ಪ್ರಣತಿ

Author : ಪ್ರೇಮ ಪ್ರಶಾಂತ್

Pages 96

₹ 100.00
Year of Publication: 2021
Published by: ಸ್ಪಂದನ ಸಿರಿ ಪ್ರಕಾಶನ
Address: #406. 11ನೇ ಅಡ್ಡ ರಸ್ತೆ, ಕುವೆಂಪುನಗರ, ಹಾಸನ-573201
Phone: 7204731877

Synopsys

‘ಪ್ರಣತಿ’ ಕೃತಿಯು ಪ್ರೇಮ ಪ್ರಶಾಂತ್ ಅವರ ಕವನಸಂಕಲನವಾಗಿದೆ. ಕೃತಿಗೆ ಮುನ್ನಡಿ ಬರೆದಿರುವ ಲೇಖಕಿ ಜಯಂತಿ ಚಂದ್ರಶೇಖರ್ ಅವರು, `ವೃತ್ತಿ, ಪ್ರವೃತ್ತಿ..ಪರಿವಾರ, ಸಮಾಜ ಇವೆಲ್ಲವುದರ ಕುರಿತಾಗಿ ಸಂವೇದನಾಶೀಲ ತುಡಿತಗಳನ್ನು ಹೊಂದಿರುವ ಕವಯತ್ರಿ ಪ್ರೇಮಾ ಅವರು ಅಪಾರವಾದ ದೇಶಭಕ್ತಿ ಹಾಗೂ ಭಾಷಾಭಿಮಾನ ಹೊಂದಿದ್ದಾರೆ. ಇವರು ರಚಿಸಿರುವ ಕವನಗಳಲ್ಲಿ ಹೆಚ್ಚಿನವು ಸ್ವಾತಂತ್ರ್ಯ ಹೋರಾಟಗಾರ, ರಾಷ್ಟ್ರೀಯ ನಾಯಕರ, ಆಳ್ವಿಕೆ ನಡೆಸಿದ ಅರಸರ ಕುರಿತು ಹಾಗೂ ನಮ್ಮ ನಾಡಿನ ಪ್ರಸಿದ್ಧ ಕವಿಗಳನ್ನು ಕುರಿತು, ಹಾಗೆಯೇ ನಮ್ಮ ಹಿಂದೂ ಸಂಸ್ಕೃತಿಯ ಪ್ರತೀಕ ಎನಿಸಿದ ಹಬ್ಬ ಉತ್ಸವಗಳ ಆಚರಣೆಯ ಮಹತ್ವ ಸಾರುವ ಕವನಗಳನ್ನು ರಚಿಸಿರುವುದು ವಿಶೇಷವೆನಿಸುವುದು. "ಅರಿತು ರೂಢಿಸಿಕೊಂಡರೆ ಆನಂದ ಇದರ ಮಹತ್ವ ತಿಳಿಯಲಿ ಕಂದ ಅಕ್ಷರಗಳ ಮೋಡಿಗೆ ಬೀಳುವುದೇ ಚಂದ." ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಪ್ರೇಮಾ ಅವರು 'ಪುಸ್ತಕ-ಮಸ್ತಕ' ಎಂಬ ಕವನದಲ್ಲಿ ಓದಿನಲ್ಲಿರುವ ಗಮ್ಮತ್ತು ಹಾಗೂ ಪುಸ್ತಕದೊಳಗಿನ ಅಕ್ಷರಗಳ ಮಹತ್ವವನ್ನು ಕಟ್ಟಿಕೊಡುತ್ತ ಮಕ್ಕಳಿಗೆ ಓದಿನ ಬಗ್ಗೆ ಆಸಕ್ತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಈ ಕವಿಮನ "ಹೊನ್ನ ಪಯಣ " ಎಂಬ ಕವನದಲ್ಲಿ ಕಾಣಬಹುದು. "ತವರೂರ ಮರೆಯಲಾಗದು ಎಂದೂ..ಆಡಿ ನಲಿದ ನೆನಪು ಮಾಸದು..! ಹಂಚಿನ ಮನೆಯ ಒಲವು ತಂಪು ಸೂಸುವುದು ನೈಜತೆಯ ಕಂಪು!" ಎನ್ನುವ ಸಾಲುಗಳಲ್ಲಿ ತವರಿನ ಮನೆಯಂಗಳದಿ ಆಡಿನಲಿದ ದಿನಗಳನ್ನು, ಹಂಚಿನ ಮನೆಯೊಳಗೆ ಹೇರಳವಾಗಿ ತುಂಬಿದ ಪ್ರಾಣವಾಯುವಿನ ಸೇವನೆಯಿಂದ ದೇಹ, ಮನಸ್ಸು, ಮನೆ ಎಲ್ಲವೂ ತಂಪಾದಂತೆ ಭಾವಿಸಿರುವುದರ ಜೊತೆಗೆ ಮತ್ತೊಂದು ಕವನದಲ್ಲಿ ಇತ್ತೀಚೆಗೆ ಕಣ್ಮರೆಯಾಗುತ್ತಿರುವ ಕಲ್ಲುಬಾವಿಗಳ ನೆನೆಯುತ್ತ "..