ಮಾಂಸದಂಗಡಿಯ ನವಿಲು

Author : ಎನ್ಕೆ ಹನುಮಂತಯ್ಯ

Pages 176

₹ 140.00
Year of Publication: 2016
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಕನ್ನಡ ಕಾವ್ಯಕ್ಕೆ ಅವರಿಂದ ಸಲ್ಲಬೇಕಾದದ್ದು ಸಾಕಷ್ಟು ಇತ್ತಾದರೂ ಅದನ್ನೆಲ್ಲ ಬದಿಗೆ ಸರಿಸಿ ಇದ್ದಕ್ಕಿದ್ದಂತೆ ಇಹದಿಂದ ಎದ್ದು ಹೋದವರು ಕವಿ ಎನ್‌. ಕೆ. ಹನುಮಂತಯ್ಯ. ಬರೆದದ್ದು ಎರಡೇ ಕವನ ಸಂಕಲನಗಳಾದರೂ ಅವು ಸೃಷ್ಟಿಸಿದ ಸಾಂಸ್ಕೃತಿಕ ಕಂಪನ ದೊಡ್ಡದಾಗಿತ್ತು. 

ಇವರ ಕಾವ್ಯದ ಬಗ್ಗೆ ಬರೆಯುತ್ತ ನಾಡಿನ ಹಿರಿಯ ವಿಮರ್ಶಕ ರಹಮತ್‌ ತರೀಕೆರೆ ’ಎನ್ಕೆ ಕಾವ್ಯವು ಅಂಬೇಡ್ಕರ್ ವೈಚಾರಿಕ ಎಚ್ಚರ, ಬುದ್ಧನ ತಾಯಕರುಣೆ, ಅಲ್ಲಮನ ಆನುಭಾವಿಕ ಬೆಡಗು, ಲಂಕೇಶರ ವೈಯಕ್ತಿಕ ತಳಮಳ ಮತ್ತು ಅಂತರ್ಮುಖತ್ವಗಳೆಲ್ಲವೂ ಸಂಗಮಗೊಂಡು ಹುಟ್ಟಿದ್ದು; ಇಲ್ಲಿ ದಲಿತ ಸಂವೇದನೆಯನ್ನು ಮಾನವ ಸಂವೇದನೆಯ ವಿಶಾಲಭಿತ್ತಿಯಲ್ಲಿಟ್ಟು ನೋಡುವ ಅಥವಾ ಸಾಮಾನ್ಯ ಲೋಕಾನುಭವವನ್ನು ದಲಿತ ಭಿತ್ತಿಯಲ್ಲಿಟ್ಟು ನೋಡುವ ವಿಶಿಷ್ಟ ದೃಷ್ಟಿಕೋನವಿದೆ. ಸ್ವಂತದ ಒಳಗಿನ ಖಾಸಗಿ ತಲ್ಲಣಗಳನ್ನೇ ದೊಡ್ಡದೆಂದು ಪರಿಭಾವಿಸಿ ತನ್ನ ಅಸ್ತಿತ್ವವನ್ನು ಹುಡುಕುವ ವೈಯಕ್ತಿಕತೆಯಿದೆ; ಹಾಗೆಯೇ ಕಷ್ಟಗಳಲ್ಲಿ ಹುದುಗಿದ ಎಲ್ಲರ ದುಗುಡಗಳನ್ನು ತನ್ನವೇ ಎಂದು ಪರಿಭಾವಿಸಿ ಮಿಡಿಯುವ ಸಾರ್ವತ್ರಿಕತೆಯೂ ಇದೆ. ಇಲ್ಲಿನ ಕಾವ್ಯದ ಕಸುವೆೆಂದರೆ, ರೂಪಕಗಳ ನುಡಿಗಟ್ಟು, ಭಾವನಾತ್ಮಕ ತೀವ್ರತೆ, ದಾರ್ಶನಿಕ ಜಿಗಿತ ಹಾಗೂ ಮೇರೆಯಿಲ್ಲದ ಜೀವಪ್ರೀತಿ. ಇವು ಎನ್ಕೆ ಅವರನ್ನು ಸಮಕಾಲೀನ ಕವಿಗಳಲ್ಲೇ ವಿಶಿಷ್ಟರನ್ನಾಗಿಸಿದವು. ಹೃದಯದ ಮೂಲಕವೇ ಲೋಕದ ವಿದ್ಯಮಾನಗಳನ್ನು ನೋಡುವುದು ಮತ್ತು ಪ್ರತಿಕ್ರಿಯಿಸುವುದು ಇಲ್ಲಿನ ಒಂದು ಗುಣ. ಇದರ ಸಮಸ್ಯೆಯೆಂದರೆ, ಕೊಚ್ಚಿಹೋಗುವಂತಹ ಭಾವುಕ ತೀವ್ರತೆಯಲ್ಲಿ ಬೌದ್ಧಿಕತೆಯನ್ನು ಬಿಟ್ಟುಕೊಡುವುದು. ಇದರಿಂದ ಕಾವ್ಯದೊಳಗಿನ ಬೌದ್ಧಿಕತೆ ಕೆಲಮಟ್ಟಿಗೆ ಮಂಕಾಗುವುದುಂಟು. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಒಬಾಮಾ ಗೆದ್ದಾಗ ಆತನನ್ನು ಕಪ್ಪು ಚಂದಮಾಮನೆಂದೂ, ಕಪ್ಪುಜನರ ಬಾಳಿನ ಕತ್ತಲೆಯನ್ನು ಬೆಳಗಲು ಬಂದಿದ್ದಾನೆಂದೂ ಸಂಭ್ರಮಿಸುವ ಎನ್ಕೆ ಕವನವನ್ನು ಗಮನಿಸಬೇಕು. ಅದರಲ್ಲಿರುವ ಪ್ರಾಮಾಣಿಕತೆಯನ್ನು ಅರ್ಥಮಾಡಿಕೊಳ್ಳಬಹುದಾದುದು. ಆದರೆ ಅದು ಲೋಕವಾಸ್ತವವನ್ನು ಭಾವುಕತೆಯಲ್ಲಿ ಗ್ರಹಿಸಿದ ಫಲವೂ ಆಗಿದೆ. ದಲಿತ ಚಳುವಳಿಯ ಪತನಕ್ಕೆ ಪಡುವ ವಿಷಾದವಿರಲಿ, ಕಪ್ಪುವರ್ಣೀಯನೊಬ್ಬ ಅಧಿಕಾರಕ್ಕೆ ಬಂದನೆಂದು ಪಡುವ ಸಂಭ್ರಮವಿರಲಿ, ಭಾವಾವೇಶದಲ್ಲಿ ಚಿಂತನಶೀಲತೆಯನ್ನು ಕೈಬಿಡುವ ಕಡೆಯಲ್ಲೆಲ್ಲ ಅವರ ಬರೆಹ ಜಿಜ್ಞಾಸೆಗೆ ಎರವಾಗುತ್ತದೆ’ ಎಂದು ಒಂದು ಸಂದರ್ಭದಲ್ಲಿ ಹೇಳಿದ್ದಾರೆ. 

