ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ

Author : ಎಸ್. ದಿವಾಕರ್‌

Pages 72

₹ 100.00




Year of Publication: 2019
Published by: ಬಹುರೂಪಿ
Address: ಎಂಬೆಸ್ಸೆ ಸೆಂಟರ್‌, ಕ್ರೆಸೆಂಟ್‌ ರಸ್ತೆ, ಶಿವಾನಂದ ಸರ್ಕಲ್‌ ಹತ್ತಿರ, ಬೆಂಗಳೂರು
Phone: 7019182729

Synopsys

‘ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ’ ಎಸ್. ದಿವಾಕರ ಅವರ ಹೊಸ ಕವನ ಸಂಕಲನ. ಕೃತಿಯ ಬಗ್ಗೆ ಎಚ್.ಎಸ್. ಶಿವಪ್ರಕಾಶ್ ಬರೆಯುತ್ತಾ, ‘ದಿವಾಕರರ ಕಾವ್ಯದಲ್ಲಿ ಆಂಗ್ಲೋ-ಅಮೆರಿಕನ್ ಕಾವ್ಯವಲಯದ ಹೊರಗಿನ ಮಹಾನ್ ಕವಿಗಳ ಪ್ರೇರಣೆ ಕಾಣುತ್ತದೆ. ಈ ಪಟ್ಟಿ ಬಹಳ ದೊಡ್ಡದು. ಆದರೂ ಹೆಸರಿಸಲರ್ಹವಾದ ಕೆಲವು ಪ್ರಮುಖ ಪ್ರೇರಣೆಗಳೆಂದರೆ; ಲೋರ್ಕ, ಹಿಮೆನೆಜ್, ಅಪೊಲಿನೇರ್‌, ಸಾನ್‌ ಜಾ ಪಾರ್ಸ್‌, ಆಮಿ ಸೀಶರ್‌, ಸೆಸೇರ್‌ ವಹೇಯೊ, ಗಾಬ್ರಿಯಲಾ ಮಿಸ್ತ್ರೇಲ್‌, ಮಿರಸ್ಲಾವ್‌ ಹೋಲುಬ್‌ ಇತ್ಯಾದಿ. ಇಲ್ಲಿ ಕಾಣುವುದು ಪ್ರೇರಣೆ ಎಂಬುದನ್ನು ಒತ್ತಿ ಹೇಳಬೇಕು. ಪ್ರೇರಣೆ ಅನುಕರಣೆ ಖಂಡಿತಾ ಅಲ್ಲ. ಅಡಿಗರು, ರಾಮಾನುಜನ್‌ ಮತ್ತು ಕೆಲವು ಸಲ ಲಂಕೇಶ್‌ ಅವರನ್ನು ಬಿಟ್ಟರೆ ಬಹುಮಟ್ಟಿಗಿನ ಕನ್ನಡ ನವ್ಯ ಕಾವ್ಯ ಬರೀ ಅನುಕರಣಶೀಲ. ದಿವಾಕರರು ಆಧುನಿಕ ವಿಶ್ವಕಾವ್ಯದ ಹಲವು ಪ್ರಯೋಗ ಸಾಧ್ಯತೆಗಳನ್ನು ಮೈಗೂಡಿಸಿಕೊಂಡು ಅದರ ಕನ್ನಡದ ವಿಶೇಷತೆಯನ್ನು ನಿರ್ಮಿಸಿದ ವಿಶಿಷ್ಟರು’ ಎಂದಿದ್ದಾರೆ. ಇದು ದಿವಾಕರ್‌ ಅವರ ಕಾವ್ಯದ ಮಹತ್ವವನ್ನು ವಿವರಿಸುತ್ತದೆ.

