ಹಾರುವ ಹಂಸೆ

Author : ಆರ್. ದಿಲೀಪ್ ಕುಮಾರ್

Pages 108

₹ 100.00




Year of Publication: 2019
Published by: ಗೋಮಿನಿ ಪ್ರಕಾಶನ
Address: ಶ್ರೀವೀರಭದ್ರಸ್ವಾಮಿ ನಿಲಯ, 1ನೇ ಮುಖ್ಯರಸ್ತೆ, 5ನೇ ಕ್ರಾಸ್, ವಿಶ್ವಣ್ಣ ಲೇಔಟ್, ಶಾಂತಿನಗರ್, ತುಮಕೂರು- 572102
Phone: 9986693113

Synopsys

ಹಾರುವ ಹಂಸೆ- ದಿಲೀಪ್ ಕುಮಾರ್ ಅವರ ಮೊದಲ ಕವನ ಸಂಕಲನ. ಈ ಕೃತಿಗೆ ಎಚ್.ಎಸ್. ವೆಂಕಟೇಶಮೂರ್ತಿ ಅವರು ಬೆನ್ನುಡಿ ಬರೆದಿದ್ದಾರೆ. ದಿಲೀಪ್ ಕುಮಾರ್ ಪರಿಶ್ರಮದಿಂದ ರೂಢಿಸಿಕೊಂಡಿರುವ ಭಾಷೆ-ಲಯಗಳು ಭಿನ್ನವಾಗಿವೆ. ನಿರಂತರ ಯಾನ ಅವರ ಕಾವ್ಯದ ಬಹುಮುಖ್ಯ ಪ್ರತೀಕ, ಮಾದೇಶ, ಮಂಟೇಸ್ವಾಮಿ, ಬಸವ, ಅಲ್ಲಮ, ಅಕ್ಕ, ಪುರಂದರ, ಕನಕ ಮೊದಲಾದ ಆದ್ಯರು ನಡೆದ ಬೆಡಗಿನ  ಹಾದಿಯಲ್ಲಿ ಈ ಕವಿಯ ಏಕಾಂಗಿ ಯಾನ. ಅಡಿಗರ ಅಮೃತವಾಹಿನಿಯ ಸಳೆವೂ ಈ ಹಾದಿಯಲ್ಲಿ ಎಡೆಬಿಡದೆ ಕಾಣುತ್ತಿದೆ. ನೆಲಬಿಡದೆ ನಕ್ಷತ್ರದಲ್ಲಿ ನಾಟಿದ ನೋಟ, ಅಮೂರ್ತದಲ್ಲಿ ಆಕಾರವ ಕಡೆಯುವ ತವಕ ಅಲ್ಲಲ್ಲಿ ಅದು ಮೈಗೊಂಡ ಸುಳಿಹುಗಳೂ ಇವೆ. ಕಾಣ್ಕೆ ಕೈಗೂಡುವ ದುಸ್ತರ ಹಾದಿಯಲ್ಲಿ ದಿಲೀಪ ನಡೆಯುತ್ತಿದ್ದಾರೆ ಎನ್ನುತ್ತಾರೆ ಎಚ್.ಎಸ್. ವೆಂಕಟೇಶಮೂರ್ತಿ. 

About the Author

ಆರ್. ದಿಲೀಪ್ ಕುಮಾರ್
(16 March 1991)

ಆರ್. ದಿಲೀಪ್ ಕುಮಾರ್ ಅವರ ಹುಟ್ಟಿದ್ದು1991 ರ ಮಾರ್ಚ್ 16ರಂದು ಮೈಸೂರಿನಲ್ಲಿ. ಮೈಸೂರುನಲ್ಲಿ ಕೆಲವು ಕಾಲ ಇದ್ದು ಸದ್ಯ ಚಾಮರಾಜನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ. ಪದವಿ ಶಿಕ್ಷಣವನ್ನು ಸರಕಾರಿ ಪದವಿ ಕಾಲೇಜು ಚಾಮರಾಜನಗರದಲ್ಲೂ, ಕನ್ನಡ ಸ್ನಾತಕೋತ್ತರದ ಪದವಿಯನ್ನು ಕನ್ನಡ ಸ್ನಾತಕೋತ್ತರ ಕೇಂದ್ರ , ಜೆ ಎಸ್ ಎಸ್ ಕಾಲೇಜು , ಚಾಮರಾಜನಗರದಲ್ಲೂ, ಬಿ ಎಡ್ ಪದವಿಯನ್ನು ಜೆ.ಎಸ್.ಎಸ್ ಶಿಕ್ಷಣ ಮಹಾವಿದ್ಯಾಲಯ ಚಾಮರಾಜನಗರದಲ್ಲೂ ಪಡೆದಿದ್ದಾರೆ. ನಾಲಕ್ಕು ವರ್ಷಗಳು ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆಗಳಲ್ಲಿನ ಪದವಿ ಪೂರ್ವ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಕಾವ್ಯ ಕಮ್ಮಟ ಮತ್ತು ಕಥಾ ಕಮ್ಮಟಗಳಲ್ಲಿ ಸಂಪನ್ಮೂಲ ...

