ಶ್ರಾವಣ ಮಧ್ಯಾಹ್ನ ನೀಲಿ ಮಳೆ

Author : ಜಯಂತ ಕಾಯ್ಕಿಣಿ

Pages 140

₹ 80.00
Year of Publication: 2008
Published by: ಅಂಕಿತ ಪುಸ್ತಕ
Address: 53, ಶ್ಯಾಮ್ ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು- 560004

Synopsys

‘ಶ್ರಾವಣ ಮಧ್ಯಾಹ್ನ ನೀಲಿ ಮಳೆ’ ಹಿರಿಯ ಸಾಹಿತಿ ಜಯಂತ ಕಾಯ್ಕಿಣಿ ಅವರ ಕವಿತೆಗಳ ಸಂಕಲನ. ಗಾಳಿಯಲ್ಲಿ, ಪರ್ವತ, ರಾಗ, ನೋವುಂಟು ಶ್ರಾವಣಕ್ಕೆ, ಎಂಟಿನಾದ ಮೇಲೆ ಕೂತ ಕಾಗೆ, ಹಕ್ಕಿ ಕೂರದ ಕೊರಗು, ಸೇಬು, ಮಂಜು, ಸಂದಣಿ, ಸುಪ್ರಭಾತ, ಸಹವಾಸ, ನನ್ನ ಕತ್ತಲು, ಕವಿದ ನಂತರ, ಈಗ, ಪರವಶ, ದಕ್ಷಿಣೆ, ಕದನ ವಿರಾಮ, ಕರೆಯೋಲೆಗಳು, ನನ್ನ ಕೈಯಾಚೆ, ನಾಟಕ, ಬೇಲೆಯಲ್ಲಿ ಮಾಣಿ, ಮಧ್ಯಾಹ್ನ, ಪ್ರತಿಮಾ ಬೇಡಿದ ಪದ್ಯಗಳು, ಗಮನ, ಸೀಮೆ ಸೇರಿದಂತೆ ಹಲವು ಕವಿತೆಗಳು ಸಂಕಲನಗೊಂಡಿವೆ.

About the Author

ಜಯಂತ ಕಾಯ್ಕಿಣಿ
(24 January 1955)

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದ ಜಯಂತ ಅವರ ತಂದೆ ಗೌರೀಶ ಕಾಯ್ಕಿಣಿ ಹೆಸರಾಂತ ವಿಚಾರವಾದಿ ಲೇಖಕ.  ಆಧುನಿಕ ಬದುಕಿನ ಆತಂಕಗಳನ್ನು ಕತೆಯಾಗಿಸುವ ಜಯಂತ ಕಾಯ್ಕಿಣಿ ಅವರು ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರು.  ’ಕತೆಗಾರ’ ಎಂಬ ವಿಶೇಷಣ ಇದೆಯಾದರೂ ಅವರೊಬ್ಬ ಪ್ರಮುಖ ಕವಿ ಕೂಡ ಹೌದು. ಪ್ರಬಂಧ, ಅಂಕಣ ಬರಹ, ಚಲನಚಿತ್ರ ಸಂಭಾಷಣೆ ಮತ್ತು ಗೀತರಚನೆ ಹೀಗೆ ಹಲವು ಪ್ರಕಾರಗಳಲ್ಲಿ ಹೆಜ್ಜೆಗುರುತು ಮೂಡಿಸಿದ್ದಾರೆ. ’ಭಾವನಾ’ ಮಾಸಿಕ ಪತ್ರಿಕೆಯ ಸಂಪಾದಕರಾಗಿದ್ದ ಜಯಂತ ಅವರು ಈಟಿವಿ ವಾಹಿನಿಗಾಗಿ ’ನಮಸ್ಕಾರ’, ಬೇಂದ್ರೆ, ಕುವೆಂಪು, ಕಾರಂತ ನಮನ ಸರಣಿಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ರಂಗದಿಂದೊಂದಿಷ್ಟು ದೂರ, ಕೋಟಿತೀರ್ಥ, ಶ್ರಾವಣ ಮಧ್ಯಾಹ್ನ, ...