About the Author

ಎಸ್. ದಿವಾಕರ್‌
(28 November 1944)

ಎಸ್. ದಿವಾಕರ್ ಅವರು 28 ನವೆಂಬರ್ 1944 ರಲ್ಲಿ ಜನಿಸಿದರು.  ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಸೋಮತ್ತನಹಳ್ಳಿಯಲ್ಲಿ. ಸಣ್ಣಕಥೆ, ಕಾವ್ಯ, ಪ್ರಬಂಧ, ವಿಮರ್ಶೆ, ಅಂಕಣ ಬರಹ, ಭಾಷಾಂತರ, ಸಂಪಾದನೆ ಇವೆಲ್ಲದರಲ್ಲಿ ಸ್ವೋಪಜ್ಞತೆ ಮತ್ತು ವಿಶಿಷ್ಟತೆ ಮೆರೆದಿರುವ ಎಸ್. ದಿವಾಕರ್‌, ಸವಿಸ್ತಾರ ಓದಿನ ಜಾಗೃತ ಮನಸ್ಸಿನ ಲೇಖಕರು. ಸುಧಾ, ಪ್ರಜಾವಾಣಿ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಅಮೆರಿಕನ್ ಕಾನ್ಸುಲೇಟ್ ಕಚೇರಿಯಲ್ಲಿ ಕನ್ನಡ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಪ್ರಕಟಿತ ಕೃತಿಗಳಾದ  ಇತಿಹಾಸ, ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ ಆಯ್ದ ಕತೆಗಳು (ಕಥಾ ಸಂಕಲನಗಳು), ಆತ್ಮಚರಿತ್ರೆಯ ಕೊನೆಯ ಪುಟ (ಕವನ ಸಂಕಲನ), ನಾಪತ್ತೆಯಾದ ಗ್ರಾಮಾಫೋನು, ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ ...

READ MORE

Reviews

ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ-ಪ್ರಜಾವಾಣಿ

ಸೋತ ಕಣ್ಣುಗಳಿಗೆ ಮತ್ತೆ ಜೀವ-ವಿಜಯಕರ್ನಾಟಕ-ಹ.ಚ.ನಟೇಶ ಬಾಬು

ಮಧ್ಯಾಹ್ನದ ಗಾಂಭೀರದಲ್ಲಿ ಕಣ್ಣು ಮಿಟುಕಿಸಿದ ಕವಿತೆ!

'ನೀನಿರುವುದೆಲ್ಲಿ? ಭಾಷೆ ಭಾಷೆಗಳೆಲ್ಲ ಕೊನೆಯಾಗುವಲ್ಲಿ? 

ಕೇಳಿಸುತ್ತಿದೆಯೀಗ ಪ್ರತಿಮೆಗಳ ಉಸಿರಾಟ, ಚಿತ್ರಪಟಗಳ ಮೌನ 

ಬೇಸಿಗೆಯ ಸಂಜೆಗಳ ನೀರವದ ಎಲೆಯುದುರು 

ಬಿಸಿಲು ಠಳ್ಳೆಂದೊಡೆದ ಗಾಜು. 

... ಸಂತೋಷವೆನ್ನುವುದು ನೆಲದಲ್ಲಿಲ್ಲ ನೆಲಕ್ಕಿಂತ ತುಸು ಮೇಲೆ'

ಇದು ಎಸ್ ದಿವಾಕರ್ ಅವರ 'ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ’ ಕವನ ಸಂಕಲನದ 'ಬಾಲ ಮುರಳೀಗಾನ' ಕವಿತೆಯ ಸಾಲು.

ವಿಶ್ವದ ಸಣ್ಣಕತೆಗಳ ಮೂಲಕ, ಅತಿ ಸಣ್ಣ ಸಾಲುಗಳೊಳಗಿನ ಅಚ್ಚರಿಯ ಮೂಲಕ ಚಿರಪರಿಚಿತ ಎಸ್.ದಿವಾಕರ್. ಎರಡು ದಶಕದ ಹಿಂದೆಯೇ 'ಆತ್ಮಚರಿತ್ರೆಯ ಕೊನೆಯ ಪುಟ' ಕವಿತಾ ಸಂಕಲನವನ್ನು ದಿವಾಕರ್ ಹೊರ ತಂದರೂ ಸಾಮಾನ್ಯ ಓದುಗರಿಗೆ ಅವರೊಬ್ಬ ಗದ್ಯ ಸಾಹಿತಿಯಾಗಿಯೇ ಹತ್ತಿರವಾದವರು. ಇದೀಗ ದಿವಾಕರ್ ಅವರ ‘ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ' ಕವಿತಾ ಸಂಕಲನ ಹೊರಬಂದಿದೆ. ಮುಂಜಾವು, ಸಂಜೆ, ಕತ್ತಲಿನ ಬಗ್ಗೆ ಬರೆದವರು ಹೆಚ್ಚು. ಮಧ್ಯಾಹ್ನದ ಬಗ್ಗೆ ಬರೆವವರು ಅಪರೂಪ. ಈ ಸಂಕಲನದ ಶೀರ್ಷಿಕೆಯೂ ಅಪರೂಪ. ಇಲ್ಲಿರುವ ಕವಿತೆಗಳೂ ಸಾಮಾನ್ಯ ಕವಿತೆಗಳಿಗಿಂತ ಭಿನ್ನವಾಗಿ ಅಪರೂಪವೆನಿಸುವಂಥವು. ಒಂದು ವಸ್ತುಸ್ಥಿತಿಯ ಹಲವು ಭಾವಾಂತರಗಳು ಇಲ್ಲಿ ದಕ್ಕುತ್ತವೆ. 

