ಲೇಖಕ ಈರಣ್ಣ ಬೆಂಗಾಲಿ ಅವರ ’ಕಾಡುವ ಗುಬ್ಬಿ’ ಕೃತಿಯು 555 ಹೈಕುಗಳನ್ನು ಒಳಗೊಂಡಿದೆ. ಕೃತಿಗೆ ಬೆನ್ನುಡಿ ಬರೆದಿರುವ ಅರುಣಾ ನರೇಂದ್ರ ಕೊಪ್ಪಳ ಅವರು ‘ ವೈವಿಧ್ಯಮಯ ವಿಷಯ ವಸ್ತುವನ್ನು ಒಳಗೊಂಡಿರುವ ಕೃತಿ ಇದಾಗಿದ್ದು, ಝೆನ್ ವಿಚಾರಧಾರೆಗಳನ್ನು ಪ್ರಸ್ತುತಪಡಿಸುವ ಹೈಕು ಜಪಾನಿಯರ ಮಹತ್ವದ ಕೊಡುಗೆಯಾಗಿದೆ. ಇಂದಿನ ಅನೇಕ ಸಾಹಿತ್ಯ ಪ್ರಕಾರಗಳು ನೇರವಾಗಿ ಇಂಗ್ಲೀಷ್‌ನಿಂದ ಅಥವಾ ಅದರ ಸಂಪರ್ಕದಿಂದ ಸಿದ್ದವಾದವು. ಕನ್ನಡ ಸಾಹಿತ್ಯದ ಮೇಲೆ ಇಂಗ್ಲೀಷ್ ಸಾಹಿತ್ಯ ಹೆಚ್ಚು ಪ್ರಭಾವ ಬೀರಿದೆ. ಹಾಗೆಯೇ ಜಪಾನಿನ ಸಾಂಪ್ರದಾಯಿಕ ಹೈಕು ಪ್ರಕಾರ, ಕನ್ನಡಕ್ಕೆ ಬಂದು ಈ ಮಣ್ಣಿನ ಗುಣಕ್ಕೆ ಒಗ್ಗಿಕೊಂಡಿದೆ. ಕವಿ ಈರಣ್ಣ ಬೆಂಗಾಲಿ ಅವರು ಹೈಕು ಛಂದಸ್ಸನ್ನು ಮೀರದೆ ನಿಯಮಕ್ಕನುಸಾರವಾಗಿ ಕಿರಿದರಲ್ಲಿ ಹಿರಿದಾದ ಅರ್ಥ ಹಿಡಿದಿಟ್ಟಿದ್ದಾರೆ. ಬಿಂದುವನ್ನು ಸಿಂಧುವಾಗಿಸಿ, ಕಣದಲ್ಲಿ ವಿಶ್ವವನ್ನು ತುಂಬಿ, ಕಲೆಯನ್ನು ಕನ್ನಡಿಯಲ್ಲಿ ತೋರಿಸಿದ ಇವರ ಪ್ರಯತ್ನ ಮೆಚ್ಚುವಂಥದ್ದು. ಪ್ರಕೃತಿ ಹಾಗೂ ಇತರೆ ವಿಷಯಗಳಿಗೆ ಸಂಬಂಧಿಸಿದಂತೆ ಅತ್ಯಂತ ಧ್ಯಾನಸ್ಥರಾಗಿ ರಚಿಸಿದ ಈ ಹೈಕುಗಳು ಲೌಕಿಕ ಬದುಕಿನಿಂದ ಬಸವಳಿದ ಜೀವಕ್ಕೆ ಅಂತರಂಗದ ಅನುಭೂತಿ ನೀಡುತ್ತವೆ’ ಎಂದು ಪ್ರಶಂಸಿಸಿದ್ದಾರೆ.
ವ್ಯಂಗ್ಯಚಿತ್ರಕಾರ, ಬರಹಗಾರ ಈರಣ್ಣ ಬೆಂಗಾಲಿ ಅವರು ಜನಿಸಿದ್ದು 1984 ಜೂನ್ 21ರಂದು. ವ್ಯಂಗ್ಯಚಿತ್ರ ಬರಹ ಹಾಗೂ ಸಾಹಿತ್ಯದಲ್ಲಿ ತೊಡಗಿಸಿಕೊಂಡಿರುವ ಇವರು ರಾಯಚೂರಿನಲ್ಲಿ ನೆಲೆಸಿದ್ದಾರೆ. ಏಕಲವ್ಯನ ರೇಖೆಗಳು (ವ್ಯಂಗ್ಯಚಿತ್ರ ಸಂಕಲನ), ಮುತ್ತುಗಳು (ಹನಿಗವನ ಸಂಕಲನ), ಕಮರಿದ ಕನಸು (ಹೈಕು ಸಂಕಲನ), ಚಿನ್ನದ ನಾಣ್ಯ (ಸಂಪಾದನೆ), ಬಿಸಿಲೂರ ಸಾಧಕರು, ಹಸಿರ ಯೋಗಿ ಮುಂತಾದವು ಇವರ ಪ್ರಮುಖ ಕೃತಿಗಳು. ರಾಯಚೂರು ವಾಹಿನಿ ಮತ್ತು ನಮ್ಮ ರಾಯಚೂರು ವಾರಪತ್ರಿಕೆಗಳ ದೀಪಾವಳಿ ವಿಶೇಷಾಂಕದ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ದಾವಣಗೆರೆ ಚುಟುಕು ಸಾಹಿತ್ಯ ಪರಿಷತ್ತಿನಿಂದ ಪ್ರತಿಭಾ ಶಿರೋಮಣಿ ಬಿರುದು ಇವರಿಗೆ ಸಂದಿದೆ. ...
READ MORE