ಅಂದು ಊರಿಗೆ ನೀರಿನ ಮೂಲವು..ಹೆಂಗಸರು ಸೇರುವ ಜಾಗವು.." ಎನ್ನುವಲ್ಲಿ ಒಂದೊಮ್ಮೆ ಇಡೀ ಹಳ್ಳಿಗೆ ಜೀವಜಲ ಉಣಿಸುತ್ತಿದ್ದ ಸೇದುಬಾವಿಗಳನ್ನು ನೆನೆದಿದ್ದಾರೆ. ಹಾಗೆಯೇ, ಊರಿನ ಹೆಂಗಳೆಯರು ನೀರಿಗಂತ ಬಂದು ಸೇರಿ ಹರಟುತ್ತಿದ್ದ ಸವಿಕ್ಷಣಗಳನ್ನು ನೆನಪಿಸಿದ್ದಾರೆ. ಸೌಂದರ್ಯಕ್ಕೆ ಮಾರುಹೋದ ಕವಿಹೃದಯ ಸಹಜವಾಗಿ ಈ ಅಖಂಡ ಭೂ ಮಾತೆಗೆ ಮಣಿದು ವಸುಂಧರೆಯ ಒಲವಿಗೆ ಸ್ಪಂದಿಸುತ್ತಾ "ಸಕಲವನ್ನೂ ಹೊತ್ತಿರುವೆ ಸಹನಾ ಮೂರ್ತಿ ತ್ಯಾಗದ ಪ್ರತೀಕ ನೀ ಧರಿತ್ರಿ.." ಎಂದು ಗುಣಗಾನ ಮಾಡುತ್ತಾ, ತಮ್ಮಲ್ಲಿರುವ ನಿಸರ್ಗ ಪ್ರೇಮವನ್ನು ಹೊರಹಾಕಿದ್ದಾರೆ. 'ಅಸಮಾನತೆ' ಎಂಬ ಕವನದಲ್ಲಿ "..ಮೀಸಲಾತಿ ಏಕೆ ಬೇಕು.. ಮನುಜ ತನ್ನ ಸ್ವಸಾಮರ್ಥ್ಯದಿಂದ ಉನ್ನತಿ ಗಳಿಸಲು ಸಾಧ್ಯವಿಲ್ಲವೇ..?" ಎಂದು ಪ್ರಶ್ನಿಸುತ್ತಾ, ಈ ಸಮಾಜದ ಜಾತಿವ್ಯವಸ್ಥೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ವಂದೇ ಗೋಮಾತೆ' ಎಂಬ ಕವನದಲ್ಲಿ ಹಿಂದೂ ಸಂಸ್ಕೃತಿಯಲ್ಲಿ ಕಾಮಧೇನು ಎನಿಸಿದ ಗೋವಿಗೆ ಇರುವ ಮಹತ್ವವನ್ನು ಹೇಳುತ್ತಾ ಗೋವಿನಿಂದ ಇರುವ ಪ್ರಯೋಜನವನ್ನು, ಅದರ ಸಗಣಿ, ಗಂಜಲದಿಂದ ಔಷಧ ತಯಾರಿಕೆ ಹಾಗೂ ಮಹತ್ವದ ಕುರಿತು ತಿಳಿಸಿದ್ದಾರೆ. ಹಾಗೆಯೇ, ಪರಿಸರ ಸ್ವಚ್ಛತೆಯ ಬಗ್ಗೆ ಕಾಳಜಿಯುಳ್ಳ ಕವಿಯತ್ರಿ 'ಕಸದರಾಶಿ' ಎಂಬ ಕವನದಲ್ಲಿ ಇವರೆಲ್ಲಾ ಬಡಾಯಿ ಕೊಚ್ಚುವವರು.. ಬರೀ ಉಪದೇಶ ಮಾತನಾಡುವವರು.." ಎನ್ನುತ್ತಾ ಕಸದಬುಟ್ಟಿಗೆ ಕಸ ಹಾಕದೆ ಎಲ್ಲೆಂದರಲ್ಲಿ ಎಸೆದು ನುಡಿದಂತೆ ನಡೆಯದ ಸಜ್ಜನರ ಬಗ್ಗೆ ಕಟು ಪದ ಸಾಲಿನಲ್ಲಿ ಕುಟುಕಿದ್ದಾರೆ. ಮಹಾಮಾರಿ ಕೊರೊನಾ ಜಗತ್ತನ್ನು ಮುತ್ತಿದ್ದ ಸಮಯದಲ್ಲಿ ಬರೆಯಿಸಿಕೊಂಡ ‘ನೊಂದು-ಬೆಂದು ಹೈರಾಣು ನೋಡು, ಕಾಣದ ವೈರಾಣು ಮೃತ್ಯು ಕೋಪದ ಬಿಡು.." ಎಂಬ ಸಾಲುಗಳು ಕುಟುಂಬ, ಸಮಾಜದ ನಾಡು, ದೇಶ-ವಿದೇಶ ಎಲ್ಲವನ್ನು ಹೈರಾಣಾಗಿಸಿದ್ದನ್ನು ನೆನೆಯುತ್ತ ಪ್ರಕೃತಿಯ ವಿಕೋಪವನ್ನು ಎದುರಿಸಲು ಈ ಹುಲುಮಾನವರಿಗೆ ಸಾಧ್ಯವಿಲ್ಲ ಎಂಬ ಭಾವನೆ ವ್ಯಕ್ತಪಡಿಸಿದ್ದಾರೆ.

