಂಜೆ ಮನೆಗೆ ಬಂದವ ಗೊಣಗಿದ
ನಾನ್ಯಾವ ದಲಿತ ಸಂಘವ ಸೇರಲೇ
ಬೆದರಿದ ಹೆಣ್ಣು ಬೆವರೊರಸಿ
ಇದ್ಯಾವ ಹುನ್ನಾರ, ನೋವಿಗೆ
ಎಡಬಲವುಂಟೇನು
ಎಡಬಲ ಬೇರೆಯೆಂದರೇನು?(ಅಂಬೇಡ್ಕರ್)

ತಾಯಿ ಮತ್ತು ಮಗನ ಸಂವಾದದ ಮೂಲಕ ಆರಂಭಗೊಳ್ಳುವ ‘ಅಂಬೇಡ್ಕರ್’ ಕವಿತೆ ಕೊನೆಗೆ ಲೋಕ ಕಾರುಣ್ಯದ ಕಡೆ ಚಲಿಸುವ ಗುಣ ಪಡೆದಿದೆ. ಕನ್ನಡದಲ್ಲಿ ಈವರೆಗೆ ಬಂದಿರುವ ಅಂಬೇಡ್ಕರ್ ಅವರನ್ನು ಕುರಿತ ಕವಿತೆಗಳ ದೃಷ್ಟಿಕೋನಕ್ಕೂ, ಡಾ. ಅರುಂಧತಿ ಅವರ ‘ಅಂಬೇಡ್ಕರ್’ ಕವಿತೆಯ ದರ್ಶನಕ್ಕೂ ಇರುವ ವ್ಯತ್ಯಾಸಗಳು ಇಲ್ಲಿಯೇ ಅರಿವಿಗೆ ಬರುತ್ತದೆ. ದಲಿತ ಸಮುದಾಯದಲ್ಲಿ ಆಗಿರುವ ಎಡಬಲದ ವಿಘಟನೆ ಮಾನವೀಯತೆಯಲ್ಲಿ ನಂಬಿಕೆಯಿಟ್ಟಿರುವ ಡಾ. ಅರುಂಧತಿ ಅವರನ್ನು ತೀವ್ರವಾಗಿ ಕಾಡಿದೆ. ಆದ್ದರಿಂದಲೇ ಅವರ ಕವಿತೆ ವಿಷಾದದ ಪ್ರಶ್ನೆಯೊಂದಿಗೆ ಮುಗಿದಿದೆ. ವರ್ತಮಾನದ ದಿನಗಳಲ್ಲಿ ಸಮುದಾಯ ನಿರಂತರವಾಗಿ ಎದುರಿಸುತ್ತಿರುವ ಅವಮಾನ ಹಾಗೂ ಅಭದ್ರತೆಯ ದಿನಗಳಲ್ಲಿ ಈ ವಿಘಟನೆಯ ನೋವು ಕವಿತೆಯನ್ನು ಕಡೆದಿದೆ.

ಡಾ. ಅರುಂಧತಿ ಅವರ ಕೆಲವು ಕವಿತೆಗಳು ವ್ಯಕ್ತಿಗತ ಪ್ರತಿರೋಧಕ್ಕೆ ಸೀಮಿತವಾಗಿಲ್ಲ. ಇವು ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಮಾಜದ ಕ್ರಿಯಾಶೀಲತೆಯನ್ನು ಒಳಗೊಳ್ಳಬೇಕಾಗಿರುವುದನ್ನು ಸೂಚಿಸುತ್ತವೆ. ಈ ಪ್ರತಿರೋಧದ ಅಲೆಯು ಸಮಷ್ಟಿ ಬದುಕಿನ ಸ್ವಾವಲಂಬನೆಯನ್ನು ಹಾಗೂ ಚೈತನ್ಯದ ಎಲ್ಲ ಮೂಲಗಳನ್ನು ಉಳಿಸಿಕೊಳ್ಳಬೇಕೆನ್ನುವುದನ್ನೇ ಹೇಳುತ್ತವೆ. ಬಹಿರಂಗದಲ್ಲಿ ಎದ್ದುಕಾಣುವ ಲಿಂಗ ತಾರತಮ್ಯ, ಅಸ್ಪೃಶ್ಯತೆಯ ಭೀಕರತೆ, ಭಿನ್ನ ಅಭಿಪ್ರಾಯಗಳನ್ನು ದಮನ ಮಾಡುವ ಪ್ರಭುತ್ವದ ಕೌರ್ಯ ಹಾಗೂ ಸ್ತ್ರೀ ಲೋಕದ ಒಳಗುದಿಗಳನ್ನು ಸಣ್ಣ ಪ್ರಮಾಣದಲ್ಲಾದರೂ ಹಿಡಿಯುವ ಪ್ರಾಮಾಣಿಕ ಪ್ರಯತ್ನ ಡಾ. ಅರುಂಧತಿ ಅವರ ಮೊದಲ ಸಂಕಲನದ ಸ್ಥಾಯಿ ಗುಣವಾಗಿದೆ. ಒಂದು ನಿರ್ದಿಷ್ಟ ವಿಚಾರದ ಚೌಕಟ್ಟಿನಲ್ಲಿ ಬರೆಯುವುದಕ್ಕೂ, ಬದುಕಿನ ಅನುಭವಗಳು ಕಟ್ಟಿಕೊಡುವ ದರ್ಶನಗಳ ಮೂಲಕವೇ ವ್ಯಕ್ತವಾಗುವ ಕವಿತೆಗಳಿಗೂ ವ್ಯತ್ಯಾಸವಿರುವುದು ಸಹಜವೇ. ಇದರಲ್ಲಿ ಡಾ. ಅರುಂಧತಿ ಅವರ ಕಾವ್ಯ ಮಾರ್ಗ ಎರಡನೆಯದು ಎಂಬುದನ್ನು ಈ ಸಂಕಲನದ ಕೆಲವು ಕವಿತೆಗಳು ನಮ್ಮ ತಿಳಿವಿಗೆ ತರುತ್ತವೆ. ಉಪಭೋಗ ಸಂಸ್ಕೃತಿಯೊಂದಿಗೆ ಬಳುವಳಿಯಾಗಿ ಬಂದಿರುವ ಒಂಟಿತನ, ಆತ್ಮರತಿಯಂಥ ನಕಾರಾತ್ಮಕ ವ್ಯಂಜನಗಳಿಂದ ದೂರ ಸರಿದಿರುವ ಡಾ. ಅರುಂಧತಿ ಅವರ ಕವಿತೆಗಳು ಬದುಕಿನ ಕ್ರಿಯಾಶೀಲತೆ ಮತ್ತು ತರತಮಗಳಿಲ್ಲದ ಮಾನವೀಯ ಸಂಬಂಧಗಳಿಗಾಗಿ ಕೈ ಚಾಚುತ್ತದೆ.

