ಕಾಡುಜೇಡ ಹಾಗೂ ಬಾತುಕೋಳಿ ಹೂ

Author : ಹೆಚ್.ಆರ್. ಸುಜಾತಾ

Pages 212

₹ 200.00
Year of Publication: 2019
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ ಅಂಚೆ, ಎಮ್ಮಿಗನೂರು (ವಯಾ) ಬಳ್ಳಾರಿ-583113

Synopsys

ಕವಯತ್ರಿ ಹೆಚ್. ಆರ್. ಸುಜಾತಾ ಅವರ ’ಕಾಡುಜೇಡ ಹಾಗೂ ಬಾತುಕೋಳಿ ಹೂ’ ಎಂಬ ಸಂಕಲನದ ಕವಿತೆಗಳು ಪರಿಸರ ಕೇಂದ್ರದ ಮೂಲಕ ಮಾಡಿಸುವ ವಿಶ್ವದರ್ಶನ ವಿಶಿಷ್ಟವಾದದ್ದು. ಅನುದಿನದ ಜಂಜಾಟದಲ್ಲಿ ಮನುಷ್ಯನ ಪ್ರಜ್ಞಾಕೇಂದ್ರವೇ ಕ್ಷೀಣಿಸುತ್ತಿರುವಾಗ ತಮ್ಮ ತಣ್ಣಗಿನ ದನಿಯಲ್ಲಿ ಇಲ್ಲಿನ ಕವಿತೆಗಳು ಜೀವಂತವಾಗುತ್ತಾ ಹೋಗುತ್ತವೆ.

ಜೀವಜಗತ್ತನ್ನು ನೋಡುವ ವಿಸ್ಮಯದ ಕಣ್ಣೊಂದು ಇಲ್ಲಿನ ಕವಿತೆಗಳಲ್ಲಿದೆ. ಮರದಿಂದ ಮರಕ್ಕೆ ಡೇರೆ ಕಟ್ಟುವ ಕಾಡುಜೇಡ ತನ್ನ ಅನೂಹ್ಯ ನೇಯ್ಗೆಯಲ್ಲಿ ಕಾಲದ ಯಾವುದೋ ಹುಟ್ಟುಗಳನ್ನು ಹುದುಗಿಸಿಕೊಂಡಿರುತ್ತದೆ. ಜೇಡರ ಬಲೆಗೆ ಆತುಕೊಂಡು ಹಬ್ಬಿದ ಬಳ್ಳಿಯೊಂದು ಬಾತುಕೋಳಿಯಂಥಾ ಹೂವನ್ನು ಅರಳಿಸಲಿಕ್ಕಿದೆ. ಬಳ್ಳಿಯ ಕಣ್ಣ ಕೊಳದಲ್ಲಿ ಅರಳುವ ಈ ಹೂವು ಕೀಟ ಹಿಡಿವಕಲೆಯನ್ನು ಮೈಗೊಂಡಿದೆ! ಅದಕ್ಕಾಗಿಯೇ ಬಲೆ ಈ ಬಳ್ಳಿಯನ್ನು ತನ್ನೊಳಗೆ ಬಿಟ್ಟುಕೊಂಡಿದೆ. ಈ  ಸಂಕಲನದ ಕವಿತೆಗಳು ತಮ್ಮ ಸಂವೇದನೆಯ ವಿಸ್ತಾರ, ಪರಿಸರದೊಂದಿಗಿನ ಸ್ತ್ರೀ ಮೂಲ ಅರಿವನ್ನು ದಾಟಿಸುವ ರಚನೆಗಳಾಗಿವೆ