ಸಮಾಜಮುಖಿ ಚಿಂತನೆಗಳನ್ನು ಹೊಂದಿರುವ ಪ್ರೇಮಾರವರು 'ಕೆಂಪು ದ್ರವ' ಎಂಬ ಕವನದಲ್ಲಿ ರಕ್ತದಾನದ ಮಹತ್ವದ ಕುರಿತು ಮಾಹಿತಿ ನೀಡಿದ್ದಾರೆ. ದೇಶಭಕ್ತಿ ಸಾರುವ "ಹೆಮ್ಮೆಯ ಧ್ವಜ", ಗುರುಭಕ್ತಿ ತುಂಬಿರುವ "ಬೆಳಕು", ಮಾತಾಪಿತೃ ಪ್ರೇಮದ "ಜನ್ಮದಾತರು", ವಯೋವೃದ್ಧರ ಕುರಿತಾದ "ಬಾಳ ಮುಸ್ಸಂಜೆ" ಹೀಗೆ ಇನ್ನೂ ಹಲವಾರು ವಿಶಿಷ್ಟ ವಿಚಾರಗಳನ್ನು ಆಯ್ದುಕೊಂಡು ಕವನಗಳನ್ನು ರಚಿಸಿರುವುದು ವಿಶೇಷವಾಗಿದೆ. "ಪ್ರಣತಿ" ಕವಿತೆಯ ಮುದ್ದಾದ ಹೂರಣ ಅವರ ಮಗಳು ಪ್ರಣತಿ. ಮನೆಯನ್ನು ಬೆಳಗುವ ದೀಪವೆಂದು ಮಗಳನ್ನು ಭಾವಿಸುತ್ತಾ ಅವಳ ಆಟ-ಪಾಠ ತುಂಟಾಟಗಳನ್ನು ವರ್ಣಿಸುವುದರ ಜೊತೆಗೆ ಅವಳಲ್ಲಿರುವ ಅಪೂರ್ವ ಪ್ರತಿಭೆಯನ್ನು ಬಹಳ ಹೆಮ್ಮೆಯಿಂದ ಬಣ್ಣಿಸಿದ್ದಾರೆ. ಈ ಕವನ ಸಂಕಲನದಲ್ಲಿನ ಬಹುಪಾಲು ಕವನಗಳನ್ನು ಗಮನಿಸಿದಾಗ, ವಾಚ್ಯ ಅನಿಸುವುದರ ಜೊತೆಗೆ ಇವೇ ವಿಚಾರಧಾರೆಗಳಿಗೆ ಗದ್ಯರೂಪ ಕೊಟ್ಟಿದ್ದೇ ಆದಲ್ಲಿ ಅತ್ಯುತ್ತಮ ಲೇಖನ, ಕಥನ, ಪ್ರಬಂಧಗಳು ರಚನೆಯಾಗುವುದರಲ್ಲಿ ಸಂದೇಹವೇ ಇರುವುದಿಲ್ಲ’ ಎಂದಿದ್ದಾರೆ.

