ಚಿಂತಾಮಣಿ (ಕವನ ಸಂಕಲನ)

Author : ಸಿದ್ಧಲಿಂಗ ಪಟ್ಟಣಶೆಟ್ಟಿ

Pages 152

₹ 140.00
Year of Publication: 2020
Published by: ಅನನ್ಯ ಪ್ರಕಾಶನ, ಧಾರವಾಡ
Address: ಹೂಮನೆ, ಶ್ರೀದೇವಿನಗರ, ವಿದ್ಯಾಗಿರಿ, ಧಾರವಾಡ-580004
Phone: 94488 61604

Synopsys

‘ಚಿಂತಾಮಣಿ’ ಸಿದ್ಧಲಿಂಗ ಪಟ್ಟಣಶೆಟ್ಟಿ ಕವನ ಸಂಕಲನ. ಈ ಕೃತಿಗೆ ಲೇಖಕ ಎಚ್.ಎಸ್. ರಾಘವೇಂದ್ರರಾವ್ ಬೆನ್ನುಡಿ ಬರೆದು ‘ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಹಲವು ಕವಿತೆಗಳು ಫ್ರೆಶ್ ಎನ್ನಿಸುವುದಕ್ಕೆ ಮುಖ್ಯ ಕಾರಣ ಈ ಕವಿ ಸದ್ಯದ ಬಗ್ಗೆ ಬರೆಯುವಾಗಲೂ ಅಂತರಂಗದ ಶಾಶ್ವತಗಳನ್ನು ಮರೆಯದೇ ಇರುವುದು ಮತ್ತು ಕವಿತೆಯೆಂಬುದು ಭಾಷೆಯೆಂಬ ಮಿಡಿವ ಮಣ್ಣಿನ ಮೂಲಕ ಹೊಸ ಆಕೃತಿಗಳನ್ನು ಕಂಡುಕೊಳ್ಳುವ ಕಾಯಕವೆಂಬ ಸತ್ಯವನ್ನು ಮರೆಯದೇ  ಇರುವುದು. ಅವರು ಹೊರಲೋಕದ ಬಗ್ಗೆ ಬರೆಯುವಾಗಲೂ ಒಳಲೋಕದ ಭಾವನಾತ್ಮಕ ತುಡಿತಗಳಿಗೆ ವಶರಾಗಿಯೇ ಇರುತ್ತಾರೆ’ ಎನ್ನುತ್ತಾರೆ.

ಅಂದಂದಿನ ಅನುಭವಗಳಿಗೆ ನಿಷ್ಠರಾಗಿರುತ್ತಲೇ ಅನಾದಿ, ಅನಂತವಾದ ಪಯಣವೊಂದರ ಆಯಾಮವನ್ನು ಕಾಪಾಡಿಕೊಳ್ಳುತ್ತಾರೆ. ಆದ್ದರಿಂದಲೇ, ಅವರ ಕಾವ್ಯವನ್ನು ಒಟ್ಟಂದದಲ್ಲಿ ಓದಿದಾಗ ಕಂಡುಬರುವ ಸಾತತ್ಯವು ನಿರಂತರವಾದ ಹುಡುಕಾಟದಿಂದ ಮೂಡಿದ್ದು, ಇದು ಕವಿತೆಯ ಆಶಯ. ಆಕೃತಿಗಳಿಗೆ ಮಾತ್ರ ಸಂಬಂಧಿಸದೇ, ತನ್ನನ್ನು ತಾನೇ ಕಂಡುಕೊಳ್ಳುವ ಹುಡುಕಾಟ. ಇದು ಕೌಟುಂಬಿಕತೆ ಹಾಗೂ ಸಾಮಾಜಿಕತೆಯನ್ನೂ ಒಳಗೊಳ್ಳುವ ತಾತ್ವಿಕ ಹುಡುಕಾಟಗಳು ಕವನಗಳ ಜೀವಾಳವಾಗಿವೆ. 