READ MORE

Reviews

`ಶ್ರಾವಣ ಮಧ್ಯಾಹ್ನ ನೀಲಿ ಮಳೆ' ಕೃತಿಯ ವಿಮರ್ಶೆ

ಆಧುನಿಕ ಸಂವೇದನೆಯ ಕಾವ್ಯ

ನನ್ನ ಕಿರಿಯ ಗೆಳೆಯ ಜಯಂತ ಕಾಯ್ಕಿಣಿಯವರ ಪ್ರಬಂಧವೂ ಪಾದ ಸಂಯೋಜನೆಯೂ ತುಸು ಭಿನ್ನರೀತಿಯದು ಎಂದು ನಾನು ಚೆನ್ನಾಗಿ ಅರಿತಿದ್ದರೂ ‘ನೀಲಿ ಮಳೆ’ ಎಂಬ ಹೆಸರು ನನ್ನನ್ನು ತಬ್ಬಿಬ್ಬುಗೊಳಿಸಿದ್ದು ನಿಜ. ಯಾಕೆಂದರೆ, ನೀಲಿ ಚಂದ್ರವು ಅಪರೂಪನದರೂ ಗೊತ್ತಿರುವ ಸಂಗತಿ; ಆದರೆ ನೀಲಿ ಮಳೆಯೂ ಇದೆಯೆಂದು ಗೊತ್ತಿರಲಿಲ್ಲ. ಈ ಸಂಕಲನದ ‘ತಾಯಿ’ ಕವನದಲ್ಲಿ.

ಮುಗಿದ ರಿಫಿಲ್ಲು ಮುರಿದ ಬಾಲ ಪೆನ್ನುಗಳ
ಮಧ್ಯ
ಕಾಣೆಯಾದ ಇಂಕು ಪೆನ್ನನ್ನು ಜಯಂತ
ವರ್ಣಿಸುತ್ತ, ಪೆನ್ನು ಮಸಿ
ಖಾಲಿಯಾಗಲು ಬಂತೋ ಕುಡುಗಿದರೆ ನೀಲಿ
ಮಳೆ

ವರ್ಣಿಸುತ್ತ , ಪೆನ್ನು ಮಸಿ ಖಾಲಿಯಾಗಲು ಬಂತೋ ಕುಡುಗಿದರೆ ನೀಲಿ ಮಳೆ ಎಂದು ಕಾಗದದ ಮೇಳೆ ಧುಮುಕಿ ಬೀಳುವ ಇಂಕನ್ನು ಚಿತ್ರಿಸುತ್ತಾರೆ. ಹೀಗೆ ವಸ್ತು ವಿಷಯದಲ್ಲಿ ಹಳಹಳಿಕೆಯಿದ್ದೂ ಅಭಿವ್ಯಕ್ತಿ ಕ್ರಮದಲ್ಲಿ ನಾವೀನ್ಯವು ಕೃತಕವಾಗದ ಹಾಗೆ ಬರುವ ಲಕ್ಷ್ಮಣವು ಇವರ ಕಾವ್ಯ ಶೈಲಿಯನ್ನು ಪ್ರಧಾನವಾಗಿ ನಿರ್ದೇಶಿಸುತ್ತದೆ. ಮಳೆ ನೀಲಿಯಾಗಿರುವುದು ಹಾಗೆ.