READ MORE

Reviews

ಹೊಸ ಕಾಲದ ಹುಡುಗ ಹುಡುಗಿಯರು ಫೇಸ್ಬುಕ್ ವಾಟ್ಸ್ ಆಪಿನಂಥ ಸಾಮಾಜಿಕ ಜಾಲತಾಣದಲ್ಲಿ ಬರೆದುದನ್ನು ತಿದ್ದುವ ಮೊದಲೇ ಪ್ರಕಟಿಸಿ ಬಿಡುವುದರಿಂದ ನಿಜಕ್ಕೂ ಕವಿತೆಗಳಾಗುವ ತಾಕತ್ತಿದ್ದ ರಚನೆಗಳು ಕೂಡ ಗರ್ಭಪಾತಕ್ಕೆ ಸಿಲುಕಿ ಅಂಥ ತಾಣಗಳಲ್ಲೇ ತಿಣುಕುತ್ತಿರುವ ಕೆಲವರ ಲೈಕು ಈಮೋಜಿ ಕಮೆಂಟುಗಳಿಂದಲೇ ಉಬ್ಬಿ ಹೋಗಿ ಆ ಕವಿ ಮಿಣುಕುಗಳು ನಕ್ಷತ್ರಗಳಾಗುವ ಮೊದಲೇ ಉರಿದು ಬಿದ್ದು ಹೋಗುತ್ತಿರುವ ಕಾಲವಿದು.

ಅಪರೂಪಕ್ಕೆ ಹೊಸತಲೆಮಾರಿನ ಕೆಲವು ಹುಡುಗ ಹುಡುಗಿಯರು ತಮ್ಮ ಓದಿನ ಪ್ರಖರ ದಾರಿಯಿಂದ ಸ್ಪೂತಿಗೊಂದು ಕಾವ್ಯ ಕ್ರಿಯೆಯಲ್ಲಿ ತೊಡಗಿರುವುದು ಸಂತಸದ ವಿಚಾರ. ಕನ್ನಡ ಮಾಧ್ಯಮದಲ್ಲಿ ಓದುವುದಿರಲಿ, ಮಾತನಾಡುವವರೂ ವಿರಳರಾಗುತ್ತಿರುವ ಹೊತ್ತಲ್ಲಿ ಈಗಾಗಲೇ ತಮ್ಮ ಹರಿತ ವಾಗ್ಝರಿ ಮತ್ತು ಮೊನಚು ವಿಮರ್ಶೆಯ ಮೂಲಕ ಪ್ರಸಿದ್ಧರಾಗಿರುವ ಚಾಮರಾಜ ನಗರದ ಯುವಕವಿ ಆರ್.ದಿಲೀಪ್ ಕುಮಾರ್ ತಮ್ಮ ಮೊದಲ ಕವನ ಸಂಕಲನ " ಹಾರುವ ಹಂಸೆ" ಯನ್ನು ಪ್ರಕಟಿಸಿದ್ದಾರೆ.

ತುಮಕೂರಿನ ಗೋಮಿನಿ ಪ್ರಕಾಶನ ಪ್ರಕಟಿಸಿರುವ ಪುಸ್ತಕದ ಅಂದ ಚಂದ ಮನ ಸೆಳೆಯುವುದರಲ್ಲಿ ಗೆದ್ದಿದೆ. ಮುಖಪುಟ, ಬಳಸಿರುವ ಕಾಗದ, ಡಿಟಿಪಿ ಮಾಡುವಾಗಲೂ ತೆಗೆದುಕೊಂಡಿರುವ ಮುತುವರ್ಜಿ ಪುಸ್ತಕದ ಮೇಕಿಂಗ್ ಕೂಡ ಕಲೆ ಅನ್ನುವುದನ್ನು ಸಾಕ್ಷೀಕರಿಸಿದೆ.