About the Author

ಪ್ರೇಮ ಪ್ರಶಾಂತ್

ಪ್ರೇಮ ಪ್ರಶಾಂತ್ ಅವರು ಮೂಲತಃ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳದವರು. ಬಿ.ಎ, ಎಂ.ಎ ಪದವಿಯನ್ನು ಪೂರೈಸಿರುವ ಅವರು ಪ್ರಸ್ತುತ ಖಾಸಗಿ ಶಾಲಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕತೆ, ಕವನ, ಲೇಖನ ಬರೆಯುವುದು, ಪುಷ್ಪಲಂಕಾರ, ರೇಡಿಯೋ ಕಾರ್‍ಯಕ್ರಮ, ಸಾಮಾಜಿಕ ಮತ್ತು ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗುವುದು, ಪತ್ರಿಕೆಗಳಿಗೆ ಬರೆಯುವುದು ಅವರ ಹವ್ಯಾಸವಾಗಿದೆ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸಿ ಪ್ರಶಸ್ತಿ, ಫಲಕಗಳನ್ನು ಪಡೆದಿರುತ್ತಾರೆ. ರಾಜ್ಯ ಹಾಗೂ ತಾಲ್ಲೂಕು ಸಂಚಾಲಕಿಯಾಗಿ ಕಾರ್‍ಯ ನಿರ್ವಹಿಸಿದ್ದು, ತೀರ್ಪುಗಾರರಾಗಿ, ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ.  ಪ್ರಶಸ್ತಿ : ಕವಿರತ್ನ ಪ್ರಶಸ್ತಿ ಕೃತಿಗಳು : ‘ನಾಲ್ಕು ನಿಟ್ಟಿನಿಂದ’, ಹಳೇಬೇರು ಹೊಸಚಿಗುರು, ಪ್ರಣತಿ. ...

READ MORE

Related Books