About the Author

ಸಿದ್ಧಲಿಂಗ ಪಟ್ಟಣಶೆಟ್ಟಿ
(03 November 1939)

ಕವಿ-ಅನುವಾದಕ-ಅಂಕಣಕಾರರಾಗಿ ಚಿರಪರಿಚಿತರಿರುವ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಜನಿಸಿದ್ದು 1939ರ ನವಂಬರ್ ೩ರಂದು. ಧಾರವಾಡ ಸಮೀಪದ ಯಾದವಾಡ ಎಂಬ ಹಳ್ಳಿಯಲ್ಲಿ ಜನಿಸಿದ ಅವರು ಒಂದೂವರೆ ವರ್ಷದವರಿರುವಾಗಲೇ ತಂದೆಯನ್ನು ಕಳೆದುಕೊಂಡರು. ಕಡು ಬಡತನದಿಂದಾಗಿ ತಾಯಿಯ ತವರು ಮನೆ ಮನಗುಂಡಿ ಸೇರಿದರು. ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ಶಿಕ್ಷಣ ಮುಂದುವರಿಸುವ ದೃಢ ಸಂಕಲ್ಪದಿಂದ ತಾಯಿಯೊಂದಿಗೆ ಮತ್ತೆ ಧಾರವಾಡಕ್ಕೆ ಬಂದ ಅವರು  ಹಿಂದೀ ಎಂ.ಎ., ಪಿಎಚ್.ಡಿ. ಪದವಿಗಳನ್ನು ಪಡೆದರು. ಒಂದು ವರ್ಷ ಹೈಸ್ಕೂಲ್ ಶಿಕ್ಷಕ, ಒಂದು ವರ್ಷ ಶಿರಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, 1966 ರಿಂದ 1999ರ ವರೆಗೆ ಕರ್ನಾಟಕ ...

READ MORE

Reviews

ಚಿಂತಾಮಣಿ ಕೃತಿಯ ವಿಮರ್ಶೆ

ಕನ್ನಡದ ಹಿರಿಯ ಕವಿ ಸಿದ್ದಲಿಂಗ ಪಟ್ಟಣಶೆಟ್ಟಿವರ ಈ ಸ೦ಕಲನ ಬಡತನದಿಂದ ಮಧ್ಯಮ ವರಕ್ಕೆ ಚಲಿಸಿದ ಮಾಗಿದ ವ್ಯಕ್ತಿಯ ಜೀವನಾನುಭವಗಳ ಸಂಕಥನ. ಒಂದು ಸಮ ಇರದ ಒಂದೆ ಕೈಯ ಹಲವು ಬೆರಳುಗಳಂತೆ ಇಲ್ಲಿನ ಕವಿತೆಗಳಿವೆ.

ಇಲ್ಲಿನವು ಬಹುಪಾಲು ಸ್ವಕೇಂದ್ರಿತ ರಚನೆಗಳು. ನಾನು, ನನ್ನವಳು, ನನ್ನವರು, ನಾಕಂಡ ಬದುಕು ಇದು ಇಲ್ಲಿನ ಜಗತ್ತು. ತಾನು ಕಂಡುಂಡ ಅನುಭವ, ಪಡೆದ ಒಳನೋಟಗಳು ಮತ್ತು ಸಿದ್ಧಿಸಿಕೊಂಡ ಅರಿವುಗಳಿಗೆ ಕವಿ ಇಲ್ಲಿ ಕಾವ್ಯದ ಬಟ್ಟೆ ತೊಡಿಸಿದ್ದಾರೆ. ಕೆಲವೊಮ್ಮೆ ಇಲ್ಲಿ ಬದುಕಿನ ಒಂದು ನಿಶ್ಚಿಷ್ಟ ಕಾಲಘಟ್ಟದ ಚಿತ್ರ ಇದ್ದರೆ ಕೆಲವೊಮ್ಮೆ ಸಾಕಷ್ಟು ಸಿಹಿ, ಕಹಿ, ಹುಳಿ,

ಒಗರುಗಳನ್ನು ಅನುಭವಿಸಿದ ಜೀವವು ಹಿಂದಕ್ಕೆ ತಿರುಗಿ ನೋಡುವ ಆತ್ಮಾವಲೋಕನದ ಚಿತ್ರಗಳಿವೆ. ಅವೆಲ್ಲವು ವರ್ತಮಾನದಲ್ಲಿ ನಿಂತು ನೆನಪನ್ನು ಬಗೆಯುತ್ತವೆ.