ಈ ಅಭಿವ್ಯಕ್ತಿ ಕ್ರಮವು ಒಮ್ಮೆಲೇ ಬಂದುದಲ್ಲ. ಎಪ್ಪತ್ತರ ದಶಕದಲ್ಲಿ ಪ್ರಟಕವಾದ ಈ ಕವಿಯ ‘ರಂಗದಿಂದೊಂದಿಷ್ಟು ದೂರ’ ಸಂಗ್ರಹದ ಸಾಲುಗಳು ಆವೊತ್ತಿನ ಪಾರ್ಥಿನೀಯಂ ನಡುವೆ ತೊದಲುಲಿಯ ಕಾಲು ಹಾದಿಯನ್ನು ನಿರ್ಮಿಸಿತ್ತು. ನಂತರದ ‘ಕೋಟಿತೀರ್ಥ’ದ ಹೊತ್ತಿಗೆ ದೂರದ ಸಂಕೋಚವುಕಳೆದು ಶಾಬ್ದಿಕ ಪ್ರವಾಹವೇ ಹರಿಯಿತು. ಈಗ ಆ ಪ್ರವಾಹವು ಬಹುತೇಕ ಆವಿಯಾಗಿ ಸಂಯಮದ ತುಂತುರು ಮಳೆಯಾಗಿದೆ. ಸುಮಾರು ಎರಡು ದಶಕದಲ್ಲಿ ಆ ಈ ಬೆಳವಣಿಗೆಯು ಅಡ್ಡಡ್ಡವಾಗಿ ಆಗದೆ ಊರ್ಧ್ವಮುಖಿಯಾಗಿರುವುದು ಆರೋಗ್ಯ ಪೂರ್ಣವೆ ಸರಿ.

ಸಮಕಾಲೀನವಾಗಿ ಆಧುನಿಕ ಸಂವೇದನೆಯಲ್ಲಿ ಕವನವನ್ನ ಬರೆಯುತ್ತಿರುವ ಕೆಲವು ಕವಿಗಳಲ್ಲಿ ಜಯಂತರೂ ಒಬ್ಬರು. ಆಧುನಿಕ ಸಂವೇದನೆಯಮನ್ನು ಸೂತ್ರೀಕರಿಸುವುದು ಸುಲಭವಲ್ಲ. ಮೇೆಒಲುನೋಟಕ್ಕೆ ಅಥವಾ ಓದಿಗೆ ಸರಳವಾಗಿ ಕಾಣುವ ಈ ರಚನೆಗಳು ದಿಟದಲ್ಲಿ ಸಂಕೀರ್ಣವಾದವೇ. ನವ್ಯಕಾವ್ಯವನ್ನು ಪ್ರತಿಪಾದಿಸಲು ಮಂಡಿಸುತ್ತಿದ್ದ ಜೀವನ ಜಟಿಲತೆಯ ನೆಪ ಈ ಕಾವ್ಯಕ್ಕಿಲ್ಲ. ಯಾವ ಬದ್ಧತೆಯ ಸೋಗಿಗೂ ಒಳಗಾಗದ, ಆದರೆ ಬದುಕಿನ ಎಲ್ಲವನ್ನೂ ತನ್ನ ತೆಕ್ಕೆಗೆ ಒಗ್ಗಿಸಿಕೊಳ್ಳುವ ಸಮಗ್ರತೆಯನ್ನು ಇಂಥ ಕಾವ್ಯವು ಒಳಗೊಳ್ಳುವುದರಿಂದ ಇದರಲ್ಲಿಯ ಸಾಲುಗಳು ಬದುಕಿನಲ್ಲಿ ಅದ್ದಿ ತೆಗೆದ ರಕ್ತಮಾಂಸದ ಸಂವೇದನೆಯಾಗುತ್ತವೆ. ಜಾಗರದ ಕೊನೆಗೆ, ಚೆನ್ನಪ್ಪನ ಮಕ್ಕಳು.. ರಂಗೀಲಾ ಮತ್ತು ಲಿಪಿ ಕವನಗಳು ಆಧುನಿಕ ಸಂವೇದನೆಗಳಿಗೆ ಮಾದರಿ ಆಗುವಂಥ ನಿದರ್ಶನಗಳು. ಬಾಲ್ಯದ ಹಳಹಳಿಕೆಯೊಂಇಗೇ ವರ್ತಮಾನದ ನಗರ ಪ್ರಜ್ಞೆಯೂ ಸೇರಿ ವೈಯುಕ್ತಿಕ ಅನುಕಂಪವನ್ನು ಜಾಗತಿಕ ಪರಿಧಿಯವರೆಗೂ ಇಲ್ಲಿನ ಸಾಲುಗಳು ವಿಸ್ತರಿಸಬಲ್ಲವು:

