ಗಾಯಗೊಂಡಿವೆ ಬಣ್ಣ..!

Author : ಎಂ.ಡಿ.ಚಿತ್ತರಗಿ

Pages 104

₹ 120.00
Year of Publication: 2022
Published by: ಹೊನ್ನಕುಸುಮ ಪ್ರಕಾಶನ
Address: ಮಹಾಂತನಗರ, ಹುನಗುಂದ-587118
Phone: 09686019177

Synopsys

ಪ್ರೊ ಎಂ.ಡಿ.ಚಿತ್ತರಗಿಯವರ ಮೊದಲ ಕವನಸಂಕಲನವಾದ 'ಗಾಯಗೊಂಡಿವೆ ಬಣ್ಣ' ಕೃತಿಯ ಕುರಿತಾಗಿ ಜಗದೀಶ ಹಾದಿಮನಿಯವರು ಬೆನ್ನುಡಿಯಲ್ಲಿ ಈ ರೀತಿಯಾಗಿ ದಾಖಲಿಸುತ್ತಾರೆ. ʼಮಥನʼ ವಿಮರ್ಶಾ ಕೃತಿಯ ಮೂಲಕ ವಾಙ್ಮಯಲೋಕಕ್ಕೆ ಪಾದಾರ್ಪಣೆಗೈದಿರುವ ಆತ್ಮೀಯ ಗೆಳೆಯನ ಚೊಚ್ಚಲ ಕವನಸಂಕಲನವೇ ʼಗಾಯಗೊಂಡಿವೆ ಬಣ್ಣ!. ಇದು ಯಾವ ಪಂಥಕೂ ಸಿಲುಕದೆ, ಬಂಡಾಯದ ದಂಡೆಯ ಮೇಲಿದ್ದರೂ ವಾಸ್ತವಿಕತೆಯ ಹೂರಣದ ಚಿತ್ರಣಗಳನ್ನು ರಂಗುರಂಗಿನ ಚುಕ್ಕಿಗಳ ಚಿತ್ತಾರದ ಹಿಡಿ ಚೌಕಟ್ಟಿನೊಳು ಸಶಕ್ತವಾಗಿಯೇ ಬಿತ್ತರಗೊಂಡಿದೆ. ಪ್ರಾಸ-ಅಲಂಕಾರಗಳೆಂದು ಯಾವುದಕ್ಕೂ ಜೋತುಬೀಳದೆ ಸ್ವಚ್ಛಂದಲಹರಿಯಲ್ಲಿ ವಿಹರಿಸಿದ್ದರೂ ಎದೆಮಿಡಿತದ ನೂರು- ಸಾವಿರ ತರಂಗದಲೆಗಳ ರಾಗ-ಭಾವ-ತಾಳ-ತಂತಿಗಳ ಸಂಜೀವಿನಿಯ ಪಿಸುಮಾತುಗಳ ದನಿಯನ್ನಿಲ್ಲಿ ಕೇಳಬಹುದು ಎನ್ನುತ್ತಾರೆ.

About the Author

ಎಂ.ಡಿ.ಚಿತ್ತರಗಿ

ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಬಾಗಲಕೋಟೆ ಜಿಲ್ಲೆಯ ಹುನಗುಂದದವರಾದ ಎಂ.ಡಿ.ಚಿತ್ತರಗಿಯವರು ಹುನಗುಂದ- ಇಳಕಲ್ಲಿನಲ್ಲಿ ಪದವಿಪೂರ್ವದವರೆಗಿನ ಶಿಕ್ಷಣವನ್ನು ಪೂರೈಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿಗಳನ್ನು ಕ್ರಮವಾಗಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಹಾಗೂ ಕುವೆಂಪು ವಿಶ್ವವಿದ್ಯಾಲಯ ಶಿವಮೊಗ್ಗಗಳಲ್ಲಿ ಬಾಹ್ಯವಾಗಿ ಪೂರೈಸಿದ್ದಾರೆ. ಬಿ-ಇಡಿ ಪದವಿಯನ್ನು ಏಳನೆಯ ರ್ಯಾಂಕಿನೊಂದಿಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಪೂರೈಸಿರುವ ಇವರು ಮೊದಲು ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಪ್ರೌಢಶಾಲಾ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದು, ಈಗ ಉನ್ನತ ಶಿಕ್ಷಣ ಇಲಾಖೆಯ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಧ್ಯಯನ, ಅಧ್ಯಾಪನ, ಮಾರ್ಗದರ್ಶನದೊಂದಿಗೆ ಹುನಗುಂದದಲ್ಲಿ ʼಹೊನ್ನಕುಸುಮ ಸಾಹಿತ್ಯ ...