ಈಗ ತಿಳಿವು ಜೊತೆಗೂಡಿದೆ/ಬದುಕಿನ ಮಸಿ ಕದಡಿದೆ, ತೀರುತಿದೆ ಆರುತಿದೆ... ಬದುಕು ಹೊರೆಯಾಗದ ಹಾಗೆ / ಹೊರುವುದು ಹೇಗೆ ಹೋರುವುದು ಇದು ನನಗೇ ಪ್ರಶ್ನೆ

ಬದುಕನ್ನು ಹೊರುವುದು ಮತ್ತು ಹೋರುವುದು ಹೇಗೆ; ನನ್ನತನವನ್ನು ಉಳಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆಗಳು ಇಲ್ಲಿ ಮತ್ತೆ ಮತ್ತೆ ಬರುತ್ತವೆ. ಇಲ್ಲಿನ ಬಹುತೇಕ ಕವಿತೆಗಳಲ್ಲಿ ನೈತಿಕತೆಯ ಜಿಜ್ಞಾಸೆಗಳಿವೆ. ಇದು ಹೀಗೇ ಹೌದು ಎಂಬ ಮೌಲ್ಯಾತ್ಮಕವಾದ ಹೇಳಿಕೆಗಳಿಗಿಂತ ಇಲ್ಲಿ ಇಡಿಬಾಳಿನ ಅರಿವಿನ ಮಂಡನೆಗಳು ಬದುಕಿನ ಮೌಲ್ಯಮಾಪನವಾಗಿ ಚಲನೆ ಪಡೆದಿವೆ:

ಹೆದರಿದ್ದೆ,/ಇದು ಸಾಗರ ಆಳ ಭಯಾನಕ ಎಂದು ಭಾವಿಸಿದ್ದೆ...

ಅರಿವಾಗಿದೆ ಈಗ ಬದುಕು ಕೇವಲ ಉರುಳು....

ಉರುಳು ಜಾರು ತಿಳಿದತ್ತ ಹೊರಳು...

ಮೊದಮೊದಲು ಕೆಸರು ಸಾಕಷ್ಟು ಮೆತ್ತಿಕೊಂಡೆ, ಕೊನೆಗೆ ಹೆಸರು ಹೊತ್ತುಕೊಂಡೆ, ಮೌನ ಕಾಪಾಡಿತು, ಈಗ ಕಾಯುತ್ತಿದೆ ವಯೋಧರ ಕಾದಿಟ್ಟ ಮಾನಧನ, ಒಳಿತೇ ಆಯಿತು ಹರಿವ ದಾರಿ ದಿಸೆ ಗೊತ್ತಾಯಿತು, ಕಾಲ ಮಾಗಿದೆ, ಈಗ, ತನು ಬಾಗಿದೆ, ಹಿಂದೆ ಸರಿಯಲಾರೆ ಸುಖದಿ ಸುರಿಯಲಾರೆ ಹರಡಿ ಹರಿಯಲಾರೆ, ಇದು ನನ್ನ ಸ್ವಂತದ್ದೆ ಮುಖವಾಡವೆ, ಅವ್ವಾ ಹಾಡು ಮುಗಿಯುತ್ತ ಬಂದಿದೆ, ಇಂತಹ ಹಲವು ಮಾತುಗಳು ಇಲ್ಲಿನ ಹಲವು ಪದ್ಯಗಳಲ್ಲಿ ಬದುಕಿನ ಅರಿವನ್ನು ಮಥಿಸಿ ನೀಡಿವೆ.

ಇಲ್ಲಿನ ಕಾಲಮುಖ ಕವಿತೆ ಅವನ ಜೊತೆಗಿನ ನೇರ ಸಂವಾದವಾದರೆ, ಸಖೀಸಂವಾದ ಅರುನ ದೌಪದಿಯರ ಪಾತ್ರಪ್ರತೀಕಗಳ ಮೂಲಕ ನಡೆಯುವ ಸಂಗಾತಿಗಳ ಸಂವಾದವಾಗಿದೆ. ಹೀಗೆ ಇಲ್ಲಿ ಅವನ ಜೊತೆಗಿನ, ಸಂಗಾತಿಗಳ ಜೊತೆಗಿನ, ಮಗಳ ಜೊತೆಗಿನ ಸಂವಾದಗಳು, ಗುರುವಿನ ಜೊತೆಗಿನ ಸಂವಾದ, ಆತ್ಮಸಂವಾದದಂತಹ ಹಲವು ಬಗೆಯ ಸಂವಾದ ಮಾರದ ಕವಿತೆಗಳಿವೆ.