ಆಕಾಶವುಂಟಲ್ಲಿ ತನ್ನ ಪಾಡಿಗೆ. ಇಲ್ಲಿ 

ಒಣಮರದ ತುದಿಯೇರಿ ಊಳಿಡುವ ಮುದಿಗಾಳಿ; 

ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ 

ಟೇಬಲ್ಲಿನ ಮೇಲೆ 

ಜೇಡಗಳಾಗಿ ಸುರಿದು ಮೂಲೆಯ ಸೇರಿಡಿಡಿ 

ತೂಕಡಿಸುತ್ತಿರುವ ಮೌನ

.. ಹೀಗೆ ಸಾಗುವ ಕವಿತೆಗಳು ಒಂದು ಹೊತ್ತಿನ ಚಿತ್ರವಾಗುವುದರ ಜೊತೆಗೆ ಚಿತ್ರಿತವಾಗದ ಇನ್ನೊಂದು ಮೂಡ್ ನೆಡೆಗೂ ಕರೆದೊಯ್ಯುತ್ತವೆ. ತೂಕಡಿಸುತ್ತಿರುವ ಮೌನದಲ್ಲಿ ಎಷ್ಟೊಂದು ಅನುಭವ ದರ್ಶನ ಇದೆ! ವಿಶ್ವ ಸಾಹಿತ್ಯದ ಘಮಲೂ ಈ ಸಂಕಲನದಲ್ಲಿದೆ.

ಈ ಕವಿತೆಗಳ ಬಗ್ಗೆ ಬರೆಯುತ್ತಾ ಎಚ್ ಎಸ್ ಶಿವಪ್ರಕಾಶ್, 'ದಿವಾಕರರ ಕವನಗಳು ಪೂರ್ವಾಗ್ರಹದಿಂದ ಬಿಡುಗಡೆ ಹೊಂದಿ, ಭಾವಕ್ಷಣವೊಂದರ ಅನನ್ಯತೆಯನ್ನು, ಅದ್ವಿತೀಯತೆಯನ್ನು ಕಾವ್ಯವಾಗಿ ನಿರ್ಮಿಸುತ್ತದೆ' ಎನ್ನುತ್ತಾರೆ.

ಈ ಕೃತಿಯ ಹಿನ್ನುಡಿಯಲ್ಲಿ ನರೇಂದ್ರ ಪೈ, 'ದಿವಾಕರ್ ಅವರ ಹೊಸ ರಚನೆಗಳು ಅಭಿವ್ಯಕ್ತಿಯ ಹೊಸತನದಿಂದ ಮತ್ತು ಇಡೀ ಕವಿತೆಯ ಓದು ಮನಸ್ಸಿನಲ್ಲಿ ಉದ್ದೀಪಿಸುವ ಸಂವೇದನೆಗಳ ಪೂರ್ಣತೆಯಿಂದ ಯಶಸ್ವಿಯಾಗಿವೆ. ಅವರಸ ಪ್ರೇರಣೆಯ ರಚನೆಗಳುತಾಜಾತನದಿಂದಲೂ ಜೀವಂತಿಕೆಯಿಂದಲೂ ನಳನಳಿಸುತ್ತವೆ. ಹೊರದೇಶದ ಕವಿವರ್ಯರ ಪ್ರೇರಣೆಯಿಂದ ಬರೆದ ಕವಿತೆಗಳು ಕೊಂಚ ಕ್ಲಿಷ್ಟ ಎನಿಸುತ್ತವೆ' ಎಂದು ವಿಸ್ತರಿಸಿದ್ದಾರೆ.

