ನೆಲದಾಸೆಯ ನಕ್ಷತ್ರಗಳು

Author : ಎಂ.ಆರ್. ಕಮಲ

Pages 130

₹ 70.00
Year of Publication: 2021
Published by: ಕಥನ ಪ್ರಕಾಶನ
Address: ನಂ.405, 19th ಜಿ ಮುಖ್ಯರಸ್ತೆ, 1ನೇ ಬ್ಲಾಕ್ ರಾಜಾಜಿನಗರ, ಬೆಂಗಳೂರು- 560010
Phone: 09739277750

Synopsys

ಹಿರಿಯ ಲೇಖಕಿ ಎಂ ಆರ್ ಕಮಲ ಅವರ ‘ನೆಲದಾಸೆಯ ನಕ್ಷತ್ರಗಳು’ ಕವನ ಸಂಕಲನವು ‘ವಿಸ್ಮೃತಿ ಸಮಯದ ರೂಪಕಗಳು’ ಎಂಬ ಉಪಶೀರ್ಷಿಕೆಯನ್ನು ಹೊಂದಿದೆ. ಖುದ್ದು ಈ ಕವನ ಸಂಕಲನ ಬಗ್ಗೆ ಕೃತಿಯಲ್ಲಿ ಬರೆದುಕೊಂಡಿರುವ ಕವಯತ್ರಿ, ವಲಸೆ, ವಿಸ್ಮೃತಿ, ಒಂಟಿತನ, ವೃದ್ಧಾಪ್ಯ, ಪರಿಸರ, ಹೆಣ್ಣಿನ ಆಸ್ಮಿತೆ, ಮನುಷ್ಯನ ಸೋಲಾಡಿತನ, ಸಾಮಾಜಿಕ ಜಾಲತಾಣ, ಮಾಧ್ಯಮಗಳ ಪರಿಣಾಮ, ಅಧಿಕಾರ, ಸಿರಿವಂತಿಕೆ ನಿರರ್ಥಕತೆ, ಪ್ರೀತಿ, ಆಧ್ಯಾತ್ಮ, ನೆನಪುಗಳು, ಪ್ರಸಕ್ತ ರಾಜಕೀಯ ವಿದ್ಯಮಾನಗಳು, ಈ ರೂಪಕಾತ್ಮಕ ಕವಿತೆಗಳನ್ನು ರೂಪಿಸಿದೆ. ಇಲ್ಲಿನ ‘ನಾನು’ ಒಂದು ಸಾರ್ವತ್ರಿಕ ಪ್ರತಿಮೆ. ಸಂಕಲನದುದ್ದಕ್ಕೂ ಹರಡಿರುವ ರೂಪಕಗಳು ಹಿಂದಿನ ಕೃತಿ ‘ಗದ್ಯಗಂಧಿ’ಯ ವಿಸ್ತರಣೆಯಾಗಿದೆ. ತಮ್ಮ ಪ್ರಯೋಗಶೀಲತೆಯಿಂದ ಅಮೂರ್ತದ ಚೆಲುವಿನಿಂದ ಆಕರ್ಷಕವಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. 

About the Author

ಎಂ.ಆರ್. ಕಮಲ
(27 March 1959)

