‘ಹಕ್ಕಿ ಚುಕ್ಕಿ’ -ಕವಿ ರಮೇಶ ಕೊಂಡಕೇರ ಅವರ ಮೊದಲ ಕವನ ಸಂಕಲನ. ದೇಶಭಕ್ತಿ, ಸಮಾಜದ ಬಗ್ಗೆ ಕಾಳಜಿ, ಸಾವು-ಬದುಕಿನ ಹೋರಾಟ, ಬದುಕಿನ ಸಾಧನೆ... ಹೀಗೆ ಬದುಕಿನ ಭಾವಗಳನ್ನು ಹನಿಗವಿತೆಗಳ ಮೂಲಕ ವಿವರಿಸಿದ್ದಾರೆ.
‘ಮನೆಯಲ್ಲಿ ಹುಟ್ಟಿದರೆ ಹೆಣ್ಣು/ಹತ್ತಿದಂಗ ಮಾಡುತ್ತಾರೆ ಹುಣ್ಣು/ ಅವರಿಗೇನು ಗೊತ್ತು ಮಣ್ಣು/ ಹೆಣ್ಣೇ ಈ ಜಗದ ಕಣ್ಣು’ ಮುನ್ನುಡಿಯಲ್ಲಿ ಗಣೇಶ ಅವರು ಕೃತಿಯ ಕುರಿತು ಬರೆಯುತ್ತಾ, ಹೆಣ್ಣು’ ಶೀರ್ಷಿಕೆಯ ಈ ಹನಿಗವನ ನಮ್ಮ ವ್ಯವಸ್ಥೆಯ ಮನಸ್ಥಿತಿಗೆ ರಪ್ಪೆಂದು ಬಾರಿಸಿದಂತೆ ಭಾಸವಾಗುತ್ತದೆ. ಹೆಣ್ಣನ್ನು ಜಗದ ಕಣ್ಣು ಎಂದು ಹೇಳುವ ಕವಿ, ಹೆಣ್ಣಿನ ಮೌಲ್ಯ ತಿಳಿಯದವರಿಗೆ ಎಷ್ಟು ತಿಳಿ ಹೇಳಿದರೂ ಅಷ್ಟೇ, ಅವರಿಗೆ ಇದೆಲ್ಲ ಅರ್ಥವಾಗುವುದಿಲ್ಲ ಎನ್ನುವ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಲೇ ಆಕೆಯನ್ನು ಜಗದ ಕಣ್ಣು ಎಂದು ಕರೆಯುವ ಮೂಲಕ ಗೆಲ್ಲುತ್ತಾರೆ. ಇದೊಂದು ಉದಾಹರಣೆಯಷ್ಟೇ. ಸಮಾಜದ ಬಗ್ಗೆ ತಮಗಿರುವ ಕಾಳಜಿ, ಅಸಹನೆ, ಸಿಟ್ಟು, ನೋವುಗಳನ್ನೆಲ್ಲ ರಮೇಶ ಅವರು ಈ ಸಂಕಲನದ ಹಲವು ಹನಿಗವನಗಳಲ್ಲಿ ಸಶಕ್ತವಾಗಿ ಕಟ್ಟಿಕೊಟ್ಟಿದ್ದಾರೆ. ಹಾಗೆಂದು ಸಂಕಲನದುದ್ದಕ್ಕೂ ಇಂತಹ ಹನಿಗವನಗಳಿವೆ ಎಂದು ಭಾವಿಸಬೇಕಾಗಿಲ್ಲ. ಮೊದಲೇ ಹೇಳಿದಂತೆ ಬದುಕಿನೆಲ್ಲ ಭಾವನೆಗಳೂ ಒಂದು ಪುಟ್ಟ ಹಕ್ಕಿ ನಮ್ಮ ಕಣ್ಣಿಗೆ ಆಗಸದಲ್ಲಿ ಚಲಿಸುವ ಚುಕ್ಕಿಯಾಗಿ ಕಾಣಿಸುವಂತೆಯೇ ಕಾಣಿಸಿಕೊಂಡಿವೆ ಮತ್ತು ನಮ್ಮನ್ನು ಸೆಳೆಯುತ್ತದೆ’ ಎಂದಿದ್ದಾರೆ. ಇದು ಇಲ್ಲಿನ ಹನಿಗವನಗಳ ಭಾವಗಳನ್ನು ವಿವರಿಸುತ್ತದೆ..
ಬರಹಗಾರ ರಮೇಶ ಕೊಂಡಕೇರ ಅವರು ಬಾಗಲಕೋಟೆ ಜಿಲ್ಲೆಯ ಬಾವಲತ್ತಿಯರುವ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಆದ ಬರವಣಿಗೆ ಶೈಲಿಯ ಮೂಲಕ ಓದುಗರಿಗೆ ಪರಿಚಿತರಾಗಿದ್ದಾರೆ. ಸಾವಿರಕ್ಕೂ ಹೆಚ್ಚು ಹನಿಗವಿತೆಗಳನ್ನು ರಚಿಸಿರುವ ಇವರ ಮೊದಲ ಹನಿಗವಿತೆಗಳ ಸಂಕಲನ ‘ಹಕ್ಕಿ ಚುಕ್ಕಿ. ...
READ MORE