ಕೃಪೆ : ಕನ್ನಡಪ್ರಭ (2020 ಫೆಬ್ರುವರಿ 23)

.........................................................................................................................

ಕಾವ್ಯಧಾರೆಗೆ ಬಂತು ಹೊಸ ನೀರು-ಎಚ್. ಎಸ್. ಶಿವಪ್ರಕಾಶ್-ಉದಯವಾಣಿ

 

ಮಿಶ್ರ ತಳಿಯ ಕುತೂಹಲಕಾರಿ ಕವನಗಳು

ಎಸ್. ದಿವಾಕರ್ ಕನ್ನಡದ ಹಿರಿಯ ಮತ್ತು ಪ್ರತಿಭಾವಂತ ಕಥೆಗಾರರು. ಜೊತೆಗೆ ತಮ್ಮ ಅನುವಾದಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಹೊಸ ಸಂವೇದನೆ ಮತ್ತು ಅಭಿವ್ಯಕ್ತಿ ರೂಪಗಳ ಪರಿಚಯ ಮಾಡಿದವರು. ಅವರು ಆಗಾಗ್ಗೆ ಪದ್ಯಗಳನ್ನೂ ಬರೆದವರು. ೧೯೯೮ರಲ್ಲಿ ಪ್ರಕಟವಾದ 'ಆತ್ಮ ಚರಿತ್ರೆಯ ಕೊನೆಯ ಪುಟ' ಎಂಬ ಮೊದಲ ಸಂಕಲನದ ನಂತರ ಈಗ 'ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ' ಎಂಬ ತಮ್ಮ ಈ ಎರಡನೆಯ ಕವನ ಸಂಕಲನವನ್ನು ಹೊರ ತಂದಿದ್ದಾರೆ. ಇದರ ಹೆಸರೇ ಎಸ್ ಡಿ ಸೂಚಿಸುವಂತೆ ಇದರಲ್ಲಿನ ಪದ್ಯಗಳು ಸುಕುಮಾರ ಸೂಕ್ಷ್ಮವಾಗಿದ್ದು, ಅವುಗಳ ಲೋಕ ಸತ್ಯ ಗ್ರಹಿಕೆ ಮತ್ತು ಅದನ್ನು ಅಭಿವ್ಯಕ್ತಿಸುವ ಕ್ರಮಗಳು ಮೊದಲ ಓದಿಗೆ ಒದಗಲಾರದೆಂದು ಸ್ವತಃ ಲೇಖಕರಿಗೆ ಅನ್ನಿಸಿಯೋ ಏನೋ ಸಂಕಲನವನ್ನು ಮುನ್ನುಡಿ ಮತ್ತು ಬೆನ್ನುಡಿಗಳೆಂಬ ವ್ಯಾಖ್ಯಾನಗಳಿಂದ ಸಜ್ಜುಗೊಳಿಸಿದ್ದಾರೆ. ಆದರೆ ಮುನ್ನುಡಿ ಬರೆದಿರುವ ಎಚ್. ಎಸ್. ಶಿವಪ್ರಕಾಶ್, ಈ ಸಂಕಲನದಲ್ಲಿನ ಯಾವ ಪದ್ಯವನ್ನೂ ಮುಟ್ಟಿ ನೋಡಿದ ಸಾಕ್ಷ್ಯಗಳಿಲ್ಲದೆಯೂ ಇಲ್ಲಿನ ಕವನಗಳನ್ನು ತಮ್ಮ ಕಾವ್ಯ ಭಾಷೆಯ ಅರಿವಿನ ಗಡಿಯನ್ನು ವಿಸ್ತರಿಸಿರುವ ಮತ್ತು ಕನ್ನಡಕ್ಕೆ ಈವರೆಗೆ ಕಾಣದ ಒಂದು ಕಾವ್ಯ ಸಾಧ್ಯತೆಯನ್ನು ತಂದು ಕೊಟ್ಟಿರುವ ಕವನಗಳೆಂದು ಗುರುತಿಸುತ್ತಾ, ಇಂತಹುದೇ ಹೊಸತನದ ಕವನಗಳಿಗೆ ಹೆಸರಾದವರೆಂದು ಕನ್ನಡ ಕಾವ್ಯ ರಸಿಕರಾರೂ ಈವರೆಗೆ ಕಂಡು ಕೇಳರಿಯದ ಹಲವು 'ಜಾಗತಿಕ' ಕವಿಗಳ ಪಟ್ಟಿಯನ್ನೇ ನೀಡಿ ನಮ್ಮನ್ನು ಬೆಪ್ಪುಗೊಳಿಸುವಷ್ಟರ ಮಟ್ಟಿಗಷ್ಟೇ ಯಶಸ್ವಿಯಾಗಿದ್ದಾರೆ. ಇನ್ನು ಹಿನ್ನುಡಿಯ ನರೇಂದ್ರ ಪೈ ಅವರ ವ್ಯಾಖ್ಯಾನವೂ ಇದಕ್ಕಿಂತ ಭಿನ್ನವಾಗಿರದೆ ಓದುಗರೇ ತಮ್ಮದೇ ಹಳೆಯ ಓದಿನ ಸೂಕ್ಷ್ಮಗಳೊಂದಿಗೆ ಇಲ್ಲಿನ ಕವನಗಳಿಗೆ ಮುಖಾಮುಖಿಯಾಗಬೇಕಿದೆ.