ವೈಯುಕ್ತಿಕತೆ ಎನ್ನುವುದು ಸಾಮುದಾಯಿಕತೆಯಾಗಿ ಜಿಗಿತ ಪಡೆಯಲು ಸಾಧ್ಯ ಆಗುವುದು ಕವಿತೆಯು ದೇಶಕಾಲಗಳಿಂದ ಜಿಗಿಯಬಲ್ಲ ರೂಪಕ ಆದಾಗ, ಇಲ್ಲಿನ ಸಖೀಸಂವಾದ ಹಾಗೂ ಹರಿಗೀತ ಹಾಗೆ ರೂಪಕ ಆಗಬಲ್ಲ ಸಾಧ್ಯತೆ ಇರುವ ಕವಿತೆಗಳು. ಲಯಗಾರಿಕೆ ಮತ್ತು ಕಾಣಿಕೆಯ ದೃಷ್ಟಿಯಿಂದ ಇಲ್ಲಿ ಹಲವು ಬಗೆಯ ಪ್ರಯೋಗಗಳಿವೆ. ಹರಿಗೀತದ ಒಂದೊಂದು ಕಂಡಿಕೆಗಳೂ ಭಿನ್ನ ಲಯಗಳಲ್ಲಿ ರಚನೆಯಾಗಿವೆ. ಇದು ಹೆಣ್ಣಿನ ಮೂಲಕ ಮಂಡಿಸಿದ ನಿರೂಪಣೆಯಾದರೆ ಅವ್ವ ಹಚ್ಚಿಕೊಟ್ಟ ತಾಬಂಡಿ  ಗಂಡಿನ ಮೂಲಕ ಮಂಡಿಸಿರುವ ನಿರೂಪಣೆ, ಬೆಳ್ಳಿತಾಯಿ ತಂದೆ ಮಗಳ ಸಂವಾದ ಆದರೂ ಅದು ಅವ್ರ ಮಗನ ಸಂವಾದವೆ ಹೌದು. ತಾಯಿ ಮತ್ತು ಸಂಗಾತಿ ಗಂಡಿನ ಜೀವನದಲ್ಲಿ ನಿರಂತರ ಒದಗಿಬರುವ ಕನ್ನಡಿ, ಆಸರೆ ಮತ್ತು ದಾರಿದೀಪಗಳು ಎಂಬ ತಿಳಿವು ಈ ಸಂಕಲನದ ಉದ್ದಕ್ಕು ಮಂಡನೆಯಾಗಿದೆ. ಇವು ಹೊರಗಿಲ್ಲ: ಗಂಡಿನೊಳಗೇ ಇವೆ.

ಗಾಂಧಿ ಪದ್ಯ ಎರಡು ಕಾಲಗಳ ನಡುವಣ ತುಲನೆಯನ್ನು ನೀಡಿದರೆ ಮಹಾನಗೆ ಎರಡು ಸ್ಥಳಗಳ ತುಲನೆಯ ಮೂಲಕ ವಿಚಾರವನ್ನು ಮಂಡಿಸುತ್ತದೆ. ಹೀಗೆ ವರಮಾನ ಮತ್ತು ಭೂತ ಹೀಗೆ ಎರಡು ಕಾಲಗಳ ತುಲನೆ, ಅಲ್ಲಿ-ಇಲ್ಲಿ, ಊರು-ಪೇಟೆ ಹೀಗೆ ಎರಡು ಸ್ಥಳಗಳ ತುಲನೆ, ಅಂತರಂಗ ಮತ್ತು ಬಹಿರಂಗ ಹೀಗೆ ಎರಡು ಸ್ಥಿತಿಗಳ ಈ ತುಲನೆ ಇರುವ ತೌಲನಿಕ ಮಾರದ ಕವಿತೆಗಳೂ ಇಲ್ಲಿವೆ. ಗಿರಡ್ಡಿ, ನೀಲವ್ವಕ್ಕ, ಬೆಳ್ಳಿ, ಬುದ್ಧ, ಗಾಂಧಿ, ಹೇಮ ಇತ್ಯಾದಿ ವ್ಯಕ್ತಿಚಿತ್ರಗಳ ಕವಿತೆಗಳೂ ಇಲ್ಲಿವೆ.

ಅತ್ತಿತ್ತ ಸುತ್ತಿದೆ ಅಲೆದೆ/ ಮಾಯಾಮೃಗದ ಕಾಟ ಸುತ್ತ ಅನುಭವಿಸಿದೆ. 