READ MORE

Reviews

ಗಾಯಗೊಂಡಿವೆ ಬಣ್ಣ!
     ಒಬ್ಬ ಕವಿಗೆ ಬಹಳ ಮುಖ್ಯವಾಗಿ ಬೇಕಾಗೋದು ಭಾವತೀವ್ರತೆ. ಅದು ಎಂ.ಡಿ.ಚಿತ್ತರಗಿಯಯವರಲ್ಲಿದೆ. ಹೀಗಾಗಿ ಇವರ ಕಾವ್ಯವನ್ನು ನಾನು ಪ್ರೀತಿಯಿಂದಲೇ ಸ್ವಾಗತಿಸುವೆ. ಮಾನವೀಯ ಅಂತಃಕರಣ, ಪ್ರಜ್ಞಾವಂತಿಕೆ ಈ ಕೃತಿಯಲ್ಲಿನ ಕಾವ್ಯದ ಮುಖ್ಯ ಗುಣ. ಇದು ಕನ್ನಡ ಕಾವ್ಯದ (ಜಗತ್ತಿನದೂ ಕೂಡಾ) ಪರಂಪರೆಯಲ್ಲಿಯೆ ಇದೆ. ಹೀಗಾಗಿ ಕವಿಯ ಮಾನವೀಯ ಮಿಡಿತಕ್ಕೆ ಕಾವ್ಯ ಮಾಧ್ಯಮ ಸೂಕ್ತವಾಗಿದೆ.
               ಮೊದಲ ಕವನದ ʼಅಕ್ಷರದ ಗದ್ದೆ-ಗದ್ದೆಗೂ…ʼ ಮೂರನೆಯ ಕವಿತೆಯ ʼಪಟಾಕಿಯ ಹೆಣದ ರಾಶಿ..ʼ ʼಹಳಸಿದ ಪೌಡರ್‌ ವಾಸನೆ..ʼ ಮುಂತಾದ ಸಾಲುಗಳು ಕಾವ್ಯದ ಹೊಸ ಪರಿಭಾಷೆಯನ್ನೇ ಪರಿಚಯಿಸಿವೆ. ʼನಾರುವ ಮನಗಳು..ʼ ʼಭಾಸ್ಕರನ ಬೆದರುಗೊಂಬೆ..ʼ ವಿಭಿನ್ನ ಅರ್ಥಗಳನ್ನು ಧ್ವನಿಸಿವೆ. ʼಮುಳ್ಳುʼ, ʼಹೊಗೆʼ, ʼಅವಳುʼ, ʼಅವ್ವನೊಲವಿನ ತಂಗಳೂಟʼ, ʼಗಾಂಧಿʼ, ʼರಂಜಾನ್‌ ಚಂದಿರʼ, ʼನಗಬೇಕು ಆತʼ, ʼಸುಂದರಿʼ, ಮುಂತಾದ ಕವನಗಳು ಓದುಗರನ್ನು ಹಿಡಿದು ನಿಲ್ಲಿಸುತ್ತವೆ. ʼಬೆಳಗುʼ ಕವಿತೆಯ ʼದಣಿವರಿಯದ ಚೂಪಾದ ಕೊಡಲಿʼ ನಮ್ಮ ಕಾಲದ ಬರ್ಬರತೆಯನ್ನು ಶಕ್ತವಾಗಿಯೇ ಕಟ್ಟಿಕೊಟ್ಟಿದೆ.
         ಸಂಕಲನದ ಎಲ್ಲ ಕವನಗಳೂ ಚೆನ್ನಾಗಿವೆ. ಆದರೆ! ಭಾವಸೂಚಕ ಚಿಹ್ನೆಯ ಬಳಕೆ ಸ್ವಲ್ಪ ಹೆಚ್ಚಾಗಿಯೇ ಬಳಕೆಯಾಗಿದೆ ಎನಿಸಿತು. ಭಾವತೀವ್ರತೆಗೆ ಇದು ಬೇಕು  ನಿಜ; ಆದರೆ ಕಾವ್ಯ ಸಂವಹನಕ್ಕೆ ಅದೇ ಅಡ್ಡಿಯಾಗಬಾರದು. ʼಯುಗಾದಿ ಮತ್ತು ನಾವುʼ ಎಂಬ ಕವನವು ಈ ಚಿಹ್ನೆ ಇಲ್ಲದೆಯೆ ಸರಾಗವಾಗಿ ಸಂವಹನಗೊಂಡಿರುವುದನ್ನು ಕಾಣಬಹುದು ಅಲ್ಲವೇ?