ಐಸಿಪ್ಪೆಯನ್ನು ಕಿತ್ತಲೆಯೆಂದು ತಿಳಿದು
ಐಮೋಸ ಹೋಗಿದ್ದಾನೆ ಉದ್ದ ಕಸಬರಿಗೆಯ
ವಾರ್ಡ್ ಬಯ್.
ಐಹೇಗೆ ಅಲುಗುತ್ತಿದೆ ಜೋತ ತುಟಿ
ಐತಲೆಗೆ ಅವ್ವ ಎಣ್ಣೆ ಹಾಕುತಿರುವಂತೆ.
ಐಸಿಗ್ನಲ್ ಬಳಿ ಶಾಲೆಯ ಬಸ್ಸಲಿ ಬೆಚ್ಚಿದಳೆ
ಗೊಂಟಿ
ಕಿಟಕಿಗೆ ಬಂದು ಬೇಡುವ ಕೈ ತೋರಿದಲಿ ತಮ್ಮನ
ಕಂಡು

ಸಾಲುಗಳ  ಉದಾಹರಣೆ ಕೊಡುವುದು ಕಷ್ಟ. ಯಾಕೆಂದರೆ ಎಲ್ಲ ಸಾಲೂ ಸೇರಿತಾನೆ ಕವನವಾಗುವ ಚಳಕ? 

ಪ್ರತಿಯೊಬ್ಬ ಕವಿಗೂ ತನ್ನದೇ ಆದ ಮನೋಧರ್ಮ ಇರುತ್ತದೆ. ನಿಜವಾಗಿ ಅದೇ ಅವನ ಕಾವ್ಯದ ಮರ್ಮವೂ ಹೌದು. ಜಯಂತರ ಒಂದು ಚಿಕ್ಕ ಕವನವನ್ನು ಈ ದೃಷ್ಟಿಯಿಂದ ಗಮನಿಸಬಹುದು:

ಐದಾರು ಹೂಗಳನ್ನು ಕೊಯ್ದಾದ ನಂತರ 
ಮಾಲಿಗೆ ನೆನಪಾಯಿತು ಮಗಳ ಜನ್ಮದಿನ
ಆರನೆಯದನ್ನು ಅಕ್ಕರೆಯಿಂದ
ಕಿಸೆಯಲ್ಲಿಟ್ಟುಕೊಂಡು
ಮರುದಿನ ಅಂಗಿ ಒಗೆಯಲು ಹಾಕುವ
ಮುನ್ನ
ಅದು ಅವಳಿಗೆ ಸಿಕ್ಕಿತು(ಮಾಲಿ)

ಯಾವ ನಗೆಹನಿಯಾಗಲೀ ಇಲ್ಲವೇ ಜಾಣ್ಮೆಯ ಅಂತ್ಯವಾಗಲಿ ಇಲ್ಲದ ಚಿಕ್ಕ ಕವನ ಇದು. ಹುಟ್ಟಿದ ದಿನದ ಜ್ಞಾಪಕ ಹೂ ಕೊಯ್ಯುವಾಗ ಬಂದರೂ ನಂತರದ ಮರವೆಯಲ್ಲಿ ಅಪ್ಪ ಮಗಳಿಗೆ ಕೊಡುವುದೇ ಇಲ್ಲ. ಆದರೆ ಬಾಡಿ, ಮುದುರಿದ ಆ ಹೂ ಯಾರಿಗೆಂದು ಉದ್ದೇಶವಾಗಿದೆಯೋ ಆ ಮಗುವಿಗೆ ಕೆಲಸದ ಭರದಲ್ಲಿ ಸಿಕ್ಕುತ್ತದೆ. ಆದರೆ ಅದು ಮಾರನೆಯ ದಿನ. ವಿರೋಧಗಳು ಕೆಲಸ ಮಾಡುವ ಕಾವ್ಯಕರ್ಮವನ್ನು ಇಲ್ಲಿ ಗುರುತಿಸಬಹುದು. ಇಂಥಲ್ಲಿ ಸನ್ನಿವೇಶವು ಸಾರ್ಥಕವನ್ನು ಕಳೆದುಕೊಂಡರೂ, ಕಾವ್ಯವು ಕಲೆಯನ್ನು ಉಳಿಸಿಕೊಳ್ಳುತ್ತದೆ.