ಅನಂತಮೂರ್ತಿಯವರು ಚಿತ್ರದ ಬೆನ್ನು ಸಂಕಲನಕ್ಕೆ ಬರೆದ ಮುನ್ನುಡಿಯಲ್ಲಿ, ’ಇದು ಸಾಮಾಜಿಕ, ಇದು ವೈಯುಕ್ತಿಕ, ಇದು ಆಧ್ಯಾತ್ಮಿಕ ಎಂದು ವಿಂಗಡಿಸಲಾರದಂತೆ ಬರೆಯುತ್ತಿರುವ ಮುಖ್ಯರಲ್ಲಿ ಶ್ರೀ ಎನ್.ಕೆ. ಹನುಮಂತಯ್ಯ ಒಬ್ಬರು’ ಎಂದಿದ್ದು ಕವಿಯ ಮಹತ್ತನ್ನು ಸಾರುತ್ತದೆ. 

ಹನುಮಂತಯ್ಯನವರ ’ಹಿಮದ ಹೆಜ್ಜೆ’, ’ಚಿತ್ರದ ಬೆನ್ನು’ ಕೃತಿಗಳ ಜೊತೆಗೆ ಅವರ ಕೆಲವು ಅಪ್ರಕಟಿತ ಕವಿತೆಗಳು ’ಮಾಂಸದಂಗಡಿಯ ನವಿಲು’ ಕೃತಿಯಲ್ಲಿವೆ. 

About the Author

ಎನ್ಕೆ ಹನುಮಂತಯ್ಯ

ತಿಪಟೂರು ತಾಲ್ಲೂಕಿನ ನಾಗರಘಟ್ಟದಲ್ಲಿ ಜನಿಸಿದ್ದ (1974) ಎನ್.ಕೆ. ಹನುಮಂತಯ್ಯ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಾಗಿದ್ದ ಎನ್ಕೆ ಕಿರಿಯ ವಯಸ್ಸಿನಲ್ಲಿಯೇ (2010) ತೀರಿಹೋದರು. ಹಿಮದ ಹೆಜ್ಜೆ (ಕವನ ಸಂಕಲನ- 2001), ಚಿತ್ರದ ಬೆನ್ನು (ಕವನ ಸಂಕಲನ-  2006), ಎಂ.ವಿ. ವಾಸುದೇವರಾವ್ (ವ್ಯಕ್ತಿಚಿತ್ರ- 2000), ಕ್ರಾಂತಿ ವಸಂತ (ಬಿ.ಬಸವಲಿಂಗಪ್ಪನವರ ವ್ಯಕ್ತಿಚಿತ್ರ), ಜಲಸ್ತಂಭ (ನಾಟಕ- 2005) ಪುಸ್ತಕಗಳನ್ನು ಪ್ರಕಟಿಸಿದ್ದರು. ಊರು ಕೇರಿ ಪತ್ರಿಕೆಯ ಸಂಪಾದಕರು ಆಗಿದ್ದರು. ...

READ MORE

Related Books