ಹಾಗೆ ನೋಡಿದರೆ ಇಲ್ಲಿನ ಬಹತೇಕ ಕವನಗಳು ಎ.ಕೆ. ರಾಮಾನುಜನ್ ಮತ್ತು ಕೆ.ವಿ.ತಿರುಮಲೇಶರ ಪ್ರಯೋಗಶೀಲ ಕವನಗಳ ಮಿಶ್ರತಳಿಯಂತಿದ್ದು, ವಸ್ತು ಪ್ರಪಂಚ ಮತ್ತು ಶಬ್ಬಲೋಕಗಳ ನಡುವೆ ಹೊಸದೊಂದು ಹದದ ಅನುಸಂಧಾನದ ಮೂಲಕ ನಮ್ಮೊಳಗೆ ಅನುಭವದ ಹೊಸ ವಿನ್ಯಾಸಗಳನ್ನು ಸೃಷ್ಟಿಸುತ್ತಾರೆ; ಹೊಸದೊಂದು ಲೋಕದೃಷ್ಟಿಯ ಮಿಂಚನ್ನೂ ಕಾಣಿಸುತ್ತಾರೆ. ಉದಾ, ಗೆ 'ವಯಸ್ಸಾಗಿದೆ ಎಂದು ಗೊತ್ತಿಲ್ಲ ಆಲ್ಬಂ ಫೋಟೊಗಳಿಗೆ/ಅಸ್ಥಿಪಂಜರವೆದ್ದು ಬರುತ್ತವೆ ಜನ ತುಂಬಿದ ಬೀದಿಗೆ' ಎಂದು ಆರಂಭವಾಗುವ '೨೦೨೦ರ ಹೊಸ್ತಿಲಲಿ' ಎಂಬ ಮತ್ತು 'ನೀನಿರುವುದೆಲ್ಲಿ? ಭಾಷೆ ಭಾಷೆಗಳೆಲ್ಲ ಕೊನೆಯಾಗುವಲ್ಲಿ? /ಕೇಳಿಸುತ್ತಿದೆಯೇಗ ಪ್ರತಿಮೆಗಳ ಉಸಿರಾಟ ಚಿತ್ರಪಟಗಳ ಮೌನ/ಬೇಸಿಗೆಗಳ ಸಂಜೆಗಳ ನೀರವ ನೀರವದ ಎಲೆಯುದುರು..' ಎಂದು ಆರಂಭವಾಗುವ 'ಬಾಲಮುರಳಿ ಗಾನ'ದಂತಹ ಕವನಗಳಾಗಲೀ ಅಥವಾ 'ಝೀಬ್ರಾ' ದಂತಹ ಜಾಣ ಮತ್ತು ಚುರುಕಿನ ಕವನಗಳಾಗಲೀ ಕನ್ನಡ ಕಾವ್ಯ ಸಂವೇದನೆಗೆ ಹೊಸದಲ್ಲ: ಇಲ್ಲಿನ ವ್ಯಾಕರಣವಷ್ಟೇ ಹೊಸದೆನಿಸುವುದು, ಆದರೆ ಆ ಸಿದ್ಧಿ ದಿವಾಕರರನ್ನು ಅಭಿನಂದಿಸದಿರಲಾಗದು.