              ʼಜಾವದ ಬೇವುʼ ರೊಕ್ಕʼ ಈ ಕವಿತೆಗಳು ಕಾವ್ಯವಾಗುತ್ತಲೇ ಬುದ್ಧಿವಾದ ಹೇಳುವ ಚಾಕಚಕ್ಯತೆಯನ್ನು ತೋರಿವೆ. ಹೀಗೆ ʼಗಾಯಗೊಂಡಿವೆ ಬಣ್ಣ!ʼ ಸಂಕಲನ ನನಗೆ ಇಷ್ಟವಾಯಿತು. ನಮ್ಮ ಉತ್ತರ ಕರ್ನಾಟಕದ ಪ್ರತಿಭೆ ಹೀಗೆ ಅಖಿಲ ಕರ್ನಾಟಕವನ್ನು ತಲುಪಲೆಂದು ಹಾರೈಸುವೆ.
   ಡಾ. ವಸಂತಕುಮಾರ್‌ ಎಸ್‌ ಕಡ್ಲಿಮಟ್ಟಿಯವರ ಮುನ್ನುಡಿಯೂ ಅರ್ಥಪೂರ್ಣವಾಗಿದೆ. ಹಾಗೆಯೇ ಜಗದೀಶ ಹಾದಿಮನಿಯವರ ಬೆನ್ನುಡಿಯೂ ಧ್ವನಿಪೂರ್ಣವಾಗಿದೆ. ಇರ್ವರಿಗೂ ಶುಭಾಶಯಗಳು.
                        ʼಮಥನʼ ಎಂಬ ವಿಮರ್ಶಾ ಕೃತಿಯನ್ನೂ ಹೊರತಂದಿರುವ ಚಿತ್ತರಗಿಯವರಿಗೆ ವಿಮರ್ಶಾ ಕ್ಷೇತ್ರದ ಕಡೆಗೂ ಒಲವಿರುವುದು ಮೆಚ್ಚತಕ್ಕ ಸಂಗತಿ. ಉತ್ತರ ಕರ್ನಾಟಕದಲ್ಲಿ ಈ ಕ್ಷೇತ್ರವೂ ಬೆಳೆಯಬೇಕಿದೆ. ಹೀಗಾಗಿ ಕವಿಯನ್ನು ಅಭಿನಂದಿಸುವೆ. ಇವರ ಸಾಹಿತ್ಯ, ಸಂಸ್ಕೃತಿಯ ಬಗೆಗಿನ ಪ್ರೀತಿಯ  ಹಿಂದಿರುವ ಮಾನವೀಯ ಕಾಳಜಿಗೆ ಧನ್ಯವಾದಗಳು.
  * * * * *
                                         ಹುರುಕಡ್ಲಿ ಶಿವಕುಮಾರ
                                      ಬಾಚಿಗೊಂಡನಹಳ್ಳಿ (ಅಂಚೆ)
                                      ಹಗರಿಬೊಮ್ಮನಹಳ್ಳಿ (ತಾ)
                              ವಿಜಯನಗರ ಜಿಲ್ಲೆ. – 583912
                             ಮೊ-   7829657633