ಈ ವಯಸ್ಸಿನಲ್ಲಿ ಮನೆ ತುಂಬಿ ನಿಂತಿದ್ದಾರೆ 

ಗದ್ದಲದ ಪೇಟೆಯ ಮಂದಿ

ಗದ್ದಲದ ಪೇಟೆ, ಹಣ್ಣು, ಹೊಲ, ನದಿ, ಲಡಾಯಿ, ಹೀಗೆ ಇಲ್ಲಿ ಬಿಡಿ ಅನ್ನೋಕ್ತಿಗಳು ಇರುವಂತೆಯೆ ಕೆಲವು ಇಡಿ ಪದ್ಯಗಳೇ ಅನ್ನೋಕ್ತಿಯಂತೆ ರಚನೆಯಾಗಿವೆ. ಅನ್ನೋಕ್ತಿ ಮತ್ತು ರೂಪಕ ಮಾರದ ಕವಿತೆಗಳು ಯಾವಾಗಲೂ ಅನುಭವವನ್ನು ವಾಚಾಳಿಯಂತೆ ಬಣ್ಣಿಸುವುದಿಲ್ಲ; ಅವು ಓದುಗನನ್ನು ಸಾಕಷ್ಟು ಕಲ್ಪನೆ ಮತ್ತು ಚಿಂತನೆಗಳಿಗೆ ಹಚ್ಚುತ್ತವೆ. ಬೀಡಾಡಿ ದನ, ಪುಂಡಿಕಟಿಗೆ, ಒಳಿತೆ ಆಯಿತು, ಮಾಟದ ತಾಟು, ಕಾಲಮುಖ, ಕೊನೆಯ ಅಂಕ ಮೊದಲಾದುವು ಅಂತಹ ಅನ್ನೋಕ್ತಿ ಮಾಗ್ಗದ ಕವಿತೆಗಳು.

ನಮ್ಮ ಶಿಷ್ಟ ಕಾವ್ಯ ಪರಂಪರೆಗಳನ್ನು ನೋಡಿದರೆ ರಾಚನಿಕತೆಯಲ್ಲಿ ಹಲವು ಚಲನೆಗಳು ಕಾಣುತ್ತವೆ. ಕಟ್ಟುನಿಟ್ಟಾದ ನಿಯಮಗಳಿಂದ ಮುಕ್ತತೆಯ ಕಡೆಗೆ; ಆ ಮೂಲಕ ಯಾದೃಚ್ಛಿಕತೆಯ ಕಡೆಗೆ ನಾವೆಲ್ಲ ಚಲಿಸಿದ್ದೇವೆ. ಸಾಲುಗಳನ್ನು ಮುರಿದು ಬರೆಯುವ ಕ್ರಮದಲ್ಲಿಯಂತು ನಾವಿಂದು ಯಾವ ಕಟ್ಟಳೆಗಳನ್ನೂ ಪಾಲಿಸುತ್ತಿಲ್ಲ. ಕವಿಯ ಯಾದೃಚ್ಛಿಕತೆಗೇ ಅಲ್ಲಿ ಅಗ್ರಪಟ್ಟ, ಚಿಂತಾಮಣಿಯಲ್ಲಿನ ಅಗ್ಗದ, ಭಾವದ, ಓದಿನ ಲಯದ ನಿಲ್ದಾಣಗಳಿಗು ಸಾಲಿನ ಅಂತ್ಯಕ್ಕು ಯಾವ ಸಂಬಂಧವೂ ಇಲ್ಲ. ಆ ನಿಲ್ದಾಣಗಳು ಸಾಲಿನ ಆದಿ, ಮಧ್ಯ ಅಂತ್ಯ ಎಲ್ಲಾದರೂ ಬರಬಹುದು. ಇದು ವಿಶೇಷವಾಗಿ ನವ್ಯದ ಕಟ್ಟಾಣಿಕೆಯ ಒಂದು ತಂತ್ರ. ಇದನ್ನು ಸಾಕಷ್ಟು ಇವರು ಬಳಸಿದ್ದಾರೆ.

ಬದುಕಿನಲ್ಲಿ ಎಲ್ಲರಿಗೂ ದಟ್ಟವಾದ ಅನುಭವಗಳು ಇರುತ್ತವೆ. ಆದರೆ ಎಲ್ಲರಿಗು ತೀವ್ರವಾದ ಅಭಿವ್ಯಕ್ತಿ ಕ್ರಮಗಳು ಸಿದ್ಧಿಸಿರುವುದಿಲ್ಲ. ಅದು ಅವರವರ ಸಾಧನೆ-ಸಿದ್ದಿ. ಆತ್ಮಕೇಂದ್ರಿತ ಜಗತ್ತಿನ ಅಭಿವ್ಯಕ್ತಿಯಾದ ಈ ಸಂಕಲನದಲ್ಲಿ ಅಂತಹ ಸಿದ್ದಿ ಕಾಣುತ್ತದೆ.

(ಕೃಪೆ: ಹೊಸ ಮನುಷ್ಯ ಫೆಬ್ರವರಿ 2021, ಬರಹ- ರಾಮಲಿಂಗಪ್ಪ ಟಿ. ಬೇಗೂರು)

Related Books