About the Author

ಹೆಚ್.ಆರ್. ಸುಜಾತಾ

ಸಾಹಿತ್ಯ ಲೋಕದ ಪ್ರವೇಶದ ಸಂದರ್ಭದಲ್ಲೇ ಗಮನಸೆಳೆದವರು ಹೆಚ್.ಆರ್.ಸುಜಾತ. ಲೇಖಕಿ, ಅಂಕಣಗಾರ್ತಿ, ಕವಯತ್ರಿ, ಕಥೆಗಾರ್ತಿಯಾಗಿ ಅವರದ್ದು ಹೊಚ್ಚ ಹೊಸ ಹೆಜ್ಜೆ ಗುರುತು. ಹಾಸನ ಜಿಲ್ಲೆ ಆಲೂರು ತಾಲೂಕಿನ ಮರಸುಹೊಸಹಳ್ಳಿ ಸುಜಾತರ ಹುಟ್ಟೂರು. ಓದಿದ್ದು ಬಿಎಸ್ಸಿ, ಆದರೆ ಆಸಕ್ತಿ ಮಾತ್ರ ಅಪ್ಪಟ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ. ಮಕ್ಕಳ ರಂಗಭೂಮಿ, ಪತ್ರಿಕೋದ್ಯಮ ಅನುಭವ, ಮಲೆನಾಡ ಬದುಕಿನ ಗಾಢ ಅನುಭವಗಳೇ ಬರಹಕ್ಕೆ ಸ್ಪೂರ್ತಿ. ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಅಂಕಣಬರಹಗಳ ಆಯ್ದ ಸಂಗ್ರಹ, ‘ನೀಲಿ ಮೂಗಿನ ನತ್ತು’ ಸುಜಾತ ಅವರ ಚೊಚ್ಚಲ ಕೃತಿ. ಮೊದಲ ಕೃತಿಗೆ ಅಮ್ಮ ಪ್ರಶಸ್ತಿ ಪುರಸ್ಕೃತರು. ಮಂಗಳೂರು ವಿವಿ ಪಠ್ಯಪುಸ್ತಕದಲ್ಲೂ ಸೇರ್ಪಡೆ. ...

READ MORE

Reviews

ಹೆಣ್ಣು ಅರಿವಿನ ಕವಿತೆಗಳು

ಇರುವೆಯ ಸಾಲಲ್ಲಿ ಮೆಲ್ಲಗೆ ಸಾಗುತ್ತಾ ಇಡಿಯ ಬ್ರಹಾಂಡ ವನ್ಯ ತೂಗಿನಡುವ ಮಹತ್ವಾಕಾಂಕ್ಷೆಯ ಕವಯತ್ರಿ ಎಚ್.ಆರ್.ಸುಜಾತಾ. ಅವರ 'ಕಾಡುಜೇಡ ಹಾಗೂ ಬಾತುಕೋಳಿ ಹೂ' ಎಂಬ ಸಂಕಲನದ ಕವಿತೆಗಳು ಪರಿಸರ ಕೇಂದ್ರದ ಮೂಲಕ ಮಾಡಿಸುವ ವಿಶ್ವದರ್ಶನ ವಿಶಿಷ್ಟವಾದದ್ದು. ಅನುದಿನದ ದಂದುಗ ದಲ್ಲಿ ಮನುಷ್ಯನ 'ಪ್ರಜ್ಞಾಕೇಂದ್ರವೇ ವಿಹ್ವಲಗೊಂಡಿರುವಾಗ, ತಮ್ಮ ತಣ್ಣಗಿನ ದನಿಯಲ್ಲಿ, ಜೀವದ ಸೊಲ್ಲುಗಳನ್ನು ಆಯ್ದು

ನೇಯುವ ತಾದಾತ್ಮದಿಂದಾಗಿ ಇಲ್ಲಿನ ಕವಿತೆಗಳು ಅವರಿಸಿಕೊಳ್ಳುತ್ತ ಹೋಗುತ್ತವೆ. ಕಾಲದ ಯಾವುದೋ ಬಿಂದುವಿನಲ್ಲಿ ಘಟಿಸುವ ಎಲ್ಲಾ ಘಟನೆಗಳಿಗೆ ಸಂಬಂಧದ ಸೂತ್ರ ಜೋಡಿಸುವ ಪ್ರಕೃತಿಯ ವಿಸ್ಮಯ " ಕಾಡುಜೇಡ ಹಾಗೂ ಬಾತುಕೋಳಿ ಹೂ' ಕವಿತೆಯಲ್ಲಿ ರೂಪಕವಾಗಿದೆ. ಇಂಥ ಸೂಕ್ಷ್ಮ ನೋಟದ ಕ್ರಮ, ಸಮರ್ಥ ರೂಪಕ ಶಕ್ತಿ ಹಾಗೂ ಕಾವ್ಯ ಭಾಷೆಯ ಅಂತರಂಗ ಅರಿತು ಬಳಸುವ ಹದದಿಂದಾಗಿ ಎಚ್.ಆರ್. ಸುಜಾತ ಅವರ 3 ಕವಿತೆಗೆಗಳು ಈ ಕಾಲದ ಅಬ್ಬರದ ದನಿಗಳ ಮಧ್ಯೆ ಅನನ್ಯವಾಗಿ ನಿಲ್ಲುತ್ತವೆ.