ಕವಿ-ಅನುವಾದಕಿಯಾಗಿ ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿಚಿತ ಎಂ.ಆರ್. ಕಮಲಾ ಅವರು ಹಾಸನ ಜಿಲ್ಲೆಯ ಅರಸಿಕೆರೆ ತಾಲ್ಲೂಕಿನ ಮೇಟಿಕುರ್ಕೆಯವರು. 1959ರ ಮಾರ್ಚ್‌ 27ರಂದು ಜನಿಸಿದರು. ತಂದೆ ಎಂ.ಎಚ್. ರಾಮಸ್ವಾಮಿ, ತಾಯಿ ವಿಶಾಲಾಕ್ಷಿ. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಮತ್ತು ಎಲ್.ಎಲ್.ಬಿ. ಪದವಿ, ಸ್ನಾತಕೋತ್ತರ ಪರೀಕ್ಷೆಯಲ್ಲಿ ಪಾಶ್ಚಿಮಾತ್ಯ ಸಾಹಿತ್ಯ ಅಧ್ಯಯನಕ್ಕಾಗಿ ಬಿಎಂಶ್ರೀ ಚಿನ್ನದ ಪದಕ ವಿಜೇತರು.  ಫ್ರೆಂಚ್ ಭಾಷೆಯಲ್ಲಿ ಪದವೀಧರರು. ಶಕುಂತಲೋಪಾಖ್ಯಾನ (1988), ಜಾಣೆ ಮತ್ತು ಇತರ ಕವಿತೆಗಳು (1992), ಹೂವು ಚೆಲ್ಲಿದ ಹಾದಿ (2007), ಮಾರಿಬಿಡಿ (2017) ಕವನ ಸಂಕಲನಗಳು. ಆಫ್ರಿಕನ್-ಅಮೆರಿಕನ್ ಮತ್ತು ಅರಬ್ ಮಹಿಳಾ ಕಾವ್ಯದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. ’ಕತ್ತಲ ಹೂವಿನ ಹಾಡು (1989) ...

READ MORE

Reviews

‘ನೆಲದಾಸೆಯ ನಕ್ಷತ್ರಗಳು’ ಕೃತಿಯ ವಿಮರ್ಶೆ

ತೀವ್ರ ಓದಿನ ಸುಖವನ್ನು ನೀಡುವ ಸಂಕಲನ
ಇದು ಕವಿಯಾಗಿ, ಅನುವಾದಕಿಯಾಗಿ ಹಲ ಮಾಡಿರುವ ಎಂ.ಆರ್.ಕಮಲ ಅವರ 'ಸ್ಕೃತಿ ಸಮಯದ ರೂಪಕ' ಎಂಬ ಅಡಿಬರಹವನ್ನು ಹೊತ್ತು ಬಂದಿರುವ ವಿಶಿಷ್ಟ ಸಂಕಲನ, ಈ ಸಂಕಲನದಲ್ಲಿ ನಾವು ಸಾಹಿತ್ಯವನ್ನು ಗದ್ಯ ಪದ್ಯಗಳೆಂದು ವಿಂಗಡಿಸಿ ನೋಡುವ ರೂಢಿಯ ಚೌಕಟ್ಟಿನಾಚೆಗೆ ನಿಂತು ತನ್ನ ಅನುಭವವನ್ನು ದಾಖಲಿಸುವ ಪ್ರಯತ್ನ ಕಾಣುತ್ತದೆ. ಈ ಪ್ರಯೋಗಶೀಲತೆ ಕನ್ನಡಕ್ಕೆ ಹೊಸದಲ್ಲವಾದರೂ ಸೂಕ್ಷಚಿಂತನೆ ಮತ್ತು ಉತ್ಕಟವಾದ ಸಂವೇದನಾಶೀಲತೆಯಿಂದ ಸಂಕಲನ ಗಮನಸೆಳೆಯುತ್ತದೆ. ಹೆಣ್ಣಿನ ಮನೋಲೋಕ, ಅವಳ ಅಸ್ಮಿತೆಯಿಂದ ಹಿಡಿದು ಇಂದಿನ ರಾಜಕೀಯ, ಸಾಮಾಜಿಕತೆಯ ವಿಷಮತೆಯವರೆಗೆ ವ್ಯಾಪಿಸಿರುವ ಸಂಕಲನದ ಬರಹಗಳಲ್ಲಿ ರೂಪಕಗಳ ಮೂಲಕ ಬದುಕಿನ ಸಮಗ್ರವಾದ ಚಿಂತನೆಯೊಂದನ್ನು ಕಟ್ಟಿಕೊಡಲು ಸಾಧ್ಯವಾಗಿದೆ. ಹಾಗಾಗಿ ಇವು ತೀವ್ರ ಓದಿನ ಸುಖವನ್ನಂತೂ ನೀಡುತ್ತವೆ. ಒಂದು ರೀತಿಯಲ್ಲಿ ಇವು ಪದ್ಯದ ಓದಿನ ಅನುಭವ ನೀಡುವ ಗದ್ಯಾತ್ಮಕ ಬರಹಗಳು, ಒಂದು ಚಿಂತನೆಯ ವಿಸ್ತರಣೆಯಂತೆ ಬೆಳೆಯುವ ಅಷ್ಟೂ ಬರಹಗಳು ಒಂದು ಮರದ ಬೇರು, ಕಾಂಡ, ಹೂವು, ಹಣ್ಣೆಂಬಂತೆ ಹೊಳೆಯುತ್ತ ಒಂದು ಕಾಲದ ಬದುಕಿನ ಹಲವು ಪಲ್ಲಟಗಳ ದಾಖಲೆಯಂತೆ ಕಂಡುಬರುತ್ತವೆ.