ಆಧುನಿಕೋತ್ತರವಾದದ ಅಪಾಯಕಾರಿ ತಿಳಿವಿಗೆ ಪ್ರತಿರೋಧವಾಗಿ ತಮ್ಮ ಸಾಂಪ್ರದಾಯಿಕ ಸಮಾಜದ ಸಂಸ್ಕೃತಿಯ ಮೂಲಕ ಉತ್ತರಿಸುವ ಪ್ರಯತ್ನವನ್ನು ಡಾ. ಅರುಂಧತಿ ಅವರ ಕಾವ್ಯ ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳಲಿ. ಏಕೆಂದರೆ, ಈ ಸಾಂಪ್ರದಾಯಿಕ ಸಮುದಾಯಗಳ ಲೋಕದೃಷ್ಟಿಯೇ ವಿಶಿಷ್ಟವಾದದ್ದು. ಇದನ್ನು ಅವರ ‘ಪ್ರಶ್ನೆ’ ಎನ್ನುವ ಕವಿತೆ ಕಟ್ಟಿಕೊಡುತ್ತದೆ. ಕೌಶಲವನ್ನೇ ಜ್ಞಾನ ಪರಂಪರೆಯನ್ನಾಗಿ ರೂಪಿಸಿಕೊಂಡಿರುವ ಕೆಳ ಸಮುದಾಯಗಳು ಇವು. ಹೀಗೆ ತಮ್ಮ ವೃತ್ತಿ ಕೌಶಲಗಳ ಮೂಲಕವೇ ಲೌಕಿಕ ಮತ್ತು ಅಧ್ಯಾತ್ಮಿಕ ಮಾರ್ಗಕ್ಕೆ ಚಲಿಸುವ ಈ ಸಮುದಾಯಗಳ ಲೋಕದರ್ಶನವು ಗಮನಾರ್ಹವಾದದ್ದು. ಈ ಮಾತಿಗೆ ಕನ್ನಡದ ವಚನಕಾರರು ಮತ್ತು ತತ್ತ್ವಪದಕಾರರ ಪರಂಪರೆಯೇ ನಮಗೆ ಉತ್ಕೃಷ್ಟ ಉದಾಹರಣೆಯಾಗಿದೆ. ತಾವು ಹೇಳುವುದಷ್ಟೇ ‘ಸತ್ಯ’, ಉಳಿದೆಲ್ಲವೂ ‘ಮಿಥ್ಯೆ’ ಎಂಬ ಏಕರೂಪಿ ಪರಂಪರೆಗೆ ತೀವ್ರವಾದ ಪ್ರತಿರೋಧವನ್ನು ತೋರಿದ, ಕನ್ನಡ ಸಮಾಜದ ಬಹುತ್ವದ ಪರಂಪರೆಗಳಿವು. ಡಾ. ಅರುಂಧತಿ ಅವರಲ್ಲಿ ಈ ಬಹುತ್ವದ ಪರಂಪರೆಯ ಬಗ್ಗೆ ಅರಿವಿದೆ. ಅದನ್ನು ಅವರು ಮುಂದಿನ ದಿನಗಳಲ್ಲಿ ಸಮರ್ಥವಾಗಿ ತಮ್ಮ ಕವಿತೆಗಳಲ್ಲಿ ತರಬಲ್ಲರು.

(ಕೃಪೆ : ಕೆಂಡಸಂಪಿಗೆ)

Related Books