ಕನ್ನಡ ಕಾವ್ಯ ಪರಂಪರೆಯಲ್ಲಿ ಪುರುಷ ಲೋಕದೃಷ್ಟಿಯು ಪ್ರಧಾನವಾಗಿ ಇಲಿ ತನ್ನ ಯಜಮಾನ್ಯವನ್ನು ಸ್ಥಾಪಿಸಿರುವುದು ವಾಸ್ತವ. ಅಂಥ ಢಾಳಾಗಿ ಕಾಣುವ

ಪರಂಪರೆಯೊಳಗೆ ಸುಪ್ತವಾಗಿ ಮಾತ್ರೆ ಸಂವೇದನೆಯ ಧಾರೆಯು ಅಂತರಗಂಗೆಯಂತೆ ಹರಿದಿದೆ. ಸುಜಾತರ ಕಾವ್ಯದ ನಂಟು ಈ ಧಾರೆಯ ಜೊತೆ ಬೆಸೆದಿದೆ. ವಾದ ತ್, ಸಿದ್ದಾಂತಗಳ ಹಟಮಾರಿತನಕ್ಕೆ ತನ್ನನ್ನು ತೆತ್ತುಕೊಳ್ಳದೇ ಹೆಣ್ತನದ ದೇಸಿ ನೆಲೆಗಳಲ್ಲಿ ಸಂಚರಿಸಿರುವ ಕಾವ್ಯ ತಾಜಾ ಕಸುವಿನಿಂದ ಕಂಗೊಳಿಸುತ್ತಿದೆ. ಗ್ರಾಮ್ಯ ಸೊಗಡಿನ ಜಾನಪದ ಸಂವೇದನೆಯೊಂದು ದಕ್ಕಿರುವದು ಈ ಕವಿತೆಗಳ ಶಕ್ತಿಯಾಗಿದೆ.

ಪಂಚಭೂತಗಳ ನಡುವೆ ಅವುಗಳ ಭಾಗವಾಗಿಯೇ ತನ್ನನ್ನು ಅರಿಯುವ ಹೆಣ್ಣುನೋಟವೊಂದು ವಿಶ್ವವನ್ನು ಭಾವಿಸುವ ಪರಿ ಅಚ್ಚರಿ ಮೂಡಿಸುತ್ತದೆ. ಹಸಿ  ಮಣ್ಣು, ಮಿಂಚು, ಮಳೆ, ಕಾಮನಬಿಲ್ಲು , ಹೂವು, ಜೇನು, ಗಂಧ, ಬಯಲು, ಗಾಳಿ, ದಟ್ಟ ಕಾನನ ಎಲ್ಲವನ್ನೂ ಹೆಣ್ಣೂಬ್ಬಳು ತನ್ನ ಸಂವೇದನೆಯ ಭಾಗವಾಗಿ ಕಾಣುವುದು ಇಲ್ಲಿನ ಸ್ಥಾಯಿಭಾವವಾಗಿ ಕಾಣುತ್ತದೆ. ಹೆಣ್ಣು ಹೆಣ್ಣಾಗಿ ಅರಳುವುದು/ಹರಿವಾಗುವುದು ಹಸಿರಾಗುವುದು/ತನ್ನ ತಾನೇ ನೀ ಮರೆವಂತೆ ಮೈ ತುಂಬಿಕೊಳ್ಳುವುದು/ದುಂಡಗಿನ ವಿಶ್ವವೇ ತಾನಾಗುವುದು… ಹೆಣ್ತನದ ವಿಕಾಸವನ್ನು ವಿಶ್ವದ ವಿಕಾಸದ ಭಾಗವಾಗಿ ಗುರುತಿಸುವ ನೋಟವೊಂದು ಇಲ್ಲಿನ ಕವಿತೆಗಳಿಗೆ ಸಿದ್ಧಿಸಿದೆ.