ಇಲ್ಲಿ ಕಾಲ ಹಿಂದಕ್ಕೂ, ಮುಂದಕ್ಕೂ ಚಲಿಸುತ್ತ ತೆರೆದಿಡುವ ಅನುಭವ ರೋಚಕ, ಅಷ್ಟೇ ಬೀಕರ, ಅದು, ಉಳಿಸುವುದು ಕ್ರೂರ ವಾಸ್ತವಗಳನ್ನು, ತಣ್ಣಗಿನ ವಿಷಾದವನ್ನು, 'ನಿಮ್ಮನ್ನು ಪ್ರೀತಿಸಲಾರೆ. ಪ್ರೀತಿಸದಿರಲಾರೆ', 'ಎದೆಯೊಳಗೆ ಆಗ್ಗಿಟಿಕೆಗಳು ಉರಿಯುತ್ತಿವೆ', 'ಮನೆ ಮತ್ತಷ್ಟು ಚಿಕ್ಕದಾಗಿತ್ತು' ಮೊದಲಾದ ಕವಿತೆಗಳು ಈ ಬಗೆಯ ಅನುಭವವನ್ನು ನೀಡುವಂತವು, 'ಭಾವಲೋಕವೊಂದು ಮರೀಚಿಕೆಯೂ ಇರದ ಮರುಭೂಮಿ' ಎಂದು ಕವಿ ಹೇಳುವಷ್ಟರ ಮಟ್ಟಿಗೆ ಸಂಕೀರ್ಣ ಸನ್ನಿವೇಶವನ್ನು ನಾವು ಎದುರಿಸುತ್ತಿದ್ದೇವೆ. 'ಪಡ್ರಸಗಳ ಅಡುಗೆ ಪಾತ್ರೆಗಳು ಈಗ ಬರಿದಾಗಿವೆ' ಎಂಬ ಸಾಲು ಕೇವಲ ಕಳೆದುಹೋದ ಒಂದು ಸಂಗತಿಯನ್ನನ್ನು ದಾಖಲಿಸದ ಅಪೂರ್ವವಾದ ಬದುಕಿನ ದುರಂತ ಅಂತ್ಯದ ಕಠೋರ ಅಧ್ಯಾಯದಂತೆ ಗೋಚರಿಸುತ್ತದೆ.