ಡಾ.ಮೂಡ್ನಾಕೂಡು ಚಿನ್ನಸ್ವಾಮಿ ತಮ್ಮ ಮುನ್ನುಡಿಯ ಮೂಲಕ ಈ ಯುವ ಕವಿಯ ಸಾವಯವ ಸಾಮರ್ಥ್ಯವನ್ನು ಎತ್ತಿಹಿಡಿದಿದ್ದಾರೆ. ಹಾಗೇ ಎಚ್ಚರಿಕೆಯ ಮಾತನ್ನು ಬಲು ಸೂಕ್ಷ್ಮವಾಗಿ ಹೇಳಿದ್ದಾರೆ. ಬೆನ್ನುಡಿಯಲ್ಲಿ ಡಾ.ಎಚೆಸ್ವಿ ಕೂಡ ಬಹಳ ಮೌಲಿಕವಾದ ಮಾತನ್ನು ಬರೆದಿದ್ದಾರೆ. ಕವಿ ತನ್ನ ಮಾತಲ್ಲಿ ತನ್ನ ಕಾವ್ಯ ಕರ್ಮದ ಹಿಂದಣ ಸಿದ್ಧತೆಯನ್ನು ಸರಳವಾಗಿ ಬಿಚ್ಚಿಟ್ಟಿದ್ದಾರೆ.

ಸಂಕಲನದಲ್ಲಿ ಒಟ್ಟು ಐವತ್ತೊಂದು ಕವಿತೆಗಳಿವೆ. ನವ್ಯದ ನುಡಿಗಟ್ಟುಗಳೇ ಶೀರ್ಷಿಕೆಯಾಗಿರುವ ಸಂಕಲನದ ಎಲ್ಲ ಕವಿತೆಗಳ ತಲೆಬರಹವನ್ನು ಸಣ್ಣದೊಂದು pause ಕೊಟ್ಟು ಓದಿದರೆ ಅದೇ ಮತ್ತೊಂದು ಕವಿತೆಯಾಯಿತು! ಇಂಥ ಭಾಗ್ಯ ಮತ್ತು ಅನುಕೂಲ ಕವಿತೆಯ ಬಗ್ಗೆ ಭರವಸೆ ಮತ್ತು ಅಧ್ಯಯನದ ಮೂಲಕವೇ ಕವಿ ಬೆಳೆದಿರುವುದರ ಸೂಚನೆಯಾಗಿದೆ.

ಅಡಿಗರ ಜೊತೆಜೊತೆಗೇ ಅಲ್ಲಮ ಇಣುಕುವಾಗಲೇ ಕೆ ಎಸ್ ನ ಕೂಡ ಈ ಕವಿಯ ಜೊತೆಗೆ ಹೆಜ್ಜೆ ಇಕ್ಕುತ್ತಾರೆ. ಇನ್ನೂ ಮಜವೆಂದರೆ ಚಾಮರಾಜನಗರ ಪ್ರದೇಶದ ಮೌಖಿಕ ಕಾವ್ಯ ಪರಂಪರೆಯ ಸೊಗಡಿನ ವಾಸನೆ ಕೂಡ ಮೂಗನ್ನು ಅರಳಿಸುತ್ತದೆ.

ದಿಲೀಪ್‌ ಕುಮಾರ್‌ ಅವರ ಬೆನ್ನು ತಟ್ಟುತ್ತಲೇ ಗುಬ್ಬಚ್ಚಿ ಸತೀಶ್ ಅವರನ್ನೂ ಅಭಿನಂದಿಸಬೇಕು‌. ಏಕೆಂದರೆ ಕವನ ಸಂಕಲನಗಳು ಮಾರಾಟವಾಗಲಾರದ ಸರಕು ಎಂದೇ ಭಾವಿಸಿ ಅತಿಕೆಟ್ಟದಾಗಿ ಪ್ರಿಂಟ್ ಮಾಡಿ ಬಿಸಾಕುವವರ ನಡುವೆ ಅತಿ ಮುದ್ದಾಗಿ ಜತನದಿಂದ ಪುಸ್ತಕವನ್ನು ಅವರು ಪ್ರಕಾಶಿಸಿದ್ದಾರೆ.

ಪ್ರಾರ್ಥನೆ, ಬಿನ್ನಹ, ಒಂದು ಭಾವ, ಕೊಡು, ನೋ, ಸತ್ತಿಗೆ ಮುಂತಾಗಿ ಶೀರ್ಷಿಕೆಗಳನ್ನೇ ಓದುತ್ತ ಹೋದರೆ ಮತ್ತೊಂದು ಕವಿತೆ ಹುಟ್ಟುವುದು ಈ ಕವಿಯನ್ನು ಭರವಸೆಯಿಂದ ನಿಜದ ಅರಿವು ಮತ್ತು ಅಧ್ಯಯನ ಮಾಗಿಸಿದ ತಾತ್ವಿಕತೆಗೆ ಭೇಷ್ ಅನ್ನುತ್ತೇನೆ.

-ರಾಮಸ್ವಾಮಿ ಡಿ.ಎಸ್‌.

Related Books