 

#ಗಾಯಗೊಂಡಿವೆ ಬಣ್ಣ! ಕುರಿತಾಗಿ ಇಲಕಲ್ಲಿನ ಗುರು ಹಿರೇಮಠ ಬರೆಯುತ್ತಾರೆ...

ನಮ್ಮ ಬದುಕಿನ ಪಯಣ ತಾಯಿ ಗರ್ಭಗುಡಿಯಲಿ ಆರಂಭವಾಗಿ, ಮಣ್ಣಿನ ಗರ್ಭದಲ್ಲಿ ಲೋಕದ ಕಣ್ಣಿನಲ್ಲಿ ಅಂತ್ಯವಾದರೂ ಸಹ, ಆಧ್ಯಾತ್ಮಿಕ ನೆಲೆಗಟ್ಟು ಮತ್ತು ವಿಜ್ಞಾನದ ಆಧಾರದ ಮೂಲಕ ನಮಗೆ ಅಂತ್ಯವಿಲ್ಲ ಎನ್ನುವುದು ಸತ್ಯ. ಈ ನೆಲೆಯ ಮೂಲಕ ನನ್ನೆದೆಗೆ ಈ ಕೃತಿಯಲ್ಲಿನ ಕವಿತೆಗಳನ್ನು ಇಳಿಸಿಕೊಂಡೆ. ನಿಜಕ್ಕೂ ಅದೊಂದು ಸುಂದರ ಪಯಣ‌. ಈ ಕವನಗಳನ್ನ ಓದದೆ ಹೋಗಿದ್ದರೆ ನಾನು ಏನನ್ನೋ ಕಳೆದುಕೊಳ್ಳುತ್ತಿದ್ದೆ ಎನ್ನುವುದನ್ನ ಪ್ರಶ್ನೆ ಮಾಡಿಕೊಂಡಾಗ ,ಉತ್ತರ ಬಹಳ ಸರಳ,   ಸಹಜವಾಗಿ ಇತ್ತು. ನನಗೆ ನಾನು ಯಾವಾಗಲೂ ಪ್ರಶ್ನೆ ಉಳಿಸಿಕೊಂಡು ಹೋಗುವ ಅಪಾಯದಿಂದ ಪಾರು ಮಾಡಿದ್ದು ಅಲ್ಲದೆ ,  #ಬೆಳಕಿನಿಂದ ಸಿಗುವ ಉತ್ತರ ಇಲ್ಲಿಯ ಕವಿತೆಗಳಿಂದ ಸಿಕ್ಕಿತೆಂದು ನಿಸ್ಸಂದೇಹವಾಗಿ ಹೇಳಬಲ್ಲೆ. 

ಇಲ್ಲಿಯ ಕವಿತೆಗಳು ಕವಿಯನ್ನೇ ಮೀರಿ ನಿಂತಿರುವುದು ಕಂಡು ಬರುತ್ತದೆ.‌ಕವಿಗೆ ಓದಿನ ನೆರವು ಇದ್ದರೂ ಸಹ, ಬದುಕಿನ ಹರಿವಿನಲಿ ಕಡಲಿನ ಸತ್ಯವನ್ನು ತಿಳಿದುಕೊಂಡು ಬದುಕುತ್ತಿರುವದರಿಂದ ಇಂತಹ ಸಾಲುಗಳು ಬರೆಯಲು ಸಾಧ್ಯವಾಗಿದೆ ಅನಿಸುತ್ತದೆ. ಯಾಕೆಂದರೆ ಕವಿ ಕಲ್ಪನೆಯಲ್ಲಿ ಏನನ್ನೂ ಕಟ್ಟಲು ಪ್ರಯತ್ನ ಮಾಡಿಲ್ಲ. ಸತ್ಯದೊಂದಿಗೆ ಮುಖಾಮುಖಿ ಆಗುವ ಮೂಲಕ ಕಾಲಕ್ಕೆ ಪ್ರಶ್ನೆಯನ್ನು ಒಡ್ಡುತ್ತಾನೆ. ಕಾಲ ಬದಲಾಗಬಹುದು, ಸತ್ಯ ಬದಲಾಗದು ಎನ್ನುವ ಅರಿವು ಕವಿಗೆ ಇರುವುದರಿಂದ‌ ಎಲ್ಲವನ್ನೂ ಸೂಕ್ಷ್ಮ ಪ್ರಜ್ಞೆಯ ಮೂಲಕ ನೇರವಾಗಿ ಬರೆಯುತ್ತಾ ಹೋಗಿದ್ದಾರೆ. ಕವಿ ನನಗೆ ಪರಿಚಯ ಇರುವ ಕಾರಣದಿಂದಾಗಿ ಈ ಮಾತನ್ನು ನಾನು ಹೇಳಬಲ್ಲೆ.

ಕವಿ ಇಲ್ಲಿ ಒಮ್ಮೊಮ್ಮೆ ಅಲ್ಲಮನಂತೆ, ಬುದ್ದನಂತೆ, ಬಸವನಂತೆ ಕಂಡರೆ ಮತ್ತೊಮ್ಮೆ ಸಂತ ಶರೀಫ್ , ಕುವೆಂಪು , ನಿಸಾರ್ ಅಹಮದ್ ರಂತೆ ನನ್ನೊಳಗೆ ಇಳಿದು ಕಾಡುತ್ತಾ ಸಾಗುತ್ತಾರೆ

Related Books