ಆಧುನಿಕ ಸಂವೇದನೆಯ ಇನ್ನೊಂದು ಲಕ್ಷಣ. ಜೀವನ ಸನ್ನಿವೇಶವು ಎಂಥದೇ ಆಗಿರಲಿ ಅದರ ಒಳಗಿನ ನಾಟಕೀಯತೆಯನ್ನು ಮೆಲ್ಲಗೆ ಬಿಡಿಸಿ ಅಭಿವ್ಯಕ್ತಿಗೊಳಿಸುವುದು. ಏಣಿ ಹೊತ್ತು ಎಂಬ ಕವನ ಇದಕ್ಕೆ ಮಾದರಿಯಾದ ನಿದರ್ಶನ. ಸಂಜೆ ಆದರೆ ಅವನು(ಸರ್ವನಾಮದ ಸಾರ್ವಕಾಲಿಕತೆಯನ್ನು ಮತ್ತು ಸಾರ್ವತ್ರಿಕತೆಯನ್ನು ನೋಡಿ) ಹೆಗಲಿಗೆ ಏಣಿ ಹಾಕಿ ಬೀದಿಯ ದೀಪಗಳನ್ನು ಹತ್ತಿಸುತ್ತ ಬರುವನು.

ಸಣ್ಣ ಊರಿಡೀ ಕಂಬಗಳು ಹೀಗೆ. ತುದಿಗೆ
 ಜೀವ ಹಿಡಿದೆ ಆರ್ತ ಬೆಳಕು....

------

ಕಂಬದ ದೀಪ ಏಕಾಕಿ ಹೋರಾಡುವವು ಕತ್ತಲ ಜತೆ. ಇಡೀ ರಾತ್ರಿ ಮರುದಿನ ನಸುಕಿಗೇ ಬಂದು ಏಣಿ ಹಿಡಿದು

--ಏರುವನು ಪ್ರತಿಕಂಬ
ನಂದದೆ ಉರಿದಿರುವ ವೀರ ದೀಪಗಳನ್ನು
ಆರಿಸುವನು ಹುಡುಕಿ.

ಈ ಹುಡುಕು ಮುಂದುವರಿಯುತ್ತಲೇ ಇದೆ. 

ಹಾಗೆಂದು ಎಲ್ಲ ಕವನಗಳೂ ಮೇಲೆ ಹೇಳಿರುವ ಎಲ್ಲ ನೆಲೆಗಳನ್ನು ಮುಟ್ಟುವುದಿಲ್ಲ. ಸನ್ನಿವೇಶದಲ್ಲಿ ಕಾವ್ಯ ಇಲ್ಲದಿರುವಾಗ, ನಾಟಕೀಯತೆಯು ಕೇವಲ ಬಾಹುಳ್ಯವಾಗುತ್ತದೆ. (ಸನಿಹ, ಒಂದು ಮಧ್ಯಾಹ್ನ ಫೇರಿವಾಲಾ ಇತ್ಯಾದಿ). ಇಂದಲ್ಲ ನಾಳೆ ಪ್ರಪಂಚವು ತೀರ ಭ್ರಷ್ವವಾದಾಗ ಇಂಥ ಕಾವ್ಯ ತನ್ನ ಧನ್ಯತೆಯನ್ನು ನೀಗಿಕೊಳ್ಳಬಹುದು. ಹೀನ ಪ್ರತಿಮೆಗಳು ಬೇರೆ ಭಾವವನ್ನು ಅರಸಬೇಕಾಗಿದೆ. 
ಯಾಕೆಂದರೆ :
ಮೋಡಗಳು ಬಾಗಿಲಲ್ಲೆ ಎದೆ ಒಡೆದು
ಬಿದ್ದರೂ  
ಬೇಸಿಗೆಗೆ ಬಂದ ಅಕ್ಕ ಮರಳಬೇಕಲ್ಲ?

(ಬರಹ : ದೇಶಕುಲಕರ್ಣಿ, ಕೃಪೆ : ಸುಧಾ ಸೆಪ್ಟೆಂಬರ್ 1997)

Related Books