ಆದರೆ ಈ ವ್ಯಾಕರಣ ಒಮ್ಮೊಮ್ಮೆ ವಿಶೇಷ ಅರ್ಥ ವಲಯಗಳನ್ನು ಸೃಷ್ಟಿಸಲು ಒಮ್ಮೊಮ್ಮೆ ಅತಿ ಕಸರತ್ತಿಗೂ ಹೋಗುವುದೂ ಉಂಟು. 'ಪುಸ್ತಕ' ಎಂಬ ಕವನದ ಸಾಲುಗಳು ಅರಾಜಕವಾಗಿ ಬೆಳೆ ಬೆಳೆಯುತ್ತಾ ಮಂಪರು ಸೃಷ್ಟಿಸಿ ಈ ಸಂಗ್ರಹದ ಶೀರ್ಷಿಕೆಯನ್ನು ಸಾರ್ಥಕಗೊಳಿಸುತ್ತವೆ! 'ಬಂಗಲೆಯೂ, ಜೋಪಡಿಯೂ', 'ವಿರಾಮ ಚಿಹ್ನೆಗಳು', 'ಮಂಡಲ' ಮುಂತಾದವು ಈ ಜಾತಿಗೆ ಸೇರಿದವು. ಇಂತಹ ಕವನಗಳು ಎಲ್ಲೋ ದೂರದಲ್ಲಿ ಸೂಕ್ಷ್ಮ ರಾಜಕೀಯ ಧ್ವನಿಗಳನ್ನು ಹೊರಡಿಸುವುದರಿಂದ ಅವುಗಳನ್ನು ಅಲ್ಲಿಗೇ ಬಿಡದೆ ಹಿಂದೆ ಬೀಳುವ ಚಪಲವೂ ಉಂಟಾಗುವುದು ಸುಳ್ಳಲ್ಲ. ಇನ್ನು ಇದೇ ಅಭಿರುಚಿಯ ಒಂದೆರಡು ವಿಲಾಯ್ತಿ ಕವಿಗಳಿಂದ ಪ್ರೇರಿತವಾದುವೆಂದು ಹೇಳಲಾದ ಒಂದೆರಡು ಕವನಗಳೂ ಇಲ್ಲಿವೆ. ಆದರೆ ಇವೇನೂ ದಿವಾಕರರ ಈ ಹೊಸ ಪ್ರಯೋಗವನ್ನು ಅರಿಯಲು ನೆರವಾಗುವಂತೆ ಕಾಣುವುದಿಲ್ಲ. ಆದರೆ ಕನ್ನಡಕ್ಕೆ ವೈವಿಧ್ಯಮಯ ವಿಲಾಯ್ತಿ ಸಾಹಿತ್ಯ ಸಂಪರ್ಕಗಳಿಂದ ಹೊಸದೇನನ್ನಾದರೂ ಕೊಡುತ್ತಲೇ ಬಂದಿರುವ ದಿವಾಕರರು ಇಲ್ಲಿಯೂ ಹೊಸದನ್ನು ಕೊಡುವ ಪ್ರಯತ್ನ ಮಾಡಿದ್ದಾರೆ. ಆದರೆ ಅದು ಸಂಪೂರ್ಣ ವಿಲಾಯತಿಯನ್ನೂ ಅಲ್ಲ, ಸಂಪೂರ್ಣ ಹೊಸದೂ ಅಲ್ಲ.

- ಡಿಎಸ್ಸೆನ್

ಕೃಪೆ: ಹೊಸ ಮನುಷ್ಯ ಜೂನ್‌ 2020

 

Related Books