ಈ ನೋಟದ ಮುಂದೆ ಇತಿಹಾಸ, ಪುರಾಣ ಕಾವ್ಯಗಳಲ್ಲಿ ಗಂಡು ಹೆಣ್ಣಿನ ಕುರಿತು ಕಟ್ಟಿದ ಪರಿಕಲ್ಪನೆಗಳೆಲ್ಲಾ ಬಿದ್ದುಹೋಗುತ್ತವೆ. ಅಂಥ ಬಯಲೊಂದನ್ನು ಇಲ್ಲಿನ ಕವಿತೆಗಳು ಕಾಣಿಸುತ್ತಿವೆ. ಶಾಕ್ತ ಸ್ತ್ರೀ ಪರಂಪರೆಯ ಆದಿಮ ಸಂವೇದನೆಯನ್ನು ಸಾಂದ್ರವಾಗಿ ಚಿತ್ರಿಸುವ ಬಗೆಯಿಂದಾಗಿ ಊರ ಹಬ್ಬ, ಉರಿಮಾರಿ ಕವಿತೆಗಳು ಗಮನಾರ್ಹವಾಗಿ ಕಾಣುತ್ತವೆ. ರೌದ್ರವಾಗಿ ತೋರುವ ಶಕ್ತಿದೇವತೆಗಳಲ್ಲಿ ಮಾತೃತ್ವದ ತಂಪನ್ನು ಕಾಣುವ, ರಕ್ತಸಿಕ್ತ ಆಚರಣೆಗಳಲ್ಲಿ ಸ್ತ್ರೀ ದೇಹಮೂಲದ ಅನುಭವಗಳನ್ನು ಕಾಣಿಸುವ ಮೂಲಕ ಕವಿತೆಗಳು ಸಾಂಸ್ಕತಿಕ ಆಯಾಮವೊಂದನ್ನು ಕಟ್ಟುತ್ತಿವೆ. 'ಹಣೆಮೇಲೆ ಉರಿವ ಸೂರ್ಯ, ಎದೆಯೊಳಗೆ ಮುಚ್ಚಿಟ್ಟ ಚಂದ್ರ' ನನ್ನು ಒಡಲುಗೊಂಡ ಉರಿಮಾರಿ ಹೊಟ್ಟೆಹೊರೆಯಲು ಅಸಿಟ್ಟು, ಉಪ್ಪು, ಮೆಣಸಿನಕಾಯಿ, ಕಾಸು ಕರಿಮಣಿ ಪಡಿಯನ್ನು ಪಡೆಯುವ, ಮಾರಿಯನ್ನು ಹೊತ್ತು ತಿರುಗುವ ಲೌಕಿಕದ ಹೆಣ್ಣಾಗಿ ಕಾಣಿಸುತ್ತಾಳೆ. ಕಂದನ ಬಾಯಲ್ಲಿ ಅವಳೆದೆಯ ಚಂದಿರ ಹಾಲಾಗಿ ಇಳಿಯುವುದು ಮಾತೃ ಸಂವೇದನೆಯ ಕಾಲಾತೀತ ಬೆಸುಗೆಯಾಗಿ ಕಾಣಿಸುತ್ತದೆ. ಒಟ್ಟಾರೆಯಾಗಿ 'ಕಾಡುಜೇಡ...' ಸಂಕಲನದ ಹಲವು ಕವಿತೆಗಳು ತಮ್ಮ ಸಂವೇದನೆಯ ವಿಸ್ತಾರ, ಪರಿಸರದೊಂದಿಗಿನ ತಾದಾತ್ಮ, ಸ್ತ್ರೀ ಮೂಲ ಅರಿವನ್ನು ದಾಟಿಸುವ ಭಾಷಾಭಿವ್ಯಕ್ತಿಯಿಂದಾಗಿ ಗಟ್ಟಿಯಾಗಿ ಉಳಿಯಬಲ್ಲವು.

-ಡಾ. ಗೀತಾ ವಸಂತ

ಕೃಪೆ : ಹೊಸ ಮನುಷ್ಯ (ಮಾರ್ಚ್ 2019)

 

Related Books