ಮುಖ್ಯವಾಗಿ ಕವಿಯ ಕಟು ಟೀಕೆ, ವ್ಯಂಗ್ಯ ಅದನ್ನು ಹೇಳುವ ಅಪೂರ್ವ ರೂಪಕಶಕ್ತಿ ಮೆರೆಯುವುದು ತಮ್ಮನ್ನು ಎಹಲಗೊಳಿಸಿರುವ ವರ್ತಮಾನದ ಸಂದಿಗ್ಧತೆಗಳನ್ನು ಹಿಡಿಯುವಲ್ಲಿ, 'ಅವರಿಗೀಗ ಅರ್ಥವಾಗಿ ಹೋಗಿದೆ, ಬದುಕಷ್ಟು ಸಾವು ಭಯಪಡಿಸುವುದಿಲ್ಲವೆಂದು' ಎಂಬ ಸಾಲು ಈಗ ಎದುರಿಸುತ್ತಿರುವ ಸನ್ನಿವೇಶದ ಭೀಕರತೆಯನ್ನು ಅರಿವಿಗೆ ತರುತ್ತದೆ. ಕೇಳಿದ ಸಂಗತಿಗಳು, ನೋಡಿದ ಘಟನೆಗಳು, ಹೇಳುತ್ತಿದ್ದ ಕತೆಗಳು, ಬದುಕಿದ ವಸ್ತುಗಳು ಎಲ್ಲವೂ ವರ್ತಮಾನದ ಹಲವು ಪ್ರಹಸನಕ್ಕೆ ರೂಪಕಗಳಾಗುವ ಬಗೆಯ ಬೆರಗುಗೊಳಿಸುವಂಥದ್ದು. 'ಅಪ್ಪೇರುಪ್ಪಿನಕಾಯಿ, ಮತ್ತೆ ಮತ್ತೆ ಕರಡಿ ನರಿಯ ಕಥೆ', 'ಟೋಪಿ ಮಾರುವವನೂ ಮತ್ತು ಧರಿಸಿ ಕೂತ ಮಂಗಗಳೂ' ಮೊದಲಾದ ಕವಿತೆಗಳು ವರ್ತಮಾನದ ವಿಲಕ್ಷಣ ಸನ್ನಿವೇಶದ ಕಥನವನ್ನು ವಿಶಿಷ್ಟವಾಗಿ ಕಟ್ಟಿಕೊಡುತ್ತವೆ. 'ದುರ್ಯೋಧನ ಸುಯೋಧನನಾಗುವುದು ಕಾವ್ಯದಲ್ಲಿ ಎನ್ನುವುದನ್ನು ಮರೆತು ಕವಿಯನ್ನು ಕಟಕಟೆಯಲ್ಲಿ ನಿಲ್ಲಿಸುತ್ತಾರೆ' ಎಂಬ ಸಾಲು ಕವಿಯೂ ಅಪರಾಧಿಯಾಗಬಲ್ಲ ಭೀಕರ ಸನ್ನಿವೇಶವನ್ನು ಹೇಳುತ್ತದೆ. ದಿಟ್ಟತನ, ಆಕೆಯ ಕ್ರಿಯಾಶೀಲತೆ, ಮನೋಸೈರ್ಯ ಈ ಗುಣಗಳನ್ನು ಹೇಳುವ ಹಾಲಿನಲ್ಲಿ ಈ ಮಧ್ಯೆಯೂ ಹೆಣ್ಣಿನ ಬದುಕಿದವರ', 'ಅವಳು ಹೊಲಿಯುತ್ತಲೆ ಇದ್ದಾಳೆ', 'ನಮ್ಮನ್ನು ನೀವು ನಿರ್ದೇಶಿಸಬೇಡಿ ಕವಿತೆಗಳು ಭಿನ್ನವಾದ ಅನುಭವವನ್ನು ನೀಡುವಂತವು.

ಸಂಕಲನದ ಸಫಲತೆಯ ನಡುವೆಯೂ ಕೆಲವೊಮ್ಮೆ ಕಳೆದುಹೋದ ಕಾಲದ ಬಗೆಗಿನ ನೆನಪುಗಳು ಹಳಹಳಿಕೆಯಂತೆ ಭಾಸವಾಗುವ, ಆಧುನಿಕ ಬದುಕು ಭವಿಷ್ಯದ ಬೆಳಕಿಂಡಿಯನ್ನು ನೀಡದಷ್ಟು ಕಠೋರವಾಗಿದೆಯೇ ಎಂಬ ಪ್ರಶ್ನೆಗಳನ್ನು ಉಳಿಸುವ ಕೊರತೆಯೊಂದು ಇಡಿ ಸಂಕಲನ ಓದಿದಾಗ ಉಳಿದೇ ಉಳಿಯುತ್ತದೆ.

(ಕೃಪೆ: ಹೊಸಮನುಷ್ಯ ಬರಹ : ಸಂತೋಷ ಚೊಕ್ಕಾಡಿ)

Related Books